ಕಾಮಿಡಿ ಮೇಡಂ!

ಗುಟ್ಟಿ ಮತ್ತು ಪಲಕ್...
ಕಲರ್ಸ್ ಚಾನೆಲ್‌ನಲ್ಲಿ 'ಕಾಮಿಡಿ ನೈಟ್ ವಿತ್ ಕಪಿಲ್' ಕಾರ್ಯಕ್ರಮ ನೋಡುವವರಿಗೆ ಈ ಹೆಸರು ಚಿರಪರಿಚಿತ. ಹೆಣ್ಣಿನ ವೇಷ ತೊಟ್ಟು ಕಪಿಲ್ ಜತೆ ಎಲ್ಲರನ್ನೂ ನಗಿಸುವ ಈ ಕಲಾವಿದರು ಕಾಮಿಡಿ ನೈಟ್ ಕಾರ್ಯಕ್ರಮದ ಹೈಲೈಟ್. ಗಂಡೊಬ್ಬ ಸ್ತ್ರೀ ವೇಷ ತೊಟ್ಟು ವಯ್ಯಾರದಿಂದ ಮಾತನಾಡಿದರೆ ಸಾಕು, ಜನ ನಗುತ್ತಾರೆ. ಈ ಕಾನ್ಸೆಪ್ಟ್‌ನಿಂದಲೇ ಗುಟ್ಟಿ ಮತ್ತು ಪಲಕ್ ಜನರ ಮನಗೆದ್ದಿರುವುದು. ಹಾಗೆ ನೋಡಿದರೆ ಯಾವುದೇ ಕಾರ್ಯಕ್ರಮಗಳಲ್ಲಿ ಕಾಮಿಡಿ ಮಾಡುವುದರಲ್ಲಿ ನಮ್ಮ ಹೆಣ್ಮಕ್ಕಳೇನೂ ಹಿಂದೆ ಬಿದ್ದಿಲ್ಲ. ಬಾಲಿವುಡ್ ಹಿರಿಯ ನಟಿ ಟುಣ್ ಟುಣ್ ತನ್ನ ದಢೂತಿ ದೇಹವನ್ನೇ ಹಾಸ್ಯದ ಸರಕನ್ನಾಗಿಸಿಕೊಂಡು ನಗಿಸಿದವರು. ಇದೇ ಸಾಲಿಗೆ ಕಾಮಿಡಿ ಸರ್ಕಸ್ ಖ್ಯಾತಿಯ ಭಾರತಿ ಸಿಂಗ್ ಹೊಸ ಸೇರ್ಪಡೆ. ಇತ್ತ ಸ್ಯಾಂಡಲ್‌ವುಡ್‌ನಲ್ಲಿ ಕಾಮಿಡಿ ಎಂದಾಗ ನೆನಪಾಗುವುದೇ ಉಮಾಶ್ರೀ, ರೇಖಾದಾಸ್, ಮನೋರಮಾ, ಎಂ.ಎನ್. ಲಕ್ಷ್ಮೀದೇವಿ, ಜಯಮ್ಮ ಮುಂತಾದವರು. ನಟಿ ಶ್ರುತಿಯೂ ಸ್ವಲ್ಪ ಕಾಲ ಆ ಹೊಣೆ ನಿಭಾಯಿಸಿದರು. ಆದರೆ, ಇತ್ತೀಚೆಗೆ ಸಿನಿಮಾಗಳಲ್ಲಿ ಹಾಸ್ಯ ನಟಿಯರು ಎಂದು ಪ್ರತ್ಯೇಕ ವಿಭಾಗದಲ್ಲಿ ಗುರುತಿಸಿಕೊಳ್ಳುವ ನಟಿಯರು ಇಲ್ಲ ಎಂದೇ ಹೇಳಬಹುದು. ಯಾಕೆ ಹೀಗೆ?ಅನ್ನೋ ಪ್ರಶ್ನೆಯನ್ನು ಬೆನ್ನತ್ತಿ ಹೊರಟರೆ ಸಿಕ್ಕಿದ್ದಿಷ್ಟು...
'ಮಹಿಳೆಯರಿಗೆ ಹಾಸ್ಯ ಪ್ರವೃತ್ತಿ ಕಡಿಮೆ', 'ಹೆಣ್ಮಕ್ಕಳಿಗೆ ಜೋಕ್ ಮಾಡಿ ನಗಿಸೋಕೆ ಬರಲ್ಲರೀ...' ಅನ್ನೋ ಮಾತುಗಳು ಸರ್ವೇಸಾಮಾನ್ಯವಾಗಿ ಕೇಳಿಬರುತ್ತಿದೆ. ಹಾಸ್ಯ ಗೋಷ್ಠಿಗಳಲ್ಲೂ ಕಲಾವಿದೆಯರ ಸಂಖ್ಯೆ ಕಡಿಮೆಯೇ. 'ಹಾಸ್ಯವೂ ಒಂದು ಕಲೆ. ಅದು ನಮ್ಮಲ್ಲಿಯೇ ಇರುತ್ತದೆ. ನಟಿಯರಿಗೆ ನಟನೆ ಹೇಳಿಕೊಡಬಹುದು. ಆದರೆ, ಕಾಮಿಡಿ ಮಾಡುವುದನ್ನು ಅವರಾಗಿಯೇ ಕಲಿತುಕೊಳ್ಳಬೇಕಾಗುತ್ತದೆ. ಅದನ್ನು ಬೆಳೆಸಿಕೊಂಡು ಬಂದು ವೇದಿಕೆ ಮೇಲೆ ಪ್ರದರ್ಶಿಸುವುದು ಅಷ್ಟು ಸುಲಭದ ವಿಷಯವೇನಲ್ಲ. ಇದಕ್ಕೆ ಹೆಚ್ಚಿನ ಪ್ರೋತ್ಸಾಹವೂ ಬೇಕು' ಅಂತಾರೆ ಖ್ಯಾತ ಹಾಸ್ಯ ಕಲಾವಿದೆ ಅರ್ಚನಾ ಪೂರಣ್‌ಸಿಂಗ್. ಇತ್ತೀಚೆಗೆ ಕಾಮಿಡಿ ರಿಯಾಲಿಟಿ ಶೋಗಳ ಮೂಲಕ ಒಂದಷ್ಟು ಪ್ರತಿಭೆಗಳು ಹೊರ ಹೊಮ್ಮುತ್ತಿರುವುದು ಸಮಾಧಾನಕರ ಸಂಗತಿಯೇ ಆಗಿದ್ದರೂ, ಹಾಸ್ಯ ಕಲಾವಿದರಿಗೆ ಸಿಗುವಷ್ಟು ಪ್ರಚಾರ ಮತ್ತು ಅವಕಾಶಗಳು ಕಲಾವಿದೆಯರಿಗೆ ಸಿಗುತ್ತಿಲ್ಲ ಎಂಬುದಂತೂ ಸತ್ಯ. ಕಲೆಗೆ ಲಿಂಗಬೇಧವಿಲ್ಲ ಎಂಬುದು ನಿಜ, ಆದರೆ ಹಾಸ್ಯ ಕಲಾವಿದರ ವಿಷಯಕ್ಕೆ ಬಂದರೆ ಅಲ್ಲಿ ಈ ತಾರತಮ್ಯ ಎದ್ದು ಕಾಣುತ್ತದೆ.
ನಗಿಸುವುದೇ ನಮ್ಮ ಬ್ಯುಸಿನೆಸ್ಸು
ಇಲ್ಲಿನ ಕಲಾವಿದೆಯರಿಗೆ ಹಾಸ್ಯವೇ ಬಂಡವಾಳ. ನಗಿಸುವುದು ಅವರ ಬ್ಯುಸಿನೆಸ್ಸೇ ಆಗಿದ್ದರೂ ಹಾಸ್ಯಗೋಷ್ಠಿಗಳಲ್ಲಿ ಪುರುಷರು ಹೇಳುವ ಜೋಕ್‌ಗಳ ಮುಂದೆ ಮಹಿಳೆಯರ ಜೋಕ್ ನೀರಸವೆನಿಸುತ್ತವೆ. ಹಾಸ್ಯಗೋಷ್ಠಿಗಳಲ್ಲಿ ಪುರುಷರೇ ಮೇಲುಗೈ ಸಾಧಿಸಲು ಇದೂ ಕಾರಣ. ಇನ್ನುಳಿದಂತೆ ಹಾಸ್ಯ ಪ್ರವೃತ್ತಿಯಲ್ಲಿ ಮಹಿಳೆಯರು ಪುರುಷರಿಗೇನೂ ಕಮ್ಮಿಯಿಲ್ಲ. ಆದರೆ, ಹಾಸ್ಯವನ್ನು ಕಲೆಯಾಗಿ ಸ್ವೀಕರಿಸುವ ಹೆಣ್ಮಕ್ಕಳ ಕೊರತೆ ನಮ್ಮಲ್ಲಿದೆ. ಅವಕಾಶ ಮತ್ತು ಬೇಡಿಕೆಯ ಅಭಾವವೂ ಹಾಸ್ಯ ಕಲಾವಿದೆಯರ ಸಂಖ್ಯೆ ಕಡಿಮೆಯಾಗಲು ಪ್ರಧಾನ ಕಾರಣ.
ಸಿನಿಮಾದಲ್ಲೂ ಇಲ್ಲ...
ಬಾಲಿವುಡ್, ಕಾಲಿವುಡ್, ಸ್ಯಾಂಡಲ್‌ವುಡ್ ಯಾವುದೇ ಭಾಷೆಯ ಸಿನಿಮಾಗಳೇ ಆಗಿರಲಿ... ಅಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಹಾಸ್ಯ ಕಲಾವಿದರು ಸಿಗುತ್ತಾರೆ. ಆದರೆ, ಅಲ್ಲೂ ಕಲಾವಿದೆಯರು ಇಲ್ಲ. ಹಳೇ ಕಾಲದ ಸಿನಿಮಾಗಳಲ್ಲಿ ಹಾಸ್ಯ ಕಲಾವಿದೆಯರು ಹೀರೋಯಿನ್‌ಗಳಷ್ಟೇ ಖ್ಯಾತಿ ಗಳಿಸುತ್ತಿದ್ದರು. ಚಿಕ್ಕ ಪಾತ್ರಗಳಾದರೂ ಅವರ ಹಾಸ್ಯ ಇಡೀ ಸಿನಿಮಾವನ್ನೇ ರಂಗೇರಿಸುತ್ತಿತ್ತು. ಆದರೆ, ಇಂದು ಅಂಥ ಕಲಾವಿದೆಯರು ಮೂಲೆಗುಂಪಾಗಿದ್ದಾರೆ. ಹಾಸ್ಯಕ್ಕೆ ಹಾಸ್ಯ ಕಲಾವಿದರೇ ಯಾಕೆ ಬೇಕು? ಸಿನಿಮಾದಲ್ಲಿ ನಗಿಸೋ ಕೆಲಸವನ್ನು ಹೀರೋ ಹೀರೊಯಿನ್ ಮಾಡಿದರೆ ಮುಗೀತು. ಅಲ್ಲಿ ಖರ್ಚು ಕೂಡಾ ಉಳಿಯುತ್ತೆ ಎಂಬ ನಿಲುವೇ ಹಾಸ್ಯ ಕಲಾವಿದರ ಡಿಮ್ಯಾಂಡ್ ಕುಸಿಯಲು ಕಾರಣ ಎಂಬುದು ಅಪ್ಪಟ ಸತ್ಯ.
ಕಾಮಿಡಿ ನಿರೂಪಕರು
ಯಾವುದೇ ಕಾರ್ಯಕ್ರಮ ಆಗಿರಲಿ ಅಲ್ಲಿ ಲವಲವಿಕೆ ಇರಬೇಕೆಂದರೆ ಸ್ವಲ್ಪ ಕಾಮಿಡಿ ಬೇಕೇ ಬೇಕು. ಸಿನಿಮಾ ಪ್ರಶಸ್ತಿ ಪ್ರಧಾನ ಸಮಾರಂಭಗಳಲ್ಲಂತೂ ನಿರೂಪಕರು ಮಾತಿನ ನಡುವೆ ಕಾಮಿಡಿ ಮಾಡುತ್ತಾ ನಗಿಸುತ್ತಿರುವುದನ್ನು ಕಾಣಬಹುದು. ಇನ್ನು ಕೆಲವು ಸಮಾರಂಭಗಳಲ್ಲಿ ಕಾಮಿಡಿ ಕಲಾವಿದರೇ ನಿರೂಪಕರಾಗಿರುತ್ತಾರೆ. ಏತನ್ಮಧ್ಯೆ, ವಿವಿಧ ವಾಹಿನಿಗಳಲ್ಲಿ ಮನರಂಜನಾ ಕಾರ್ಯಕ್ರಮಗಳ ನಿರೂಪಕರು, ರೇಡಿಯೋ ಜಾಕಿಗಳು ಎಲ್ಲರೂ ತಮ್ಮ ಹಾಸ್ಯ ಮಿಶ್ರಿತ ಮಾತುಗಳಿಂದಲೇ ಗಮನ ಸೆಳೆಯುತ್ತಾರೆ. ನಿರೂಪಣೆಯಲ್ಲೂ ಅಷ್ಟೇ... ಮಹಿಳೆಯರು ವಯ್ಯಾರದಿಂದ ಮಾತುಗಳಿಗೇ ಸೈ ಅಂತಾರೆ ವಿನಾ ಹಾಸ್ಯ ಮಿಶ್ರಿತ ಮಾತುಗಳಿಂದ ಗಮನ ಸೆಳೆಯುವುದನ್ನು ಕಾಣೆವು.
ಕಾಮಿಡಿ ಕಿಲಾಡಿಗಳು
ರಿಯಾಲಿಟಿ ಶೋಗಳದ್ದೇ ಭರಾಟೆಯಿರುವ ಈ ಕಾಲಘಟ್ಟದಲ್ಲಿ ಕಾಮಿಡಿ ರಿಯಾಲಿಟಿ ಶೋಗಳ ಮೂಲಕ ಅದೆಷ್ಟೋ ಹಾಸ್ಯ ಕಲಾವಿದರು ಜಗತ್ತಿಗೆ ಪರಿಚಿತರಾಗಿದ್ದಾರೆ. ವಿವಿಧ ವಾಹಿನಿಗಳು ನಡೆಸುತ್ತಿರುವ ಕಾಮಿಡಿ ಕಾರ್ಯಕ್ರಮಗಳೂ ಇಂಥ ಕಲಾವಿದರಿಗೆ ಹೆಚ್ಚಿನ ಅವಕಾಶವನ್ನು ಕಲ್ಪಿಸಿವೆ. ಬರೀ ಹಿರಿತೆರೆ ಅಥವಾ ಕಿರುತೆರೆಗೇ ಸೀಮಿತವಾಗಿದ್ದ ಆ ಕಲಾವಿದರು ಈಗ ಪ್ರತ್ಯೇಕ ಮನರಂಜನಾ ಕಾರ್ಯಕ್ರಮಗಳನ್ನು ನೀಡುವಷ್ಟು ಶಕ್ತರಾಗಿದ್ದಾರೆ. 'ಬಿಗ್‌ಬಾಸ್'ನ ಅನುಶ್ರೀಯೂ ಅಂಥವರಲ್ಲಿ ಒಬ್ಬರು. ಡ್ಯಾನ್ಸ್ ಕಾರ್ಯಕ್ರಮಗಳಿಗೆ ಸೆಲೆಬ್ರಿಟಿಗಳನ್ನು ಆಹ್ವಾನಿಸುವಂತೆ ಹಾಸ್ಯ ಕಾರ್ಯಕ್ರಮಗಳಿಗೆ ಸೆಲೆಬ್ರಿಟಿ ಗೆಸ್ಟ್‌ಗಳಾಗಿಯೂ ಭಾಗವಹಿಸಲು ಇವರಿಗೆ ಅವಕಾಶ ಸಿಗುತ್ತಿದೆ. ಇತರ ನಟಿಯರಂತೆ ಇವರಿಗೂ ಸೆಲೆಬ್ರಿಟಿ ಪಟ್ಟವಿದೆ, ಸಂಪಾದನೆಯ ಹಾದಿಯೂ ಇದೆ. ಒಂದು ಕಾಲದಲ್ಲಿ ಶಾಲಾ ಕಾಲೇಜು ಸ್ಪರ್ಧೆಗಳ ಇಲ್ಲವೇ ನಾಟಕಗಳಲ್ಲಿ ಅಭಿನಯಿಸಿ ಅನುಭವವಿರುವ ಹಾಸ್ಯ ಕಲಾವಿದರಿಗಷ್ಟೇ ಸಿನಿಮಾದಲ್ಲಿ ಅವಕಾಶ ಸಿಗುತ್ತಿತ್ತು. ಆದರೆ, ಈಗ ರಿಯಾಲಿಟಿ ಶೋಗಳಲ್ಲಿ ವಿಜಯಿಯಾದವರಿಗೆ ಸಿನಿಮಾರಂಗ ಕೆಂಪು ಹಾಸಿನ ಸ್ವಾಗತ ನೀಡುತ್ತಿರುವುದು ನಿಜವಾಗಿಯೂ ಒಳ್ಳೆಯ ಬೆಳವಣಿಗೆ. ಇಂಥ ಬೆಳವಣಿಗೆ ಕನ್ನಡ ಚಿತ್ರರಂಗದಲ್ಲೂ ಆದರೆ ಅದೆಷ್ಟೋ ಹಾಸ್ಯ ಕಲಾವಿದೆಯರ ಪ್ರತಿಭೆ ಅನಾವರಣಗೊಳ್ಳುವುದು.
ಕಮ್ಮಿ ಸಂಭಾವನೆ
ಹೀರೊ ಹೀರೊಯಿನ್‌ಗಳೇ ಕಾಮಿಡಿ ಮಾಡುವಾಗ ನಮಗೆಲ್ಲಿದೆ ಅವಕಾಶ? ನಾವು ಕೇಳಿದಷ್ಟು ಸಂಭಾವನೆ ಕೊಡಲು ನಿರ್ಮಾಪಕರು ಒಪ್ಪುತ್ತಿಲ್ಲ. ಕಡಿಮೆ ಸಂಭಾವನೆ ಕೊಟ್ಟು ನಟಿಸಿ ಎಂದರೆ ನಾವು ಹೋಗಲ್ಲ. ಆವಾಗ ಇನ್ಯಾರನ್ನೋ ಕರೆತಂದು, ಅವರಿಗೆ ಕಾಮಿಡಿ ಬರದೇ ಇದ್ದರೂ, ಕಡಿಮೆ ಸಂಭಾವನೆ ಕೊಟ್ಟು ದುಡಿಸಿಕೊಳ್ತಾರೆ. ಹಿಂದಿನ ಕಾಲದಲ್ಲಿ ಕಾಮಿಡಿ ನಟಿಯರಿಗೆ ಅವರದ್ದೇ ಆದ ಪ್ರಾಮುಖ್ಯ ಇತ್ತು. ಈಗ ಅದಿಲ್ಲ. ಸಿನಿಮಾದಲ್ಲಿ ನಾಯಕನ ಗೆಳೆಯನಾಗಿ ನಟಿಸಲು ಕಾಮಿಡಿ ಕಲಾವಿದರಿಗೆ ಅವಕಾಶವಿದೆ. ಆದರೆ ಹಾಸ್ಯ ನಟಿಯರಿಗೆ ಈ ಅವಕಾಶಗಳಿಲ್ಲ. ಇದು ಕೂಡ ಹಾಸ್ಯ ಕಲಾವಿದೆಯರ ಬೇಡಿಕೆ ಕುಸಿಯಲು ಕಾರಣವಾಯಿತು.
- ರೇಖಾದಾಸ್, ಹಾಸ್ಯ ನಟಿ
- ರಶ್ಮಿ ಕಾಸರಗೋಡು
rashmitendulkar@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


