ಖುಷಿ

ಹತ್ತೂವರೆ ನಿಯಮ

ಹತ್ತೂವರೆ ನಿಯಮ
Published On :

ನನ್ನ ತಂದೆ ಪತ್ರಕರ್ತರಲ್ಲ. ತಾಯಿಯೂ ಪತ್ರಕರ್ತೆ ಅಲ್ಲ. ನಮ್ಮ ಕುಟುಂಬದಲ್ಲಿ ಯಾರೂ ಪತ್ರಕರ್ತರಾಗಿರಲಿಲ್ಲ. ನಾನು ಪತ್ರಿಕೋದ್ಯಮ ಶಾಲೆಗೆ ಹೋಗಲಿಲ್ಲ. ಪತ್ರಿಕೋದ್ಯಮದಲ್ಲಿ ಬಿ.ಎ, ಎಂ.ಎ ಅಥವಾ ಪಿ.ಎಚ್‌ಡಿ ಮಾಡಿಲ್ಲ. ಪತ್ರಕರ್ತನಾಗುವುದು ಹೇಗೆ ಎನ್ನುವ ಕುರಿತು ನನಗೆ ಯಾವ ಶಿಕ್ಷಕರೂ ಪಾಠ ಮಾಡಿಲ್ಲ. 'ಒಳ್ಳೆಯ ಪತ್ರಕರ್ತನಾಗುವುದು ಹೇಗೆ' ಎನ್ನುವ ಪುಸ್ತಕವನ್ನು ನಾನು ಯಾವತ್ತೂ ಖರೀದಿಸಿಯೂ ಇಲ್ಲ, ಓದಿಯೂ ಇಲ್ಲ.
ನನ್ನ ಬಗ್ಗೆ ಹೊಗಳಿಕೊಳ್ಳಲು ನಾನು ಇದನ್ನೆಲ್ಲ ಹೇಳುತ್ತಿಲ್ಲ. 'ವಿಶ್ವದ ಅತ್ಯುತ್ತಮ ವೃತ್ತಿ' ಎಂದು ನೊಬೆಲ್ ಪುರಸ್ಕೃತ ಗ್ಯಾಬ್ರಿಯಲ್ ಗಾರ್ಸಿಯಾ ಮಾರ್ಕ್ವೆಝ್ ಹೇಳಿರುವ, ನನ್ನಂಥ ತರಬೇತಿ ಪಡೆಯದ ಸಾವಿರಾರು ಮಂದಿಯನ್ನು ಸೆಳೆದಿರುವ ಪತ್ರಿಕೋದ್ಯಮ ವೃತ್ತಿಯಲ್ಲಿ ಅಡಗಿರುವ ಸೌಂದರ್ಯದ ಬಗ್ಗೆ ನಿಮ್ಮ ಗಮನ ಸೆಳೆಯುವುದಷ್ಟೇ ನನ್ನ ಉದ್ದೇಶ. ನಾವು ಪತ್ರಕರ್ತರು ಮತ್ತು ಈ ವೃತ್ತಿಯಿಂದಲೇ ಬದುಕು ಕಂಡುಕೊಂಡಿದ್ದೇವೆ ಎಂದು ನನ್ನಂಥ 'ಅನ್‌ಕ್ವಾಲಿಫೈಡ್‌'ಗಳು ಹೆಮ್ಮೆಯಿಂದಲೇ ಹೇಳಿಕೊಳ್ಳುತ್ತೇವೆ.
ಇದುವೇ ಪತ್ರಿಕೋದ್ಯಮದ ತಾಕತ್ತು, ಇದುವೇ ಪತ್ರಿಕೋದ್ಯಮದ ಘನತೆ ಮತ್ತು ಇದುವೇ ಪತ್ರಿಕೋದ್ಯಮದಿಂದ ಸಿಗುವ ತೃಪ್ತಿ. ಡಾಕ್ಟರ್‌ಗಳು, ಎಂಜಿನಿಯರ್‌ಗಳು, ಅಧಿಕಾರಿಗಳು, ಪೋಲಿಸ್ ಅಧಿಕಾರಿಗಳು, ಶಿಕ್ಷಕರು, ಬ್ಯೂಟಿಶಿಯನ್‌ಗಳು, ನರ್ಸ್‌ಗಳು... ಎಲ್ಲರೂ ತಮ್ಮ ವೃತ್ತಿಗೆ 'ಅರ್ಹತೆ' ಪಡೆಯಲು ತರಗತಿಗಳಿಗೆ ಹಾಜರಾಗುತ್ತಾರೆ, ಪಠ್ಯಪುಸ್ತಕಗಳನ್ನು ಓದುತ್ತಾರೆ, ಟ್ಯೂಶನ್ ತೆಗೆದುಕೊಳ್ಳುತ್ತಾರೆ, ಪರೀಕ್ಷೆಗಳನ್ನು ಬರೆಯುತ್ತಾರೆ, ಆಯಾ ಕೋರ್ಸ್‌ಗಳಲ್ಲಿ ಉತ್ತೀರ್ಣರಾಗಿ 'ಕ್ವಾಲಿಫೈಡ್‌' ಅನ್ನಿಸಿಕೊಳ್ಳುತ್ತಾರೆ.
ನಾವು, ಪತ್ರಕರ್ತರು ಹಾಗಲ್ಲ.
ನಾವು 'ಜೀವನ ವಿಶ್ವವಿದ್ಯಾಲಯ'ದ ಹೆಮ್ಮೆಯ ವಿದ್ಯಾರ್ಥಿಗಳು. ನಾವು ಡಾಕ್ಟರ್ ಎಥವಾ ಎಂಜಿನಿಯರ್ ಆಗಿಲ್ಲ ಎನ್ನುವ ಕಾರಣದಿಂದ ಪತ್ರಕರ್ತರಾಗಿಲ್ಲ. ನಾವೆಲ್ಲರೂ ಪತ್ರಕರ್ತರಾಗಬೇಕು ಎಂದುಕೊಂಡೇ ಪತ್ರಕರ್ತರಾಗಿದ್ದೇವೆ. ವೃತ್ತಿ ಬಗೆಗಿನ ತುಡಿತವೇ (ಪ್ಯಾಶನ್) ನಮ್ಮ ವೃತ್ತಿಯನ್ನು ಮುನ್ನಡೆಸುತ್ತಿರುವ ಇಂಧನ.
=
ನಿಮ್ಮ ಸುತ್ತಲೂ ಒಮ್ಮೆ ನೋಡಿಕೊಳ್ಳಿ. ಭಾರತದ ಇಂಗ್ಲಿಷ್ ಪತ್ರಿಕೋದ್ಯಮದಲ್ಲಿನ ಪ್ರಭಾವಶಾಲಿ ಹೆಸರುಗಳಲ್ಲಿ ಬಹುತೇಕರು 'ಕ್ವಾಲಿಫೈಡ್‌' ಪತ್ರಕರ್ತರಲ್ಲ ಎನ್ನುವುದು ನಿಮ್ಮ ಅರಿವಿಗೆ ಬರುತ್ತದೆ.
ಜಾರ್ಜ್ ವರ್ಗೀಸ್ ಅವರಿಂದ ಟಿ.ಜೆ.ಎಸ್. ಜಾರ್ಜ್, ಅರೂಣ್ ಪುರಿ ಅವರಿಂದ ಅರುಣ್ ಶೌರಿ, ಎಂ.ಜೆ. ಅಕ್ಬರ್ ಅವರಿಂದ ವಿನೋದ್ ಮೆಹ್ತಾ, ಶೇಖರ್ ಗುಪ್ತಾ ಅವರಿಂದ ಸ್ವಪನ್‌ದಾಸ್ ಗುಪ್ತಾ, ಚೋ. ರಾಮಸ್ವಾಮಿ ಅವರಿಂದ ಅರುಣ್ ಗೋಸ್ವಾಮಿ... ಅವರಲ್ಲಿ ಯಾರೊಬ್ಬರೂ ಪತ್ರಕರ್ತರಾಗಬೇಕೆಂದು ಪತ್ರಿಕೋದ್ಯಮ 'ಓದಿಲ್ಲ'.
ಅವರೆಲ್ಲ ಏಕೆ? 'ಹರಿಜನ' ಮತ್ತು 'ಯಂಗ್ ಇಂಡಿಯಾ' ಸಂಪಾದಕರಾಗಿದ್ದ ಮಹಾತ್ಮ ಗಾಂಧಿ ಕೂಡ ಪತ್ರಿಕೋದ್ಯಮ ಶಿಕ್ಷಣ ಪಡೆದವರಲ್ಲ.
ಅಫ್‌ಕೋರ್ಸ್, ಎಲ್ಲ ಕ್ಷೇತ್ರಗಳಲ್ಲಿರುವಂತೆ ಇಲ್ಲಿಯೂ ಒಂದೆರಡು ಅಪವಾದಗಳು ಇಲ್ಲವೆಂದಲ್ಲ. 'ದಿ ಹಿಂದೂ' ಪತ್ರಿಕೆಯ ಎನ್. ರಾಮ್, ಎನ್‌ಡಿಟಿವಿಯ ಬರ್ಖಾ ದತ್ ಕೊಲಂಬಿಯಾ ವಿಶ್ವವಿದ್ಯಾಲಯದ ಗ್ರಾಜ್ಯುಯೇಟ್ ಸ್ಕೂಲ್ ಆಫ್ ಜರ್ನಲಿಸಂನಲ್ಲಿ ಅಧ್ಯಯನಿಸಿದವರು. ಹಾಗಂತ ಸಾರಾಸಗಟಾಗಿ ಪತ್ರಿಕೋದ್ಯಮ ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ ಪಡೆದವರೆಲ್ಲ ಒಳ್ಳೆಯ ಪತ್ರಕರ್ತರಾಗುತ್ತಾರೆ ಎಂದು ಹೇಳುವುದು ನ್ಯಾಯವಲ್ಲ.
ಅದಕ್ಕೆ ತದ್ವಿರುದ್ಧವಾಗಿ, ಲಭ್ಯ ಸಾಕ್ಷ್ಯಗಳ ಪ್ರಕಾರ, ಇದರ ವಿರುದ್ಧ ಮುಖವೇ ಸತ್ಯ.
ವೆಸ್ಟ್‌ಇಂಡಿಯನ್ ಕ್ರಿಕೆಟ್ ಬರಹಗಾರ ಸಿ.ಎಲ್.ಆರ್. ಜೇಮ್ಸ್ ಹೇಳುವಂತೆ, 'ಪತ್ರಿಕೋದ್ಯಮ ಓದಿ ಬಂದವರಿಗೆ ಪತ್ರಿಕೋದ್ಯಮದ ಬಗ್ಗೆ ಏನು ಗೊತ್ತಿರಲು ಸಾಧ್ಯ?'
=
ಇದು ಔಪಚಾರಿಕ ಪತ್ರಿಕೋದ್ಯಮ ಪದವಿಗಳ ಅಳತೆಗೋಲಲ್ಲ. ಪತ್ರಿಕೋದ್ಯಮ ಶಿಕ್ಷಣದಲ್ಲಿ ಪರಿಣತಿ ಪಡೆದಿರುವ ಪತ್ರಿಕೋದ್ಯಮ ಸ್ಕೂಲ್, ಕಾಲೇಜುಗಳು ಮಾಡಿರುವ ಒಳ್ಳೆಯ ಕಾರ್ಯದ ನಿರಾಕರಣೆಯೂ ಅಲ್ಲ. ವಸ್ತುಸ್ಥಿತಿ ಆಧರಿಸಿದ ಒಂದು ಹೇಳಿಕೆ ಅಷ್ಟೆ.
ಹಾಗಾದರೆ ಪತ್ರಕರ್ತನಾಗುವುದು ಅಷ್ಟು ಸುಲಭವೆ? ಪತ್ರಿಕೋದ್ಯಮವನ್ನು ಕಲಿಯಬೇಕೇ ವಿನಾ ಕಲಿಸುವುದು ಸಾಧ್ಯವಿಲ್ಲ. ನೀವು ಪತ್ರಕರ್ತರಾಗುವುದು ಹೇಗೆ ಎಂದು ಯಾರೂ ಕಲಿಸಬೇಕಿಲ್ಲ; ಆದರೆ ಎಲ್ಲಿಯೂ, ಯಾರಾದರೂ- ಪುರುಷ ಅಥವಾ ಮಹಿಳೆ, ಯುವಜನ ಅಥವಾ ವೃದ್ಧರು, ಪಟ್ಟಣದವರು ಅಥವಾ ಹಳ್ಳಿಯವರು, ಬಡವರು ಅಥವಾ ಶ್ರೀಮಂತರು- ಪತ್ರಕರ್ತನಾಗುವುದು ಹೇಗೆ ಎನ್ನುವುದನ್ನು ಕಲಿಯಬಹುದು.
ಇದೇನೂ ಹೊಸದಾಗಿ ಹುಟ್ಟಿಕೊಂಡ ವಿರೋಧಾಭಾಸವಲ್ಲ. ಪತ್ರಿಕೋದ್ಯಮ ಕಲೆಯೂ ಅಲ್ಲ, ವಿಜ್ಞಾನವೂ ಅಲ್ಲ. ಹೀಗಾಗಿ ಪತ್ರಿಕೋದ್ಯಮ ಕೋರ್ಸ್ ಆರಂಭಿಸಬೇಕೆ, ಬೇಡವೆ ಎನ್ನುವ ಕುರಿತು 1930ರ ದಶಕದಲ್ಲಿ ಮೈಸೂರು ವಿವಿಯಲ್ಲಿ ದೊಡ್ಡದೊಂದು ಚರ್ಚೆಯೇ ನಡೆದಿತ್ತು.
ಹೀಗಾಗಿ, ಪತ್ರಿಕೋದ್ಯಮ ಪದವಿ ಇಲ್ಲದೆ ಪತ್ರಿಕೋದ್ಯಮದಲ್ಲೇ 28 ವರ್ಷಗಳನ್ನು ಕಳೆದು, ಅನುಭವದಿಂದ ಗಳಿಸಿಕೊಂಡಿರುವ ಶಕ್ತಿಯ ಆಧಾರದಲ್ಲಿ ಒಳ್ಳೆಯ ಪತ್ರಕರ್ತರಾಗಲು ಬಯಸುವ ಪತ್ರಕರ್ತರಿಗಾಗಿ ಅಥವಾ ಪತ್ರಕರ್ತರಾಗುವ ಹಂಬಲ ಉಳ್ಳವರಿಗಾಗಿ ಈ ಹತ್ತೂವರೆ ಸಂಗತಿಗಳನ್ನು ಹಂಚಿಕೊಳ್ಳುತ್ತಿದ್ದೇನೆ.
=
ನೀವೇನು ಮಾಡುತ್ತೀರೋ ಅದನ್ನು ಪ್ರೀತಿಸಿ
ನೀವು ರಾಜಕೀಯ ವರದಿಗಾರರಾಗಲು ಇಷ್ಟಪಟ್ಟಿದ್ದೀರೊ, ಬ್ಯುಸಿನೆಸ್ ಪತ್ರಕರ್ತರಾಗಲು ಬಯಸುತ್ತೀರೊ, ಕ್ರಿಕೆಟ್ ಪತ್ರಕರ್ತ ಅಥವಾ ಸಿನಿಮಾ ಪತ್ರಕರ್ತರಾಗಲು ಇಚ್ಛಿಸಿದ್ದೀರೊ ಎನ್ನುವುದು ಮುಖ್ಯವಲ್ಲ. ನೀವೇನು ಮಾಡುತ್ತೀರೊ ಅದನ್ನು ಪ್ರೀತಿಸದಿದ್ದರೆ ನಿಮ್ಮಲ್ಲಿನ 'ಪ್ಯಾಶನ್‌' ನಿಮ್ಮ ಓದುಗ ಅಥವಾ ವಿಮರ್ಶಕರ ಅರಿವಿಗೆ ಬರುವುದೇ ಇಲ್ಲ. ಯಾರೋ ಹೇಳುತ್ತಾರೆ ಎಂದುಕೊಂಡು ನಿಮ್ಮ ಕ್ಷೇತ್ರವನ್ನು ಆರಿಸಿಕೊಳ್ಳದೇ ಮನಸ್ಸಿನಿಂದ ಬಯಸಿ ಈ ವೃತ್ತಿ ಆರಿಸಿಕೊಳ್ಳಿ. ನಿಮ್ಮ ಜೀವನಕ್ಕೆ ನೀವೇ ಜವಾಬ್ದಾರರು. ನೀವು ಏನಾಗಿದ್ದೀರೊ ಅಥವಾ ಏನು ಆಗಿಲ್ಲವೊ ಅದಕ್ಕೆ ಬೇರೆಯವರನ್ನು ದೂಷಿಸುವುದರಲ್ಲಿ ಅರ್ಥವಿಲ್ಲ.

ಮಹತ್ವಾಕಾಂಕ್ಷೆ ಇರಲಿ
ನಿಮ್ಮ ಊರು, ಪಟ್ಟಣ, ನಗರ ಅಥವಾ ದೇಶದಲ್ಲಿನ ಯಾವುದಾದರೂ ವ್ಯವಸ್ಥೆಯನ್ನು ಸರಿಮಾಡುವ; ಜೀವನದಲ್ಲಿ ಏನನ್ನಾದರೂ ಸಾಧಿಸುವ ಛಲ ಇರಲಿ. ನಿಮ್ಮ ಗಮನಕ್ಕೆ ಬರುವ ಅಮಾನವೀಯತೆ, ಅನ್ಯಾಯ, ಭ್ರಷ್ಟಾಚಾರಗಳ ವಿರುದ್ಧ ಸಿಡಿದೇಳುವ ಧೋರಣೆ ಬೆಳೆಸಿಕೊಳ್ಳಿ. ಸಂತ್ರಸ್ತರ ಬಗ್ಗೆ ಕಳಕಳಿ ಇರಲಿ, ಸಂತ್ರಸ್ತರನ್ನು ಸಂತೈಸಿ. ಅದು ಬೇರಾರೋ ಮಾಡಬೇಕಾದ ಕೆಲಸ ಎಂದು ಭಾವಿಸಿಕೊಳ್ಳಬೇಡಿ. ಗಾಂಧೀಜಿ ಹೇಳುವಂತೆ, 'ನೀವು ಕಾಣಲು ಬಯಸಿರುವ ಬದಲಾವಣೆಗೆ ಪ್ರಯತ್ನಿಸಿ'.

ಯಾವುದೇ ಪಕ್ಷ, ಗುಂಪು, ಕ್ಲಬ್, ಎನ್‌ಜಿಒ ಸದಸ್ಯರಾಗಬೇಡಿ
ಪತ್ರಿಕೋದ್ಯಮದಲ್ಲಿ ವಿಶ್ವಾಸಾರ್ಹತೆಯೇ ಸರ್ವಸ್ವ. ನಿಮ್ಮ ಸ್ವಂತಿಕೆ ಕಾಪಾಡಿಕೊಳ್ಳಿ. ಯಾವುದೇ ರಾಜಕಾರಣಿ, ಉದ್ಯಮಿ, ನಟ ಅಥವಾ ಸಾರ್ವಜನಿಕ ಸಂಪರ್ಕಾಧಿಕಾರಿಗಳೊಂದಿಗೆ (ಪಿಆರ್‌ಓ) ಆತ್ಮೀಯ ಸಂಬಂಧ ಬೆಳೆಸಿಕೊಳ್ಳಬೇಡಿ. ಸಂಶಯದ ಮನೋಭಾವ ಬೆಳೆಸಿಕೊಳ್ಳಿ, ಆದರೆ ಸಿನಿಕರಾಗಬೇಡಿ. ನಿಮ್ಮ ವ್ಯಕ್ತಿತ್ವನ್ನು ಒತ್ತೆ ಇಡಬೇಡಿ. ಅದು ಕನ್ಯತ್ವದಂತೆ- ಒಮ್ಮೆ ಕಳೆದುಕೊಂಡರೆ ಮತ್ತೆಂದೂ ಮರಳಿ ಗಳಿಸಿಕೊಳ್ಳಲು ಸಾಧ್ಯವಿಲ್ಲ.
ಇಷ್ಟ ಆಗದೇ ಇರುವುದನ್ನೂ ಓದಿ
ಪತ್ರಿಕೆಗಳು, ನಿಯತಕಾಲಿಕೆಗಳು, ಪುಸ್ತಕಗಳನ್ನು ಓದಿ. ವೆಬ್‌ಸೈಟ್‌ಗಳನ್ನೂ ನೋಡಿ. ನಿಮಗೇನು ಇಷ್ಟವಾಗುತ್ತದೋ ಅದನ್ನು ಮಾತ್ರ ಓದದೇ ಇಷ್ಟ ಆಗದೇ ಇರುವುದನ್ನೂ ಓದಿ. ಐಡಿಯಾಲಜಿಗಳನ್ನು ಬದಿಗಿಟ್ಟು ಬರವಣಿಗೆ, ಬರಹಗಾರನನ್ನು ಮುಕ್ತ ಮನಸ್ಸಿನಿಂದ ಪ್ರಶಂಸಿಸಿ. ಇಂಟರ್ನೆಟ್ ಯುಗದಲ್ಲಿ ನಿಮ್ಮ ನಿರ್ಲಕ್ಷ್ಯಕ್ಕೆ ಕ್ಷಮೆಯೇ ಇಲ್ಲ ಎನ್ನುವುದನ್ನು ತಿಳಿದುಕೊಂಡಿರಿ.

ನಿಮ್ಮ ರೋಲ್ ಮಾಡೆಲ್ ಅನ್ನು ನೀವೇ ಗುರುತಿಸಿಕೊಳ್ಳಿ
ಪತ್ರಿಕೋದ್ಯಮದಲ್ಲಿ ಸಾಧನೆ ಮಾಡಿರುವ ಒಬ್ಬ ಹೀರೋ (ಅಥವಾ ಹೀರೊಯಿನ್) ಅನ್ನು ನೀವೇ ಗುರುತಿಸಿಕೊಳ್ಳಿ. ಅವರಂತೆ ಆಗುವ ಸಂಕಲ್ಪ ಮಾಡಿಕೊಳ್ಳಿ. ನಿಮ್ಮ ಗುರಿ ತಲುಪಲು ಸಹಾಯ ಮಾಡುವಂಥ ವ್ಯಕ್ತಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರಿ. ಪ್ರತಿದಿನ ಒಬ್ಬರಾದರೂ ಅಪರಿಚಿತ ವ್ಯಕ್ತಿಯನ್ನು ಮಾತನಾಡಿಸುವ ಅಭ್ಯಾಸ ರೂಢಿಸಿಕೊಳ್ಳಿ.

ಹೊಸತನಕ್ಕೆ ಮಿಡಿಯುತ್ತಿರಿ
ಸದಾ ಏನಾದರೂ ಹೊಸತು ಮಾಡಬೇಕು ಎನ್ನುವುದು ಮನಸ್ಸಿನಲ್ಲಿರಲಿ. ಹೊಸತನಕ್ಕೆ ಪ್ರಯತ್ನಿಸಲು ಯಾವ ಭಯವೂ ಬೇಡ. ಕನಸು, ಗುರಿ ದೊಡ್ಡದಾಗಿರಲಿ. ನಿಮ್ಮ ಗುರಿಯನ್ನು ನೀವೇ ನಿರ್ಧರಿಸಿಕೊಳ್ಳಿ. ರಿಸ್ಕ್ ತೆಗೆದುಕೊಳ್ಳಲು ಹೆದರಬೇಡಿ. ಭಿನ್ನವಾಗಿ ಆಲೋಚಿಸಿ, ಆದರೆ ಊಹೆ ಮಾಡಬೇಡಿ. ಹಿನ್ನಡೆ, ಸೋಲುಗಳನ್ನು ಎದುರಿಸುವ ಮನೋಶಕ್ತಿ ಬೆಳೆಸಿಕೊಳ್ಳಿ.

ಯಶಸ್ಸು, ಪ್ರತಿಫಲ ಮನಸ್ಸಿನಲ್ಲಿಟ್ಟುಕೊಂಡು ಕೆಲಸ ಮಾಡಬೇಡಿ
ತೃಪ್ತಿ ಮತ್ತು ವಿನೋದಕ್ಕಾಗಿ ಕೆಲಸ ಮಾಡಿ, ಪ್ರತಿಫಲ ತಾನಾಗಿಯೇ ಬರುತ್ತದೆ. ಹೊಗಳಿಕೆಗೆ ಮಾರು ಹೋಗಬೇಡಿ, ಕೀಳು ವಿಮರ್ಶೆಗಳಿಗೆ ಎದೆಗುಂದಬೇಡಿ.

ಅನುದಿನವೂ ಸೃಜನಶೀಲವಾಗಿರಲಿ
ಪ್ರತಿದಿನ ಏನಾದರೂ ಬರೆಯುತ್ತಿರಿ, ಚಿತ್ರ ಬಿಡಿಸುತ್ತಿರಿ, ಕ್ಯಾಮೆರಾ ಇದ್ದರೆ ಏನಾದರೂ ಶೂಟ್ ಮಾಡುತ್ತಿರಿ. ಕಾಲಕ್ರಮೇಣ ಅದು ನಿಮ್ಮ ಹವ್ಯಾಸವೇ ಆಗಿಬಿಡುತ್ತದೆ. ಪ್ರಾಕ್ಟೀಸ್ ನಿಮ್ಮನ್ನು ಪರಿಪೂರ್ಣ ಪತ್ರಕರ್ತನಾಗಿ ರೂಪಿಸುತ್ತದೆ. ತ್ರೀಡಿ (3ಉ)- ಡಿಸಿಪ್ಲಿನ್ (ಶಿಸ್ತು), ಡೆಡಿಕೇಶನ್ (ಅರ್ಪಣಾ ಮನೋಭಾವ), ಡಿಟರ್ಮಿನೇಶನ್ (ಬದ್ಧತೆ) ನಿಮ್ಮ ಮಂತ್ರವಾಗಿರಲಿ.

ಯಾರಿಗೂ ಹೆದರಬೇಡಿ, ಎಲ್ಲವನ್ನೂ ಪ್ರಶ್ನಿಸಿ
ನಿಮ್ಮ ವೃತ್ತಿಯೇ ಉತ್ತರ ಪಡೆಯುವುದು! ನಿಮ್ಮೆದುರಿಗೆ ಇರುವವರು ಎಷ್ಟೇ ದೊಡ್ಡ, ಖ್ಯಾತ ವ್ಯಕ್ತಿಯೇ ಆಗಿರಲಿ. ಅವರ ಅಧಿಕಾರ, ಅಂತಸ್ತು, ಸ್ಥಾನಮಾನ ಏನೇ ಇರಲಿ. ನಿಮ್ಮ ವೃತ್ತಿಯೇ ಸದಾ ಅಪರಿಚಿತರನ್ನು ಭೇಟಿ ಮಾಡುತ್ತ, ಅವರನ್ನು ಪ್ರಶ್ನಿಸುತ್ತ ಮಾಹಿತಿ, ಉತ್ತರ ಪಡೆಯುವುದು. ನೀವು ವೃತ್ತಿಯ ಭಾಗವಾಗಿ ಪ್ರಶ್ನೆ ಕೇಳುತ್ತಿದ್ದೀರೇ ವಿನಾ ನಿಮ್ಮ ಪಾಲಕರನ್ನು ಪ್ರಶ್ನಿಸುತ್ತಿಲ್ಲ. ಹಾಗಂತ ಸ್ಟುಪಿಡ್ ಪ್ರಶ್ನೆಗಳನ್ನು ಕೇಳಲು ಹೋಗಬೇಡಿ. ಕಡಿಮೆ ಮಾತನಾಡಿ, ಜಾಸ್ತಿ ಕೇಳಿಸಿಕೊಳ್ಳಿ. ನಿಮ್ಮಿಂದ ಏನಾದರೂ ಲೋಪವಾಗಿದ್ದರೆ, ನಿಮ್ಮ ನಿರ್ಲಕ್ಷ್ಯ ಇದ್ದರೆ ಪ್ರಾಮಾಣಿಕವಾಗಿ ಒಪ್ಪಿಕೊಳ್ಳಿ.

ಕನಸು ಬೆನ್ನತ್ತಿ
ಬೇರೆಯವರಿಗಾಗಿ ಬದುಕುವುದನ್ನು ನಿಲ್ಲಿಸಿಬಿಡಿ. ಯಾವುದೇ ಉತ್ತೇಜನ, ಪ್ರಲೋಭನೆಗಳಿಗೆ ಒಳಗಾಗಬೇಡಿ. ಜೀವನ ಇರುವುದು ಕೇವಲ ಹಣ ಗಳಿಸಲು ಅಲ್ಲ. ನಿಮ್ಮ ಗೌರವ ಯಾವತ್ತಿಗೂ ಪ್ರಶ್ನಾತೀತವಾಗಿರಲಿ. ಇದು ನಿಜ- ಪತ್ರಕರ್ತನಾಗಿ ಮರ್ಯಾದೆಯ ಮತ್ತು ಪ್ರಾಮಾಣಿಕ ಬದುಕು ಸಾಗಿಸುವುದು ಸಾಧ್ಯವಿದೆ.

ಮತ್ತು ಅರ್ಧ ನಿಯಮ
ಸಾಧ್ಯವಾದರೆ ನಿಮ್ಮ ವೃತ್ತಿಯವರಲ್ಲದವರನ್ನು ಅಂದರೆ ಪತ್ರಿಕೋದ್ಯಮ ಹೊರತಾಗಿ ಬೇರೆ ವೃತ್ತಿಯಲ್ಲಿ ತೊಡಗಿರುವವರನ್ನು ಮದುವೆಯಾಗಿ! ಒಂದೇ ರೀತಿಯ ನೋವು, ಸಮಸ್ಯೆ ಹೊಂದಿರುವವರೊಂದಿಗೆ ಹೆಜ್ಜೆ ಹಾಕುವುದು ಬೋರಿಂಗ್ ಮಾತ್ರವಲ್ಲ, ಭಯಂಕರ ಸಂಗತಿ ಕೂಡ!! ಮನೆ, ಕಚೇರಿ ಎರಡೂ ಕಡೆ ಒಂದೇ ವಿಚಾರದ ಚರ್ಚೆ ಆಗುವುದರಿಂದ ನೀವು ರಿಫ್ರೆಶ್ ಆಗಲು ಸಾಧ್ಯವಾಗದೇ ಇರಬಹುದು.

(ಕೃಷ್ಣಪ್ರಸಾದ್ ಅವರು 'ಔಟ್‌ಲುಕ್‌'ನ ಪ್ರಧಾನ ಸಂಪಾದಕರು. 'ವಿಜಯ ಟೈಮ್ಸ್‌'ನ ಮಾಜಿ ಸಂಪಾದಕ, 'ಚುರುಮುರಿ.ಕಾಮ್‌'ನ ಪ್ರಕಾಶಕರು ಕೂಡ. ಅವರನ್ನು ಟ್ವಿಟ್ಟರ್‌ನಲ್ಲಿ ಫಾಲೋ ಮಾಡಬಹುದು; Twitter @churumuri)


ವಿಕಾಸ್ ನೇಗಿಲೋಣಿ
ಪತ್ರಿಕೆ: ಉದಯವಾಣಿ
ಊರು: ತೀರ್ಥಹಳ್ಳಿ
ವಯಸ್ಸು: 33

ಸಂಯುಕ್ತ ಕರ್ನಾಟಕದಿಂದ ಪತ್ರಿಕೋದ್ಯಮ ಪಯಣ. ವಿಜಯ ಕರ್ನಾಟಕ, ಉದಯವಾಣಿ, ಕನ್ನಡಪ್ರಭ, ಸುವರ್ಣ ನ್ಯೂಸ್‌ನಲ್ಲಿ ಕೆಲಸ ಮಾಡಿ, ಪತ್ರಿಕೋದ್ಯಮದಲ್ಲಿ ಬಲವಾಗಿ ಬೇರೂರಿದರು. ಪ್ರಸ್ತುತ ಉದಯವಾಣಿಯಲ್ಲಿ ಪುರವಣಿ ವಿಭಾಗದ ಉಸ್ತುವಾರಿ. 'ಮಳೆಗಾಲ ಬಂದು ಬಾಗಿಲು ತಟ್ಟಿತು' ಕಥಾ ಸಂಕಲನ ಹೊರತಂದಿದ್ದಾರೆ.
ಬೆಸ್ಟ್ ನೆನಪು: ಪ್ರೌಢಶಾಲೆಯಲ್ಲಿದ್ದಾಗ ಪಠ್ಯಪುಸ್ತಕಗಳನ್ನು ಹೊರತುಪಡಿಸಿ ಓದುತ್ತಿದ್ದ ಕಥೆ ಕಾದಂಬರಿಗಳು ನೆನಪಾಗುತ್ತವೆ.

ಚೇತನ್ ನಾಡಿಗೇರ್
ಪತ್ರಿಕೆ: ಉದಯವಾಣಿ
ಊರು: ಬೆಂಗಳೂರು
ವಯಸ್ಸು: 36

ಮೂಲತಃ ವೆಬ್ ಡಿಸೈನರ್. ಪತ್ರಿಕೋದ್ಯಮದಲ್ಲಿ ನೆಲೆ. ಉದಯವಾಣಿಯೊಂದಿಗೆ ಪ್ರಾರಂಭ. ವಿಜಯ ಕರ್ನಾಟಕ, ಕನ್ನಡಪ್ರಭ, ಸುವರ್ಣಾ ನ್ಯೂಸ್‌ನಲ್ಲೂ ಕೆಲಸ. ಪ್ರಸ್ತುತ ಉದಯವಾಣಿ ಮತ್ತು ರೂಪತಾರಾದಲ್ಲಿ ಸಿನಿಮಾ ಪತ್ರಕರ್ತರು.
ಬೆಸ್ಟ್ ನೆನಪು: ಮೊದಲ ಲೇಖನ ಉದಯವಾಣಿಯಲ್ಲಿ ಪ್ರಕಟಗೊಂಡಾಗ. ಬರೆಯುವ ಆಸಕ್ತಿಗೆ ಪ್ರಥಮ ಹೆಜ್ಜೆ.


ವಿಶಾಖ ಎನ್.
ಪತ್ರಿಕೆ: ಪ್ರಜಾವಾಣಿ
ಊರು: ಅರಿಶಿನಕುಂಟೆ
ವಯಸ್ಸು: 37

ಏಷ್ಯನ್ ಕಾಲೇಜಿನಲ್ಲಿ ಪತ್ರಿಕೋದ್ಯಮ ಕಲಿತು ಕನ್ನಡಪ್ರಭದಲ್ಲಿ ವೃತ್ತಿ ಜೀವನ ಆರಂಭ. 'ದಟ್ಸ್ ಕನ್ನಡ' ವೆಬ್ ಸೈಟ್‌ನಲ್ಲೂ ಜಾಲಾಡಿದ ಅನುಭವ. ಪ್ರಸ್ತುತ ಪ್ರಜಾವಾಣಿಯಲ್ಲಿ ಚೀಫ್ ಸಬ್ ಎಡಿಟರ್.
ಬೆಸ್ಟ್ ನೆನಪು:  ಡಾ. ರಾಜ್ ಪಾರ್ಥೀವ ಶರೀರವನ್ನು ಕಂಠೀರವ ಸ್ಟುಡಿಯೋದಲ್ಲಿ ಇಟ್ಟ ಸಂದರ್ಭದಲ್ಲಿ ಆದ ಗಲಭೆಯಲ್ಲಿ ಗೋಲಿಬಾರ್‌ನಿಂದ ಕಣ್ಣ ಮುಂದೇ ಇಬ್ಬರು ಸಾವನ್ನಪ್ಪಿದರು. ಇದೊಂದು ಮರೆಯಲಾಗದ ಅನುಭವ.

ಸುಬ್ರಹ್ಮಣ್ಯ ವಿ.ಎಸ್
ಊರು: ಕುಂದಾ ಗ್ರಾಮ
ಪತ್ರಿಕೆ: ಪ್ರಜಾವಾಣಿ
ವಯಸ್ಸು: 31

ವಾರ್ತಾಭಾರತಿ ಪತ್ರಿಕೆ ಮೂಲಕ ಪತ್ರಿಕೋದ್ಯಮಕ್ಕೆ ಪರಿಚಯ. ನಂತರ 'ಉಷಾಕಿರಣ' ದಾಟಿ ಪ್ರಸ್ತುತ ಪ್ರಜಾವಾಣಿಯಲ್ಲಿ ಸೀನಿಯರ್ ರಿಪೋರ್ಟರ್.
ಬೆಸ್ಟ್ ನೆನಪು: ಅಕ್ರಮ ಗಣಿಗಾರಿಕೆ ಬಗ್ಗೆ ನಿರಂತರವಾಗಿ ಮಾಡಿದ ವರದಿ.


ಬಿ.ಕೆ. ಗಣೇಶ್
ಪತ್ರಿಕೆ: ವಿಜಯ ಕರ್ನಾಟಕ
ಊರು: ಗೋಣಿಕೊಪ್ಪ (ಕೊಡಗು)
ವಯಸ್ಸು: 36

ಪದವಿಯಲ್ಲಿರುವಾಗ ಸ್ಥಳೀಯ ಪತ್ರಿಕೆ 'ಶಕ್ತಿ'ಗೆ ಬರೆಯುತ್ತಿದ್ದರು. 'ಆಂದೋಲನ' ಪತ್ರಿಕೆಯಲ್ಲಿ ವೃತ್ತಿ ಬದುಕು ಪ್ರಾರಂಭ. ಕರಾವಳಿ ಅಲೆಯ 'ಕನ್ನಡ ಜನ ಅಂತರಂಗ', ಮೈಸೂರಿನ 'ಪ್ರಜಾನುಡಿ'ಗಳಲ್ಲಿ ಕೆಲಸ. ವಿಜಯ ಕರ್ನಾಟಕ, ಪ್ರಜಾವಾಣಿ, ಟೈಮ್ಸ್ ಆಫ್ ಇಂಡಿಯಾ, ವಿಜಯ ನೆಕ್ಸ್ಟ್‌ನಲ್ಲೂ ಪತ್ರಿಕೋದ್ಯಮದ ಅನುಭವ ಪಡೆದರು. ಪ್ರಸ್ತುತ ವಿಜಯ ಕರ್ನಾಟಕದಲ್ಲಿ ಜೂನಿಯರ್ ಅಸಿಸ್ಟೆಂಟ್ ಎಡಿಟರ್. 'ವಕ್ರವ್ಯೂಹ' ಇವರ ಜನಪ್ರಿಯ ಅಂಕಣ.


ವಿದ್ಯಾರಶ್ಮಿ ಪೆಲ್ಲತ್ತಡ್ಕ
ಪತ್ರಿಕೆ: ವಿಜಯ ನೆಕ್ಸ್ಟ್
ಊರು: ಪುತ್ತೂರು
ವಯಸ್ಸು: 32

ಕನ್ನಡ ಪ್ರಭ ಬೆಂಗಳೂರು ಡೆಸ್ಕ್‌ನಲ್ಲಿ ಪತ್ರಿಕಾವೃತ್ತಿ ಪ್ರಾರಂಭ. ಸಾಪ್ತಾಹಿಕ, ಸಖಿ, ವಿಶೇಷಾಂಕ ನಿರ್ವಹಣೆಯ ಅನುಭವ. ಸುವರ್ಣ ನ್ಯೂಸ್‌ನಲ್ಲಿದ್ದರೂ ಬರಹ ಪತ್ರಿಕೆಯತ್ತ ಸೆಳೆಯಿತು. ಪ್ರಸ್ತುತ ವಿಜಯ ನೆಕ್ಸ್ಟ್‌ನಲ್ಲಿ ಚೀಫ್ ಕಾಪಿ ಎಡಿಟರ್. 'ಕೇಳೆ ಸಖಿ' ಅಂಕಣಕಾರ್ತಿ. ವಿಜಯ ಕರ್ನಾಟಕದ ಲವಲವಿಕೆಯಲ್ಲೂ ಬರವಣಿಗೆ ಕೃಷಿ.
ಬೆಸ್ಟ್ ನೆನಪು: 'ಪಿಸುಮಾತು' ಅಂಕಣ ಬರಹ ಮತ್ತು ಕನ್ನಡಪ್ರಭದಲ್ಲಿನ ಕೆಲಸ ನಿರ್ವಹಣೆ.

ರಾಜು ಮಳವಳ್ಳಿ
ಪತ್ರಿಕೆ: ಸಂಯುಕ್ತ ಕರ್ನಾಟಕ
ಊರು: ಮಳವಳ್ಳಿ
ವಯಸ್ಸು: 39

ಹೊಟ್ಟೆಪಾಡಿಗಾಗಿ ಯುನೈಟೆಡ್ ಕೇಬಲ್ ನೆಟ್‌ವರ್ಕ್‌ನಲ್ಲಿ ಛಾಯಾಚಿತ್ರಗಾರನಾಗಿ ಪತ್ರಿಕಾರಂಗ ಪ್ರವೇಶ. ಸಂವಾದಕ್ಕೆ ಸ್ಕ್ರಿಪ್ಟ್, ಪ್ರಶ್ನೆ ಸಿದ್ಧಪಡಿಸುತ್ತಿದ್ದುದರಿಂದ ಪತ್ರಿಕೆಯತ್ತ ಹೆಚ್ಚಿದ ಒಲವು. ಓರಿಯಂಟಲ್ ನ್ಯೂಸ್ ಎಜೆನ್ಸಿಯಲ್ಲಿ ಸ್ವಲ್ಪ ದಿನ ಕೆಲಸ. ನಂತರ ಸಂಯುಕ್ತ ಕರ್ನಾಟಕಕ್ಕೆ ಸೇರಿದರು. 'ನಮ್ಮೂರಲ್ಲಿ ಸಿನಿಯಾ', 'ಜಗಲಿ ಹಿತ್ತಲು' ಅಂಕಣ ಜನಜನಿತ. 'ಜಗಲಿ ಹಿತ್ತಲು' ಪುಸ್ತಕವಾಗಿಯೂ ಹೊರಬಂದಿದೆ. 'ಹೇಳತೀನಿ ಕೇಳ' ಅಂಕಣ ಬರಹಗಾರರು. ಪ್ರಸ್ತುತ ಸಂಯುಕ್ತ ಕರ್ನಾಟಕದಲ್ಲಿ 'ಸಂವಾದ' ಅಂಕಣಕಾರ, ಪುರವಣಿ ವಿಭಾಗದ ಮುಖ್ಯಸ್ಥ. ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರು.
ಬೆಸ್ಟ್ ನೆನಪು: ಗುರುಪ್ರಸಾದ್ ಅವರ ಸಿನಿಮಾ ಆಧಾರಿತ 'ಡೈರೆಕ್ಟರ್ ಸ್ಪೆಷಲ್‌' ಪುಸ್ತಕದಲ್ಲಿ ನಾನು ಅವರೊಂದಿಗೆ ನಡೆಸಿದ ಸಂವಾದವನ್ನು 13 ಪುಟ ಬರೆದಿದ್ದಾರೆ.

ವಿಜಯಲಕ್ಷ್ಮಿ ಶಿಬರೂರು
ವಾಹಿನಿ: ಸುವರ್ಣ ನ್ಯೂಸ್
ಊರು: ಕಟೀಲು
ವಯಸ್ಸು: 35

ಕಾಲೇಜು ವರದಿಗಾರ್ತಿಯಾಗಿ ಪತ್ರಿಕಾರಂಗಕ್ಕೆ ಪ್ರಾಥಮಿಕ ಪರಿಚಯ. ಜನವಾಹಿನಿ, ಸಂಯುಕ್ತ ಕರ್ನಾಟಕ, ಈ-ಟಿವಿ, ಟಿವಿ-9ಗಳಲ್ಲಿ ಕೆಲಸ ಮಾಡಿದ ಅನುಭವ. ಪ್ರಸ್ತುತ ಸುವರ್ಣ ನ್ಯೂಸ್‌ನಲ್ಲಿ ಸ್ಪೆಷಲ್ ಇನ್ವೆಸ್ಟಿಗೇಟಿವ್ ಕರೆಸ್ಪಾಂಡೆಂಟ್. ಶೋಧನಾತ್ಮಕ ವರದಿಗಾರಿಕೆಗೆ 'ಮಾಧ್ಯಮ ಅಕಾಡೆಮಿ ಪ್ರಶಸ್ತಿ' ಸೇರಿದಂತೆ ಅನೇಕ ಗೌರವಕ್ಕೆ ಪಾತ್ರರು. ಪ್ರತಿ ಶುಕ್ರವಾರ 'ಕವರ್‌ಸ್ಟೋರಿ' ಕಾರ್ಯಕ್ರಮ ನಡೆಸಿಕೊಡುತ್ತಾರೆ.
ಬೆಸ್ಟ್ ನೆನಪು: ಸಂಯುಕ್ತ ಕರ್ನಾಟಕ ಇತಿಹಾಸದಲ್ಲಿ ರಾತ್ರಿ ಪಾಳಿ ಕೆಲಸ ನಿರ್ವಹಿಸಿದ ಮೊದಲ ಮತ್ತು ಕೊನೆಯ ಮಹಿಳೆ ಎಂದರೆ ನಾನೇ!

ಭಾವನಾ
ವಾಹಿನಿ: ಸುವರ್ಣ ನ್ಯೂಸ್
ಊರು: ಮೈಸೂರು
ವಯಸ್ಸು: 27

ಪ್ರಾರಂಭದ ದಿನಗಳಲ್ಲಿ ಕಸ್ತೂರಿ ವಾಹಿನಿಯ 'ಬೆಳ್ಳಿಚುಕ್ಕಿ' ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ನಂತರ ಸುವರ್ಣ ಎಂಟರ್‌ಟೈನ್‌ಮೆಂಟ್‌ನಲ್ಲಿ ನಿರೂಪಕಿ. ಪ್ರಸ್ತುತ ಸುವರ್ಣ ನ್ಯೂಸ್ ಚಾನೆಲ್‌ನಲ್ಲಿ ಆ್ಯಂಕರ್ ಚೀಫ್.
ಬೆಸ್ಟ್ ನೆನಪು: 'ಟಾರ್ಗೆಟ್‌' ಕಾರ್ಯಕ್ರಮ ನಡೆಸಿಕೊಟ್ಟಿದ್ದು.

ರಾಧಾ ಹಿರೇಗೌಡರ್
ವಾಹಿನಿ: ಪಬ್ಲಿಕ್ ಟಿವಿ
ಊರು: ಗಣೇಶ ಗುಡಿ (ಕಾರವಾರ)
ವಯಸ್ಸು: 29

ಕಾಲೇಜು ದಿನಗಳಲ್ಲಿ ಕ್ರೀಡಾಪಟು. ವಿದ್ಯಾರ್ಥಿ ದಿನಗಳಲ್ಲೇ ಸ್ಥಳೀಯ ಪತ್ರಿಕೆ 'ಕರಾವಳಿ ಮುಂಜಾವು'ಗೆ ಹವ್ಯಾಸಿ ವರದಿಗಾರ್ತಿಯಾಗಿದ್ದರು. ಉದಯ ನ್ಯೂಸ್, ಸುವರ್ಣ ಟಿವಿ ಮತ್ತು ಸುವರ್ಣ ನ್ಯೂಸ್‌ಗಳಲ್ಲಿ ಸುದ್ದಿ ವಾಚಕಿಯಾಗಿದ್ದರು. 'ಚಹಾ ಚೂಡಾ ಸುದ್ದಿ ನೋಡಾ' ಕಾರ್ಯಕ್ರಮ ಜನಜನಿತ. ಪ್ರಸ್ತುತ ಪಬ್ಲಿಕ್ ಟಿವಿಯಲ್ಲಿ ಆ್ಯಂಕರ್ ಚೀಫ್. ಬೆಂಕಿ ಬಿರುಗಾಳಿ, ಚಕ್ ಬಂದಿ, ಪವಾಡ ದಿ ಓಪನ್ ಸೀಕ್ರೆಟ್ ಕಾರ್ಯಕ್ರಮಗಳ ಮೂಲಕ ಮನೆಮಾತು.
ಬೆಸ್ಟ್ ನೆನಪು: ದುನಿಯಾ ವಿಜಯ್ ಕುಟುಂಬ ವಿವಾದ ಕುರಿತಾಗಿ ನಾಗರತ್ನರ ಪರವಾಗಿ ವಾದಿಸಿದ್ದು!

ವಿನಾಯಕ್ ಭಟ್ ಮೂರೂರು
ಪತ್ರಿಕೆ: ಕನ್ನಡಪ್ರಭ
ಊರು: ಕುಮಟಾ
ವಯಸ್ಸು: 33

'ವಿಜಯ ಕರ್ನಾಟಕ'ದ ಮಂಗಳೂರು ವಿಭಾಗದಲ್ಲಿ ಪತ್ರಿಕೋದ್ಯಮದ ಹೆಜ್ಜೆಗಳು ಶುರು. ಪ್ರಸ್ತುತ ಕನ್ನಡಪ್ರಭದಲ್ಲಿ ಸ್ಪೆಷಲ್ ಕರೆಸ್ಪಾಂಡೆಂಟ್.
ಬೆಸ್ಟ್ ನೆನಪು: ವಿ.ಕ.ದಲ್ಲಿ ಇಂಟರ್ನ್‌ಶಿಪ್ ಮಾಡುತ್ತಿದ್ದಾಗ ಹಳೇಬೀಡುವಿನಲ್ಲಿ ದೇವರಮೂರ್ತಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿದ್ದರ ಬಗ್ಗೆ ವರದಿ ಮಾಡಿದ್ದೆ. ಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾಗಿತ್ತು. ಈ ವಿಷಯ ವಿಧಾನಸಭೆಯಲ್ಲೂ ಚರ್ಚೆಯಾಯಿತು.

ಬದ್ರುದ್ದಿನ್ ಕೆ.
ವಾಹಿನಿ: ಕಸ್ತೂರಿ ನ್ಯೂಸ್
ಊರು: ಮಾಣಿ
ವಯಸ್ಸು: 44

'ಆಂದೋಲನ', 'ಕೊಳಲು' ಪತ್ರಿಕೆಗಳಿಗೆ ಲೇಖನ ಬರೆಯುವ ಮೂಲಕ ಪತ್ರಿಕೋದ್ಯಮ ವೃತ್ತಿ ಪ್ರಾರಂಭ. ಸ್ಥಳಿಯ ವಾಹಿನಿ 'ಎಮ್‌ಟಿಎನ್ ವಾರ್ತೆ'ಯಲ್ಲಿ, ಉದಯ ನ್ಯೂಸ್‌ನಲ್ಲಿ ಕೆಲಸ ಮಾಡಿದ ಅನುಭವ. ಪ್ರಸ್ತುತ ಕಸ್ತೂರಿ ನ್ಯೂಸ್ ವಾಹಿನಿಯಲ್ಲಿ ರಾಜಕೀಯ ಪ್ರಧಾನ ವರದಿಗಾರ. ಮೀಡಿಯಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು.
ಬೆಸ್ಟ್ ನೆನಪು: ಕಾವೇರಿ ಚಳವಳಿ ಸಂದರ್ಭ 3 ತಿಂಗಳು ನಿರಂತರ ವರದಿ ಮಾಡಿದ್ದೆ. ಆ ಸಂದರ್ಭದಲ್ಲಿ ಚಳವಳಿಯ ಒಂದು ಭಾಗವೇ ಆಗಿಹೋಗಿದ್ದೆ. ಪೊಲೀಸರಿಂದ ಲಾಠಿ ಏಟನ್ನೂ ತಿಂದಿದ್ದೇನೆ!

ಚೈತನ್ಯ ಹೆಗಡೆ
ಪತ್ರಿಕೆ: ಕನ್ನಡಪ್ರಭ
ಊರು: ಸಿದ್ದಾಪುರ
ವಯಸ್ಸು: 28

ವಿಕ್ರಮ ವಾರಪತ್ರಿಕೆ ಮೂಲಕ ಪತ್ರಿಕಾರಂಗ ಪ್ರವೇಶ. ವಿಜಯ ಕರ್ನಾಟಕದಲ್ಲಿ ವೃತ್ತಿ ಕರಗತ. ಪ್ರಸ್ತುತ ಕನ್ನಡಪ್ರಭದಲ್ಲಿ ಚೀಫ್ ಸಬ್ ಎಡಿಟರ್. 'ತೆರೆದ ಕಿಟಕಿ' ಅಂಕಣದ ಮೂಲಕ ಜನಪರಿಚಿತ.
ಬೆಸ್ಟ್ ನೆನಪು: ಓದುಗರ ಪತ್ರ ಎಡಿಟ್ ಮಾಡುವ ಸಂದರ್ಭ ಒಬ್ಬಳು ಹುಡುಗಿ 'ಸರ್ ಇದು ನನ್ನ ಮೂರನೇ ಪತ್ರ. ಇನ್ನು ಸ್ಟಾಂಪ್ ತೆಗೆದುಕೊಡುವುದಿಲ್ಲ ಎಂದು ಅಪ್ಪ ಹೇಳಿದ್ದಾರೆ. ಪ್ಲೀಸ್ ಪ್ರಕಟಿಸಿ' ಎಂದು ವಿನಂತಿಸಿದ್ದಳು. ಬರಹ ಚೆನ್ನಾಗಿಲ್ಲದಿದ್ದರೂ ಎಡಿಟ್ ಮಾಡಿ ಪ್ರಕಟಿಸಿದ್ದೆ.

ರಾಘವೇಂದ್ರ ಭಟ್
ಪತ್ರಿಕೆ: ಕನ್ನಡಪ್ರಭ
ಊರು: ದುಂಡಗುಳಿ (ಕುಮಟಾ)
ವಯಸ್ಸು: 31

ವಿಜಯ ಕರ್ನಾಟಕದಲ್ಲಿ ಇಂಟರ್ನ್‌ಶಿಪ್ ಮಾಡಿ ನಂತರ ಅಲ್ಲಿಯೇ ವರದಿಗಾರರಾಗಿ ವೃತ್ತಿ ಪ್ರಾರಂಭ. ಪ್ರಸ್ತುತ ಕನ್ನಡಪ್ರಭದಲ್ಲಿ ಪ್ರಿನ್ಸಿಪಲ್ ಕರೆಸ್ಪಾಂಡೆಂಟ್.
ಬೆಸ್ಟ್ ನೆನಪು: ಭಗ್ನ ಪ್ರೇಮಿಯೊಬ್ಬ ಹುಡುಗಿಯ ಕೈ ಕತ್ತರಿಸಿದ್ದ. ಅದರ ಕುರಿತಾಗಿ ವರದಿ ಮಾಡಿದ್ದೆ. ಸಮಯಕ್ಕೆ ಸರಿಯಾಗಿ ಸ್ಪರ್ಶ್ ಆಸ್ಪತ್ರೆಯವರು ಕೈಜೋಡಿಸಿದ್ದರು.

ವಿನಾಯಕ ಗಂಗೊಳ್ಳಿ
ವಾಹಿನಿ: ಟಿವಿ-9
ಊರು:
ಕುಂದಾಪುರ
ವಯಸ್ಸು: 28

ಪುತ್ತೂರಿನಲ್ಲಿ ಈ-ಟಿವಿ ಕನ್ನಡ ವಾಹಿನಿಯ ನ್ಯೂಸ್ ಕರೆಸ್ಪಾಂಡೆಂಟ್ ಆಗಿ ಪತ್ರಿಕಾ ಕಣಕ್ಕೆ ಪದಾರ್ಪಣೆ. ಈ- ಟಿವಿ ಕನ್ನಡದಲ್ಲೂ ಕೆಲಸ ಮಾಡಿದ್ದಾರೆ. ಪ್ರಸ್ತುತ ಟಿವಿ-9 ಅಂಗಳದಲ್ಲಿ ಪೊಲಿಟಿಕಲ್ ಕರೆಸ್ಪಾಂಡೆಂಟ್.
ಬೆಸ್ಟ್ ನೆನಪು: ಮೂಲ್ಕಿಯಲ್ಲಿ ಬಿಜೆಪಿ ನಾಯಕ ಸುಖಾನಂದ ಶೆಟ್ಟಿ ಕೊಲೆಯಾದ ದಿನ ವರದಿ ಮಾಡುವ ಸಂದರ್ಭ ಗಲಭೆ ಆಯಿತು. ಪೊಲೀಸರು 'ಚಾರ್ಜ್‌' ಎಂದಾಗ ನೆಲದ ಮೇಲೆ ಮಲಗಿದ್ದೆ!

ಗುರುಲಿಂಗಸ್ವಾಮಿ
ಪತ್ರಿಕೆ: ವಿಜಯವಾಣಿ
ಊರು: ರಾಮದುರ್ಗ
ವಯಸ್ಸು: 37

ರಾಯಚೂರು ಜಿಲ್ಲೆಯ 'ಸುದ್ದಿಮೂಲ' ಮೂಲಕ ಪತ್ರಿಕಾರಂಗ ಪ್ರವೇಶ. ನಂತರ ಕನ್ನಡಪ್ರಭ, ವಿಜಯ ಕರ್ನಾಟಕ, ಈ-ಟಿವಿಯಲ್ಲಿ ಕೆಲಸ ಮಾಡಿದ ಅನುಭವ. ಪ್ರಸ್ತುತ ವಿಜಯವಾಣಿಯಲ್ಲಿ ವಿಶೇಷ ವರದಿಗಾರ.
ಬೆಸ್ಟ್ ನೆನಪು: ಅಂಜುಮಾನ್ ಎ ಇಸ್ಲಾಂ ಕಾಲೇಜಿನಲ್ಲಿ ಬಿ.ಇಡಿ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆಗೆ ಅವಕಾಶ ನೀಡಿರಲಿಲ್ಲ. ಆ ಕುರಿತು ವರದಿ ಮಾಡಿದಾಗ ಡಾ. ಜಿ. ಪರಮೇಶ್ವರ್ ತಕ್ಷಣ ಕ್ರಮ ಕೈಗೊಂಡು ಸಮಸ್ಯೆ ಇತ್ಯರ್ಥಪಡಿಸಿದರು.


ರವಿ ಮಾಳೇನಹಳ್ಳಿ
ಪತ್ರಿಕೆ: ಹೊಸದಿಗಂತ
ಊರು: ಮಾಳೇನಹಳ್ಳಿ
ವಯಸ್ಸು: 40

'ಉತ್ತರ ಕರ್ನಾಟಕ' ಪತ್ರಿಕೆ ಮೂಲಕ ಪತ್ರಿಕಾ ಜಗತ್ತಿಗೆ ಅಡಿಯಿಟ್ಟರು. ನಂತರ ಸಂಯುಕ್ತ ಕರ್ನಾಟಕ, ಕನ್ನಡಪ್ರಭ, ಈ-ಟಿವಿ ಮೂಲಕ ಹೆಜ್ಜೆಗಳು ಮುಂದುವರಿದವು. ಈಗ ಹೊಸದಿಗಂತದಲ್ಲಿ ಮಖ್ಯ ವರದಿಗಾರ.
ಬೆಸ್ಟ್ ನೆನಪು: ಕನಕಪುರ ತಾಲೂಕಿನಾದ್ಯಂತ ನಕಲಿ ಶಿಕ್ಷಕರನ್ನು ಸೃಷ್ಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಅವರ ಸಹವರ್ತಿಗಳ ಬಣ್ಣ ಬಯಲು ಮಾಡಿದ್ದರು. ಈಗಲೂ ಅವರು ಜೈಲಿನಲ್ಲಿದ್ದಾರೆ!

ದಿವ್ಯಶ್ರೀ
ವಾಹಿನಿ: ಟಿವಿ 9
ಊರು: ಸಕಲೇಶಪುರ
ವಯಸ್ಸು: 25

ಪದವಿ ಮುಗಿಯುತ್ತಿದ್ದಂತೆ ಉದಯ ಟಿವಿ ನಿರೂಪಕಿಯಾಗಿ ಪತ್ರಿಕಾರಂಗಕ್ಕ ಪರಿಚಯ. ಸುದ್ದಿ ಮತ್ತು ಸಿನಿಮಾ ನಿರೂಪಕಿಯಾಗಿ ಕೆಲಸ ನಿರ್ವಹಣೆ. 'ಸುವರ್ಣ' ಮೆಟ್ಟಿಲನ್ನು ದಾಟಿ ಪ್ರಸ್ತುತ ಟಿವಿ 9 ವಾಹಿನಿಯಲ್ಲಿ ನಿರೂಪಕಿ. 'ಮಾಧ್ಯಮರತ್ನ' ಸೇರಿದಂತೆ ಹಲವು ಗೌರವ.
ಬೆಸ್ಟ್ ನೆನಪು: ಸ್ನಾತಕೋತ್ತರ ಪದವಿ ಪರೀಕ್ಷೆ ಕಟ್ಟುವ ಸಂದರ್ಭ ಅಲ್ಲಿದ್ದ ಅಧಿಕಾರಿಯೊಬ್ಬರು ನನ್ನ ಹೆಸರು ಕೇಳದೆಯೇ ಬರೆದುಕೊಂಡರು. 'ಹೇಗೆ ಗೊತ್ತು?' ಕೇಳಿದಾಗ 'ನೀವು ಸುವರ್ಣದಲ್ಲಿ ನಿರೂಪಕಿ ಅಲ್ವಾ?' ಎಂದು ಬರೆದು ತೋರಿಸಿದರು. ಅವರಿಗೆ ಾತು ಬರುತ್ತಿರಲಿಲ್ಲ.

ವಿನಾಯಕ ಗಂಗೊಳ್ಳಿ
ವಾಹಿನಿ: ಟಿವಿ-9
ಊರು:
ಕುಂದಾಪುರ
ವಯಸ್ಸು: 28

ಪುತ್ತೂರಿನಲ್ಲಿ ಈ-ಟಿವಿ ಕನ್ನಡ ವಾಹಿನಿಯ ನ್ಯೂಸ್ ಕರೆಸ್ಪಾಂಡೆಂಟ್ ಆಗಿ ಪತ್ರಿಕಾ ಕಣಕ್ಕೆ ಪದಾರ್ಪಣೆ. ಈ- ಟಿವಿ ಕನ್ನಡದಲ್ಲೂ ಕೆಲಸ ಮಾಡಿದ್ದಾರೆ. ಪ್ರಸ್ತುತ ಟಿವಿ-9 ಅಂಗಳದಲ್ಲಿ ಪೊಲಿಟಿಕಲ್ ಕರೆಸ್ಪಾಂಡೆಂಟ್.
ಬೆಸ್ಟ್ ನೆನಪು: ಮೂಲ್ಕಿಯಲ್ಲಿ ಬಿಜೆಪಿ ನಾಯಕ ಸುಖಾನಂದ ಶೆಟ್ಟಿ ಕೊಲೆಯಾದ ದಿನ ವರದಿ ಮಾಡುವ ಸಂದರ್ಭ ಗಲಭೆ ಆಯಿತು. ಪೊಲೀಸರು 'ಚಾರ್ಜ್‌' ಎಂದಾಗ ನೆಲದ ಮೇಲೆ ಮಲಗಿದ್ದೆ!

ಗುರುಲಿಂಗಸ್ವಾಮಿ
ಪತ್ರಿಕೆ: ವಿಜಯವಾಣಿ
ಊರು: ರಾಮದುರ್ಗ
ವಯಸ್ಸು: 37

ರಾಯಚೂರು ಜಿಲ್ಲೆಯ 'ಸುದ್ದಿಮೂಲ' ಮೂಲಕ ಪತ್ರಿಕಾರಂಗ ಪ್ರವೇಶ. ನಂತರ ಕನ್ನಡಪ್ರಭ, ವಿಜಯ ಕರ್ನಾಟಕ, ಈ-ಟಿವಿಯಲ್ಲಿ ಕೆಲಸ ಮಾಡಿದ ಅನುಭವ. ಪ್ರಸ್ತುತ ವಿಜಯವಾಣಿಯಲ್ಲಿ ವಿಶೇಷ ವರದಿಗಾರ.
ಬೆಸ್ಟ್ ನೆನಪು: ಅಂಜುಮಾನ್ ಎ ಇಸ್ಲಾಂ ಕಾಲೇಜಿನಲ್ಲಿ ಬಿ.ಇಡಿ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆಗೆ ಅವಕಾಶ ನೀಡಿರಲಿಲ್ಲ. ಆ ಕುರಿತು ವರದಿ ಮಾಡಿದಾಗ ಡಾ. ಜಿ. ಪರಮೇಶ್ವರ್ ತಕ್ಷಣ ಕ್ರಮ ಕೈಗೊಂಡು ಸಮಸ್ಯೆ ಇತ್ಯರ್ಥಪಡಿಸಿದರು.


ಕೀರ್ತಿ ಕೋಲ್ಗಾರ್
ಪತ್ರಿಕೆ: ಕನ್ನಡಪ್ರಭ
ಊರು: ತೀರ್ಥಹಳ್ಳಿ
ವಯಸ್ಸು: 26

ಕಾಲೇಜು ದಿನಗಳಲ್ಲಿ 'ಇಂಚರ' ಪತ್ರಿಕೆ ಮೂಲಕ ಪತ್ರಿಕಾರಂಗ ಪರಿಚಯ. ಕನ್ನಡಪ್ರಭದಲ್ಲಿ ಐದು ವರ್ಷದಿಂದ ಕೆಲಸ. ಮುಖ್ಯ ಉಪಸಂಪಾದಕ. ಪುರವಣಿ ವಿಭಾಗದಲ್ಲಿ ಜವಾಬ್ದಾರಿ. 'ಪೂರ್ಣಪಾಠ', 'ದಾಸ ಸಾಹಿತ್ಯ' ಅಂಕಣಗಳಿಂದ ಜನಪ್ರಿಯ. 'ತ್ರೀಜಿ ಸರ್ಕಲ್‌', 'ತೇಜಸ್ವಿ ಬದುಕಿದ್ದಾರೆ' ಕೃತಿಗಳನ್ನು ಹೊರತಂದಿದ್ದಾರೆ.
ಬೆಸ್ಟ್ ನೆನಪು: 'ವಿಜಯಕರ್ನಾಟಕ'ದಲ್ಲಿ ಇಂಟರ್ನ್‌ಶಿಪ್ ವೇಳೆ ಕಿತ್‌ಹೋಗಿರೋ ಮೊದಲ ಲೇಖನವನ್ನು ಕೊಟ್ಟಾಗ ಪ್ರತಾಪ್‌ಸಿಂಹ ಅವರು ಕಣ್ಣಮುಂದೆಯೇ ಕಸದಬುಟ್ಟಿಗೆ ಎಸೆದು ಪಾಠ ಮಾಡಿದ್ದು ಹಾಗೂ 'ನೋಡೇ, ನಮ್ಮೂರಿನ ಹುಡ್ಗ ಕಾದಂಬರಿ ಬರೆದಿದ್ದಾನೆ' ಅಂತ ಯು.ಆರ್. ಅನಂತಮೂರ್ತಿಯವರು ಹೆಂಡತಿಗೆ ಹೇಳಿ, ನನ್ನ ತಬ್ಬಿ ಪರಿಚಯಿಸಿದ್ದು.


ಹರೀಶ್ ಕೇರ
ಪತ್ರಿಕೆ: ಕನ್ನಡಪ್ರಭ
ಊರು: ಸುಳ್ಯ
ವಯಸ್ಸು: 36

ಸ್ಥಳಿಯ ಪತ್ರಿಕೆಗಳಾದ ಪಾಯಸ್ವಿನಿ, ಸುದ್ದಿ ಬಿಡುಗಡೆ, ಚೇತನ, ಜನ ಆಂದೋಲನಗಳಲ್ಲಿ ಪತ್ರಿಕೋದ್ಯಮದ ಹೆಜ್ಜೆಗಳು. ಹೊಸದಿಗಂತ, ವಿಜಯ ಕರ್ನಾಟಕದಲ್ಲೂ ಕೆಲಸ. ಪ್ರಸ್ತುತ ಕನ್ನಡಪ್ರಭದಲ್ಲಿ ಚೀಫ್ ಸಬ್‌ಎಡಿಟರ್. 'ವ್ಯಂಜನ', 'ಬುದ್ಧ ಬೆಟ್ಟ ಹಿಮ' ಅಂಕಣಗಳಿಂದ ಜನಪ್ರಿಯ. ಸದ್ಯ 'ಓದೋರ್ ಪೋಸ್ಟ್‌' ಅಂಕಣ ಬರೆಯುತ್ತಿದ್ದಾರೆ. 'ನಕ್ಷತ್ರ ನೇಯುವ ಹಕ್ಕಿಗಳು', 'ಮೇಧಾ ಪಾಟ್ಕರ್‌', 'ಪ್ರಜ್ವಲ ಮಾತು ಉಜ್ವಲ ಬೆಳಕು' ಇವರ ಕೃತಿಗಳು.
ಬೆಸ್ಟ್ ನೆನಪು: ವಿಜಯಕರ್ನಾಟಕದ ಮಂಗಳೂರು ವಿಭಾಗದಲ್ಲಿದ್ದಾಗ ಕಾಡುತ್ಪತ್ತಿ ಕಳವು ಜಾಲದ ಬಗ್ಗೆ ಬರೆದಿದ್ದೆ. ಅರಣ್ಯ ಇಲಾಖೆ ಕೂಡಲೇ ಕ್ರಮ ಕೈಗೊಂಡಿತ್ತು.

ಎ.ಆರ್. ಮಣಿಕಾಂತ್
ಪತ್ರಿಕೆ: ಕನ್ನಡಪ್ರಭ
ಊರು: ಆಯಿತನಹಳ್ಳಿ (ನಾಗಮಂಗಲ)
ವಯಸ್ಸು: 42

ಎಂಜಿನಿಯರ್ ಓದುತ್ತಿದ್ದ ಸಂದರ್ಭ ಖರ್ಚಿಗಾಗಿ ಪತ್ರಿಕೆಗೆ ಬರೆಯಲು ಆರಂಭಿಸಿದರು. ಹಾಯ್ ಬೆಂಗಳೂರು, ಸಂಯುಕ್ತ ಕರ್ನಾಟಕ, ಕರ್ಮವೀರ, ವಿಜಯ ಕರ್ನಾಟಕದಲ್ಲಿ ಕೆಲಸ ನಿರ್ವಹಣೆ. ಪ್ರಸ್ತುತ ಕನ್ನಡಪ್ರಭದ ಮುಖ್ಯ ಉಪಸಂಪಾದಕ ಮತ್ತು 'ಭಾವ ತೀರ ಯಾನ' ಜನಪ್ರಿಯ ಅಂಕಣ. 'ಈ ಗುಲಾಬಿಯು ನಿನಗಾಗಿ', 'ಉಭಯ ಕುಶಲೋಪರಿ ಸಾಂಪ್ರತ', 'ಮರೆಯಲಿ ಹ್ಯಾಂಗ', 'ಹಾಡು ಹುಟ್ಟಿದ ಸಮಯ' ಅಂಕಣಗಳಿಂದಲೂ ಖ್ಯಾತಿ. 'ಅಮ್ಮ ಹೇಳಿದ ಎಂಟು ಸುಳ್ಳುಗಳು' ಕೃತಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ. 'ಅಪ್ಪ ಅಂದ್ರೆ ಆಕಾಶ' ಇತ್ತೀಚಿನ ಕೃತಿ.
ಬೆಸ್ಟ್ ನೆನಪು: 'ಅಮ್ಮ ಹೇಳಿದ ಎಂಟು ಸುಳ್ಳುಗಳು' ಪುಸ್ತಕ ಪ್ರಕಟವಾದ ಮೊದಲ ದಿನ ಹಲವರು ಮಾನ್ಯ ಸಂಪಾದಕರಲ್ಲಿ 'ನಮ್ಮ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ' ಎಂದಿದ್ದರು.

ವಿನೋದ್ ಕುಮಾರ್ ಬಿ. ನಾಯಕ್
ವಾಹಿನಿ: ಸಮಯ ನ್ಯೂಸ್
ಊರು: ಚಿಕ್ಕಮಗಳೂರು
ವರ್ಷ: 37

ಸ್ಥಳಿಯ ಪತ್ರಿಕೆಗಳಾದ 'ಒಡಲು', 'ಆಂದೋಲನ'ದಿಂದ ಪತ್ರಿಕೋದ್ಯಮಕ್ಕೆ ಪರಿಚಯ. ವಿಜಯ ಕರ್ನಾಟಕ, ಸೂರ್ಯೋದಯ, ಟಿವಿ 9, ಸುವರ್ಣ ನ್ಯೂಸ್‌ನಲ್ಲಿ ಕೆಲಸ. ಪ್ರಸ್ತುತ ಸಮಯ ನ್ಯೂಸ್‌ನಲ್ಲಿ ವಿಶೇಷ ಸುದ್ದಿ ಸಂಪಾದಕ.
ಬೆಸ್ಟ್ ನೆನಪು: ನಾಗರಹೊಳೆ ಕಾಡಿಗೆ ಬೆಂಕಿಬಿದ್ದ ವರದಿಯನ್ನು ವಿ.ಕ. ಮುಖಪುಟದಲ್ಲಿ ಪ್ರಕಟಿಸಿತ್ತು. ರಜೆಯಲ್ಲಿದ್ದರೂ ಪ್ರಕೃತಿಯಾದ್ದರಿಂದ ವಿಶೇಷ ಮುತುವರ್ಜಿ ವಹಿಸಿ ವರದಿ ಮಾಡಿದ್ದೆ.

ಅಜಿತ್ ಹನುಮಕ್ಕನವರ್
ವಾಹಿನಿ: ಸುವರ್ಣ ನ್ಯೂಸ್
ಊರು: ಚಬ್ಬಿ (ಹುಬ್ಬಳ್ಳಿ)
ವರ್ಷ: 30

'ಹಾಯ್ ಬೆಂಗಳೂರು'ನಿಂದ ಪತ್ರಿಕಾರಂಗಕ್ಕೆ ಪದಾರ್ಪಣೆ. ಪ್ರಸ್ತುತ ಸುವರ್ಣ ನ್ಯೂಸ್‌ನಲ್ಲಿ ಕ್ರೈಂ ಬ್ಯೂರೋ ಚೀಫ್.
ಬೆಸ್ಟ್ ನೆನಪು: ದಾಖಲೆಯೊಂದಿಗೆ 'ಸಮನ್ಸ್ ಸಿಕ್ಕಿಲ್ವ?' ಎಂದು ನಿತ್ಯಾನಂದನನ್ನು ಪ್ರಶ್ನಿಸಿದ್ದೆ. ನನ್ನ ಮೇಲೆ ಹಲ್ಲೆ ಪ್ರಯತ್ನವೂ ನಡೆಯಿತು.

ಜ್ಯೋತಿ ಇರ್ವತ್ತೂರು
ಊರು: ಇರ್ವತ್ತೂರು
ವರ್ಷ: 38

ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಛಾಯಾಚಿತ್ರಗ್ರಾಹಕಿ ಮತ್ತು ವರದಿಗಾರ್ತಿಯಾಗಿ ಪತ್ರಿಕಾರಂಗ ಪ್ರವೇಶ. ಜನವಾಹಿನಿ, ಈ ಟಿವಿಯಲ್ಲಿ ಕೆಲಸ. ಸಮಯ ನ್ಯೂಸ್‌ನಲ್ಲಿ ಚೀಫ್ ರಿಪೋರ್ಟರ್ ಆಗಿದ್ದರು. 'ಸಿರಿ ಸಾಮಾನ್ಯ' ಕಾರ್ಯಕ್ರಮದ ಮೂಲಕ ಜನಪ್ರಿಯರು.  
ಬೆಸ್ಟ್ ನೆನಪು: 'ಸಿರಿ ಸಾಮಾನ್ಯ'ರ ಬದುಕು ಅನಾವರಣ ಮಾಡುತ್ತಿದ್ದ ಸಂದರ್ಭ ಮಂಗಳಮುಖಿಯರ ಬದುಕನ್ನು ನೇರವಾಗಿ ಕಂಡಿದ್ದು.

ನ. ವಿನಯ
ಊರು: ಕೊಗ್ಗನೂರು (ದಾವಣಗೆರೆ)
ವಯಸ್ಸು: 33

ಕನ್ನಡಪ್ರಭದಲ್ಲಿ ಪಾರ್ಟ್‌ಟೈಂ ಕೆಲಸದಿಂದ ಪತ್ರಿಕಾರಂಗಕ್ಕೆ ಪರಿಚಯ. ನಂತರ 'ಪ್ರಜಾವಾಣಿ'ಯಲ್ಲಿ 4 ವರ್ಷ. ಸದ್ಯ ವಿಜಯಕರ್ನಾಟಕದಲ್ಲಿ ಸ್ಪೆಷಲ್ ಕರೆಸ್ಪಾಂಡೆಂಟ್. 'ವರನಟನ ವನವಾಸದ ಕಥೆ' ಇವರ ಜನಪ್ರಿಯ ಅಂಕಣವಾಗಿತ್ತು.
ಬೆಸ್ಟ್ ನೆನಪು: ವೀರಪ್ಪನ್ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಡಿಎಫ್‌ಓ ಶ್ರೀನಿವಾಸ್ ಕುಟುಂಬಕ್ಕೆ ಪರಿಹಾರ ಧನ ಕೊಡಿಸುವಲ್ಲಿ ನನ್ನ ವರದಿ ಯಶಸ್ವಿಯಾಗಿತ್ತು. ಕುಮಾರಸ್ವಾಮಿ ಸಿಎಂ ಆಗುವ ಮುಂಚಿನದ ದಿನ ನನಗೆ ಸಿಕ್ಕ ಎಕ್ಸ್‌ಕ್ಲ್ಯೂಸಿವ್ ಇಂಟರ್‌ವ್ಯೂ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.