ಮರಳಿ ಬಾ ಟಾಕೀಸಿಗೆ!

ಬಹುಶಃ ವ್ಯಕ್ತಿಯೊಬ್ಬ ತಪ್ಪು ಮಾಡುತ್ತಿದ್ದಾನೆಂದು ಗೊತ್ತಿದ್ದೂ ಜನ ಅವನನ್ನು ಬೆಂಬಲಿಸುವುದು, ಪ್ರತಿ ಬಾರಿ ಅವನು ಕಾನೂನಿನ ಕೈಯಿಂದ ತಪ್ಪಿಸಿಕೊಂಡಾಗಲೂ 'ಅಬ್ಬಾ, ಅಂತೂ ಬಚಾವಾದೆ' ಎಂದುಕೊಂಡು ನಿಟ್ಟುಸಿರು ಬಿಡುವುದು ಮಾತ್ರವಲ್ಲ ಅದನ್ನು ಶಿಳ್ಳೆ, ಕೇಕೇ ಹಾಕಿ ಸಂಭ್ರಮಿಸುವುದನ್ನು ಆ 'ದೃಶ್ಯ'ದಲ್ಲಿ ಮಾತ್ರವೇ ಕಟ್ಟಿಕೊಡಲು ಸಾಧ್ಯವೇನೊ?
ನಿಜಕ್ಕೂ ಅಲ್ಲಿ ಹೀರೋ ಆಗುವುದು ಆ ಕ್ಷಣದ ಅಭಿವ್ಯಕ್ತಿ, ಅದರ ಸಮರ್ಥ ಸಂವೇದನೆಯನ್ನು ಸಾಧಿಸುವ ಸಾಮರ್ಥ್ಯ. ಜನರಿಗೆ ಅದನ್ನು ಕನ್ವಿನ್ಸ್ ಮಾಡಿಸುವ ಧಾಟಿಯಿದೆಯಲ್ಲಾ, ಅದು ಅಚ್ಚರಿ ಹುಟ್ಟಿಸುತ್ತದೆ. ಸಾತ್ವಿಕ ಮನಸ್ಸೊಂದು ಸನ್ನಿವೇಶದ ಅನಿವಾರ್ಯತೆಗೆ ಪಕ್ಕಾಗಿ ಬುದ್ಧಿಪೂರ್ವಕ ತಪ್ಪುಗಳನ್ನು (ಹಾಗೆಂದು ಘೋಷಿಸುವುದೂ ತಪ್ಪಾಗುತ್ತದೆ, ಏಕೆಂದರೆ ಸಮುದಾಯ ಅದನ್ನು ಸರಿಯೆಂದೇ ಒಪ್ಪಿಕೊಂಡುಬಿಟ್ಟಿದೆ) ಮಾಡುತ್ತಾ ಕಾನೂನಿನ ಕಣ್ಣಿಗೆ ಮಣ್ಣೆರೆಚುತ್ತಿದ್ದಾಗಲೂ, ಅದನ್ನು ಗೊತ್ತಿದ್ದೂ ಈ ಪರಿಯಾಗಿ ಬೆಂಬಲಿಸುವುದು ಅಸಹಜ ಎಂದೆನಿಸುವುದೇ ಇಲ್ಲ. ಉದ್ದಕ್ಕೂ, ಕೊನೆಯ 'ದೃಶ್ಯ'ದಲ್ಲೂ ಆತ ಮಾಡಿದ್ದೇ ಸರಿಯೆಂಬ ತೀರ್ಪು ಜನತಾ ನ್ಯಾಯಾಲಯದಿಂದ ಹೊರಬರುತ್ತದೆ ಎನ್ನುವಾಗ ವ್ಯವಸ್ಥೆಯ ಬಗ್ಗೆ ಮಡುಗಟ್ಟಿರುವ ಆಕ್ರೋಶವನ್ನು ಅರ್ಥಮಾಡಿಕೊಳ್ಳಬೇಕು. ಕಾನೂನಿನ ದೃಷ್ಟಿಯಲ್ಲಿ ಅಪರಾಧಿ ಎನ್ನಿಸಿಕೊಳ್ಳಬೇಕಿದ್ದವನು ತನ್ನ 'ಅಪರಾಧ'ವನ್ನು ಕಾನೂನು ರಕ್ಷಣೆಯ ಪ್ರತೀಕವಾಗಿದೆ ಎಂದು ಭಾವಿಸಲಾಗಿರುವ ಪೊಲೀಸ್ ಠಾಣೆಯ ಅಡಿಯಲ್ಲೇ ಹೂತುಹಾಕಿ ಅದರ ಮೇಲೇ ಬದುಕಿನ ವಿಶ್ವಾಸದ ಹೆಜ್ಜೆಯಿಟ್ಟು ಹೊರಬರುವಾಗಲೂ ಜನರಿಂದ ದಿಗ್ವಿಜಯದ ಹೇಷಾರವ ಅಲ್ಲಿಗೆ ಆ 'ದೃಶ್ಯ' ತನ್ನ ಸಾರ್ಥಕ್ಯವನ್ನು ಪಡೆಯುತ್ತದೆ.
----
ಬದುಕಿನ ಜಂಜಡದ 'ಒಗ್ಗರಣೆ' ಸಿಡಿಯುವಾಗ ಕೇವಲ ವಿಜಯದ ಘಮವೊಂದೇ ರಾಚುವುದಿಲ್ಲ. ಅದರೊಂದಿಗೆ ಬಿಸಿ ಹುರಿಗಾಳು ಕಣ್ಣಿಗೆ ಹಾರಿ, ನೋವು, ಉರಿ, ಅಸಾಧ್ಯ ಘಾಟನ್ನೂ ತಂದೊಡ್ಡುತ್ತದೆ. ಅದನ್ನೂ ಜನತೆ ಒಪ್ಪಿಕೊಳ್ಳುವಂತೆ ಮಾಡುವುದೂ ಸುಲಭವಲ್ಲ. ಹೀರೋ ಎನಿಸಿಕೊಂಡವ ಯಾವತ್ತಿಗೂ ಗೆಲ್ಲಲೇಬೇಕೆಂದೇನಿಲ್ಲ. ಎಲ್ಲ ಸಂದರ್ಭದಲ್ಲೂ ಆತ ಗೆಲ್ಲುವುದೂ ಇಲ್ಲ. ವ್ಯಕ್ತಿ ಸಹಜ ಮನೋ ದೌರ್ಬಲ್ಯಗಳಿಗೆ ಹೀರೋ ಸಹ ಹೊರತಾಗಿರುವುದಿಲ್ಲ. ಇಂಥ ಅಪ್ರಿಯ ಸತ್ಯವನ್ನೂ ಹೇಳಿ ಒಪ್ಪಿಸುವುದು ಸಹ ಸುಲಭದ ಮಾತಲ್ಲ. ಕುಟುಂಬ, ಅನಿವಾರ್ಯ ವೃತ್ತಿ, ಅದರಲ್ಲಿನ ಮಹತ್ವಾಕಾಂಕ್ಷೆ, ಬದ್ಧತೆ, ವ್ಯವಸ್ಥೆಯನ್ನು ಸರಿಪಡಿಸುವ ಧಾವಂತಗಳ ನಡುವೆ ಮರೆತು ಹೋದ ವ್ಯಕ್ತಿಗತ ಬಯಕೆಗಳು. ಉಪ್ಪು ಕಾರ ತಿಂದ ದೇಹ, ಮನಸ್ಸಿನ ಮೂಲೆಯಲ್ಲೆಲ್ಲೋ ಉಳಿದೇಹೋಗಿಬಿಡಬಹುದಾದ ಅಂಥ ಸಾಂಗತ್ಯದ ಬಯಕೆಗಳು ಮುಂದೆಂದೋ ನಡುವಯಸ್ಸಿನ ಬಳಿಕ ಉದ್ದೀಪನಗೊಳ್ಳುವುದು, 'ನನಗೂ ಒಬ್ಬ ಸಂಗಾತಿ ಬೇಕು' ಎಂದುಕೊಳ್ಳುವಾಗಲೇ ಅದನ್ನೂ ಮೀರಿಸಿ ಬೃಹದಾಕಾರ ಪಡೆಯುವ ಕೀಳರಿಮೆ, ಒಂದೇ ಮನಸ್ಸಿನ ಎರಡು ಯೋಚನೆಗಳು ಒಗ್ಗರಣೆಯಾಗಿ ಸಿಡಿವಾಗ ವ್ಯಕ್ತಿ ಅನುಭವಿಸುವ ವಿಪ್ಲವ... ಅದರ ಪ್ರತೀಕವಾಗಿ ಹೊಮ್ಮುವ ಸಿಟ್ಟು, ಅಸಹನೆ, ಅಸಮಾಧಾನ, ಅತೃಪ್ತಿ ಇತ್ಯಾದಿಗಳ ಘಾಟು ಮತ್ತದೆ ಸಮಕಾಲೀನ ಜನರ ಗ್ರಹಣೇಂದ್ರಿಯಕ್ಕೆ ತಟ್ಟಿ ಅಹುದಹುದೆನ್ನುವಂತೆ ಮಾಡಿಸುತ್ತದೆ. ಮತ್ತೆ ಅಲ್ಲೂ ಹಾಕಿದ ಆ 'ಒಗ್ಗರಣೆ' ಮನರಂಜನೆಯ ಅಡುಗೆಯ ಶ್ರೀಮಂತಿಕೆ ಹೆಚ್ಚಿಸುತ್ತದೆ.
----
ಕನ್ನಡ ಚಿತ್ರರಂಗದಲ್ಲಿ ಹೆಚ್ಚೂಕಡಿಮೆ ಒಂದೇ ಸಮಯಕ್ಕೆ ಬಿಡುಗಡೆಯಾದ ಅಪ್ಪಟ ಕನ್ನಡದ ಹೀರೋಗಳಿಬ್ಬರ ಚಿತ್ರಗಳಾದ 'ಒಗ್ಗರಣೆ' ಹಾಗೂ 'ದೃಶ್ಯ' ಬಹಳಷ್ಟು ಸಾಮ್ಯಗಳೊಂದಿಗೆ ಗೆದ್ದಿವೆ. ಕೇವಲ ಬಾಕ್ಸಾಫೀಸಿನ ಲೆಕ್ಕದಲ್ಲಲ್ಲ, ಜನರ ಮನಸಿನಂಗಳದಲ್ಲೂ ಗೆಲವನ್ನು ಸಾಧಿಸಿವೆ. ಪ್ರೇಮಲೋಕದ ಸರದಾರ ವಿ. ರವಿಚಂದ್ರನ್ ಸುದೀರ್ಘ ಅವಧಿಯ ನಂತರ 'ದೃಶ್ಯ'ದ ಮೂಲಕ ಮತ್ತೆ ಮನೆಮಾತಾಗಿದ್ದಾರೆ. ಹೊಸತರ ತುಡಿತ ಅವರಿಗೆ ಜನ್ಮಜಾತ ಗುಣ. ರಸಿಕತೆಯಿಂದಲೇ ಇಂದಿಗೂ ಯುವ ಮನಸ್ಸಿನ ಅನಭೀಷಿಕ್ತ ಹೀರೋ ಆಗಿ ಉಳಿದಿರುವ ರವಿಚಂದ್ರರಲ್ಲಿ ಗುರುತಿಸಬಹುದಾದ ಇನ್ನೊಂದು ಅಂಶ ಅವರ ಕ್ರಿಯಾಶೀಲತೆ. 'ಪ್ರೇಮಲೋಕ'ದಿಂದ 'ದೃಶ್ಯ'ದವರೆಗೆ ಅವರ ಎಲ್ಲ ಹೆಜ್ಜೆಗಳೂ ಗೆಲವನ್ನು ತಂದುಕೊಟ್ಟಿಲ್ಲದಿರಬಹುದು. ಆದರೆ, ಅವರಿಟ್ಟ ಪ್ರತಿ ಹೆಜ್ಜೆಯಲ್ಲೂ ಹೊಸತಿದ್ದುದನ್ನು ಕನ್ನಡಿಗರು ಗ್ರಹಿಸಬಹುದು. ಅದು ಹಾಡುಗಳ ಸಂಭ್ರಮವಿರಬಹುದು, ಪ್ರೇಮದ ಗುನುಗಾಟವಿರಬಹುದು, ಅದ್ಧೂರಿ ಸೆಟ್‌ಗಳು, ಬಿಗ್‌ಬಜೆಟ್, ತಂತ್ರಜ್ಞಾನ, ಗ್ರಾಫಿಕ್ ಬಳಕೆಯಂಥ ಹೆಮ್ಮೆಯ ನಡುವೆ, ಬೇರೆ ಬೇರೆ ಭಾಷೆಗಳ ಹೀರೋಯಿನ್‌ಗಳ ಸೌಂದರ್ಯ ದರ್ಶನವೂ ಹೆಗ್ಗಳಿಕೆಯೇ!
ಇನ್ನು ಪ್ರಕಾಶ್ ರೈ ಉರುಫ್ ಪ್ರಕಾಶ್‌ರಾಜ್ ಅಲ್ಲೆಲ್ಲ ಸಲ್ಲುವವರೆನಿಸಿಕೊಂಡ ನಂತರ ಇಲ್ಲಿಯೂ 'ನನ್ನ ಕನಸನ್ನು' ಬಿತ್ತಿ ಗೆಲ್ಲಬಲ್ಲೆನೆಂದು ಸಾಬೀತುಪಡಿಸಿದವರು. ಶುದ್ಧ ಕನ್ನಡದ ಮನಸ್ಸು, ಮೇಲ್ನೋಟಕ್ಕೆ ಕಾಣುವ ಒರಟುತನದ ಹಿಂದೆ ನೈಜ ಮೃದು ಮನಸ್ಸು, ಕಳಕಳಿ, ಮತ್ತದೇ ಕ್ರಿಯಾಶೀಲತೆಯ ಮೇಳೈಸಿದ ರೂಪ. ವಾಸ್ತವದ ನೆಲೆಯಲ್ಲಿ ನಿಂತು ಹೊಸ ಹೊಸ ಸಾಧ್ಯತೆಯನ್ನು ಕಟ್ಟಿಕೊಡುವ ರೈ ಎಂದಿಗೂ ಭ್ರಮೆಯಲ್ಲಿ ತೇಲಿದವರಲ್ಲ. ಅಲ್ಲಿ ಗಳಿಸಿದ್ದನ್ನು ಇಲ್ಲಿ ಪಣವಾಗಿಟ್ಟು 'ಪ್ರಯೋಗ'ದಲ್ಲಿ ಗೆದ್ದ ಸಾಹಸಶೀಲ. ಗಾಂಧಿನಗರದ ಸಂಪ್ರದಾಯಕ್ಕೆ ಸೆಡ್ಡು ಹೊಡೆಯುವುದು ಹಾಗಿರಲಿ, ಅದಕ್ಕಿಂತ ಭಿನ್ನವಾಗಿ ಯೋಚಿಸುವುದೇ ಅಪರಾಧ ಎಂಬಷ್ಟರ ಮಟ್ಟಿಗೆ ಬಲವಾದ ಲಾಬಿಯಿರುವಾಗ ಅದರ ಸಿಕ್ಕುಗಳಿಂದ ಹೊರಬಂದು ನೇರವಾಗಿ ಪ್ರೇಕ್ಷಕನನ್ನು ತಲುಪುವುದು ಸುಲಭದ ಮಾತಲ್ಲ. ಆದರೆ, ಪ್ರಕಾಶ್ 'ಒಗ್ಗರಣೆ' ಮೂಲಕ ತಲುಪಿದರು. ನಿರ್ಮಾಣ, ನಿರ್ಮಾಣವನ್ನೂ ಮೀರಿ ವಿತರಣೆಯ 'ಹಿಡಿತ'ದಿಂದ ನೆಗೆದು ಪ್ರೇಕ್ಷಕನನ್ನು ತಲುಪುವ ಸಾಹಸದಲ್ಲಿ ಕಮಲಹಾಸನ್‌ನಂಥವರೇ ಯಶಸ್ಸು ಗಳಿಸಲಿಲ್ಲ ಎಂಬುದು ಗಮನಾರ್ಹ. ಆ ನಡುವೆಯೂ ಸಾಮಾಜಿಕ ಜಾಲತಾಣ, ಮೊಬೈಲ್ ತಂತ್ರಜ್ಞಾನ ಇತ್ಯಾದಿಗಳ ಒಗ್ಗರಣೆಯನ್ನೆಲ್ಲ ಚಿತ್ರರಂಗದ ಕ್ಯಾನ್ವಾಸ್ ಮೇಲೆ ಚೆಲ್ಲುವ 'ನನ್ನ ಕನಸನ್ನು' ಹುದುಗಿಸಿಟ್ಟುಕೊಂಡು ಓಡಾಡುವ ರೈ ಒಂದೇ ಮಾತಿನಲ್ಲಿ ಹೇಳುವುದಾದರೆ ಬೆರಗಿನ ವ್ಯಕ್ತಿ.
---
ತಾಂತ್ರಿಕ ವಿಚಾರಗಳನ್ನು ಬದಿಗಿಟ್ಟು ನೋಡಿದರೆ, ಪ್ರಮುಖವಾಗಿ ಎರಡೂ ಚಿತ್ರಗಳು ಬಹಳ ವರ್ಷಗಳ ನಂತರ ಇಡೀ ಕುಟುಂಬವನ್ನು ಚಿತ್ರಮಂದಿರಕ್ಕೆ ಕರಕೊಂಡು ಬಂದಿವೆ. ಇದೊಂದೇ ಅಂಶ ಸಾಕು, ಇಬ್ಬರನ್ನೂ ಭೇಷ್ ಎನ್ನಲು. ಕೇಬಲ್‌ಗಳ ಹಾವಳಿ, ಸೆಟ್‌ಟಾಪ್ ಬಾಕ್ಸ್‌ಗಳ ಜಮಾನ, ಸ್ಮಾರ್ಟ್‌ಫೋನ್‌ಗಳ ಮಿತಿಮೀರಿದ ಅಡಿಕ್ಷನ್, ಬಿಡುವಿಲ್ಲದ ಜೀವನ ಕ್ರಮ, ಯಾವುದರಲ್ಲೂ ಆಸಕ್ತಿ, ಉತ್ಸಾಹ ಉಳಿಸಿಕೊಂಡಿರದ ಮನಸ್ಥಿತಿಯ ನಡುವೆ ಟಾಕೀಸಿಗೆ ಜನ ಬರುವುದನ್ನೇ ಮರೆತಿದ್ದಾರೆ ಎಂಬಂಥ ಸನ್ನಿವೇಶದಲ್ಲಿ ಅದೂ ಕನ್ನಡಿಗರನ್ನು ಫ್ಯಾಮಿಲಿ ಸಮೇತ ಕರಕೊಂಡು ಬಂದಿದ್ದಾರೆ ಎನ್ನುವುದೇ ಎರಡೂ ಚಿತ್ರಗಳ ಗೆದ್ದಿರುವುದಕ್ಕೆ ಸಾಕ್ಷಿ. ರಾಜ್ಯದಲ್ಲೀಗ ಮಳೆಗಾಲದಲ್ಲೂ ಮುಂದುವರಿದಿರುವ ಬಿಸಿಲನ್ನೂ ಲೆಕ್ಕಿಸದೇ, ಗಂಟೆಗಟ್ಟಲೇ ಕ್ಯೂನಲ್ಲಿ ನಿಂತು, ಪೈಪ ೋಟಿಗೆ ಬಿದ್ದು, ಅಂಗಿ ಹರಕೊಂಡು, ಕಿತ್ತಾಟ, ಜಗ್ಗಾಟ ನಡೆಸಿ ಕೊನೆಗೊಮ್ಮೆ ಟಿಕೆಟ್ ಕೌಂಟರ್ ತಲುಪಿದಾಗ ಬಾಲ್ಕನಿ ಸೋಲ್ಡ್‌ಔಟ್. ಫಸ್ಟ್‌ಕ್ಲಾಸ್ ಈಗಷ್ಟೇ ಖಾಲಿ. ಕೊನೆಗೆ ಸೆಕೆಂಡ್ ಕ್ಲಾಸಾದರೂ ಓಕೆ ಎಂದುಕೊಂಡು ನಾಲ್ಕು ಟಿಕೆಟ್ ಪಡೆದು ಯುದ್ಧ ಗೆದ್ದ ವಿಜಯೋತ್ಸವದೊಂದಿಗೆ ಪೋಸು ಕೊಡುತ್ತಾ ಬರುವ ಪ್ರೇಕ್ಷಕ ಗಣದ ಮಜಾವನ್ನು ಇತ್ತೀಚಿನ ದಿನಗಳಲ್ಲೇ ಟಾಕೀಸುಗಳಲ್ಲಿ ಕಂಡಿರಲಿಲ್ಲ. 'ದೃಶ್ಯ', 'ಒಗ್ಗರಣೆ' ಎರಡು ಇದನ್ನು ಮತ್ತೆ ಕಟ್ಟಿಕೊಟ್ಟಿವೆ.
ಮಲ್ಟಿಪ್ಲೆಕ್ಸ್‌ನ ಹಿತವಾದ ಎಸಿಯ ಕೆಳಗೆ ಯುವ ಜೋಡಿಗಳ ಬೆಚ್ಚಗಿನ ಕಾರ್ನರ್ ಸೀಟು ಎಂಬಷ್ಟಕ್ಕೆ ವೀಕ್ಷಕ ವರ್ಗ ಸೀಮಿತವಾಗಿರುವಾಗ ಕುಟುಂಬ ಸಮೇತ ನೋಡುವ ಸರಳ, ಸುಂದರ 'ಸಾಂಸಾರಿಕ ಚಿತ್ರ'ವನ್ನು ಕೊಟ್ಟಿರುವ ಇಬ್ಬರನ್ನೂ ಶ್ಲಾಘಿಸಲೇಬೇಕು.
----
ಚಿತ್ರ ಗೆಲ್ಲಲು ಸರ್ಕಸ್‌ಗಳನ್ನೇ ಮಾಡಬೇಕೆಂದೇನಿಲ್ಲ. ಅಷ್ಟಕ್ಕೂ ಪ್ರೇಕ್ಷಕರು ಬರುವುದು ಸಂಶೋಧನೆಗಾಗಲೀ, ಚಿತ್ರಜಗತ್ತಿನ ಬಗೆಗಿನ ತುಲನಾತ್ಮಕ ಅಧ್ಯಯನಕ್ಕಾಗಿಯಾಗಲೀ ಅಲ್ಲ. ಹಾಗೆಂದು ಚಿತ್ರಗಳು ಸಂದೇಶವನ್ನು ಸಾರಬಾರದು, ಬದುಕನ್ನು ಬದಲಿಸುವ ಆದರ್ಶಗಳನ್ನು ಕಲಿಸಬಾರದು ಎಂದೇನೂ ಅಲ್ಲ. ಜವಾಬ್ದಾರಿಯುತ ಮಾಧ್ಯಮವೊಂದಕ್ಕೆ ಅದೂ ಅಗತ್ಯ. ಹಾಗೆಂದು ಎಲ್ಲ ಚಿತ್ರಗಳೂ ಪರ್ಸನಾಲಿಟಿ ಡೆವಲಪ್‌ಮೆಂಟ್ ಕೋರ್ಸ್ ಆದರೆ ಏನು ಚೆಂದ? ಅದರ ಹೊರತಾಗಿಯೂ ನಮ್ಮ ನಡುವಿನ ಅದೆಷ್ಟೋ ಅತಿ ಸಣ್ಣ ಸಂಗತಿಗಳೂ, ಮನಸಿನ ಒಳತೋಟಿ, ಭಾವನೆಗಳ ಹಂದರ, ಸಂಬಂಧದ ಮಿಡಿತ ಇತ್ಯಾದಿಗಳೆಲ್ಲ ಅತ್ಯಂತ ಸರಳ ನಿರೂಪಣೆಯೊಂದಿಗೆ ಮನರಂಜನೆಯಾಗಿ ರೂಪಾಂತರ ಹೊಂದಿ, ಎರಡು, ಎರಡೂವರೆ ತಾಸು ರಂಜಿಸಿದರೆ ಸಾಕು. ಸಾಕು ಅಲ್ಲ, ಅದೇ ಬೇಕು. ಅದನ್ನು ಪ್ರಕಾಶ್ ರೈ, ರವಿಚಂದ್ರನ್ ಕೊಟ್ಟಿದ್ದಾರೆ.
ಇಬ್ಬರೂ ಈ ವಯಸ್ಸಿನಲ್ಲೂ ಇನ್ನೂ ಚೆಂದ ಕಾಣುತ್ತಿದ್ದಾರೆ ಎಂಬುದೂ ಇನ್ನೊಂದು ಸಾಮ್ಯ. ಹೀರೋವೊಬ್ಬ ಸ್ಲಿಮ್, ಫೇರ್‌ಲುಕಿಂಗ್‌ನೊಂದಿಗೆ ಹದಿವಯಸ್ಸಿನವನಾಗಿಯೇ, ಬ್ಯಾಚುಲರ್ ಲುಕ್‌ನೊಂದಿಗೇ ಇರಬೇಕೆಂಬ ಮಿಥ್ಯೆಯನ್ನು ಇಬ್ಬರೂ ಹೇಳಿದ್ದಾರೆ. ತಮ್ಮ ವಯಸ್ಸಿಗನುಗುಣ ಸಹಜ ಪಾತ್ರಗಳ ಮೂಲಕ ನೈಜ ಹೀರೋ ಆಗಿದ್ದಾರೆ. ರೀಮೇಕ್‌ನ ಚರ್ಚೆಯ ನಡುವೆಯೇ ಇಬ್ಬರೂ ಮಲೆಯಾಳಂ ಮೂಲದ ('ಸಾಲ್ಟ್ ಆ್ಯಂಡ್ ಪೆಪ್ಪರ್'ನಲ್ಲಿ ಲಾಲ್ ನಾಯಕ-ಒಗ್ಗರಣೆ; 'ದೃಶ್ಯಂ'ನಲ್ಲಿ ಮೋಹನ್‌ಲಾಲ್ ನಾಯಕ- ದೃಶ್ಯ) ಚಿತ್ರವನ್ನು ಕನ್ನಡದ ಸನ್ನಿವೇಶದಲ್ಲಿ ಪಕ್ಕಾ ಕನ್ನಡ ಚಿತ್ರವೆಂಬಂತೆ ಮುಂದಿಡುವಲ್ಲಿ ಯಶಸ್ವಿಯಾಗಿದ್ದಾರೆ. ಮೂಲ ಮಲಯಾಳದ ಹಿಂದಿನೆರಡು ಚಿತ್ರಗಳೂ (ಚಿತ್ರಂ- ರಾಯರು ಬಂದರು ಮಾವನ ಮನೆಗೆ, ಮಣಿ ಚಿತ್ರ ತಾಳ್- ಆಪ್ತಮಿತ್ರ) ಕನ್ನಡದಲ್ಲಿ ಅಭೂತಪೂರ್ವವಾಗಿ ಗೆದ್ದಿದ್ದವು ಎಂಬುದೂ ಇಲ್ಲಿ ಉಲ್ಲೇಖಾರ್ಹ. ಎರಡರಲ್ಲೂ ಅನಗತ್ಯ ಹಾಡುಗಳನ್ನಾಗಲಿ, ದೃಶ್ಯಗಳನ್ನಾಗಲಿ, ಪಾತ್ರಗಳನ್ನಾಗಲೀ ತುರುಕಿಲ್ಲ. ಎರಡೂ ಚಿತ್ರಗಳಲ್ಲಿ ಸಮಾಜದ ವ್ಯವಸ್ಥೆಯ ಬಗೆಗಿನ ಜನರಲ್ಲಿನ ಆಕ್ರೋಶವನ್ನು ಬಿಂಬಿಸಲಾಗಿದೆ. ಎರಡರಲ್ಲೂ ನೀನಾಸಂ ಅಚ್ಯುತ್ ಉತ್ತಮ ಪಾತ್ರ ನಿರ್ವಹಣೆಯೊಂದಿಗೆ ಗಮನ ಸೆಳೆಯುತ್ತಾರೆ. ಎರಡಕ್ಕೂ ಇಳೆಯರಾಜರ ಸಂಗೀತ. ಹೀಗೆ ಹೋಲಿಕೆಗಳು ಹಲವು ಸಾತತ್ಯ ಪಡೆಯುತ್ತವೆ.
ಬಿಡಿ, ಅವೆಲ್ಲ ಏನೇ ಇರಲಿ, ಇಲ್ಲದಿರಲಿ, ಚಿತ್ರಗಳೆರಡೂ ನೋಡಲೇಬೇಕಾದದ್ದು, ಮಾತ್ರವಲ್ಲ ಮತ್ತೆ ಮತ್ತೆ ನೋಡಬೇಕೆನಿಸಿ ನೋಡಿ ಬಂದ ದಿನವಿಡೀ ಮನಸ್ಸನ್ನು ಆವರಿಸಿಕೊಳ್ಳುವಂಥದ್ದು. ಯಾರು ಹೇಳಿದರು ಕನ್ನಡದಲ್ಲಿ ಉತ್ತಮ ಚಿತ್ರಗಳಿಗೆ ಕೊರತೆಯಿದೆ ಎಂದು? ಚಿತ್ರ ಶ್ರೀಮಂತಿಕೆಯನ್ನು ಎತ್ತಿ ಹಿಡಿಯುವ, ಸದಭಿರುಚಿಯ, ಆಡಂಬರವಿಲ್ಲದ ಉತ್ತಮ ಸಿನಿಮಾ ಕೊಡುವ ಮನಸ್ಸು ಇಲ್ಲೂ ಇವೆ. ರವಿಚಂದ್ರನ್, ಪ್ರಕಾಶ್ ರೈ ನಮ್ಮವರಾಗಿ ಈ ನಿಟ್ಟಿನಲ್ಲಿ ಇನ್ನೂ ಕ್ರಿಯಾಶೀಲರಾಗಿದ್ದಾರೆ. ಉತ್ತಮ ಸಿನಿಮಾಗಳಿಗಾಗಿ ಬೇರೆ ಭಾಷೆಗಳನ್ನು ತಡಕಾಡಬೇಕಿಲ್ಲ. ನಾವೇಕೆ ನಮ್ಮಲ್ಲೇ ಇಲ್ಲದ ಕೀಳರಿಮೆಯನ್ನು ಹುಟ್ಟುಹಾಕಿಕೊಂಡು, ಕಲ್ಪನೆಯ ದೃಶ್ಯದಲ್ಲಿ ಮುಳುಗಿ ವಿಷಾದಿಸುತ್ತಾ ಕೂರಬೇಕು? ಒಮ್ಮೆ ಎದ್ದು ಎಲ್ಲ ಸೋಗಲಾಡಿತನ, ಕ್ಲೀಷೆಯ ಮಾತು, ಅಸಡ್ಡೆಯ ಮನಸ್ಥಿತಿಯಿಂದ ಹೊರಬಂದು ಚಿತ್ರಮಂದಿರದತ್ತ ಹೋಗಿ ನೋಡೋಣ. ಅನುಮಾನವೇ ಇಲ್ಲ, ಮನಸ್ಸು ಅರಳಿಸಬಲ್ಲಂಥ ಚಿತ್ರಗಳು ಇವೆರಡು. ಹ್ಯಾಟ್ಸ್‌ಆಫ್ ಯು ಬೋತ್ ಜೇಂದ್ರ ಪೊನ್ನಪ್ಪ ಹಾಗೂ ಕಾಳಿದಾಸ!
ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


