ಖುಷಿ

ಕವನಗಳು ಮಾರಾಟಕ್ಕಿವೆ!

Published On :

ಹನಿಗವನ, ಮಿನಿಗವನ
ಮಿಡಿಕವನ ಮ್ಯಾಕ್ಸಿ ಕವನ
ಭೋರ್ಗರೆದು ಸುರಿದು
ಜಲಪಾತದಂದದಿ ಬರುವ
ಛಂದಸ್ಸು ಅಲಂಕಾರದಿಂದ
ಸಜ್ಜಿತ ಮಹಾಕವನ ಇತ್ಯಾದಿ
ಕವನಗಳು ಮಾರಾಟಕ್ಕಿವೆ...

       ಹರೆಯದ ಹುಡುಗ
       ಚಿತ್ತ ಚಾಂಚಲ್ಯದಿಂದ  
       ಕಲಿತ ಕನ್ನಡವನ್ನೆಲ್ಲ ವ್ಯಯಿಸಿ
       ಹುಡುಗಿಯ ಕಣ್ಣು ಮೂಗು
       ನಡು ನಿತಂಬಗಳ ವರ್ಣಿಸಲು
       ಸೃಷ್ಟಿಸಿದ ಚಂದದ ಚಿತ್ತಾರದ
       ಕವನಗಳು ಮಾರಾಟಕ್ಕಿವೆ...

ಸಂತೋಷ ಕೂಟಕೂ ಕವನ
ಸಂತಾಪ ಸೂಚನೆಗೂ ಕವನ
ಕವಿಗೋಷ್ಠಿಗಾಗಿಯೇ ತಿಣುಕಿ ತೆಗೆದ
ಸಂತೆಗೆ ಮೂರು ಮೊಳದ
ಸಮಯ ಸಾಧಕ ಕವನ, ಇತ್ಯಾದಿ
ಕವನಗಳು ಮಾರಾಟಕ್ಕಿವೆ...

       ಮಂತ್ರಿಯ ಹೊಗಳಲು ಕವನ
       ಮಹೋದಯನ ತೆಗಳಲು ಕವನ
       ಹೆಸರು ಮಾಡಲು ಕವನ
       ಪ್ರಸಿಧ್ಧಿಗಾಗಿಯೂ ಕವನ
       ಪ್ರಶಸ್ತಿಯಿದೆಯೋ ಇದೋ
       ಸಿದ್ಧವಾಯಿತು ಇನ್‌ಸ್ಟಂಟ್ ಕವನ
       ಅದಕೋ ಇದಕೋ ಎದಕೋ ಅಂತೂ
       ಕವನಗಳು ಮಾರಾಟಕ್ಕಿವೆ...

ಕವನ ಕೊಳ್ಳಲು ನಿಮ್ಮಲ್ಲಿಲ್ಲವೋ ಧನ, ಮನ
ಚಿಂತೆ ಬೇಡ ಇಲ್ಲಿದೆ ಉತ್ತಮ ವಿಧಾನ
ಕೈಗೆತ್ತಿರಿ ಲೇಖನಿಯ ಈಗಲೇ ನೀವೂ
ಗೀಚಿಬಿಡಿ ಹತ್ತಿಪ್ಪತ್ತು ಹಸಿಬಿಸಿ ಕವನ
ಅರ್ಥವಾಗಲಿ ಬಿಡಲಿ ಓದುಗರ ಕರ್ಮ
ಹೊತ್ತು ಹೊರಡಿರಿ ನೀವೂ ಕೂಗುತಾ
'ಕವನಗಳು ಮಾರಾಟಕ್ಕಿವೆ'


- ಡಾ. ಶಿವಾನಂದ ಕುಬಸದ
  smkubsad@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.