ಶಾಪಿಂಗ್ ಎಂಬ ಸುಮಧುರ ಸಮಯ
ಕೆಲವರಿಗೆ ಒಂದು ತಪ್ಪು ಗ್ರಹಿಕೆಯಿದೆ. ಅದೇನೆಂದರೆ ಯಾರು ಬೇಕಾದರೂ ಸುಲಭವಾಗಿ ಶಾಪಿಂಗ್ ಮಾಡಬಹುದೆಂದು. ಜೇಬಿನಲ್ಲಿ ಧಾರಾಳ ಹಣ ಹಾಗೂ ಸಮಯವಿದ್ದರೆ ಶಾಪಿಂಗ್ ಮಾಡುವುದೇನು ಮಹಾ ಎಂದು ಅನೇಕರು ಭಾವಿಸಿರಬಹುದು. ಅಷ್ಟೇ ಆಗಿದ್ದರೆ ಶಾಪಿಂಗ್‌ನಲ್ಲಿ ಅಂಥ ಸ್ವಾರಸ್ಯವಿರುತ್ತಿರಲಿಲ್ಲ. ನಿಜಕ್ಕೂ ಶಾಪಿಂಗ್‌ನಂಥ ಕ್ಲಿಷ್ಟಕರ ಕೆಲಸ ಮತ್ತೊಂದಿಲ್ಲ. ಜೀವನವಿಡೀ ಜತೆಯಲ್ಲಿರುವ, ಒಟ್ಟಿಗೆ ಬಾಳುವೆ ಮಾಡುವ, ಎಲ್ಲ ಕಷ್ಟ ಸುಖಗಳನ್ನು ಅನುಭವಿಸುತ್ತಾ ಸಂಸಾರ ನಡೆಸುವ ವ್ಯಕ್ತಿಯನ್ನು ಹುಡುಗಿಯರು ಮೊದಲ ನೋಟದಲ್ಲಿಯೇ ಆರಿಸಿಬಿಡುತ್ತಾರೆ. ಇದಕ್ಕೆ ಹೆಚ್ಚೆಂದರೆ ಐದಾರು ನಿಮಿಷಗಳು ಸಾಕು. ಆದರೆ ಅದೇ ಶಾಪಿಂಗ್‌ಗೆ ಹೋದಾಗ ಒಂದು ಸೀರೆ, ಒಂದು ರವಿಕೆ ಆರಿಸಲು ಒಂದೆರಡು ಗಂಟೆ ತೆಗೆದುಕೊಳ್ಳುತ್ತಾರೆ. ನೂರಾರು ಸೀರೆ ತೆಗೆಸಿ, ಅಂಚು, ಸೆರಗು ನೋಡಿ, ಕೊನೆಯಲ್ಲಿ ಒಂದು ಸೀರೆ ಆರಿಸುತ್ತಾರೆ.
ಶಾಪಿಂಗ್ ನಿಜಕ್ಕೂ ಸವಾಲು ಎಂಬುದು ಈ ಕಾರಣಕ್ಕೆ. ಇಲ್ಲಿ ಎಷ್ಟು ಹಣ ಖರ್ಚು ಮಾಡಿದ್ದೇವೆ ಎಂಬುದಕ್ಕಿಂತ ಎಷ್ಟು ಉಳಿಸಿದ್ದೇವೆ, ಎಷ್ಟು ಚೌಕಾಶಿ ಮಾಡಿದ್ದೇವೆ ಎಂಬುದೂ ಮುಖ್ಯ. ಶಾಪಿಂಗ್‌ನ್ನು 'ಕೊಳ್ಳುಬಾಕ ಸಂಸ್ಕೃತಿಯ ಪ್ರದರ್ಶನ' ಎಂದು ಲಘುವಾಗಿ ಟೀಕಿಸುವವರುಂಟು. ಆದರೆ ಶಾಪಿಂಗ್ ಮೂಲಭೂತವಾಗಿ passtime. ಅದರ ಜತೆಗೆ educative ಸಹ ಹೌದು.
ಸಮಯವಿದ್ದಾಗ ಅಥವಾ ಏನೂ ಕೆಲಸವಿಲ್ಲದಿದ್ದಾಗ, ನೀವೊಬ್ಬರೇ ದೊಡ್ಡ ಶಾಪಿಂಗ್ ಮಾಲ್‌ಗೆ ಹೋಗಿ ಒಂದು ಗಂಟೆ ಕಳೆದು ಬಂದರೆ ದಿಢೀರ್‌ನೆ ್ಡಠಜಛಡಿಜ ಆಗಿರುತ್ತೀರಿ. ಮಾರುಕಟ್ಟೆಗೆ ಬಂದಿರುವ ಹೊಸ ಪ್ರಾಡಕ್ಟ್, ಅವುಗಳನ್ನು ಮಾರುವ ತಂತ್ರ, ಜಾಹೀರಾತು, ಮಾರ್ಕೆಟಿಂಗ್ ಗಿಮಿಕ್‌ಗಳು ಗೊತ್ತಾಗುತ್ತವೆ. ಟೂತ್‌ಪೇಸ್ಟ್ ಖರೀದಿಸಲೆಂದು ನೀವು ಬಿಗ್‌ಬಜಾರ್‌ಗೋ ಫುಡ್‌ವರ್ಲ್ಡ್‌ಗೋ ಹೋದಾಗ ನಿಮಗೆ ಅಚ್ಚರಿ ಹುಟ್ಟಿಸುವ ಸಂಗತಿಯೆಂದರೆ ಟೂತ್‌ಪೇಸ್ಟ್‌ಗಳಲ್ಲಿರುವ ಹತ್ತು- ಇಪ್ಪತ್ತು ಬಗೆ. ಒಂದು ಕ್ಷಣಕ್ಕೆ ಯಾವುದನ್ನು ಖರೀದಿಸಬೇಕೆಂದು ತಿಳಿಯದೇ ಗೊಂದಲವಾಗಬಹುದು. ಹದಿನೈದಿಪ್ಪತ್ತರಲ್ಲಿ ಒಂದನ್ನು ಆರಿಸಿಕೊಳ್ಳುವುದು ಸುಲಭವಲ್ಲ. ಹೀಗಾಗಿ ಇದು ಬರೀ ಕೊಳ್ಳುಬಾಕತನದ ಪ್ರದರ್ಶನ ಎಂದು ಭಾವಿಸಬೇಕಿಲ್ಲ. ಯಾವುದಾದರೂ ಶಾಪಿಂಗ್ ಮಾಲ್‌ನಲ್ಲಿ ಅರ್ಧ ಕಿ.ಮೀ. ನಡೆದರೆ ಅದು ಪುಟ್ಟ ಲೋಕಸಂಚಾರವೇ! ಯಾವುದಾದರೂ ಇಲೆಕ್ಟ್ರಾನಿಕ್ ಸಾಮಾನುಗಳನ್ನು ಮಾರುವ ಅಂಗಡಿಯಲ್ಲಿ ಒಂದು ಸುತ್ತು ಹಾಕಿದರೆ ಮಾರುಕಟ್ಟೆಯಲ್ಲಾದ ಬದಲಾವಣೆ, ತಂತ್ರಜ್ಞಾನದಲ್ಲಾದ ಸುಧಾರಣೆ ಬಗ್ಗೆ ತಾಜಾ ವಿವರಗಳು ಸಿಗುತ್ತವೆ. ಇದು ಒಂದು ಪುಸ್ತಕ ಓದಿದ್ದಕ್ಕಿಂತ ಕಡಿಮೆಯೇನಲ್ಲ. ನೀವು ಎಲ್ಲ ವಸ್ತುಗಳನ್ನು ಖರೀದಿಸಲೇಬೇಕೆಂದಿಲ್ಲ. ಅದರ ಅಗತ್ಯವೂ ಕಾಣದಿರಬಹುದು.
ಒಮ್ಮೆ ಯೋಗಿ ದುರ್ಲಭಜೀ ಅವರು ಶಾಪಿಂಗ್ ಮಾಲ್‌ಗೆ ಹೋಗಿದ್ದರಂತೆ. ಅಲ್ಲಿ ಸುಮಾರು ಐನೂರಕ್ಕಿಂತ ಹೆಚ್ಚು ಅಂಗಡಿಗಳಿದ್ದವಂತೆ. ದುರ್ಲಭಜೀ ಸುಮಾರು ಮೂರು ಗಂಟೆ ಅವಧಿಯಲ್ಲಿ ಇಡೀ ಮಾಲ್‌ನ್ನು ಒಂದು ಸುತ್ತು ಹಾಕಿ ಏನನ್ನೂ ಖರೀದಿಸದೇ ಬರಿಗೈಯಲ್ಲಿ ವಾಪಸ್ ಬಂದರಂತೆ. ಇದನ್ನು ನೋಡಿದ ಅವರ ಶಿಷ್ಯ ಯೋಗಿ ನಿಶ್ಚಿಂತಜೀ 'ಯೋಗಿಜೀ, ಇಂಥ ದೊಡ್ಡ ಮಾಲ್‌ನಲ್ಲಿ ನಿಮ್ಮನ್ನು ಯಾವ ವಸ್ತುವೂ ಆಕರ್ಷಿಸಲೇ ಇಲ್ಲವಾ? ಯಾವುದೂ ಬೇಕು ಅಂತ ಅನಿಸಲಿಲ್ಲವಾ?' ಎಂದು ಕೇಳಿದರಂತೆ. ಅದಕ್ಕೆ ದುರ್ಲಭಜೀ ಹೇಳಿದರಂತೆ- 'ಇಡೀ ಶಾಪಿಂಗ್ ಮಾಲ್‌ನಲ್ಲಿ ನನಗೆ ಬೇಕಾದದ್ದು ಏನೂ ಇಲ್ಲ. ಕಾರಣ ಅವ್ಯಾವುವೂ ಇಲ್ಲದೇ ನಾನು ಜೀವನವನ್ನು ಸುಂದರವಾಗಿ ಕಳೆಯಬಲ್ಲೆ.'
ಹಾಗಿದ್ದರೆ ಶಾಪಿಂಗ್ ಯಾಕೆ?
ಕಾರಣ ಎಲ್ಲರೂ ಯೋಗಿ ದುರ್ಲಭಜೀ ಅಲ್ಲವಲ್ಲ.
ಶಾಪಿಂಗ್ ನಮ್ಮ ದೃಷ್ಟಿಕೋನ, ವ್ಯಕ್ತಿತ್ವ ನಿರ್ಧರಿಸುವ ಸಂಗತಿ ಎಂದು ಭಾವಿಸುವ ಕಾಲಘಟ್ಟದಲ್ಲಿ ನಾವು ಜೀವಿಸುತ್ತಿದ್ದೇವೆ. ನಾವ್ಯಾರು ಎಂಬುದನ್ನು ನಮ್ಮ ಶಾಪಿಂಗ್ ಹೇಳುತ್ತದೆ. ಅದಕ್ಕೆ ಪೂರಕವಾಗಿ ಮಾರುಕಟ್ಟೆಗೆ ವಸ್ತುಗಳನ್ನು ಬಿಡುವ ಹೊಸ ತಂತ್ರಗಳನ್ನು ಅನುಸರಿಸಲಾಗುತ್ತಿದೆ. ಒಬ್ಬ ಗ್ರಾಹಕನ ಬಗ್ಗೆ ಅಲ್ಲಿನ ಸರ್ಕಾರಕ್ಕಿಂತ ಹೆಚ್ಚಿನ ಮಾಹಿತಿ ವಾಲ್‌ಮಾರ್ಟ್‌ನಂಥ ಸಂಸ್ಥೆ ಬಳಿಯಿದೆ. ಸುನಾಮಿ ಸಮುದ್ರದಲ್ಲಿ ಹದಿನೈದಿಪ್ಪತ್ತು ವರ್ಷಗಳಲ್ಲೊಮ್ಮೆ ಸಂಭವಿಸಬಹುದು. ಆದರೆ ವಾಲ್‌ಮಾರ್ಟ್ ಮನಸ್ಸು ಮಾಡಿದರೆ, ವಾರವಾರವೂ ತನ್ನ ಮಾಲ್‌ಗಳಲ್ಲಿ ಸುನಾಮಿಯನ್ನೆಬ್ಬಿಸಬಹುದು. ಈ ಸುನಾಮಿ ಅಮೆರಿಕದಲ್ಲೊಂದೇ ಅಲ್ಲ, ಜಗತ್ತಿನ ವಿವಿಧ ದೇಶಗಳಲ್ಲಿರುವ ತನ್ನ ಮಾಲ್‌ಗಳಿಗೂ ವಿಸ್ತರಿಸಬಹುದು. ಅಮೆರಿಕದಂಥ ದೇಶದ ಸರ್ಕಾರ ತೆಗೆದುಕೊಂಡ ನಿರ್ಧಾರ, ಜನಸಾಮಾನ್ಯರಿಗೆ ತಿಳಿಯಲು ತಲುಪಲು ತುಸು ಕಾಲಾವಕಾಶ ಬೇಕಾಗಬಹುದು. ಆದರೆ ವಾಲ್‌ಮಾರ್ಟ್‌ನ ಮಳಿಗೆಗಳಲ್ಲಿ ಸಣ್ಣಪುಟ್ಟ ಬದಲಾವಣೆಯಾದರೂ ಅದು ಹೆಂಗಸರ ಪಾಲಿಗೆ ಬ್ರೇಕಿಂಗ್ ನ್ಯೂಸ್! ಈ ಸಂಸ್ಕೃತಿ ವಾಲ್‌ಮಾರ್ಟ್‌ಗೆ ಮಾತ್ರ ಸೀಮಿತವಾಗಿ ಉಳಿದಿಲ್ಲ. ನಮ್ಮ ಬೀದಿಯಲ್ಲಿರುವ ಸೂಪರ್ ಬಜಾರ್‌ಗೂ ಈ ಮಾತು ಅನ್ವಯ.
ಶಾಪಿಂಗ್ ಮಾಡುವ ಭರದಲ್ಲಿ ನಮಗೆ ಬೇಕಾದುದನ್ನು ಖರೀದಿಸುವ ಆಯ್ಕೆ ಗುಣ ನಮ್ಮನ್ನು ಆಳಬೇಕೇ ಹೊರತು, ಒಂದು ಖರೀದಿಸಿದರೆ ಎರಡು ಉಚಿತ ಎಂಬ ಆಕರ್ಷಕ ಸೆಳೆತಕ್ಕೆ ಬಿದ್ದು, ಅಗತ್ಯವಿರದ ಉಚಿತವಾಗಿ ಕೊಟ್ಟ ಆ ಎರಡನ್ನು ಖರೀದಿಸುವ ಮೋಹಕ್ಕೆ ಒಳಗಾಗಬಾರದು. ಶಾಪಿಂಗ್‌ನ ಸಾಧಕ ಬಾಧಕ ಇರುವುದು ಇಲ್ಲಿಯೇ.
- ವಿಶ್ವೇಶ್ವರ ಭಟ್
ಪ್ರಧಾನ ಸಂಪಾದಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

