ಖುಷಿ

ಒಂದು ತುತ್ತಿನ ಕಥೆ

ಕಾಗೆಗೂ ಸಂಬಂಧಿಕರಿದ್ದಾರೆ! ಆದರೆ, ಇದರ ಬಣ್ಣ ನೋಡಿಬಿಟ್ಟರೆ ಕಾಗೆಗೂ ಇದಕ್ಕೆ ಏನೂ ಸಂಬಂಧ ಇಲ್ಲ ಅಂತಲೇ ಷರಾ ಬರೆಯುತ್ತೀರ...

ಒಂದು ತುತ್ತಿನ ಕಥೆ
Published On :

ಕಾಗೆಗೂ ಸಂಬಂಧಿಕರಿದ್ದಾರೆ! ಆದರೆ, ಇದರ ಬಣ್ಣ ನೋಡಿಬಿಟ್ಟರೆ ಕಾಗೆಗೂ ಇದಕ್ಕೆ ಏನೂ ಸಂಬಂಧ ಇಲ್ಲ ಅಂತಲೇ ಷರಾ ಬರೆಯುತ್ತೀರ. ಆ 'ಮಟ' ಪಕ್ಷಿ ನೋಡಲು ಅತಿಸುಂದರ. ನೀಳ ಬಾಲ. ಅದಕ್ಕೆ ಕಪ್ಪು ತುದಿ. ಬೂದು ಬಣ್ಣದ ರೆಕ್ಕೆ. ಅದರ ಮೇಲೆ ಕಪ್ಪು-ಬಿಳಿ ಪಟ್ಟೆ. ಕಪ್ಪು ತಲೆ, ಹಳದಿ ಮಿಶ್ರಿತ ಕಂದು ಮೈ ಬಣ್ಣ. ಕತ್ತು, ಎದೆ, ಕೊಕ್ಕು ಮತ್ತು ಕಾಲುಗಳು ಕಪ್ಪಾಗಿದ್ದು, ಕಣ್ಣು ಕೆಂಪಿರುತ್ತದೆ. ಪಟಪಟನೆ ರೆಕ್ಕೆ ಬಡಿದು ಸ್ವಲ್ಪದೂರ ತೇಲುತ್ತಾ ಮರದಿಂದ ಮರಕ್ಕೆ ಹಾರುತ್ತದೆ. ಇವು ಕಾಗೆಗಳಂತೆ ಸರ್ವಭಕ್ಷಕಗಳಾಗಿದ್ದು ಹಣ್ಣಿನ ಜೊತೆಗೆ ಕೀಟ, ಓತಿಗಳು ಇದಕ್ಕೆ ಮುಖ್ಯ ಆಹಾರ. ಕೆಲ ದಿನಗಳಿಂದ ಕೊಳೆತ ಮೌಂಸವನ್ನು ತಿನ್ನುವುದಕ್ಕೂ ಇದು ಸಿದ್ಧ. ಇದು ರೈತ ಮಿತ್ರನೂ ಹೌದು, ಪರಿಸರ ಮಿತ್ರನೂ ಹೌದು.
ಬಿಳಿಕೋಗಿಲೆ, ಮರಕೋಗಿಲೆ ಅಂತಲೂ ಈ ಮಟ ಪಕ್ಷಿಗಳನ್ನು ಕರೆಯುವುದುಂಟು. ಇಂಗ್ಲಿಷಿನಲ್ಲಿ ಇದಕ್ಕೆ ಇಂಡಿಯನ್ ಟ್ರೀಪೈ, ಇದರ ಶಾಸ್ತ್ರೀಯ ಹೆಸರು ಡೆಂಡ್ರೋಸಿಟ್ಟಾ ವಾಗಬಂಡಾ. ಕರ್ನಾಟಕದ ಎಲ್ಲ ಭಾಗಗಳಲ್ಲಿ ಕಾಣಸಿಗುವ ಇವು ಕುರುಚಲು, ಪರ್ಣಪಾತಿ ಕಾಡು, ಹಳ್ಳಿಗಳಲ್ಲಿ ಸಾಮೂಹಿಕ ಇಲ್ಲವೇ ಒಂಟಿಯಾಗಿ ಜೀವಿಸುತ್ತವೆ.
ಇದರ ಮರಿ ಹಕ್ಕಿಯು ತಾನು ಕುಳಿತಲ್ಲೇ ಜೋರಾಗಿ ರೆಕ್ಕೆ ಬಡಿಯುವುದು ಹಾಗೂ ತನ್ನ ಕೊಕ್ಕಿನಿಂದ ಪುಕ್ಕಗಳನ್ನು ತೀಡಿಕೊಳ್ಳುವುದನ್ನು ಮರೆಯುವುದೇ ಇಲ್ಲ. ಪ್ರತಿ ಅರ್ಧ ತಾಸಿಗೊಮ್ಮೆ ತಾಯಿ ಪಕ್ಷಿ ಆಹಾರವನ್ನು ತಂದು ನೀಡುತ್ತದೆ. ಮರಿಹಕ್ಕಿಯು ಹೊಟ್ಟೆಬಾಕನಂತೆ ಬಾಯಿ ಅಗಲಿಸಿ, ಆಹಾರವನ್ನು ಭಕ್ಷಿಸುತ್ತದೆ.
ಆಗಸದಲ್ಲೇನಾದರೂ ಗರುಡ ಅತ್ತಿತ್ತ ಸುಳಿದಾಡುವ ದೃಶ್ಯ ಕಂಡುಬಂದರೆ, ಒಮ್ಮೆಲೆ ತಾಯಿ ಹಕ್ಕಿ ಶಿಳ್ಳೆ ಹೊಡೆಯುತ್ತದೆ. ಅದು ಜೊತೆಗಾರರಿಗೆ, ಮರಿಗೆ ಕೊಡುವಂಥ ಮುನ್ನೆಚ್ಚರಿಕೆ. ಕೂಡಲೇ ತಾಯಿ ಹಕ್ಕಿ ತನ್ನ ಮರಿಯನ್ನು ಗೂಡಿನಿಂದ ಸ್ವಲ್ಪ ದೂರದಲ್ಲಿರುವ ಎಲೆಗಳಿಂದ ಕೂಡಿದ ಪೊದೆಯೊಳಗೆ ಕರೆತಂದು ರಕ್ಷಿಸುತ್ತದೆ. ಆ ತಾಯಿ- ಮರಿಯ ಇಷ್ಟೆಲ್ಲ ಆತಂಕ- ಆನಂದ- ಔತಣಗಳನ್ನು ನಾನು ಬೆಳಗ್ಗಿನಿಂದ ಸಂಜೆಯವರೆಗೆ ಕಾದು ಕ್ಯಾಮೆರಾದಲ್ಲಿ ಸೆರೆಹಿಡಿದೆ. ಬಹುಶಃ ಮರಿ ಹಕ್ಕಿಯ ಹೊಟ್ಟೆ ತುಂಬಿತೇನೋ ಎಂದು ಅಂದುಕೊಳ್ಳುತ್ತಿರುವಾಗಲೇ ನನಗೆ ಹಸಿವು ಶುರುವಾಗಿತ್ತು!


- ಚಿತ್ರ-ಲೇಖನ: ಶಶಿಧರ ಹಿರೇಮಠ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.