ಲಾ ಪಾಯಿಂಟ್
ನ್ಯಾಯಾಲಯದಲ್ಲಿ ದಾವಾ ಹಾಕಿ
ಎಸ್.ಕೆ. ಯಾಳಗಿ, ಗೋವಾ
ತಂದೆಯ ಆಸ್ತಿಯ ಖಾತೆಯಲ್ಲಿ ಅಣ್ಣನ ಹೆಸರಿದ್ದು, ಆತನೂ ಕಾಲವಾದ ನಂತರ ಆತನ ಮಕ್ಕಳ ಹೆಸರು ಸೇರಿಸಿದ್ದಾರೆ. ನನ್ನ ಹೆಸರಿಲ್ಲ. ಹೀಗಾಗಿ ಬ್ಯಾಂಕು, ಸೊಸೈಟಿಗಳಲ್ಲಿ ನಾನು ಸಾಲ ಪಡೆಯಲಾಗುತ್ತಿಲ್ಲ. ನಾನು ನ್ಯಾಯಾಲಯದ ಮೂಲಕ ಹೋರಾಟ ನಡೆಸಿದರೆ ನನ್ನ ಪಾಲಿನ ಆಸ್ತಿ ಸಿಗಬಹುದೇ ಅಥವಾ ಒಟ್ಟು ಆಸ್ತಿಯಲ್ಲಿ ನನ್ನ ಹೆಸರೂ ಸೇರ್ಪಡೆಯಾಗುತ್ತದೆಯೇ?
- ನಿಮ್ಮ ಹೆಸರನ್ನು ಮಾತ್ರ ಒಟ್ಟು ಆಸ್ತಿಯಲ್ಲಿ ಸೇರಿಸಬೇಕೆಂದರೆ ತಾಲೂಕು ಕಚೇರಿಗೆ ಅರ್ಜಿ ಕೊಡಿ. ನಿಮ್ಮ ಸಹೋದರರ ಅಥವಾ ಅವರ ಮಕ್ಕಳ ಅಭ್ಯಂತರವಿಲ್ಲದಿದ್ದರೆ ನಿಮ್ಮ ಹೆಸರು ಸೇರ್ಪಡೆಯಾಗುತ್ತದೆ. ಆಸ್ತಿ ವಿಭಾಗವಾಗಬೇಕಾದರೆ ನ್ಯಾಯಾಲಯದಲ್ಲಿ ದಾವಾ ಹೂಡಬೇಕು.
ಕೋರ್ಟಿಗೆ ಅರ್ಜಿ ಕೊಡಿ
ನರಸಿಂಹ ಮೂರ್ತಿ, ತುಮಕೂರು
ತಂದೆಗೆ ಅಪಘಾತವಾದಾಗ ಕೋರ್ಟಿನ ಮೂಲಕ ಪರಿಹಾರ ದೊರಕಿದ್ದು ಅದರಲ್ಲಿ ಸ್ವಲ್ಪ ಹಣವನ್ನು ಕೋರ್ಟ್ ಆದೇಶದಂತೆ ಎಫ್.ಡಿ. ಇಡಲಾಗಿದೆ ಎಂದು ಹೇಳಲಾಗಿದೆ. ಕೋರ್ಟು ಹಾಗೆ ಮಾಡುತ್ತದೆಯೇ? ಈಗ ಮುಂದಿನ ಮೂರು ತಿಂಗಳಿನಲ್ಲಿ ಅಕ್ಕನ ಮದುವೆ ಆಗಬೇಕಾಗಿದ್ದು ಅದನ್ನು ಹಿಂಪಡೆಯಬಹುದೇ?
- ಭದ್ರತಾ ದೃಷ್ಟಿಯಿಂದ ಕೋರ್ಟು ಸ್ವಲ್ಪ ಹಣವನ್ನು ಎಫ್.ಡಿ. ಮಾಡುವಂತೆ ಆದೇಶಿಸುತ್ತದೆ. ಆದರೆ ನೀವು ನಿಮ್ಮ ಅಕ್ಕನ ಲಗ್ನದ ವಿಷಯ ವಿವರಿಸಿ ಅರ್ಜಿ ಹಾಕಿದರೆ ಕೋರ್ಟು ಎಫ್.ಡಿ. ಹಣವನ್ನು ವಾಪಸ್ ಪಡೆಯಲು ಅನುಮತಿ ನೀಡಬಹುದು.
ಹೊರರಾಜ್ಯದ ಲಾಟರಿಗೆ ನಿಷೇಧವಿಲ್ಲ
ಭುಜಂಗ ಶೆಟ್ಟಿ, ಮಂಗಳೂರು
ನಾನು ವ್ಯಾಪಾರಿಯಾಗಿದ್ದು, ಆಗಾಗ ಕೇರಳಕ್ಕೆ ಹೋಗುತ್ತಿರುತ್ತೇನೆ. ಹಾಗೆ ಹೋದಾಗ ಲಾಟರಿ ಟಿಕೆಟ್ ಖರೀದಿಸುತ್ತೇನೆ. ನಮ್ಮ ರಾಜ್ಯದಲ್ಲಿ ಲಾಟರಿ ನಿಷೇಧವಿರುವುದರಿಂದ ಕೇರಳದ ಟಿಕೆಟ್‌ಗೆ ಬಹುಮಾನ ಬಂದರೆ ಹಣ ಪಡೆಯಲು ತೊಂದರೆಯಾಗುತ್ತದೆಯೇ?
- ಲಾಟರಿ ಟಿಕೆಟ್ ಮಾರಾಟ ಮಾತ್ರ ರಾಜ್ಯದಲ್ಲಿ ನಿಷೇಧವಿದ್ದು, ಹೊರರಾಜ್ಯಗಳಲ್ಲಿ ಖರೀದಿಸಲು ಯಾವ ಅಡ್ಡಿಯೂ ಇಲ್ಲ. ಹಾಗೆಯೇ ಆ ಬಹುಮಾನದ ಹಣ ಪಡೆಯಲು ಯಾವ ತಕರಾರೂ ಇಲ್ಲ. ಒಂದು ವೇಳೆ ಹಾಗೇನಾದರೂ ಆದರೆ ನೀವು ಕೋರ್ಟಿಗೆ ಹೋಗಬಹುದು.
ಎಲ್ಲ ಆಸ್ತಿಯಲ್ಲೂ ಸಮಪಾಲಿದೆ
ಪಾರ್ವತಿ, ಸರಸ್ವತಿಪುರ, ಮೈಸೂರು
ನನ್ನ ತಂದೆಗೆ ನಾಲ್ಕು ಜನ ಹೆಣ್ಣುಮಕ್ಕಳಿದ್ದು ಒಬ್ಬ ಗಂಡು ಮಗನನ್ನು ದತ್ತು ಪಡೆದುಕೊಂಡಿದ್ದಾರೆ. ಆತನೇ ಈಗ ಎಲ್ಲ ಪಿತ್ರಾರ್ಜಿತ ಆಸ್ತಿ ಅನುಭವಿಸುತ್ತಿದ್ದಾನೆ. ನಮಗೆ ಆ ಆಸ್ತಿಯಲ್ಲಿ ಹಕ್ಕಿಲ್ಲವೇ? ಹಾಗೂ ಈವರೆಗಿನ ಆದಾಯದಲ್ಲಿ ಪಾಲಿಲ್ಲವೇ?
- ಹಿಂದೂ ಉತ್ತರಾಧಿಕಾರ ಕಾಯ್ದೆ, 1950, ಇದರ ಕಲಂ 6ರಂತೆ ಈಗ ಎಲ್ಲ ಹೆಣ್ಣುಮಕ್ಕಳಿಗೂ ಗಂಡುಮಕ್ಕಳಂತೆಯೇ ಸಮಪಾಲಿದೆ. ಅಷ್ಟೇ ಅಲ್ಲ ತೀರಿಹೋದ ಹೆಣ್ಣುಮಕ್ಕಳಿಗೆ ಮದುವೆಯಾಗಿ ಗಂಡ ಅಥವಾ ಮಕ್ಕಳಿದ್ದರೆ ಆ ಹೆಣ್ಣುಮಕ್ಕಳ ಗಂಡ ಅಥವಾ ಮಕ್ಕಳಿಗೂ ಒಂದು ಭಾಗ ಬರುತ್ತದೆ. ಅಲ್ಲದೇ ಇಲ್ಲಿಯವರೆಗಿನ ಆದಾಯದಲ್ಲೂ ಪಾಲು ಕೇಳಬಹುದು. ಆತ ಕೊಡಲು ನಿರಾಕರಿಸಿದರೆ ನೀವು ನ್ಯಾಯಾಲಯದಲ್ಲಿ ದಾವಾ ಹಾಕಬಹುದು. ಕೆಲ ಆಸ್ತಿ ಮಾರಿದ್ದರೆ ಅದರಲ್ಲೂ ಪಾಲು ಕೇಳಬಹುದು. ತಂದೆಯ ಬ್ಯಾಂಕ್ ಠೇವಣಿಯಲ್ಲೂ ಸಮಪಾಲು ಬರುತ್ತದೆ.
= ಎಚ್.ಆರ್. ಕಸ್ತೂರಿರಂಗನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

