ಖುಷಿ

ಗೆಜೆಟ್ ಮಂಡನೆ

ಗೆಜೆಟ್ ಮಂಡನೆ
Published On :

ನಿಮ್ಮ ಸ್ಮಾರ್ಟಿ ಎಷ್ಟು ಚಾಲು ಇರುತ್ತದೆಯೋ ಅಷ್ಟೇ ಅಪಾಯಕಾರಿ ಕೂಡ!
ಮೊಬೈಲ್ ಮಾರಾಟ ಮಾಡುವ ಮುಂಚೆ, ಸರ್ವಿಸ್‌ಗೆ ಕೊಡುವ ಮೊದಲು ಪ್ಯಾಕ್ಟರಿ ಡಾಟಾ ರಿಸೆಟ್ ಮಾಡಿದರೆ ಎಲ್ಲವೂ ಮುಗಿಯಿತು ಎಂದು ಕೈತೊಳೆದುಕೊಂಡರೆ ನಿಮ್ಮಂಥ ಮೂರ್ಖ ಮತ್ತೊಬ್ಬರಿಲ್ಲ. ಅವಾಸ್ತಾ ಕಂಪನಿಯು ಇತ್ತೀಚೆಗೆ ಕೊಂಡ 20 ಸೆಕೆಂಡ್ ಹ್ಯಾಂಡ್ ಸ್ಮಾರ್ಟ್‌ಫೋನ್‌ಗಳಿಂದ ಬರೋಬ್ಬರಿ 40 ಸಾವಿರ ಫೈಲ್‌ಗಳನ್ನು ಶೋಧಿಸಿದೆ. ಇದರಲ್ಲಿ ಮಹಿಳೆಯರ 'ಖಾಸಗಿ' ಭಂಗಿಗಳ 750ಕ್ಕೂ ಅಧಿಕ ಫೋಟೊ, ಪುರುಷರು ಬೆತ್ತಲೆಯಿರುವ 250ಕ್ಕೂ ಅಧಿಕ 'ಸೆಲ್ಫಿ' ಸೇರಿದಂತೆ ತೀರಾ ವೈಯಕ್ತಿಕ ಮಾಹಿತಿಗಳನ್ನು ಕಲೆ ಹಾಕಿದೆ.
ಇನ್ನಾದರೂ ಮೊಬೈಲ್ ಮಾರಾಟ ಮಾಡುವ ಮುಂಚೆ ಕೆಲ ಕ್ಷಣ ನಿಮ್ಮ 'ಖಾಸಗಿ' ವಿಚಾರಗಳ ಸುರಕ್ಷತೆಗಾಗಿ ಗಮನ ನೀಡಿ. ಇದರರ್ಥ ನೀವು ಅದೇ ರೀತಿಯ ಸೆಲ್ಫಿಗಳನ್ನು ತೆಗೆದುಕೊಂಡಿದ್ದೀರಿ ಎಂದಲ್ಲ. ನಿಮ್ಮ ಕೌಟುಂಬಿಕ ಹಾಗೂ ಕೆಲ ವೈಯಕ್ತಿಕ ಫೋಟೋಗಳು ಭವಿಷ್ಯದಲ್ಲಿ ಕಿಡಿಗೇಡಿಗಳ ಕೈಗೆ ಸಿಕ್ಕಿ ಸಮಸ್ಯೆಗೆ ಕಾರಣವಾಗಬಾರದು.
ಫ್ಯಾಕ್ಟರಿ ಡಾಟಾ ರಿಸೆಟ್ ಮಾಡಿದರೆ ಎಲ್ಲವೂ ಮುಗಿದಿಲ್ಲ ಎನ್ನುವ ಮಾತುಗಳು ಸಾಕಷ್ಟು ದಿನಗಳಿಂದ ಕೇಳಿಬರುತ್ತಿತ್ತು. ಇದೇ ಭಯದ ನೆರಳಲ್ಲಿಯೇ ಪ್ರತಿಷ್ಠಿತ ಆ್ಯಂಟಿವೈರಸ್ ಕಂಪನಿಯಾದ ಅವಾಸ್ತಾ ಸಂಸ್ಥೆಯು ಇ-ಬೇಯಿಂದ 20 ಸೆಕೆಂಡ್ ಹ್ಯಾಂಡ್ ಸ್ಮಾರ್ಟ್‌ಪೋನ್ ಅನ್ನು ಖರೀದಿಸಿದೆ. ತನ್ನ ಮೊಬೈಲ್ ತಜ್ಞರಿಗೆ ಸ್ಮಾರ್ಟಿಯನ್ನು ಹಸ್ತಾಂತರಿಸಿದ ಬಳಿಕ, ಅವರು ಬರೋಬ್ಬರಿ 40 ಸಾವಿರಕ್ಕೂ ಅಧಿಕ ಫೋಟೋ ಹಾಗೂ ಇನ್ನಷ್ಟು ಸಾವಿರ ಫೈಲ್‌ಗಳನ್ನು ಅವಾಸ್ತಾಗೆ ನೀಡಿದ್ದಾರೆ. ಈ 40 ಸಾವಿರ ಚಿತ್ರಗಳಲ್ಲಿ ಸುಮಾರು ಒಂದೂವರೆ ಸಾವಿರ ಮಕ್ಕಳ ಚಿತ್ರ, ಮಹಿಳೆಯರು ವಿವಸ್ತರವಾಗಿರುವ ಅಥವಾ ಅರೆನಗ್ನವಾಗಿರುವ 750ಕ್ಕೂ ಅಧಿಕ ಫೋಟೋ ಹಾಗೂ ನಗ್ನವಾಗಿ ಗಂಡಸರು ತೆಗೆದುಕೊಂಡ 250 ಸೆಲ್ಫಿಗಳು ಮೊಬೈಲ್ ತಜ್ಞರ ಕೈಗೆ ದೊರೆತಿದೆ. ಇದರ ಜತೆಗೆ ಸಾವಿರಕ್ಕೂ ಅಧಿಕ ಗೂಗಲ್ ಸರ್ಚ್, 750ಕ್ಕೂ ಅಧಿಕ ಮಿಂಚಂಚೆ, ಎಸ್‌ಎಂಎಸ್, 250 ಜನರ ಸಂಪರ್ಕ ವಿವರ ಹಾಗೂ ಇನ್ನಿತರ ಮಾಹಿತಿಗಳೂ ದೊರೆತಿವೆ. ಇದನ್ನು ಮಾರಾಟ ದೃಷ್ಟಿಯಿಂದಲೇ ನೋಡಿರುವ ಅವಾಸ್ತಾ ಇದರ ರಕ್ಷಣೆಗೆ 'ಆ್ಯಂಟಿ ಥೆಪ್ಟ್ ಆ್ಯಪ್‌' ಬಿಟ್ಟಿದೆ. ಈ ಕಂಪನಿ ಹೇಳುವ ಪ್ರಕಾರ ಪ್ಯಾಕ್ಟರಿ ಡಾಟಾ ರಿಸೆಟ್ ಮಾಡಿದ ಬಳಿಕ ಯಾವುದೇ ಮಾಹಿತಿ ಕದಿಯಲು ಆಗದಂತೆ ಆ್ಯಪ್ ರೂಪಿಸಲಾಗಿದೆ.
ಆದರೆ ಇವರ ಮಾರಾಟ ಬುದ್ಧಿ ಹೊರತುಪಡಿಸಿ ನಾವೇ ತಲೆ ಉಪಯೋಗಿಸಿದರೆ ನೈಜ ಅರ್ಥದಲ್ಲಿ ಫ್ಯಾಕ್ಟರಿ ಡಾಟಾ ರಿಸೆಟ್ ಮಾಡಬಹುದು. ಇನ್ನು ಮುಂದೆ ನಿಮ್ಮ ಸ್ಮಾರ್ಟಿಗೆ ಡೈವೋರ್ಸ್ ಮಾಡುವಾಗ ಈ ಅಂಶಗಳತ್ತ ಗಮನ ನೀಡಿ. ಇಲ್ಲವಾದಲ್ಲಿ ನಿಮ್ಮ ಖಾಸಗಿತನಕ್ಕೆ ಭಂಗಬರುವ ಸಾಧ್ಯತೆಯಿದೆ. ನಿಮ್ಮ ಸ್ಮಾರ್ಟ್‌ಫೋನ್ ಸೆಟ್ಟಿಂಗ್‌ಗೆ ಹೋದಾಗ 'ಎನ್‌ಕ್ರಿಪ್ಟ್ ದಿ ಫೋನ್‌' ಎಂಬ ಆಪ್ಷನ್ ಸಿಗುತ್ತದೆ. ಕೂಡಲೇ ಡಾಟಾ ಎನ್‌ಕ್ರಿಪ್ಟ್ ಮಾಡಿ. ಆದರೆ ಈ ಕೆಲಸ ಮಾಡುವ ಮುಂಚೆ ನಿಮ್ಮ ಮೊಬೈಲ್ ಬ್ಯಾಟರಿಯನ್ನು ಕಡ್ಡಾಯವಾಗಿ ಭರ್ತಿಮಾಡಿಕೊಳ್ಳಿ. ನಂತರ ಫ್ಯಾಕ್ಟರಿ ಡಾಟಾ ರಿಸೆಟ್ ಮಾಡಿ ಮೊಬೈಲ್ ರಿಬಹೂಟ್ ಮಾಡಿ. ಈ ಸಂದರ್ಭದಲ್ಲಿ ಮೊಬೈಲ್ ಆಪರೇಟ್ ಮಾಡುವುದು ಅಥವಾ ಗಡಿಬಿಡಿಯಲ್ಲಿ ಸ್ವಿಚ್ ಆಫ್ ಮಾಡುವ ಕೆಲಸಕ್ಕೆ ಮುಂದಾಗಬೇಡಿ. ಇದಾದ ನಂತರ ಮತ್ತೊಮ್ಮೆ ಮೊಬೈಲ್‌ನ ಪ್ರತಿ ವಿಭಾಗವನ್ನು ತಡಕಾಡಿ ಏನಾದರೂ ಉಳಿದುಕೊಂಡಿದೆಯೇ ಶೋಧಿಸಿ. ಇದಾದ ಬಳಿಕ ಮೊಬೈಲ್‌ನ ಇಂಟರ್ನಲ್ ಮೆಮೋರಿ ಎಷ್ಟಿದೆಯೆನ್ನುವುದನ್ನು ಅಬೌಟ್ ಮೊಬೈಲ್‌ಗೆ ಹೋಗಿ ನೋಡಿಕೊಳ್ಳಿ. ಅದೇ ಪ್ರಮಾಣದ 'ಡಮ್ಮಿ ಫೈಲ್‌'ಗಳನ್ನು ನಿಮ್ಮ ಕಂಪ್ಯೂಟರ್‌ನಲ್ಲಿ ತಯಾರಿಸಿ ಮೊಬೈಲ್‌ಗೆ ಕಾಪಿ ಮಾಡಿ. ಸ್ಮಾರ್ಟಿಯ ಇಂಟರ್ನಲ್ ಮೆಮೋರಿ ಭರ್ತಿಯಾಗಿರುವುದನ್ನು ಖಾತ್ರಿಪಡಿಸಿಕೊಂಡು ಮತ್ತೆ ಈ ಹಿಂದೆ ಹೇಳಿದ ರೂಪದಲ್ಲೇ ಮತ್ತೆ ಫ್ಯಾಕ್ಟರಿ ಡಾಟಾ ರಿಸೆಟ್ ಮಾಡಿ. ಇದನ್ನು ಒಂದರೆಡು ಬಾರಿ ಮಾಡಿ ಅಥವಾ ನಿಮಗೆ ತಾಳ್ಮೆ ಇರುವಷ್ಟು ಸಾರಿ ಪ್ಯಾಕ್ಟರಿ ಡಾಟಾ ರಿಸೆಟ್ ಮಾಡಿ.
ಇದೆಲ್ಲ ಮಾಡುವುದು ಕಷ್ಟ, ಆಲಸ್ಯ ಎನ್ನುವುದಾದರೆ 'ಆ್ಯಂಟಿ ಥೆಪ್ಟ್ ಆ್ಯಪ್‌' ಡೌನ್‌ಲೋಡ್ ಮಾಡಿಕೊಂಡು ಲಾಗ್ ಇನ್ ಆಗಿ, 'ಥ್ರೂ ವೈಪ್‌' ಎಂಬ ಆಪ್ಷನ್ ಕ್ಲಿಕ್ ಮಾಡಿ. ಇದ್ಯಾವುದು ಬೇಡ ಎಂದಿದ್ದರೆ ಮನೆಯಲ್ಲೇ ಹಳೆ ಗರ್ಲ್ ಅಥವಾ ಬಾಯ್‌ಫ್ರೆಂಡ್ ನೆನಪಿಗೋಸ್ಕರ ಚೆಂದವಾಗಿಟ್ಟುಕೊಳ್ಳಿ.


-ರಾಜೀವ ಹೆಗಡೆ
meet.hegde@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.