ಲತೆ ಜತೆ ಹಂಸ
ಪರಿಚಯ ಆಗಿ ಎರಡು ವರ್ಷವೂ ಆಗಿರಲಿಲ್ಲ. ಆದರೆ, ಸುಮಧುರ ಸ್ನೇಹ ನಮ್ಮ ನಡುವೆ ಅಂಕುರಿಸಿತ್ತು. ಅದೊಂದು ದಿನ ...

-ಲತಾ ಹಂಸಲೇಖಾ
ಪರಿಚಯ ಆಗಿ ಎರಡು ವರ್ಷವೂ ಆಗಿರಲಿಲ್ಲ. ಆದರೆ, ಸುಮಧುರ ಸ್ನೇಹ ನಮ್ಮ ನಡುವೆ ಅಂಕುರಿಸಿತ್ತು. ಅದೊಂದು ದಿನ ನೇರವಾಗಿ ನನ್ನನ್ನು ಅವರು ಕೇಳಿಯೇಬಿಟ್ಟರು... 'ನಾನು ನಿನ್ನನ್ನ ಮದ್ವೆ ಮಾಡ್ಕೋಬೇಕು ಅಂತಿದ್ದೀನಿ. ಆಗ್ತೀಯಾ?' ಅಂತ. ತಕ್ಷಣಕ್ಕೆ ನನಗೇನು ಹೇಳಬೇಕು ಅಂತ ಅನ್ನಿಸದಿದ್ದರೂ, ಅವರು ಮೊದಲೇ ನನಗೆ ಇಷ್ಟವಾಗಿದ್ದರಿಂದ ನಾನು ಅದಕ್ಕೆ ಆಯ್ತು ಅಂದೆ. ಕೇವಲ ಎರಡು ವರ್ಷದ ಹಿಂದೆ ಹಂಸಲೇಖ ಎನ್ನುವ ವಂಡರ್‌ಫುಲ್ ವ್ಯಕ್ತಿಯೊಡನೆ ಸ್ನೇಹ ಸಂಪಾದಿಸುವ ಅವಕಾಶ ಪಡೆದಿದ್ದ ನನಗೆ, ಆ ಸ್ನೇಹ, ಮುಂದೆ ಪ್ರೇಮವಾಗಿ ಪರಿವರ್ತನೆಗೊಂಡು ನಾನವರನ್ನು ಮದ್ವೆ ಆಗ್ತೀನಿ ಅಂತ ಅವತ್ತಿನ ಮಟ್ಟಿಗೆ ಕನಸು ಮನಸಿನಲ್ಲೂ ಎಣಿಸಿರಲಿಲ್ಲ. ಇಲ್ಲಿಗೆ ನಮ್ಮಿಬ್ಬರ ಸ್ನೇಹವಾಗಿ 36 ವರ್ಷಗಳೇ ಸಂದಿವೆ.
ಅದು ಬಹುಶಃ 1976 ಇರಬೇಕು. ಅವತ್ತೊಂದು ದಿನ ಹಂಸಲೇಖ ಅವರು ತಮ್ಮ ಅಣ್ಣನೊಂದಿಗೆ ನಮ್ಮನೆಗೆ ಬಂದಿದ್ರು. ಅವರ ಕುಟುಂಬ ನಡೆಸುತ್ತಿದ್ದ ಗಾನ ಶಾರದಾ ಆರ್ಕೆಸ್ಟ್ರಾದಲ್ಲಿ ಹಾಡಲು ಒಬ್ಬ ಗಾಯಕಿ ಬೇಕು. 'ನೀನು ನಮ್ಮ ಆರ್ಕೆಸ್ಟ್ರಾದಲ್ಲಿ ಹಾಡುತ್ತೀಯನಮ್ಮ' ಅಂತ ಕೇಳಿದ್ರು. ಅವತ್ತೇ ಫಸ್ಟು... ನಾನು ಹಂಸಲೇಖರನ್ನು ನೋಡಿದ್ದು. ನನಗಾಗ 16 ವರ್ಷ. 10ನೇ ಕ್ಲಾಸ್ ತನಕ ಓದಿದ್ದೆ. ಅಲ್ಲಲ್ಲಿ ಸಮಾರಂಭಗಳಲ್ಲಿ ಹಾಡಿ ಕೊಂಚ ಜನಪ್ರಿಯತೆ ಗಳಿಸಿದ್ದರಿಂದಾಗಿ, ನನ್ನನ್ನು ಗಾನ ಶಾರದಾಗೆ ಹಾಡುವಂತೆ ಆಹ್ವಾನ ಕೊಟ್ಟಿದ್ದರು.
ಸರಿ. ಅವರ ಆಹ್ವಾನದ ಮೇರೆಗೆ ನಾನು ಗಾನ ಶಾರದಾ ಆರ್ಕೆಸ್ಟ್ರಾ ಸೇರಿಕೊಂಡೆ. ನನಗೆ ಹಾಡಲು ಗೊತ್ತಿತ್ತು. ಆದರೆ, ಅಷ್ಟು ಶಾಸ್ತ್ರೀಯವಾಗಿ ಹಾಡುವುದು ಗೊತ್ತಿರಲಿಲ್ಲ. ಗಾನ ಶಾರದಾ ಸೇರಿದ ಮೇಲೆ, ಅಲ್ಲಿಂದ ಮುಂದಿನ
ಎರಡು ವರ್ಷದವರೆಗೆ ನನ್ನ ಗಾಯನದಲ್ಲಿ ಇದ್ದ ಲೋಪಗಳನ್ನು ತಿದ್ದಿತೀಡಿದ ಹಂಸಲೇಖ ನನ್ನನ್ನು ಉತ್ತಮ ಗಾಯಕಿಯಾಗಿ ರೂಪಿಸಿದರು. ಆ ಮಟ್ಟಿಗೆ ಗುರುವೂ ಆಗಿಬಿಟ್ಟರು.
ಸ್ವಲ್ಪ ಭಯ ಜಾಸ್ತಿ...
ಅವರಿಂದ ತಿದ್ದಲಾಗದ ಒಂದೇ ಒಂದು ಲೋಪ ಅಂದರೆ ಅದು ನನ್ನ ಸ್ಟೇಜ್ ಫಿಯರ್. ಈಗಲೂ ಅಷ್ಟೇ. ಯಾವುದಾದರೂ ಸಮಾರಂಭದಲ್ಲಿ ಹಾಡಲು ನಿಂತರೆ ನನಗೆ ಭಯ. ಅವರು ಎದುರಿಗೆ ಇದ್ದಾಗಲಂತೂ ನನಗೆ ಸ್ವರವೇ ಹೊರಡದು. ಹಂಸಲೇಖ ಬೆಂಗಳೂರಿನವರು. ನಾನೂ ಬೆಂಗಳೂರಿನವಳೇ. ಬಸವನಗುಡಿಯಲ್ಲಿ ಈಗಿನ ಸಂಸದ ಅನಂತ ಕುಮಾರ್ ಮನೆ ಇದೆಯಲ್ಲಾ... ಆ ಮನೆಯ ಎದುರುಗಡೆ ಮನೆಯಲ್ಲೇ ನಾನು ಹುಟ್ಟಿದ್ದು. ಅದು ನಮ್ಮಜ್ಜಿಯ ಮನೆ. ಅವರು ವೈದ್ಯೆ. ಅವರ ಹೆಸರು ಡಾ. ಜೀವರತ್ನಮ್ಮ. ನಮ್ಮ ಕುಟುಂಬದಲ್ಲಿ ವೈದ್ಯರೇ ಹೆಚ್ಚು. ನಮ್ಮ ತಂದೆ ತುಂಬಾ ಆಸ್ತಿವಂತರು. ಮೂಲತಃ ಹೊಳೆನರಸೀಪುರದವರು ನಾವು. ನಮ್ಮ ತಂದೆ ಹೆಸರು ಮಿತ್ತಾನಂದ ಕುಮಾರ್, ತಾಯಿ ಶಾರದಮ್ಮ. ನಾನು ಮೊದಲನೇ ಮಗಳು. ನನ್ನ ಹಿಂದೆ ಒಬ್ಬ ತಂಗಿ ಇದ್ದಾಳೆ.
ಇನ್ನು, ನನ್ನ ಹಂಸಲೇಖ ಮದುವೆ ನಡೆದಿದ್ದೇ ಒಂದು ಕಥೆ. ಅವರು ಮ್ಯಾಂಡೋಲಿನ್ ಅನ್ನು ತುಂಬಾ ಚೆನ್ನಾಗಿ ನುಡಿಸುತ್ತಿದ್ದರು. ಎಂಥವರನ್ನೂ ಮೋಡಿ ಮಾಡುವ ಆ ಸಂಗೀತ ನನಗಿಷ್ಟ. ಅವರಲ್ಲಿನ ಕಲೆಗೆ ನಾನು ಮಾರುಹೋಗಿದ್ದೆ. ನನಗರಿವಿಲ್ಲದಂತೆ ಅವರನ್ನು ಇಷ್ಟಪಡುತ್ತಿದ್ದೆ. ಅವರಂದ್ರೆ ಅದೇನೋ ಇಷ್ಟ. ಅವರಿಗೂ ಹಾಗೇ ಅನ್ನಿಸಿರಬೇಕು. ಸರಿ... ಒಂದು ದಿನ ನನ್ನ ಬಳಿಗೆ ಬಂದು ಮದ್ವೆ ಪ್ರಸ್ತಾಪ ಎತ್ತಿದರು. ನಾನೂ ಒಪ್ಪಿದೆ.
ನಮ್ಮ ಮನೆಗೆ ಹೆಣ್ಣು ಕೇಳಲು ಬಂದಿದ್ದಾಗ, 'ನಿನಗೇನು ಬರುತ್ತೆ?' ಅಂತ ನಮ್ಮ ಮನೆಯಲ್ಲಿ ಕೇಳಿದ್ದಕ್ಕೆ ಅವರು 'ಚೆನ್ನಾಗಿ ಮ್ಯಾಂಡೋಲಿನ್ ನುಡಿಸಬಲ್ಲೆ' ಎಂದು ಹೇಳಿದರಲ್ಲದೆ, ಬ್ಯಾಗಿನಲ್ಲಿದ್ದ ಮ್ಯಾಂಡೋಲಿನ್ ಹೊರತಗೆದು ನುಡಿಸಿಯೇಬಿಟ್ಟರು. ನನ್ನ ಅಮ್ಮನಿಗೆ ಸಂಗೀತ ಅಂದ್ರೆ ಪಂಚಪ್ರಾಣ. ಅವರ ಸಂಗೀತ ಮೋಡಿಗೆ ಮರುಳಾದ ಅಮ್ಮ, ನನ್ನನ್ನು ಕೊಡಲು ಒಪ್ಪಿಯೇಬಿಟ್ಟರು. ನಮ್ಮಿಬ್ಬರ ಮದ್ವೆ ನಡೆದಿದ್ದು ಧರ್ಮಸ್ಥಳದಲ್ಲಿ. ಅದೊಂದು ಸರಳ ವಿವಾಹ.
ಮದುವೆ ನಂತರ...
ನಮ್ಮದು ಸುಖೀಸಂಸಾರ. ಆದರೆ, ನಮ್ಮ ನೆಮ್ಮದಿಗೆ ಭಂಗವಿರಲಿಲ್ಲ. ನಮ್ಮ ಮದುವೆ ಆಗುವ ಹೊತ್ತಿಗೆ ಹಂಸಲೇಖ ತಮ್ಮದೇ ಸ್ವಂತದ 'ವಿವೇಕ ವೇದಿಕೆ' ನಾಟಕ ಕಂಪನಿ ಕಟ್ಟಿದ್ದರು. ಆ ಟ್ರೂಪ್‌ನೊಂದಿಗೆ ಕರ್ನಾಟಕ ಸುತ್ತಾಡಿದೆವು. ಅದರ ನಡುವೆಯೇ ನಮ್ಮ ಮದುವೆಯಾಗಿದ್ದು.
ಮರೆಯಲಾಗದ ಬಾಂಧವ್ಯ
ನಮ್ಮದು ಸುಖೀ ದಾಂಪತ್ಯ. ಮೊದಮೊದಲಿಗೆ ಕಷ್ಟಗಳು ಜಾಸ್ತಿಯಿದ್ದರೂ, ನೆಮ್ಮದಿಗೇನೂ ಕೊರತೆಯಿರಲಿಲ್ಲ. ಕಲಾವಿದರ ಕುಟುಂಬವಾಗಿದ್ದರಿಂದಲೋ ಏನೋ ನಮ್ಮ ನಡುವೆ ಕಲೆಗೆ ಮಾತ್ರ ಪ್ರಾಶಸ್ತ್ಯವಿದ್ದಿದ್ದರಿಂದ ಇಗೋ ಪ್ರಾಬ್ಲಂ ನಮ್ಮನ್ನು ಕಾಡಲೇ ಇಲ್ಲ.
ಇಗೋ ಅಂದ್ರೆ...
ಇಗೋ ಅಂದ್ರೇನೇ ಅವರಿಗೆ ಗೊತ್ತಿಲ್ಲ. ಈ ವಿಚಾರದಲ್ಲಿ ನಾನು ಅದೃಷ್ಟವಂತೆ. ಇದಕ್ಕೊಂದು ಉದಾಹರಣೆ ಹೇಳ್ತೀನಿ. ನಿಮಗೂ ಗೊತ್ತಿರುವಂತೆ ನಾನೊಬ್ಬ ಗಾಯಕಿ. ಅವರು ಮಾಡುವ ಪ್ರತಿ ಚಿತ್ರದಲ್ಲೂ ನನ್ನಿಂದ ಒಂದಾದರೂ ಹಾಡು ಹಾಡಿಸಬೇಕು ಅಂತ ನನಗೆ ಆಸೆಯಿತ್ತು. ಅವರು ಕಂಪೋಸ್ ಮಾಡುತ್ತಿದ್ದ ಕೆಲವೊಂದು ಟ್ಯೂನ್ ಕೇಳಿದಾಗಲಂತೂ, 'ಈ ಹಾಡು ನಾನೇ ಹಾಡ್ತೀನಿ' ಅಂತ ದುಂಬಾಲು ಬೀಳುತ್ತಿದ್ದೆ. ಆದರೆ, ಅವರು ಕೆಲಸದ ವಿಷಯದಲ್ಲಿ ತುಂಬಾ ಪರ್ಫೆಕ್ಟ್. ಅವರಿಗೆ ಯಾರು ಆ ಹಾಡಿಗೆ ಸೂಕ್ತ ಅನ್ನಿಸುತ್ತೋ ಅವರಿಂದಲೇ ಆ ಹಾಡನ್ನು ಹಾಡಿಸುತ್ತಿದ್ದರು. ಆಗ ನಾನು ಸ್ವಲ್ಪ ಬೇಸರಪಟ್ಟುಕೊಂಡಿದ್ದಿದೆ. ಇದನ್ನೇ ನಾವು ದೊಡ್ಡ ಸಮಸ್ಯೆ ಅಂತ ಪರಿಗಣಿಸಿದ್ದಿದ್ದರೆ ನನ್ನ ಹಾಗೂ ಅವರ ನಡುವೆ ಕಂದಕ ಸೃಷ್ಟಿಯಾಗುತ್ತಿತ್ತು. ಆದರೆ, ನಾನೇ ಅದಕ್ಕೆ ಅವಕಾಶ ಕೊಡಲಿಲ್ಲ. ಕೇವಲ ನನ್ನ ಆಸೆಗಳಿಂದ ನನ್ನ ಹಾಗೂ ಅವರ ನಡುವಿನ ಮಧುರವಾದ ಬಾಂಧವ್ಯವನ್ನು ಹಾಳುಗೆಡವಿಕೊಳ್ಳಲು ನನಗಿಷ್ಟವಿರಲಿಲ್ಲ. ಹಾಗಾಗಿ, ಅವರು ಹಾಡಿಸಿದರೆ ಹಾಡಿಸಲಿ, ಬಿಟ್ಟರೆ ಬಿಡಲಿ... ಅವರ ಕೆಲಸವನ್ನು ಗೌರವಿಸುತ್ತೇನೆ ಎಂಬ ತೀರ್ಮಾನಕ್ಕೆ ಬಂದೆ. ಸಂಕಷ್ಟದಲ್ಲಿದ್ದಾಗಲೂ ನಾನು ಅವರ ನೆರವಿಗಿರುತ್ತಿದ್ದೆ. ವಿವೇಕ ರಂಗ ಬೆಂಕಿಗೆ ಆಹುತಿಯಾದಾಗ, ನಾನು ಅವರ ಬೆನ್ನಿಗೆ ನಿಂತೆ. ಆ ಕಾಲಕ್ಕೇ ಲಕ್ಷಾಂತರ ರು. ನಷ್ಟ ಮಾಡಿಕೊಂಡರೂ, ನಮ್ಮಲ್ಲಿ ಕಲೆಯಿದೆ. ನಮ್ಮ ಬದುಕನ್ನು ನಾವು ಮತ್ತೆ ಕಟ್ಟಿಕೊಳ್ಳಬಲ್ಲೆವು ಎಂದು ಅವರಿಗೆ ಧೈರ್ಯ ಹೇಳಿದ್ದೆ. ಇದೊಂದೇ ಅಲ್ಲ, ಚಿತ್ರರಂಗಕ್ಕೆ ಬಂದ ಮೇಲೆ ಕೆಲವೊಂದು ವಿವಾದಗಳು ಬೆನ್ನತ್ತಿದಾಗಲೂ ಅವರ ಆತ್ಮಸ್ಥೈರ್ಯ ನೀಡುವಲ್ಲಿ ನಾನು ನಿರತಳಾಗುತ್ತಿದ್ದೆ. ಅವರೂ, ಮಹಾ ಧೈರ್ಯವಂತರು. ಅವರೂ, ಚಿತ್ರರಂಗದಲ್ಲಿ ಇದೆಲ್ಲಾ ಕಾಮನ್. ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳೋದು ಬೇಡ ಎನ್ನುತ್ತಿದ್ದರು.
ಇಷ್ಟವಾಗದ್ದು...
ಅವರು ತುಂಬಾ ಉತ್ಸಾಹಿ. ಯಾವುದಾದರೂ ಐಡಿಯಾ ಹೊಳೆದರೆ, ಅದನ್ನು ಬೇಗನೆ ಎಲ್ಲರ ಮುಂದೆ ಹೇಳಿಕೊಳ್ಳುತ್ತಾರೆ. ಆದರೆ, ಇದರಿಂದ ಅನಾನುಕೂಲವಾಗಿದ್ದೇ ಹೆಚ್ಚು. ಇವರ ಐಡಿಯಾವನ್ನು ಯಾರೋ ಕದ್ದು, ಇವರು ಅದನ್ನು ಇಂಪ್ಲಿಮೆಂಟ್ ಮಾಡುವ ಬದಲೇ ಬೇರೆಯವರು ಅದನ್ನು ಕಾಪಿ ಹೊಡೆಯುತ್ತಿದ್ದರು. ಹಾಗೆಲ್ಲಾ ಹೇಳಿಕೊಳ್ಳಬೇಡಿ ಎಂದರೂ, ಅವರ ಉತ್ಸಾಹ ಅವರಿಂದ ಬಾಯಿ ಬಿಡಿಸುತ್ತಿತ್ತು. ಇದೊಂದೇ ನನಗೆ ಅವರ ಇಷ್ಟವಾಗದ ಗುಣ.
ದೇಸೀ ಕಡೆ ವಾಲಿದ್ದು ಬೇಸರ ತಂದಿಲ್ಲ...
ಚಿತ್ರರಂಗದ ಪೀಕ್ ಲೆವೆಲ್‌ನಲ್ಲಿದ್ದಾಗಲೇ ಅವರು ದೇಸಿ ಕಡೆಗೆ ಹೊರಳಿದ್ದು ನನಗೇನೂ ಬೇಸರ ತರಿಸಿಲ್ಲ. ಕ್ರಿಕೆಟ್ ಆಟಗಾರನೊಬ್ಬ ಫಾರ್ಮ್‌ನಲ್ಲಿದ್ದಾಗಲೇ ನಿವೃತ್ತಿ ಘೋಷಿಸುವುದು ಹೇಗೆ ಘನತೆ ತರುವ ವಿಷಯವೋ ಹಾಗೆಯೇ ಇವರೂ ಕೊಂಚ ದೂರ ಸರಿದರು. ಬಡಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡುವ ಉದ್ದೇಶದಿಂದ ಶಾಲೆ ಆರಂಭಿಸಿದಾಗ, ಇಂಥ ಸಾರ್ಥಕ ಕೆಲಸ ಮಾಡಿದ್ದಕ್ಕಾಗಿ ಖುಷಿಯಿಂದಲೇ ನಾನು ಅವರೊಂದಿಗೆ ಕೈ ಜೋಡಿಸಿದೆ.
ನಾನು ಅವರ ನೆರಳು
ಅವರ ನೆರಳಂತೆ ನಾನು ಬದುಕಿದೆ. ಅವರ ಇಷ್ಟಕ್ಕೆ ವಿರುದ್ಧವಾಗಿ ಯಾವತ್ತೂ ನಡೆದಿಲ್ಲ. ಪ್ರತಿಯೊಂದನ್ನೂ ಅವರನ್ನು ಕೇಳಿಯೇ ಮಾಡುತ್ತೇನೆ. ಒಂದೊಮ್ಮೆ ಲಹರಿ ಕಂಪನಿಯವರು ಇವರಿಗೆ ನೀಡಬೇಕಿದ್ದ ಹಣ ತಂದು ಕೊಟ್ಟಾಗ, ನಾನು ನಿರಾಕರಿಸಿದ್ದೆ. ಹಂಸಲೇಖ ಹೇಳಿದರಷ್ಟೇ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದೆ. ಲ್ಯಾಂಡ್‌ಲೈನ್‌ಗೆ ಹಂಸಲೇಖರೇ ಫೋನಾಯಿಸಿ, ದುಡ್ಡು ತಗೋ ಅಂದಾಗ ತಗೆದುಕೊಳ್ಳುತ್ತಿದ್ದೆ. ಅವರಿಂದ ಫೋನು ಬಂದಿಲ್ಲ ಅಂದ್ರೆ, ನಾನು ಸುತರಾಂ ದುಡ್ಡು ಮುಟ್ಟುತ್ತಿರಲಿಲ್ಲ.
ಇಷ್ಟವಾಗುವ ಗುಣ
ಅವರೇ ನನಗಿಷ್ಟ ಆಗಿರುವುದರಿಂದ ಅವರ ಎಲ್ಲ ಗುಣಗಳೂ ನನಗಿಷ್ಟ. ಅವರು ಅಪ್ರತಿಮ ಕರುಣಾಮಯಿ. ಆ ಗುಣದಿಂದಲೇ ಅವರ ಶಿಷ್ಯ ಪರಂಪರೆ ಚಿತ್ರರಂಗದಲ್ಲಿ ಬೆಳೆಯಿತು. ಕೆಲಸದಲ್ಲಿ ಅವರಿಗೆ ಅಪಾರ ಶ್ರದ್ಧೆ. ಹಾಡು ರೆಕಾರ್ಡಿಂಗ್ ಇದ್ದಾಗ, ಎಲ್ಲರಿಗಿಂತ ಮುಂಚೆಯೇ ಸ್ಟುಡಿಯೋಗೆ ಹೋಗಿ, ಹಾರ್ಮೋನಿಯಂ ಹಿಡಿದು ಕೂರೋರು. ಆನಂತರ, ಉಳಿದ ಮ್ಯೂಸಿಷಿಯನ್ಸ್ ಬರುತ್ತಿದ್ದರು. ರಾತ್ರಿ ಎರಡೂವರೆ ಗಂಟೆವರೆಗೂ ಸ್ಟುಡಿಯೋದಲ್ಲಿ ಹಾಡು ಕಂಪೋಸಿಂಗ್ ಮಾಡಿಕೊಂಡಿರೋರು. ಮಧ್ಯರಾತ್ರಿಯಲ್ಲಿ ಮನೆಗೆ ಬರೋರು. ನಾವೂ ಎದ್ದಿರುತ್ತಿದ್ದೆವು. ಆಗ, ಕ್ಯಾಸೆಟ್ ತಂದು ಬಂದು ಟ್ಯೂನ್ ಅನ್ನು ನಮಗೆ ಕೇಳಿಸಿ, ಆನಂತರವಷ್ಟೇ ತೃಪ್ತಿಯಿಂದ ಮಲಗುತ್ತಿದ್ದರು. ಅವರ ಈ ಶ್ರದ್ಧೆಯೇ ನನಗೆ ಇಷ್ಟವಾಗಿರೋದು.
- ನಿರೂಪಣೆ: ಚೇತನ್ ಓ.ಆರ್
.chethan.media@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


