ಪ್ರ...ಕೃತಿ

ಇವತ್ತು ಗೆಳೆಯ ಏಳುಕೊಂಡಲ ಫೋನ್ ಮಾಡಿ 'ವಿಷಯ ಗೊತ್ತಾಯ್ತಾ?' ಎಂದ.
'ಏನಯ್ಯಾ?'
'ರಂಗಣ್ಣ ಹೋಗಿಬಿಟ್ಟನಂತೆ'
ಚೇರಿಂದ ದಿಗ್ಗನೆ ಎದ್ದು ಕುಳಿತೆ. 'ಏನು ರಂಗಣ್ಣ ಹೋಗಿಬಿಟ್ಟನೇ?'
'ಹೂ ಎರಡು ತಿಂಗಳಾಯ್ತಂತೆ'
ರಂಗಣ್ಣ ಅಂದರೆ ಯಾರು? ಅವನೇನಾ? ಸ್ವೇಹಿತರಲ್ಲಿ ಎಷ್ಟೋ ಜನ ರಂಗಣ್ಣರು.
'ಯಾವ ರಂಗಣ್ಣ'
'ಅದೇ ನಿನ್ನ ರಂಗಣ್ಣ'
ಅಂದರೆ ಅದೇ ನನ್ನ ರಂಗಣ್ಣ! ನನ್ನ ಸಹೋದ್ಯೋಗಿ. ಅವನನ್ನು ನೋಡಿ ಎಷ್ಟೋ ವರ್ಷಗಳೇ ಕಳೆದು ಹೋಗಿದ್ದವು. ಅವನಿಗೆ ಒಳ್ಳೆ ಕಾಂಟ್ರಾಸ್ಟ್‌ನಂತಿದ್ದ ಅವನ ಪತ್ನಿ ಸುಮಂಗಳಾ, ಲಾಸ್ಯವಾಡುವ ಮೈಮಾಟದ ನಗೆ ತುಂಬಿಕೊಂಡ ಗುಂಗುರು ಕೂದಲಿನ ಅವಳು ಕಣ್ಣಿಗೆ ಕಟ್ಟಿದಳು.
ಈಗ ಬಹಳ ವರ್ಷದ ಹಿಂದೆ- ರಂಗಣ್ಣ ಮದುವೆಯಾಗಿ ಹುಡುಗಿಯೊಡನೆ ಕಾಲೊನಿಗೆ ಬಂದಾಗ ನಾನಿನ್ನೂ ಅವಿವಾಹಿತ. ಅಪ್ಪ ಅಮ್ಮ ನನಗೂ ಒಂದು ಹೆಣ್ಣು ನೋಡುತ್ತಿದ್ದರು. ಅದೇನೋ ಕಂಕಣಬಲ ಕೂಡಿ ಬಂದಿರಲಿಲ್ಲ. ಒಬ್ಬರನ್ನೊಬ್ಬರು ನೋಡಿ ಮದುವೆಗೆ ಒಪ್ಪುವ ಹೆಣ್ಣು ಸಿಕ್ಕಿರಲಿಲ್ಲ.
ಅಂದರೆ ರಂಗಣ್ಣನ ಹೆಂಡತಿಯನ್ನು ನೋಡಿ ಅಸ್ವಸ್ಥನಾದೆ. ಎಷ್ಟೋ ಹೆಣ್ಣುಗಳನ್ನು ನನಗೆ ತೋರಿಸಿದ್ದರು. ಒಂದೂ ಇವಳಂತೆ ಇರಬಾರದೇ? ಚೆಲವು ಎಂದರೆ ಇವಳೇ. ನೋಡಿದರೆ ಎಲ್ಲಿ ಮಾಸುತ್ತೋ ಎಂಬ ಹೊಳಪು. ಎಂಥವನಿಗೆ ಎಂತಹ ಹೆಂಡತಿ! ಪಡೆದು ಬಂದಿರಬೇಕು ಎಂದು ಮಮ್ಮಲ ಪರಿತಪಿಸಿದೆ.
ಆ ದಿನಗಳಲ್ಲಿ ಒಂದು ರಾತ್ರಿ ರಂಗಣ್ಣ ಸತ್ತಂತೆ ಕನಸು ಬಿತ್ತು. ಸಂಭ್ರಮದಿಂದ ಹಾಸಿಗೆ ಮೇಲೆ ದಿಗ್ಗನೆ ಎದ್ದು ಕುಳಿತೆ. ಮತ್ತೆ ನಿದ್ದೆ ಸುಳಿಯಲಿಲ್ಲ. ಇದು ಘಟಿಸಿದರೆ, ನಾನು ಅವನ ಹೆಂಡತಿಯನ್ನೇ ಮದುವೆ ಆಗಬೇಕು. ಅಪ್ಪ ಅಮ್ಮ ಒಪ್ಪದಿದ್ದರೆ ಅವರನ್ನೇ ಬಿಟ್ಟರಾಯಿತು ಎಂದೂ ಕ್ರಾಂತಿಕಾರಿ ನಿರ್ಧಾರ ತೆಗೆದುಕೊಂಡೆ. ಇಂದಲ್ಲ ನಾಳೆ ಬೆಳಗಿನ ಕನಸು ನಿಜವಾಗುತ್ತದೆ ಎಂಬ ನಂಬಿಕೆಯಿಂದ ನನ್ನ ಮದುವೆಯನ್ನು ಮೂರು ವರ್ಷ ಮುಂದೂಡಿದೆ. ಮುಂದೂಡುತ್ತಾ ಮುಂದೂಡುತ್ತಾ ಕಾದೆ.
ಆದರೆ ರಂಗಣ್ಣ ಸ್ವಲ್ಪವೂ ಸವೆಯದ ಗುಂಡುಕಲ್ಲಿನಂತೆ ಗಟ್ಟಿಯಾಗತೊಡಗಿದ್ದ. ಇನ್ನೂ ಮದುವೆ ಮುಂದೂಡುವುದು ಅರ್ಥಹೀನವಾಗಿ ಕಂಡಿತು. ಹರೆಯ ಬ್ಯಾಂಕ್ ಡಿಪಾಸಿಟ್ ಅಲ್ಲ ವಯಸ್ಸಿಗೆ ಅನುಗುಣವಾಗಿ ಹೆಚ್ಚಲು. ಅದು ವಿಲೋಮ. ಒಲ್ಲದ ಮನಸಿಂದ ಕೊನೆಗೆ ಒಬ್ಬಳನ್ನು ಒಪ್ಪಿ, ಒಪ್ಪಿಸಿ ಮದುವೆ ಆಗಿ ಸಂಸಾರಿಯಾದೆ.
ಮದುವೆಯ ನಂತರ ಮತ್ತೊಂದು ಭಯ ತಟ್ಟನೆ ಸುಳಿದಿತ್ತು. ಅದರಲ್ಲಿ ಸಂತೋಷವೂ ಇತ್ತು.
ಈಗ ಏನಾದರೂ ರಂಗಣ್ಣ ಸತ್ತರೆ? ಆಸೆ ಎಂಬ ಕಾಳಿಂಗ ಹೆಡೆಬಿಚ್ಚಿ ಅಡತೊಡಗಿತ್ತು. ಮದುವೆಯಾಗದೆ ಸಂಬಂಧ ಬೆಳೆಸಿದರೆ ಅದೂ ಒಂದು ಥರಾ. ಅವಳು ಒಪ್ಪದೇ ಏನು? ನನ್ನ ಮುಂದೆ ರಂಗಣ್ಣ ಸಿಂಗಣ್ಣನ ಮುಂದೆ ಮಂಗಣ್ಣ.
ಆದರೆ ಅಂಥಾದ್ದೇನೂ ಆಗಲಿಲ್ಲ. ದೂರದ ಊರುಗಳಿಗೆ ವರ್ಗವಾಗುತ್ತಾ ಆಗುತ್ತಾ ರಂಗಣನ ಹೆಂಡತಿ ಮತ್ತು ರಂಗಣ್ಣ ಮೊದಲು ಕಣ್ಣಿಂದ ತದನಂತರ ನೆನಪಿಂದ ಮರೆಯಾಗಿದ್ದರು. ವರ್ಷಗಳು ಉರುಳಿದ್ದವು.
ಈಗ ಅನೇಕ ವರ್ಷಗಳ ನಂತರ ಧುತ್ತೆಂದು ರಂಗಣ್ಣ ಸತ್ತ ಸುದ್ದಿ.
ರಾತ್ರಿ ನಿದ್ದೆ ಬರಲಿಲ್ಲ. ಅವಳದೇ ಚಿಂತೆ. ಅವಳು ಎದುರು ಬಂದು ನಿಂತಂತಾಗಿ ಪುಳಕಿತನಾದೆ. ಹಿತವೆನ್ನಿಸಿತು. ಮತ್ತೆ ಗಂಡನೊಡನೆ ನಸು ನಾಚಿ ನಿಂತ ಕೆಂಪು ಗಲ್ಲದ ಚಂದಿರನಂತ ಮದುವೆಯಾಗಿ ಬಂದ ದಿನದ ಅಂದಿನ ಬಾಲೆ ಕಣ್ಣು ತುಂಬಿ ಬಿಟ್ಟಳು. ಈಗ ಹೋಗಿ ಅವಳನ್ನು ನೋಡಬೇಕು. ಗಂಡ ಇಲ್ಲ, ಸಂಕೋಚವಿಲ್ಲದೆ ಅಂಜದೆ ಅಳುಕದೆ ನನ್ನ ನೋಡುತ್ತಾಳೆ. ಮನ ಬಿಚ್ಚಿ ಮಾತಾಡುತ್ತಾಳೆ. ಅವಳ ಮನಸ್ಸನ್ನು ಅರಿತು ನಂತರ ಮುಂದೆ ಏನು ಎಂಬುದನ್ನು ಯೋಚಿಸೋಣ ಎಂದು ಕಲ್ಪನೆಯ ಪ್ರವಾಹವನ್ನು ಸ್ಟಿಲ್ ಮಾಡಿದೆ.
'ಏಕ್ರೀ ಏನಾಗಿದೆ?' ಎಂದು ನನ್ನ ನಿದ್ದೆಯಿಲ್ಲದ ಕೆಂಪು ಕಣ್ಣು ನೋಡಿ ಹೆಂಡತಿ ಆತಂಕದಿಂದ ಮರು ದಿನ ಕಾಫಿ ಲೋಟ ಕೈಲಿ ಹಿಡಿದು ಕೇಳಿದಳು. ಮನಸ್ಸಿನ ಗೊಂದಲ ಅರಿಯುವ ಶಕ್ತಿ ಇದ್ದಿದ್ದರೆ ಮನೆ ಕುರುಕ್ಷೇತ್ರವಾಗಿರುತ್ತಿತ್ತು. ಏನೂ ಇಲ್ಲ ಎಂದೆ.
ಎರಡು ದಿನ; ಮನಸ್ಸು ಹೇಗೋ ತಡೆಹಿಡಿದು ಮೂರನೇ ದಿನ ಬೆಳಗಿನ ಬಸ್ ಹಿಡಿದು ರಂಗಣ್ಣನ ಊರು ಸೇರಿದಾಗ ಸಂಜೆ ನಾಲ್ಕು ಗಂಟೆ. ಕರಿ ಬಿಳಿ ಮೋಡಗಳಿದ್ದರಿಂದ ಕಿರಣಗಳು ಟಿಸಲೊಡೆದು ಪಶ್ಚಿಮ ದಿಕ್ಕು ರಂಗುರಂಗಾಗಿತ್ತು. ರಂಗಣ್ಣ ಒಂದು ಸಲ ಹತ್ತು ವರ್ಷಗಳ ಹಿಂದೆ ಅನಿರೀಕ್ಷಿತವಾಗಿ ಭೆಟ್ಟಿಯಾಗಿದ್ದಾಗ ಮನೆ ವಿಳಾಸ ಕೊಟ್ಟಿದ್ದ. ಸ್ವಂತ ಮನೆ, ಲೋನ್ ತಗಂಡು ಕಟ್ಟಿಸಿದ್ದನಂತೆ. 'ನಮ್ಮ ಊರಿಗೆ ಅಕಸ್ಮಾತ್ ಬಂದರೆ ತಪ್ಪದೆ ಮನೆ ಕಡೆ ಬಾ' ಎಂದು ಮನೆ ವಿಳಾಸವನ್ನೂ ಕೊಟ್ಟು ಆಹ್ವಾನಿಸಿದ್ದ. ಮನೆ ಅದೇ ಇದ್ದು ಅವಳು ಅಲ್ಲೇ ಇರುತ್ತಾಳೆ.
ಹುಡುಕುವುದು ಕಷ್ಟವಾಗಲಿಲ್ಲ... ಮನೆಯ ಅಂಗಳದಲ್ಲಿ ಒಂದು ಸಂಪಿಗೆ ಮರ. ಅಲ್ಲಿ ಒಂದು ಮಲ್ಲಿಗೆಯ ಬಳ್ಳಿ, ಅದರಲ್ಲಿ ಮಲ್ಲಿಗೆ ಮೊಗ್ಗು. ಇನ್ನೂ ಒಂದು ಗಂಟೆಗೆ ಅರಳಿ ಗಂ ಎನ್ನಬಹುದು.
ಒಬ್ಬಾಕಿ ಕುರ್ಚಿಯಲ್ಲಿ ಕುಳಿತಿದ್ದಳು. ಬಿಳಿಯ ಕೂದಲು ಗಂಟು ಹಾಕಿ ಕಟ್ಟಿದ್ದಳು. ಆಯಾಸದಿಂದ ಉಸಿರಾಡುತ್ತಿದ್ದಳು. 'ಅಮ್ಮ, ರಂಗಣ್ಣ ಅವರ ಮನೆ ಇದೇ ಅಲ್ಲವೇ?' ಎಂದೆ. ಆಕಿ ನನ್ನನ್ನು ನೋಡಿ 'ಹೂ' ಎಂದಳು.
ಏನೆಂದು ಕೇಳುವುದು? ಸುಮಂಗಳಾ ಇದ್ದಾಳಾ? ಎಂದು ಕೇಳಲು ಸಂಕೋಚ. 'ಗೊತ್ತಿದ್ದರೂ' ರಂಗಣ್ಣ ಇದ್ದಾನಾ? ಎಂದು ಕೇಳಬೇಕು. ಮಕ್ಕಳು ಮರಿ ವಿಷಯ ತಿಳಿದಿರಲಿಲ್ಲ. ಕೊನೆಗೆ ಕೊಂಕಣ ಸುತ್ತಿ ಮೈಲಾರಕ್ಕೆ ಬರೋ ಮಾತು ಬೇಡ. ಈಕಿಯ ಮುಂದೆ ಏನು ಸಂಕೋಚ?
'ಸುಮಂಗಳಾ ಇದ್ದಾರ?' ಎಂದೆ ಸ್ವಲ್ಪ ಗಟ್ಟಿಯಾಗಿ
ಆಕಿ ನನ್ನನ್ನೇ ನೋಡಿ 'ನಾನೇ ಸುಮಂಗಳಾ. ಯಾರಪ್ಪ ನೀನು?' ಎಂದಳು.
ಚಂದವಾಗಿ ಹರಡಿದ್ದ ಬಣ್ಣ ಬಣ್ಣದ ಮೋಡಗಳು ಕ್ಷಣದಲ್ಲಿ ಕಪ್ಪಾಗಿ ಒಂದಾಗಿ ಮಳೆ ಸುರಿಯ ತೊಡಗಿತ್ತು. ಆಗಾಗ ಚಟ್ ಚಟಕ್ ಸಿಡಿಲು. ಇನ್ನೂ ಬೆಳಕಿದ್ದರಿಂದ ಕೋಲ್ಮಿಂಚು ಕುಕ್ಕಲಿಲ್ಲ.
'ಮಳೆ ಬರುತ್ತಾ ಇದೆ. ತಡೆಯೋಲ್ಲ ಒಳಗೆ ಬನ್ನಿ'
'ಇಲ್ಲ ಬರುತೀನಿ. ಕೊಡೆ ಇದೆ' ಎನ್ನುತ್ತ ಅವಸರವಸರವಾಗಿ ಹೆಜ್ಜೆ ಹಾಕಿದೆ. ಆದರೆ ಕೊಡೆ ಇಲ್ಲದ್ದು ಸುಮಂಗಳಮ್ಮ ನೋಡಲಿಲ್ಲ.
= ಸತ್ಯಬೋಧ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


