ಪರ್ದೇಸಿ ಪರ್ದೇಸಿ ಜಾಣ ನಹೀ...

ಕೆಲಸಕ್ಕಾಗಿ ಹೊರದೇಶಕ್ಕೆ ಹೋಗುವ ಮಗನನ್ನು ಮನಸಿಲ್ಲದ ಮನಸ್ಸಿನಿಂದ ಕಳುಹಿಸಿಕೊಟ್ಟ ತಂದೆ ಮರುದಿನ ಅವನ ಕರೆ ಬಂದಾಗ ಕೇಳುವ ಮೊದಲ ಪ್ರಶ್ನೆ, 'ನೀ ಯಾವಾಗ ವಾಪಸ್ ಬರೋದು?'. ನಂತರದ ಒಂದು ತಿಂಗಳು, ಪ್ರತಿದಿನ ಕರೆ ಮಾಡಿದಾಗಲೂ ತಂದೆಯದು ಅದೇ ಪ್ರಶ್ನೆ.
ಮೊದಲು ತಿಂಗಳ ಸಂಬಳದಲ್ಲಿ ಸ್ವಲ್ಪ ಮನೆಗೆ ಕಳಿಸ್ತಾನೆ. ಹಣ ತಲುಪಿದ ದಿನ ಅಪ್ಪ ಮತ್ತೆ ಕರೆ ಮಾಡಿದಾಗ ಕೇಳ್ತಾನೆ, 'ನೀ ಯಾವಾಗ ಮತ್ತೆ ನನಗೆ ದುಡ್ಡು ಕಳಿಸೋದು?'. ಇದಕ್ಕೆ ಕಾರಣ ಹಣದ ಮೋಹ ಅಲ್ಲ. ಮಗನ ಹಣದಿಂದ ಅವರ ಆರ್ಥಿಕ ಹೊರೆ ಕಡಿಮೆಯಾಗ್ತಿರೋದರ ಅರಿವು.
ಅಮೆರಿಕ, ಇಂಗ್ಲೆಂಡ್ ಅಂತ ಕೆಲಸಕ್ಕೆ ಹೋದವರ ಬಗ್ಗೆ ಸ್ವದೇಶದಲ್ಲಿರೋ ಕೆಲವರು ಯೋಚಿಸುವುದು ಅವರೆಲ್ಲ ಐಷಾರಾಮಿಗಳಂದು! ಆದರೆ ಅಲ್ಲೂ ಅವರಿಗೆ ಅಷ್ಟೇ ಕಷ್ಟ ಇರುತ್ತದೆಂದು ತಿಳ್ಕೊಳೋದೇ ಇಲ್ಲ. ಸುಖವಾಗಿ, ಬೇಕಾದ್ದನ್ನು ತಿಂದು, ಬೇಕಾದಷ್ಟು ಖರ್ಚು ಮಾಡಿ, ಎಸಿ ಮನೆಯಲ್ಲಿ ಆರಾಮಾಗಿ ನಿಶ್ಚಿಂತೆಯಿಂದ ಬದುಕಿರುತ್ತಾರೆಂದು ತಿಳಿದಿರುತ್ತಾರೆ. ಅದು ನಿಜವಲ್ಲ.
ಎನ್ನಾರೈಗಳು ಅಂದ್ರೆ ಮಿಲೇನಿಯರ್ಸ್ ಅಲ್ಲ. ಅವರ ಕಷ್ಟಗಳನ್ನು ಅವರೇ ಬಲ್ಲರು. ಎನ್ನಾರೈಗಳು ಓಡಾಡೋದೆಲ್ಲ ಮರ್ಸಿಡಿಸ್ ಬೆಂಜ್, ಆಡಿ ಕಾರಲ್ಲೇ ಅಲ್ಲ. ಊರಿಗೆ ಹೋದಾಗ ಎಲ್ಲರಿಗೂ ಒಂದು ಗೋಲ್ಡ್ ಬಿಸ್ಕೆಟ್, ಮ್ಯಾಕ್‌ಬುಕ್ ಗಿಫ್ಟ್ ಕೊಡುವಷ್ಟು ಸಂಪಾದನೆ ಮಾಡಲ್ಲ.
'ಅವ್ರಿಗೇನು ಕಮ್ಮಿ... ತಿಂಗಳಿಗೆ 6000- 8000 ಡಾಲರ್ ಸಂಪಾದಿಸುತ್ತಾರೆ. 30 ಡಾಲರ್ ತೆರಿಗೆ ಪಾವತಿಸಿ, ಮನೆಬಾಡಿಗೆ ಪಾವತಿಸಿದರಾಯಿತು, ಮಿಕ್ಕಂತೆ ಭಾರತದ ಹಾಗೆ ಗ್ಯಾಸಿಗೆ, ದಿನಸಿಗೆ, ಮತ್ತಿತರ ಅಗತ್ಯಗಳಿಗೆಲ್ಲ ಖರ್ಚಿರಲ್ಲ' ಅಂತ ಅಂದ್ಕೊಂಡಿದ್ದೀರಾ?
ಅವರಿಗೂ ಖರ್ಚುಗಳಿರುತ್ತವೆ. ಅವರೂ ಭೂಲೋಕದ ಜೀವಿಗಳೇ. ಮನೆಬಾಡಿಗೆ 1000-2000 ಡಾಲರ್, ಯುಟಿಲಿಟೀಸ್ ಅಂತ 500- 600 ಡಾಲರ್ (ವಿದ್ಯುತ್, ನೀರು, ಇಂಟರ್‌ನೆಟ್, ಫೋನ್), ದಿನಸಿ ಖರ್ಚು 400-500 ಡಾಲರ್, ಕಾರು 400-500 ಡಾಲರ್, ಹೋಟೆಲ್ 100- 200 ಡಾಲರ್, ವಿಮೆ 200-300 ಡಾಲರ್, ಇನ್ನಿತರೆ ಖರ್ಚು 200-400 ಡಾಲರ್. ಹೀಗೆ ಅವರಿಗೂ ಖರ್ಚುಗಳು ಕಾದುಕುಳಿತಿರುತ್ತವೆ.
ಬರೋ 3500-5500 ಡಾಲರಲ್ಲಿ ಖರ್ಚು2800 ರಿಂದ 4500 ಡಾಲರ್. ಅದೂ ಕೇವಲ ಇಬ್ಬರಿಗೆ. ಅಬ್ಬಬ್ಬಾ ಅಂದ್ರೆ 500-1000 ಡಾಲರ್ ಉಳಿಸಬಹುದು. ಅಂದರೆ ಸುಮಾರು 30,000- 60,000 ರುಪಾಯಿಗಳು.
'ಅಬ್ಬಾ ಅಷ್ಟು ಉಳಿಯತ್ತಲ್ಲಾ' ಎಂದು ಹುಬ್ಬೇರಿಸಬೇಡಿ. ಅಲ್ಲಿ ಓಡಾಡಲೆಂದು ತೆಗೆದುಕೊಂಡ ಕಾರಿನ ಸಾಲವಿದೆಯಲ್ಲ! ಭಾರತದಲ್ಲಿ ಸ್ವಂತ ಮನೆಗಾಗಿ ತೆಗೆದುಕೊಂಡಿರುವ ಸಾಲವಿದೆಯಲ್ಲ! ಅದರ ಗತಿಯೇನು?
ವಿದೇಶಕ್ಕೆ ಬಂದು ದೇಹದ ಆಕಾರ, ಬಣ್ಣ, ಚೆಂದ ಆಗೋದಕ್ಕೆ ಕಾರಣ ಹಲವು. ಇಲ್ಲಿನ ಅನುಕೂಲತೆಗಳು, ಇಲ್ಲಿಯ ವಾತಾವರಣ, ಹವಾಮಾನ ಇತ್ಯಾದಿಗಳು ಎನ್ನಾರೈಗಳು ಕೂತು ತಿನ್ತಾ ಇದಾರೆ, ಸುಖದ ಸುಪ್ಪತ್ತಿಗೆಯಲ್ಲಿದಾರೆ ಎಂಬ ಭಾವನೆ ತರಿಸೋದು ಸಹಜ. ವಿದ್ಯುತ್ ಇಲ್ಲದೇ ಇಲ್ಲಿ ಊಟ ಮಾಡೋಕೂ ಆಗಲ್ಲ. ಭಾರತದಲ್ಲಿ ಸೀಮೆಎಣ್ಣೆ ಪಂಪು ಸ್ಟವ್, ಸೌದೆ ಒಲೆಯಲ್ಲಾದರೂ ಬೇಯಿಸ್ಕೊಂಡು ತಿನ್ನಬಹುದು. ಆದರೆ, ಇಲ್ಲಿ ವಿದ್ಯುತ್ ಬೇಕೇಬೇಕು. ಅಂತರ್ಜಾಲ ವ್ಯವಸ್ಥೆ ಇಲ್ದೇ ಕರೆ ಮಾಡೋಕಾಗಲ್ಲ, ಊರಲ್ಲಿರೋ ಹೆತ್ತವರನ್ನು ವಿಚಾರಿಸಲೇಬೇಕಾದದ್ದು ಮಕ್ಕಳಾದವರ ಕರ್ತವ್ಯ. ಆದರೆ ಅದಕ್ಕೆ ತಗುಲೋ ಖರ್ಚು? ಹೇಳಂಗಿಲ್ಲ, ಬಿಡಂಗಿಲ್ಲ. ಬ್ಲಾಕ್ ಫ್ರೈಡೇ ಸೇಲ್ ಮಾದರಿಯಲ್ಲಿ ಹಲವು ರಿಯಾಯಿತಿ ಸೇಲ್ ಏನೋ ಇರುತ್ತವೆ. ಕಮ್ಮಿ ಬೆಲೆಗೆ ಐಫೋನ್ ಕೂಡ ಸಿಗತ್ತೆ, ಕ್ಯೂನಲ್ಲಿ ನಿಂತು ಫೋನ್ ಕೂಡ ತಗೋಬಹುದು, ಆದ್ರೆ ಭಯ ಇರೋದು ಆ ಫೋನ್ ಜೊತೆಯಿರೋ ಕಂಟ್ರಾಕ್ಟ್‌ಗೆ. ಅಷ್ಟೆಲ್ಲಾ ದುಡ್ಡು ಕೊಟ್ಟುಕೊಂಡು ಐಫೋನ್ ತಗೋಬೇಕಾ? ಭಾರತದಲ್ಲಿ ಮಾಡಿರೋ ಮನೆ, ಶಿಕ್ಷಣ ಸಾಲ ಇರೋದ್ ಗೊತ್ತಿದ್ದೂ ರೇಬಾನ್ ತಗೊಳೋ ಮನಸಾಗತ್ತಾ?
ಫಾರಿನ್ನಲ್ಲಿದಾರೆ ಅಂದಮಾತ್ರಕ್ಕೆ ಬರುವಾಗೆಲ್ಲ ಗಿಫ್ಟ್ ತರಲೇಬೇಕಾ? ಕಳೆದ ಬಾರಿ ತಂದು ಕೊಟ್ಟ ಕ್ಯಾಮೆರಾ ಇಷ್ಟ ಆಯ್ತು ಅಂತ ಈ ಬಾರಿನೂ ಎಸ್.ಎಲ್.ಆರ್. ಕ್ಯಾಮೆರಾ ತರೋಕ್ ಹೇಳೋದು ಸರೀನಾ? ಎಲ್ಲರೂ ಎಲೆಕ್ಟ್ರಾನಿಕ್ ಐಟಮ್ಸೇ ಬೇಕು ಅನ್ನೊಲ್ಲ. ಕೆಲವರು ಮಗೂಗೆ ದೊಡ್ಡ ಡೈಪರ್ ಪ್ಯಾಕ್ ಆದ್ರೂ ಸಾಕು ಅಂತಾರೆ. 'ಹೋ ನನಗೆ ಪರ್ಫ್ಯೂಮ್ ತಗೊಂಡ್ಯಾ? ಅಯ್ಯೋ ಆ ಬ್ರಾಂಡ್ ಇಲ್ಲೂ ಇದೆ, ಐಪ್ಯಾಡ್ ಅಥವಾ ಐಪೋಡ್ ಕಳಿಸು ತರೋಕೂ ಸುಲಭ ಆಗತ್ತೆ ಹೆಚ್ಚು ಜಾಗನೂ ಬೇಡ' ಅನ್ನೋರೂ ಇದಾರೆ. ಹೌದೌದು, ನಿಜವಾದ ಮಾತು. ಸೈಜು ಸಣ್ಣದೇ. ಆದರೆ ದುಡ್ಡು?
ಎಷ್ಟೇ ಸ್ನೇಹವಿರಲಿ, ಪ್ರೀತಿಯಿರಲಿ ಎನ್ನಾರೈಗಳ ಹತ್ತಿರ ಏನಾದ್ರೂ ಕೇಳೋ ಮೊದಲು, ಒಂದು ಬಾರಿ ಯೋಚನೆ ಮಾಡಿ. ಅವರು ಹೊರನಾಡಿಗರು ಆಗಿರೋದು ಯಾಕೆ ಅಂತ ಯೋಚಿಸಿ. ಅವರೇನೇ ಆಗಿದ್ದರೂ ಅದು ಅವರ ಶ್ರಮದ ಫಲ. ಅವರನ್ನು ಅವರು ತರುವ ವಸ್ತುಗಳಿಂದ ಅಳೆಯಬೇಡಿ. ಯಾವುದನ್ನು ಯಾರಿಂದಲೂ ಬಯಸದಿರಿ.
- ಸ್ಮಿತಾ ರವಿ (ರಿಚ್‌ಮಂಡ್, ವರ್ಜೀನಿಯ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


