ಖುಷಿ

ಓದುಗ ಮಿತ್ರ ವಿಮರ್ಶಕ ಅಶೋಕ

Published On :

ಕನ್ನಡದ ನವ್ಯ ಮತ್ತು ನವ್ಯೋತ್ತರ ಕಾಲದ ಪ್ರಮುಖ ವಿಮರ್ಶಕರೆಂದು ಗುರುತಿಸಲಾಗಿರುವ ಟಿ.ಪಿ. ಅಶೋಕ ಅವರು ಬರೆದಿರುವ ಮೂವತ್ತು ವಿಮರ್ಶೆಯ ಲೇಖನಗಳನ್ನು ಒಳಗೊಂಡ ಕೃತಿ 'ಸಾಹಿತ್ಯ ಸಮೃದ್ಧಿ'. ಇವು ಬೇರೆ ಬೇರೆ ಪತ್ರಿಕೆಗಳಲ್ಲಿ ಕೆಲವು ಅಂಕಣ ಬರೆಹದ ಭಾಗವಾಗಿ ಮತ್ತು ಕೆಲವು ಪತ್ರಿಕೆಗಳ ಸಾಹಿತ್ಯ ಪುಟಗಳಲ್ಲಿ ಪ್ರಕಟಗೊಂಡಿರುವಂಥವು.
ಇಲ್ಲಿಯ ಮೂವತ್ತು ಲೇಖನಗಳನ್ನು ಗಮನಿಸಿದಾಗ ಅಶೋಕ ಅವರ ಓದಿನ ಹರಹು ನಮ್ಮನ್ನು ಬೆರಗುಗೊಳಿಸದೆ ಇರದು. ಒಬ್ಬ ಲೇಖಕನ ಒಂದು ಕೃತಿಯನ್ನು ಅವರು ಅನುಸಂಧಾನಕ್ಕೆ ಒಳಪಡಿಸಿದರೂ ಆ ಲೇಖಕನ ಇತರ ಕೃತಿಗಳನ್ನೂ ಅವರು ಓದಿರುತ್ತಾರೆ. ಅದಕ್ಕೆ ಪುರಾವೆ ಅವರ ವಿಮರ್ಶೆಯ ಮಾತುಗಳಲ್ಲೇ ಸಿಗುತ್ತದೆ. ಇತರ ಲೇಖಕರ ಜೊತೆಯಲ್ಲೂ ಅವರು ತುಲನಾತ್ಮಕವಾಗಿ ಪ್ರಸಕ್ತ ಲೇಖಕನನ್ನು ತೂಗುತ್ತಾರೆ.
 ಒಬ್ಬ ಲೇಖಕರ ಒಂದು ಕೃತಿಯನ್ನು ಅವರು ಅಭ್ಯಾಸ ಮಾಡುತ್ತಾರೆ. ಮಾಸ್ತಿಯವರ ಸುಬ್ಬಣ್ಮ, ಶೇಷಮ್ಮ, ಲಂಕೇಶರ ಬಿರುಕು, ಗಿರಿಯವರ ಸ್ಥಿತಿ, ಗತಿ, ಪೂಚಂತೇ ಅವರ ಮಾಯಾಲೋಕ ಹೀಗೆ ಅವರ ಆಯ್ಕೆ. ಅದೇ ರೀತಿ ರಾಘವೇಂದ್ರ ಖಾಸನೀಸರ ಕಥೆಗಳು, ಎಸ್.ದಿವಾಕರ ಅವರ ಕಥೆಗಳು, ಕುಂ.ವೀರಭದ್ರಪ್ಪ ಅವರ ಕಥೆಗಳು, ಜಯಂತ ಕಾಯ್ಕಿಣಿಯವರ ಕಥೆಗಳು, ವಿವೇಕ ಶಾನಭಾಗ ಅವರ ಕಥೆಗಳು ... ಹೀಗೆ ಕನ್ನಡದ ಹೊಸ ತಲೆಮಾರಿನ ಪ್ರಮುಖ ಕಥೆಗಾರರನ್ನು ಅವರು  ಅಧ್ಯಯನ ಮಾಡಿದ್ದಾರೆ. ಅದೇ ರೀತಿ ಹೊಸ ತಲೆಮಾರಿನ ಲೇಖಕರನ್ನೂ ಅವರು ತಮ್ಮ ವಿಮರ್ಶೆಯ ಕಕ್ಷೆಗೆ ಸೆಳೆದುಕೊಂಡಿದ್ದಾರೆ.
ಒಂದು ಕೃತಿಯನ್ನು ಇಡಿಯಾಗಿ ಗ್ರಹಿಸಬೇಕಾದರೆ ವಿಮರ್ಶಕ ಮೊದಲು ಉತ್ತಮ ಓದುಗನಾಗಿರಬೇಕು. ಅದು ಅಶೋಕ ಅವರ ಶಕ್ತಿಯಾಗಿರುವುದನ್ನು ನಾವು ಕಾಣಬಹುದು. ಮಾಸ್ತಿಯವರ ಸುಬ್ಬಣ್ಣದ ಬಗ್ಗೆ ಅವರು ಹೇಳಿದ ಈ ಮಾತುಗಳನ್ನು ಗಮನಿಸಿ: 'ಸಣ್ಣ ಕಥೆಯ ರಚನೆಯಲ್ಲಿ ಒಂದು ಮಟ್ಟದ ಸಿದ್ಧಿಯನ್ನು ಸಾಧಿಸಿ, ಕಾದಂಬರಿ ರಚನೆಯನ್ನು ಇನ್ನೂ ಪ್ರಾರಂಭಿಸಿರದ ಘಟ್ಟದಲ್ಲಿ ಮಾಸ್ತಿ ತುಸು ಹೆಚ್ಚಿನ ಮಹತ್ವಾಕಾಂಕ್ಷೆಯುಳ್ಳ ಬರವಣಿಗೆಗೆ ಕೈಹಾಕಿದ್ದು ಕಂಡು ಬರುತ್ತದೆ. ಕೊಂಚ ಕೈ ಜಾರಿದ್ದರೆ ಕೇವಲ ಜೀವನ ಚರಿತ್ರೆಯಾಗಿಬಿಡಬಹುದಾಗಿದ್ದ,  ಕೊಂಚ ಭಾವುಕರಾಗಿದ್ದಿದ್ದರೆ ಒಂದು ಅಳುಬುರುಕ ಕತೆಯಾಗಿಬಿಡಬಹುದಾಗಿದ್ದ ವಸ್ತುವೊಂದನ್ನು ಮಾಸ್ತಿ ಪ್ರತಿಭೆ ನಿರ್ವಹಿಸಿದ ರೀತಿ ಅನನ್ಯವಾದದ್ದು.... ಸುಬ್ಬಣ್ಣ ನಿಸ್ಸಂದೇಹವಾಗಿ ಆಧುನಿಕ ಕನ್ನಡ ಸಾಹಿತ್ಯದ ಒಂದು ಮೈನರ್ ಕ್ಲಾಸಿಕ್.'
 ಮಾಸ್ತಿಯವರ ಅನನ್ಯತೆ ಎಲ್ಲಿದೆ ಎಂಬುದನ್ನು ಅಶೋಕ ಅವರು ಗುರುತಿಸುವ ರೀತಿ ಅದು. ಅದೇ ರೀತಿ ಕುಂವೀ ಕಥೆಗಳ ಬಗ್ಗೆ ಅವರು, ಗ್ರಾಮೀಣ ಭಾರತ ಚಲಿಸುತ್ತಿರುವ ಪ್ರಕ್ರಿಯೆಯನ್ನೂ, ಈ ಚಲನೆಯ ಹಿಂದಿನ ಪ್ರೇರಣೆಗಳನ್ನೂ, ಅದಕ್ಕಿರುವ ಅಡ್ಡಿ-ಆತಂಕಗಳನ್ನೂ ಕುಂವೀ ಅವರ ಕಥೆ ಕಾದಂಬರಿಗಳು ಅರ್ಥಪೂರ್ಣವಾಗಿ ದಾಖಲಿಸಿವೆ ಎಂದು ಹೇಳಿದ್ದಾರೆ. ಜಯಂತ ಕಾಯ್ಕಿಣಿಯವರ ಕತೆಗಳ ಬಗ್ಗೆ ಅಶೋಕರ ಟಿಪ್ಪಣಿ ನೋಡಿ: ಮೇಲುನೋಟಕ್ಕೆ ಕ್ಷುದ್ರವೆಂದು ಕಾಣುವ ಜೀವನ ಸಂದರ್ಭಗಳನ್ನು ಅನುಕಂಪದಿಂದಲೂ ಸಹಾನುಭೂತಿಯಿಂದಲೂ ಸೂಕ್ಷ್ಮವಾಗಿ ಗಮನಿಸಿ ಅವುಗಳ ಒಳಪದರಗಳಲ್ಲೇ ಅಂತರ್ಗತವಾದ ಮನುಷ್ಯ ಘನತೆಯನ್ನೂ, ಧೀರತೆಯನ್ನೂ ಅನಾವರಣಗೊಳಿಸುವುದು ಜಯಂತ ಕಾಯ್ಕಿಣಿ ಅವರ ಕಥೆಗಳ ಒಂದು ಮುಖ್ಯ ಆಶಯ ಎಂದು ಹೇಳುತ್ತಾರೆ. ಈ ಕೃತಿಯ ಬಹುತೇಕ ಲೇಖನಗಳಲ್ಲಿ ಪ್ರತಿ ಲೇಖಕನ ಬಗೆಗೂ ಅವರು ಇಂಥ ಮಾತನ್ನು ಹೇಳುತ್ತಾರೆ. ಇದು ಅವರ ವಿಮರ್ಶೆಯ ರೀತಿ.
 ಟಿ.ಪಿ.ಅಶೋಕ ಅವರು ತಾವು ಹೇಗೆ ಒಳ್ಳೆಯ ಓದುಗರೋ ಹಾಗೆಯೇ ಓದುಗನ ಮಿತ್ರ ಕೂಡ. ಅವರ ವಿಮರ್ಶೆಯ ಕ್ರಮದಲ್ಲೇ ಅದು ರೂಢಿಯಾಗಿದೆ. ಓದುಗನಿಗೆ ಕೃತಿಯನ್ನು ವಿವರಿಸಿ ವಿಸ್ತರಿಸಿ ಹೇಳುವುದು ವಿಮರ್ಶೆ ಎಂಬುದು ಅವರ ಸಿದ್ಧಾಂತವಾಗಿರುವಂತೆ ತೋರುತ್ತದೆ. ಅವರು ಕೃತಿಯೊಂದನ್ನು ಮೊದಲು ಸಂಗ್ರಹಿಸುತ್ತಾರೆ. ಲೇಖಕ ಹೇಳಬೇಕೆಂದು ಕೊಂಡಿದ್ದು ಆದರೆ ಅದು ಓದುಗನಿಗೆ ಸುಲಭವಾಗಿ ಅರ್ಥವಾಗದೆ ಇರುವಂಥ ಭಾಗ ಯಾವುದು ಎಂಬುದನ್ನು ಗ್ರಹಿಸಿ ಅದನ್ನು ತಿಳಿಸಿ ಹೇಳುವುದಕ್ಕೆ ನೋಡುತ್ತಾರೆ. ಲೇಖಕನ ಧ್ವನಿ ಏನು ಎಂಬುದನ್ನು ಅವರು ಹೇಳುತ್ತಾರೆ. ಅಶೋಕರಲ್ಲಿ ವಿಮರ್ಶೆ ಎಂಬುದು ಸಹೃದಯನೊಬ್ಬ ಸಹೃದಯನಿಗೆ ಸಂವಹನಿಸುವ ಸಫಲ ಮಾರ್ಗ.
ಸಾಹಿತ್ಯ ಸಮೃದ್ಧಿ
ಲೇ: ಟಿ.ಪಿ.ಅಶೋಕ
ಪ್ರ: ಅಂಕಿತ ಪುಸ್ತಕ, ಬೆಂಗಳೂರು.
ಪುಟಗಳು 312, ಬೆಲೆ ರು. 225
-------------
ಕೆಲವು ಪುಟಗಳು
ಪ್ರತಿ ಆರು ತಿಂಗಳಿಗೊಮ್ಮೆ ನಿಮ್ಮ ಅಗತ್ಯಗಳನ್ನು ಕಮ್ಮಿಗೊಳಿಸುತ್ತಾ ಬನ್ನಿ. ಕೊನೆ ಕೊನೆಗೆ ನಿಮ್ಮಲ್ಲಿ ಏನೂ ಇಲ್ಲ ಅಂತಿಟ್ಟುಕೊಳ್ಳಿ, ನಿಮಗೆ ಏನೂ ಅನಿಸುವುದಿಲ್ಲ.
ನೀವು ಕಳೆದುಕೊಳ್ಳುವುದು ಏನೂ ಇರುವುದಿಲ್ಲ. ಕಾರಣ ನಿಮಗೆ ಅವುಗಳ ಅವಶ್ಯಕತೆಯೇ ಇರುವುದಿಲ್ಲವಲ್ಲ. ನಿಮಗೆ ಯಾವುದು ಬೇಕೋ, ಯಾವುದರ ಅಗತ್ಯವಿದೆಯೋ ಅವುಗಳನ್ನೇ ದಾನ ಮಾಡಿ. ನಿಮಗೆ ಬೇಡದ ವಸ್ತುಗಳನ್ನು ದಾನ ಮಾಡುವುದು ದೊಡ್ಡ ಮಾತಲ್ಲ. ಇಷ್ಟಪಟ್ಟಿದ್ದನ್ನೇ ಕೊಡಿ.
ನೀವು ಹೆಚ್ಚೆಚ್ಚು ಕೊಟ್ಟರೆ, ಹೆಚ್ಚೆಚ್ಚೆಚ್ಚು ವಾಪಸ್ ಬರುತ್ತದೆ. ಎಲ್ಲವನ್ನೂ ನಿಮಗಾಗಿ ಕೂಡಿಡಬೇಡಿ. ಕೊಡಿ, ಕೊಡುತ್ತಾ ಹೋಗಿ. ಕೇಳಿದಾಗ ಮಾತ್ರ ಕೊಡುವ ಅಭ್ಯಾಸ ರೂಢಿಮಾಡಿಕೊಳ್ಳಬೇಡಿ. ಕೇಳದಿದ್ದರೂ ಕೊಡಿ.
ಅನಿರೀಕ್ಷಿತವಾಗಿ ದಾನ ಮಾಡಿ. ಮೊದಲು ಕೊಡುವಾಗ ತುಸು ಬೇಸರವಾಗಬಹುದು. ಆದರೂ ಪ್ರಯತ್ನಪಡಿ. ಅಗತ್ಯವಿದ್ದವರಿಗೆ ಮಾತ್ರ ದಾನ ಮಾಡಬೇಡಿ. ಒಳ್ಳೆಯ ಗುಂಡು, ಪುಸ್ತಕ, ಅಪರೂಪದ ವಸ್ತುಗಳನ್ನು ದಾನಮಾಡಿ. ಕೊಡುತ್ತಾ ಹೋದಂತೆಲ್ಲ ಗೊತ್ತಾಗುತ್ತದೆ, ನಿಮಗೆ ಅವುಗಳ ಅವಶ್ಯಕತೆ ಇಲ್ಲ ಎಂಬುದು. ಕಡಿಮೆ ಇದ್ದಷ್ಟೂ ನಿಮ್ಮ ಬದುಕಿನ ಅರ್ಥ ಹೆಚ್ಚುತ್ತದೆ.
ಇಂಥದ್ದೊಂದು ವಸ್ತು ಇಲ್ಲದಿದ್ದರೂ ಆಗುತ್ತದೆ ಎಂದು ಯೋಚಿಸಿ. ಅಂಥವುಗಳನ್ನೆಲ್ಲ ಬೇರೆಯವರಿಗೆ ಕೊಡಿ. ನೀವು ಏನನ್ನಾದರೂ ಕೊಡುವುದಿದ್ದರೆ ಕತ್ತಲೆಯಲ್ಲಿ ಕೊಡಿ. ಕೊಟ್ಟಿದ್ದು ಬೇರೆಯವರಿಗೊಂದೇ ಅಲ್ಲ, ನಿಮಗೂ ಕಾಣುವುದು ಬೇಡ.

ಕೃತಿ: ಅಷ್ಟಕ್ಕೂ ನಾ ಹೇಳೋದು ಇಷ್ಟು!
ಮೂಲ: ಸ್ವಪನ್ ಸೇಠ್
ಕನ್ನಡಕ್ಕೆ: ವಿಶ್ವೇಶ್ವರ ಭಟ್
ಪ್ರಕಾಶನ: ಅಂಕಿತ ಪುಸ್ತಕ
ಬೆಲೆ: 90 ರು.

----
ಅಮ್ಮೆಂಬಳ ಶಂಕರನಾರಾಯಣ ನಾವಡರು
ಕನ್ನಡ ನವೋದಯ ಸಾಹಿತ್ಯದ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ನೆನೆಯಬೇಕಾದ ಕೆಲವೇ ಸಾಹಿತಿಗಳಲ್ಲಿ ಅಮ್ಮೆಂಬಳ ಶಂಕರನಾರಾಯಣ ನಾವಡರೂ ಒಬ್ಬರು. ಪ್ರಮುಖವಾಗಿ ಕವಿಗಳಾಗಿದ್ದ ಅವರು ವಿದ್ವತ್ಪೂರ್ಣವಾದ ಪ್ರಬಂಧಗಳನ್ನೂ ಬರೆದವರು. ಮಕ್ಕಳಿಗಾಗಿ ಬಾಲ ಸಾಹಿತ್ಯವನ್ನೂ ಅವರು ರಚಿಸಿದ್ದಾರೆ. ಇವರ ಕೃತಿಗಳು ಮತ್ತು ವ್ಯಕ್ತಿತ್ವವನ್ನು ವಿ.ಗ.ನಾಯಕ ಅವರು ಪ್ರಿತಿ ತುಂಬಿದ ರೀತಿಯಲ್ಲಿ ಈ ಕೃತಿಯಲ್ಲಿ ನಾಡಿಗೆ ಪರಿಚಯಿಸಿದ್ದಾರೆ. ಹಲವರ ಬಾಯಿಂದ ಹೇಳಿಸಿದ್ದಾರೆ.
ಪ್ರ: ಕಾಂತಾವರ ಕನ್ನಡ ಸಂಘ, ಕಾಂತಾವರ, ಪುಟಗಳು 52, ಬೆಲೆ ರು. 33


ಪೂರ್ಣಚಂದ್ರ

ಕಲಾವಿದರೂ ರಾಜಕಾರಣಿಯೂ ಅದಕ್ಕಿಂತ ಹೆಚ್ಚಾಗಿ ಕನ್ನಡ ಮನಸ್ಸಿನವರೂ ಆದ ಮುಖ್ಯಮಂತ್ರಿ ಚಂದ್ರು ಅವರಿಗೆ ಅರವತ್ತು ತುಂಬಿದ ಸಂದರ್ಭದಲ್ಲಿ ಅವರಿಗೆ ಸಲ್ಲಿಸಿದ ಅಭಿನಂದನ ಗ್ರಂಥ 'ಪೂರ್ಣಚಂದ್ರ'. ಇದರ ಪ್ರಧಾನ ಸಂಪಾದಕರು ಪ್ರೊ.ಎಂ.ಎಚ್. ಕೃಷ್ಣಯ್ಯ. ಸಂಪಾದಕರು ಕೆ.ವಿ. ನಾಗರಾಜಮೂರ್ತಿ, ಪಾಲನೇತ್ರ ಮತ್ತು ಡಾ.ಬಿ.ವಿ. ರಾಜಾರಾಮ್. ವ್ಯಕ್ತಿಯಾಗಿ, ಕಲಾವಿದರಾಗಿ, ರಾಜ ಕಾರಣಿಯಾಗಿ ಜೊತೆಗೆ ಕನ್ನಡಪರ ಹೋರಾಟಗಾರರಾಗಿ ಚಂದ್ರು ಅವರ ವ್ಯಕ್ತಿತ್ವ ಇದರಲ್ಲಿ ಮೂಡಿಬಂದಿದೆ.
ಪ್ರ: ಪ್ರಯೋಗ ರಂಗ, ಬೆಂಗಳೂರು. ಪುಟಗಳು 376, ಬೆಲೆ ರು. 350

ಪದ್ಮಬ್ರಹ್ಮ
ಪದ್ಮಸಾಲಿ ಸಮಾಜದ ಮುಖಂಡ, ಸಾಹಿತಿ ಕೆ. ಬ್ರಹ್ಮಾನಂದ ಅವರ ಜನ್ಮಶತಾಬ್ದ ಕೃತಿ 'ಪದ್ಮಬ್ರಹ್ಮ'. ಚಂದ್ರಕಲಾ ನಂದಾವರ ಇದನ್ನು ಸಂಪಾದಿಸಿದ್ದಾರೆ. ಕಳೆದ ಶತಮಾನದ 2ನೇ ದಶಕದಲ್ಲಿ ಜನಿಸಿದ ಬ್ರಹ್ಮಾನಂದರು ಸ್ವಾತಂತ್ರ್ಯ ಚಳವಳಿ ಹಾಗೂ ಕರ್ನಾಟಕ ಏಕೀಕರಣ ಚಳವಳಿಗಳಲ್ಲಿ ತೊಡಗಿಸಿಕೊಂಡವರು. ಬಳಿಕ ಪದ್ಮಸಾಲಿ ಸಮಾಜದ ಏಳ್ಗೆಗೆ ಶ್ರಮಿಸಿದರು. ಅವರ ಬದುಕು ಹಲವರಿಗೆ ಆದರ್ಶ. ಇದರಲ್ಲಿ ಬ್ರಹ್ಮಾನಂದರ ಕಾವ್ಯ ಮತ್ತು ಲೇಖನಗಳೂ ಇವೆ.
ಪ್ರ: ಕೆ.ಎಂ. ಸುರೇಶ್‌ಕುಮಾರ್ ಮತ್ತು ಸಹೋದರರು, ಮಂಗಳೂರು, ಪುಟಗಳು 151, ಬೆಲೆ ರು. 100


ಜಾಗೋ ಭಾರತ್
ಆಕರ್ಷಕವಾಗಿ ಮಾತನಾಡಬಲ್ಲ ಚಕ್ರವರ್ತಿ ಸೂಲಿಬೆಲೆಯವರು ರಾಷ್ಟ್ರಾಭಿಮಾನದ ಭಾಷಣಗಳಿಂದಾಗಿ ಪ್ರಸಿದ್ಧರು. ಹಾಗೆಯೇ ಅವರು ಪತ್ರಿಕೆಗಳಲ್ಲಿ ಲೇಖನಗಳನ್ನೂ ಬರೆದಿದ್ದಾರೆ. ಅವರ ರಾಷ್ಟ್ರೀಯವಾದಿ ವಿಚಾರಧಾರೆಯ ಲೇಖನಗಳನ್ನು ಒಳಗೊಂಡ ಕೃತಿ 'ಜಾಗೋ ಭಾರತ್‌'. ಇತಿಹಾಸವನ್ನು ತಮಗೆ ಬೇಕಾದಂತೆ ತಿರುಚುವವರು ಅವರ ಕೆಂಗಣ್ಣಿಗೆ ಗುರಿಯಾಗಿರುವುದು ಇದರಲ್ಲಿ ಗೊತ್ತಾಗುತ್ತದೆ. ದೇಶಕ್ಕಾಗಿ ನಾವೇನು ಮಾಡಬಹುದು ಎಂಬುದರ ಹೊಳಹು ಇದರಲ್ಲಿದೆ.
ಪ್ರ: ವಿಕ್ರಂ ಪ್ರಕಾಶನ, ಬೆಂಗಳೂರು, ಪುಟಗಳು 220, ಬೆಲೆ ರು. 110

= ಡಾ. ವಾಸುದೇವ ಶೆಟ್ಟಿ
vasudevs@sify.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.