ಟ್ವೆಂಟಿ ಸಲಗ
ಮೇಲಿದ್ದವ ಮಹಾ ಪಾಕಡ. ಒಂದಿಷ್ಟು ಪ್ರಾರ್ಥನೆಗಳಿಗೆ, ಕನಸುಗಳಿಗೆ ಸೀಲನ್ನೇ ಒತ್ತುವುದಿಲ್ಲ. ಉಬ್ಬಿದ ರವಂಡು ಹೊಟ್ಟೆಯ ಆ ಹೆಣ್ಣು ...

ಮೇಲಿದ್ದವ ಮಹಾ ಪಾಕಡ. ಒಂದಿಷ್ಟು ಪ್ರಾರ್ಥನೆಗಳಿಗೆ, ಕನಸುಗಳಿಗೆ ಸೀಲನ್ನೇ ಒತ್ತುವುದಿಲ್ಲ. ಉಬ್ಬಿದ ರವಂಡು ಹೊಟ್ಟೆಯ ಆ ಹೆಣ್ಣು ಮಾತ್ರ ಕಣ್ಣಮುಂದೆ ಖಾಲಿ ಹಾಳೆಗಳ ಸಮಾವೇಶ ಕರೆದಿರುತ್ತಾಳೆ. ಮಾಧ್ಯಮದವರಿಗೆ ಲೆಕ್ಕವೇ ಬೇಕಾ? ಬರೆದುಕೊಳ್ಳಿ, ಸಾವಿರಾರು. ರವಿವರ್ಮ, ಲಿಯನಾರ್ಡೋ ಡ ವಿನ್ಸಿಯರು ಪಾರ್ಟ್ನರ್‌ಶಿಪ್ಪಿನಲ್ಲಿ ಚಿತ್ರ ಬಿಡಿಸಿದರೂ ಅದರಲ್ಲಿ ಅರ್ಧದಷ್ಟು ಹಾಳೆಗಳನ್ನು ಮುಗಿಸುವ ಹೊತ್ತಿಗೆ ಕೈ- ಕಣ್ಣುಗಳೇ ರಿಟೈರ್‌ಮೆಂಟು ಘೋಷಿಸುತ್ತವೆ. ಕಂಡ ಕನಸುಗಳಿಗೆಲ್ಲ ಚಿತ್ರಬಿಡಿಸುವುದಿದೆಯಲ್ಲ, ಅದು ಆಗದ ಕೆಲಸ. ರಜನೀಕಾಂತನೇ ಟ್ರೈ ಮಾಡಿದ. 'ಆಗಲಿಲ್ಲ' ಅಂದರಪ್ಪ ಸ್ವತಃ ತಮಿಳರು!
ಆ ತುಂಬು ಗರ್ಭಿಣಿ ಚಿತ್ರ ಬಿಡಿಸುತ್ತಾಳೆ; ಬಣ್ಣ ತುಂಬಿದ ಬಕೆಟ್ಟು, ಕುಂಚದ ರಾಕೆಟ್ಟೂ ಇಟ್ಟುಕೊಳ್ಳದೆ. ಹೊಟ್ಟೆಗೊಂದು ಕತ್ತರಿ ಬಿದ್ದರೆ ಗೋಣು ಹೊರಹಾಕುವ ಆ ಮಗ ಅಮೀರ್‌ಖಾನೇ ಆಗಿರುತ್ತಾನೆಂದು ಮೊನ್ನೆ 'ಧೂಮ್ 3' ನೋಡಿ ಕನವರಿಸಿದ್ದಳು. ಆಚೆಮೊನ್ನೆ ಕೋಹ್ಲಿಯ ರನ್ನುಗಳು ನೂರಾದಾಗ, ನನ್ನ ಮಗ ಹಾಗೇ ಇರುತ್ತಾನೆಂದು ಅದೇ ಹಳೇ ಟೆಸ್ಟನ್ನೇ ಧಾರಾವಾಹಿ ಮರೆತೂ ಹಾಕಿಕೂತಳಪ್ಪ. ಇತ್ತೀತ್ಲಗೆ... 'ಆಮ್ ಆದ್ಮಿ'ಯ ಕೇಜ್ರಿವಾಲನೇ ಮಗನಾಗಿ ಹುಟ್ಟಿಬರಲಿಯೆಂದು ಮೂಲೆಯಲ್ಲಿ ಬೆನ್ನೂರಿನಿಂತ ಪೊರಕೆಯ ತಲೆಗೆ ಊದುಕಡ್ಡಿ ಹಚ್ಚಿಟ್ಟಳು. ಅವಳ ಭಕುತಿಗೆ, ಅದರ ರೀತಿಗೆ ಶರಣು.
ಮಹಾತಾಯಿ ಹಾರುವ ಆಸೆಗಳಿಗೂ ರೆಕ್ಕೆ ಅಂಟಿಸುತ್ತಾಳೆ. ಹುಟ್ಟುವ ಮಗ ಅಂಬೆಗಾಲಿಡುವುದು ಬೇಡ. ಪ್ಯಾಡು ಕಟ್ಟಿ ಕ್ರೀಸಿನ ಮೇಲೆ ನಡೆದರೆ ಸಾಕು. ಕುಂಯ್ಯನೆ ಅಳುವುದು ಬೇಡ. ಮೈಕು ಹಿಡಿದು ಭಾಷಣ ಬಿಗಿಯಬೇಕು. ಹೊತ್ತೊತ್ತಿಗೆ ಸೆರೆಲ್ಯಾಕ್ ಹಾಕುವುದು ಬೇಡ. ಅವನು 'ಅಪೌಷ್ಟಿಕತೆಯನ್ನು ತೊಲಗಿಸೋಣ'- ಜಾಹೀರಾತಿನ ರಾಯಭಾರಿ ಆಗಬೇಕು.
ಇದಲ್ಲವೇ... ದುರಂತ ಇಂಟೂ ದುರಂತ!? ಆ ಕನಸುಗಳಿಗೂ ಬಾಲ್ಯವಿಲ್ಲವಲ್ಲ. ಅವಕ್ಕೆ ಟೀನೇಜೇ ಇಲ್ಲವಲ್ಲ. ಸಿಂಬಳವನ್ನು ಮರೆಯದೆ ಚಡ್ಡಿಗೆ ಒರೆಸಿಕೊಳ್ಳುವ ನಿಯತ್ತಿನ ಮಗ, ಕಾಸು ಕೊಡದ ಅಪ್ಪನ ಜೇಬಿಗೆ ಬ್ಲೇಡಿಡುವ ಕೇಡಿ ಮಗ, ವ್ಹಿಸ್ಪರ್ ತರಲುಕೊಟ್ಟ ದುಡ್ಡಲ್ಲೇ ಸಿನಿಮಾ ನೋಡಿ ಮೂರನೇ ದಿನ ಮನೆಗೆ ಬಂದ ತರಲೆ ನನ್ಮಗ, ದೇವರಿಗೆ ದೀಪ ಹಚ್ಚಲಿಟ್ಟ ಕೊನೆಯ ಬೆಂಕಿಕಡ್ಡಿಯಲ್ಲೂ ಸಿಗರೇಟು ಹೊತ್ತಿಸಿ ಅಪ್ಪನಿಂದ ಒದೆ ತಿನ್ನುವ ಕ್ರಿಮಿನಲ್ ಮಗ... ಎಲ್ಲರೂ ಆ ಕನಸುಗಳಲ್ಲಿ ಕಾಣೆಯಾಗಿದ್ದಾರೆ. ಹತ್ತಿರದಲ್ಲಿ ಇಲ್ಲೆಲ್ಲಿ ಇದೆ ಠಾಣೆ?
'ಇಡೀ ದೇಶವೇ ಇಪ್ಪತ್ತರ ಮೇಲಿದೆ...' ಎಂದು ಜೂಹಿ ಚಾವ್ಲಾ ಕೈಯಲ್ಲಿ ಶಾಂತಿ'ಕ್ರಾಂತಿ' ಗೀತೆ ಹಾಡಿಸಿದ ಹಂಸಲೇಖರೂ ಹದಿಹರೆಯದವರನ್ನು ತೆಗೆದುಕೊಂಡಿದ್ದು ಲೈಟಾಗಿ. ಒಂದರಿಂದ 20ನ್ನು ಗಣಿತದಿಂದ ಡಿಲಿಟ್ಟು ಮಾಡಬಲ್ಲ ಆರ್ಯಭಟ ಮಾತ್ರ ಹುಟ್ಟಿಲ್ಲವಷ್ಟೇ. ಅಷ್ಟರಮಟ್ಟಿಗೆ ಟೀನೇಜಿಗರು ಬಚಾವು! ಜಗತ್ತು ಹೀಗೆಯೇ ದೊಡ್ಡ ಕನಸುಗಳ ಶಿಕಾರಿಯಲ್ಲಿರಲಿ... 20ರೊಳಗಿನವರಿಗೆ ಖಂಡಿತ ಅದು ಬೇಜಾರು ತರದು. ಅಲ್ಲೂ ಒಂದು ಪುಟ್ಟ ಜಗತ್ತಿದೆ. ತಮಾಷೆ, ತಪ್ಪು, ಮೋಜಿಗಿಂತ ಮಿಗಿಲಾಗಿ ಅಲ್ಲಿ ಸೂಕ್ಷ್ಮ ಪಾಠಗಳಿವೆ. 20ರ ನಂತರ ಹೊಣೆ, ಡ್ಯೂಟಿ, ಮದುವೆ, ಟೆನ್ಷನ್ನು, ಬಿಪಿ, ಶುಗರ್ರು ಇದ್ದಿದ್ದೇ. ಈ ಎಲ್ಲದರಿಂದ ದೂರ ಇರುವ ಪ್ರಕ್ರಿಯೆಯೇ ಚೆಂದ. ಅದು ಟೀನೇಜಿಗರ ಪಾಲಾಗಿದೆ. ಆ ನಡುವೆ ಈ 20 ಅಂಶಗಳನ್ನೂ ಜಾರಿಗೊಳಿಸಿಬಿಟ್ಟರೆ ಲೈಫು ಟ್ವೆಂಟಿ ಟ್ವೆಂಟಿಯ ಸಿಕ್ಸರಿಗಿಂತ ಸೊಗಸು.
ಮೊಬೈಲ್ ಇಲ್ಲದೆ ಒಂದು ವಾರ...
'ರಿಂಗ್'ರೋಡಿಂದ ಹೊರಬರಲೇಬೇಕು... ವಾರದ ಮಟ್ಟಿಗಾದರೂ. ಕೇವಲ ಮೊಬೈಲಲ್ಲ, ಲ್ಯಾಪ್‌ಟಾಪು, ಐಪ್ಯಾಡು ಯಾವುದೂ ಬೇಡ. ನಿಮ್ಮ ಪಾಡಿಗೆ ನೀವಷ್ಟೇ. ನೆಟ್‌ವರ್ಕೇ ನಿಂತ ಜಗತ್ತಲ್ಲಿ ನೆಟ್ಟಗೆ ನಿಲ್ಲುವುದು ಹೇಗೆಂಬುದಕ್ಕೆ ಇದೊಂದು ರಿಹರ್ಸಲ್. ಮೆಸೇಜುಗಳೆಲ್ಲ ಮಲಗಿದ ಮೇಲೆ ಮಾಡಿದಂಥ ನಿದ್ದೆಗೂ ಮಿಗಿಲಾದ ತೃಪ್ತಿ ಇಲ್ಲಿರುತ್ತದೆ. ಒಂದಷ್ಟು ಕಿರಿಕಿರಿ ತಪ್ಪುತ್ತದೆ. ಏಕಾಂತ ಸಿಗುತ್ತದೆ. ಹೃದಯದ ಟವರೊಳಗೆ ಪಾರಿವಾಳ ಮಾತ್ರ ಕೂತಿದೆ ಎನ್ನುವಷ್ಟು ಏಕಾಗ್ರತೆ ಪ್ರಾಪ್ತಿಯಾಗದಿದ್ದರೆ ಬಾಬಾ ರಾಮ್‌ದೇವ್ ಮೇಲಾಣೆ!
ಲವ್‌ಲೆಟರ್ ಬರೀರಿ... ಆದ್ರೆ ಕೊಡ್ಬೇಡಿ!
ನಿಮ್ಮ ಸಂಯಮಕ್ಕೆ ಇದೊಂದು ಸವಾಲು. ನೀವು ಅತಿಯಾಗಿ ಹಚ್ಚಿಕೊಂಡ ಸಂಗಾತಿಯನ್ನು ನೆನೆದು ಒಂದು ರೊಮ್ಯಾಂಟಿಕ್ ಪತ್ರ ಬರೆಯಿರಿ. ಅದನ್ನು ಅವರಿಗೆ ತಲುಪಿಸುವ ಧೈರ್ಯವಿದ್ದರೂ ಹಾಗೆ ಮಾಡಬೇಡಿ. ಇದೊಂಥರ ಪ್ರೀತಿಯನ್ನೇ ಗಂಟುಮೂಟೆ ಕಟ್ಟಿ ಅಟ್ಟದ ಮೇಲಿಟ್ಟ ಹಾಗೆ. ಸುಮಾರು ಹತ್ತು ವರುಷಗಳ ನಂತರ ಅದನ್ನು ತೆಗೆದು ಓದಿ. ಸಂಗಾತಿ ದಕ್ಕಿದ ಖುಷಿಗಿಂತ ಹತ್ತು ಪಟ್ಟು ಸುಖ ಸಿಗುತ್ತದೆ. ಆಗ ಚಿಮ್ಮುವ ಒಂದು ನಿರ್ಮಲ ನಗು, ಕುಟುಂಬದೊಂದಿಗೆ ಹಂಚಿಕೊಳ್ಳುವಾಗ ಸಿಕ್ಕ ಆ ಆನಂದಕ್ಕೆ ಬೆಲೆ ಕಟ್ಟಲು ಡಾಲರ್ ಅಂಗಡಿಯ ಕದ ತಟ್ಟಬೇಕು.
ಒಬ್ಬರನ್ನು ಸಂಪೂರ್ಣ ಮರೆಯಿರಿ...
ಅವರು ತುಂಬಾ ಹತ್ತಿರದವರೇ. ಆದರೆ ನಿಮ್ಮ ಬಗ್ಗೆ ನಿಮ್ಮ ಪೋಷಕರಲ್ಲಿ ಏನೇನೋ ಚಾಡಿ ಹೇಳುತ್ತಾರೆ. ನಿಮ್ಮ ವ್ಯಾಸಂಗದ ಯಾವ ಯಶಸ್ಸೂ ಅವರಿಗೆ ಹರ್ಷ ತಂದುಕೊಡುವುದಿಲ್ಲ. ಅಂಥವರ ಬಗ್ಗೆ ಚಿಂತೆ ಬಿಡಿ. ಮನಸಾರೆ ಮರೆತುಬಿಡಿ. ಮಲಗಿದಾಗ ಹಾಗೊಮ್ಮೆ ಅವರು ನೆನಪಾದರೂ ಯೋಗರಾಜ ಭಟ್ಟರ ಹಾಡೊಂದನ್ನು ನಿಮ್ಮಷ್ಟಕ್ಕೇ ಗುನುಗಿ. ಕಳೆಯನ್ನು ಕಿತ್ತು ಹಾಕುವ ತಾಕತ್ತು ಒಳಗಿರಲೇಬೇಕು. ಅಂಥವರು ಸಾಯುವ ತನಕವೂ ನೆನಪಾಗಬಾರದು. ಹಾಗೊಂದು ಪ್ರತಿಜ್ಞೆ ಮಾಡಿಬಿಡಿ.
ಮೇಕಪ್ಪಿಲ್ಲದೆ ಹೊರಗೆ ಹೊರಡಿ...
ಸೌಂದರ್ಯ ಅನೇಕ ವಿಚಾರಗಳಲ್ಲಿ ತಲೆಹಾಕುತ್ತದೆ. ಒಂದು ವಾರ ಮೇಕಪ್ಪಿಲ್ಲದೆ ಹೊರಗೆ ಹೊರಡಿ. ಆಗ ನಿಮ್ಮ ಸುತ್ತಮುತ್ತಲಿನವರು ಕೊಡುವ ಸ್ಥಾನಮಾನವೇನು, ತೋರುವ ಪ್ರೀತಿ ಏನು, ವ್ಯಕ್ತಪಡಿಸುವ ಪ್ರತಿಕ್ರಿಯೆಯೇನು? ಎಲ್ಲವೂ ಅನುಭವಕ್ಕೆ ಬರುತ್ತದೆ. ಹಿಂಬಾಲಿಸುವ ಸಂಗಾತಿಯ ವರ್ತನೆ ಅಳೆಯಲೂ ಇದೊಂದು ಪುಟ್ಟ ಪರೀಕ್ಷೆ. ಈ ಒಂದು ವಾರದಲ್ಲಿ ಅಗಾಧ ಖುಷಿ ಸಿಕ್ಕರೆ ಆ ಮೇಕಪ್ಪಿಗೆ ಶಾಶ್ವತ ನಮಸ್ಕಾರ ಹೇಳಿಬಿಡಿ.
ಆಕಾಶ ನೋಡುತ್ತ ಮಲಗಿ...
ಅಮ್ಮನ ಸೊಂಟವೇರಿ ಕೂತು ಕೈತುತ್ತು ತಿನ್ನುತ್ತಿದ್ದಾಗ ಕಂಡ ಚಂದಮಾಮ ಇವತ್ತಿಗೂ ಗಾತ್ರದಲ್ಲಿ ಅಷ್ಟೇ ಇದ್ದಾನೆ. ಆದರೆ, ನೀವು ದೊಡ್ಡವರಾಗಿದ್ದೀರಿ. ಚಂದಿರನ ಎತ್ತರಕ್ಕೆ ಏರಬೇಕಾಗಿದೆಯಷ್ಟೇ. ಆ ಕನಸನ್ನು ಆಕಾಶ ನೋಡುತ್ತ ಕಾಣಿ. ಒಂದು ರಾತ್ರಿ ನಕ್ಷತ್ರ ನೋಡುತ್ತಲೇ ಮಲಗಿದರೆ ವಿಶ್ವದ ಅನಂತತೆಯ ಅರಿವಾಗುತ್ತದೆ. ಕಷ್ಟದಲ್ಲೂ, ಕತ್ತಲಲ್ಲೂ ಬೆಳಕಾಗುವುದು ಹೇಗೆಂಬುದಕ್ಕೆ ಆ ನಕ್ಷತ್ರ ಉದಾಹರಣೆ. ಅಂಥ ಹಣತೆಯ ಕನಸನ್ನು ಅದೊಂದು ರಾತ್ರಿಯ ನಿದ್ದೆ ತೀರಾ ವಾಸ್ತವದಂತೆ ತೋರಿಸೀತು.
ಒಂದು ವೋಟ್ ಹಾಕಿ...
ಚುನಾವಣೆಯಲ್ಲಿ ನಿಲ್ಲುತ್ತಾರೆ. ಅಧಿಕಾರದಲ್ಲಿ ಕೂರುತ್ತಾರೆ. ಆ 'ದಂಡ'ನಾಯಕರು ಮತ್ತೇನು ಮಾಡುತ್ತಾರೆಂಬುದು ನಿಮಗೂ ಗೊತ್ತಿಲ್ಲ. ವಯಸ್ಸು ಹದಿನೆಂಟಾಯ್ತು ಅಂದಾಕ್ಷಣ ಮೊದಲು ಮತದಾರರ ಗುರುತಿನ ಚೀಟಿ ಮಾಡಿಸಿಕೊಳ್ಳಿ. 'ದೊಡ್ಡವರಾದ್ರಿ' ಅಂತ ಸರ್ಕಾರವೇ ಕೊಟ್ಟ ಸರ್ಟಿಫಿಕೇಟ್ ಅದು. ಯಾವುದಕ್ಕೂ ಇಪ್ಪತ್ತರೊಳಗೆ ಎಲೆಕ್ಷನ್ನಿನಲ್ಲಿ ವೋಟ್ ಹಾಕಿ. ಅಲ್ಲೊಂದು ಚಿಕ್ಕ ಖುಷಿ ಅರಳುತ್ತದೆ. 'ನನ್ನನ್ನೇ ನಂಬಿ ಸಮಾಜ ಬದುಕಿದೆಯಲ್ಲ' ಎಂಬ ಚಿಟಕಿ ಅಹಮ್ಮು ನಿಮ್ಮೆದೆಯ ಬಾಗಿಲು ತಟ್ಟುತ್ತದೆ.
1000 ರುಪಾಯಿ ಉಳಿಸಿ...
ನೋಟಿನ ಬೆಲೆ ಏನಂತ ಗೊತ್ತಿಲ್ಲ. ಆದರೂ ಅದರ ಅಗತ್ಯ ನಿಮಗಿದ್ದಿದ್ದೇ. ಸ್ಕೂಲಿಗೋ ಕಾಲೇಜಿಗೋ ಹೋಗುವ ನಿಮಗೆ ಅಪ್ಪ- ಅಮ್ಮ, ಇನ್ನ್ಯಾರೋ ಕಿಸೆಗೆ ನೋಟು ತುರುಕುತ್ತಾರೆ. ಆ ಪಾಕೆಟ್ ಮನಿಯಲ್ಲೇ ಸ್ವಲ್ಪ ಸ್ವಲ್ಪ ಉಳಿಸುತ್ತ ಬನ್ನಿ. ಮೊತ್ತ 1000 ಆಗುವ ಹೊತ್ತಿಗೆ 'ನಾನೀಗ ಶ್ರೀಮಂತ' ಎಂಬ ಗರಿ ನಿಮ್ಮೊಳಗೆ ಹೂತು ಬೀಳುತ್ತದೆ. ಬ್ಯಾಡ್‌ಲಕ್ ನೋಡಿ... ಆ ವರುಷದ ಫೋರ್ಬ್ಸ್ ಮಿಲಿಯನೇರ್ ಪಟ್ಟಿಯಲ್ಲಿ ನಿಮ್ಮ ಹೆಸರು ಜಸ್ಟ್‌ಮಿಸ್ಸು!
ಪತ್ರಿಕೆಯಲ್ಲೊಂದು ಲೇಖನ
ಪುಟಗಳ ನಡುವೆ ಇಟ್ಟ ನವಿಲುಗರಿ ಮರಿ ಹಾಕದೆ ಮೋಸ ಮಾಡೀತೇನೋ. ಆದರೆ ನಿಯತಕಾಲಿಕೆ, ದಿನಪತ್ರಿಕೆಗೆ ಬರೆದ ಮೊದಲ ಲೇಖನ ಎಂದೂ ಹಾಗೆ ಮೋಸ ಮಾಡದು. ಪ್ರತಿಬಾರಿ ತೆರೆದು ನೋಡಿದಾಗಲೂ ಅದೇನೋ ಆನಂದ ರವಾನಿಸುತ್ತದೆ. 'ಇಷ್ಟ್ ಚಿಕ್ ವಯಸ್ಸಲ್ಲೇ ಎಂಥ ಸಾಧನೆ ಮಾಡ್ದೆ ಮಗ' ಅಂತ ಇನ್ನ್ಯಾರೋ ಫಲಕ ಕೊಟ್ಟಾಗ ನಿಮ್ಮ ಮುಖ ಫಳಫಳನೆ ಹೊಳೆಯದಿದ್ದರೆ ಪತ್ರಿಕೆಯ ಚಿಲ್ಲರೆ ವಾಪಸ್ ಕೊಡ್ತೀವಿ.
ಲವ್ ಮಾಡಿ, ಬ್ರೇಕ್‌ಅಪ್ ಆಗಿ...
ಮೊದಲು ಸಿಕ್ಕ ಸುಖ ಯಾವತ್ತೋ ಮರೆತು ಹೋಗುವಂಥದ್ದು. ಮೊದಲ ದುಃಖ ಸದಾ ನಿಮ್ಮೊಂದಿಗೆ ಹೆಜ್ಜೆ ಹಾಕುವಂಥದ್ದು. ಹೀಗಾಗಿ, ಮೊದಲ ಪ್ರೀತಿಯನ್ನು ದೇವರಿಗೆ ಅರ್ಪಿಸಿಬಿಡಿ. ಅದರಲ್ಲಿ ಯಾವ ಕಾರಣಕ್ಕೂ ಯಶಸ್ಸು ಬೇಡ. ಮುಂದೆ ಯಾವತ್ತೋ ಆ ಬ್ರೇಕ್‌ಅಪ್ ಕೊಡುವ ಕಹಿನೆನಪಿನ ಸುಖವನ್ನು ತನ್ಮಯರಾಗಿ ಅನುಭವಿಸಿ. ಮೊದಲ ಪ್ರೀತಿ, ಮೊದಲ ಮಳೆಯ ಮಣ್ಣು ಎರಡೂ ಮನ ಅರಳಿಸುತ್ತದೆ. ಮೊದಲ ಪ್ರೀತಿಯ ನಂತರ ಬೇಸಿಗೆ ಬಂದರೆ ಆ ನೆನಪಿಗೆ ನೂರು ಜನ್ಮದ ಬೆಲೆ.
ಪಾರ್ಟ್‌ಟೈಮ್ ಕೆಲ್ಸ
ಓದೊಂದೇ ಟೀನೇಜಿನ ದಿನಚರಿ ಅಲ್ಲ. ಸ್ವಲ್ಪ ಕಾಲ ಪಾರ್ಟ್‌ಟೈಮ್ ಕೆಲಸನೂ ಮಾಡಿ. ಕಾಲೇಜಿನಿಂದ ಹೊರತಾದ ಪ್ರಪಂಚದಲ್ಲಿ ಏನೆಲ್ಲ ತಳಮಳವಿದೆ ಅನ್ನುವುದು ಅನುಭವಕ್ಕೆ ಬರುತ್ತದೆ. ಅಲ್ಪಸ್ವಲ್ಪ ಕಾಸೂ ಸಿಗುತ್ತದೆ. ಪೋಷಕರ ನೆರಳಿಲ್ಲದೆಯೂ ಬದುಕಬಲ್ಲೆ ಎಂಬ ಧೈರ್ಯ ಮೂಡುತ್ತದೆ. ಹ್ಞಾಂ, ಹೀಗೆ ಮಾಡುವಾಗ ನಿಮ್ಮ ಶಿಕ್ಷಣಕ್ಕೆ ಪೂರಕವಾದ ಕೆಲಸವನ್ನೇ ಆರಿಸಿಕೊಳ್ಳುವುದು ಉತ್ತಮ. 'ಕಾಸಿದ್ದವನೇ ಸ್ಟೂಡೆಂಟು' ಎಂಬ ಹೊಸಗಾದೆಗೆ ಜನ್ಮ ಕೊಡಿ.
ದ್ವೀಪದಲ್ಲಿ ಒಂದು ರಾತ್ರಿ
ಎಲ್ಲೂ ದಡ ಕಾಣದ ಸಮುದ್ರದ ನಡುವೆ ಅದೊಂದು ದ್ವೀಪ. ಅಲ್ಲೊಂದು ರಾತ್ರಿಯನ್ನು ಗೆಳೆಯರೊಟ್ಟಿಗೆ ಕಳೆಯಿರಿ. ಹೊರಜಗತ್ತಿನ ಯಾವ ತಲೆನೋವುಗಳೂ ನಿಮ್ಮ ಬಳಿ ಬರಬಾರದು. ನೀವಲ್ಲಿ ಸ್ವತಂತ್ರರು. ಮನೆ- ಕಾಲೇಜು... ಯಾವ ಬಂಧನಗಳೂ ಅಲ್ಲಿಲ್ಲ. ರೂಲ್ಸುಗಳ ಜೈಲಿಲ್ಲ. ಲೋಕದಿಂದ ಇವತ್ತೇ ಹೊರಬಿದ್ದರೆ ಯಾವ ಗ್ರಹದಲ್ಲಾದರೂ ನೆಲೆ ನಿಲ್ಲುತ್ತೇನೆಂಬ ಧೈರ್ಯ ಅದೆಲ್ಲಿಂದಲೋ ಹುಟ್ಟುತ್ತದೆ. ಆಗ ಆ ದ್ವೀಪದ ಬುಡದಲ್ಲೊಂದು ಬೆಳಕು ಕಾಣಿಸುತ್ತದೆ.
ನೆನೆ ಆ ದಿನವ...
ಟ್ಯೂಶನ್ನು, ಎಕ್ಸಾಮುಗಳ ಒತ್ತಡಗಳಿಂದ ನೀವೀಗ ಭಾರವಾಗಿದ್ದೀರಿ. ಆದಷ್ಟು ಬೇಗ ಹಗುರವಾಗಬೇಕು. ಅದೇ ವೇಳೆ ಮಳೆ ಬಂತಾ? ಮೈಯ್ಯೊಡ್ಡಿ. 'ನಮ್ಮೂರ ಮಂದಾರ ಹೂವೆ'ಯಲ್ಲಿ ಪ್ರೇಮಾ- ಶಿವಣ್ಣ ನೆನೆಯುತ್ತಾರಲ್ಲ, ಅಷ್ಟು ಒದ್ದೆಯಾಗಿ ಸಾಕು. ಎಲ್ಲ ಒತ್ತಡಗಳು ಕೊಚ್ಚಿ ಹೋದವಲ್ಲ ಎಂಬ ಹಗುರತೆ ಹುಟ್ಟುವ ಹೊತ್ತಿಗೆ ಐದಾರು ನಿಮಿಷವಾದರೂ ಆಗಿರುತ್ತದೆ. ನಂತರ ಒಂದು ನಿಮಿಷವೂ ಮಳೆಯಲ್ಲಿ ನಿಲ್ಲುವುದು ಬೇಡ. ಸುಮ್ಮನೆ ನೆನೆಯುವುದರಲ್ಲೂ ಏನೋ ಥ್ರಿಲ್ಲಿದೆ.
ಸೆಲೆಬ್ರಿಟಿಯನ್ನು ಮೀಟ್ ಮಾಡಿ...
ಒಮ್ಮೆ ಸಚಿನ್ ತೆಂಡೂಲ್ಕರ್‌ಗೋ, ಅಮಿತಾಭ್ ಬಚ್ಚನ್‌ಗೋ ಕೈ ಕುಲುಕಿ, ಒಂದು ಫೋಟೋ ತೆಗೆಸಿ, ಫೇಸ್‌ಬುಕ್ಕಿನಲ್ಲಿ ಹಾಕಿಕೊಳ್ಳುವ ಹುಚ್ಚುಕನಸು ನಿಮಗೆ. ಆ ಕನಸನ್ನು ಮುಂದೂಡಬೇಡಿ. ಇಪ್ಪತ್ತನೇ ವಯಸ್ಸಿನೊಳಗೇ ಅದನ್ನು ಪೂರೈಸಿಬಿಡಿ. ಆಗ ಅದಕ್ಕೆ ಜೀವಮಾನದ ಸಾಧನೆಯ ಗತ್ತು ಸಿಗುತ್ತದೆ. ಇಪ್ಪತ್ತನೇ ವಯಸ್ಸಿನ ಬಳಿಕ ಅವರನ್ನು ಮೀರಿ ಬೆಳೆಯಲು ಶ್ರಮ ಹಾಕಿ.
ಸಂಗಾತಿಗೊಂದು ಚುಂಬನ
ಮೊದಲ ಮುತ್ತಿಗಾಗಿ ಅದೆಷ್ಟೋ ದಿನದಿಂದ ಸಂಗಾತಿಯ ಹಿಂದೆ ಬಿದ್ದಿದ್ದೀರಿ. ಕೊನೆಗೂ ಆಕೆ ಚಾನ್ಸು ಕೊಟ್ಟಳು. 'ಎಷ್ಟು ಹೇಳಿದ್ರೂ ಕೇಳಲ್ಲ ಈ ನುಸಿಪೀಡೆ' ಎಂದು ಬೇಸತ್ತು ಆಕೆ ಚುಂಬನಕ್ಕೆ ಅವಕಾಶ ಕೊಟ್ಟಿದ್ದಲ್ಲ. ಅದು ನಿಮ್ಮಿಬ್ಬರ ಪ್ರೀತಿಗೆ ಇಟ್ಟ ಠೇವಣಿ. ದೇಹ ಕಣ್ಮುಚ್ಚುವವರೆಗೂ ನೆನಪಲ್ಲುಳಿಯುವಂಥ ಉಡುಗೊರೆ. ಅದನ್ನು ಜೋಪಾನವಾಗಿ ಕಾಪಾಡುವುದು, ಅತಿರೇಕಕ್ಕೆ ಹೋಗದಂತೆ ನೋಡಿಕೊಳ್ಳುವುದು ನಿಮ್ಮ ಹೊಣೆ.
ಒಂದಿನ ಮನೆಯ ಅಷ್ಟೂ ಕೆಲ್ಸ ಮಾಡಿ...
ಆ ದಿನ ನಿಮಗೆ ರಜೆ. ಮನೆಯಲ್ಲಿ ಎಲ್ಲರನ್ನೂ ಆರಾಮಾಗಿರಲು ಹೇಳಿ. ಅಮ್ಮನ ಅಡುಗೆ ಕೆಲಸವನ್ನೂ ನೀವೇ ಮಾಡಿ, ಅಪ್ಪನ ಹೊರಗಿನ ಜವಾಬ್ದಾರಿಯನ್ನೂ ನೀವೇ ಹೊರಿ. ಮಹಾರಾಜನ ಪಾತ್ರಧಾರಿ ಗೈರಾದಾಗ ಸೈನಿಕನೇ ಆ ಪಾತ್ರ ಹೊತ್ತಂತೆ ಇದು. ಅಲ್ಲೂ ಮಜಾ ಇದೆ. ಬದುಕು ಯಾವ ಪರಿಸ್ಥಿತಿಯನ್ನು ತಂದೊಡ್ಡಿದರೂ ನಿಭಾಯಿಸಬಲ್ಲೆ ಎಂಬ ವಿಶ್ವಾಸ ನಿಮ್ಮೊಳಗೆ ಎದ್ದುಕೂತರೆ ಆ ದಿನದ ಶ್ರಮ ಸಾರ್ಥಕ.
ಗುಂಡುಪಾರ್ಟಿಗೆ ಕಂಪನಿ
ಇಷ್ಟು ಚಿಕ್ಕ ವಯಸ್ಸಲ್ಲಿ ನೀವು ಗುಂಡಿಗೆ ಬಲಿಯಾಗುವುದು ತಪ್ಪು. ನಿಮ್ಮ ಹಿರಿಯರಲ್ಲೇ ಯಾರಾದರೂ 'ಗುಂಡು' ಪಾರ್ಟಿ ಮಾಡುತ್ತಿದ್ದರೆ ಅವರಿಗೆ ಸುಮ್ಮನೆ ಕಂಪನಿ ಕೊಡಿ. ಅವರು ಒತ್ತಾಯಿಸಿದರೂ ಕುಡಿಯಬೇಡಿ. ಮುಗ್ಧರಂತೆ ಇದ್ದು ಆ ವ್ಯಕ್ತಿಗಳು ಟೈಟಾಗಿ ಹೇಳುವ ಕಥೆಗಳನ್ನು ಕೇಳಿಸಿಕೊಳ್ಳಿ. ಅವರ ವರ್ತನೆಗಳಿಂದ ಮಜಾ ತೆಗೆದುಕೊಳ್ಳಿ. ಆಗ ನಿಮ್ಮಲ್ಲೊಂದು ಸ್ಪಷ್ಟತೆ ಆವರಿಸುತ್ತದೆ... ಮುಂದೆ ನಾನು ಕುಡಿಯಬೇಕೋ, ಬೇಡವೋ ಅಂತ.
ನಿಮಗೇ ಒಂದು ಪತ್ರ ಗೀಚಿ...
ಇನ್ನೊಬ್ಬರಿಗೆ ಬೇಡ. ನಿಮಗೇ ಒಂದು ಪತ್ರ ಬರೆದುಕೊಳ್ಳಿ. ಯಾಕೆ ಹಾಗೆ ಮಾಡಿದೆ ಎಂಬ ವಿಷಾದವೂ, ಅದು ಎಷ್ಟು ಚೆನ್ನಾಗಿತ್ತಲ್ಲ ಎಂಬ ಹರ್ಷದ ಸಂಗತಿಗಳೂ ಅದರೊಳಗೆ ಮಿಳಿತವಾಗಿರಲಿ. ನೀವು ಮಾಡಿದ ತಪ್ಪುಗಳನ್ನು ಅಲ್ಲಿ ಮುಚ್ಚುಮರೆಯಿಲ್ಲದೆ ಹೇಳಿಕೊಳ್ಳಿ. ನಂತರ ಆ ಪತ್ರಕ್ಕೆ ಗಮ್ ಹಾಕಿ ಯಾವುದೋ ಪುಸ್ತಕದ ಒಳಗಿಡಿ. ಹಲವು ವರುಷಗಳ ನಂತರ ಅದು ನಿಮಗೆ ಸಿಗುತ್ತದೆ. ಅದನ್ನು ಪೂರ್ತಿಯಾಗಿ ಓದಿದಾಗ, ಅಂದು ನೀವು ನೀವಾಗಿರಲ್ಲ.
ತೀರದಲ್ಲಿ ಕೂತು...
ಬದುಕೂ ಒಂದು ಸಮುದ್ರ. ಹುಟ್ಟಿದ ಕೂಡಲೇ ಈಜತೊಡಗುವುದು ಜೀವಿಗಳ ಧರ್ಮ. ಲೈಫೇ ಬೋರ್ ಎನ್ನಿಸಿದಾಗ ಸಮುದ್ರತೀರದಲ್ಲಿ ಕೂತು ಎಲ್ಲ ಕಷ್ಟಗಳನ್ನು ಮರೆಯಿರಿ. ನೋವುಗಳೆಲ್ಲ ಅಲೆಗೆ ಕೊಚ್ಚಿ ಹೋಗುತ್ತಿವೆಯೇನೋ ಎಂಬಂತೆ ಉಲ್ಲಾಸಿತರಾಗಿ. ಸಾಗರ ಅನಂತತೆಯ ಪಾಠ ಹೇಳುತ್ತದೆ. ಉಪೇಂದ್ರನ ರೀತಿ ಡೈಲಾಗ್ ಹೊಡೆಯದೆ 'ಪ್ರಪಂಚ ವಿಶಾಲವಿದೆ' ಎಂದು ಮೌನದಲ್ಲೇ ಸಂಕೇತಿಸುತ್ತದೆ.
ನಿಮ್ಮದೇ ಒಂದು ವೆಬ್‌ಸೈಟು
ಡೈರಿಯೂ ಬೇಡ. ಬ್ಲಾಗೂ ಬಿಡಿ, ಯಾರೂ ಮಾಡುತ್ತಾರೆ. ಆದರೆ, ಇಪ್ಪತ್ತನೇ ವಯಸ್ಸಿನೊಳಗೆ ಅಂತರ್ಜಾಲದೊಳಗೆ ನೀವು ಅಧಿಕೃತ ಮನೆಮಾಡುವುದಿದೆಯಲ್ಲ... ಅದು ಗ್ರೇಟು. ನಿಮ್ಮ ದಿನಚರಿ, ಕನಸು, ಕಾಗದ ಎಲ್ಲವನ್ನೂ ಅಲ್ಲಿ ಮುದ್ರಿಸಿ. ಸುಮಾರು ವರುಷಗಳ ನಂತರ, ಎತ್ತರದ ಸ್ಥಾನಕ್ಕೇರಿದಾಗ ಹಿಂದಿನ ಪುಟಗಳ ಮೇಲೆ ಹಾಗೆಯೇ ಕಣ್ಣಾಡಿಸಿ, ನಿಮ್ಮ ಬಾಲ್ಯ, ನಿಮ್ಮ ಟೀನೇಜು ಕಳೆದುಹೋಗಿದೆ ಅಂತ ಅನ್ನಿಸುವುದೇ ಇಲ್ಲ. ಎಲ್ಲವೂ ಅಲ್ಲಿ ಸಿಗುತ್ತದೆ.
ಪ್ರಾಣಿ ದತ್ತು ತಗೊಳ್ಳಿ...
ಕೇವಲ ಮನುಷ್ಯರನ್ನೇ ಪ್ರೀತಿಸಿದರೆ ಅದು ಮನುಷ್ಯತ್ವ ಅಲ್ಲ. ಸುತ್ತಮುತ್ತಲಿನ ಪ್ರಾಣಿಗಳಿಗೂ ಅಂಥದ್ದೇ ಪ್ರೀತಿ ತೋರಬೇಕು. ಶಕ್ತರಾಗಿದ್ದರೆ ಅವುಗಳನ್ನು ದತ್ತು ತೆಗೆದುಕೊಳ್ಳಬೇಕು. ಮನೆಯಲ್ಲೊಂದು ಪ್ರಾಣಿ ಇದ್ದರೆ ಆ ವಾತಾವರಣದಲ್ಲೇನೋ ಲವಲವಿಕೆ. ಅದರ ಊಟ, ಸ್ನಾನಗಳ ಹೊಣೆಯನ್ನು ನೀವೇ ಹೊರಿ. ಮನೆಗೆ ಅಪ್ಪ ಯಜಮಾನ ಇರಬಹುದು. ಆದರೆ, ಆ ಪ್ರಾಣಿಯ ದೃಷ್ಟಿಗೆ ನೀವೇ ಯಜಮಾನ ಆಗಿ.
- ಕೀರ್ತಿ ಕೋಲ್ಗಾರ್
kolgarkeerthi@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


