7CUP

ಮತ್ತೊಮ್ಮೆ ಕರ್ನಾಟಕ 'ರಣಜಿ'ಕಹಳೆ ಮೊಳಗಿಸಿದೆ. ಇದು 14 ವರ್ಷಗಳ ನಂತರ ದಕ್ಕಿದ ಖುಷಿ. ಪ್ರಶಸ್ತಿ ಗೆಲ್ಲದಿರಲು ಈ ವರ್ಷ ಕಾರಣಗಳೇ ಇರಲಿಲ್ಲ. ಪ್ರತಿಯೊಬ್ಬ ಆಟಗಾರ ಪ್ರತಿಶತ ನೂರರಷ್ಟು ಸಾಮರ್ಥ್ಯ ಧಾರೆಯರೆಯುತ್ತಿದ್ದರಿಂದ ಕನ್ನಡಿಗರ ಪಾಲಿಗೆ ಪ್ರಶಸ್ತಿ ಕಟ್ಟಿಟ್ಟ ಬುತ್ತಿಯೇ ಆಗಿತ್ತು. ಪ್ರತಿ ಆಟಗಾರನ ಸಮರ್ಪಣಾ ಮನೋಭಾವ ಈ ಬಾರಿ ಟ್ರೋಫಿ ಎತ್ತಿಹಿಡಿಯವಂತೆ ಮಾಡಿದೆ.
ಒಂದೊಮ್ಮೆ ಭಾರತ ತಂಡದಲ್ಲಿ ಅರ್ಧ ಡಜನ್ ಕನ್ನಡಿಗರಿದ್ದರು. ಆ ಕಾಲ ದೂರವಾಗಿ ದಶಕಗಳೇ ಕಳೆದಿವೆ. ಈಗ ಮತ್ತೊಮ್ಮೆ ಅಂಥ ಕಾಲವೊಂದು ಪುನರ್‌ಸ್ಥಾಪನೆಗೊಳ್ಳುವ ಸಣ್ಣ ಭರವಸೆಯನ್ನು ಈ ರಣಜಿ ಚಾಂಪಿಯನ್ನರು ಹುಟ್ಟುಹಾಕಿದ್ದಾರೆ. ಇದು ನಮ್ಮ ಪಾಲಿಗೆ ಬಂದ 7ನೇ ಬಾರಿಯ ರಣಜಿ ಕಪ್. ಇಂಥ ಸುಂದರ ಕ್ಷಣದಲ್ಲಿ ಈ ಹಿಂದಿನ ಸಾಧಕರು ಮತ್ತು ಸಾಧನೆಯನ್ನು ಒಮ್ಮೆ ಮೆಲುಕು ಹಾಕುವುದು ಉಚಿತವೆನಿಸುತ್ತದೆ.
1973-74
ಚೊಚ್ಚಲ ಮುಕುಟ
ರಣಜಿ ಇತಿಹಾಸದಲ್ಲಿ ಕರ್ನಾಟಕ ಮೊದಲ ಬಾರಿಗೆ ಪ್ರಶಸ್ತಿ ಗೆದ್ದ ಸಂಭ್ರಮದ ಪರ್ವ ಕಾಲ. ಜೈಪುರದ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ 1974ರ ಮಾರ್ಚ್ 23ರಿಂದ 27ರವರೆಗೆ ನಡೆದ ಫೈನಲ್ ಪಂದ್ಯ ಕೇವಲ 4 ದಿನಗಳಲ್ಲಿ ಅಂತ್ಯಗೊಂಡಿತ್ತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಕರ್ನಾಟಕ ತಂಡ 185 ರನ್‌ಗಳಿಂದ ರಾಜಸ್ಥಾನ ಪಡೆಯನ್ನು ಮಣಿಸಿ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿತ್ತು. ಸ್ಪಿನ್ ಮಾಂತ್ರಿಕ ಎರ್ರಪಳ್ಳಿ ಪ್ರಸನ್ನ ನಾಯಕತ್ವದಲ್ಲಿ ಕರ್ನಾಟಕ ಹೊಸ ಇತಿಹಾಸ ಬರೆಯುವಲ್ಲಿ ಯಶಸ್ವಿಯಾಗಿತ್ತು. ಈ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ವಿ.ಎಸ್. ವಿಜಯ್‌ಕುಮಾರ್ ಉತ್ತಮ ಆಲ್‌ರೌಂಡ್ ಪ್ರದರ್ಶನ ನೀಡಿದ್ದರು. ಎ.ವಿ. ಜಯಪ್ರಕಾಶ್ ಎರಡೂ ಇನಿಂಗ್ಸ್‌ಗಳಲ್ಲಿ ಅರ್ಧಶತಕ ಬಾರಿಸಿದ್ದರು. ಸ್ಪಿನ್ ಮಾಂತ್ರಿಕ ಎರ್ರಪಳ್ಳಿ ಪ್ರಸನ್ನ ಎರಡನೇ ಇನಿಂಗ್ಸ್‌ನಲ್ಲಿ ಅದ್ಭುತ ಕೈಚಳಕ ತೋರಿ ಎದುರಾಳಿ ತಂಡ ಗಿರಕಿ ಹೊಡೆಯುವಂತೆ ಮಾಡಿದ್ದರು. ಮೊದಲ ಇನಿಂಗ್ಸ್‌ನಲ್ಲಿ ಬರೋಬ್ಬರಿ 100 ರನ್‌ಗಳ ಮುನ್ನಡೆ ಪಡೆದಿದ್ದ ಕರ್ನಾಟಕ ಎದುರಾಳಿ ತಂಡಕ್ಕೆ ಗೆಲ್ಲಲು 313 ರನ್‌ಗಳ ಗುರಿ ನೀಡಿತ್ತು. ಆದರೆ, ರಾಜಸ್ಥಾನ 127 ರನ್‌ಗಳಿಸಲಷ್ಟೇ ಶಕ್ತವಾಗಿತ್ತು.
ಸಂಕ್ಷಿಪ್ತ ಸ್ಕೋರ್
ಕರ್ನಾಟಕ 276 ಮತ್ತು 212 ಹಾಗೂ ರಾಜಸ್ಥಾನ 176 ಹಾಗೂ 127
ಮಿಂಚಿದವರು: ಜಯಪ್ರಕಾಶ್ 55 ಮತ್ತು 64 ರನ್ ಹಾಗೂ ಪ್ರಸನ್ನ 56ಕ್ಕೆ4 ಮತ್ತು 45ಕ್ಕೆ5
1977-78
ಎರಡನೇ ಬಾರಿ ಸಾಮ್ರಾಜ್ಯ ಸೃಷ್ಟಿ
ದೇಶೀಯ ಕ್ರಿಕೆಟ್‌ನಲ್ಲಿ ಕರ್ನಾಟಕ ಎರಡನೇ ಬಾರಿಗೆ ರಣಜಿ ಟ್ರೋಫಿ ಗೆದ್ದು ಸಾರ್ವಭೌಮನಾಗಿ ಮೆರೆಯಿತು. ಮಗದೊಮ್ಮೆ ಎರ್ರಪಳ್ಳಿ ಪ್ರಸನ್ನ ನಾಯಕತ್ವದಲ್ಲೇ ಕರ್ನಾಟಕ ಈ ಸಾಧನೆ ಮಾಡಿತ್ತು. ನರೇಂದ್ರ ಮೋಹನ್ ಸ್ಪೋರ್ಟ್ಸ್ ಕ್ರೀಡಾಂಗಣದಲ್ಲಿ ಏಪ್ರಿಲ್ 4ರಿಂದ ಆರಂಭವಾಗಿದ್ದ ಐದು ದಿನಗಳ ಪಂದ್ಯದಲ್ಲಿ ಕರ್ನಾಟಕ ಕೇವಲ ಮೂರೇ ದಿನಗಳ ಆಟದಲ್ಲಿ ಆತಿಥೇಯ ಉತ್ತರಪ್ರದೇಶ ತಂಡವನ್ನು ಇನಿಂಗ್ಸ್ ಮತ್ತು 193 ರನ್‌ಗಳಿಂದ ಸೋಲಿಸಿತು. ಮೊದಲ ಇನಿಂಗ್ಸ್‌ನಲ್ಲಿ ಗುಂಡಪ್ಪ ಆರ್. ವಿಶ್ವನಾಥ್ (247) ಆಕರ್ಷಕ ದ್ವಿಶತಕ ಬಾರಿಸಿದ ಕ್ಷಣ ಸದಾ ನೆನಪಿನಲ್ಲುಳಿಯುವಂತಾಯಿತು. ಬ್ರಿಜೇಶ್ ಪಟೇಲ್ ಕೂಡ ಬರೋಬ್ಬರಿ 100 ರನ್ ಗಳಿಸಿದರು. ಈ ಇಬ್ಬರ ಮನಮೋಹಕ ಬ್ಯಾಟಿಂಗ್‌ನಿಂದಾಗಿ ಕರ್ನಾಟಕಕ್ಕೆ ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವ ಪ್ರಸಂಗವೇ ಬರಲಿಲ್ಲ. ಎರಡೂ ಇನಿಂಗ್ಸ್‌ಗಳಲ್ಲಿ ಅದ್ಭುತ ಸ್ಪಿನ್ ಬೌಲಿಂಗ್ ಪ್ರದರ್ಶನ ನೀಡಿದ ಬಿ.ಎಸ್. ಚಂದ್ರಶೇಖರ್ ಪಂದ್ಯದಲ್ಲಿ ಒಟ್ಟು 12 ವಿಕೆಟ್‌ಗಳನ್ನು ಉರುಳಿಸಿದರು.
ಸಂಕ್ಷಿಪ್ತ ಸ್ಕೋರ್
ಉತ್ತರಪ್ರದೇಶ ಮೊದಲ ಇನಿಂಗ್ಸ್ 129 ಮತ್ತು 112 ಹಾಗೂ ಕರ್ನಾಟಕ ಮೊದಲ ಇನಿಂಗ್ಸ್ 434
ಮಿಂಚಿದವರು: ಜಿ.ಆರ್. ವಿಶ್ವನಾಥ್ 247 ರನ್, ಬ್ರಿಜೇಶ್ ಪಟೇಲ್ 100 ಹಾಗೂ ಚಂದ್ರಶೇಖರ್ 57ಕ್ಕೆ 6 ಮತ್ತು 24ಕ್ಕೆ6.
1982-83
ಮತ್ತೆ ಮೊಳಗಿತು ಕನ್ನಡ ಡಿಂಡಿಮ
ಆಗಿನ ಬಾಂಬೆಯ ವಾಂಖೆಡೆ ಕ್ರೀಡಾಂಗಣದಲ್ಲಿ ಮಾರ್ಚ್ 11ರಿಂದ ಆರಂಭವಾದ ಟೂರ್ನಿಯಲ್ಲಿ ಕರ್ನಾಟಕ ಮೂರನೇ ಬಾರಿಗೆ ರಣಜಿ ಟ್ರೋಫಿ ಎತ್ತಿ ಹಿಡಿಯುವ ಅದೃಷ್ಟ ತನ್ನದಾಗಿಸಿಕೊಂಡಿತು. ಬ್ರಿಜೇಶ್ ಪಟೇಲ್ ಸಾರಥ್ಯದಲ್ಲಿ ಅಖಾಡಕ್ಕೆ ಧುಮುಕಿದ್ದ ಕನ್ನಡಿಗರು ಮೊದಲ ಇನಿಂಗ್ಸ್‌ನಲ್ಲಿ ಸಾಧಿಸಿದ 17 ರನ್‌ಗಳ ಅಲ್ಪ ಮುನ್ನಡೆಯೊಂದಿಗೆ ಪ್ರಶಸ್ತಿಯ ಗರಿ ಮೂಡಿಸಿಕೊಂಡಿತ್ತು. ಕರ್ನಾಟಕದ ಪರ ಮೊದಲ ಇನಿಂಗ್ಸ್‌ನಲ್ಲಿ ರೋಜರ್ ಬಿನ್ನಿ ಶತಕ ಸಾಧನೆ ಮಾಡಿದರೆ, ವಿಕೆಟ್ ಕೀಪರ್ ಸದಾನಂದ ವಿಶ್ವನಾಥ್ ಎರಡೂ ಇನಿಂಗ್ಸ್‌ಗಳಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ಅರ್ಧಶತಕಗಳನ್ನು ಸಿಡಿಸಿದ್ದರು. ಬಾಂಬೆ ತಂಡ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿ 534 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಆದರೂ, ಧೃತಿಗೆಡದ ಕನ್ನಡಿಗರು ಕೆಚ್ಚೆದೆಯಿಂದ ಬ್ಯಾಟಿಂಗ್ ಮಾಡುವ ಮೂಲಕ ತಮ್ಮ ಲೆಕ್ಕಾಚಾರದಂತೆ ಮೊದಲ ಇನಿಂಗ್ಸ್‌ನಲ್ಲಿ ಮೇಲುಗೈ ಸಾಧಿಸಿ ಪ್ರಶಸ್ತಿಗೆ ಭಾಜನರಾದರು.
ಸಂಕ್ಷಿಪ್ತ ಸ್ಕೋರ್
ಬಾಂಬೆ ಮೊದಲ ಇನಿಂಗ್ಸ್ 534 ಮತ್ತು 4 ವಿಕೆಟ್‌ಗೆ 213 ಡಿಕ್ಲೇರ್ ಹಾಗೂ ಕರ್ನಾಟಕ 551 ಮತ್ತು 5 ವಿಕೆಟ್‌ಗೆ 179.
ಮಿಂಚಿದವರು: ರೋಜರ್ ಬಿನ್ನಿ 115ರನ್ ಮತ್ತು 119ಕ್ಕೆ3
1995-1996
12 ವರ್ಷಗಳ ನಂತರ ಇತಿಹಾಸ
ಹನ್ನೆರಡು ವರ್ಷಗಳ ನಂತರ ರಣಜಿ ಟ್ರೋಫಿಯ ಬರ ನೀಗಿಸಿಕೊಂಡ ಸುಮಧುರ ಕ್ಷಣವಿದು. ಜಂಬೋ ಖ್ಯಾತಿಯ ಅನಿಲ್ ಕುಂಬ್ಳೆ ನಾಯಕತ್ವದಲ್ಲಿ ಕರ್ನಾಟಕ ತಂಡ ನಾಲ್ಕನೇ ಬಾರಿಗೆ ಟ್ರೋಫಿಗೆ ಮುತ್ತಿಕ್ಕಿತು. ಮಾರ್ಚ್ 27ರಿಂದ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯ ಡ್ರಾಗೊಂಡರೂ ಕರ್ನಾಟಕ ತಂಡ ಮೊದಲ ಇನಿಂಗ್ಸ್‌ನ 250 ರನ್‌ಗಳ ಭಾರಿ ಮುನ್ನಡೆಯೊಂದಿಗೆ ಎದುರಾಳಿ ತಮಿಳುನಾಡನ್ನು ಹೊರಹಾಕಿ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಮೊದಲ ಇನಿಂಗ್ಸ್‌ನಲ್ಲಿ ವಿಜಯ್ ಭಾರದ್ವಾಜ್ ಮತ್ತು ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಆಕರ್ಷಕ ಶತಕ ಬಾರಿಸಿ ಕರ್ನಾಟಕಕ್ಕೆ ದೊಡ್ಡ ಮೊತ್ತ ತಂದುಕೊಟ್ಟರು. ಮೊದಲ ಇನಿಂಗ್ಸ್ ಬೌಲಿಂಗ್‌ನಲ್ಲಿ ಲೆಗ್ ಸ್ಪಿನ್ ಜಾದೂಗಾರ ಅನಿಲ್ ಕುಂಬ್ಳೆ 5 ವಿಕೆಟ್ ಪಡೆದು ಎದುರಾಳಿ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದು ಕರ್ನಾಟಕಕ್ಕೆ ಪ್ರಶಸ್ತಿಯ ಕೊರಗು ತುಂಬಿಕೊಟ್ಟರು.
ಸಂಕ್ಷಿಪ್ತ ಸ್ಕೋರ್
ಕರ್ನಾಟಕ 620 ಡಿಕ್ಲೇರ್ ಮತ್ತು 6 ವಿಕೆಟ್‌ಗೆ 277 ಹಾಗೂ ತಮಿಳುನಾಡು 370 ಮತ್ತು 3 ವಿಕೆಟ್‌ಗೆ 31
ಮಿಂಚಿದವರು: ವಿಜಯ್ ಭಾರದ್ವಾಜ್ 146, ರಾಹುಲ್ ದ್ರಾವಿಡ್ 114, ಅನಿಲ್ ಕುಂಬ್ಳೆ 95ಕ್ಕೆ5.
1997-98
ಐದರ ಸಂಭ್ರಮ
ಕೇವಲ ಒಂದು ವರ್ಷದ ಗ್ಯಾಪ್ ನಂತರ ರಣಜಿ ಚಾಂಪಿಯನ್ ಎಂಬ ಘೋಷಣೆ ಕರ್ನಾಟಕದ್ದಾಯಿತು. ಏಪ್ರಿಲ್ 19ರಿಂದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ನಡೆದ ಪಂದ್ಯದಲ್ಲಿ ಕರ್ನಾಟಕದ ಆಟಗಾರರು ಪಂದ್ಯ ಡ್ರಾಗೊಂಡರೂ ಎದುರಾಳಿ ಉತ್ತರಪ್ರದೇಶ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ 483 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿದ್ದರಿಂದ ಐದನೇ ಬಾರಿಗೆ ರಣಜಿ ಮುಕುಟ ಧರಿಸಿದರು. ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಕರ್ನಾಟಕ ಈ ಸಾಧನೆ ಮಾಡಿತು. ನಾಯಕತ್ವದ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ ದ್ರಾವಿಡ್ ಮೊದಲ ಇನಿಂಗ್ಸ್‌ನಲ್ಲಿ ದ್ವಿಶತಕ ಸಿಡಿಸಿದರು. ಒಟ್ಟು ಮೂವರು ದಾಂಡಿಗರು ಶತಕ ಸಿಡಿಸಿದ್ದು ಗಮನಾರ್ಹವಾಗಿತ್ತು. ದ್ರಾವಿಡ್ ಹೊರತಾಗಿ ಜೆ. ಅರುಣ್ ಕುಮಾರ್ ಮತ್ತು ವಿಜಯ್ ಭಾರದ್ವಾಜ್ ಕೂಡ ಮೂರಂಕಿಯ ಗಡಿ ತಲುಪಿದ್ದರು. ಕರ್ನಾಟಕ ಬ್ಯಾಟಿಂಗ್‌ನಲ್ಲಿ ಪೂರ್ಣ ಪ್ರಭುತ್ವ ಸ್ಥಾಪಿಸಿದ್ದರಿಂದ ಎದುರಾಳಿ ತಂಡ ಫಾಲೋಆನ್ ಸುಳಿಗೆ ಸಿಲುಕಿ ಸೋಲಿನ ಭೀತಿಗೂ ಒಳಗಾಗುವಂತಾಗಿತ್ತು. ಬೌಲಿಂಗ್ ವಿಭಾಗದಲ್ಲಿ ಶ್ರೀನಾಥ್, ಜೋಶಿ, ಗಣೇಶ್ ಮಿಂಚು ಹರಿಸಿದರು.
ಸಂಕ್ಷಿಪ್ತ ಸ್ಕೋರ್:
ಉತ್ತರ ಪ್ರದೇಶ 134 ಮತ್ತು 7 ವಿಕೆಟ್‌ಗೆ 416 ಹಾಗೂ ಕರ್ನಾಟಕ 9 ವಿಕೆಟ್‌ಗೆ 617 ಡಿಕ್ಲೇರ್
ಮಿಂಚಿದವರು: ರಾಹುಲ್ ದ್ರಾವಿಡ್ ಅಜೇಯ 215, ವಿಜಯ್ ಭಾರದ್ವಾಜ್ 122, ಅರುಣ್ ಕುಮಾರ್ 104, ಕಮಲ್ 99ಕ್ಕೆ4), ಹಾಗೂ ಸುನೀಲ್ ಜೋಶಿ 37ಕ್ಕೆ4 ಮತ್ತು 112ಕ್ಕೆ3
1998-99
ಸತತ ಎರಡನೇ ಕಿರೀಟ
ಹಾಲಿ ಚಾಂಪಿಯನ್ ಘನತೆಗೆ ಚ್ಯುತಿ ತಂದುಕೊಳ್ಳದೇ ಸತತ ಎರಡನೇ ಹಾಗೂ ಒಟ್ಟಾರೆ ಆರನೇ ಬಾರಿಗೆ ರಣಜಿ ಟ್ರೋಫಿ ಗೆಲ್ಲುವ ಅದೃಷ್ಟ ಕನ್ನಡಿಗರದ್ದಾಯಿತು. ಸುನೀಲ್ ಜೋಶಿ ಸಾರಥ್ಯದಲ್ಲಿ ರಣರಂಗದಲ್ಲಿ ಹೋರಾಟಕ್ಕಿಳಿದಿದ್ದ ಕರ್ನಾಟಕ ಪಡೆ 96 ರನ್‌ಗಳಿಂದ ಮಧ್ಯಪ್ರದೇಶದ ಸವಾಲು ಹತ್ತಿಕ್ಕಿ ಪ್ರಶಸ್ತಿ ಸಂಪಾದಿಸಿತು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಪ್ರಿಲ್ 19ರಿಂದ ಶುರುವಾದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಕರ್ನಾಟಕ ಮೊದಲ ಇನಿಂಗ್ಸ್‌ನಲ್ಲಿ 75 ರನಗಳ ಹಿನ್ನಡೆ ಅನುಭವಿಸಿ ಚಾಂಪಿಯನ್ ಪಟ್ಟ ಕಳೆದುಕೊಳ್ಳುನ ಭೀತಿಗೆ ಸಿಲುಕಿತ್ತು. ಎರಡನೇ ಇನಿಂಗ್ಸ್‌ನಲ್ಲಿ ಅರುಣ್‌ಕುಮಾರ್‌ರ ಶತಕದ ಸಹಾಯದಿಂದ ಬ್ಯಾಟಿಂಗ್‌ನಲ್ಲಿ ಸ್ವಲ್ಪ ಚೇತರಿಕೆ ಪಡೆದು ಎದುರಾಳಿಗೆ 247 ರನ್‌ಗಳ ಸಾಧಾರಣ ಗುರಿ ನೀಡಿತ್ತು. ಆದರೆ, ಪಂದ್ಯ ಕೈಜಾರಿ ಹೋಗಬಹುದೆಂಬ ಆತಂಕದಲ್ಲಿದ್ದ ತಂಡಕ್ಕೆ ವಿಜಯ್ ಭಾರದ್ವಾಜ್ ಸಿಂಹಸ್ವಪ್ನರಾದರು. ಅವರು 6 ವಿಕೆಟ್ ಪಡೆದು ಮಧ್ಯಪ್ರದೇಶದ ದಾಂಡಿಗರು ಪೆವಿಲಿಯನ್‌ಗೆ ಪರೇಡ್ ನಡೆಸುವಂತೆ ಮಾಡಿದ ಪರಿಣಾಮ ಕರ್ನಾಟಕದ ಪಾಲಿಗೆ ಮತ್ತೊಂದು ಐತಿಹಾಸಿಕ ಕ್ಷಣ ಒದಗಿಸಿದರು.
ಸಂಕ್ಷಿಪ್ತ ಸ್ಕೋರ್
ಕರ್ನಾಟಕ 304 ಮತ್ತು 7 ವಿಕೆಟ್‌ಗೆ 321 ಡಿಕ್ಲೇರ್ ಹಾಗೂ ಮಧ್ಯಪ್ರದೇಶ 379 ಮತ್ತು 150
ಮಿಂಚಿದವರು: ಅರುಣ್‌ಕುಮಾರ್ 147 ರನ್ ಹಾಗೂ ಗಣೇಶ್ 103ಕ್ಕೆ5, ವಿಜಯ್ ಭಾರದ್ವಾಜ್ 24ಕ್ಕೆ6.
2013-14
ವನವಾಸದ ನಂತರ ರಾಜಾತಿಥ್ಯ
14 ವರ್ಷಗಳಿಂದ ರಣಜಿ ಟ್ರೋಫಿ ಗೆದ್ದುಕೊಳ್ಳಲಾಗದೇ ಒಂದು ರೀತಿಯಲ್ಲಿ ವನವಾಸ ಅನುಭವಿಸುತ್ತಿದ್ದ ಕನ್ನಡಿಗರ ಪಾಲಿಗೆ 2013-14ನೇ ಸಾಲು ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥದ್ದು. ಏಕೆಂದರೆ, ಏಳನೇ ಬಾರಿಗೆ ರಣಜಿ ಟ್ರೋಫಿ ಗೆಲ್ಲುವ ಸೌಭಾಗ್ಯ ತನ್ನದಾಗಿಸಿಕೊಂಡಿದೆ. ಹೈದರಾಬಾದ್‌ನಲ್ಲಿ ಜನವರಿ 29ರಿಂದ ಶುರುವಾದ ರೋಚಕ ಫೈನಲ್ ಕಾಳಗದಲ್ಲಿ ಕರ್ನಾಟಕ ತಂಡ 7 ವಿಕೆಟ್‌ಗಳಿಂದ ಮಹಾರಾಷ್ಟ್ರಕ್ಕೆ ಮಹಾ ಸೋಲುಣಿಸಿ ಪ್ರಶಸ್ತಿ ಸಂಪಾದಿಸಿತು. ವಿನಯ್‌ಕುಮಾರ್ ನಾಯಕತ್ವದಲ್ಲಿದ್ದ ತಂಡದ ಪ್ರತಿಯೊಬ್ಬ ಸದಸ್ಯನು ಈ ಐತಿಹಾಸಿಕ ಗೆಲವಿನಲ್ಲಿ ಪ್ರಮುಖ ಪಾತ್ರಧಾರಿ ಎನಿಸಿದನು. ಎಳೆಯ ಪ್ರತಿಭೆಗಳಾದ ಕೆ.ಎಲ್. ರಾಹುಲ್, ಗಣೇಶ್ ಸತೀಶ್ ಫೈನಲ್‌ನಲ್ಲಿ ಶತಕ ಸಂಪಾದಿಸಿದರು. ಇನ್ನು ಕರುಣ್ ನಾಯರ್ ಒಳಗೊಂಡಂತೆ ಇತರೆ ಆಟಗಾರರೆಲ್ಲ ಪರಿಣಾಮಕಾರಿಯಾಗಿ ಜವಾಬ್ದಾರಿ ನಿರ್ವಹಿಸಿದ ಪರಿಣಾಮ ರಣಜಿ ಟ್ರೋಫಿಗೆ ಚುಂಬಿಸಲು ಕನ್ನಡಿಗರಿಗೆ ಮತ್ತೊಮ್ಮೆ ಸಾಧ್ಯವಾಯಿತು.
ಸಂಕ್ಷಿಪ್ತ ಸ್ಕೋರ್
ಮಹಾರಾಷ್ಟ್ರ 305 ಮತ್ತು 366 ಹಾಗೂ ಕರ್ನಾಟಕ 515 ಮತ್ತು 3 ವಿಕೆಟ್‌ಗೆ 157
ಮಿಂಚಿದವರು: ಕೆ.ಎಲ್. ರಾಹುಲ್ 131, ಗಣೇಶ್ ಸತೀಶ್ 117, ಶ್ರೇಯಸ್ ಗೋಪಾಲ್ 47ಕ್ಕೆ4, ವಿನಯ್ 116ಕ್ಕೆ4.
= ಮೈಲಾರಲಿಂಗ ದಿಂಡಲಕೊಪ್ಪ
koppa73@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


