ಯಾವ ಅನುಕೂಲವೂ ಆಗುವುದಿಲ್ಲ
-ಹೆಸರು, ಊರು ಬೇಡ
ತಂದೆ ಹಾಗೂ ತಮ್ಮ ಉದ್ಯೋಗದಲ್ಲಿದ್ದಾರೆ. ನಾನು ವಿವಾಹಿತ ನಿರುದ್ಯೋಗಿ. ಸರ್ಕಾರದ ಉದ್ಯೋಗದಲ್ಲಿ ಮೀಸಲು ಸೌಲಭ್ಯ ಪಡೆಯಲು ತಂದೆಯ ಆದಾಯವೂ ಲೆಕ್ಕಕ್ಕೆ ಬರುವುದೇ? ಪಾಲು ಪತ್ರ ಪಡೆದರೆ ಸಹಾಯವಾಗುತ್ತದೆಯೇ?
- ಸರ್ಕಾರಿ ಸುತ್ತೋಲೆ ಡಿಪಿಎಆರ್-20ಎಸ್‌ಬಿಸಿ-82, ತಾ. 28-12-83 ಹಾಗೂ ಇತರ ಸರ್ಕಾರಿ ಆದೇಶಗಳನ್ವಯ ಒಬ್ಬ ಅಭ್ಯರ್ಥಿಯ ಕುಟುಂಬದ ಆದಾಯದಲ್ಲಿ ಆತನ ತಂದೆ ತಾಯಿಯರ ಆದಾಯವೂ ಗಣನೆಗೆ ಬರುತ್ತದೆ. ಅಂತಹ ಅಭ್ಯರ್ಥಿಯು ಕುಟುಂಬದಿಂದ ಬೇರೆಯಾಗಿದ್ದು ಬೇರೆ ವಾಸಿಸುತ್ತಿದ್ದರೂ ಇದು ಅನ್ವಯವಾಗುತ್ತದೆ. ಆದ್ದರಿಂದ ಈ ವಿಷಯದಲ್ಲಿ ನಿಮಗೆ ಯಾವ ರೀತಿಯ ಅನುಕೂಲವೂ ಕಾಣುವುದಿಲ್ಲ. ಹೆಚ್ಚಿನ ಮಾಹಿತಿಯನ್ನು ಜಿಲ್ಲಾ ಹಿಂದುಳಿದ ವರ್ಗದ ಕಚೇರಿಯಲ್ಲಿ ಪಡೆಯಬೇಕು.
ಜಮೀನನ್ನು ಲೀಸ್‌ಗೆ ಕೊಡುವಂತಿಲ್ಲ
-ಶಿವಣ್ಣ, ಉಟಗನೂರು, ಮಾನ್ವಿ
ವ್ಯಕ್ತಿಯೊಬ್ಬ ನನ್ನ ಹೊಲವನ್ನು ತನ್ನ ತಂದೆಯ ಹೆಸರಿನಲ್ಲಿ ಎಂಟು ವರ್ಷಗಳ ಅವಧಿಗೆ ಲೀಸ್‌ಗೆ ಪಡೆದು ಅದನ್ನು 2 ರು. ಸ್ಟಾಂಪ್ ಕಾಗದದ ಮೇಲೆ ಬರೆಸಿಕೊಂಡಿದ್ದಾನೆ. ಆತನ ತಂದೆ ಈಗ ಕಾಣೆಯಾಗಿದ್ದು, ಆತ ಜಮೀನು ಬಿಡುವುದಿಲ್ಲ ಎನ್ನುತ್ತಿದ್ದಾನೆ. ಈ ಮಧ್ಯೆ ನಾನು 6-7 ವರ್ಷಗಳ ಹಿಂದೆ ಆತನಿಗೆ ಒಂದು ಎಕರೆ ಜಮೀನು ಮಾರಿದ್ದೇನೆ. ಆದರೆ ನೋಂದಣಿಯಾಗಿಲ್ಲ. ಈಗ ನೋಂದಣಿಗೆ ಒತ್ತಾಯಿಸುತ್ತಿದ್ದಾನೆ. ನಾನು ಈಗಿನ ಮಾರ್ಕೆಟ್ ದರ ಕೊಡು ಎಂದು ಒತ್ತಾಯಿಸುತ್ತಿದ್ದೇನೆ. ಸರಿಯಲ್ಲವೇ?
- ಕರ್ನಾಟಕ ಭೂಸುಧಾರಣೆ ಕಾಯ್ದೆಯಂತೆ ಆ ಕಾಯ್ದೆ ಜಾರಿಗೆ ಬಂದ ನಂತರ ಯಾರೂ ಯಾರಿಗೂ ಜಮೀನನ್ನು ಗುತ್ತಿಗೆಗೆ ಕೊಡುವಂತಿಲ್ಲ. ಆದ್ದರಿಂದ ಸ್ಟಾಂಪ್‌ನ ಬೆಲೆ ಗೌಣ. ಹೇಗೂ ಅವಧಿ ಮುಗಿದಿದೆಯಾದ್ದರಿಂದ ನೀವು ನ್ಯಾಯಾಲಯದಲ್ಲಿ ದಾವಾ ಹಾಕಿ ನಿಮ್ಮ ಜಾಗ ಬಿಡಿಸಿಕೊಳ್ಳಬಹುದು. ಇನ್ನು ಜಮೀನು ಮಾರಾಟ ವಿಚಾರ, ಮಾರಾಟದ ಒಪ್ಪಂದ ಲಿಖಿತವಾಗಿರಬೇಕೆಂಬ ನಿಯಮವೇನಿಲ್ಲ. ಒಪ್ಪಂದಕ್ಕೆ ಸಾಕ್ಷ್ಯಾಧಾರವಿದ್ದರೆ ಸಾಕು. ಅದರಂತೆ ನೀವು ನಡೆಯಬೇಕು. ಹೆಚ್ಚಿಗೆ ಕೇಳುವ ವಿಷಯ ನಿಮಗೆ ಬಿಟ್ಟಿದ್ದು.
ರಿಜಿಸ್ಟ್ರಾರ್‌ಗೆ ದೂರು ನೀಡಿ
-ರಾಮಕೃಷ್ಣಪ್ಪ, ಹಿರಿಯೂರು
ಸಹಕಾರ ಸಂಘವೊಂದು 1985ರಿಂದ 'ಎ' ಶ್ರೇಣಿಯದಾಗಿದ್ದು ಕೋಟ್ಯಂತರ ರು. ಅವ್ಯವಹಾರ ನಡೆದಿದ್ದರೂ ಸಹಕಾರಿ ಇಲಾಖೆಯು ಸಮರ್ಪಕವಾಗಿ ಲೆಕ್ಕಪರಿಶೋಧನೆ ನಡೆಸದೆ ಅವ್ಯವಹಾರ ಬೆಳಕಿಗೆ ಬಂದಿಲ್ಲ. ಇದನ್ನು ಸರಿಪಡಿಸಲು ಏನು ಕ್ರಮ ತೆಗೆದುಕೊಳ್ಳಬೇಕು?
- ಸಹಕಾರಿ ಕಾಯ್ದೆಯನ್ವಯ (ನೀವು ಸಂಘದ ಸದಸ್ಯರಾಗಿದ್ದರೆ) ರಿಜಿಸ್ಟ್ರಾರ್ ಅವರಿಗೆ ದೂರು ನೀಡಿ ನಿರ್ದಿಷ್ಟ ಪ್ರಕರಣಗಳನ್ನು ಎತ್ತಿ ತೋರಿಸಬಹುದು. ಅವರು ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬಹುದು. ಕಾನೂನಿನಲ್ಲಿ ಪರಿಹಾರವಿರುವಾಗ ಲೋಕಾಯುಕ್ತರಿಗೆ ಇದರ ಬಗ್ಗೆ ಅಧಿಕಾರವಿರುವುದಿಲ್ಲ. ರಿಜಿಸ್ಟ್ರಾರ್ ಅವರು ಸರಿಯಾಗಿ ಕ್ರಮ ಕೈಗೊಳ್ಳದಿದ್ದರೆ ಕರ್ನಾಟಕ ಮೇಲ್ಮನವಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬಹುದು.
= ಎಚ್.ಆರ್. ಕಸ್ತೂರಿರಂಗನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

