ಜೆರಾಲ್ಡನೂ ಜಾಕ್ಸನ್ನಾದ!

ನಾನೊಂದು ಕಥೆ ಓದಿದೆ. ಸಣ್ಣಕಥೆ. ಮತ್ತದು ಮಕ್ಕಳ ಕಥೆ. ಆದರೂ ಅದರ ನೀತಿ ದೊಡ್ಡವರಿಗೆ ಹೆಚ್ಚು ಅನ್ವಯಿಸುತ್ತದೆ. ಕಥೆಯ ಹೆಸರು "Giraffe’s cant dance' ಅಂದರೆ ಜಿರಾಫೆಗಳಿಗೆ ಕುಣಿಯಲು ಆಗುವುದಿಲ್ಲ ಎಂದು. ಅದು ನಮಗೆಲ್ಲ ತಿಳಿದ ಸತ್ಯ. ಈ ಸಣ್ಣ ನಿಜವನ್ನು ಇಟ್ಟುಕೊಂಡು ಗಿಲ್ಸ್ ಆ್ಯಂಡ್ರ್ಯೂ ಎಂಬುವವರು ಒಂದು ಸುಂದರ ಇಲ್ಲುಸ್ಟ್ರೇಟೆಡ್ ಪುಸ್ತಕವನ್ನು ಹೊರತಂದಿದ್ದಾರೆ. ಪುಸ್ತಕವು ತುಂಬ ಜನಪ್ರಿಯವಾಗಿದೆ.
ಕಥೆಯ ಸಾರಾಂಶ ಇಷ್ಟೇ- ಆಫ್ರಿಕದ ಕಾಡಿನಲ್ಲಿ ಜೆರಾಲ್ಡ್ ಎಂಬ ಜಿರಾಫೆ ಇರುತ್ತದೆ. ಚೆನ್ನಾಗಿ ಕುಣಿಯಬೇಕು ಎಂಬುದು ಆ ಜಿರಾಫೆಯ ಆಸೆ. ಆದರೆ ಜೆರಾಲ್ಡ್‌ನ ಕಾಲು ತೆಳ್ಳಗೆ ಮತ್ತು ಉದ್ದ. ನರ್ತಿಸಲು ಹೋದಾಗಲೆಲ್ಲ ಕಾಲುಗಳು ಒಂದಕ್ಕೊಂದು ತೊಡರಾಗಿ ಕುಣಿತ ಸಾಧ್ಯವಾಗುತ್ತಿರಲಿಲ್ಲ. ಹೀಗಿರುವಾಗ ಕಾಡಿನ ವಾರ್ಷಿಕ 'ನರ್ತನಾ ದಿನಾಚರಣೆ' ಬಂದುಬಿಡುತ್ತದೆ. ಪ್ರಾಣಿಗಳೆಲ್ಲ ತಮ್ಮ ತಮ್ಮ ನರ್ತನಾ ಸಾಮರ್ಥ್ಯವನ್ನು ಎಲ್ಲರಿಗೂ ತೋರಿಸಿಕೊಳ್ಳುತ್ತವೆ. ಜೆರಾಲ್ಡ್‌ನ ಸರದಿ ಬಂದಾಗ ಅದು ಕುಣಿಯಲು ಪ್ರಯತ್ನಿಸುವುದು. ಆದರೆ ಎಂದಿನಂತೆ ಕುಣಿಯಲಾಗದೆ ನಗೆಪಾಟಲಿಗೀಡಾಗುವುದು. ಬೇಸರದಿಂದ ಮನೆಗೆ ತೆರಳುತ್ತಿದ್ದ ಜೆರಾಲ್ಡ್‌ಗೆ ಒಂದು ಮಿಡತೆ ಎದುರಾಗುತ್ತದೆ. ಅದು ಜೆರಾಲ್ಡ್‌ಗೆ ಕುಣಿಯುವ ರಹಸ್ಯವನ್ನು ಹೇಳಿಕೊಡುತ್ತದೆ. ಮನಸಿಟ್ಟು ಕೇಳಿದರೆ ಎಲ್ಲ ವಸ್ತುವಿನಲ್ಲೂ ಸಂಗೀತ ಕೇಳಿಸುತ್ತದೆ. ನಮಗೆ ಹಿಡಿಸುವ ಸಂಗೀತ ದೊರೆತರೆ, ನಾವು ಕುಣಿಯಬಹುದು ಎಂಬ ಗುಟ್ಟು ಹೇಳುತ್ತದೆ. ಗಮನವಿಟ್ಟು ಕೇಳಿದಾಗ ಜೆರಾಲ್ಡ್‌ಗೆ ಗಾಳಿಯಲ್ಲಿ, ಮರಗಳಲ್ಲಿ, ಪ್ರಕೃತಿಯಲ್ಲಿ ಇಂಪಾದ ಸಂಗೀತ ಕೇಳಿಸುತ್ತದೆ. ಆ ಸಂಗೀತಕ್ಕೆ ತಕ್ಕಂತೆ ಜೆರಾಲ್ಡ್ ತುಂಬಾ ಅದ್ಭುತವಾಗಿಯೇ ಕುಣಿಯುತ್ತಾನೆ. ಜೆರಾಲ್ಡ್‌ನ ಕುಣಿತವನ್ನು ನೋಡಿ ಇತರೆ ಪ್ರಾಣಿಗಳೆಲ್ಲ ನಿಬ್ಬೆರಗಾಗುತ್ತವೆ. ಇಷ್ಟು ಚೆನ್ನಾಗಿ ಕುಣಿಯಲು ಹೇಗೆ ಸಾಧ್ಯ ಎಂದು ಕೇಳಿದಾಗ ಜೆರಾಲ್ಡ್ ಹೇಳುವುದು ಒಂದೇ ಮಾತು; 'We all can dance when we find the music that we love'.
ನಿಜ, ಇಷ್ಟಪಡುವ ಸಂಗೀತ ಕಿವಿಗೆ ಬಿದ್ದರೆ ನಾವೆಲ್ಲರೂ ಕುಣಿಯಬಹುದು. ಈ ಒಂದು ಸಾಲು ಎಷ್ಟು ನವಿರಾದ ಪಾಠವನ್ನು ತಿಳಿ ಹೇಳುವುದು. ಒಬ್ಬೊಬ್ಬ ಮನುಷ್ಯನೂ ವಿಭಿನ್ನ, ಅಂತೆಯೇ ಅವನ ಅವಶ್ಯಕತೆಗಳೂ ಬೇರೆ ಬೇರೆ. ನಾವು ಎಲ್ಲ ಸಮಯದಲ್ಲಿ, ಎಲ್ಲರಂತೆ ಇರಲು ಸಾಧ್ಯವಿಲ್ಲ. ಪ್ರತಿಯೊಬ್ಬನಿಗೂ ತನ್ನದೇ ನ್ಯೂನತೆಗಳಿವೆ. ಅವುಗಳನ್ನು ಮೀರಿ ನಿಲ್ಲುವ ಪ್ರಯತ್ನ ಮಾಡಬೇಕೆ ವಿನಾ ಬೇರೆಯವರ ಕಾರ್ಬನ್ ಕಾಪಿಯಾಗಲು ನಾವೆಂದೂ ಮುಂದಾಗಬಾರದು. ಕೆಲವು ಸಂದರ್ಭಗಳಿಗೆ ನಾವು ಹೊಂದಿಕೊಳ್ಳಲು ಆಗದಿದ್ದಾಗ ಮನಸ್ಸು ಚಿಕ್ಕದು ಮಾಡಿಕೊಳ್ಳಬಾರದು. ಬೇರೆಯವರ ಒಳ್ಳೆಯ ಗುಣಗಳನ್ನು ನಾವೂ ಅನುಸರಿಸಬಹುದೇ ಹೊರತು ನಾವು ಎಂದಿಗೂ ಇನ್ನೊಬ್ಬ ವ್ಯಕ್ತಿ ಆಗಲು ಸಾಧ್ಯವಿಲ್ಲ. ನಮ್ಮ ಸ್ವಂತಿಕೆಯನ್ನು ಮೊದಲು ಗೌರವಿಸಿಕೊಳ್ಳೋಣ. ಈ ಜಗತ್ತಲ್ಲಿ ಪ್ರತಿಯೊಬ್ಬರಿಗೂ ಒಂದು ದಾರಿ ಇದೆ. ಇನ್ನೂ ನಾವಲ್ಲಿ ನಡೆದಿಲ್ಲ. ಅಲ್ಲೆಲ್ಲ ಬೆಳೆದಿರುವ ಹುಲ್ಲಿನ ಮೇಲೆ ಹೆಜ್ಜೆಯಿಟ್ಟರೆ, ಆ ಹಾದಿ ಸವೆದು ಸುಂದರವಾಗುತ್ತದೆ. ನಮ್ಮ ಗುರಿಯನ್ನು ಮುಟ್ಟಬಹುದು.
= ಸ್ವಾತಿ ಟಿ.ಎಸ್.
swathisanmathi7@gmail.com
'ಹ್ಯಾಗೆ ಬರೆಯೋದು?', 'ನಾವ್ ಬರೆದಿದ್ದನ್ನ ಪ್ರಕಟಿಸ್ತಾರಾ?' ಎಂಬ ಆತಂಕ ಬದಿಗಿಟ್ಟು ನಿಮ್ಮ ಮೊದಲ ಬರಹಗಳನ್ನು ನಮಗೆ ಕಳುಹಿಸಿ. 'ಇದೇ ಮೊದಲ ಬಾರಿಗೆ ನನ್ನ ಬರಹ ಪ್ರಕಟವಾಗಿದೆ' ಎಂಬ ಖುಷಿ ನಿಮ್ಮದಾದರೆ ಸಾಕು. ತೊದಲು ಬರಹಗಳಿಗೇ ಇರುವ ಅಂಕಣ ಇದು, 'ಮೊದಲ ಖುಷಿ'. ನೀವೂ ಗೀಚಿ... khushimag@gmail.comನಮ್ಮ ಅಂಚೆ ವಿಳಾಸ: ಕನ್ನಡಪ್ರಭ, 'ಮೊದಲ ಖುಷಿ' ವಿಭಾಗ, ನಂ.1, ಕ್ವೀನ್ಸ್ ರಸ್ತೆ, ಬೆಂಗಳೂರು-01
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


