ಮತ್ತೆ ಚಿಗುರಲಿ ಸಂಬಂಧ
ದಟ್ಟ ಮಂಜಿನ ನಡುವೆ ಹೊಂಬಿಸಿಲಿನ ಕೋಲ್ಮಿಂಚು ಆಗಸದಲ್ಲಿ ಹಾದು ಬರಲಾರಂಭಿಸಿತೆಂದರೆ ಸುಗ್ಗಿಕಾಲ ಆರಂಭವಾಯಿತೆಂದೇ ಅರ್ಥ. ಅದು ನಾಡಿನೆಲ್ಲೆಡೆಯ ರೈತರ ಸಂಭ್ರಮಕ್ಕೆ ಮತ್ತೊಂದು ಹೆಸರು. ಹಾಗೆ ಶುರುವಿಟ್ಟುಕೊಳ್ಳುವ ಸುಗ್ಗಿಯ ಹಿಗ್ಗನ್ನು ಎಷ್ಟು ಬಣ್ಣಿಸಿದರೂ ಕಡಿಮೆಯೇ. ಬಿಡಿ, ಅದಕ್ಕೆ ಪದಗಳು ಸಾಲವು.
ಇಂಥ ಸಂಕ್ರಾಂತಿಗೆ ಮುನ್ನ ಚೇತರಿಸಿಕೊಳ್ಳುತ್ತಿದ್ದ ಆರ್ಥಿಕ ಚಟುವಟಿಕೆಗಳು, ಗರಿಗೆದರುತ್ತಿದ್ದ ಸಂಬಂಧಗಳು, ಹೆಗಲೇರುತ್ತಿದ್ದ ಒಕ್ಕಲು, ಕೊಯಿಲಿನ ಕಾಯಕ, ಮನುಷ್ಯನನ್ನು ಚಳಿಗೆ ಮುದುಡಲು ಬಿಡದ ಕ್ರಿಯಾಶೀಲತೆ ಇತ್ಯಾದಿಗಳೆಲ್ಲ ಇವತ್ತಿನ ಆಧುನಿಕ ಯುಗದಲ್ಲಿ ಎಲ್ಲೋ ಒಂದು ಕಡೆ ಯಾಂತ್ರಿಕಗೊಳ್ಳುತ್ತಿದೆಯೇ? ಅನುಮಾನ ಕಾಡುತ್ತದೆ. ಮಲೆನಾಡಿನ ಬಿರುಬೀಸು ಚಳಿ, ಮಳೆಗಾಗಿಯೇ ಸಿದ್ಧಗೊಂಡು ಬಯಲು ನಾಡಿನಿಂದ ಆಗಮಿಸುತ್ತಿದ್ದ ಕಂಬಳಿಗಳಾದರೂ ಎಂಥದ್ದು! ಒಂದು ಕಂಬಳಿ ಹೊದ್ದು ಮಲಗಿದರೆ ಅರ್ಧ ತಾಸಿನಲ್ಲಿ ಮೈ ಬೆವೆತುಬಿಡುತ್ತಿತ್ತು. ಅದನ್ನು ನೇಯುವವರ ನೈಪುಣ್ಯ, ಅದಕ್ಕೆ ಬಳಸುವ ತುಪ್ಪಳ, ಅದರ ಗುಣಮಟ್ಟ, ಕಾಳಜಿ ನಿಜಕ್ಕೂ ಮಾರುಕಟ್ಟೆಯಲ್ಲಿ ಬೆಲೆ ಕಟ್ಟುವುದಕ್ಕೇ ಸವಾಲಾಗಿ ನಿಲ್ಲುತ್ತಿತ್ತು. ಅದು ಹೋಗಲಿ ಎಂದರೆ ಮತ್ತೆ ಬ್ಯಾಡಗಿಯಿಂದ ಬರುತ್ತಿದ್ದ ಮೆಣಸು, ಹಾವೇರಿಯ ಕಡೆಯ ಹುಣಸೆ, ಗುಲ್ಬರ್ಗದ ತೊಗರಿ, ಮತ್ತೆಲ್ಲಿಯದೋ ಕಡಲೆ, ಗಂಗಾವತಿಯ ಅಕ್ಕಿ... ಹೀಗೆ ಒಂದೊಂದಕ್ಕೂ ಅದರದೇ ಆದ ಬ್ರಾಂಡ್ ಇಮೇಜ್. ಸುಗ್ಗಿಯ ತಿಂಗಳೆಂದರೆ ರೈತಾಪಿಗಳು ಮಾತನಾಡುವುದಿರಲಿ, ಊಟ ತಿಂಡಿಗಳನ್ನೂ ಮರೆತು ಹೊಲದಲ್ಲಿ ಬೀಡುಬಿಟ್ಟಿರುತ್ತಾರೆ. ಹೆಂಗಸರು ಮಕ್ಕಳಾದಿಯಾಗಿ ಎಲ್ಲರಿಗೂ ಅದು ಹಿಗ್ಗಿನ ಪರ್ವ. ಅಲ್ಲಲ್ಲಿಯೇ ಉತ್ಪನ್ನಗಳನ್ನು ಕೊಡು-ಕೊಳ್ಳುವ, ಮಾರುಕಟ್ಟೆ ಕಂಡುಕೊಳ್ಳುವ ಪೈಪೋಟಿ, ಯೋಜನೆಗಳು ರೈತರ ಮನದಲ್ಲಿ ಥರಾವರಿ. ಅದು ಬೆಳೆ ಬಿಕರಿ. ಈ ಪ್ರಕ್ರಿಯೆ ಸದ್ದಿಲ್ಲದೇ ಸ್ಥಳೀಯ ಉತ್ಪನ್ನಗಳಿಗೆ ಸ್ಥಳೀಯವಾಗಿಯೇ ಉತ್ತಮ ಮಾರುಕಟ್ಟೆಯನ್ನು ದೊರಕಿಸಿಕೊಡುತ್ತಿತ್ತು. ಮಾತ್ರವಲ್ಲ ದೇಸಿ ಹೆಸರಿನಲ್ಲೇ ಬ್ರಾಂಡ್ ಬೆಳೆಯುತ್ತಿತ್ತು. ಪ್ರಾದೇಶಿಕ ವೈಶಿಷ್ಟ್ಯಗಳ ಹೆಗ್ಗಳಿಕೆಯನ್ನು ಅವುಗಳ ಗುಣಮಟ್ಟವೇ ಸಾರುತ್ತಿದ್ದವು. ಅಂಥ ಇನ್ನೊಂದು ಉತ್ಪನ್ನವನ್ನು ಬೇರಿನ್ನೆಲ್ಲಿಯೂ ಕಾಣಲು ಸಾಧ್ಯವಿರಲಿಲ್ಲ.
ಇವತ್ತಿಗೂ ಶಿಕಾರಿಪುರ, ರಿಪ್ಪನ್ಪೇಟೆಯ ಮಿಡಿಮಾವಿಗೆ ಸಾಟಿ ಇನ್ನೊಂದಿಲ್ಲ. ಸಾಗರದ ಅಪ್ಪೆಯ ಘಮಕ್ಕೆ ಸೋಲದೇ ಉಳಿಯುವವರಿಲ್ಲ. ಮಲೆನಾಡು, ಕರಾವಳಿಯಲ್ಲಿ ತಯಾರಾಗುವ ಹಪ್ಪಳ, ಸಂಡಿಗೆಗಳ ವೈಶಿಷ್ಟ್ಯ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದೆ. ಮಂಗಳೂರಿನ ಒಣ ಮೀನಿನ ರುಚಿಗೆ ವಿಶ್ವವೇ ಬೆರಗಾಗಿದೆ. ಉತ್ತರ ಕನ್ನಡದ ಹಲಸಿನ ಬಗೆಗಳು ಗಮನ ಸೆಳೆಯುತ್ತವೆ. ಶಿರಸಿ, ಸಿದ್ದಾಪುರದ ಸುಕೇಳಿ ಬಾಯಲ್ಲಿ ನೀರೂರಿಸುತ್ತದೆ. ಬಾಳಕಾಯಿ ಚಿಪ್ಸ್ಗಾಗಿ ಬೇಡಿಕೆ ಬೆಳೆಯುತ್ತಲೇ ಇದೆ. ಚಿಕ್ಕಮಗಳೂರಿನ ಜೇನು, ಕಷಾಯದ ಪುಡಿ, ಕೊಡಗಿನ ಗೋಡಂಬಿ, ಕಾಳುಮೆಣಸು...ಇವಕ್ಕೆಲ್ಲಾ ಯಾರೂ ಜಾಹೀರಾತು ಕೊಟ್ಟು ಪ್ರಚುರಪಡಿಸಿದವರಿಲ್ಲ. ಕೇವಲ ಸ್ಥಳೀಯರ ಕಾಳಜಿ, ಗುಣಮಟ್ಟದಿಂದಲೇ ಅವು ಖ್ಯಾತಗೊಂಡಿವೆ. ಅದರೊಂದಿಗೆ ಊರಿನ ಹೆಸರೂ ಹೊರಜಗತ್ತಿಗೆ ಚಿರಪರಿಚಿತ ಎಂಬಂತಾಗಿತ್ತು.
ಇವೆಲ್ಲಕ್ಕಿಂತ ಪ್ರಮುಖವಾದ್ದು ಸುಗ್ಗಿಯ ಸಂದರ್ಭಕ್ಕೆ ಸರಿಯಾಗಿ ಮನೆಮಂದಿಯೆಲ್ಲಾ ಒಗ್ಗೂಡುವ, ಹಬ್ಬದ ನೆಪದಲ್ಲಿ ಮನೆ ಮಕ್ಕಳು, ಬಂಧುಗಳು, ನೆರೆಹೊರೆಯವರು ಒತ್ತೊಟ್ಟಿಗೆ ಬೆರೆಯುವ ಖುಷಿ ಮತ್ತೊಂದು ತೆರನಾದದ್ದು. ಜತೆಜತೆಗೆ ವರ್ಷದ ಉತ್ಪನ್ನದ ಅಳತೆಯ ಅಬ್ಬರ. ಹಿಂದಿನ ವರ್ಷಕ್ಕೆ ಹೋಲಿಸಿ ಈ ವರ್ಷ ಎಷ್ಟು ಹೆಚ್ಚು ಎಷ್ಟು ಕಡಿಮೆ ಎಂಬ ಲೆಕ್ಕಾಚಾರ. ಅದಕ್ಕೆ ಕಾರಣದ ವಿಮರ್ಶೆ. ಮುಂದಿನ ಬೆಳೆಯ ಯೋಜನೆಗೆ ಈಗಲೇ ಬುನಾದಿ. ಆ ಸಂಭ್ರಮದಲ್ಲೇ ತಮ್ಮ ಕಷ್ಟ ಸುಖಗಳ ಹಂಚಿಕೆ ಮಾಡಿಕೊಳ್ಳುತ್ತಾರೆ ಹಳ್ಳಿಗರು. ಬಂಧುಗಳಿಗೆ ಹಂಚಲೆಂದೇ ಒಂದಷ್ಟು ಪ್ರತ್ಯೇಕವಾಗಿ ತಾವು ಬೆಳೆದದ್ದರಲ್ಲಿ ತೆಗೆದಿರಿಸುವ ವೈಶಾಲ್ಯ ಅವರ ಹೃದಯವಂತಿಕೆಯನ್ನು ಮೆರೆಯುತ್ತಿತ್ತು.
ಜಾಗತೀಕರಣದ ಜಾಡಿನಲ್ಲಿ ಸಾಗುತ್ತಿರುವ ಸಮಾಜ ಇಂಥ ಸೂಕ್ಷ್ಮ ಸಂವೇದನೆಯನ್ನು ಕಳೆದುಕೊಳ್ಳುತ್ತಿದೆ ಎಂದರೆ ಕೇವಲ ಕ್ಲೀಷೆಯಾದೀತು. ಆದರೆ ವಾಸ್ತವ ಇದಕ್ಕಿಂತ ಭಿನ್ನವಾಗಿಲ್ಲ. ನಮ್ಮದಲ್ಲದ ಮಾಲ್ ಸಂಸ್ಕೃತಿ ವಿಜೃಂಭಿಸುತ್ತಿದೆ. ನಗರೀಕರಣ ದಿನದಿಂದ ದಿನಕ್ಕೆ ಸಂಬಂಧಗಳನ್ನು ಸಂಕೀರ್ಣಗೊಳಿಸುತ್ತಿದೆ. ವಿಘಟಿತ ಕುಟುಂಬ ವ್ಯವಸ್ಥೆಯಲ್ಲಿ ಇಂಥ ಎಲ್ಲ ಸಂಭ್ರಮಕ್ಕೆ ಸಮಯವೇ ಇಲ್ಲವಾಗಿದೆ. ಸಹಜವಾಗಿ ಸುಗ್ಗಿಯ ವೈಭೋಗ ವಿಸ್ಮೃತಿಗೆ ಸರಿಯುತ್ತಿದೆ. ಅಸಲಿಗೆ ಕೃಷಿಯೇ ಯಾರಿಗೂ ಬೇಡದ ಕಾಯಕವಾಗಿದೆ. ಈ ನಡುವೆಯೂ ಕೃಷಿಕ್ಷೇತ್ರದಲ್ಲಿ ಇನ್ನಿಲ್ಲದ ಸಾಧನೆ ತೋರಿ, ಹೆಮ್ಮೆಯ ನಗೆ ಬೀರುತ್ತಿರುವ ಮಾದರಿ ಕೃಷಿಕರನ್ನು ಈ ಸಂಚಿಕೆಯಲ್ಲಿ ನನೆದಿದ್ದೇವೆ. ರೈತರ ಹೊಲಗಳಿಗೆ 'ಖುಷಿ'ಯ ಕೃಷಿ ಪ್ರವಾಸದ ಹೊಸ ಕಲ್ಪನೆಯಿದು. ನಮ್ಮದು ಕಲ್ಪನೆ ಮಾತ್ರ. ಅದನ್ನು ಸಾಧ್ಯವಾಗಿಸಿಕೊಳ್ಳುವುದರಲ್ಲಿ ಇರುವ ಲಾಭ ಹಲವು. ಒಮ್ಮೆ ಹೋಗಿ ಬನ್ನಿ. ಜತೆಗೆ ಈ ಸುಗ್ಗಿ ಕಾಲಕ್ಕಾದರೂ ಹಿಂದಿನ ಹಳ್ಳಿಗಳಲ್ಲಿ ಆ ಎಲ್ಲ ಸಂತಸಗಳು ಮತ್ತೆ ಚಿಗುರಲಿ. ಅಂಥದೊಂದು ಸಂಬಂಧಗಳ, ಮೌಲ್ಯಗಳ ಅಂತಃಪ್ರಜ್ಞೆ ಮೊಳಕೆಯೊಡೆಯಲಿ ಎಂಬ ಆಶಯದೊಂದಿಗೆ ಸಂಚಿಕೆ ಕೈಗಿಡುತ್ತಿದ್ದೇವೆ.
ಸಂಕ್ರಾಂತಿಯ ಶುಭಾಶಯಗಳು.
- ವಿಶ್ವೇಶ್ವರ ಭಟ್, ಪ್ರಧಾನ ಸಂಪಾದಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

