ಮೀರಾ- ಮೇರೆ ಮೀರಿದ ಜೀವನ ಪ್ರೀತಿಯ ಕತೆ
ಸ್ವತಂತ್ರ ಭಾರತದ ಪ್ರಮುಖ ಸಾಹಿತಿಗಳಲ್ಲಿ ಒಬ್ಬರಾಗಿರುವ ಕಿರಣ್ ನಗರ್‌ಕರ್ ಇಂಗ್ಲಿಷಿನಲ್ಲಿ ಬರೆಯುತ್ತಿರುವ ಕೆಲವೇ ಭಾರತೀಯ ಲೇಖಕರ ಪಟ್ಟಿಯಲ್ಲಿದ್ದಾರೆ. ಕಾದಂಬರಿ, ನಾಟಕ, ವಿಮರ್ಶೆಗಳನ್ನು ಹಾಗೂ ಇಂಗ್ಲಿಷ್ ಮತ್ತು ಮರಾಠಿ ಚಿತ್ರಕತೆಗಳನ್ನು ಅವರು ಬರೆದಿದ್ದಾರೆ. ಅವರ ಪ್ರಸಿದ್ಧ ಇಂಗ್ಲಿಷ್ ಕಾದಂಬರಿ 'ಕಕೋಲ್ಡ್' ಅನ್ನು ಆರ್. ಲಕ್ಷ್ಮೀನಾರಾಯಣ ಅವರು 'ಬೇಗುದಿ' ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದಾರೆ.
ಮೇವಾಡದ 16ನೇ ಶತಮಾನದ ರಜಪೂತ ದೊರೆಗಳ ಕತೆಯನ್ನು ಈ ಕಾದಂಬರಿ ಹೇಳುತ್ತದೆ. ಇತಿಹಾಸವೆಂದರೆ ಇತಿಹಾಸವಲ್ಲ, ಜಾನಪದವೆಂದರೆ ಜಾನಪದವಲ್ಲ. ಅತ್ತ ಅದು ಹೆಚ್ಚಾಗದ ಹಾಗೆ ಇತ್ತ ಇದು ಹೆಚ್ಚಾಗದ ಹಾಗೆ ವಸ್ತುವನ್ನು ಸಂತುಲನಗೊಳಿಸಿ ಕಾದಂಬರಿಯ ಸಂವಿಧಾನವನ್ನು ರೂಪಿಸಲಾಗಿದೆ.
16ನೇ ಶತಮಾನದ ಮೇವಾಡದ ರಜಪೂತರು ತಮ್ಮ ಅಧಿಕಾರದ ಶೃಂಗದಲ್ಲಿದ್ದರು. ಕೆಚ್ಚಿಗೆ ಹೆಸರಾದ ಅವರು ದೆಹಲಿ, ಗುಜರಾತ್ ಮತ್ತು ಮಾಳ್ವದ ಸುಲ್ತಾನರೊಂದಿಗೆ ಘನಘೋರ ಸಂಗ್ರಾಮದಲ್ಲಿ ತೊಡಗಿಕೊಂಡಿದ್ದರು. ಈ ಹೊರಗಿನ ಹೋರಾಟದ ನಡುವೆಯೇ ಮೇವಾಡದ ಅರಮನೆಯಲ್ಲಿ ನಡೆಯುವ ರಾಜಕೀಯದ ಕುತಂತ್ರಗಳು ಕಾದಂಬರಿಗೆ ಒಂದು ರೋಚಕತೆಯನ್ನು ತಂದುಕೊಟ್ಟಿವೆ. ಮಹಾರಾಜ ರಾಣಾಸಂಗನ ಉತ್ತರಾಧಿಕಾರಿಯಾದ ಮಹಾರಾಜಕುಮಾರ್‌ನ (ಭೋಜರಾಜ್) ನ್ಯಾಯಬದ್ಧವಾದ ವಾರಸುದಾರಿಕೆಯ ಹಕ್ಕನ್ನು ತಪ್ಪಿಸಲು ರಾಣಿಯರು ನಡೆಸುವ ಮಸಲತ್ತುಗಳು ಆ ಕಾಲದ ರಾಜಕೀಯದ ಚಿತ್ರಣವನ್ನು ನೀಡುತ್ತವೆ. ಒಂದೆಡೆ ಮೊಗಲರ ಬಾಬರನು ತನ್ನ ರಾಜ್ಯವನ್ನು ವಿಸ್ತರಿಸಲು ಯುದ್ಧವ್ಯೂಹಗಳನ್ನು ರಚಿಸುತ್ತಿದ್ದರೆ ಮೇವಾಡದ ರಾಣಾಗಳು ತಮ್ಮ ಸ್ವಾಭಿಮಾನದ ಬದುಕಿಗಾಗಿ ತಮ್ಮದೇ ರಣತಂತ್ರಗಳನ್ನು ಹೆಣೆಯುತ್ತಿದ್ದರು.
ಮೇವಾಡದ ಮೀರಾ ತನ್ನ ಶ್ರೀಕೃಷ್ಣ ಭಕ್ತಿಯಿಂದಾಗಿ ಚರಿತ್ರೆಯಲ್ಲಿ ಹೆಸರಾಗಿದ್ದಾಳೆ. ಅವಳ ಪತಿಯೇ ಈ ಮಹಾರಾಜ್ ಕುಮಾರ್ ಅಥವಾ ಭೋಜರಾಜ. ಈ ಕಾದಂಬರಿಗೆ ಆತನೇ ನಾಯಕ. ತಾನು ಕೈಹಿಡಿದ ಹೆಣ್ಣು ತನ್ನೊಂದಿಗೆ ಸಹಜ ಪತ್ನಿಯಾಗಿ ಬಾಳದೆ ಇರುವುದು ಆತನಿಗೆ ಮಾನಸಿಕ ಕಿರಿಕಿರಿಯನ್ನು ಉಂಟುಮಾಡುತ್ತದೆ. ಗಿರಿಧರ ಗೋಪಾಲನೊಂದಿಗೆ ತನ್ನ ಸಂಬಂಧವನ್ನು ಕಲ್ಪಿಸಿಕೊಂಡು ಪತಿಯನ್ನು ಕಡೆಗಣಿಸಿದ ಮೀರಾಳ ಬಗ್ಗೆ ಸಹಜವಾಗಿಯೇ ಆತನಿಗೆ ಕೋಪ. ಇದು ಆತನಲ್ಲಿ ಉಂಟುಮಾಡುವ ಬೇಗುದಿ ಆತನ ವ್ಯಕ್ತಿತ್ವವನ್ನೇ ಛಿದ್ರಗೊಳಿಸುತ್ತದೆ. ಮೀರಾಳ ಉಪೇಕ್ಷೆಯ ಅರಕೆಯನ್ನು ತುಂಬಿಕೊಳ್ಳಲು ಆತ ತಾನು ಶಿಶುವಿದ್ದಾಗ ತನಗೆ ಮೊಲೆಯುಣಿಸಿದ ಹೆಣ್ಣಿನೊಂದಿಗೇ ಸಂಬಂಧವನ್ನು ಬೆಳೆಸುತ್ತಾನೆ. ಇನ್ನೂ ಹಲವು ಹೆಣ್ಣುಗಳನ್ನು ಆತ ಕೂಡುತ್ತಾನೆ. ಸತಿನಿಷ್ಠೆ ವಂಚಿತನಾಗಿ ಒಂದು ರೀತಿಯಲ್ಲಿ ಓದುಗರ ಸಹಾನುಭೂತಿಯನ್ನು ದೊರಕಿಸಿಕೊಳ್ಳುತ್ತಾನೆ.
ರಾಣಾನಲ್ಲಿ ಒಬ್ಬ ಸುಧಾರಣಾವಾದಿ ಇದ್ದ. ತಾನು ಬೆಳೆದುಬಂದ ಊಳಿಗಮಾನ್ಯ ವ್ಯವಸ್ಥೆಗೆ ಅನುಕೂಲ ಮಾಡಿಕೊಡುವ ಕಾನೂನುಗಳನ್ನೇ ಆತ ಪ್ರಶ್ನಿಸುತ್ತಾನೆ. ಅದನ್ನೇ ತಮ್ಮ ಬಂಡವಾಳ ಮಾಡಿಕೊಂಡವರ ಬಣ್ಣವನ್ನು ಬಯಲಿಗೆಳೆಯುತ್ತಾನೆ. ಸಾಹಸವೇ ಆ ಕಾಲದ ಒಂದು ಮೌಲ್ಯವಾಗಿತ್ತು. ಅದನ್ನು ಲೇಖಕರು ಸರಿಯಾಗಿ ಗ್ರಹಿಸಿದ್ದಾರೆ. ಯುದ್ಧ ಮರುಭೂಮಿ ಒಳಸಂಚು ಕಾಮ ಕ್ರೌರ್ಯ ಇತ್ಯಾದಿಗಳನ್ನೂ ಮೀರಿ ಕಾದಂಬರಿ ಪ್ರೀತಿಯ ತೊರೆಯತ್ತ ನಮ್ಮನ್ನು ಸೆಳೆಯುತ್ತದೆ. ರಾಣಾನ ಅಧಿಕಾರದ ಪ್ರೀತಿ, ತಂದೆಯ ಬಗೆಗಿನ ಪ್ರೀತಿ, ಪತ್ನಿ ಮೀರಾಳ ಬಗೆಗಿನ ಪ್ರೀತಿ, ಮೀರಾಳ ಗಿರಿಧರ ಗೋಪಾಲನ ಬಗೆಗಿನ ಪ್ರೀತಿ, ಹಿಜಡಾ ಬೃಹನ್ನದ ಊರ್ವಶಿಯ ಬಗೆಗೆ ತೋರುವ ಪ್ರೀತಿ ಹೀಗೆ ಎಲ್ಲೆಡೆ ಜಿನುಗುವ ಪ್ರೇಮದ ತೊರೆಗಳು ಒಟ್ಟಾಗಿ ನದಿಯಾಗುವುದು ಲೇಖಕನ ಅಗ್ಗಳಿಕೆ.
ಕಥಾನಾಯಕ ರಾಣಾನ ಬೇಗುದಿ ಇದಾದರೂ ಹೆಣ್ಣನ್ನು ಕಾದಂಬರಿಯಲ್ಲಿ ತುಚ್ಛೀಕರಿಸಿಲ್ಲ. ವ್ಯಕ್ತಿಗಳ ನಡುವಿನ ಸಂಬಂಧಗಳನ್ನು ಇಲ್ಲಿ ಪೂರ್ತಿಯಾಗಿ ಮಾನವೀಯ ನೆಲೆಯಲ್ಲೇ ನೋಡಲಾಗಿದೆ. ಇದರಿಂದ ಪಾತ್ರಗಳಿಗೆ ನ್ಯಾಯವನ್ನು ಒದಗಿಸಿದಂತೆ ಆಗಿದೆ. ಮೀರಾಳ ವ್ಯಕ್ತಿತ್ವವೂ ಇಲ್ಲಿ ಘನವಾಗಿದೆ.
ಈ ಕಾದಂಬರಿಯಲ್ಲಿ ಆ ಕಾಲದ ಯುದ್ಧತಂತ್ರಗಳು, ಪ್ರಭುತ್ವಕ್ಕಾಗಿ ನಡೆಯುವ ಸಂಘರ್ಷಗಳು, ನೇರ ಹೋರಾಟದಿಂದ ತಪ್ಪಿಸಿಕೊಳ್ಳುವ ಉಪಾಯಗಳು, ಉನ್ನತ ಮಟ್ಟದಲ್ಲಿನ ಭ್ರಷ್ಟಾಚಾರಗಳು, ದ್ರೋಹ, ವಂಚನೆ, ಅಧಿಕಾರಸ್ಥರ ಕಾಮಜೀವನದ ವಿವರಗಳು ಒಂದೆಡೆಯಾದರೆ ರಾಣಾನ ಜನಪರ ಯೋಜನೆಗಳಾದ ಒಳಚರಂಡಿ, ಕುಡಿವ ನೀರಿನ ಯೋಜನೆ, ಕಲೆ, ಸಂಗೀತಗಳ ಬಗೆಗಿನ ಆತನ ಪ್ರೇಮ ಇತ್ಯಾದಿಗಳೆಲ್ಲ ಅಂದಿನ ಇತಿಹಾಸದ ವಿವರಗಳನ್ನು ನೀಡುತ್ತವೆ. ಇಲ್ಲಿ ಚರಿತ್ರೆ ಗೌಣ, ಚಾರಿತ್ರ್ಯ ಪ್ರಮುಖವಾಗಿದೆ.
ಆರ್. ಲಕ್ಷ್ಮೀನಾರಾಯಣ ಅವರ ಅನುವಾದ ತುಂಬ ಸೊಗಸಾಗಿದೆ, ಸರಳವಾಗಿದೆ.
ಪ್ರ: ಸಾಹಿತ್ಯ ಅಕಾಡೆಮಿ, ದೆಹಲಿ, ಪುಟಗಳು, 694, ಬೆಲೆ ರು. 350
ರಾಮಾನಂದ ಚರಿತೆ
ಕೆಲವು ಮಹಾಪುರುಷರು ನಮ್ಮ ನಾಡಿನಲ್ಲೇ ಹುಟ್ಟಿ ಬಾಳಿ ಅಳಿದರೂ ನಮಗೆ ಗೊತ್ತಾಗದೆ ಹೋಗುತ್ತದೆ. ಅಂಥ ವಿರಳ ಅಧ್ಯಾತ್ಮಿಕ ಪುರುಷರಲ್ಲಿ ಒಬ್ಬರು ಕುಂದಗೋಳದ ಶ್ರೀ ರಾಮಾನಂದ ಮಹಾರಾಜರು. ನವಲಗುಂದ ಮೂಲದ ಇವರು ಅಧ್ಯಾತ್ಮಿಕ ಸಾಧನೆಗಾಗಿ ನೆಲೆಸಿದ್ದು ಕುಂದಗೋಳದಲ್ಲಿ. ಅನೇಕ ಅಘಟಿತ ಘಟನೆಗಳನ್ನೂ ಇವರ ಕುರಿತು ಹೇಳಲಾಗುತ್ತದೆ. ಶಾರದಾ ದೇವಿಯು ಇವರಿಗೆ ದರ್ಶನ ನೀಡುತ್ತಿದ್ದಳೆಂದೂ ತಿಳಿಯಲಾಗಿದೆ. ಇವರ ಬಗ್ಗೆ ಲಭ್ಯವಿರುವ ಮಾಹಿತಿ ಐತಿಹ್ಯಗಳನ್ನೆಲ್ಲ ಸೇರಿಸಿ ಈ ಕೃತಿಯನ್ನು ರಚಿಸಲಾಗಿದೆ. ಮನುಷ್ಯಮಾತ್ರರಿಗೆ ಸಾಮಾನ್ಯವಾದ ದೃಷ್ಟಿಇದ್ದರೆ ಸತ್ಪುರುಷರಿಗೆ ಮಾತ್ರ ವಿಶೇಷವಾದ ದಯಾರ್ದ್ರ ದೃಷ್ಟಿ ಇರುತ್ತದೆ ಅನ್ನುತ್ತಿದ್ದ ರಾಮಾನಂದರ ಕೆಲ ವಿಶಿಷ್ಟ ಬೋಧನೆಗಳೂ ಇಲ್ಲಿವೆ. ಜ್ಞಾನವೊಂದೇ ಮೇಲು, ನಾಮಪಾರಾಯಣ ಕೀಳು ಎನ್ನುವ ಭಾವ ಸರಿಯಲ್ಲ. ಔಪಾಸಕನು ತಾದಾತ್ಮ್ಯ ಹೊಂದುವುದು ಅಗತ್ಯ ಎಂದು ಅವರು ಪ್ರತಿಪಾದಿಸುತ್ತಿದ್ದರು. ಸ್ಥಳೀಯ ಸತ್ಪುರುಷರ ಬಗ್ಗೆ ಕಣ್ತೆರೆಸುವ ಇಂಥ ಕೃತಿಗಳು ಈಗಿನ ಅಗತ್ಯ.
ಶ್ರೀ ರಾಮಾನಂದ ಮಹಾರಾಜರು (ಕುಂದಗೋಳ)
ಲೇ: ಎಂ.ಎಂ.ಕನಕೇರಿ, ಜಯಲಕ್ಷ್ಮಿ ಇನಾಂದಾರ್
ಪ್ರ: ಶಾರದಾ ಪ್ರಕಾಶನ ಕುಂದಗೋಳ
ಮಂಜೇಶ್ ಎಂಬ ಸಂಸ್ಕೃತಿಯ ಸೇತು
ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಜಂಟಿ ತೆರಿಗೆ ಆಯುಕ್ತರಾಗಿ ನಿವೃತ್ತಿ ಹೊಂದಿರುವ ಜಿ.ಆರ್. ಮಂಜೇಶ್ ಅವರು ತಮ್ಮ ಸರಳ ಸಜ್ಜನಿಕೆಯಿಂದಲೇ ಅಪಾರವಾದ ಸ್ನೇಹಿತರ ಬಳಗವನ್ನು ಸಂಪಾದಿಸಿಕೊಂಡವರು. ಅವರೊಬ್ಬ ಕನ್ನಡದ ಪರಿಚಾರಕ. ಕನ್ನಡದ ಕೆಲಸವೆಂದರೆ ಅವರಿಗೆ ಎಲ್ಲಿಲ್ಲದ ಹುರುಪು. ಅದು ನಾಟಕ ಪ್ರದರ್ಶನವಿರಬಹುದು, ಗಣ್ಯರ ಸನ್ಮಾನ ಇರಬಹುದು, ಚಲನಚಿತ್ರಗಳ ಉತ್ಸವ ಇರಬಹುದು. ಮೈಮೇಲೆ ಎಳೆದುಕೊಂಡು ಯಶಸ್ವಿಗೊಳಿಸುವವರು. ದೆಹಲಿಯ ಕರ್ನಾಟಕ ಭವನದಲ್ಲಿ ಅಧಿಕಾರಿಯಾಗಿದ್ದಾಗ ಉತ್ತಮ ಕೆಲಸ ಮಾಡಿದವರು. ಅವರ ಒಳ್ಳೆಯತನವೇ ಈ ಅಭಿನಂದನ ಗ್ರಂಥ 'ಹಾಸುಹೊಕ್ಕು'ಗೆ ಕಾರಣ. ಅನಂತಮೂರ್ತಿ, ಕಂಬಾರರಿಂದ ಹಿಡಿದು ಅವರ ಆತ್ಮೀಯರೆಲ್ಲ ಇದಕ್ಕೆ ಬರೆದಿದ್ದಾರೆ. ಲಕ್ಷ್ಮಣ ಕೊಡಸೆ ಮತ್ತು ಅತ್ತಿಹಳ್ಳಿ ದಾಸೇಗೌಡ ಇದನ್ನು ಸಂಪಾದಿಸಿದ್ದಾರೆ. ಮಂಜೇಶ್ ಅವರು ನೇಕಾರರಾಗಿರುವ ಕಾರಣಕ್ಕೆ ಕೃತಿಗೆ 'ಹಾಸುಹೊಕ್ಕು' ಎಂಬ ಹೆಸರು.
ಪ್ರ: ಸಿರಿವರ ಪ್ರಕಾಶನ, ಬೆಂಗಳೂರು, ಪುಟಗಳು 360, ಬೆಲೆ ರು. 300
ಜೀವಿ ಸಾಹಿತ್ಯ ದರ್ಶನ
ಡಾ.ಜಿ.ವಿ. ಕುಲಕರ್ಣಿಯವರು ಮುಂಬಯಿಯಲ್ಲಿದ್ದು ಕನ್ನಡ ಸೇವೆ ಮಾಡಿದವರು. ಧಾರವಾಡದ ಗೆಳೆಯರ ಬಳಗದೊಂದಿಗೆ ಅವರಿಗೆ ಒಡನಾಟವಿತ್ತು. ದ.ರಾ. ಬೇಂದ್ರೆಯವರು ಮತ್ತು ವಿ.ಕೃ. ಗೋಕಾಕರನ್ನು ಅವರು ಹತ್ತಿರದಿಂದ ಬಲ್ಲವರು. ಜಿ.ವಿ. ಕುಲಕರ್ಣಿಯವರು ಕವಿ, ನಾಟಕಕಾರ, ವಿಮರ್ಶಕ, ಕತೆಗಾರ, ಕಾದಂಬರಿಕಾರ, ಅಂಕಣಕಾರ, ಆಧುನಿಕ ವಚನಕಾರ, ಯೋಗಪಟು, ವಾಗ್ಮಿ, ಅನುವಾದಕ, ಪ್ರಾಧ್ಯಾಪಕ, ಪ್ರವಾಸ ಸಾಹಿತ್ಯ ರಚಿಸಿದವರು ಹೀಗೆ ಇನ್ನೂ ಏನೇನೋ. ಅವರ ಸಮಗ್ರ ಸಾಹಿತ್ಯದ ವಿವೇಚನೆಯನ್ನು ಡಾ.ಜಿ.ಎನ್. ಉಪಾಧ್ಯ ಅವರು 'ಜೀವಿ' ಸಾಹಿತ್ಯ- ಸಮಗ್ರ ದರ್ಶನ ಕೃತಿಯಲ್ಲಿ ಮಾಡಿದ್ದಾರೆ. ಹೊರನಾಡ ಕನ್ನಡಿಗನಿಗೆ ಸಂದ ಒಂದು ಅಪೂರ್ವ ಗೌರವ ಇದು.
ಪ್ರ: ಕನ್ನಡ ಅಧ್ಯಯನ ವಿಭಾಗ, ಮುಂಬೈ ವಿವಿ, ಮುಂಬೈ, ಪುಟಗಳು 360, ಬೆಲೆ ರು. 300
ಅಂಬುಧಿಯಷ್ಟು ಸಲಹೆಗಳು
ತಮ್ಮ ಕತೆ, ಕಾದಂಬರಿಗಳಿಂದ ಈಗಾಗಲೇ ನಾಡಿನಾದ್ಯಂತ ಪರಿಚಿತರಾಗಿರುವ ಯತಿರಾಜ್ ವೀರಾಂಬುಧಿಯವರ ಲೇಖನಗಳ ಸಂಕಲನ 'ಮಾಸದ ಮಾತು' ವಿಭಿನ್ನವಾಗಿದೆ. ಪುಟ್ಟಪುಟ್ಟ ಸಂಗತಿಗಳಿಂದ ನಮ್ಮ ಮನಸ್ಸನ್ನು ಹೇಗೆ ಸಂತೋಷವಾಗಿಟ್ಟುಕೊಳ್ಳಬಹುದು, ಹೊರಗಿನ ಕಿರಿಕಿರಿಗಳಿಗೆ ಬಲಿಯಾಗದೆ ಹೇಗೆ ಬದುಕಬಹುದು ಎನ್ನುವ ಜೀವನ ಪಾಠಗಳು ಇದರಲ್ಲಿವೆ. ಮೂಡ್ ಕೆಡಿಸಿಕೊಳ್ಳದೆ ಬದುಕುವ ಹಲವು ಲಹರಿಯ ಮಾರ್ಗಗಳನ್ನು ಅವರು ಸೂಚಿಸುತ್ತಾರೆ. ಪುಟ್ಟ ಬ್ಯಾಂಕ್ ಖಾತೆಯೊಂದಿಗೆ ಸಂತೋಷದಿಂದ ಬದುಕುವುದು ಹೇಗೆ ಎಂಬುದನ್ನು ಅವರು ಇಲ್ಲಿ ಇಷ್ಟವಾಗುವ ಹಾಗೆ ಹೇಳುತ್ತಾರೆ. ಜೀವನ ಮಾರ್ಗದರ್ಶಿಯಾಗಬಲ್ಲ ಸಲಹೆಗಳು ಇಲ್ಲಿವೆ.
ಪ್ರ: ಜಯ ಪ್ರಕಾಶನ, ಬೆಂಗಳೂರು, ಪುಟಗಳು 108, ಬೆಲೆ ರು. 60
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

