ಖುಷಿ

ಭಾಸ ಚತುರ್ದಶ

Published On :

'ವ್ಯಾಸೋಚ್ಛಿಷ್ಠಂ ಜಗತ್ ಸರ್ವಂ' ಎಂಬ ಮಾತೊಂದಿದೆ. ವ್ಯಾಸ ಋಷಿಗಳು ಬದುಕಿನ ಎಲ್ಲ ಮಜಲುಗಳನ್ನೂ ಒಳಗೊಂಡ ಮಹಾಕಾವ್ಯ, ಪುರಾಣಗಳನ್ನು ಬರೆದಿರುವರು. ಮುಂದಿನ ಯಾವ ಕವಿಗಳೇ ಬರೆದರೂ ಅದು ವ್ಯಾಸರಿಂದಲೇ ಮೂಲ ವಸ್ತುವನ್ನು ಪಡೆದುಕೊಂಡು ತಮಗೆ ಬೇಕಾದಂತೆ ಅದನ್ನು ವಿಸ್ತರಿಸಿದ್ದಾರೆ ಎಂಬ ಭಾವ ಇದರಿಂದ ಹೊರಡುತ್ತದೆ. ಸಂಸ್ಕೃತ ಕವಿಗಳಲ್ಲಿ ಕಾಳಿದಾಸನಿಗಿಂತಲೂ ಮೊದಲೇ ಶ್ರೇಷ್ಠ ನಾಟಕಗಳನ್ನು ಬರೆದವನು ಭಾಸ ಕವಿ. ಭಾಸನನ್ನು ಕಾಳಿದಾಸ ಕೂಡ ಹೊಗಳಿದ್ದಾನೆ. ಭಾಸನ ಪ್ರತಿಭೆಯನ್ನು ಗುರುತಿಸಿ 'ಭಾಸೋಚ್ಛಿಷ್ಠಂ ಜಗತ್ ಸರ್ವಂ' ಎಂಬ ಮಾತು ಆ ನಂತರದ ದಿನಗಳಲ್ಲಿ ಪ್ರಚಲಿತಕ್ಕೆ ಬಂತು. ಇದು ಭಾಸನ ಶ್ರೇಷ್ಠತೆಯನ್ನು ಹೇಳುತ್ತದೆ.
ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಭಾಸ ಬರೆದ ನಾಟಕಗಳನ್ನು ಇಂದು ಓದಿದಾಗ ಹಾಗೂ ಅವುಗಳನ್ನು ಹಾಗೆಯೇ ರಂಗದ ಮೇಲೆ ಸುಲಭವಾಗಿ ತರಬಹುದಾದ ಸಾಧ್ಯತೆ ಅಧಿಕವಾಗಿರುವಾಗ ಆತನಿಗೆ ನಮೋ ಎನ್ನದೆ ಬೇರೆ ದಾರಿಯೇ ಇಲ್ಲ. ಎಸ್.ವಿ. ಪರಮೇಶ್ವರ ಭಟ್ಟರು ಭಾಸನ ನಾಟಕಗಳನ್ನು ಈ ಮೊದಲು ಅನುವಾದಿಸಿದ್ದು ಅದು 'ಭಾಸ ಮಹಾಸಂಪುಟ'ದಲ್ಲಿವೆ. ಈ ಕೃತಿ ಈಗ ಲಭ್ಯವಿಲ್ಲ.
ಈ ಭಾಸ ಬರೆದ ಹದಿನಾಲ್ಕು ನಾಟಕಗಳನ್ನು ಕನ್ನಡದ ಇಬ್ಬರು ಸಂಸ್ಕೃತ ಪಂಡಿತರಾದ ಎಲ್. ಗುಂಡಪ್ಪನವರು ಮತ್ತು ಮಹಾಬಲ ಸೀತಾಳಭಾವಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಎಲ್. ಗುಂಡಪ್ಪನವರು ಹಳೆ ತಲೆಮಾರಿನ ಸಂಸ್ಕೃತ ವಿದ್ವಾಂಸರು, ಮಹಾಬಲ ಸೀತಾಳಭಾವಿ ಹೊಸ ತಲೆಮಾರಿನ ಯುವ ಪಂಡಿತರು.
ಎಲ್. ಗುಂಡಪ್ಪನವರು ಭಾಸನ ಒಂಬತ್ತು ನಾಟಕಗಳಾದ ಮಧ್ಯಮ ವ್ಯಾಯೋಗ, ದೂತವಾಕ್ಯ, ದೂತ ಘಟೋತ್ಕಚ, ಕರ್ಣಭಾರ, ಊರುಭಂಗ, ಪಂಚರಾತ್ರ, ಚಾರುದತ್ತ, ಪ್ರತಿಜ್ಞಾಯೌಗಂಧರಾಯಣ, ಸ್ವಪ್ನ ವಾಸವತ್ತಗಳನ್ನು ಅನುವಾದಿಸಿದ್ದಾರೆ. ಉಳಿದ ಐದು ನಾಟಕಗಳಾದ ಪ್ರತಿಮಾ ನಾಟಕ, ಅವಿಮಾರಕ, ಅಭಿಷೇಕ ನಾಟಕ, ಯಜ್ಞಫಲ, ಬಾಲಚರಿತಗಳನ್ನು ಮಹಾಬಲ ಅನುವಾದಿಸಿದ್ದಾರೆ.
ಎಲ್.ಗುಂಡಪ್ಪನವರು ಈಗ ನಮ್ಮ ನಡುವೆ ಇಲ್ಲ. ಕೀರ್ತಿಶೇಷರಾಗಿರುವ ಅವರು ಭಾಸನ ನಾಟಕಗಳನ್ನು ಅನುವಾದ ಮಾಡಲು ಆರಂಭಿಸಿದ್ದು 1933ರ ಸುಮಾರಿಗೆ. ಅವು ಮೊದಲು 'ಪ್ರಬುದ್ಧ ಕರ್ನಾಟಕ' ಪತ್ರಿಕೆಯಲ್ಲಿ ಪ್ರಕಟವಾದವು. ನಂತರ ಪುಸ್ತಕ ರೂಪದಲ್ಲಿ ಬಂದರೂ ಅವು ಈಗ ಲಭ್ಯವಿರಲಿಲ್ಲ. ಈ ಮರುಮುದ್ರಣದ ಕಾಲಕ್ಕೆ ಮೊದಲ ಮುದ್ರಣದಲ್ಲಿ ಎಲ್.ಗುಂಡಪ್ಪನವರು ಬರೆದ ಮುನ್ನುಡಿ, ನಾಟಕದ ಕ್ಲಿಷ್ಟ ಸನ್ನಿವೇಶಗಳನ್ನು ಅರ್ಥಮಾಡಿಕೊಳ್ಳಲು ಅವರು ಬರೆದ ಟಿಪ್ಪಣಿಗಳನ್ನೂ ಉಳಿಸಿಕೊಳ್ಳಲಾಗಿದೆ.
ಗುಂಡಪ್ಪನವರು ತಮ್ಮ ಅನುವಾದದಲ್ಲಿ ಮೂಲದಲ್ಲಿಯ ಪದ್ಯವನ್ನು ಪದ್ಯವಾಗಿಯೇ ಅನುವಾದಿಸಿದ್ದಾರೆ. ಕೆಲವೆಡೆ ಪದ್ಯಗಳ ಅನುವಾದದಲ್ಲಿ ಮೈಯಾಂತು, ಕಣ್ಗಳಾಂತು ಇತ್ಯಾದಿ ಹಳೆಗನ್ನಡ ರೂಪದ ಪದಗಳು ಇವೆ.
ಮಹಾಬಲ ಸೀತಾಳಭಾವಿ ಅನುವಾದಿಸಿದ ಭಾಸನ ಐದು ನಾಟಕಗಳೂ ಹೊಸಗನ್ನಡಕ್ಕೆ ಇನ್ನಷ್ಟು ಹೆಚ್ಚು ಹತ್ತಿರವಾಗಿವೆ. ಅವರು ಸಂಸ್ಕೃತದಲ್ಲಿಯ ಶ್ಲೋಕಗಳನ್ನು ಕನ್ನಡದಲ್ಲಿ ಗದ್ಯವಾಗಿಯೇ ಅನುವಾದಿಸಿದ್ದಾರೆ. ಇದಕ್ಕೆ ಅವರು ನೀಡುವ ಕಾರಣ ಎರಡು: 'ಒಂದು, ನನಗೆ ಕಾವ್ಯ ರಚನೆ ಗೊತ್ತಿಲ್ಲ. ಎರಡು, ಕನ್ನಡದಲ್ಲಿ ನಾಟಕ ಓದುವ ರೀತಿಗೆ ಪದ್ಯಕ್ಕಿಂತ ಗದ್ಯವೇ ಚೆನ್ನಾಗಿ ಹೊಂದುತ್ತದೆ.'
ತಮ್ಮ ಅನುವಾದದ ಬಗ್ಗೆ ಮಹಾಬಲ ಹೇಳುವ ಇನ್ನೊಂದು ಮಾತು, 'ಈ ನಾಟಕಗಳಲ್ಲಿ ಹಲವು ಶ್ಲೇಷ ಪ್ರಯೋಗಗಳಿವೆ. ಅಂಥ ಸಂದರ್ಭದಲ್ಲಿ ಎರಡೂ ಅರ್ಥಗಳನ್ನು ನೀಡಿದ್ದೇನೆ. ಕೆಲವೆಡೆ ಮೂಲದಲ್ಲಿರುವ ಶ್ಲೇಷವನ್ನು ಗುರುತಿಸುವಲ್ಲಿ ನಾನು ಸೋತಿರಬಹುದು...'
ಇಬ್ಬರ ಅನುವಾದದ ಬಗೆಗೂ ಎರಡು ಮಾತಿಲ್ಲ. ಈ ಎರಡು ಅನುವಾದಗಳಿಂದ ಕನ್ನಡ ನಾಟಕಪ್ರಿಯರಿಗೆ ನಿಧಿ ದೊರಕಿದಂತೆ ಆಗಿದೆ.  

ಪ್ರ: ಅಂಕಿತ ಪುಸ್ತಕ, ಬೆಂಗಳೂರು,  
ಪುಟಗಳು 320/336, ಬೆಲೆ ರು. 250/250


= ಡಾ. ವಾಸುದೇವ ಶೆಟ್ಟಿ
vasudevs@sify.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.