ಅನ್ನ ಕದ್ದವನು

'ಈ ಹುಡುಗ ಅನ್ನದ ಕಳುವಿಗೆ ಯಾಕೆ ಕೈ ಹಾಕಿರಬಹುದು? ಅಷ್ಟಕ್ಕೂ ಅದು ಕಳ್ಳತನವೇ ಅಥವಾ ಹುನ್ನಾರವೇ..? ಕಾರ್ಯಕ್ರಮದಲ್ಲಿ ಮಂತ್ರಿ ಮಹೋದಯರು ಭಾಗವಹಿಸಿ ಊಟ ಮಾಡುವವರಿದ್ದರು.'
'ಈ ಹುಡುಗ ಅನ್ನ ಕದಿಯಲು ಬಂದವನೋ ಅಥವಾ ಬುಡಮೇಲು ಕೃತ್ಯ ನಡೆಸುವವರ ಪಿತೂರಿಯಿಂದಾಗಿ ಅನ್ನಕ್ಕೆ ವಿಷ ಸೇರಿಸಲು ಬಂದವನೋ? ಅವನನ್ನು ಹಿಡಿದ ತಕ್ಷಣವೇ ಜೇಬನ್ನು ತಡಕಾಡಬೇಕಿತ್ತು.'
'ಅದನ್ನೂ ಮಾಡಿದ್ದಾರಂತೆ, ಆದರೆ ಜೇಬುತುಂಬಾ ಸಿಕ್ಕಿದ್ದು ಬರಿ ಅನ್ನವಂತೆ.'
'ಆ ಅನ್ನದಲ್ಲಿಯೇ ಆತ ಆಚೆಯಿಂದಲೇ ವಿಷ ಬೆರೆಸಿ ತಂದಿರಬಾರದೇಕೆ? ಅದನ್ನು ರಾಶಿಗೆ ಬೆರೆಸುವಾಗ ಸಿಕ್ಕಿಹಾಕಿಕೊಂಡಿರಬಹುದು.'
'ಇದು ಗಣ್ಯಾತಿಗಣ್ಯರ ಹತ್ಯೆಯ ಪ್ರಯತ್ನವೇ ವಿನಾ ಅನ್ನದ ಕಳ್ಳತನ ಖಂಡಿತಾ ಅಲ್ಲ. ಇಷ್ಟಕ್ಕೂ ಸುಭಿಕ್ಷವಾದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ (1 ರುಪಾಯಿಗೆ ಅಕ್ಕಿ ಸಿಕ್ಕುತ್ತಿರುವಾಗ) ಅನ್ನ ಕದಿಯುವ ದಾರಿದ್ರ್ಯ... ಖಂಡಿತಾ ಇದು ಅಸಾಧ್ಯದ ಮಾತು!'
ತರಹೇವಾರು ಸಲಹೆಗಳು... ಮಾತುಗಳು... ಮಾಧ್ಯಮಗಳಲ್ಲೂ ಬಿಸಿ ಬಿಸಿ ಚರ್ಚೆಗಳು...
-
ಹುಡುಗ ಚಿಕ್ಕ ವಯಸ್ಸಿನವನು. ಕಾನೂನಿನ ಚೌಕಟ್ಟಿನಲ್ಲಿ ಪುನಶ್ಚೇತನಕ್ಕೆ ವ್ಯವಸ್ಥೆ ಮಾಡಬೇಕು. ದೊಡ್ಡ ಮಟ್ಟದ ಶಿಕ್ಷೆ ಕೊಡಲು ಅವನು ವಯಸ್ಕನಲ್ಲ. ಬಾಲಾಪರಾಧಿ. ಆದರೆ ಒಂದು ಸಂಶಯ, ಅವನ ಉದ್ದೇಶ ಹಸಿವೆಯೇ ಎಂಬುದು. ಬಾಲಸಹಜ ಆಸ್ಥೆಯಿಂದ ಅವನು ಜಿಲೇಬಿ, ಮೈಸೂರುಪಾಕಿನಂಥ ಸಿಹಿತಿಂಡಿ ಎದುರಿಗೇ ಇದ್ದರೂ ಅದೊಂದಕ್ಕೂ ಕೈ ಹಾಕದೇ ಅನ್ನದ ರಾಶಿಗೇ ಕೈ ಹಾಕಬೇಕೆಂದರೆ..!
'ಮಕ್ಕಳು ಸಹಜವಾಗಿ ಸಿಹಿತಿಂಡಿಗೇ ಕೈ ಚಾಚುತ್ತಾರೆ. ಎದುರಿಗೆ ಅನ್ನದರಾಶಿ ಮತ್ತು ಸಿಹಿತಿಂಡಿ ಇಟ್ಟರೆ ಸಿಹಿ ತಿಂಡಿಗೆ ಕೈ ಚಾಚುವ ಸಾಧ್ಯತೆ ಶೇ.98ರಷ್ಟಕ್ಕೂ ಹೆಚ್ಚು. (ಅವರ ಮನೆಯಲ್ಲಿನ ಊಟದ ಮೇಜಿನ ಮೇಲೆ ತರಾವರಿ ತಿಂಡಿಯೇ ಅಗ್ರಸ್ಥಾನ ಪಡೆದಿದ್ದು ಮತ್ತು ಅನ್ನದ ಪಾತ್ರೆ ಒಂದು ಮೂಲೆಯಲ್ಲಿ ಮತ್ತೂ ಸಣ್ಣದಾಗಿದ್ದು ಅವರ ಮಕ್ಕಳು ಹೆಚ್ಚಾಗಿ ತಿಂಡಿಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದುದು ಅವರ ಈ ಅನುಭವವೇದ್ಯದ ಹಿನ್ನೆಲೆಯೂ ಆಗಿರಬಹುದು). ಹಾಗಾಗಿ ಇಲ್ಲಿ ಉದ್ದೇಶ ಅನ್ನದ ಕಳುವಿಗಿಂತ ಬೇರೆಯಾಗಿಯೇ ಆಗಿ ಕಾಣಿಸುತ್ತಿದೆ. ಮನಶಾಸ್ತ್ರಜ್ಞರ ಅಭಿಮತ.
ಕಾನೂನು ತಜ್ಞರದ್ದೂ ಅದೇ ನಿಲುವು. 'ಆದಷ್ಟು ದೊಡ್ಡ ಮಟ್ಟದ ವಿಚಾರಣೆಯೇ ಆಗಬೇಕು. ಬುಡಮೇಲು ಕೃತ್ಯ ಎಸಗುವವರು ಶಿಕ್ಷೆಯ ಪ್ರಮಾಣ ಕಡಿಮೆ ಎಂಬ ಕಾರಣಕ್ಕೆ ಮಕ್ಕಳನ್ನು ದುಷ್ಟಕೃತ್ಯಕ್ಕೆ ಉಪಯೋಗಿಸಿಕೊಳ್ಳುವ ಸಾಧ್ಯತೆಗೆ ಅವಕಾಶವಾಗಬಾರದು. ಅದಕ್ಕೆ ಈ ನಿಟ್ಟಿನಲ್ಲಿ ಕಾನೂನಿನ ತಿದ್ದುಪಡಿಯ ಬಗ್ಗೆ ಯೋಚನೆ ನಡೆಸಿದರೂ ತಪ್ಪಿಲ್ಲ. ಹುಡುಗ ಕೃತ್ಯವೆಸಗಿದ ಸಮಾರಂಭದಲ್ಲಿ ರಾಷ್ಟ್ರಮಟ್ಟದ ನಾಯಕರು ಭಾಗವಹಿಸುವ ಸಾಧ್ಯತೆ ಇದ್ದುದರಿಂದ ಉಪೇಕ್ಷೆ ಖಂಡಿತಾ ಸಲ್ಲದು..!'
ಅತ್ತ ಸ್ಟೇಷನ್ನಿನಲ್ಲಿ ಇನ್‌ಸ್ಪೆಕ್ಟರ್ ಹುಡುಗನ ವಿಚಾರಣೆ ನಡೆಸಿದ್ದರು. ಉನ್ನತ ಅಧಿಕಾರಿಗಳಿಂದ ಯಕಶ್ಚಿತ್ ಮಂತ್ರಿ ಮಹೋದಯರು ಊಟಕ್ಕೆ ಸರಿಯಾದ ಕಾವಲು ಕೊಡಲಾಗದ ಬಗ್ಗೆ ಛೀಮಾರಿ ಹಾಕಿಸಿಕೊಂಡಿದ್ದು ಅವರ ಸಮವಸ್ತ್ರದ ಮೇಲಿನ ಸ್ಟಾರ್‌ಗೆ ಅವಮಾನ ಮಾಡಿದಂತಿತ್ತು. ಘಟನೆಯ ಕಾರಣವನ್ನು ಬಹಿರಂಗಗೊಳಿಸಿ ಅವಮಾನವನ್ನು ಕಡಿಮೆಮಾಡಿಕೊಳ್ಳುವ ಉದ್ದೇಶದಿಂದ ಕಣ್ಣುಗಳಲ್ಲಿ ಕ್ರೌರ್ಯ ತುಂಬಿ ವಿಚಾರಣೆ ನಡೆಸಿದ್ದರು, ಅನ್ನ ತುಂಬಿದ ತಟ್ಟೆಯನ್ನೇ ಹುಡುಗನ ಮುಂದಿಟ್ಟು. 'ತಿನ್ನೋ ಸೂಳೇಮಗನೆ, ನಿನಗೆ ಅನ್ನ ಬೇಕು ತಾನೆ?'. ಹಸಿವೆಯಿಂದ ಕಂಗೆಟ್ಟ ಹುಡುಗ ತಟ್ಟೆಗೆ ಕೈಚಾಚಿದ್ದ. ಕಣ್ಣೆದುರಿಗೆ ಧುತ್ತನೆ ನಿಂತ ಕುರುಡ ಅಪ್ಪ, ಹಾಸಿಗೆ ಹಿಡಿದ ಅಮ್ಮ, ತುಂಡು ಲಂಗದ ತಂಗಿ. ಅವರು ನನ್ನ ಬರವನ್ನೇ ಕಾಯುತ್ತಿರಬಹುದೇ? ಕೊನೆಗೂ ತಾನು ಕದ್ದ ಅನ್ನ ಅವರನ್ನು ತಲುಪಲಿಲ್ಲವಲ್ಲಾ.. ಅವರ ಹಸಿವು... ಥಟ್ಟನೇ ಕೈ ಹಿಂದಕ್ಕೆ ಸರಿಯಿತು. ಇನ್ಸ್‌ಪೆಕ್ಟರ್ ತನ್ನ ಸೊಂಟದ ಬೆಲ್ಟ್ ತೆಗೆದು ಹುಡುಗನೆಡೆಗೆ ಬೀಸಿದ.
ಬರಿ ಮೈಯಲ್ಲಿ (ಅಂಗಿ ಮತ್ತು ಚಡ್ಡಿಯನ್ನು ಎವಿಡೆನ್ಸ್ ಆಗಿ ನಂಬರ್ ಹಾಕಿ ಕಟ್ಟಿಟ್ಟ ಕಾರಣ) ಚರ್ಮ ಸುಲಿದು ರಕ್ತ ಒಸರಲಾರಂಭಿಸಿತು.
'ಅನ್ನದ ಕಳ್ಳಾ ಅಲ್ಲ ಈ ಮಗ.. ಮಿನಿಸ್ಟ್ರ ಸಾಯ್ಸಾಕೆ ಹೊಂಟವ್ನು... ಬಾಯಿ ಬಿಡಿಸ್ತೀನಿ ನೋಡು...' ಎಂದು ಬೆಲ್ಟ್ ಹಿಡಿದೇ 'ಮಗನೇ... ಈ ಇವನು ಗೊತ್ತಾ ನಿನಗೆ' ಅಂತ ಭೂಗತ ದೊರೆಗಳ, ನಕ್ಸಲ್ ಲೀಡರ್‌ಗಳ, ಕೊನೆಗೆ ಭಯೋತ್ಪಾದಕ ತಂಡದ ನಾಯಕರ ಫೋಟೋ ಒಂದೊಂದಾಗಿ ತೋರಿಸಿ ವಿಚಾರಿಸಿದ. ಹುಡುಗ ಇಲ್ಲ ಎಂದ. ಇನ್‌ಸ್ಪೆಕ್ಟರ್ ಪಿತ್ತ ನೆತ್ತಿಗೇರಿತ್ತು. 'ಬೊಗಳೋ ಸೂಳೇ ಮಗನೇ ನಿನ್ನನ್ನ ಯಾರು ಕಳ್ಸಿದ್ದು ಅಂತಾ' ಎಂದು ಯದ್ವಾತದ್ವಾ ಬೆಲ್ಟ್ ಬೀಸಿದಾಗ ಹುಡುಗ ನೋವಿನಿಂದ ತತ್ತರಿಸಿದ.
'ನನ್ನನ್ನು... ನನ್ನನ್ನು ಕಳ್ಸಿದ್ದು...' ಆತನ ದನಿ ಕ್ಷೀಣವಾಗಿತ್ತು. ಇನ್ಸ್‌ಪೆಕ್ಟರ್ ಗುಟ್ಟು ಸಿಕ್ಕಿದ ಖುಷಿಯಲ್ಲಿ
ಆತನ ಹೇಳಿಕೆ ರೆಕಾರ್ಡ್ ಮಾಡಿಕೊಳ್ಳಲೆಂದು ತನ್ನ ಮೊಬೈಲ್ ರೆಡಿಮಾಡಿ ಹುಡುಗನ ಬಾಯಿಯ ಹತ್ತಿರ ಹಿಡಿದ. 'ಹಸಿವು... ಬರೀ ಹಸಿವು ಸಾರ್!' ಹುಡುಗ ಮೂರ್ಛೆ ಹೋದ.
-
ಇಷ್ಟಕ್ಕೂ ಆ ಹುಡುಗ ಮಾಡಿದ ಅಪರಾಧವಾದರೂ ಏನು..? ಅದೊಂದು ದೊಡ್ಡ ಸಮಾರಂಭ. ರಾಶಿ ಹಾಕಿದ ಅನ್ನ, ಬುಟ್ಟಿಗಟ್ಟಲೆ ತಿಂಡಿ ತಿನಿಸುಗಳು. ಹೇಗೋ ಮಾಡಿ ಶಾಮಿಯಾನದ ಸಂದಿನಿಂದ ಒಳನುಗ್ಗಿದ್ದ. ಮೊದಲು ಕಂಡವರೊಬ್ಬರಿಗೆ ಸಂಶಯ ಬಂದರೂ ಎಲೆ ಎತ್ತುವವಳ ಮಗನಿರಬೇಕು ಎಂದುಕೊಂಡು, 'ಹೋಗೋ ಆಚೆ ಯಾಕೋ ಅಡುಗೆ ಮಾಡುವಲ್ಲಿಗೆ ಬಂದೆ..' ಎಂದಷ್ಟೇ ಗದರಿದ್ದರು. ಅಡುಗೆ ಮನೆಯಲ್ಲಿನ ತರಾವರಿ ತಿಂಡಿಯ ರಾಶಿಯನ್ನು ಕಂಡು ಹುಡುಗ ಕ್ಷಣವೂ ವಿಚಲಿತನಾಗಲಿಲ್ಲ. ಸೀದಾ ಅನ್ನದ ರಾಶಿಯೆದುರು ಹೋಗಿ ನಿಂತ. ಹೇಗೆ ತುಂಬಿಕೊಳ್ಳಲಿ? ಪ್ರಶ್ನೆ ಹೆಮ್ಮರವಾಯಿತು. ಒಂದೇ ಒಂದು ಚಿಕ್ಕಪಾತ್ರೆಯನ್ನಾಗಲಿ, ಒಂದು ಸಣ್ಣ ಪ್ಲಾಸ್ಟಿಕ್ ಕವರನ್ನೂ ಆತ ತಂದಿರಲಿಲ್ಲ. ಈ ಅವಕಾಶ ಅವನಿಗೆ ಅಚಾನಕ್ ಆಗಿ ಒದಗಿ ಬಂದದ್ದಾಗಿತ್ತು. ಅತ್ತ ಇತ್ತ ನೋಡಿದ. ಪ್ಲಾಸ್ಟಿಕ್‌ಮುಕ್ತ ಜಗತ್ತಿನ ಧೋರಣೆಯಿಂದಾಗಿ ಒಂದೇ ಒಂದು ಸಣ್ಣ ಪ್ಲಾಸ್ಟಿಕ್ ಕವರ್ ಕೂಡಾ ಅವನ ಕಣ್ಣಿಗೆ ಬೀಳಲಿಲ್ಲ. ದೊಡ್ಡ ಅಡುಗೆ ತಯಾರಿ ನಡೆದದ್ದರಿಂದ ಅಲ್ಲಿ ಚಿಕ್ಕ ಪಾತ್ರೆಗಳಿರಲಿಲ್ಲ. ಸ್ವಲ್ಪ ಪ್ರಯತ್ನಪಟ್ಟರೆ ಎತ್ತಿಕೊಂಡು ಹೋಗಬಹುದಾದ ಪಾತ್ರೆಗಳಿದ್ದರೂ ಅದೊಂದೂ ಅವನಿಗೆ ಬೇಕಾಗಿರಲಿಲ್ಲ. ಅಲ್ಲದೇ ಪಾತ್ರೆ ಸಮೇತ ಎತ್ತಿದರೆ ಅದು ಕಳ್ಳತನವಾಗುತ್ತದೆ ಮತ್ತು ಅದು ತಪ್ಪು ಎನ್ನುವ ಸಣ್ಣ ಅರಿವು ಅವನಲ್ಲಿತ್ತೋ ಕಾಣೆ. ಸಣ್ಣ ಹುಡುಕಾಟ ನಡೆಸಿದ ನಂತರ ಹಾಕಿದ ಅಂಗಿಯನ್ನೇ ಕಳಚಿ ಅದರ ಒಳಗೆ ಅನ್ನವನ್ನು ಅನ್ನದ ರಾಶಿಯಿಂದ ತೆಗೆದು ತುಂಬಿದ. ಜಿಲೇಬಿ, ಮೈಸೂರು ಪಾಕಿನಂಥ ಸಿಹಿ ತಿಂಡಿಗಳಿದ್ದರೂ ಅದೊಂದೂ ಆತನ ಕಣ್ಣುಗಳಲ್ಲಿ ಪ್ರತಿಬಿಂಬಿಸಲಿಲ್ಲ.
'ಅಂಗಿಯಲ್ಲಿ ಕಟ್ಟಿದ ಅನ್ನ ಅಮ್ಮನಿಗೆ, ಅಪ್ಪನಿಗೆ ಸಾಕಾಗುತ್ತೆ. ಪುಟ್ಟ ತಂಗಿಗೆ ಸ್ವಲ್ಪ...' ಎಂದುಕೊಂಡು ಚಡ್ಡಿಯ ಜೇಬಿನಲ್ಲಿ ಅನ್ನ ತುಂಬುತ್ತಿರುವಾಗಲೇ ಅವನು ಸಿಕ್ಕಿ ಹಾಕಿಕೊಂಡಿದ್ದು. ಅವರೆಲ್ಲರ ಹಸಿವಿನ ಬಗ್ಗೆ ಚಿಂತಿಸುತ್ತಾ ಅವನು ತನ್ನ ಹಸಿವನ್ನೇ ಮರೆತಿದ್ದ. ಅದಕ್ಕೇ ಆ ರಾಶಿಯಲ್ಲಿನ ಒಂದು ಅಗಳನ್ನು ತನ್ನ ಬಾಯಿಗೆ ಹಾಕಿಕೊಳ್ಳದೆ ಕದ್ದ ಅನ್ನ ಮತ್ತು ಹಸಿವಿನ ಜೊತೆಗೇ ಆತ ಸಿಕ್ಕಿಹಾಕಿಕೊಂಡಿದ್ದ.
= ಮಂಜುನಾಥ ನಾಯ್ಕ್
manjunathanaikblr@yahoo.in
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


