ಅತಿ ಮಥುರಾ ಅನುರಾಧೆ!

ಆ ಊರವರ ಪಾಲಿಗೆ ಶ್ರೀಕೃಷ್ಣನೇ ಆದಿ, ಆತನೇ ಅಂತ್ಯ. ಜಗತ್ತಿನ ಯಾವುದೇ ಊರಲ್ಲೂ ಶ್ರೀಕೃಷ್ಣನ ಇಷ್ಟೊಂದು ದೇಗುಲಗಳು ಕಾಣಸಿಗದು. ಒಂದಲ್ಲ, ಎರಡಲ್ಲ ಎಂಟು ಸಾವಿರಕ್ಕೂ ಹೆಚ್ಚು ಶ್ರೀಕೃಷ್ಣ ದೇಗುಲಗಳು! ಶ್ರೀಕೃಷ್ಣ ಪರಮಾತ್ಮ ಜನ್ಮವಿತ್ತ ಮಥುರಾ, ಬಾಲ್ಯದ ಲೀಲೆಗಳನ್ನು ತೋರಿದ ವೃಂದಾವನ ಅಚ್ಚರಿಯಾಗಿ ಕಾಣುವುದೇ ಈ ಕಾರಣದಿಂದ.
ಉತ್ತರ ಪ್ರದೇಶದಲ್ಲಿರುವ ಮಥುರಾಕ್ಕೂ ವೃಂದಾವನಕ್ಕೂ 15 ಕಿ.ಮೀ. ಅಂತರ. ಹಿಂದೂಗಳ ಪಾಲಿಗೆ ಮಥುರಾ ಪವಿತ್ರ ಯಾತ್ರಾ ಸ್ಥಳ. ಇಲ್ಲಿ ಕಾಲಿಟ್ಟರೆ ಭಕ್ತಿ ರಸ ಮೈದುಂಬಿಕೊಳ್ಳುತ್ತದೆ. ನಿತ್ಯ ಸ್ಮರಿಸುವ ಶ್ರೀಕೃಷ್ಣ ಪರಮಾತ್ಮ ಹುಟ್ಟಿ ಆಡಿ ಬೆಳೆದ ಊರಲ್ಲಿ ನಾವಿದ್ದೇವಲ್ಲ ಎನ್ನುವ ಕೃತಾರ್ಥ ಭಾವ ಒಡಮೂಡುತ್ತದೆ.
ಕಾಲದ ಗರ್ಭದಲ್ಲಿ ಮರೆಯಾಗಿ ಹೋಗಿದ್ದ ಮಥುರಾ, ವೃಂದಾವನವನ್ನು 16ನೇ ಶತಮಾನದಲ್ಲಿ ಭಗವಾನ ಚೈತನ್ಯ ಮಹಾಪ್ರಭು ಮರುಶೋಧಿಸಿದರು. ಶ್ರೀಕೃಷ್ಮನ ಗತಕಾಲದ ಮಹತ್ವ ಸಾರುವ ಸ್ಥಳಗಳನ್ನು ಗುರುತಿಸಿ, ಅದಕ್ಕೆ ಜೀವ ತುಂಬಿದರು.
ಶ್ರೀಕೃಷ್ಣ ಜನ್ಮಸ್ಥಾನ
ಶ್ರೀಕೃಷ್ಣ ಕಾರಾಗೃಹದಲ್ಲಿ ಜನ್ಮವೆತ್ತಿದ ಅಂತ ಪುರಾಣ ಹೇಳುತ್ತದೆ. ಆ ಜೈಲನ್ನು ನೀವು ಇಂದಿಗೂ ಕಾಣಬಹುದು. ಕಾರಾಗೃಹ ಪ್ರವೇಶಿಸುವಾಗ ರೋಮಾಂಚನವಾಗುತ್ತದೆ. ಇದೇ ಸ್ಥಳದಲ್ಲಿ ಭಾವತ ಭವನವಿದೆ. ಇಲ್ಲಿ ಶ್ರೀಕೃಷ್ಣನ ಲೀಲೆಗಳನ್ನು ಗೋಡೆಯ ಮೇಲೆ ಚಿತ್ರಿಸಲಾಗಿದೆ. ಈ ಜಾಗ ಕೆಲವು ವಿವಾದಗಳಿಗೆ ಕಾರಣವಾಗಿರುವುದರಿಂದ, ಇಲ್ಲಿ ಭದ್ರತೆ ಬಿಗಿ.
ಕಾಲಿಯಾ ಘಾಟ್
ಜನರಿಗೆ ತೊಂದರೆ ಕೊಡುತ್ತಿದ್ದ ಕಾಲಿಯಾ ಎಂಬ ಸರ್ಪವನ್ನು ಶ್ರೀಕೃಷ್ಣ ಗರ್ವಭಂಗಮಾಡಿ ಅದರ ತಲೆಯ ಮೇಲೆ ಹತ್ತಿ ನರ್ತನ ಮಾಡಿದ್ದ ಸ್ಥಳವೇ ಕಾಲಿಯಾ ಘಾಟ್. ನಗರೀಕರಣ ಪ್ರಭಾವದಿಂದಾಗಿ ಯಮುನಾ ನದಿ ಇಲ್ಲಿಂದ ದೂರ ಸರಿದಿದೆ. ಶ್ರೀಕೃಷ್ಣ ಕದಂಬ ವೃಕ್ಷದ ಮೇಲೆ ನಿಂತು ಯಮುನಾ ನದಿಗೆ ಹಾರಿದ್ದ. ಈ ವೃಕ್ಷ ಇಂದಿಗೂ ಇಲ್ಲಿ ತಲೆ ಎತ್ತಿ ನಿಂತಿದೆ. ಸ್ಥಳೀಯರು ಹೇಳುವ ಪ್ರಕಾರ, ಈ ವೃಕ್ಷಕ್ಕೆ 16 ಲಕ್ಷ ವರ್ಷ ವಯಸ್ಸು. ಅಮೃತ ಸಿಂಚನವಾಗಿದ್ದರಿಂದ ಈ ವೃಕ್ಷಕ್ಕೆ ಸಾವಿಲ್ಲವಂತೆ.
ಆಕರ್ಷಕ ಗೋವರ್ಧನ
ಮಥುರಾ ಹಾಗೂ ವೃಂದಾವನದ ಸಾವಿರಾರು ದೇಗುಲಗಳಲ್ಲಿ ಅತಿಮುಖ್ಯವಾಗಿ ಗಮನ ಸೆಳೆಯುವುದು ಮದನ ಗೋಪಾಲ ಮಂದಿರ. ಕಾಲಿಯಾ ಘಾಟ್‌ಗೆ ಹೊಂದಿಕೊಂಡಿರುವ ಇದು ಅತ್ಯಂತ ಹಳೇ ದೇಗುಲ. ರಂಗಜಿ ದೇಗುಲದಲ್ಲಿ ಶ್ರೀಕೃಷ್ಣ ಪರಮಾತ್ಮನು ಶೇಷಶಾಹಿ ಭಂಗಿಯಲ್ಲಿದ್ದಾನೆ. ಆರು ಅಂತಸ್ತಿನ ಗೋಪುರ ಹಾಗೂ 50 ಅಡಿ ಎತ್ತರದ ಸ್ವರ್ಣಲೇಪಿತ ಧ್ವಜಸ್ತಂಭವಿದೆ. ಕಣ್ಮನ ಸೆಳೆಯುವ ವಿಶಿಷ್ಟ ವಿಗ್ರಹ ಬಾಂಕೆ ಬಿಹಾರಿ ದೇಗುಲದಲ್ಲಿದೆ. ಈ ವಿಗ್ರಹ ಸ್ವಾಮಿ ಹರಿದಾಸರು ನಿಧಿ ವನದಲ್ಲಿ ಪತ್ತೆಹಚ್ಚಿದರು. ಕೆಂಪು ಮರಳುಗಲ್ಲಿನ ಗೋವಿಂದ ದೇವ್ ಮಂದಿರ ಏಳು ಅಂತಸ್ತಿನಿಂದ ರಚನೆಯಾಗಿತ್ತು. ಮೊಘಲ್ ದೊರೆ ಔರಂಗಜೇಬ್ ದಾಳಿಯಿಂದಾಗಿ ಇದೀಗ ಮೂರು ಅಂತಸ್ತುಗಳನ್ನು ಮಾತ್ರ ಕಾಣಬಹುದು. ಇದರೊಟ್ಟಿಗೆ ಸ್ವಾಮಿ ನಾರಾಯಣ ಮಂದಿರ, ದೂರ್ವಾಸ ಕೃಷ್ಣಮಂದಿರ, ಇಸ್ಕಾನ್ ದೇಗುಲ, ರಾಧಾ ವೃಂದಾನವನ ಚಂದ್ರ ದೇಗುಲ, ರಾಧಾ- ರಾಣಿ ಮಂದಿರ, ರಾಧಾ ವಲ್ಲಭ ದೇಗುಲ, ರಾಧಾ ರಮಣ ಮಂದಿರ, ಶಹಾಜಿ ದೇಗುಲ, ರಾಧಾ ದಾಮೋದರ ಮಂದಿರ, ಶ್ರೀಕೃಷ್ಣ- ಬಲರಾಮ ಮಂದಿರ, ಗೋಪಿನಾಥ ಮಂದಿರ, ರು. 500 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಆಧುನಿಕ ಸ್ಪರ್ಶವುಳ್ಳ ಪ್ರೇಮ ಮಂದಿರ ಇಲ್ಲಿನ ಪ್ರಸಿದ್ಧ ದೇಗುಲಗಳು. ಶ್ರೀಕೃಷ್ಣ ಪರಮಾತ್ಮ ಕಿರುಬೆರಳಲ್ಲಿ ಎತ್ತಿದ ಗೋವರ್ಧನ ಗಿರಿ ಇಲ್ಲಿನ ಆಕರ್ಷಣೀಯ ಕೇಂದ್ರಗಳಲ್ಲೊಂದು.
ಎಲ್ಲೆಲ್ಲೂ ರಾಧೆ ರಾಧೆ
ಇಲ್ಲಿನವರ ಮನ ಮಂದಿರದಲ್ಲಿ ಶ್ರೀಕೃಷ್ಣನೇ ನೆಲೆಸಿದ್ದಾನೆ. ದೇಗುಲದ ಪೂಜಾರಿಗಳಿರಲಿ, ವ್ಯಾಪಾರಸ್ಥರಾಗಲಿ ಯಾತ್ರಾರ್ಥಿಗಳೊಂದಿಗೆ ಮಾತು ಬೆಳೆಸುವ ಮುನ್ನ ಜೈಶ್ರೀಕೃಷ್ಣ ಅಂತಲೋ, ರಾಧೆ ಅಂತಲೋ ಮಾತು ಆರಂಭಿಸುತ್ತಾರೆ. ಮರೆಯಾಗುತ್ತಿರುವ ಸೈಕಲ್ ರಿಕ್ಷಾಗಳು ಇಲ್ಲಿ ಹೇರಳವಾಗಿವೆ. ತಾವು ಸಾಗುವ ಮಾರ್ಗ ಮಧ್ಯ ಎದುರಾಗುವ ದಾರಿ ಹೋಕರಿಗೆ 'ರಾಧೆ ರಾಧೆ...' ಎನ್ನುತ್ತಾರೆಯೇ ವಿನಾ ದಾರಿ ಬಿಡಿ ಎನ್ನುವುದಿಲ್ಲ. ಗೋವು, ನವಿಲು, ಕೋತಿಗಳು ಸಾಕಷ್ಟು ಕಂಡುಬರುತ್ತವೆ. ಮಥುರೆಯ ಪೇಡೆ, ಲಸ್ಸಿಯ ಸ್ವಾದ ಯಾತ್ರಿಕರು ಮರೆಯಲಿಕ್ಕಿಲ್ಲ. ವರ್ಷ ಪೂರ್ತಿ ಲಕ್ಷಾಂತರ ಯಾತ್ರಾರ್ಥಿಗಳಿಂದಾಗಿ ಮಥುರಾ, ವೃಂದಾವನ ತುಂಬಿ ತುಳುಕುತ್ತಿರುತ್ತದೆ. ಇಲ್ಲಿನ ಎಲ್ಲ ದೇಗುಲಗಳಲ್ಲಿ ದರ್ಶನ ಪಡೆಯುವುದು ಸಾಹಸವೇ ಸರಿ.
ಭಕ್ತಿಯ ಪರಾಕಾಷ್ಠೆ
ಒಬ್ಬೊಬ್ಬರದ್ದು ಒಂದೊಂದು ರೀತಿಯ ಭಕ್ತಿ. ಭಕ್ತನೊಬ್ಬ ಒಂದೇ ಜಾಗದಲ್ಲಿ 108 ಸಲ ದೀರ್ಘ ದಂಡ ನಮಸ್ಕಾರ ಹಾಕುತ್ತಾನೆ. ಬಳಿಕ ಮುಂದಡಿಯಿಟ್ಟು ಮತ್ತೆ 108 ಸಲ ನಮಸ್ಕರಿಸುತ್ತಾನೆ. ಈ ರೀತಿಯಾಗಿ ಇಡೀ 26 ಕಿ.ಮೀ. ಗೋವರ್ಧನವನ್ನು ದೀಡ ನಮಸ್ಕಾರ ಮಾಡುತ್ತಲೇ ಪ್ರದಕ್ಷಿಣೆ ಹಾಕುತ್ತಾರೆ. ಈ ಪ್ರದಕ್ಷಿಣೆ ಮುಗಿಸಲು 4ರಿಂದ 5 ವರ್ಷ ಬೇಕಾಗುತ್ತದೆ ಅಂತ ಸ್ಥಳೀಯ ಮೋಹನ್ ಹೇಳುತ್ತಾರೆ. ಮತ್ತೆ ಕೆಲವರು ಹಾಲನ್ನು ನೆಲಕ್ಕೆ ಹಾಕುತ್ತಾ ಗೋವರ್ಧನ ಪರಿಕ್ರಮ ಮಾಡುತ್ತಾರೆ. ತಮ್ಮ ಇಷ್ಟಾರ್ಥ ಸಿದ್ಧಿಸಿದ ಬಳಿಕ ಅನೇಕರು ಇಂಥ ನಾನಾ ಥರದ ಹರಕೆ ಪೂರೈಸುತ್ತಾರೆ.
- ಪ್ರಕಾಶ ಎಸ್. ಶೇಟ್
prakashjoida@gamil.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


