ತೀರ್ಪುಗಾರರ ಮಾತು

ಹರಿತ ಭಾಷೆ, ತಮಾಷೆ ದೃಷ್ಟಿ
ಯಾಕೆ ನಾನು ಇವರನ್ನೆಲ್ಲ ಆರಿಸಿದೆ ಎಂದರೆ, ಇವರಿಗೆಲ್ಲ ಇಂದಿನ ವೇಗ ಮತ್ತು ಹಳೆಯ ದಿನಗಳ ಅರಿವು- ಪ್ರಜ್ಞೆ ಎರಡೂ ಇದೆ. ಸಮಾಜದ ಇವತ್ತಿನ ಕನಸುಗಳಿವೆಲ್ಲ, ಅವೇನು ಎಂಬುದು ಇವರಿಗೆ ಗೊತ್ತಿದೆ. ಹರಿತವಾದ ಭಾಷೆ ಇದೆ. ಇಲ್ಲಿ ಕೆಲವರಿಗೆ ತಮಾಷೆಯ ದೃಷ್ಟಿ ಇದೆ. ಇಲ್ಲಿ ಅನೇಕರಿಗೆ ಸಾಹಿತ್ಯ, ಕಲೆ, ಸಂಸ್ಕೃತಿಗಳ ಪರಿಚಯವಿದೆ. ವಿಷಯದ ಆಳಕ್ಕೆ ಇಳಿಯುವುದರ ಜೊತೆಗೆ ಓದಿಸಿಕೊಂಡು ಹೋಗುವ ಶೈಲಿಯಲ್ಲಿ ಬೆರಗು ಮೂಡಿಸುತ್ತಾರೆ. ಇವರು ಆಯ್ದುಕೊಳ್ಳುವ ವಿಚಾರಗಳೂ ಅಷ್ಟೇ. ಅವು ಮಾಮೂಲಿಯಾಗಿರುವುದಿಲ್ಲ. ಎಲ್ಲರ ಭಾವಕ್ಕೆ ಹತ್ತಿರವಾಗುವ ಸಂಗತಿಗಳಿಗೆ ಕೈಹಾಕುತ್ತಾರೆ. ಆ ಪ್ರಪಂಚದೊಳಗೆ ನಮ್ಮನ್ನೂ ಕರೆದೊಯ್ಯುತ್ತಾರೆ. ಇಲ್ಲಿ ಅನೇಕರ ಮುಖ ನಾನಂತೂ ನೋಡಿಲ್ಲ. ಆದರೆ, ಬರವಣಿಗೆ ಮೂಲಕ ಇವರನ್ನು ನೋಡಿದ್ದೇನೆ. ಯಾಕೋ ಇವರ ಬೈಲೈನ್ ಕಂಡಾಗಲೆಲ್ಲ ಓದಬೇಕೆನಿಸುತ್ತದೆ.
-ಟಿ.ಎನ್. ಸೀತಾರಾಂ
ಕೆದಕಿದರಷ್ಟೇ ಸುದ್ದಿ ಸ್ವಾರಸ್ಯ
ಪತ್ರಿಕೋದ್ಯಮಕ್ಕೆ ಯುವಕರ ಆಗಮನವಾಗುತ್ತಿದೆ. ಯುವಮನಸುಗಳ ಅಗತ್ಯವೂ ಪತ್ರಿಕೋದ್ಯಮಕ್ಕಿದೆ. ಆದರೆ ಪತ್ರಿಕೋದ್ಯಮಕ್ಕೆ ಬಂದಕೂಡಲೇ ಯಾವತ್ತೂ ಯುವಪತ್ರಕರ್ತರಿಗೆ ಅಹಂಕಾರ ಬರಕೂಡದು. ತಾವು ಪತ್ರಕರ್ತರಾಗಿದ್ದೇವೆ, ತಾವು ಹೇಳಿದ್ದೆಲ್ಲ ಅಚ್ಚಾಗುತ್ತೆ, ಪ್ರಕಟವಾಗುತ್ತೆ ಅನ್ನೋ ಭಾವನೆ ಅವರಲ್ಲಿ ಬಂದು, ಅವರು ಸ್ವಯಂಭುಗಳು ಎಂಬ ಭ್ರಮೆ ಬೆಳೆಸಿಕೊಂಡರೆ ಅದು ತಪ್ಪಾಗುತ್ತದೆ.
ಈಗ ನಾನು ಇಲ್ಲಿ ಆಯ್ಕೆ ಮಾಡ್ತಾ ಇರೋ ಯುವಪತ್ರಕರ್ತರನ್ನು ಯಾಕೆ ಮೆಚ್ಚಿದ್ದೇನೆ ಅಂದ್ರೆ ಅವರಲ್ಲಿ ಮುಖ್ಯವಾಗಿ ವಿನಯವಂತಿಕೆ ಇದೆ. ಪತ್ರಕರ್ತರಿಗೆ ಮುಖ್ಯವಾಗಿ ವಿನಯವಂತಿಕೆ ಮುಖ್ಯ. ಬರೀ ವಿನಯವಂತಿಕೆ ಇದ್ದರೂ ಸಾಲದು. ಅವರಲ್ಲಿ ಹಳೆಯದನ್ನು, ಹಿಂದಿನ ಘಟನೆಗಳನ್ನೂ ತಿಳ್ಕೊಳೋ ಆಸಕ್ತಿ ಮತ್ತು ಅಧ್ಯಯನಶೀಲತೆ ಇರಬೇಕು. ಎಷ್ಟೋ ಜನ ಯುವ ಪತ್ರಕರ್ತರಿಗೆ ಇವತ್ತಿನ ವಿಷಯದ ಬಗ್ಗೆ ಹೆಚ್ಚಿನ ಆಸಕ್ತಿ ಇದೆ. ನಾಳಿನ ಬಗ್ಗೆ ಕಲ್ಪಿಸಿಕೊಳ್ಳೋ ಶಕ್ತಿ ಇದೆ. ಭವಿಷ್ಯವನ್ನು ಕಲ್ಪಿಸಿಕೊಳ್ಳೋ ಶಕ್ತಿ ಮತ್ತು ಇವತ್ತಿನ ಬಗೆಗಿನ ಆಸಕ್ತಿ ಇವೆರಡನ್ನು ಮಾತ್ರ ಇಟ್ಕೊಂಡಿರೋ ಯುವಪತ್ರಕರ್ತರನ್ನೇ ನಾವು ಹೆಚ್ಚು ಕಾಣ್ತಿದೀವಿ. ಆದರೆ ಇವೆರಡಕ್ಕಿಂತ ಹೆಚ್ಚಾಗಿ, ಯಾವುದೇ ಒಂದು ಸಾಮಾಜಿಕ, ರಾಜಕೀಯ ಅಥವಾ ಆರ್ಥಿಕ ಬೆಳವಣಿಗೆಗಳು ನಡೆದಾಗ, ಸಮಸ್ಯೆಗಳು ಉಂಟಾದಾಗ, ಆ ವಿಷಯಗಳ ಇತಿಹಾಸದ ಬಗೆಗಿನ ಮಾಹಿತಿ ತುಂಬಾ ಮುಖ್ಯ. ಆ ಘಟನೆಯ ಚರಿತ್ರೆ ಏನಿತ್ತು, ಇದರ ಆರಂಭ ಹೇಗಾಯ್ತು, ಇದಕ್ಕೆ ಮೂಲ ಕಾರಣಕರ್ತರು ಯಾರು, ಯಾವ ಯಾವ ಹಂತಗಳಲ್ಲಿ ಇಲ್ಲಿಯತನಕ ಈ ಘಟನೆ ಬೆಳವಣಿಗೆ ಹೊಂದಿದೆ, ಈ ಪ್ರಕ್ರಿಯೆಯೊಳಗೆ ಇದ್ದಂಥ ವ್ಯಕ್ತಿಗಳು ಯಾರು ಯಾರು.. ಶಕ್ತಿಗಳು ಯಾವುವು... ಇದೆಲ್ಲದರ ಹಿನ್ನೆಲೆ ಗೊತ್ತಿದ್ದರೆ ಮಾತ್ರ ಆ ಘಟನೆಯ ಬಗೆಗೆ ಸ್ಥಿತಿಗತಿಗಳ ಬಗೆಗೆ ಪತ್ರಕರ್ತ ವಸ್ತುನಿಷ್ಠವಾಗಿ ವರದಿ ಮಾಡಬಲ್ಲ.
ಆದ್ದರಿಂದ ಯಾವುದೋ ಒಂದು ರಾಜಕೀಯ ಬೆಳವಣಿಗೆ ನಡೆದಾಗ, ಆರ್ಥಿಕ ನೀತಿ ಜಾರಿಯಾದಾಗ, ಸಾಮಾಜಿಕ ಘಟನೆಗಳು ಸಂಭವಿಸಿದಾಗ ಆ ಘಟನೆ ಅದೇ ಮೊದಲು ನಡೆದದ್ದಾ ಅಥವಾ ಹಿಂದೆಂದಾದರೂ ಈ ಥರದ ಘಟನೆ ನಡೆದಿತ್ತಾ ಎಂಬುದನ್ನು ಕೆದಕಿಕೊಂಡು ಹೋಗಿ ಅದರ ಅನುಭವದ ಹಿನ್ನೆಲೆಯಲ್ಲಿ ಇವತ್ತಿನ ಸುದ್ದಿಯ ವಿಶ್ಲೇಷಣೆ ಮಾಡಿದರೆ ಅದು ನಾಳೆಗೆ ಒಳ್ಳೆಯ ಮಾರ್ಗದರ್ಶಿಯಾಗುತ್ತದೆ. ಆ ಥರ ಹಳೆಯದನ್ನೂ ತಿಳ್ಕೊಳೋ ಆಸಕ್ತಿ ಕೆಲವೇ ಕೆಲವು ಯುವ ಪತ್ರಕರ್ತರಿಗಿದೆ. ಅಂಥ ಪತ್ರಕರ್ತರನ್ನ ನಾನು ಇಲ್ಲಿ ಆಯ್ಕೆಮಾಡಿದ್ದೇನೆ. ಯಾಕಂದ್ರೆ ಈ ಥರದ ಪ್ರಕರಣಗಳು ನಡೆದಾಗ ಅವರು ನನ್ನನ್ನೋ ಅಥವಾ ಇತರ ಅನುಭವಿಗಳನ್ನೋ ಭೇಟಿ ಮಾಡಿ ಮಾಹಿತಿ ಪಡೀತಾರೆ. 'ಸಾರ್... ಹಿಂದೆಂದಾದ್ರೂ ಇಂಥ ಘಟನೆ ನಡೆದಿತ್ತಾ... ಹೀಗೊಂದು ಘಟನೆ ನಡಿದಿದೆ. ಇದೇ ಫಸ್ಟೋ ಹೇಗೆ?' ಅಂತ ಕೇಳ್ತಾರೆ. ಈ ಕುತೂಹಲ ಮತ್ತು ಅಧ್ಯಯನಶೀಲತೆ ಯುವಪತ್ರಕರ್ತರಿಗೆ ಬಹಳ ಮುಖ್ಯ.
-ವೈಎಸ್‌ವಿ ದತ್ತಾ
ನಾ ನಂಬುವ ಮಾಧ್ಯಮ
ಎರಡು ಹೃದಯಗಳ ಮಧ್ಯ ಎರಡು ಮನಸುಗಳ ಮಧ್ಯ ಒಂದು ಅದ್ಭುತವಾದ ಫ್ಲೈಓವರ್ ಅಂದ್ರೆ ಅದು ಪ್ರೆಸ್ ಮತ್ತು ಮೀಡಿಯಾ.
ಒಬ್ಬ ಪ್ರೇಕ್ಷಕ ಮತ್ತು ಒಬ್ಬ ಚಿತ್ರನಟನ ನಡುವೆ ಇರುವ ಒಂದು ಅಸಾಧಾರಣ ಸೇತುವೆ ಈ ಪ್ರೆಸ್. ಒಬ್ಬ ಚಿತ್ರನಟನಾಗಿ ನಾನು ನೂರಾರು ಪ್ರೆಸ್‌ಮೀಟ್‌ಗಳನ್ನು ಅಟೆಂಡ್ ಮಾಡಿದ್ದೀನಿ. ಹಲವು ಒಳ್ಳೆ ಜರ್ನಲಿಸ್ಟ್‌ಗಳನ್ನು ಭೇಟಿ ಮಾಡಿದ್ದೀನಿ. ನನ್ನ ಈ ಸಿನಿಪಯಣದಲ್ಲಿ ಈ 'ಒಳ್ಳೆ ಪತ್ರಕರ್ತರು' ಅನಿಸಿಕೊಂಡವರಲ್ಲಿ ಕೆಲವು ಕಾಮನ್ ಗುಣಗಳಿರುತ್ತವೆ ಎಂಬುದನ್ನ ಗಮನಿಸಿದ್ದೇನೆ. ಹಾಗೆಯೇ ಒಬ್ಬ ಒಳ್ಳೆಯ ಪತ್ರಕರ್ತನಲ್ಲಿ ಮುಖ್ಯವಾಗಿ ಯಾವ ಗುಣಗಳಿರಬೇಕು ಅನ್ನೋದರ ಬಗ್ಗೆಯೂ ನನ್ನದು ಕೆಲವು ಅನಿಸಿಕೆಗಳಿವೆ.
ಮೊದಲನೆಯದಾಗಿ ಪರ್ಸನಲ್ ರ್ಯಾಪೋ. ಅಂದ್ರೆ ಒಬ್ಬ ಪತ್ರಕರ್ತ ನಮಗೆ ಫೋನ್ ಮಾಡಿದಾಗ, ಅವರ ನಂಬರ್ ನಮ್ಮ ಮೊಬೈಲ್ ಪರದೆ ಮೇಲೆ ಫ್ಲ್ಯಾಶ್ ಆದಾಗ ನಮ್ಮ ಮುಖ ಅರಳುತೆ.್ತ ಅವರ ಕರೆಯನ್ನು ತಕ್ಷಣ ರಿಸೀವ್ ಮಾಡಬೇಕು ಅನಿಸುತ್ತೆ. ಅಂಥ ಒಂದು ರ್ಯಾಪೋ, ಸ್ನೇಹಪರತೆ ಚಿತ್ರನಟ ಮತ್ತು ಪತ್ರಕರ್ತನ ನಡುವೆ ಇರಬೇಕಾದ್ದು ಮುಖ್ಯ ಅಂದ್ಕೊಂಡಿದೀನಿ. ಈ ರ್ಯಾಪೋ ಸೃಷ್ಟಿಸಿಕೊಳ್ಳೋದು ಪತ್ರಕರ್ತನ ಕೈಲಿರುತ್ತೆ. ಪತ್ರಕರ್ತನ ಪ್ರಶ್ನೆ ಏನು ಎಂಬುದಕ್ಕಿಂತ, ಅವನು ಪ್ರಶ್ನೆ ಕೇಳುವ ರೀತಿ ಈ ಬಾಂಧವ್ಯ ಬೆಸೆಯೋದ್ರಲ್ಲಿ ಮುಖ್ಯ ಪಾತ್ರವಹಿಸುತ್ತೆ. ಅದೆಷ್ಟೇ ವಿವಾದಾತ್ಮಕ ಸುದ್ದಿಯಾಗಿರಲಿ, ಎಷ್ಟೇ ಸೂಕ್ಷ್ಮ ವಿಷಯವಾಗಿರಲಿ, ಅವರು ಅದನ್ನು ವಿಚಾರಿಸುವ ರೀತಿ ಹೇಗಿರುತ್ತೆ ಅಂದ್ರೆ, 'ಈ ಪ್ರಶ್ನೆ ನಿಮ್ಮನ್ನ ಕೆಣಕೋದಕ್ಕಲ್ಲ. ನನಗೊಂದು ಸತ್ಯ ಗೊತ್ತಾಗಬೇಕಿದೆ. ನಮಗೊಂದು ಮಾಹಿತಿ ಸಿಕ್ಕಿದೆ. ಇದರ ಸತ್ಯಾಸತ್ಯತೆ ಬಗ್ಗೆ ತಿಳ್ಕೊಳೋಕೋಸ್ಕರ ನಾನು ಈ ಪ್ರಶ್ನೆ ಕೇಳ್ತಿದ್ದೀನಿ. ಇದು ಪರ್ಸನಲಿ ನಿಮಗೆ ಕಿರಿಕಿರಿ ಮಾಡುವುದಕ್ಕಲ್ಲ. ನಿಮ್ಮನ್ನು ಮುಜುಗರಗೊಳಿಸುವುದಕ್ಕಲ್ಲ' ಎಂಬ ಒಂದು ಧ್ವನಿ ಮತ್ತು ಅಪ್ರೋಚ್ ಅವರ ಮಾತಿನಲ್ಲಿ ಇರಬೇಕಾಗುತ್ತದೆ. ಎರಡನೆಯದಾಗಿ ನಾವು ಏನೇ ಉತ್ತರ ಕೊಟ್ರೂ ನಮ್ಮ ಉತ್ತರದೊಂದಿಗೆ ಆ ಘಟನೆ ಹಾಗೂ ಆ ಚಿತ್ರಕ್ಕೆ ಸಂಬಂಧಪಟ್ಟ ಬೇರೆ ಮುಖ್ಯವಾದ ಧ್ವನಿಗಳು, ಅಭಿಪ್ರಾಯಗಳು, ಎಲ್ಲವನ್ನೂ ಅವರು ಸಂಗ್ರಹಿಸಬೇಕಾಗುತ್ತೆ. ಬೇರೆ ಬೇರೆ ದೃಷ್ಟಿಕೋನಗಳಲ್ಲೂ ನೋಡಬೇಕಾಗುತ್ತೆ. ಬರೆಯುವ ಮೊದಲು ಅವರ ವಿಷಯ ಸಂಗ್ರಹಣೆ ಒಂದೇ ನಿಟ್ಟಿನಿಂದ ಬಂದದ್ದಲ್ಲ ಎಂದು ಖಾತ್ರಿ ಮಾಡಿಕೊಳ್ಳಬೇಕಾಗುತ್ತೆ. ತಾವು ಸಂಗ್ರಹಿಸಿರುವ ಮಾಹಿತಿ ಹಾಗೂ ಬರೆಯಹೊರಟಿರುವ ಲೇಖನ ಎಲ್ಲ ದಿಕ್ಕಿನಿಂದಲೂ ನ್ಯಾಯಯುತ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕಾಗುತ್ತೆ.
ಇಷ್ಟಾದಮೇಲೆ ಅದನ್ನ ಬರೆಯುವ ರೀತಿಯೂ ಅತ್ಯಂತ ಮುಖ್ಯವಾದದ್ದು. 'knack of grabbing headline' ಅನ್ನೋ ಒಂದು ಮಾತಿದೆ. ಅಂದ್ರೆ ಹೆಡ್‌ಲೈನ್ ನೋಡಿದ ತಕ್ಷಣ ಆ ಲೇಖನ ಓದಬೇಕು ಅನಿಸೋ ಹಾಗೆ ಮಾಡೋ ಕಲೆ. ಅದು ಪತ್ರಕರ್ತನಿಗೆ ಇರಬೇಕಾದ ಅತಿ ಮುಖ್ಯ ಶಕ್ತಿ. ನಂತರ ಬರವಣಿಗೆಯ ಶೈಲಿ. ಬರೆದ ಪದಗಳೇ ಮರುಬಳಕೆ ಆಗದ ಹಾಗೆ, ಬರೆದ ವಿಷಯವನ್ನೇ ಮತ್ತೆ ಮತ್ತೆ ಬರೆಯದ ಹಾಗೆ, ಹೇಳಬೇಕಾದ ವಿಷಯವನ್ನ ಸಂಕ್ಷಿಪ್ತವಾಗಿ, ಆದರೂ ಸಾದ್ಯಂತವಾಗಿ ಹೇಳುವ ಪಾಂಡಿತ್ಯ ಪತ್ರಕರ್ತನಿಗೆ ಅತ್ಯಗತ್ಯ ಅಂತ ನನ್ನ ಭಾವನೆ.
ನನಗನಿಸೋ ಹಾಗೆ... ಒಂದು ಒಳ್ಳೆಯ ಚಿತ್ರ ಅಂದ್ರೆ ಅದಕ್ಕೊಂದು ಗ್ರ್ಯಾಂಡ್ ಆರಂಭ... ಒಂದಷ್ಟು ಬಿಲ್ಡಪ್ಪುಗಳು... ಪಾತ್ರಗಳ ಪರಿಚಯ... ಕಥೆ ಬಿಚ್ಚಿಕೊಳ್ತಾ ಹೋಗುವಿಕೆ... ಒಂದು ಇಂಟರ್ವಲ್ ಪಾಯಿಂಟ್... ಒಂದು ಹಾಡು... ಒಂದು ಅನಿರೀಕ್ಷಿತ ತಿರುವು... ಮತ್ತೊಂದಿಷ್ಟು ಬಿಲ್ಡಪ್‌ಗಳು... ಮೈಮರೆತು ನೋಡುವಂಥ ಕ್ಲೈಮಾಕ್ಸ್- ಇವಿಷ್ಟೂ ಇರಬೇಕು. ಆಗ ನೋಡುಗನಿಗೆ ಅದ್ಭುತ ಅನುಭವ ಸಿಗುತ್ತದೆ. ಪತ್ರಕರ್ತನ ಬರಹದ ಶೈಲಿಯೂ ಒಂದು ಒಳ್ಳೆ ಸಿನಿಮಾ ನೋಡಿದಾಗ ಕೊಡುವ ಅನುಭವದಂತೆ ಅದ್ಭುತವಾಗಿರಬೇಕು. ನಾ ಕಂಡಂತೆ ಉತ್ತಮ ಪತ್ರಕರ್ತರು ಅನಿಸಿಕೊಂಡವರು ತುಂಬಾ ಓದುತ್ತಾರೆ. ಎಲ್ಲ ವಿಷಯಗಳ ಬಗ್ಗೆ ತಿಳ್ಕೊಂಡಿರ್ತಾರೆ. ಅವ್ರು ರಾಜಕೀಯ ವಿಭಾಗದಲ್ಲಿದ್ರೂ ಕ್ರೈಂ ಸಂಬಂಧಿ ವಿಷಯಗಳ ಬಗ್ಗೆಯೂ ಅರಿವಿಟ್ಕೊಂಡಿರ್ತಾರೆ. ಕ್ರೈಂ ರಿಪೋರ್ಟಿಂಗ್‌ನಲ್ಲಿದ್ರೂ ಅಗತ್ಯ ಇದ್ದಷ್ಟು ಸಿನಿಮಾ ಬಗ್ಗೆ ತಿಳ್ಕೊಂಡಿರ್ತಾರೆ. ಹಾಗಾಗಿ ಅವರಿಗೆ ಬರೆಯೋದು ತುಂಬಾ ಸರಾಗ ಅನಿಸಿಬಿಡುತ್ತೆ. ಹೀಗೆ ಎಲ್ಲೆಲ್ಲೋ ಇರುವ ಚುಕ್ಕಿಗಳನ್ನು ತುಂಬಾ ನೀಟಾಗಿ ಒಂದಕ್ಕೊಂದು ಸೇರಿಸಿದಾಗ್ಲೇ ಅದೊಂದು ಸುಂದರವಾದ ರಂಗೋಲಿ ಆಗೋದು. ಅಂತ ಲೇಖನಗಳನ್ನು ಓದೋದೇ ಒಂದು ಸೊಗಸು.
ಉತ್ತಮ ಪತ್ರಕರ್ತರಲ್ಲಿ ಸಮಾಜದಲ್ಲಿ ನಡೆಯುವ ಎಲ್ಲ ಘಟನೆಗಳ ಬಗೆಗೆ ಒಂದು ಸಹಜ ಕುತೂಹಲ ಇರುತ್ತೆ. ಬಹುತೇಕ ಪತ್ರಕರ್ತರು ಸಾಹಿತ್ಯಾಸಕ್ತರೂ ಆಗಿರುತ್ತಾರೆ. ಹಾಗಾಗಿ ಅವರ ಭಾಷೆ ಹಾಗೂ ಪದಕೋಶ ಶ್ರೀಮಂತ. ಪತ್ರಕರ್ತರಲ್ಲಿ ನಾನು ಮೆಚ್ಚುವ ಒಂದು ವಿಶೇಷ ಗುಣ ಅಂದ್ರೆ, ವೈಯಕ್ತಿಕ ಹಾಗೂ ವೃತ್ತಿಜೀವನದ ವಿಷಯಗಳನ್ನು ಜೋಡಿಸದೇ ಇರೋದು.
ಅಂದ್ರೆ... ವೈಯಕ್ತಿಕವಾಗಿ ತನಗೆ ಒಬ್ಬ ವ್ಯಕ್ತಿ ಇಷ್ಟವಿಲ್ಲದಿದ್ದರೂ ಅವನು ಮಾಡಿದ ಕೆಲಸಕ್ಕೆ ಅವನ ಸಾಧನೆಗೆ ಸಿಗಬೇಕಿರೋ ನ್ಯಾಯವನ್ನು ಒಬ್ಬ ಒಳ್ಳೆ ಪತ್ರಕರ್ತನಾದವನು ಖಂಡಿತವಾಗಿಯೂ ಸಲ್ಲಿಸ್ತಾನೆ. ಅವನು ತನ್ನ ಪರ್ಸನಲ್ ಪೂರ್ವಾಗ್ರಹಗಳು, ಹಗೆತನಗಳನ್ನು ವೃತ್ತಿಯ ಸುತ್ತ ತರುವುದೇ ಇಲ್ಲ. ಇತ್ತೀಚಿನ ಯುವ ಪತ್ರಕರ್ತರಲ್ಲಿ ತಂತ್ರಜ್ಞಾನವನ್ನು ಸದುಪಯೋಗ ಮಾಡಿಕೊಳ್ಳುವವರನ್ನು ಹೆಚ್ಚುಹೆಚ್ಚು ಕಾಣುತ್ತಿದ್ದೇವೆ. ಅವರು ಫೇಸ್‌ಬುಕ್, ಟ್ವಿಟ್ಟರ್ ಮುಂತಾದ ಸಾಮಾಜಿಕ ತಾಣಗಳಲ್ಲಿ ಯಾರನ್ನು ಬೆನ್ನಟ್ಟಬೇಕು; ಎಲ್ಲಿ ಹೊಕ್ಕರೆ ಸುದ್ದಿ ಸಿಗುತ್ತದೆ ಎಂಬ ಚುರುಕುತನ ಹೊಂದಿದ್ದಾರೆ. ಸಾಮಾಜಿಕ ತಾಣದಲ್ಲಿ ಕಾಣುವ ಸುದ್ದಿಯ ಒಂದು ಸಣ್ಣ ಎಳೆ ಹಿಡಿದುಕೊಂಡು ಅದನ್ನು ಹಿಂಬಾಲಿಸಿ ಒಂದು ಅದ್ಭುತ ಸ್ಟೋರಿ ಸಂಗ್ರಹಿಸುವ ತಾಕತ್ ಇರುವವರಿದ್ದಾರೆ. ಅಂದ್ರೆ ಪತ್ರಿಕಾಗೋಷ್ಠಿಯ ಆಚೆಗೂ ಬೇರೆ ಬೇರೆ ರೀತಿಯಲ್ಲಿ ಸುದ್ದಿ ಹೆಕ್ಕುವ ಮಟ್ಟಿಗೆ ಪತ್ರಕರ್ತರು ಅಪ್‌ಡೇಟ್ ಆಗಿದ್ದಾರೆ.
ಸಿನಿಮಾ ಒಂದು ಕಲೆ ಅನ್ನೋದು ನಿಜವೇ ಆದರೂ ಅದು ಒಂದು ಬ್ಯುಸಿನೆಸ್ ಕೂಡ ಹೌದು. ಹಾಗೆಯೇ ಸುದ್ದಿ ಮಾಧ್ಯಮವೂ. ಇದು ಬೃಹತ್ ಉದ್ಯಮ ಅನ್ನೋದು ನಿಜವೇ ಆದರೂ ಇದೊಂದು ಅತ್ಯಂತ ಜವಾಬ್ದಾರಿಯುತ ಮಾಧ್ಯಮ. ಪ್ರೆಸ್ ಎಂಬುದು ಸತ್ಯದ ಮುಖವಾಣಿ. ಅವರು ಸತ್ಯದ ಪರವಾಗಿ ಇರುವವರು ಅನ್ನೋ ಕಾರಣಕ್ಕೆ ನಾವು ಮಾಧ್ಯಮವನ್ನು ಅತಿಯಾಗಿ ಗೌರವಿಸ್ತೀವಿ ಹಾಗೂ ನಂಬುತ್ತೇವೆ. ಎಲ್ಲ ಲಾಭ ನಷ್ಟದ ಮಾತಿನ ಆಚೆಗೆ ಮಾಧ್ಯಮಗಳು ಎಂದೆಂದಿಗೂ ಸತ್ಯದ ಪರವಾಗಿ ನಿಲ್ಲಬೇಕಿದೆ.
ಆಲ್‌ಫ್ರೆಡ್ ವೈಟ್‌ಹೆಡ್ ಹೇಳ್ತಾನೆ; 'There are no whole truths. ll truths are half- truths. It is trying to treat them as whole truths that plays the devil'. ಯಾವುದೂ ಪೂರ್ಣಸತ್ಯ ಅಂತ ಇಲ್ಲ. ಎಲ್ಲವೂ ಅರ್ಧಸತ್ಯಗಳೇ. ಆದರೆ ಈ ಅರ್ಧಸತ್ಯವನ್ನೇ ಪೂರ್ಣಸತ್ಯ ಅಂತ ಬಿಂಬಿಸಿಬಿಟ್ರೆ ಅದೇ ಎಲ್ಲ ಅನಾ ಹುತಗಳಿಗೆ ಕಾರಣವಾಗುತ್ತೆ. ಎಷ್ಟು ಸತ್ಯ ಅಲ್ವಾ?
= ರಮೇಶ್ ಅರವಿಂದ್
ಇಲ್ಲಿ ವ್ಯಕ್ತಿಯೇ ಮುಖ್ಯ; ಗುಂಪಲ್ಲ!
ತುಂಬಾ ಹಿಂದೆ 'ಎಲ್ಲೂ ನಡೆಯದ ನಾಣ್ಯ, ಪತ್ರಿಕಾ ವ್ಯವಸಾಯದಲ್ಲಿ ನಡೆಯುತ್ತದೆ' ಎಂಬ ಮಾತಿತ್ತು. ಪತ್ರಕರ್ತರಾಗುವುದಕ್ಕೆ ಯಾವ ಅರ್ಹತೆಯೂ ಬೇಕಾಗಿರಲಿಲ್ಲ. ತರಬೇತಿಯೂ ಬೇಕಾಗಿರಲಿಲ್ಲ. ಹಾಗೆ ಪತ್ರಿಕಾ ವ್ಯವಸಾಯವನ್ನು ಪ್ರವೇಶಿಸಿದವರಲ್ಲಿ ಅನೇಕರು ಪ್ರಬುದ್ಧ ಪತ್ರಕರ್ತರಾಗಿ ಆದರ್ಶವಾಗಿಯೇ ಕೆಲಸ ಮಾಡಿದ್ದಾರೆ. ಎಲ್ಲರೂ ಅಲ್ಲ.
ಆದರೆ ಈಗ, ಅದರಲ್ಲೂ ಖಾಸಗಿ ಕಾರಣ, ಉದಾರೀಕರಣದ ಯುಗದಲ್ಲಿ, ಪತ್ರಿಕಾ ವ್ಯವಸಾಯದಲ್ಲಿ ಸಾರ್ವಜನಿಕರ ಮನ್ನಣೆ, ಪ್ರತಿಷ್ಠೆ, ಖ್ಯಾತಿ, ಹಣ ಹಾಗೂ ಸಾಮಾಜಿಕ ಪರಿವರ್ತನೆಯ ಕೆಲಸಕ್ಕೆ ಅವಕಾಶವಿದೆ ಎನ್ನುವುದರ ಅರಿವಾದಾಗ, ವಿಶ್ವವಿದ್ಯಾಲಯಗಳಲ್ಲಿ (ಕೆಲವರು ವಿದೇಶಕ್ಕೆ ಹೋಗಿ) ಕಲಿತವರೂ ಕ್ಷೇತ್ರ ಪ್ರವೇಶ ಮಾಡುತ್ತಿದ್ದಾರೆ. ಎಲ್ಲೂ ಕೆಲಸ ಸಿಗದವರು ಪತ್ರಿಕಾಲಯ ಸೇರುತ್ತಾರೆ ಎಂದೇನೂ ಅಲ್ಲ. ಪತ್ರಿಕಾ ವ್ಯವಸಾಯದಲ್ಲಿ ತಮ್ಮ ಉದ್ದೇಶ (ಹಣ, ಕ್ರಾಂತಿ) ಸಾಧನೆ ಸುಲಭವೆಂದು ತಿಳಿದವರೂ ಇದ್ದಾರೆ. ಇಲ್ಲಿ ವ್ಯಕ್ತಿಯೇ ಮುಖ್ಯ; ಗುಂಪಲ್ಲ. ಪತ್ರಕರ್ತರಾಗ ಬಯಸುವವರಿಗೆ ಗ್ರಹಿಕೆಯ ಶಕ್ತಿ ಬೇಕು. ತಮ್ಮ ಅನಿಸಿಕೆಯನ್ನು ಸ್ಪಷ್ಟವಾಗಿ ಬರೆಯುವ ಛಾಪಿರಬೇಕು. ಸಾಮಾಜಿಕ ಕಳಕಳಿ ಅನಿವಾರ್ಯ. ಈ ಹಿನ್ನೆಲೆಯಲ್ಲಿ ಈಗಿನ ಯುವ ಪತ್ರಕರ್ತರಲ್ಲಿ ಭರವಸೆ ಮೂಡಿಸುವವರ ಆಯ್ಕೆ ಕಷ್ಟ. ಈ ಪಟ್ಟಿಯಲ್ಲಿ ನಮಗೆ ತಿಳಿದವರಿದ್ದಾರೆ. ನನ್ನ ಜತೆ ಸಂಪರ್ಕವನ್ನು ಇಟ್ಟುಕೊಂಡವರೂ ಇದ್ದಾರೆ. ಅನೇಕರ ಬರವಣಿಗೆಯನ್ನು ಗಮನಿಸಿದ್ದೇನೆ. ಆದರ್ಶಗಳಿಗೆ ಬದ್ಧತೆ, ಪ್ರಾಮಾಣಿಕತೆ ಹಾಗೂ ಸಹೃದಯತೆಯ ಗುಣಗಳೇ ನನ್ನ ಆಯ್ಕೆಗೆ ಆಧಾರ.
ಇವರೆಲ್ಲರ ಹೊರತಾಗಿಯೂ ತೀರ್ಪುಗಾರನಾಗಿ ನಾನು ಹೇಳಲೇಬೇಕಿರುವ ಇನ್ನೊಂದು ಹೆಸರು 'ವಿಜಯ ಕರ್ನಾಟಕ' ಬಳಗದ ಬೋಧಿವೃಕ್ಷದ ಚೇತನಾ ತಿರ್ಥಹಳ್ಳಿ. ಆಧುನಿಕ ಹೋರಾಟದ ಮನೋಧರ್ಮದ ಜತೆ ಅಧ್ಯಾತ್ಮ ಚಿಂತನೆಯನ್ನು ಈಗಿನ ಸಮಾಜಕ್ಕೆ ಹೊಂದುವಂತೆ ಮೈಗೂಡಿಸಿಕೊಂಡಿರುವಂಥ ಯುವತಿ. ಸೌಮ್ಯ ಸ್ವಭಾವದ ಆದರೆ ಬೆಂಕಿಯಂಥ ಚಿಂತನೆ ಆಕೆಯ ವೈಶಿಷ್ಟ್ಯ.
= ಸತ್ಯ, ಮಾಜಿ ಸಂಪಾದಕರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


