ಕಾಂಗರೂ ಪಾರ್ಕಿಂಗ್

ಆಸ್ಟ್ರೇಲಿಯಾ ಭೂಮಿ ಮೇಲಿನ ಬೆರಗು. ಅದರಲ್ಲೂ ಅಲ್ಲಿನ ವಿಸ್ಮಯಭರಿತ ಕಾಂಗರೂ ದ್ವೀಪವನ್ನು ಮರೆಯುವಂತೆಯೇ ಇಲ್ಲ. ದಕ್ಷಿಣ ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿ ಹೆಂಡತಿ ಮತ್ತು ನಾನು ತಂಗಿದ್ದ ಹೊಟೇಲ್‌ನಿಂದ ನಮ್ಮನ್ನು ತನ್ನೊಡಲೊಳಗೆ ಸೇರಿಸಿಕೊಂಡ ಬಸ್ಸು ಒಂದೂವರೆ ಗಂಟೆ ಪ್ರಯಾಣದ ನಂತರ ಕೇಪ್ ಜೆರ್ವಿಸ್ ಎಂಬ ಪುಟ್ಟ ಬಂದರನ್ನು ತಲಪಿತು. ಇಲ್ಲಿಂದ ನಾವೇರಿದ ಸೀ ಲಿಂಕ್ ಫೆರಿ ಸುಂದರ ನೀಲಿ ಸಾಗರದಲ್ಲಿ ತೊಯ್ದಾಡುತ್ತ ಕಾಂಗರೂ ದ್ವೀಪದ ಪೆನ್ನೆಷೋವನ್ನು ತಲುಪಿದೆವು. ಅಲ್ಲಿ ದ್ವೀಪ ಸುತ್ತಲೆಂದೇ ಇರುವ ಸೀ ಲಿಂಕ್‌ನವರದ್ದೇ ಆದ ಐಷಾರಾಮಿ ಬಸ್ಸು ನಮಗಾಗಿ ಕಾದಿತ್ತು.
ಹಲವಾರು ಸುಂದರ ಬೀಚ್‌ಗಳು, ಅಪರೂಪದ ಅಸಂಖ್ಯಾತ ಸಾಗರ ಮತ್ತು ವನ್ಯಜೀವಿಗಳು, ಗುಡ್ಡಬೆಟ್ಟಗಳು, ಮಿರಮಿರನೆ ಮಿರುಗುವ ಮರಳ ರಾಶಿಗಳು, ಸುತ್ತಲೂ ಬಿಳಿಯ ನೊರೆಯೆಬ್ಬಿಸುವ ಅಲೆಗಳಿಂದ ಕೂಡಿದ ನೀಲಿ ಸಾಗರ... ಎಲ್ಲ ವೈವಿಧ್ಯತೆಗಳ ತವರು ಈ ಕಾಂಗರೂ ದ್ವೀಪ. ಬಸ್ಸಿನ ಚಾಲಕ ದ್ವೀಪದ ವಿವರಗಳನ್ನು, ಅಲ್ಲಿಯ ವಿಶೇಷಗಳನ್ನು ವಿವರಿಸುತ್ತ ಅಲ್ಲಲ್ಲಿ ಬಸ್ಸು ನಿಲ್ಲಿಸಿ ನಮಗಿವುಗಳನ್ನೆಲ್ಲ ನೋಡಲು ಅನುವು ಮಾಡಿ ಕೊಡುತ್ತಿದ್ದ.
ಸೀಲ್ ಬೇ ಕನ್ಸರ್ವೇಷನ್ ಪಾರ್ಕ್‌ನಲ್ಲಿ ನಾವು ಗೈಡೆಡ್ ಟೂರ್ ಬೀಚ್‌ನಲ್ಲಿ ಮಲಗಿದ್ದ, ತೆವಳುತ್ತಿದ್ದ ಅಸಂಖ್ಯಾತ ಸೀ ಲಯನ್‌ಗಳನ್ನೂ ತೀರಾ ಸನಿಹದಿಂದಲೇ ಕಂಡು ಅವುಗಳೆದುರು ನಿಂತು ಫೋಟೋ ಕ್ಲಿಕ್ಕಿಸಿಕೊಂಡೆ. ಉದ್ದ ಮೀಸೆಯ, ಬಡ್ಡು ಮೂಗಿನ, ಕೋರೆ ಹಲ್ಲಿನ, ಕಪ್ಪು ಕೊರಡಿನ ಬೊಜ್ಜು ತುಂಬಿದ ದೈತ್ಯ ದೇಹದ ಭಯಾನಕ ಸಮುದ್ರಜೀವಿಗಳನ್ನು ನೋಡಿದಾಗ ನಿಬ್ಬೆರಗಾಗದೇ ಇರಲು ಸಾಧ್ಯವೇ ಇಲ್ಲ. ಇವು ಒಮ್ಮೊಮ್ಮೆ ಆಕ್ರಮಣ ಮಾಡಬಹುದಾದುದರಿಂದ ನಿಗದಿಪಡಿಸಿದ ದಾರಿ ಬಿಟ್ಟು ಅತ್ತಿತ್ತ, (ಗೈಡ್ ಕಣ್ಣು ತಪ್ಪಿಸಿ) ಹೋಗುವಂತಿಲ್ಲ. ಇಲ್ಲಿಯ ಬೋರ್ಡ್ ವಾಕ್‌ನಲ್ಲಿ ಅಡ್ಡಾಡುತ್ತ ಸುತ್ತಲಿನ ಸಮುದ್ರದ ಅಂದಕ್ಕೆ ಮನಸೋತು ಒಲ್ಲದ ಮನಸ್ಸಿನಿಂದ ಬಸ್ಸಿಗೆ ಹಿಂದಿರುಗಬೇಕಾಯಿತು.
ಕಾಂಗರೂ ದ್ವೀಪದಲ್ಲಿ ನಾನು ಕಂಡ ಇನ್ನೊಂದು ಸುಂದರ ಸ್ಥಳ ಫ್ಲಿನ್ದೆರ್ಸ್ ಚೀಸ್ ನ್ಯಾಷನಲ್ ಪಾರ್ಕ್... ಭೀಮಾಕಾರದ ಹಕ್ಕಿಯ ಮೂತಿ ಮತ್ತು ಕೊಕ್ಕೆಯಂತಿರುವ ಮತ್ತು ಹಲವು ವೈವಿಧ್ಯಮಯ ವಿಚಿತ್ರ ಆಕಾರಗಳ, ಒಂದು ಕಮಾನನ್ನೂ ಒಳಗೊಂಡ ವಿಸ್ಮಯಕರ ದೈತ್ಯ ಕಲ್ಲು ಇಲ್ಲಿಯ ಪ್ರಮುಖ ಆಕರ್ಷಣೆ. ಈ ಕಲ್ಲಿನಲ್ಲಿರುವ ಅಡ್ಮಿರಲ್ ಆರ್ಚ್ ಇದೊಂದು ದೊಡ್ದ ಕಮಾನು, ಸೂಜಿಕಲ್ಲಿನಂತೆ ನನ್ನನ್ನೂ ಉಳಿದವರನ್ನೂ ಆಕರ್ಷಿಸಿ ತನ್ನ ಫೋಟೋ ತೆಗೆಸಿಕೊಂಡಿತು. ಈ ಕಲ್ಲಿನ ಸುತ್ತ ಸುತ್ತು ಬರಬಹುದು, ಕಲ್ಲನ್ನೇರಬಹುದು, ಅಲ್ಲಿ ಇಲ್ಲಿ ನುಸುಳಬಹುದು. ಇದರಾಚೆಯೇ ಇದೆ ನೀಲ ಸಾಗರ. ಇಲ್ಲೇ ಕೆಳಗೆ ಸುಮುದ್ರ ತೀರದಲ್ಲಿವೆ ಕಡಲ ಜೀವಿ ಸೀಲ್‌ಗಳು... ಇವುಗಳ ದನಿಯನ್ನೇನೋ ಕೇಳಿದೆ, ಆದರೆ ಅವು ನನ್ನ ಕಣ್ಣಿಗೆ ಬೀಳಲೇ ಇಲ್ಲ.
ಹೇನ್ಸೋನ್ ಬೇ ಸ್ಯಾನ್ಕ್ಚುರಿ ಒಂದು ಉದ್ಯಾನದಂತಿರುವ ಇಲ್ಲಿಯ ಮರಗಳಲ್ಲಿ ಅಲ್ಲಲ್ಲಿ ಅಡಗಿ ಕುಳಿತಿರುವ ಕೋಲಾ ಎಂಬ ಅಪರೂಪದ ಕಪ್ಪು ರೋಮಗಳಿಂದ ಕೂಡಿದ ಪ್ರಾಣಿಗಳನ್ನು ಕಂಡು ಪಿಸುಮಾತಿನಲ್ಲಿ ತಮ್ಮ ಅಚ್ಚರಿಯನ್ನು ಮೆರೆಯುತ್ತಿದ್ದ ಸಹಪ್ರಯಾಣಿಕರ ಉತ್ಸಾಹ ಅಪರಿಮಿತ. ಅಷ್ಟರಲ್ಲಿ ಕೆಲವು ಪೊದರುಗಳಾಚೆ ಮೂರ್ನಾಲ್ಕು ಕಾಂಗರೂಗಳು ಕುಪ್ಪಳಿಸುತ್ತ ಅಲ್ಲಲ್ಲಿ ನಿಂತು ಓಡಿದಾಗ ಅವುಗಳ ಫೋಟೋ ಹಿಡಿಯಲೆಂದು ದೌಡಾಯಿಸಿದ ಒಬ್ಬನು ಜಾರಿಬಿದ್ದ ಸದ್ದಿಗೆ ಕಾಂಗರೂಗಳು ಪಲಾಯನಗೈದವು. ಅವನಿಗೆ ದೊರಕಿದ್ದು ಸಹಸ್ರ ಹಿಡಿಶಾಪಗಳು! ಬಸ್ ವಿಹಾರಾರ್ಥಿಗಳ, ಸೈಕಲ್ ಸವಾರರ ದಂಡುಗಳಿಗೆ ಎಡೆಕೊಡುತ್ತ ನಮ್ಮನ್ನು 4,405 ಚ.ಕಿ.ಮೀ.ನಷ್ಟು ದೊಡ್ಡ, 150 ಕಿ.ಮೀ. ಉದ್ದದ ಕಾಂಗರೂ ದ್ವೀಪದ ಉದ್ದಗಲಗಳಲ್ಲಿ ನಮ್ಮನ್ನು ಸುತ್ತಾಡಿಸಿ ಕಣ್ಣಿಗೆ ವಿವಿಧ ಬಗೆಗಳ ರಸದೂಟವನ್ನಿತ್ತಿತು. ಆಸ್ಟ್ರೇಲಿಯಾದ ಮೂರನೇ ದೊಡ್ಡ ದ್ವೀಪವಾದ ಕಾಂಗರೂ ಪ್ರಪಂಚದ ಅತ್ಯಂತ ಸುಂದರ ದ್ವೀಪಗಳಲ್ಲೊಂದು. ಒಮ್ಮೆ ಆ ಖಂಡಕ್ಕೆ ಹೋದರೆ ಕಾಂಗರೂ ದ್ವೀಪವನ್ನು ಕಂಡು ಬನ್ನಿ.
= ಡಾ. ಎ.ವಿ. ಭಟ್ ಕೆಜಿಎಫ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


