ಖುಷಿ

ಗುಡ್ಡದ ಭೂತಾನ್

ದೇಶ ಸಣ್ಣದು. ಇತಿಹಾಸ ದೊಡ್ಡದು. ಹಿಮಾಲಯದ ನೆತ್ತಿಯಲ್ಲಿರುವ ಈ ದೇಶಕ್ಕೆ ಹೋಗಬೇಕೆಂದರೆ ಗಿರಿ ಪರ್ವತ ಶ್ರೇಣಿಗಳನ್ನು ದಾಟಬೇಕು...

ಗುಡ್ಡದ ಭೂತಾನ್
Published On :

ದೇಶ ಸಣ್ಣದು. ಇತಿಹಾಸ ದೊಡ್ಡದು. ಹಿಮಾಲಯದ ನೆತ್ತಿಯಲ್ಲಿರುವ ಈ ದೇಶಕ್ಕೆ ಹೋಗಬೇಕೆಂದರೆ ಗಿರಿ ಪರ್ವತ ಶ್ರೇಣಿಗಳನ್ನು ದಾಟಬೇಕು. ಮುಗಿಲು ಮುಟ್ಟುವ ಬೆಳ್ಳಿಬೆಟ್ಟ. ಕಣ್ಣಂಚು ಸೋಲುವಂಥ ಪ್ರಪಾತ. ಒಂದೇ ಒಂದು ವಾಹನ ಹೋಗುವಷ್ಟು ಜಾಗದಲ್ಲಿ ಹಿಮಾಲಯದ ನೆತ್ತಿಯಲ್ಲಿ ಅವುಡಗಚ್ಚಿಕೊಂಡು ಕೂತಿರುವ ಈ ದೇಶಕ್ಕಿರುವುದು ಯಮಹಾದಿ. ಅದು ಭೂತಾನ್. ಎಲ್ಲಿ ನೋಡಿದರೂ ಬುದ್ಧ!
ಬೆಟ್ಟಗಳನ್ನು ದಾಟಿ ರಾಜಧಾನಿ 'ತಿಂಪು'ಗೆ ಬಂದರೆ ಅಲ್ಲಿ ಬೌದ್ಧ ಭಿಕ್ಕುಗಳು. ಪ್ರಾರ್ಥನಾ ಮಂದಿರಗಳಲ್ಲಿ, ವಾಹನ ಸಂಚಾರ ಎಳ್ಳಷ್ಟು ಇಲ್ಲದ ಜಾಗಗಳಲ್ಲಿ ಭಿಕ್ಕುಗಳ ದೊಡ್ಡ ಸಾಲು. ಗಡಿ ಭಾಗದಿಂದ ಚೀನಾ ಗಡಿಯವರೆಗೂ ಎಲ್ಲೆಲ್ಲೂ ಅವರೇ. ಹೆಚ್ಚು ಮಾತನಾಡುವುದಿಲ್ಲ. ಮೆಲ್ಲನೆ ಏನೋ ಮಂತ್ರ ಪಠಣ. ಈ ಭಿಕ್ಕುಗಳಿಗೆ ರಾಜಾಶ್ರಯವಿದೆ. ಆಹಾರ ಮತ್ತಿತರೆ ವಸ್ತುಗಳ ಪೂರೈಕೆಯನ್ನು ದೇಶದ ರಾಜನೇ ನೋಡಿಕೊಳ್ಳುತ್ತಾನೆ.

ಬುದ್ಧ ಪಾಯಿಂಟ್
ಇಲ್ಲಿನ ಮುಖ್ಯ ಆಕರ್ಷಣೆ 'ಬುದ್ಧ ಪಾಯಿಂಟ್‌'. ತಿಂಪುವಿನಿಂದ 8 ಕಿ.ಮೀ. ದೂರದಲ್ಲಿ ಬೆಟ್ಟದ ಮೇಲೆ ಕಂಚಿನ ಬುದ್ಧನನ್ನು ನಿರ್ಮಿಸಲಾಗಿದೆ. 169 ಅಡಿ ಎತ್ತರದಲ್ಲಿರುವ ಈ ಪಾಯಿಂಟ್ ಶಾಂತಿ ಮತ್ತು ಸೌಹಾರ್ದತೆಯ ಸಂಕೇತ. ಇನ್ನೂ ನಿರ್ಮಾಣದ ಹಂತದಲ್ಲಿರುವ ಬುದ್ಧ ಪಾಯಿಂಟ್, ಈಗಲೇ ಜನಪ್ರಿಯ. ತಿಂಪುವಿನ ಯಾವ ಭಾಗದಲ್ಲಿ ನಿಂತರೂ ಬುದ್ಧ ಪಾಯಿಂಟ್ ಕಾಣುತ್ತದೆ.
ಅಬ್ಬಾ, ಅದೇನು ರೇಟು!
ಭಾರತಕ್ಕೂ ಭೂತಾನ್‌ಗೂ ಕಾಲಮಾನದಲ್ಲಿ ಕೇವಲ ಅರ್ಧ ಗಂಟೆಯಷ್ಟೇ ವ್ಯತ್ಯಾಸ. ಭೂತಾನ್‌ನ ಕರೆನ್ಸಿ ನುಲ್‌ಡ್ರಮ್. ನಮ್ಮ ದೇಶದ ಹಣವೂ ಅಲ್ಲಿ ಚಲಾವಣೆಯಾಗುತ್ತದೆ. ಕರಕುಶಲ ವಸ್ತುಗಳೇ ಇಲ್ಲಿನ ಮುಖ್ಯ ಆಕರ್ಷಣೆ. ಅದರಲ್ಲೂ ಮುಖ್ಯವಾಗಿ ಬುದ್ಧ. ಬುದ್ಧ, ಲಾಫಿಂಗ್ ಬುದ್ಧನಿಗೆ ಭಾರಿ ಬೇಡಿಕೆ. ರೇಟು ಕೇಳಿದರೆ ಮಾತ್ರ ಕಣ್ಣೀರು ಬರುತ್ತದೆ. ಕಾರಣವಿಷ್ಟೆ, ಭೂತಾನ್ ನಿಂತಿರುವುದೇ ಭಾರತದ ಮಾರುಕಟ್ಟೆ ಆಧರಿಸಿ. ನಮ್ಮೆಲ್ಲ ಕರಕುಶಲ, ಇತರೆ ವಸ್ತುಗಳನ್ನೂ ಈ ದೇಶ ಆಮದು ಮಾಡಿಕೊಳ್ಳುತ್ತದೆ.

ಎಷ್ಟಾದ್ರೂ ಮದ್ವೆ ಆಗ್ರಪ್ಪಾ...
ಈ ದೇಶದಲ್ಲಿ ಎಷ್ಟು ಜನರನ್ನು ಬೇಕಾದರೂ ಮದುವೆಯಾಗಬಹುದು. ಇಲ್ಲಿ ಹೆಂಗಸರು ಶೇ.75 ಇದ್ದರೆ, ಗಂಡಸರ ಸಂಖ್ಯಾ ಪ್ರಮಾಣ ಶೇ.25! ಹಾಗಾಗಿ ಮಾರುಕಟ್ಟೆ, ಅಂಗಡಿ ಮಳಿಗೆ, ಹೊಲ, ಗದ್ದೆ, ತೋಟದ ಕೆಲಸಗಳಲ್ಲಿ ಹೆಣ್ಮಕ್ಕಳೇ ಕಾಣಸಿಗುತ್ತಾರೆ. ಜಾತಿಯ ಗೊಡವೆ ಇಲ್ಲ. ಇಬ್ಬರು ಇಷ್ಟಪಟ್ಟರೆ ಮದುವೆ. ಸಂಸಾರ ನಡೆಸಲು ಕಷ್ಟವಾದರೆ ಮತ್ತೊಂದು ಮದುವೆ ಆಗಬಹುದು. ವಿಚ್ಛೇದನದ ತಲೆಬಿಸಿ ಇಲ್ಲ.

ಭೂತಾನ್‌ಗೆ ದಾರಿ ಯಾವುದು?
ವೀಸಾ ಬೇಕು. ಟೂರಿಸ್ಟ್ ಪ್ಯಾಕೇಜಿನಲ್ಲಿ ಹೋದರೆ ಒಳಿತು. ಕೋಲ್ಕತ್ತಾ, ನವದೆಹಲಿಯಿಂದ ಪ್ಯಾರೋ ಏರ್‌ಪೋರ್ಟಿಗೆ ಹೋಗಬಹುದು. ವಿಮಾನಯಾನ ದುಬಾರಿ ಎನಿಸಿದರೆ ಬಸ್ಸಿನಲ್ಲೂ ಹೋಗಬಹುದು. ಪಶ್ಚಿಮ ಬಂಗಾಳದ ಶಿಲಿಗುರಿಯಿಂದ ಭೂತಾನ್‌ನ ಗಡಿಯಲ್ಲಿರುವ ಜೈಗಾಂನ್‌ಗೆ ಹೋಗಬಹುದು. ಅಲ್ಲಿಂದ ಪಯಣ ಮುಂದುವರಿಸಬಹುದು.

ಯಾವ ಟೈಮ್ ಸೂಕ್ತ?
ಹಿಮಾಲಯದ ನೆತ್ತಿಯಲ್ಲಿ ಇರುವುದರಿಂದ ಚಳಿ ಜಾಸ್ತಿ. ನವೆಂಬರ್, ಡಿಸೆಂಬರ್ ಅಂತ್ಯದಲ್ಲಿ 3 ಡಿಗ್ರಿ ಸೆಂಟಿಗ್ರೇಡ್ ಚಳಿ. ಮಧ್ಯಾಹ್ನವೇ ರಾತ್ರಿ ಆಗುತ್ತೆ. ಕೊರೆಯುವ ಚಳಿಯ ಕಾರಣ ಬದುಕು ಆರಂಭವಾಗುವುದೇ ಬೆಳಗ್ಗೆ 8ರ ನಂತರ. ಆಗಸ್ಟ್‌ನಿಂದ ನವೆಂಬರ್ ಮಧ್ಯ ಹೋಗಬಹುದು.
ಅತಿಯಾದ ಮರ ಬಳಕೆ
ಇಲ್ಲಿ ಅಧಿಕ ಕಾಡು. ಹೀಗಾಗಿ, ಎಲ್ಲ ಕಟ್ಟಡಗಳಲ್ಲೂ ಹೆಚ್ಚು ಮರಗಳನ್ನೇ ಬಳಸಲಾಗಿದೆ. ಭೂಕಂಪನದ ಕಾಟ ಇರುವುದರಿಂದ ಬಹುಮಹಡಿ ಕಟ್ಟಡ ಕಟ್ಟುವಂತಿಲ್ಲ. ಪ್ರಧಾನಮಂತ್ರಿ ಕಾರ್ಯಾಲಯ, ನ್ಯಾಯಾಲಯ, ಅರಮನೆ, ಮ್ಯೂಸಿಯಂ, ಏರ್‌ಪೋರ್ಟ್... ಎಲ್ಲವಕ್ಕೂ ಭೂತಾನ್ ಶೈಲಿ.

ಅಲ್ಲೊಂದು ಪುಟ್ಟ ಗೌರ್ಮೆಂಟು
ಕೆಲ ವರ್ಷಗಳ ಹಿಂದೆಯಷ್ಟೆ ಇಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬಂದಿದೆ. 42 ಸದಸ್ಯರ ಸಂಸತ್. ಪಶ್ಚಿಮ ಬಂಗಾಳ ಮೂಲದ ಓಬ್ಗೆ ಪ್ರಧಾನಿ. ದೇಶದ ಜನಸಂಖ್ಯೆ 8 ಲಕ್ಷ.ಟಿ



ರಸ್ತೆ ಪಕ್ಕಕ್ಕೇ ಏರ್‌ಪೋರ್ಟ್
ತಿಂಪುವಿನಿಂದ ಕೂಗಳತೆ ದೂರದಲ್ಲಿರುವ ಊರು ಪಾರೋ. 'ಪಾರೋ' ಎಂಬ ನದಿಯ ದಂಡೆ ಮೇಲಿರುವ ಈ ಪುಟ್ಟ ಊರಿಗೆ ಅದೇ ಹೆಸರುಬಂದಿದೆ. ಅಲ್ಲಿ ರಸ್ತೆಯ ಪಕ್ಕದಲ್ಲೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ರಸ್ತೆಯಲ್ಲಿ  ನಡೆದು ಹೋಗುವಾಗ ವಿಮಾನ ಇಳಿಯುವುದು, ಏರುವುದನ್ನು ಅತಿ ಹತ್ತಿರದಿಂದ ನೋಡಬಹುದು. ನಿತ್ಯ ದೆಹಲಿಗೆ, ವಾರಕ್ಕೆ ಮೂರು ಬಾರಿ ಗುವಾಹಟಿಗೆ ವಿಮಾನ ಸೌಕರ್ಯವಿದೆ. ಅಲ್ಲದೆ, ಸಿಂಗಾಪುರ ಮತ್ತು ನೇಪಾಳಕ್ಕೂ ಇಲ್ಲಿಂದ ವಿಮಾನ ಹಾರುತ್ತದೆ.


- ಉಗಮ ಶ್ರೀನಿವಾಸ್
ugamasrinivas@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.