ಮಜ್ಜಿಗೆ ಹುಲ್ಲಿನ ಪೊದೆಯ ಕೆಳಗೆ
ನನ್ನ ಅಜ್ಜಿ ಹೆಸರು ನಿಂಗಮ್ಮ. ಆ ನಿಂಗಮ್ಮ ಇಂದು ಮುಂಜಾನೆ ಸತ್ತಿದ್ದಾರೆ ಅಥವಾ ರಾತ್ರಿಯೇ? ನಿದ್ದೆಯಲ್ಲೇ ಜೀವ ಹೋಗಿರಬಹುದೇ? ...

ನನ್ನ ಅಜ್ಜಿ ಹೆಸರು ನಿಂಗಮ್ಮ. ಆ ನಿಂಗಮ್ಮ ಇಂದು ಮುಂಜಾನೆ ಸತ್ತಿದ್ದಾರೆ ಅಥವಾ ರಾತ್ರಿಯೇ? ನಿದ್ದೆಯಲ್ಲೇ ಜೀವ ಹೋಗಿರಬಹುದೇ? ಮುಟ್ಟಿ ನೋಡಿದರೆ ಮೈ ತಣ್ಣಗಿದೆ. ಉಸಿರಿಲ್ಲ. ಕಣ್ಣು ಮುಟ್ಟಿದೆ. ಮೂಗು ಮುಟ್ಟಿದೆ. ಅಜ್ಜಿಯನ್ನು ಮಲಗಿಯೇ ಅಪ್ಪಿಕೊಂಡೆ. ಜೀವವಿಲ್ಲದಿದ್ದರೂ ಅಜ್ಜಿ ದೇಹ ಅಜ್ಜಿ ದೇಹವೇ. ಪ್ರೀತಿಸಬಹುದು. ನಾವು ಪ್ರೀತಿಸಿದವರು ಅಜರಾಮರವಾಗಿರಬೇಕು ಎಂಬ ಭಾವನೆ ಅಜರಾಮರವಲ್ಲವೇ?
ನಿಂಗಮ್ಮ ಸತ್ತಿದ್ದಾರೆ ಎಂದು ಎಲ್ಲರಿಗೂ ಹೇಳಬೇಕು. ಬಾಡಿ ಎಲ್ಲರಿಗೂ ತೋರಿಸಬೇಕು. ಅಲಂಕರಿಸಿ ಎಲ್ಲರೂ ಕೊಂಡೊಯ್ಯುತ್ತಾರೆ, ಆದರೆ ಸತ್ತಿದ್ದಾರೆ ಎಂದು ಹೇಳಲು ಮನಸ್ಸೇ ಇಲ್ಲ.
ಅಜ್ಜಿ ಪಕ್ಕ ನಾನೇ ಮಲಗುತ್ತಿದ್ದೆ. ಅಜ್ಜಿಯ ಮೇಲಿನ ಪ್ರೀತಿಗೆ ಅಜ್ಜಿಯ ಗೊರಕೆಯು ಹಿತವೆನಿಸುತ್ತಿತ್ತು. ನನ್ನ ಹತ್ತಿರ ರಾತ್ರಿ ಮಲಗಲು ಯಾರೂ ಇಲ್ಲ. ಒಬ್ಬಳೇ ಒಬ್ಬಳೇ ಒಬ್ಬಳೇ ಎಂಬ ಭಾವನೆ ಕೂಡಾ ಏಕಾಕಿ. ಅಜ್ಜಿ ಸತ್ತರೆ ಬಾಡಿ ಯಾರಿಗೂ ಕೊಡುವುದಿಲ್ಲ ಎಂದೇ ಹೇಳುತ್ತಿದ್ದೆ. ಅಪ್ಪ ಗುರ್ರಂತ ನೋಡುತ್ತಿದ್ದರು. 'ನಿನ್ನ ಅಜ್ಜಿ ನನ್ನ ಅಮ್ಮ' ಎಂಬುದೇ 'ಗುರ್ರಂತದ ಅರ್ಥ'.
ಅಜ್ಜಿಯು ನನಗೆ ಆಗಾಗ ನೆಗಡಿ ಕೆಮ್ಮು ಬಂದಾಗ ಮಜ್ಜಿಗೆ ಹುಲ್ಲಿನ ಕಷಾಯ ಮಾಡಿ ಕುಡಿಸುತ್ತಿದ್ದಳು. ಮಜ್ಜಿಗೆ ಹುಲ್ಲಿನ ಪೊದೆಗಳನ್ನು ಕಣ್ಮುಂದೆ ಈಕೆಯೇ ಬೆಳೆಸಿದ್ದಳು. ಈ ಅಜ್ಜಿಯನ್ನು ಮನೆ ಮುಂದೆ ಮಜ್ಜಿಗೆ ಹುಲ್ಲಿನ ಕೆಳಗೆ ಸ್ಥಿರವಾಗಿ ಹೂಳಬೇಕು. ದಿನವೂ ಬೆಳಗ್ಗೆ ಟೀ ಕುಡಿಯುವಾಗ ಪೊದೆಯ ಪಕ್ಕದಲ್ಲಿ ಸಿಮೆಂಟಿನ ಸೀಟಿನ ಮೇಲೆ ಕೂತು ಅಜ್ಜಿಯ ದೇಹದ ಜತೆ ಮಾತಾಡಬಹುದು. ಮಜ್ಜಿಗೆ ಹುಲ್ಲಿನ ಪೊದೆ ಕೆಳಗೆ ಬೇಡವೆಂದರೆ, ದಾಸವಾಳದ ಗಿಡಗಳ ಕೆಳಗೆ ಹೂತು ಮೇಲೆ ಮತ್ತೆ ದಾಸವಾಳ ನೆಡಬೇಕು. ಏಕೆಂದರೆ, ನನಗೆ 6 ವರ್ಷವಿರುವಾಗ ಮೈ ಮೇಲೆ ಕಜ್ಜಿಯಾದಾಗ ಕಹಿಬೇವಿನ ರಸವನ್ನು ಅಜ್ಜಿಯು ದಿನಾ ಕುಡಿಸುತ್ತಿದ್ದರು. ದಾಸವಾಳದ ಎಲೆ, ಹೂವು ಜಜ್ಜಿರಸ ತೆಗೆದು ಮೈತುಂಬಾ ತಾನೇ ಪೂಸಿ, ತಿನ್ನಿಸುತ್ತಿದ್ದರು. ಹಾಗಾಗಿ ದಾಸವಾಳ ನಾನು ಮರೆಯಲಾಗುವುದಿಲ್ಲ. ಮೈ ಗಲೀಜೆಂದು ಒಂದು ದಿನವೂ ಅಂದಿರಲಿಲ್ಲ. ಕಜ್ಜಿ ಇದ್ದರೂ ಮಗಾ, ಮಗಾ ಎಂದು ಪ್ರೀತಿ ಮಾಡುತ್ತಿದ್ದಳು.
ಈ ಅಜ್ಜಿ ಅಮ್ಮನ ಜತೆ ಜಗಳವಾದಾಗ, ನಿನ್ನ ಅಮ್ಮ ಒಳ್ಳೆಯವಳೇ ನನಗಿಂತಾ ಒಳ್ಳೆಯವಳೇ, ಸಿಟ್ಟು ಜಾಸ್ತಿ ಅಷ್ಟೆ, ಎಂದು ಅಮ್ಮ ಮತ್ತು ನನ್ನ ಅಮ್ಮನ ಮಧ್ಯ ಸುಂದರ ಸಂಬಂಧವಿರಿಸುತ್ತಿದ್ದಳು. ತೇಪೇ- ರೀಪೇರಿ ಮಾಡುತ್ತಿದ್ದಳು. ನನ್ನ ಮದುವೆ ಮುಗಿಸಿಯಾದರೂ ಸಾಯಬಾರದಿತ್ತೇ?
'ನಿಂಗಮ್ಮಾ' ಎಂದೆ; 'ಅಜ್ಜಿ' ಎಂದೆ. 'ಅಜ್ಜೀ' ಎಂದೆ... ಸತ್ತ ಅಜ್ಜಿಗೆ ಅಜ್ಜಿ ಎಂದಿದ್ದು ಮೊದಲು ಹಾಗೂ ಇದೇ ಕೊನೆ. ಅಜ್ಜಿ ನಿನಗೆ ನನ್ನಲ್ಲಿ ಸಾವಿಲ್ಲ, ನೀನೆಂದರೆ ತುಂಬಾ ಪ್ರೀತಿ, ನಿನ್ನ ಜತೆ ಗಜ್ಜುಗ ಆಡುತ್ತಿದ್ದೆ. ಮನಸ್ಸಲ್ಲಿದ್ದ ಪ್ರೀತಿಯೆಲ್ಲ ಕಣ್ಣೀರಾಗಿ ಬಂತು. ನನ್ನ ಕೋಣೆಯಲ್ಲಿ ನಾನು ಅಜ್ಜಿ ಇಬ್ಬರೇ, ಆದರೆ ಅಜ್ಜಿ ಮಾತಾಡುವುದಿಲ್ಲ.
ಅಜ್ಜಿ ಜೀವ ಹೋಯಿತೆಂದು ಊರಿಗೆ ಹೋದ ಅಮ್ಮನಿಗೆ ಅಪ್ಪನಿಗೆ ಹೇಳಬೇಕೇ? ಹೇಳಬಾರದೆ? ಹೇಳದೆ ಇರಬಾರದೆ? ಹೇಳದಿದ್ದರೆ ತಪ್ಪೇ? ಅಪರಾಧವೇ, ಪ್ರಮಾದವಾದೀತೇ?
ನಿಂಗಮ್ಮ ನೀ ಎಂದರೆ ತುಂಬಾ ಇಷ್ಟ. ನಿನ್ನ ಜತೆ ನಾನು ಹರಟುತ್ತಿದ್ದೆ, ಮುದ್ದಿಸುತ್ತಿದ್ದೆ, ಗಜ್ಜುಗವಾಡುತ್ತಿದ್ದುದು ನಾನೇ ತಾನೇ? ನಿನಗೆ ನನ್ನಷ್ಟು ಯಾರೂ ಪ್ರೀತಿಸಿಲ್ಲ ಎಂಬುದೇ ನನ್ನ ಭಾವನೆ?
ಮಿಂಚು ಎರಗಿದ ಹಾಗೆ ಅಪ್ಪ ಎಂಟು ಗಂಟೆಗೆ ಫೋನಾಯಿಸಿದರು. ಅಜ್ಜಿ ಹೇಗಿದ್ದಾರೆ? ಕಾಫಿಯಾಯಿತೇ ಅಪ್ಪ... ಮೆಸೇಜ್ ಮಾಡ್ತೇನೆ ಎಂದು ಪೋನು ಕಟ್ ಮಾಡಿದೆ.
'ಅಪ್ಪ ಅಜ್ಜಿ ಮಾತಾಡುತ್ತಿಲ್ಲ' ಎಂದು ಟೈಪಿಸಿ ಮೊಬ್ಯೆಲ್‌ನಲ್ಲಿ ಮೆಸೇಜ್ ಸೆಂಡ್ ಒತ್ತಿದರೆ , ಮೆಸೇಜ್ ಸೆಂಡ್ ಆಗುತ್ತದೆ, ಆಗದಿದ್ದರೆ ಚೆನ್ನಾಗಿತ್ತು.
ಮಜ್ಜಿಗೆ ಹುಲ್ಲಿನ ಒಣಗಿದ ಕಡ್ಡಿಗಳನ್ನು ಅಜ್ಜಿಯನ್ನು ಹೂಳುವಾಗ ಹಾಕಲು ನಾನು ರೆಡಿಮಾಡ ಹೊರಟೆ.
- ಡಾ. ಪೂರ್ಣಿಮಾ ಭಟ್
drpoornimabhat@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


