ಪ್ರೀತಿಯ ಪುಟ ತಿರುವಿ...

ಹೊಟ್ಟೆ ತುಂಬಾ ಹಸಿದಿತ್ತು. ಕ್ಲಾಸ್ ತೊಗೊಳ್ಳೋ ಗಡಿಬಿಡಿಯಲ್ಲಿ ಬೆಳಗ್ಗೆಯ ತಿಂಡಿ ಮರೆತೇಬಿಟ್ಟಿದ್ದೆ. ಕಾಲೇಜ್ ಎದುರಿನ ದರ್ಶಿನಿಗೆ ಹೋಗೋಣಾಂತ ಹೊರಟೆ. ರೋಡ್ ದಾಟಿ ಆ ಬದಿಗೆ ಹೋಗುವಾಗ, ನನಗೆ ತಿಳಿಯದಂತೆಯೇ ದೃಷ್ಟಿ ಮುಂದೆ ಹೋಗುತ್ತಿದ್ದ ಹುಡುಗಿಯ ಮೇಲೆ ಬಿತ್ತು. ಹುಡುಗಿಯ ಬೆನ್ನು ನನ್ನ ಕಡೆಗಿತ್ತು. ಅವಳ ಹೇರ್‌ಸ್ಟೈಲ್‌ನಿಂದ ಖಚಿತವಾಗಿ ಹೇಳಬಹುದಿತ್ತು; 'ಹೌದು, ಇವಳು ಹರಿಣಿ'. ಮೊದಲ ವರ್ಷದ ಬಿ.ಎಸ್ಸಿ. ವಿದ್ಯಾರ್ಥಿನಿ. ಅವಳೂ ದರ್ಶಿನಿಯ ಒಳಗಡೆ ಹೋದಳು. ಅವಳ ಜೊತೆಗೊಬ್ಬ ಹುಡುಗನೂ ಇದ್ದ.
ಹರಿಣಿ ತುಂಬಾ ಲವಲವಿಕೆಯ ಹುಡುಗಿ. ಅತ್ಯಂತ ಸುಂದರಿಯಲ್ಲದಿದ್ದರೂ, ಆಕರ್ಷಿಸುವ ರೂಪ. ಎಲ್ಲರಂತೆ ಎಂಜಿನಿಯರಿಂಗ್ ಅಥವಾ ಮೆಡಿಕಲ್ ಓದುವ ಬದಲಿಗೆ 'ನನಗೆ ಬೇಸಿಕ್ ಸೈನ್ಸ್ ಇಷ್ಟ' ಅಂತ ಬಿ.ಎಸ್ಸಿ ಸೇರಿದ್ದಳು.
ದೂರದಿಂದಲೇ ನನ್ನ ನೋಡಿ, 'ನಮಸ್ತೆ ಸರ್' ಅನ್ನುತ್ತಾ ಪ್ಲೇಟ್ ಹಿಡಿದುಕೊಂಡು ನನ್ನ ಟೇಬಲ್‌ಗೇ ಬಂದಳು. ಜತೆಗೆ ಆ ಹುಡುಗನೂ ಬಂದ. ಮುಗುಳ್ನಗುತ್ತಾ ಇಬ್ಬರಿಗೂ ಜಾಗ ಮಾಡಿಕೊಡುತ್ತಾ ಪಕ್ಕಕ್ಕೆ ಸರಿದೆ.
'ಸರ್, ಇವ್ನು ನನ್ನ ಫ್ರೆಂಡು. ರಾಜೇಶ್' ಅಂತ.
'ಏನ್ ಓದ್ತಾ ಇದ್ದೀರಾ ರಾಜೇಶ್?' ಅವನತ್ತ ತಿರುಗಿದೆ.
'ಸರ್, ನಾನು ಫೈನಲ್ ಇಯರ್ ಮೆಕಾನಿಕಲ್ ಎಂಜಿನಿಯರಿಂಗ್‌ನಲ್ಲಿರೋದು. ಇನ್ನೆರಡು ತಿಂಗ್ಳಲ್ಲಿ ಡಿಗ್ರಿ ಮುಗಿಯುತ್ತೆ ಸರ್' ಒಪ್ಪವಾಗಿ ಹೇಳಿದ.
ಇಬ್ಬರನ್ನೂ ಒಂದು ಕ್ಷಣ ನೋಡಿದೆ. ತಕ್ಷಣ ಅನಿಸಿದ್ದು 'ಒಳ್ಳೆಯ ಜೊತೆ' ಅಂತ. ಅಷ್ಟರಲ್ಲಿ ಹರಿಣಿ; 'ಸರ್, ರಾಜೇಶ್ ತುಂಬಾ ಚೆನ್ನಾಗಿ ಹಾಡ್ತಾನೆ, ಸಖತ್ತಾಗಿ ಪೇಂಟಿಂಗ್ ಮಾಡ್ತಾನೆ, ಅದೆಲ್ಲದರ ಜತೆಗೆ ಅಡುಗೆ ಕೂಡ ಚೆನ್ನಾಗಿ ಮಾಡ್ತಾನೆ' ವರದಿ ಒಪ್ಪಿಸಿದಳು. ಅವಳ ಮಾತನಾಡುವ ಶೈಲಿಯಲ್ಲಿ ಅವನ ಬಗ್ಗೆ ಮೆಚ್ಚುಗೆ ತುಂಬಿತ್ತು.
ಇಬ್ಬರನ್ನೂ ಭೇಟಿಯಾದದ್ದು ನನ್ನ ಮನಸ್ಸಿಗೇಕೋ ತುಂಬಾ ಖುಷಿಯೆನಿಸಿತ್ತು. ಇಬ್ಬರಿಗೂ ಶುಭ ಹಾರೈಸುತ್ತಾ, ಮುಂದಿನ ಪಿರಿಯಡ್‌ಗಾಗಿ ಮತ್ತೆ ಕಾಲೇಜಿನ ಕಡೆ ಹೊರಟೆ.
=
ಮರುದಿನ ಬೆಳಗ್ಗೆ ಸ್ಟಾಫ್‌ರೂಮ್‌ನಲ್ಲಿ ಓದ್ತಾ ಕುಳಿತಿದ್ದೆ. 'ಎಕ್ಸ್‌ಕ್ಯೂಸ್ ಮಿ ಸರ್', ಧ್ವನಿ ಬಂದತ್ತ ತಿರುಗಿದೆ. ಹರಿಣಿ ಬಂದಿದ್ದಳು.
'ಬಾ ಹರಿಣಿ. ಕೂತ್ಕೋ'. ನನ್ನೆದುರು ಕುಳಿತುಕೊಳ್ಳುತ್ತಾ, 'ಸರ್, ನನ್ನದೊಂದು ಸಣ್ಣ ಪ್ರಾಬ್ಲೆಮ್ ಇದೆ ಸರ್' ಅಂದಳು. ಮುಂದುವರಿಸಲು ಗೋಣುಹಾಕಿದೆ.
'ಸರ್, ನಿನ್ನೆ ದರ್ಶಿನಿಯಲ್ಲಿ ನೋಡಿದ್ರಲ್ಲಾ ಸರ್, ರಾಜೇಶ್, ಅವ್ನು ಹೇಗೆ ಅನಿಸಿದಾ ನಿಮಗೆ?' ಧೈರ್ಯದಿಂದ ಕೇಳಿದಳು.
'ನಿಜ ಹೇಳ್ಬೇಕೂಂದ್ರೆ, ನಿಮ್ಮಿಬ್ಬರನ್ನು ನೋಡಿ ನನಗನಿಸಿದ್ದು ನಿಮ್ಮಿಬ್ಬರ ಜೋಡಿ ಚೆನ್ನಾಗಿರುತ್ತೇಂತ. ಅವನನ್ನೇನಾದ್ರೂ ಲವ್ ಮಾಡ್ತಿದ್ದೀಯಾ ಹೇಗೆ?' ನೇರವಾಗಿ ಕೇಳಿದೆ.
'ಹೌದು ಸರ್. ನಾವಿಬ್ರೂ ಪ್ರೀತಿಸ್ತಿದ್ದೀವಿ. ಅವನು ಈ ಒಂದು ವರ್ಷದಿಂದ ಬೆನ್ನುಹತ್ತಿದ್ದ. ನಾನು ಆರು ತಿಂಗಳ ಹಿಂದೆ ಒಪ್ಪಿದೆ. ಇಬ್ರೂ ಒಬ್ಬರನ್ನೊಬ್ಬರು ತುಂಬಾ ಇಷ್ಟಪಟ್ಟಿದೀವಿ. ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್ ಸರ್' ಎಂದು ಹೇಳುತ್ತಾ ಎದ್ದು ಹೊರಟಳು.
=
ಒಂದು ವಾರದ ನಂತರ ಸ್ಟಾಫ್‌ರೂಮ್‌ನಲ್ಲಿದ್ದಾಗ ಮತ್ತೆ ಹರಿಣಿ ಬಂದಳು, ಎದುರಿಗೆ ಕುಳಿತಳು. ಮುಖ ಸ್ವಲ್ಪ ಗಂಭೀರವಾಗಿತ್ತು. ಏನು ವಿಷಯ ಎನ್ನುವಂತೆ ಕಣ್ಣಿನಿಂದ್ಲೇ ಪ್ರಶ್ನಿಸಿದೆ.
'ಸರ್ ಒಂದು ಪ್ರಾಬ್ಲಮ್. ರಾಜೇಶನ ವಿಷ್ಯ ಮನೆಯಲ್ಲಿ ಹೇಳಿದೆ. ಅಪ್ಪ ಅಮ್ಮ ಇಬ್ರೂ ಸಿಟ್ಟಾದ್ರು. ಕೊನೆಗೆ ಅಪ್ಪ ಒಂದು ಮಾತು ಹೇಳಿದ್ರು, 'ನೀನು ಲವ್ ಮಾಡಿದ್ರೂ ನಮ್ಮ ಜಾತಿಯವರನ್ನೇ ಲವ್ ಮಾಡು. ಬೇರೆಯವರಾದ್ರೆ ಪರಿಸ್ಥಿತಿ ಸರಿ ಇರಲ್ಲ ನೋಡು' ಅಂತ ಹೇಳಿದ್ರು.
ತಕ್ಷಣ ನನ್ನಿಂದ ಬಂದ ಮಾತು 'ನಿಮ್ಮ ಜಾತಿ ಯಾವ್ದು?'
'ಸರ್, ನಾವು ಬ್ರಾಹ್ಮಣರು.' ನನ್ನ ಮುಂದಿನ ಪ್ರಶ್ನೆ ಅರ್ಥವಾದವಳಂತೆ 'ರಾಜೇಶ್‌ನ ಜಾತಿ ಗೊತ್ತಿಲ್ಲ' ಅಂದಳು. ಅವಳ ಸಂದಿಗ್ಧ ಅರ್ಥವಾಯಿತು. ಸಮಸ್ಯೆ ಪರಿಹಾರ ಮಾಡುವವನಂತೆ, 'ನೀನು ರಾಜೇಶ್‌ನ ಡೈರೆಕ್ಟಾಗಿ ಕೇಳಿಬಿಡು. ಎಲ್ಲಾ ಗೊತ್ತಾಗಿಬಿಡುತ್ತೆ.'
'ಹೌದು ಸರ್. ನೀವ್ ಹೇಳೋದೂ ಸರಿ. ನಾನೇ ನೇರವಾಗಿ ಕೇಳಿಬಿಡ್ತೀನಿ' ಅನ್ನುತ್ತಾ ಎದ್ದು ಸ್ವಲ್ಪ ಪಕ್ಕಕ್ಕೆ ಹೋಗಿ ಮೊಬೈಲ್‌ನಲ್ಲಿ ಕರೆಮಾಡಿದಳು. ಬಹುಶಃ ರಾಜೇಶ್‌ಗೇ ಇರಬೇಕು. ಅವಳ ಧ್ವನಿ ಕೇಳಿಸ್ತಿದ್ದಿಲ್ಲ. ಪಿಸು ಪಿಸು ಮಾತುಕತೆ ನಡೆದಿತ್ತು. ನಾನು ಅವಳ ಮುಖವನ್ನೇ ದಿಟ್ಟಿಸುತ್ತಿದ್ದೆ. ಆತಂಕದಲ್ಲಿದ್ದ ಮುಖದ ಮೇಲೆ ಮಂದಹಾಸ ಮೂಡಿತ್ತು. ಫೋನ್ ಇಡುವಾಗ ಗಟ್ಟಿಯಾಗೇ ಮಾತನಾಡಿದಳು. 'ಬೈ ರಾಜೇಶ್. ಥ್ಯಾಂಕ್ಯೂ ವೆರಿ ಮಚ್' ಎನ್ನುತ್ತಾ ನನ್ನೆಡೆಗೆ ಬಂದು ಖುಷಿಯಿಂದ, 'ಸರ್, ರಾಜೇಶ್ ಕೂಡ ಬ್ರಾಹ್ಮಣನಂತೆ. ನನ್ನ ಸಮಸ್ಯೆ ಬಗೆಹರಿಯಿತು. ದೇವ್ರಿಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಸಾಲಲ್ಲ. ಅವನನ್ನು ಬಿಟ್ಟಿರೋದೇ ನನಗೆ ಸಾಧ್ಯವಿಲ್ಲ. ಜತೆಗೆ ಅಪ್ಪ ಅಮ್ಮನನ್ನಾದ್ರೂ ಹೇಗೆ ದೂರ ಮಾಡಲಿ? ನೀವೇ ಹೇಳಿ ಸರ್' ಅನ್ನುತ್ತಾ ನನ್ನ ಅಭಿಪ್ರಾಯಕ್ಕೋಸ್ಕರ ಮತ್ತೆ ಟೇಬಲ್ ಮೇಲೆ ಕೈಯೂರಿ ಎದುರಿಗೆ ನಿಂತಳು. ಒಂದು ಕ್ಷಣ ಇಬ್ಬರ ನಡುವೆ ಮೌನ ಆವರಿಸಿತು. ಸ್ವಲ್ಪ ಯೋಚಿಸಿದವಳಂತೆ ಮಾಡಿ ಮತ್ತೆ ಅವಳೇ ಕೇಳಿದ್ಲು; 'ಸರ್, ರಾಜೇಶ್ ನಿಜವಾಗ್ಲೂ ಬ್ರಾಹ್ಮಣನಾ ಅಂತ ತಿಳ್ಕೊಳೋದು ಹೇಗೆ?'. ನನಗೂ ಅವಳ ಪ್ರಶ್ನೆ ಅರಗಿಸಿಕೊಳ್ಳೋದು ಕಷ್ಟ ಆಯ್ತು. ಆದ್ರೂ ಸುಧಾರಿಸಿಕೊಂಡು, 'ಒಂದು ಕೆಲ್ಸ ಮಾಡು. ಮೊದಲು ಅವನಿಗೆ ಜನಿವಾರ ಇದೆಯೋ ಇಲ್ಲವೋ ಅಂತ ನೋಡು. ನಂತರ ಅವನ ಗೋತ್ರ ಯಾವ್ದೂಂತ ವಿಚಾರಿಸು. ಗೊತ್ತಾಗುತ್ತೆ' ಅಂತಂದೆ.
'ಸರಿ ಸರ್, ನೀವ್ಹೇಳ್ದಂಗೇ ಮಾಡ್ತೀನಿ' ಅನ್ನುತ್ತಾ ಸರಸರನೆ ಹೊರಟಳು.
=
ಮುಂದಿನ ಒಂದು ವಾರದ ತನಕ ಅವಳ ರಾಜೇಶ್‌ನ ಗುಂಗಿನಲ್ಲೇ ಇದ್ದೆ. ಒಂದೆರಡು ಬಾರಿ ಅವಳ ಕ್ಲಾಸ್‌ರೂಮ್‌ನ ಹತ್ರ ಹೋದ್ರೂ ಅವಳು ಸಿಗಲಿಲ್ಲ. ನಂತರ ನಾನೂ ಮರೆತುಬಿಟ್ಟಿದ್ದೆ. ಒಂದೆರಡು ತಿಂಗಳ ನಂತರ ಅದೇ ದರ್ಶಿನಿಯಲ್ಲಿ ಕಾಫಿ ಕುಡಿಯುತ್ತಿದ್ದಾಗ ಅವಳನ್ನು ನೋಡಿದೆ. ಫ್ರೆಂಡ್ಸ್ ಜೊತೆಗೆ ಹರಟೆ ಹೊಡೆಯುತ್ತಾ ನಿಂತಿದ್ದಳು. ನನಗೆ ಕುತೂಹಲ ತಡೆಯೋಕಾಗ್ಲಿಲ್ಲ. ಅಷ್ಟರಲ್ಲಿ ಅವಳೇ ನನ್ನತ್ತ ನೋಡಿ ನಗುತ್ತಾ ನನ್ನ ಟೇಬಲ್ಲಿಗೆ ಬಂದಳು.
'ಸರ್, ಬ್ಯಾಡ್‌ಲಕ್ ಸರ್. ಸಾರಿ. ನಿಮಗೆ ಹೇಳೋದಕ್ಕೆ ಆಗ್ಲೇ ಇಲ್ಲ. ಸರ್, ರಾಜೇಶ್‌ಗೆ ಜನಿವಾರ ಇದೆ ಸರ್. ಅವನ ಗೋತ್ರ ಪತಂಜಲಿ. ನಮ್ಮನೆಯಲ್ಲಿ ಕೇಳಿದೆ, ಅವ್ರು ಬೇರೆ ಬ್ರಾಹ್ಮಣರಂತೆ. ಅದ್ಕೇ ಬೇಡ ಅಂತ ಹೇಳ್ಬಿಟ್ಟು ಪ್ರೀತಿಗೆ ಬೈ ಬೈ ಹೇಳಿದೆ'.
ಮುಖದಲ್ಲಿ ಒಂದು ಚೂರೂ ಖೇದವಿರಲಿಲ್ಲ. 'ಬರ್ತೀನಿ ಸರ್, ಒಳ್ಳೇ ಬ್ರಾಹ್ಮಣ ಹುಡುಗನ ಜತೆ ಲವ್‌ನಲ್ಲಿ ಬೀಳು ಅಂತ ಆಶೀರ್ವದಿಸಿ ಸರ್' ಅನ್ನುತ್ತಾ ತುಂಟತನದಿಂದ ನಡೆದೇಬಿಟ್ಟಳು.
= ಸಂಪನ್ನ ಮುತಾಲಿಕ್
sampanna.mutalik@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


