ಝಣಝಣ ಹಣ

ಒಂದು ದಿನ ನಿಂಗನೆಂಬುವನು ಪೇಟೆಗೆ ಬಂದ ಆದರೆ ಅವನು ಬಡವನಾಗಿದ್ದಾರಿಂದ ಅವನಲ್ಲಿ ಕೊಳ್ಳಲು ಹೆಚ್ಚು ಹಣವಿರಲಿಲ್ಲ. ಹಾಗೆ ಸುಮ್ಮನೆ ಪೇಟೆಯಲ್ಲಿ ಸುತ್ತಾಡುತ್ತಾ ಅಲ್ಲಿನ ಅಂಗಡಿಗಳನ್ನೆಲ್ಲ ಸುಮ್ಮನೆ ನೋಡುತ್ತಾ ಓಡಾಡುತ್ತಿದ್ದನು. ಹೀಗಿರುವಾಗ ಅವನು ಒಂದು ಸಿಹಿತಿಂಡಿಯ ಅಂಗಡಿಯ ಬಳಿಗೆ ಬಂದನು. ಅಂದವಾಗಿ ಜೋಡಿಸಿಟ್ಟಿದ್ದ ಸಿಹಿತಿಂಡಿಗಳು ಗಾಜಿನ ಪೆಟ್ಟಿಗೆ ಮೂಲಕ ಚೆಂದವಾಗಿ ಕಾಣಿಸುತ್ತಿದ್ದವು. ತಿನ್ನಬೇಕೆಂಬ ಬಯಕೆ ಉತ್ಕಟವಾಗಿ ಹಾಗೇ ಅವುಗಳನ್ನು ನೋಡುತ್ತಾ ನಿಂತನು. ಆದರೆ ಅವುಗಳ ಬೆಲೆ ಜಾಸ್ತಿಯಿತ್ತು. ಅಷ್ಟೊಂದು ಹಣವನ್ನು ನೀಡಿ ಸಿಹಿ ತಿಂಡಿಯನ್ನು ಕೊಂಡುಕೊಳ್ಳಲು ಅವನಿಂದ ಸಾಧ್ಯವಿರಲಿಲ್ಲ. ಹಾಗಾಗಿ ಅವನು ಅಂಗಡಿಯ ಪಕ್ಕವೇ ನಿಂತುಕೊಂಡು ಅಲ್ಲಿ ಹರಡಿಕೊಂಡಿದ್ದ ಸಿಹಿತಿಂಡಿಯ ಸುವಾಸನೆಯನ್ನು ಹೀರುತ್ತಾ ಆನಂದ ಪಡುತ್ತಿದ್ದನು. ಆನಂದ ಜಾಸ್ತಿಯಾಗಿ ತಿನ್ನಲಾಗಲಿಲ್ಲವಲ್ಲ ಎಂದು ಪರಿತಪಿಸಿಕೊಳ್ಳುತ್ತಾ ಅಲ್ಲಿಂದ ಹೊರಡಲು ಅನುವಾದನು. ಅಲ್ಲಿಯವರೆಗೂ ಇದನ್ನೆಲ್ಲ ಗಮನಿಸುತ್ತಿದ್ದ ಅಂಗಡಿಯ ಮಾಲೀಕ ನಿಂಗನನ್ನು ಹತ್ತಿರ ಕರೆದು ಹೀಗೆಂದ 'ಅಷ್ಟಕ್ಕೆ ಐದು ರೂಪಾಯಿಗಳಾಗುತ್ತವೆ, ನನ್ನ ಗೆಳೆಯನೆ'. ಏನು ಅರ್ಥವಾಗದ ನಿಂಗನು ಮತ್ತೆ ಕೇಳಿದನು, 'ಸ್ವಾಮಿ, ಯಾವುದು ಯಾವುದಕ್ಕೆ?'.
'ನೋಡಯ್ಯಾ, ಇಲ್ಲಿಯವರೆಗೆ ನೀನು ಇಲ್ಲಿ ನಿಂತು ಸಿಹಿತಿಂಡಿಗಳ ಸುವಾಸನೆಯನ್ನು ಸವಿದೆಯಲ್ಲವೇ ಆ ಸುವಾಸನೆಯನ್ನು ಸವಿದದ್ದಕ್ಕೆ ಹಣ ನೀಡಬೇಕು'.
'ಸುವಾಸನೆಗೆ ಹಣ ಕೊಡಬೇಕೇ ಈವರೆಗೆ ಸುವಾಸನೆಗೆ ಹಣ ಕೊಟ್ಟವರ ಬಗ್ಗೆ ನಾನು ಎಲ್ಲಿಯೂ ಕೇಳಿಲ್ಲವಲ್ಲ' ಎಂದನು ನಿಂಗ. ತಕ್ಷಣವೇ ಅವನಿಗೊಂದು ಯೋಚನೆ ಹೊಳೆಯಿತು. ತನ್ನ ಕೈಯನ್ನು ಜೇಬಿನೊಳಗೆ ಹಾಕಿ ಅಲ್ಲಿದ್ದ ಕೆಲವು ನಾಣ್ಯಗಳಿಂದ 'ಝಣಝಣ' ಸದ್ದು ಮಾಡಿದನು. 'ಸ್ವಾಮೀ ಈಗ ನಿಮಗೆ ನಾಣ್ಯಗಳ ಝಣಝಣ ಸದ್ದು ಕೇಳಿಸುತ್ತಿದೆಯೇ ಎಂದನು. 'ಹೌದು, ನನಗೆ ಕೇಳಿಸುತ್ತಿದೆ' ಎಂದನು ಆ ಮಾಲೀಕ. 'ಹಾಗಿದ್ದರೆ ಈ ಝಣಝಣ ಸದ್ದೇ ನಿಮ್ಮ ಸುವಾಸನೆಯ ಬೆಲೆ' ಎಂದನು ನಿಂಗ. ಏನೂ ಅರ್ಥವಾಗದವನಂತೆ ಮಾಲೀಕ ನಿಂಗನನ್ನೇ ನೋಡುತ್ತಿದ್ದನು. ಮುಂದುವರೆದು ನಿಂಗ ಹೀಗೆದನು 'ಸ್ವಾಮಿ, ನಿಮ್ಮ ಅಂಗಡಿಯ ಸಿಹಿತಿಂಡಿಯ ವಾಸನೆಯಿಂದಲೇ ನನ್ನ ಹಸಿವು ತಣಿದು ರುಚಿ ಸಿಗುವುದಿದ್ದರೆ ಈ ಝಣಝಣ ಸದ್ದೇ ಅದಕ್ಕೆ ಸರಿಯಾದ ಬೆಲೆ, ಈಗ ಅದು ಸಿಕ್ಕಂತಾಯಿತಲ್ಲವೇ?' ಎಂದು ಅಲ್ಲಿಂದ ಹೊರಟನು. ಆ ಅಂಗಡಿ ಮಾಲೀಕ ಮಾತ್ರ ತನ್ನ ಉಪಾಯ ಫಲಿಸಲಿಲ್ಲವಲ್ಲ ಎಂದೂ, ತನಗೇ ಚಳ್ಳೆಹಣ್ಣು ತಿನ್ನಿಸಿಬಿಟ್ಟನಲ್ಲ ಎಂದು ಅವಕ್ಕಾಗಿ ನಿಂತುಬಿಟ್ಟನು.
- ವೀರೇಶ ಮಾಶೆಟ್ಟಿ,
ವಂದಾಲ, ನಿಡಗುಂಡಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


