ನಾವೇನು ಬಡವರಲ್ಲ

ಕಥೆಗಾರ ಕೆ. ಸತ್ಯನಾರಾಯಣ ಅವರ ಆತ್ಮಕತೆ 'ನಾವೇನು ಬಡವರಲ್ಲ' ನಿನ್ನೆಯಷ್ಟೇ ಬಿಡುಗಡೆಯಾಗಿದೆ. ಅಭಿನವ ಪ್ರಕಾಶನ ಇದನ್ನು ಹೊರತಂದಿದೆ. ಈ ಕೃತಿಯ ತಾಜಾ ಭಾಗ ನಿಮ್ಮ ಖುಷಿಗಾಗಿ...
ವಿಪರ್ಯಾಸ ನೋಡಿ.
ಕೆಲವು ವಾರಗಳಿಂದ ಒಂದು ವಿಚಿತ್ರ ಆದರೆ ಕೊಂಚವೂ ಸೂಕ್ಷ್ಮತೆಯಿಲ್ಲದ ಸಾರ್ವಜನಿಕ ಚರ್ಚೆ. ಹೆಚ್ಚು ಕಡಮೆ ವಿವಿಧ ವಿನೋದಾವಳಿಯ ಲಹರಿಯಲ್ಲಿ. ಯಾರಪ್ಪಾ ನಮ್ಮಲ್ಲಿ ಬಡವರು, ಹೇಗೆ ಬಡವರು ಇವರು, ಇವರ ಬಡತನವನ್ನು ಕಂಡುಹಿಡಿಯುವುದು, ಮಾಪನ ಮಾಡುವುದು ಹೇಗೆ? ಒಬ್ಬ ಮನುಷ್ಯನಿಗೆ ಒಂದು ದಿನಕ್ಕೆ ಹನ್ನೆರಡು ರುಪಾಯಿ ಸಾಕೆ, ಮೂವತ್ತಾರು ರೂಪಾಯಿ ಬೇಕೆ, ಒಂದು ತಟ್ಟೆಯ ಊಟಕ್ಕೆ ಎಷ್ಟು ಬೆಲೆ? ಒಂದು ರುಪಾಯಿ, ಎರಡು ರುಪಾಯಿ, ಹತ್ತು ರುಪಾಯಿ ತಟ್ಟೆಯಲ್ಲಿ ಏನೇನಿರಬೇಕು? ರೊಟ್ಟಿ, ಚಪಾತಿ, ಬೇಳೆ, ಪಲ್ಯ, ಸಾರು, ಅನ್ನ, ಸಾಂಬಾರ್, ಮಾಂಸದ ತುಂಡು, ಸಿಹಿ, ಮಜ್ಜಿಗೆ, ಉಪ್ಪಿನಕಾಯಿ, ಮೀನಿನ ಖಾದ್ಯ, ಕೋಳಿಯ ತಲೆ, ಕಾಲು. ಇದೇನಿದು? ಬಡವರ ಸಂಖ್ಯೆ ಕಡಮೆಯಾಗುತ್ತಿದೆ! ಶೇಕಡ ಒಂದರಷ್ಟು, ನಾಲ್ಕರಷ್ಟು, ಎಂಟರಷ್ಟು, ಹದಿನಾರರಷ್ಟು. ಯಾರೂ ಗಮನಿಸುತ್ತಲೇ ಇಲ್ಲವಲ್ಲ. ಏನಾಗಿದೆ? ಹೀಗೆ ಗಮನಿಸದವರಿಗೆ. ಕಣ್ಣೆದುರಿಗೇ ಮಾಲ್ಗಳು, ಫ್ಲೈ ಓವರ್ಗಳು, ಸಾಫ್ಟ್ವೇರ್ ಪಾರ್ಕ್ಗಳು ಕಣ್ಣಿಗೆ ಹೊಡೆಯುವಂತೆ ಕಾಣುತ್ತಿದ್ದರೂ ನೋಡುವುದಿಲ್ಲವಲ್ಲ. ಊಟ, ತಿಂಡಿ ಸಿಕ್ಕೇಬಿಟ್ಟಿತು ಎಂದಿಟ್ಟುಕೊಳ್ಳೋಣ. ಬಡವರು ಎಲ್ಲಿ ವಾಸಿಸಬೇಕು? ಮನೆಯಲ್ಲೇ, ಜಗುಲಿಯಲ್ಲೇ, ತೋಟದಪ್ಪನ ಛತ್ರದಲ್ಲೇ. ಎಲ್ಲಿ ವಾಸಿಸುತ್ತಿದ್ದಾರೆ ಈ ಬಡವರು, ಶ್ರೀಮಂತರು, ಇಲ್ಲ ಮಧ್ಯಮವರ್ಗದವರು. ಬಡವರು ನಿದ್ದೆ ಮಾಡಬಾರದೆ, ಮಾಡಬೇಕೆ, ಕನಸುಗಳು ಬೀಳಬೇಕೆ? ಬೀಳಬೇಡವೇ? ಮಲವಿಸರ್ಜನೆಗೆ ಬಡವರು ಕೂಡ ಕೂರುತ್ತಾರಲ್ಲವೇ? ಇಲ್ಲ ಇಲ್ಲ ಇದನ್ನು ಗಮನಿಸಿಯೇ ಇಲ್ಲ.
ಬಡತನವೆಂಬುದು ಊಟ, ತಿಂಡಿ, ದಿನವೂ ಮಾಡುವ ಖರ್ಚಿಗೆ ಮಾತ್ರ ಸಂಬಂಧಿಸಿದ್ದಲ್ಲ. ಒಂದು ಮಾನಸಿಕ ಸ್ಥಿತಿ ಕೂಡ. ಆತ್ಮವಿಶ್ವಾಸ, ಪ್ರತ್ಯಯ, ಭರವಸೆ, ಸ್ವಾಭಿಮಾನ ಜಾಗೃತವಾಗದೆ ಹೋಗುವ ಸ್ಥಿತಿ. ಇಲ್ಲ ಇಲ್ಲ ಇವೆಲ್ಲ ಎಂದರೆ ಏನು ಎಂಬುದೇ ಗೊತ್ತಿಲ್ಲದ ಸ್ಥಿತಿ. ಜೀವನಾವಕಾಶಗಳಿಗೆ ಆಯ್ಕೆಯೇ ಇಲ್ಲದ ಸ್ಥಿತಿ. ಸ್ವಾತಂತ್ರ್ಯವೇ ಇಲ್ಲದ, ಸ್ಥಿತಿಯೇ ಸರ್ವಸ್ವವಾದ ಸಾಧ್ಯತೆಯೇ ಹೊಳೆಯದ ಜೀವನ ಘಟ್ಟ. ಇಲ್ಲಿ ನಾಳೆಗಳು ನಿನ್ನೆಯಂತೆಯೂ, ನಿನ್ನೆ ಮೊನ್ನೆಯಂತೆಯೂ ಇದ್ದು ಬಿಡುತ್ತವೆ. ದಿನ ಭವಿಷ್ಯ, ಚಂದ್ರನಾಡಿ, ವಾರಭವಿಷ್ಯವೆನ್ನುವುದೆಲ್ಲ ಇಲ್ಲವೇ ಇಲ್ಲ. ಭವಿಷ್ಯವೇ ಇಲ್ಲದಾಗ ಜ್ಯೋತಿಷಿಗಳು ಎಲ್ಲಿ? ಇಲ್ಲಿವರಿಗೆ ಅಂಗೈಯಲ್ಲಿ ಗೆರೆಗಳು ಮೂಡುವುದಿಲ್ಲ, ಚಕ್ರಗಳು ಕಾಣಸಿಗುವುದಿಲ್ಲ. ಶಂಖದ ಮಾತಂತೂ ದೂರವೇ ಉಳಿಯಿತು. ಅಂಗೈ ಕೂಡ ಪಾದದಷ್ಟೇ ಒರಟು, ಪೆಡಸು.
ಈ ಸ್ವಾತಂತ್ರ್ಯದ ಆಸೆಯನ್ನು, ಸಾಧ್ಯತೆಯ ಕನಸನ್ನು ಯಾವೊಬ್ಬ ಮನುಷ್ಯನಿಗೂ ಯಾವೊಂದು ಸಮಾಜವೂ ತಾನೇ ತಾನಾಗಿ ನೀಡುವುದಿಲ್ಲ. ಎಲ್ಲವನ್ನೂ ಪಡೆಯಬೇಕು, ಕೇಳಿ, ಕೂಗಾಟ ಮಾಡಿ, ಹೋರಾಟ ಮಾಡಿ, ಮೈ ಕೈ ಗಲೀಜು ಮಾಡಿಕೊಂಡು, ಇತರರಿಗೂ ಮಾಡಿ, ರಂಪ ರೇಜಿಗೆ ಎಬ್ಬಿಸಿ, ಹೆಚ್ಚಿಸಿ. ಹೀಗೆ ಪಡೆಯಲು ಹೊರಟಾಗ ಸ್ವಾತಂತ್ರ್ಯದ ಬಯಕೆ, ಸಾಧ್ಯತೆಯ ವಿಸ್ತಾರ ಮತ್ತು ಸಾಕ್ಷಾತ್ಕಾರ ಹೆಚ್ಚಾಗುವ ಹಾಗೆ ನೋಡಿಕೊಳ್ಳಬೇಕು. ಸರ್ಕಾರ ಮತ್ತು ಸಮಾಜವು ಇದನ್ನು ಸದಾ ಗೌರವಿಸಬೇಕು. ಸರ್ಕಾರವು ಪ್ರತಿಯೊಬ್ಬ ನಾಗರಿಕನನ್ನು ಸಮಾನತೆಯ ನೆಲೆಯಲ್ಲಿ ನೋಡಿದಾಗ ಮಾತ್ರ ಇದು ಸಾಧ್ಯ. ಸಮಾನತೆ ಪರಸ್ಪರ ನಾಗರೀಕರಲ್ಲಿ ಮಾತ್ರವಲ್ಲ. ಸರ್ಕಾರವೇ, ರಾಜ್ಯವೇ ಪ್ರತಿಯೊಬ್ಬ ನಾಗರಿಕನು ಕೂಡ ಸರ್ಕಾರಕ್ಕೆ ಸಮಾನ, ಸಮಾನ ಬಂಧು ಎನ್ನುವ ನೆಲೆಯಲ್ಲಿ ಕಾಣಬೇಕು. ಕಂಡರಷ್ಟೇ ಸಾಲದು, ಸದಾ ಎಲ್ಲ ಕ್ರಿಯೆಗಳಲ್ಲೂ ಯೋಜನೆಗಳಲ್ಲೂ ಪರಿಭಾವಿಸಬೇಕು. ಕ್ಷಣ ಮರೆತರೆ ಹೀಗೆ ಕಾಣುವುದು ಪರಿಭಾವಿಸುವುದು ತಪ್ಪೇ ಹೋಗುತ್ತದೆ. ಮನಸ್ಸು ಹಿಂದಿನ ರೂಢಿಗೇ ಮಗುಚಿಕೊಳ್ಳುತ್ತದೆ. ಈಗಿನ ಪರಿಸ್ಥಿತಿ, ಕಾಣುವಿಕೆ ನೋಡಿ. ಸರ್ಕಾರವು ಬಡವರನ್ನು ಸಂಖ್ಯೆಗಳನ್ನಾಗಿ, ಫಲಾನುಭವಿಗಳನ್ನಾಗಿ, ಆಶ್ರಿತ ನೆಲೆಯಲ್ಲಿ, ಯಾವಾ ಗಲೂ ಆಶ್ರಯಕ್ಕೆ ಅಂಗಲಾಚಿಕೊಂಡು ಹಪಹಪಿಸಿ ಕಾಯ್ದು ಕೂತುಕೊಂಡವರಂತೆಯೇ ನೋಡಲು ಬಯಸುತ್ತದೆ. ಹೀಗೆ ನೋಡುವ ತನಕ ಸರ್ಕಾರದ ಯಾವುದೇ ಕಾರ್ಯಕ್ರಮವೂ ಜನರನ್ನು ಬಡತನದಿಂದ ಮಾನಸಿಕವಾಗಿ ಮೇಲಕ್ಕೆತ್ತುವ ದೃಷ್ಟಿಕೋನವನ್ನು ರೂಢಿಸಿಕೊಳ್ಳುವುದಿಲ್ಲ.
ಸರ್ಕಾರವು ಈಗಿರುವ ಹಾಗೆಯೇ ಏಕೆ ಇದೆಯೆಂದರೆ ನಾನು ನೀವು ಮತ್ತು ಒಟ್ಟು ಸಮಾಜವು ಕೂಡ ಬಡವರನ್ನು ಸಮಾನತೆಯ ನೆಲೆಯಲ್ಲಿ ನೋಡದೆ, ಆಶ್ರಿತರ, ಫಲಾನುಭವಿಗಳ ನೆಲೆಯಲ್ಲಿ ಮಾತ್ರವೇ ನೋಡಿ ಸ್ಪಂದಿಸುವುದರಿಂದ. ಬಡತನವನ್ನು ಆರ್ಥಿಕವಾಗಿ ಒಂದು ದಿನ ಸುಮಾರಾಗಿ ನಿರ್ಮೂಲ ಮಾಡಿಯೇ ಬಿಡಬಹುದೇನೋ. ಬಡವರಿಗೆ ಬದುಕುವ ಆಸೆ, ಹಕ್ಕು, ಸ್ವಾತಂತ್ರ್ಯದ ಬಯಕೆಯನ್ನು ಪ್ರಚೋದಿಸಿ, ಗೌರವಿಸಿ, ನಂತರ ನಾವು ಅದನ್ನೂ ಒಪ್ಪಿಕೊಳ್ಳುವುದು ಇನ್ನೂ ಕಷ್ಟ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


