ಖುಷಿ

ಬಟ್ಟೆ ಬರಹ

ಬಟ್ಟೆ ಬರಹ
Published On :

ನೀನು ಘೋಷಾ ತೊಡದೆ ಮನೆಯಾಚೆ ಕಾಲಿಡುವಂತಿಲ್ಲ. ಶಾಲೆಗೆ ಹೋಗುವಂತಿಲ್ಲ. ಇತರರೊಡನೆ ಕಿಲಕಿಲ ನಗುವಂತಿಲ್ಲ. ಸಂಘಟನೆ ಹಾಗೆ ಫತ್ವಾ ಹೊರಡಿಸಿದಾಗ ಆಕೆ ರೇಗಿದ್ದಳು. ಅರೆ, ನನ್ನ ದೇಹ, ನನ್ನ ಜ್ಞಾನದ ಹಕ್ಕು. ಕಲಿಯುತ್ತೇನೆ ಏನೀಗ ಅಂತ ಹೊರಬಿದ್ದಳು. ಗುಂಡುಗಳು ಅವಳ ದೇಹ ಹೊಕ್ಕವು. ಸಾವು ಗೆದ್ದು ಎದ್ದು ಬಂದು ನಕ್ಕಳು. ಅವಳ ಹೆಸರು ಮಲಾಲ ಯೂಸುಫ್‌ಜಾಯ್.
ಇನ್ನೊಬ್ಬಳು ಟೆನ್ನಿಸ್ ಆಟಗಾತಿ. ಆಕೆಯ ಆಟದ ವೈಖರಿಗೆ ವಾಹ್ ಎಂದು ಮೆಚ್ಚಿ ತಲೆದೂಗಬೇಕಾದವರು ನೀನ್ಯಾಕೆ ತುಂಡು ಲಂಗ ಹಾಕಬೇಕು ಎಂದು ಪ್ರಶ್ನಿಸಿದರು. ಅರೆ, ಸ್ಕರ್ಟ್ ಧರಿಸದೆ ಸೀರೆ ಉಟ್ಟುಕೊಂಡು ಟೆನ್ನಿಸ್ ಆಡೋಕಾಗುತ್ತಾ? ಎಂದು ಆಕೆ ಪ್ರಶ್ನಿಸಿದ್ದು ಅಂಥವರ ಬಾಯಿ ಮುಚ್ಚಿಸಿರಬೇಕು. ಆಕೆಯ ಹೆಸರು ಸಾನಿಯಾ ಮಿರ್ಜಾ.
ಅಲ್ಲೊಬ್ಬ ಮಲಾಲ, ಇಲ್ಲೊಬ್ಬಳು ಸಾನಿಯಾ. ವಿಶ್ವದ ಇನ್ಯಾವುದೋ ಮೂಲೆಯಲ್ಲಿ ಮತ್ತೊಬ್ಬಳು ಹೆಸರೇ ಅರಿಯದ ತರುಣಿ. ಎಲ್ಲರ ಮನದ ಆಶಯವೂ ಒಂದೇ: 'ನನ್ನ ಬಟ್ಟೆ ನನ್ನದು, ನನ್ನ ದೇಹ ನನ್ನದು...' ಕೇಳುವುದಕ್ಕೆ ನೀವ್ಯಾರು ಅಂತ ಅವರು ಹೇಳುತ್ತಿರುವುದು ಸೊಕ್ಕಿನ ಮಾತಲ್ಲ. ಅದಕ್ಕೀಗ ಸುಪ್ರೀಂ ಕೋರ್ಟಿನ ಸಾಥ್ ಇದೆ.
ದಿರಿಸು ಧರಿಸುವಿಕೆಯ ವಿಷಯ ಇತ್ತೀಚೆಗೆ ಯಾಕೋ ಅತಿಯಾಗಿ ವಿವಾದಕ್ಕೆ ಗುರಿಯಾಗುತ್ತಿದೆ. ಭಾರತದ ಸಾಂಪ್ರದಾಯಿಕ ಉಡುಪುಗಳು ವಿಶ್ವಕ್ಕೇ ಮಾದರಿ ಅನ್ನುವುದು ಒಂದು ಕಡೆ. ನಾವು ವಿಶ್ವ ಸಂಸ್ಕೃತಿಗೆ ಒಗ್ಗಿಕೊಳ್ಳುತ್ತೇವೆ, ಹಳೆಯ ಸಂಸ್ಕೃತಿ ಬೇಡ ಎಂದು ದೂರ ಸರಿಯುತ್ತಿರುವವರು ಇನ್ನೊಂದು ಕಡೆ. ಇತ್ತೀಚೆಗೆ ಹೆಚ್ಚಾಗುತ್ತಿರುವ ಅತ್ಯಾಚಾರದ ಪ್ರಕರಣಗಳಿಗೆ ಪುರುಷ ಸಮಾಜವನ್ನೇ ದೂಷಿಸುವವರು ಒಂದು ಕಡೆ. ನೀವು ತೊಡುವ ಬಟ್ಟೆಯೂ ಅದಕ್ಕೆ ಕಾರಣ ಎಂದು ಮಹಿಳೆಯರನ್ನು ಜರೆಯುವವರು ಇನ್ನೊಂದು ಕಡೆ.
ಇವೆಲ್ಲವುಗಳ ನಡುವೆ ಹೆಂಡತಿ ಜೀನ್ಸ್ ಹಾಕುತ್ತಾಳೆ ಎಂಬ ಕಾರಣಕ್ಕೆ ಡೈವೋರ್ಸ್ ನೀಡುವ ಪತಿ ಮಹಾಶಯರೂ ಇದ್ದಾರೆ. ಆದರೆ ಆ ವಿಷಯದಲ್ಲಿಯೂ ಸಹ ನ್ಯಾಯಾಲಯ ಮಹಿಳೆಯ ಪರವೇ ನಿಂತಿದೆ. ಅವಳ ತೊಡುವ ಬಟ್ಟೆಯನ್ನು ನಿರ್ಣಯಿಸುವ ಸ್ವಾತಂತ್ರ್ಯ ಅವಳಿಗಿದೆ ಎಂದಿದೆ. ಮಹಿಳೆಯರು ಏನು ತೊಡಬೇಕು, ಹೇಗೆ ತಯಾರಾಗಬೇಕು ಎಂದು ದೇಶವಿಡೀ ಚರ್ಚೆ ನಡೆಸಿ ತೀರ್ಮಾನ ಮಾಡಿ ನಮಗೆ ತಿಳಿಸಬೇಕೆ? ಬೇಕಾದ ಹಾಗೆ ಬದುಕುವ ಸ್ವಾತಂತ್ರ್ಯವೂ ಅವಳಿಗಿಲ್ಲವೆ? ಎಂಬುದು ಒಂದು ಪಾಯಿಂಟ್. ಸರಿ, ಆದರೆ ಬಟ್ಟೆ ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿರಬೇಕು. ಬೇರೆಯವರ ಭಾವನೆಗಳನ್ನು ಕೆರಳಿಸಬಾರದು. ನಾವು ಭಾರತೀಯರು ಹೀಗೇ ಇರಬೇಕು ಎಂಬುದು ಕೌಂಟರ್ ಆರ್ಗ್ಯುಮೆಂಟ್. ಹೀಗೆಲ್ಲ ಇದನ್ನೆಲ್ಲ ಆರಾಮ ಕುರ್ಚಿಗಳಲ್ಲಿ ಕುಳಿತು ಚಿಂತಿಸುವುದಕ್ಕಿಂತ, ಸರಳವಾಗಿ ಒಬ್ಬ ಹೆಣ್ಣುಮಗಳ ದೃಷ್ಟಿಯಿಂದ ಯೋಚಿಸೋಣ.
ಮಹಾನಗರಿಗಳ ವಿಷಯ ಬಿಡಿ. ಬೇರೆ ಭಾಗದ ಜನರ ಸ್ಥಿತಿ ನೋಡೋಣ. ಹೊಸ ರೀತಿಯ ಫ್ಯಾಶನ್ ಬಂದರೆ ಅದನ್ನ ತೊಡಬೇಕು ಅನಿಸಿದರೂ ಅಯ್ಯೋ ಅಪ್ಪ ಏನಂತಾರೋ ಅಂತ ಹಿಂಜರಿತಾರೆ ಹುಡುಗೀರು. ಜೀನ್ಸ್ ಹಾಕೋಕು ನಾನೂರು ಸಮಜಾಯಿಷಿ ನೀಡಬೇಕು. ಸೀರೆಯಲ್ಲಿ ಉದ್ಯೋಗ ನಿರ್ವಹಿಸೋದು ಕಷ್ಟ. ಅಲ್ಲಿ ಏನೆಲ್ಲಾ ತೊಂದರೆ ಆಗುತ್ತೆ ಎಲ್ಲವನ್ನೂ ವಿವರಿಸಬೇಕು. ಕೇಳುವವರು ಇದ್ದಾರಾ? ಹಳ್ಳಿಯ ಹುಡುಗಿಯರಿಗೆ ಅಶ್ಲೀಲವಾಗಿ ಬಟ್ಟೆ ಮಾಡಿಕೊಳ್ಳಬೇಕೆಂಬ ಆಸೆ ಇರುತ್ತದೆಯೆ? ಮಾಡರ್ನ್ ಆಗಿ ಇರಬೇಕು ಅಂದುಕೊಳ್ತಾರೆ ಅಷ್ಟೇ. ಒಂದು ಬಾರಿ ಹೊಸತನದ ಸ್ಪರ್ಶಕ್ಕೆ ಹಾತೊರೆಯುವ ಮನಸ್ಸು. ಅವರಿಗೂ ತಮ್ಮ ಸಂಸ್ಕೃತಿಯನ್ನು ಬಿಟ್ಟು ದೂರ ಹೋಗಲು ಮನಸ್ಸಿರುವುದಿಲ್ಲ. ಯಾವ ಹುಡುಗಿಗೂ ಕ್ಯಾಬರೆ ಡ್ಯಾನ್ಸರ್ ಥರ ಬಟ್ಟೆ ಧರಿಸಬೇಕು ಅನ್ನೋ ಆಸೆ ಇರುವುದಿಲ್ಲ. ಬದಲಾಗಿ ಸ್ವಲ್ಪ ಬದಲಾವಣೆ ಮತ್ತು ಹೆಚ್ಚಿನ ಕಮ್‌ಫರ್ಟ್ ಬಯಸುತ್ತಿರುತ್ತಾರೆ ಅಷ್ಟೇ.
ನಮ್ಮ ಸಮಾಜದಲ್ಲಿ ಎರಡು ಅತಿರೇಕಗಳು ಸೃಷ್ಟಿಯಾಗಿದೆ. ಒಂದೆಡೆ ಯಾವುದೇ ನಿಬಂಧನೆಗಳಿಲ್ಲದೆ ತಮ್ಮಿಷ್ಟಕ್ಕೆ ಬದುಕಿ ಸ್ವಾತಂತ್ರ್ಯವನ್ನು ಸ್ವೇಚ್ಛೆಯಾಗಿಸಿಕೊಂಡವರು. ಇನ್ನೊಂದು ಹಳೆಯ ಪಾರಂಪರಿಕ ಕಟ್ಟುಪಾಡುಗಳಿಂದ ಹೊರಬರದೆ ಒದ್ದಾಡುತ್ತಾ ಸಣ್ಣ ಸಣ್ಣ ಆಸೆಗಳನ್ನೂ ಬಲಿ ಕೊಡುತ್ತಿರುವವರು. ಹೀಗಾಗಿ ಇಡೀ ಸಮಾಜಕ್ಕೆ ಒಂದು ಸಮನಾದ ತೀರ್ಪು ನೀಡಲಾಗುತ್ತಿಲ್ಲ. ಹುಡುಗಿಯರ ವಿಷಯದಲ್ಲಿ ಹೀಗೇಕೆ ಆಗುತ್ತಿದೆ ಎಂಬ ಪ್ರಶ್ನೆಗೆ ಉತ್ತರ ಸಿಗದು. ಅತ್ಯಾಚಾರಗಳು ನಡೆಯಲು ಅವರು ಧರಿಸುವ ಪ್ರಚೋದನಕಾರಿ ಉಡುಪು ಕಾರಣ ಎನ್ನಲಾಗುತ್ತದೆ. ನಾಲ್ಕು ವರ್ಷದ ಮಗುವಿನಲ್ಲಿ ಯಾವ ಪ್ರಚೋದನೆ ದೊರೆತೀತು? ಈಗ ಅತ್ಯಾಚಾರಕ್ಕೊಳಗಾದವರೆಲ್ಲರೂ ಪ್ರಚೋದನಕಾರಿಯಾಗಿ ಬಟ್ಟೆ ಧರಿಸಿದ್ದರೇ? ಇದೆಲ್ಲವೂ ನಮ್ಮ ಕಾನೂನಿನ ಅಸಹಾಯಕತೆಯಿಂದ ಉಕ್ಕುವ ವಾದಗಳು ಅಷ್ಟೇ. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡುವುದಕ್ಕೂ ಹಿಂದೆ ಮುಂದೆ ಯೋಚಿಸಿದರೆ ಆಗುವುದಿಷ್ಟೆ. ಕಾನೂನೇ ತಪ್ಪುಗಳಿಗೆ ರಕ್ಷಣೆ ನೀಡುವ ಸ್ಥಾನದಲ್ಲಿ ನಿಂತರೆ ಯಾರಿಗೂ ಬುದ್ಧಿ ಬರುವುದಿಲ್ಲ. ಮಹಿಳೆಯರ ಉಡುಪಿನ ಬಗ್ಗೆ ಚರ್ಚಿಸುವುದರ ಬದಲು ದೇಶದ ಅಭಿವೃದ್ಧಿಯ ಬಗೆಗೆ, ನಮ್ಮಲ್ಲಿರುವ ಸಮಸ್ಯೆಗಳ ಬಗ್ಗೆ ಯೋಚಿಸಿ. ಮಹಿಳೆಯ ಉಡುಗೆಗಳಿಗೆ ಮಿತಿ ಹೇರಲು ಯಾರಿಗೂ ಹಕ್ಕಿಲ್ಲ. ಸಂಪ್ರದಾಯ, ಸಂಸ್ಕೃತಿ, ಪರಂಪರೆಯ ಆಚರಣೆಗಳು ಮಹಿಳೆಯರಿಗೆ ಮಾತ್ರ ಸೀಮಿತವೇಕೆ? ಇದೇ ವಿಷಯದಲ್ಲಿ ಪುರುಷರಿಗೆ ನಿಬಂಧನೆಗಳನ್ನು ಹಾಕಿದರೆ ಒಪ್ಪಿಕೊಳ್ಳುತ್ತಾರಾ? ಸೀರೆ ಹೆಣ್ಣುಮಕ್ಕಳ ಸಾಂಪ್ರದಾಯಿಕ ಉಡುಪಾದರೆ ಪುರುಷರಿಗೆ ಪಂಚೆ ಸರಿಯಾದ ಆಯ್ಕೆ ತಾನೆ? ಹಾಗಿದ್ದರೆ ಪ್ಯಾಂಟ್‌ಗೆ ನಿಬಂಧ ಹೇರಬಹುದಲ್ಲವೆ? ಸಮಾಜ ಬದಲಾಗಬೇಕಾದರೆ ಅದರ ಎಲ್ಲ ಅಂಗದಲ್ಲೂ ಬದಲಾಗಬೇಕು. ಸ್ತ್ರೀಯರಿಗೊಂದು, ಪುರುಷರಿಗೊಂದು ನ್ಯಾಯ ನಡೆಯುವುದಿಲ್ಲ. ನಮ್ಮ ಬಟ್ಟೆಗಳ ಮಿತಿ ನಮಗೆ ತಿಳಿದಿದೆ, ಅದನ್ನು ಆಯ್ದುಕೊಳ್ಳುವ ತೊಟ್ಟುಕೊಳ್ಳುವ ಸ್ವಾತಂತ್ರ್ಯ ಮತ್ತು ಪ್ರಭುದ್ಧತೆ ನಮಗಿದೆ. ಅದಕ್ಕೆ ನಿಮ್ಮ ಸಹಕಾರ ಮತ್ತು ಒಪ್ಪಿಗೆಗಳು ಬೇಕಿಲ್ಲ ಎಂಬುದು ಇಂದಿನ ಮಹಿಳೆಯರ ವಾದ.
ಆದರೆ ಇಲ್ಲೂ ಹುಡುಗಿಯರಿಗೆ ಕಿವಿಮಾತಿದೆ. ಕಾನೂನೂ ನಮ್ಮ ಪರವೇ ಎಂದು ತೀರಾ ಖುಷಿಯಾಗಬೇಕಿಲ್ಲ. ನಮ್ಮ ಮಿತಿಗಳ ಅರಿವು ನಮಗಿರಬೇಕು. ನಮ್ಮ ಉಡುಗೆ ನಾಳೆ ನಮ್ಮ ಬದುಕಿಗೇ ಮುಳ್ಳಾಗಬಾರದು. ಯಾವ ಸಂದರ್ಭಕ್ಕೆ ಯಾವ ಉಡುಪು ಸೂಕ್ತ ಎನ್ನುವ ಸಾಮಾನ್ಯ ಜ್ಞಾನ ಇರಲಿ. ನಿಮ್ಮ ಬಗ್ಗೆ ಇನ್ನೊಬ್ಬರು ಟೀಕೆ ಮಾಡಲು ಅವಕಾಶ ಮಾಡಿಕೊಡಬೇಡಿ. ಎಲ್ಲಿಯೂ ಸಲ್ಲುವವರು ಎಂದೆನಿಸಿಕೊಳ್ಳಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.