ನಾವೇಕೆ ಹೆಮ್ಮೆಪಡಬೇಕು?
ಭಾರತ ಕಂಡ ಅತ್ಯುತ್ತಮ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂರೊಂದಿಗೆ ಸ್ವಿಡ್ಜರ್ಲೆಂಡ್ ಸೇರಿದಂತೆ ನಾಲ್ಕು ದೇಶಗಳ ಪ್ರವಾಸದ ಸುಯೋಗ ಒದಗಿತ್ತು. ಆ ಸಂದರ್ಭ ಅಲ್ಲಿ ಎರಡು ಮುಖ್ಯ ಪ್ರಶ್ನೆಗಳು ಕಲಾಂ ಅವರಿಗೆ ಎದುರಾಯಿತು. 'ನಿಮಗೆ ಭಾರತ ಎಂದರೆ ಏನು ನೆನಪಾಗುತ್ತದೆ? ಮತ್ತು ಭಾರತದ ಹೆಗ್ಗಳಿಕೆಯೆಂದು ಏನನ್ನು ನೀವು ಗುರುತಿಸಲು ಇಷ್ಟಪಡುತ್ತೀರಿ?' ಇದಕ್ಕೆ ನಮ್ಮ ರಾಷ್ಟ್ರಪತಿ ಏನು ಉತ್ತರ ಕೊಟ್ಟಾರು ಎಂಬ ಕುತೂಹಲ ನಾನೂ ಸೇರಿದಂತೆ ಕಲಾಂ ತಂಡದಲ್ಲಿ ಹೋಗಿದ್ದ ಭಾರತೀಯ ತಂಡಕ್ಕೂ ಇತ್ತು. ಕಲಾಂ ತಮ್ಮ ಎಂದಿನ ಶೈಲಿಯ ಮುಗ್ಧ ನಗು ಬೀರುತ್ತ ಅತ್ಯಂತ ಹೆಮ್ಮೆಯೊಂದಿಗೆ ಉತ್ತರಿಸಿದರು. 'ನಾನು ಜಗತ್ತಿನ ಹಲವಾರು ದೇಶಗಳನ್ನು ಸುತ್ತಿದ್ದೇನೆ. ನೂರಾರು ಸ್ಥಳಗಳಿಗೆ ಭೇಟಿ ನೀಡಿದ್ದೇನೆ. ಆದರೆ ಭಾರತದಲ್ಲಿರುವಷ್ಟು ವೈವಿಧ್ಯವನ್ನು ಜಗತ್ತಿನ ಯಾವುದೇ ರಾಷ್ಟ್ರದಲ್ಲಿ ಕಂಡಿಲ್ಲ. ಭಾರತವೆಂಬುದು ಕೇವಲ ಜಗತ್ತಿನ ಒಂದು ದೇಶವಲ್ಲ. ಇದೇ ಒಂದು ಜಗತ್ತು. ಜಗತ್ತಿನ ಎಲ್ಲೆಡೆ ಇರಬಹುದಾದ ಎಲ್ಲ ಸಂಗತಿಗಳನ್ನೂ ಈ ಒಂದೇ ರಾಷ್ಟ್ರದಲ್ಲಿ ನೀವು ನೋಡಲು ಸಾಧ್ಯ. ಇಲ್ಲಿನ ವೈವಿಧ್ಯವೇ ನನಗೆ ಭಾರತವೆಂದಾಕ್ಷಣ ಕಣ್ಣಮುಂದೆ ಬರುತ್ತದೆ.'
ಇದಕ್ಕಿಂತ ವಾಸ್ತವದ, ಚತುರ ಉತ್ತರ ಇನ್ನೊಂದಿರಲು ಸಾಧ್ಯವೆ? ಇಲ್ಲಿರಬಹುದಾದ ವೈವಿಧ್ಯದ ಭಾಷೆ, ಶೈಲಿ, ಅನೇಕ ಧರ್ಮ, ವಿವಿಧ ವೇಷಭೂಷಣಗಳು, ಬೇರೆಬೇರೆ ಆಹಾರ ಪದ್ಧತಿ, ನಡವಳಿಕೆ, ವಿಭಿನ್ನ ಸಂಪ್ರದಾಯ, ಭಿನ್ನಸಂಸ್ಕೃತಿ ಬೇರೆಲ್ಲಿ ಇರಲು ಸಾಧ್ಯ? ಒಂದೇ ದೇಶದಲ್ಲಿ ಇಷ್ಟೊಂದು ಒಳಗೊಂಡಿದೆ. ಕಲಾಂ ಅವರೇ ಹೇಳುವಂತೆ ಇಲ್ಲಿ ಪ್ರತಿ 30 ಕಿ.ಮೀ.ಗೊಮ್ಮೆ ಭಾಷೆ ಬದಲಾಗುತ್ತದೆ. ಒಂದೇ ಭಾಷೆಯನ್ನಾಡುವ ಜನರ ಉಚ್ಚಾರಣೆಯ ಶೈಲಿ ಒಂದೇ ತೆರನಾಗಿರುವುದಿಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಹಬ್ಬಿನಿಂತ ದೇಶವೆಂದರೆ ಅದು ವೈವಿಧ್ಯದ ಆಗರ. ನೀವು ಅಮೆರಿಕದ ಯಾವುದೇ ದೇಶಕ್ಕೆ ಹೋದರೂ ಅಲ್ಲಿ ಕಾಣುವುದು ಅದೇ ಮೆಕ್ಡೊನಾಲ್ಡ್, ಅದೇ ಪಿಜ್ಜಾಹಟ್. ಯಾವುದೇ ನಗರಗಳಲ್ಲಿ ನಿಮಗೆ ಕಾಣ ಸಿಗುವುದು ಅಡಿಡಾಸ್ ಅಥವಾ ನೈಕಿ ಶೋರೂಮ್ಗಳೇ. ಎಲ್ಲ ಪಟ್ಟಣಗಳೂ ಶಾಲಾ ಯೂನಿಫಾರಂಗಳನ್ನು ತೊಟ್ಟ ಮಕ್ಕಳಂತೆ ಒಂದೇ ರೀತಿಯಲ್ಲಿ ಗೋಚರಿಸುತ್ತವೆ. ಆದರೆ ಭಾರತ ಅಡಿಗಡಿಗೂ ತನ್ನೊಡಲಲ್ಲಿ ವೈವಿಧ್ಯವನ್ನು ಅಡಗಿಸಿಕೊಂಡಿದೆ. ಅದರ ಜತೆಜತೆಯೇ ಸಮಗ್ರತೆಯನ್ನು ಪೋಷಿಸಿಕೊಂಡು ಬರುತ್ತಿದೆ. ಇದಕ್ಕಿಂತ ಇನ್ನೇನು ಬೇಕು ಹೆಚ್ಚುಗಾರಿಕೆ? ಅವರ ಎರಡನೇ ಪ್ರಶ್ನೆಗೂ ಅದರಲ್ಲೇ ಅಡಗಿತ್ತು ಜಾಣ ಉತ್ತರ.
ಇನ್ನೂ ಒಂದು ಸಂಗತಿಯನ್ನು ಕಲಾಂ ಅಲ್ಲಿ ಮನವರಿಕೆ ಮಾಡಿಕೊಟ್ಟರು- ಜಗತ್ತಿನ 120 ಕೋಟಿ ಜನರಿಗೆ ನಾಯಕತ್ವವನ್ನು ಒದಗಿಸಿದ ಹೆಚ್ಚುಗಾರಿಕೆ ನಮ್ಮದು. ಇದೇ ಭಾರತದ ಸ್ಟ್ರಾಂಗ್ ಪಾಯಿಂಟ್. ವಿಶ್ವದ ಇನ್ನಾವುದೇ ದೇಶದಲ್ಲಿ ಇಷ್ಟು ಜನಸಂಖ್ಯೆ ಈ ಪರಿಯಲ್ಲಿ ಕಾಣಲು ಸಾಧ್ಯವೇ ಇಲ್ಲ. ನೀವು ಆಸ್ಟ್ರೇಲಿಯಾ, ಆಫ್ರಿಕಾದ ದೇಶಗಳನ್ನು ತೆಗೆದುಕೊಂಡರೆ ಅವೆಲ್ಲವೂ ಅತ್ಯಂತ ಪುಟ್ಟಪುಟ್ಟ ಸಮುದಾಯ. ನಮ್ಮ ಹಟ್ಟಿಯಂಗಡಿಯೋ, ಜೇವರ್ಗಿಯೋ, ಸಾಗರವೋ, ಬೆಳಗಾವಿಯೋ ಹೊಂದಿರಬಹುದಾದ ಜನಸಂಖ್ಯೆ ಅಲ್ಲಿನ ದೇಶದ ಒಟ್ಟಾರೆ ಜನಸಂಖ್ಯೆಯಷ್ಟಿರುತ್ತದೆ. ಬೆಂಗಳೂರಿನ ಒಂದೊಂದು ವಾರ್ಡಿನಲ್ಲೂ ಅಲ್ಲಿಗಿಂತ ಹೆಚ್ಚಿನ ಜನ ವಾಸಿಸುತ್ತಿದ್ದಾರೆ. ಸಿಂಗಾಪುರದ ಒಟ್ಟು ಜನಸಂಖ್ಯೆಯೇ 2 ಲಕ್ಷದಷ್ಟು. ಹೀಗಿರುವಾಗ 120 ಕೋಟಿ ಮಂದಿ ಒಂದೇ ಭಾರತೀಯತೆಯ ಬ್ಯಾನರ್ನಲ್ಲಿ ಒಗ್ಗೂಡಿ ಬಾಳುವುದು ಸಣ್ಣ ಸಂಗತಿಯೇನಲ್ಲ. ಅಷ್ಟೂ ಮಂದಿಗೆ ನಾಯಕತ್ವವೆನ್ನುವುದು ಹುಡುಗಾಟಿಕೆಯ ಮಾತಲ್ಲ. ನಮ್ಮ ಪ್ರಧಾನಿ ಮಾತನಾಡಿದರೆ ಅಷ್ಟೂ ಮಂದಿ ಕಿವಿಯಾಗುತ್ತಾರೆ. ಅವರ ಆದೇಶವನ್ನು ಎಲ್ಲರೂ ಪಾಲಿಸುತ್ತಾರೆ. ಪ್ರಜಾಪ್ರಭುತ್ವದ ಬೃಹತ್ ಶಕ್ತಿ ಎಂದರೆ ಇದೇ. ವಿಶ್ವ ಸಮುದಾಯದಲ್ಲಿ ಭಾರತಕ್ಕೆ ಇನ್ನಿಲ್ಲದ ಗೌರವ ಸಲ್ಲಬೇಕಿದ್ದರೆ ಈ ಒಂದು ಅಂಶ ಸಾಕಲ್ಲವೆ? ಕಲಾಂ ಮರು ಪ್ರಶ್ನೆಗೆ ಅಲ್ಲಿದ್ದವರದ್ದು ಮೌನವೇ ಸಮ್ಮತಿಯಾಗಿತ್ತು.
ಈ ಹಿನ್ನೆಲೆಯಲ್ಲಿ ನಾವು ಭಾರತವನ್ನು ನೋಡಿದಾಗ ಅದು ಇನ್ನಷ್ಟು ಪ್ರಕಾಶಮಾನವಾಗಿ ಕಾಣುತ್ತದೆ. ಗಣರಾಜ್ಯೋತ್ಸವದ ಸಂದರ್ಭದಲ್ಲಿ ನಮ್ಮ ದೇಶವೆಂದರೆ ಮೇಲ್ನೋಟಕ್ಕೆ ಕಾಣುವ 26 ಪ್ರಮುಖ ಸಂಗತಿಗಳನ್ನು ಈ ಸಂಚಿಕೆಯಲ್ಲಿ ಹಿಡಿದಿಡುವ ಪ್ರಯತ್ನ ಮಾಡಿದ್ದೇವೆ. ಇದರ ಹೊರತಾಗಿಯೂ ನಮ್ಮ ಹಿರಿಮೆಯನ್ನು ಸಾರುವ ಅದೆಷ್ಟೋ ಸಂಗತಿಗಳು ದೇಶದಲ್ಲಿವೆ. ಅವ್ಯಾವುವೂ ಅಮುಖ್ಯವೆಂದಲ್ಲ. ಆದರೆ ಈ 26 ಸಂಗತಿಗಳಲ್ಲಿ ಯಾವೊಂದನ್ನು ತೆಗೆದೂ ನೀವು ಭಾರತವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಬಾಲಿವುಡ್ ಅನ್ನೇ ಪ್ರತ್ಯೇಕಿಸಿಟ್ಟು ದೇಶದ ಸಾಂಸ್ಕೃತಿಕ ಜಗತ್ತನ್ನು ನೋಡಿ. ಕ್ರಿಕೆಟ್ ಇಲ್ಲದ ದೇಶದ ಮನರಂಜನೆಯನ್ನಾಗಲೀ, ಮಠ-ದೇಗುಲಗಳಿಲ್ಲದ ರಾಷ್ಟ್ರ ಜೀವನದ ನಂಬಿಕೆಯನ್ನಾಗಲೀ ಕಾಣಲು ಸಾಧ್ಯವೆ? ಹಾಗೆಯೇ ಇಲ್ಲಿನ ಪ್ರತಿ ಸಂಗತಿಯೂ ಸರಪಣಿಯಾಗಿ ದೇಶವನ್ನು ಒಗ್ಗೂಡಿಸಿ, ಬಂಧಿಸಿ ದೃಢವಾಗಿಟ್ಟಿವೆ. ಇವತ್ತಿಗೂ ಇಲ್ಲಿನ ಒಂದೊಂದೂ ಅಂಶ ಒಂದೊಂದು ದೇಶವಾಗಿ, ಅದೇ ಕ್ಷಣದಲ್ಲಿ ಎಲ್ಲವೂ ಸಮಗ್ರವಾಗಿ ಬೆಸೆದು ಹಿಂದುಸ್ಥಾನವಾಗಿ ನಿಲ್ಲುತ್ತದೆ. ದೇಶ ಗಣರಾಜ್ಯವಾದ ಶುಭ ಸಂದರ್ಭದಲ್ಲಿ ಇಂಥ ಹೆಮ್ಮೆಯನ್ನೊಂದಿಷ್ಟು ನೆನಪಿಸಿಕೊಳ್ಳುವ ಪ್ರಯತ್ನ ಈ ಸಂಚಿಕೆಯಲ್ಲಿದೆ. ಓದಿ ಇನ್ನಷ್ಟು 'ಖುಷಿ' ಪಡಿ.
ಶುಭಾಶಯಗಳೊಂದಿಗೆ.
- ವಿಶ್ವೇಶ್ವರ ಭಟ್, ಪ್ರಧಾನ ಸಂಪಾದಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

