ವಾಸ್ತವ ತಜ್ಞೆ

'ಸಿಂಪಲ್' ಆಗಿ ಗೆದ್ದ ಶ್ವೇತಾ ಬಂದ ಅವಕಾಶಗಳಿಗೆಲ್ಲ ಬಣ್ಣ ಬಳಿದುಕೊಂಡು ಕ್ಯಾಮೆರಾ ಮುಂದೆ ನಿಲ್ಲುವ ಹಪಾಹಪಿಗೆ ಬೀಳಲಿಲ್ಲ. ಗೆದ್ದ ನಟಿ ಬ್ಯುಸಿ ತಾರೆ ಎನಿಸಿಕೊಳ್ಳಲಿಲ್ಲ. 'ಫೇರ್ ಆ್ಯಂಡ್ ಲವ್ಲಿ'ಯಂಥ ಅತ್ಯುತ್ತಮ ಕಥೆಗಾಗಿ ಕಾದರು...
ನಟಿ ಶ್ವೇತಾ ಶ್ರೀವಾಸ್ತವ್‌ರನ್ನು ನೆನಪಿಸುವ ಅಗತ್ಯವಿಲ್ಲ. ಯಾಕೆಂದರೆ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಚಿತ್ರದ ಯಶಸ್ಸಿನ ಪ್ರಭಾವ ಅದು. ಈ ಚಿತ್ರದ ನಂತರ ಮತ್ತೊಂದು ಚಿತ್ರದಲ್ಲಿ ಆಕೆ ನಟಿಸದಿದ್ದರೂ ಅವರ ಬೋಲ್ಡ್ ಮಾತು, ನಟನೆಯ ಚಾತುರ್ಯವನ್ನು ಪ್ರೇಕ್ಷಕರು ಮರೆತಿಲ್ಲ. 'ಸಿಂಪಲ್' ನಂತರ ಮುಂದೇನು? ಈ ಪ್ರಶ್ನೆ ಪದೇ ಪದೇ ಶ್ವೇತಾಗೂ ಎದುರಾಯಿತು. ಆದರೆ, ಅದಕ್ಕೆ ತುಂಬಾ ತಡವಾಗಿ ಉತ್ತರ ಸಿಕ್ಕಿದೆ. ಹೌದು, 'ಫೇರ್ ಆ್ಯಂಡ್ ಲವ್ಲಿ' ಚಿತ್ರ ಇನ್ನೇನು ಚಿತ್ರೀಕರಣ ಮುಗಿಸಿಕೊಂಡಿದೆ. ಒಂದೆರಡು ದೃಶ್ಯಗಳಿಗೆ ನಿರ್ದೇಶಕ ರಘುರಾಮ್ ಆ್ಯಕ್ಷನ್ ಕಟ್ ಹೇಳಿದರೆ ಕುಂಬಳಕಾಯಿ ಒಡೆಯಬಹುದು. ಮುಂದಿನ ವಾರ ಚಿತ್ರದ ಆಡಿಯೋ ಬಿಡುಗಡೆ.
ಹೀಗಾಗೆ ತೆರೆ ಮೇಲೆ ಶ್ವೇತಾಳನ್ನು ನೋಡಲು ಬಹಳ ದಿನಗಳಿಂದ ಕಾಯುತ್ತಿದ್ದ ಪ್ರೇಕ್ಷಕರಿಗೆ ಮಾತ್ರವಲ್ಲ, ಸ್ವತಃ ಅವರೂ 'ಫೇರ್ ಆ್ಯಂಡ್ ಲವ್ಲಿ' ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಈ ಚಿತ್ರ ತೆರೆ ಕಂಡರೆ 'ಸಿಂಪಲ್' ಹುಡುಗಿಯ ಎರಡನೇ ಇನ್ನಿಂಗ್ಸ್ ಹೇಗಿರಬಹುದು? ಎಂಬುದಕ್ಕೆ ಉತ್ತರ ದೊರೆಯಲಿದೆ. 'ನೆನಪಿರಲಿ' ಪ್ರೇಮ್ ನಾಯಕನಾಗಿ ಅಭಿನಯಿಸಿರುವ 'ಫೇರ್ ಆ್ಯಂಡ್ ಲವ್ಲಿ' ಚಿತ್ರದಲ್ಲಿ ಸಾಕಷ್ಟು ವಿಶೇಷಗಳಿವೆ. ನಾಯಕಿ ಶ್ವೇತಾ, ಕ್ರೇಜಿಸ್ಟಾರ್ ಅಭಿಮಾನಿಯಾಗಿರುವುದು, ಸುಂದರ ಪ್ರೇಮಕಥೆ, ಸಾಮಾಜಿಕ ಸಂದೇಶ, ಶ್ವೇತಾಳ ಔಟ್‌ಲುಕ್ ಹೀಗೆ ಹತ್ತಾರು ಅಂಶಗಳು ಪ್ರೇಕ್ಷಕರನ್ನು ಆಕರ್ಷಿಸಲಿವೆ. ಪತ್ರಕರ್ತ ಕಂ ನಟ ಯತಿರಾಜ್ ಈ ಚಿತ್ರಕ್ಕೆ ಕಥೆ ಬರೆದಿದ್ದು, ಕಮರ್ಷಿಯಲ್ ಕಥೆಯ ಚಿತ್ರಕ್ಕೆ ಬೇಕಾದ ಎಲ್ಲ ಅಂಶಗಳೂ ಇಲ್ಲಿವೆ. ಅಂದಹಾಗೆ 'ಸಿಂಪಲ್' ಗೆಲವಿನ ನಂತರ ಶ್ವೇತಾಗೆ ಯಾಕೆ ಅವಕಾಶಗಳು ಬರಲಿಲ್ಲ? ಯಾರೇ ಗೆದ್ದರೂ ಅವರ ಹಿಂದೆ ಇಂಥ ಪ್ರಶ್ನೆ ಕೇಳಿಬರುವುದು ಕಾಮನ್. ಆದರೆ, ಶ್ವೇತಾ ಎಲ್ಲರಿಗೂ ಗೊತ್ತಿರುವ ಹಾಗೆ ರಂಗಭೂಮಿಯ ಹಿನ್ನಲೆಯಿಂದ ಬಂದ ನಟಿ. ರಂಗ ವೇದಿಕೆಯಲ್ಲಿ ಪಳಗಿದ ಕಲಾವಿದರಿಗೆ ಅವಕಾಶಗಳಿಗಿಂತ ಕಥೆ, ಪಾತ್ರದ ಘನತೆ ಹಾಗೂ ಈ ಚಿತ್ರ ಏನು ಹೇಳುವುದಕ್ಕೆ ಹೊರಟಿದೆ ಎಂಬುದು ಮುಖ್ಯವಾಗುತ್ತದೆ. ಇಂಥ ಷರತ್ತುಗಳನ್ನು ಪಾಲಿಸಿಕೊಂಡಿರುವ ಶ್ವೇತಾ, ಬಂದ ಅವಕಾಶಗಳಿಗೆಲ್ಲ ಬಣ್ಣ ಬಳಿದುಕೊಂಡು ಕ್ಯಾಮೆರಾ ಮುಂದೆ ನಿಲ್ಲುವ ಹಪಾಹಪಿಗೆ ಬೀಳಲಿಲ್ಲ. ಹೀಗಾಗಿ ಗೆದ್ದ ನಟಿ ಬ್ಯುಸಿ ತಾರೆ ಎನಿಸಿಕೊಳ್ಳಲಿಲ್ಲ. 'ಸಿಂಪಲ್ ಚಿತ್ರದ ನಂತರ ಸಾಕಷ್ಟು ಕಥೆಗಳನ್ನು ಕೇಳಿದೆ. ಆದರೆ, ಎಲ್ಲವೂ ಒಂದೇ ರೀತಿಯದ್ದು. ಕೆಲವು ಬೇರೆ ಥರಾ ಅನಿಸಿದರೂ, ಪಾತ್ರ ಮಾತ್ರ ಅದೇ ಮಾತಿನ ಮಲ್ಲಿಯಂತೆ. ಹೀಗಾಗಿ ಒಳ್ಳೆಯ ಪಾತ್ರ, ಕತೆ, ತಂಡಕ್ಕಾಗಿ ಕಾದೆ. 'ಫೇರ್ ಆ್ಯಂಡ್ ಲವ್ಲಿ' ಮೂಲಕ ನಿರೀಕ್ಷಿಸಿದ ಚಿತ್ರ ಕೈ ಹಿಡಿದಿದೆ. ಖಂಡಿತ ಈ ಚಿತ್ರದ ಮೂಲಕ ಮತ್ತೆ ಭಿನ್ನ ನಟಿ ಅಂತ ತೋರಿಸಿಕೊಳ್ಳುತ್ತೇನೆ' ಎನ್ನುತ್ತಾರೆ ಶ್ವೇತಾ.
ಇನ್ನು ಶ್ವೇತಾಳಿಗೆ ತಮ್ಮ ತಂದೆ ನಿರ್ದೇಶಿಸುವ ನಾಟಕಗಳಲ್ಲಿ ಅಭಿನಯಿಸುವ ಆಸೆ ಇದೆಯಂತೆ. ಆದರೆ, ಸದ್ಯಕ್ಕೆ ಸಿನಿಮಾಗಳ ಕಡೆ ಹೆಚ್ಚು ಗಮನ ಕೊಟ್ಟಿರುವುದರಿಂದ ರಂಗಭೂಮಿ ಕಡೆಗೆ ಮುಖ ಮಾಡಲು ಆಗುತ್ತಿಲ್ಲ ಎಂಬುದು ಶ್ವೇತಾಳ ಅಳಲು. ಹೀಗಾಗಿ ಒಂದು ಪ್ರೌಢ ಪ್ರೇಮ ಕಥೆಯ ಮೂಲಕ ಶ್ವೇತಾ ಸದ್ಯದಲ್ಲೇ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಆ ಮೂಲಕ ಗಾಂಧಿನಗರದಲ್ಲಿ ಶ್ವೇತಾ ಶ್ರೀವಾಸ್ತವ್‌ರ ವಾಸ್ತು ಸರಿಯಾಗುತ್ತದೆಂಬ ನಂಬಿಕೆ ಇದೆ.
= ಕೇಶವ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


