ಖುಷಿ

ಮಾಹಿತಿ ಗೊಂದಲಮಯವಾಗಿದೆ

Published On :

-ಎಸ್. ಪ್ರಕಾಶ್, ಮಂಡ್ಯ
ದೇವಸ್ಥಾನದ ಜಾಗದಲ್ಲಿ ಮನೆ ಹಾಗೂ ಅಂಗಡಿಯಿದ್ದು ಬಾಡಿಗೆಗೆ ನೀಡಿ, ಬಾಡಿಗೆ ಮುಂಗಡ ಪಡೆದಿದ್ದೆ. 2010ರಲ್ಲಿ ಜಾಗ ಖಾಲಿ ಮಾಡುವಂತೆ ನೋಟೀಸ್ ನೀಡಿದ್ದರು. ಇತರರಂತೆ ನಾನೂ ಮನೆ ಖಾಲಿ ಮಾಡಿದೆ. ಆದರೆ ಅಂಗಡಿ ಬಾಗಿಗೆದಾರರು ಸಂಘದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಆಯಾಯ ಅಂಗಡಿಗಳನ್ನು ಇಟ್ಟುಕೊಂಡು ಕಮ್ಮಿ ಬಾಡಿಗೆ ಸರ್ಕಾರಕ್ಕೆ ಕೊಡುತ್ತಿದ್ದಾರೆ. ಆದರೆ ನನ್ನ ಬಾಡಿಗೆ ಕರಾರು ಪತ್ರದಲ್ಲಿ ಬಾಡಿಗೆದಾರರು ಬಾಡಿಗೆ ಕೊಡದಿದ್ದ ಪಕ್ಷದಲ್ಲಿ ಮುಂಗಡದಲ್ಲಿ ಮುರಿದುಕೊಳ್ಳಬಹುದೆಂದು ಕರಾರಾಗಿದೆ. ಆದರೆ ಈಗ ಬಾಡಿಗೆದಾರರು ಆ ಹಣ ಪೂರ್ತಿ ವಾಪಸ್ ಕೊಡುವಂತೆ ಒತ್ತಾಯಿಸುತ್ತಿದ್ದಾರೆ. ಪರಿಹಾರವೇನು?
- ನಿಮಗೆ ಆ ಜಾಗವನ್ನು ಅಲಾಟ್ ಮಾಡಿ ಕೊಟ್ಟಿದ್ದರೋ ಅಥವಾ ನೀವೇ ಅನಧಿಕೃತವಾಗಿ ಅಲ್ಲಿ ಮನೆ ಕಟ್ಟಿಕೊಂಡಿರೋ ತಿಳಿಯದು. ಒಂದು ವೇಳೆ ನಿಮಗೆ ಅಲಾಟ್ ಆಗಿದ್ದ (ಬಾಡಿಗೆಯ ಮೇಲೆ) ಪಕ್ಷದಲ್ಲಿ ನಿಮ್ಮನ್ನು ಬಿಡಿಸಿ ಇನ್ನೊಬ್ಬರಿಗೆ ಬಾಡಿಗೆ ಕೊಡುವುದು ಕಾನೂನಿನಂತೆ ಸಮಂಜಸವೆನಿಸುವುದಿಲ್ಲ. ಆದ್ದರಿಂದ ನೀವು ನ್ಯಾಯಾಲಯಕ್ಕೆ ಹೋಗಬಹುದಾಗಿತ್ತು. ಇನ್ನು ಬಾಡಿಗೆ ವಿಚಾರ- ಜಾಗ ನಿಮ್ಮದಲ್ಲ. ಅದನ್ನೂ ಖಾಲಿ ಮಾಡಿದ್ದೀರಿ. ಅಂದಮೇಲೆ ನಿಮಗೆ ಬಾಡಿಗೆದಾರ ಯಾಕೆ ಬಾಡಿಗೆ ಕೊಡಬೇಕು? ಕರಾರಿನಂತೆ ಬಾಡಿಗೆ ಪಡೆಯಬೇಕಾದರೆ ಆ ಜಾಗ ನಿಮ್ಮ ಸ್ವಾಧೀನದಲ್ಲಿರಬೇಕು. ಆದ್ದರಿಂದ ನೀವು ಮುಂಗಡದಲ್ಲಿ ಬಾಡಿಗೆ ಮುರಿದುಕೊಳ್ಳುವುದು ಸರಿಕಾಣದು.

ಆಕೆಗೆ ಆಸ್ತಿಯಲ್ಲಿ ಹಕ್ಕಿಲ್ಲ
-ಜಯರಾಮ ಬೋಗಾದಿ. ಮೈಸೂರು
ಮಗನಿಗೆ ಮದುವೆಯಾಗಿ ಒಂದೂವರೆ ವರ್ಷದಲ್ಲೇ ಆತನ ಹೆಂಡತಿ, ಗಂಡನ ಮೇಲೆ ದೌರ್ಜನ್ಯ, ಹಣಕ್ಕಾಗಿ ಹಿಂಸೆ ಇತ್ಯಾದಿ ಆರೋಪ ಮಾಡಿ ಕೇಸ್ ಮಾಡಿ ತಂದೆಯ ಮನೆಯಲ್ಲೇ ಐದು ವರ್ಷದಿಂದ ಇದ್ದಾಳೆ. ಇಂತಹ ಪ್ರಕರಣಗಳಲ್ಲಿ ಕೌಟುಂಬಿಕ ಕಿರುಕುಳ ಕೇಸ್ ಅನ್ವಯವಾಗುತ್ತದೆಯೇ? ಕೋರ್ಟ್ ಮೂಲಕ ನಿರ್ವಹಣಾ ವೆಚ್ಚ ಪಡೆಯುತ್ತಿರುವುದರಿಂದ ಆಕೆ ವಿಚ್ಛೇದನ ಕೊಡಬಹುದಲ್ಲವೇ? ಪಿತ್ರಾರ್ಜಿತ ಆಸ್ತಿಯಲ್ಲಿ ಆಕೆಗೆ ಹಕ್ಕಿದೆಯೇ? ಅವಳು ಬಿ.ಎಸ್‌ಸಿ., ಬಿ.ಇಡಿ. ಓದಿದ್ದು ಕೆಲಸಕ್ಕೆ ಹೋಗುತ್ತಿರುವುದರಿಂದ ನಿರ್ವಹಣಾ ಖರ್ಚನ್ನು ಕಡಿಮೆ ಮಾಡಬಹುದೇ?
- ಕೌಟುಂಬಿಕ ಕಿರುಕುಳ ಪ್ರಕರಣವು ಆಕೆ ಗಂಡನೊಡನೆ ಇದ್ದಾಗ ಅನ್ವಯವಾಗುತ್ತದೆ. ಸತ್ಯಾಸತ್ಯತೆಯನ್ನು ತನಿಖೆ/ವಿಚಾರಣೆಯ ಕಾಲದಲ್ಲಿ ಸಾಬೀತುಪಡಿಸುವುದು ನಿಮ್ಮ ಜವಾಬ್ದಾರಿ. ಹಿಂದೂ ವಿವಾಹ ಕಾಯ್ದೆ, 1955 ಇದರ ಕಲಂ 13(2)ರಂತೆ ಹೆಂಡತಿ ವಿಚ್ಛೇದನ ಪಡೆಯಲು ಅವಕಾಶವಿದೆ. ಗಂಡ ಬೇಕಾದರೆ ಅದೇ ಕಲಂ 13ರಂತೆ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿ ವಿಚ್ಛೇದನ ಕೇಳಬಹುದು. ನಿಮ್ಮ ಪಿತ್ರಾರ್ಜಿತ ಆಸ್ತಿಯಲ್ಲಿ ನಿಮ್ಮ ಮಗನಿಗೆ ಹಕ್ಕು. ಆತನ ಮಗನಿಗೆ ಆತನ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು. ಆದರೆ ಹೆಂಡತಿ ನಿರ್ವಹಣಾ ವೆಚ್ಚವನ್ನು ಪಡೆಯುತ್ತಿರುವುದರಿಂದ ಆಕೆಗೆ ಆ ಆಸ್ತಿಯಲ್ಲಿ ಹಕ್ಕಿಲ್ಲ. ಆಕೆ ಕೆಲಸಕ್ಕೆ ಹೋಗುತ್ತಿದ್ದಾರೆ. ನೀವು ಕೋರ್ಟಿಗೆ ಅರ್ಜಿ ಸಲ್ಲಿಸಿ, ನೀವು ಕೊಡಬೇಕಾಗಿರುವ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡಲು ಕೇಳಬಹುದು.

=  ಎಚ್.ಆರ್. ಕಸ್ತೂರಿರಂಗನ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.