ಹತ್ತು ಮನಸ್ಸು ಒಂದು ಮುಖ

ಫೇಸ್ಬುಕ್! ಬೆರಳಿನ ತುದಿಯಲ್ಲೂ ಅದೇ, ನಾಲಗೆಯ ತುದಿಯಲ್ಲೂ ಅದೇ ಹೆಸರು. ವಿಶ್ವಾದ್ಯಂತ ಇಷ್ಟೊಂದು ಸಂಚಲನ ಮೂಡಿಸಿದ ಸಾಮಾಜಿಕ ತಾಣ ಬೇರೊಂದಿಲ್ಲ. ಭೂಮಿ ಮೇಲಿನ 700 ಕೋಟಿ ಜನರಲ್ಲಿ 120 ಕೋಟಿ ಜನ ಫೇಸ್ಬುಕ್ನ ಅತಿಥಿಗಳು.
ಒಂದೆಡೆ ಫೇಸ್ಬುಕ್ ಬಳಕೆದಾರರ ಸಂಖ್ಯೆ ವೈರಲ್ ಆಗುತ್ತಿದ್ದರೆ, ಇನ್ನೊಂದೆಡೆ ನಿತ್ಯ ಫೇಸ್ಬುಕ್ ದುಷ್ಪರಿಣಾಮಗಳ ಬಗ್ಗೆ, ಅಡಿಕ್ಷನ್ ಬಗ್ಗೆ, ದುರ್ಬಳಕೆ ಬಗ್ಗೆ ಒಂದಿಲ್ಲೊಂದು ನೆಗೆಟಿವ್ ಸುದ್ದಿಯೂ ರೆಕ್ಕೆ ಬಡಿಯುತ್ತದೆ. ನಿಜ, ಫೇಸ್ಬುಕ್ನ ದುರ್ಬಳಕೆ ಆಗುತ್ತಿದೆ. ಆದರೆ ನೆಗೆಟಿವ್ ಎಫೆಕ್ಟ್ಗಳು ಫೇಸ್ಬುಕ್ನಲ್ಲಿ ಮಾತ್ರವಲ್ಲ, ಪ್ರಪಂಚದ ಪ್ರತಿ ಅಂಶದಲ್ಲೂ ಇರುವಂಥದ್ದೇ. ಪ್ರತಿ ಸಂಪನ್ಮೂಲವೂ ಮನುಷ್ಯ ಅದನ್ನು ಹೇಗೆ ಬಳಸಿಕೊಳ್ತಾನೆ ಎಂಬುದರ ಮೇಲೆ ಅವಲಂಬಿತ.
ಕರ್ನಾಟಕದಲ್ಲೇ ಫೇಸ್ಬುಕ್ಕಿಗೆ 12 ಲಕ್ಷ ಸದಸ್ಯರು. ನಕಲಿ ಅಕೌಂಟುಗಳು, ನಿಷ್ಕ್ರಿಯ ಅಕೌಂಟುಗಳು ಇತ್ಯಾದಿಗಳನ್ನು ಹೊರತುಪಡಿಸಿದರೆ ಕನಿಷ್ಠ 10 ಲಕ್ಷ ಆದೀತು. ಫೇಸ್ಬುಕ್ ಬರೀ ಚಾಟಿಂಗ್ ತಾಣವಲ್ಲ. ಅದೊಂದು ಮಿನಿ ವಿಶ್ವಕೋಶ. ನಿಮಗೆ ಒಂದು ಗೂಗಲ್ ಅಥವಾ ನ್ಯೂಸ್ ಚಾನೆಲ್ ಏನು ಕೊಡಬಲ್ಲುದೋ ಅದಿಷ್ಟನ್ನೂ ಫೇಸ್ಬುಕ್ ಕೊಡಬಲ್ಲುದು. 'ಕ್ಯೂ ನ ಹಮಾರೀ ದೋಸ್ತಿ ರಿಶ್ತೇದಾರಿ ಮೆ ಬದಲ್ಜಾಯೇ' ಅನ್ನೋ ಡೈಲಾಗ್ ಹಿಂದಿ ಚಿತ್ರಗಳಲ್ಲಿ ಕಾಮನ್. ಅದಕ್ಕೆ ವ್ಯತಿರಿಕ್ತ ಎಂಬಂತೆ ಫೇಸ್ಬುಕ್ನಲ್ಲಿ ಸಂಬಂಧಿಗಳು ಗೆಳೆಯರಾಗುತ್ತಾರೆ. ಹೌದು, ಇಲ್ಲಿ ಅಪ್ಪ ಮಗ ಕೂಡ ಫ್ರೆಂಡ್ ಆಗಿರಲು ಸಾಧ್ಯ!
ಫೇಸ್ಬುಕ್ಕಿನ ಆಯುಸ್ಸು ಹತ್ತಾಗುತ್ತಿರುವ ಈ ಹೊತ್ತಲ್ಲಿ ಸಕ್ರಿಯ 10 'ಫೇಸ್'ಗಳು ನೆನಪಾದವು. ನೀವ್ಯಾಕೆ ಫೇಸ್ಬುಕ್ನಲ್ಲಿ ಬರೆಯುತ್ತೀರಿ? ಅದರಿಂದೇನು ಲಾಭ? ಎಂಬ ಪ್ರಶ್ನೆಯನ್ನು ಈ ಬಳಕೆದಾರರಿಗೆ ಕೇಳಲಾಯಿತು. ಅವರು ಅಂದಿದ್ದೇನ್ ಗೊತ್ತಾ...?
'ಲೈಕು' ಇಷ್ಟೇನೇ...
ಬದುಕಿನ ಸಣ್ಣಸಣ್ಣ ಸಂಗತಿಗಳಲ್ಲಿ ಸ್ವಾರಸ್ಯ ಕಂಡುಕೊಳ್ಳುವುದು, ಆ ಸ್ವಾರಸ್ಯಗಳನ್ನು ಮತ್ತು ಅವು ಕೊಡುವ ಖುಷಿಯನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವುದು ಚಿಕ್ಕಂದಿನಿಂದಲೂ ನನ್ನ ಸ್ವಭಾವ. ಏನಾದರೂ ಹೊಸ ವಿಚಾರ ತಿಳಿದರೆ ಅದರ ಪ್ರಯೋಜನ ಬೇರೆಯವರಿಗೂ ಆಗಲಿ ಎಂಬ ಒಳ್ಳೆಯ ಉದ್ದೇಶವೂ ಅದರ ಹಿಂದೆ ಇದೆಯೆನ್ನಿ. ಈಗ್ಗೆ 6-7 ವರ್ಷಗಳಿಂದ ಇದಕ್ಕೆ ಹೊಸ ಸೇರ್ಪಡೆ ಫೇಸ್ಬುಕ್. ಭಾವನಾತ್ಮಕವಾಗಿ ಮತ್ತು ಗಂಭೀರವಾಗಿ ಬರೆಯುವುದು ನನ್ನ ಉದ್ದೇಶವಲ್ಲ. ಥರಾವರಿ ತರ್ಕ, ಒಂಚೂರು ತರ್ಲೆ, ಕೆಣಕು-ತಿಣುಕು, ಪದವಿನೋದ, ನವಿರು ಲೇವಡಿ, ಪುಟ್ಟ ವ್ಯಂಗ್ಯ, ಆರೋಗ್ಯಕರ ವಿಡಂಬನೆ ಇವುಗಳನ್ನು ಬಿಟ್ಟರೆ ನಾನು ಬರೆಯುವುದರಲ್ಲಿ ವಿಶೇಷವೇನೂ ಇಲ್ಲ.
- ಶ್ರೀವತ್ಸ ಜೋಷಿ, ವಾಷಿಂಗ್ಟನ್
ಸಿದ್ಧಾಂತಗಳು ಇಲ್ಲಿಲ್ಲ
ಸಂಪಾದಕರ, ಪತ್ರಿಕೆಗಳ ಪ್ರಕಟಣೆಯ ಅಡಚಣೆ ಇಲ್ಲ, ಯಾವುದೇ ಸಿದ್ಧಾಂತಗಳ ಫಿಲ್ಟರಿಂಗ್ ಇಲ್ಲ. ಆ ಕ್ಷಣಕ್ಕೆ ತೋಚಿದ್ದು ಹಂಚಿ ನಿರಾಳವಾಗುವುದಕ್ಕೆ... ನನ್ನಿಂದ ನನ್ನ ಗೆಳಯ- ಗೆಳತಿಯರಿಗಾಗಿ ಯಾವುದೇ ಪ್ರಾದೇಶಿಕ ಪರಿಮಿತಿಯಿಲ್ಲದೆ ನೇರಪ್ರಸಾರ. ಫೇಸ್ಬುಕ್ನಲ್ಲಿ ಧಾರಾವಾಹಿಯಾಗಿ ಬರೆದು ಹಾಕುತ್ತಿದ್ದ ಮೊಬೈಲ್ ಕೃತಿಯೇ ಇತ್ತೀಚೆಗೆ ಬಿಡುಗಡೆಯಾದ 'ಕನಸಿನ ಚಿಟ್ಟೆ ಹಿಡಿಯಲು ಹೊರಟು'. ಫೇಸ್ಬುಕ್ ಸ್ನೇಹಿತರ ಪ್ರೋತ್ಸಾಹವೇ ಈ ಕೃತಿಗೆ ಕಾರಣ.
- ವಿದ್ಯಾಶಂಕರ ಹರಪನಪಳ್ಳಿ, ಬೆಂಗಳೂರು
ವೇಗದ ವಿಮರ್ಶೆ
ಆತ್ಮೀಯರೊಡನೆ ಭಾವನೆ ಹಂಚಿಕೊಂಡಂಥ ಅನುಭವವನ್ನು ಫೇಸ್ಬುಕ್ ನೀಡುತ್ತದೆ. ಅಲ್ಲಿ ಬರುವ ಮೆಚ್ಚುಗೆಗಳೋ, ಟೀಕೆಗಳೋ ನನಗೂ ಅಷ್ಟೇ ವೇಗವಾಗಿ ಸಿಗುವುದರಿಂದ ನನ್ನ ಬರವಣಿಗೆಯ ವೇಗ ವೃದ್ಧಿಗೊಂಡಿದೆ. ನನ್ನ ಆಸಕ್ತಿಯ ವಿಷಯಗಳಾದ ಬೋನ್ಸಾಯ್, ಕರಕುಶಲ ವಸ್ತುಗಳು ಇದರ ಬಗೆಗೆ ಹೊಸ ಹೊಸ ವಿಷಯಗಳನ್ನು ಕಲಿಯಲು ಇದು ಸಹಕಾರಿಯಾಗಿದೆ.
- ಅನಿತಾ ನರೇಶ್ ಮಂಚಿ, ಮಂಗಳೂರು
ಥಟ್ ಅಂತ ಹೇಳಿ...
ನಮ್ಮ ಸ್ವಗತಗಳನ್ನು ಸಾರ್ವಜನಿಕಗೊಳಿಸಲು ಇದೊಂದು ಸರಳ ಮಾರ್ಗ. ಮನದಲ್ಲಿ ಮೂಡಿದ ಏನನ್ನಾದರೂ ಥಟ್ಟನೆ ಇಲ್ಲಿ ಬಿಚ್ಚಿಡಬಹುದು.
- ಡಾ. ಶಿವಾನಂದ ಕುಬಸದ, ಮುಧೋಳ
ದೂರದಿಂದಲೇ ಇಣುಕುವೆ...
ಫೇಸ್ಬುಕ್ನಿಂದಾಗಿ ದೂರದೇಶದ ಮೂಲೆಯಲ್ಲಿ ಮುದುಡಿಕೂತ ನನಗೆ ನನ್ನ ದೇಶದ, ಊರಿನ ಗಲ್ಲಿಗಳಲ್ಲಿ ಇಣುಕಲು ಸಾಧ್ಯವಾಗಿದೆ. ನನ್ನ ಬೀದಿಯ ಸ್ನೇಹಿತನೊಬ್ಬ ಊರ ಜಾತ್ರೆಯ ವರದಿಯನ್ನು ಫೋಟೋ ಸಹಿತ ಹಾಕುತ್ತಾನೆ, ತೇರಿನಲ್ಲಿ ಕುಳಿತ ಪುರೋಹಿತರಿಗೆ ಎಷ್ಟು ಬಾಳೆಹಣ್ಣಿನ ಏಟು ಬಿತ್ತು ಎಂಬ ಸಂಖ್ಯೆ ನಮೂದಿಸುತ್ತಾನೆ. ಮತ್ತೊಬ್ಬ ಸಾಹಿತ್ಯಾಸಕ್ತ ಗೆಳೆಯ ಬಿ.ಪಿ. ವಾಡಿಯಾ ಸಂಭಾಂಗಣದಲ್ಲಾದ ಪುಸ್ತಕ ಬಿಡುಗಡೆಯ ಫೋಟೋ ಅಪ್ಲೋಡ್ ಮಾಡುತ್ತಾನೆ. ಹೀಗೆ ಎಲ್ಲ ವಿಷಯವೂ ತಿಳಿಯುತ್ತಾ ದೂರದಲ್ಲೆಲ್ಲೋ ಇದ್ದೇನೆಂಬ ಭಾವವನ್ನು ಆದಷ್ಟು ಕಡಿಮೆ ಮಾಡಿದೆ.
- ಸುಧೀಂದ್ರ ಬುಧ್ಯ, ಸಿನ್ಸಿನಾಟಿ, ಅಮೆರಿಕ
ಪರಿಸರ ಪಾಠಶಾಲೆ
ನಾನು ಹವ್ಯಾಸಿ ಬರಹಗಾರ, ಅಂಕಣಕಾರ, ಕೃಷಿಕ. ನಿತ್ಯ ಹಲವು ಸಂಗತಿ ನೋಡುತ್ತಿರುತ್ತೇನೆ. ಹೊಸ ಸಂಗತಿ ಸಿಕ್ಕಾಗ ಅದನ್ನು ಹಂಚಿಕೊಳ್ಳಲು ನನಗೆ ಇದೊಂದು ಮಾಧ್ಯಮ. ಮಾಹಿತಿ ಹಂಚಿಕೆಗೆ, ಕಲಿಕೆಗೆ ಇದೂ ಒಂದು ದಾರಿ. ನನ್ನ ಆಸಕ್ತಿಯ ವಿಷಯ ಹಂಚಿಕೆಯ ಹೊಸ ವಿಸ್ತರಣೆ ಇದು. ನೂರು ಜನ ನೋಡುಗರಲ್ಲಿ ಯಾರೋ ಒಬ್ಬರಾದರೂ ಹೊಸ ಸಂಗತಿ ಹೇಳುತ್ತಾರೆ. ಹೀಗಾಗಿ ನನಗಿದು ಪರಿಸರ ಪಾಠ ಶಾಲೆಯೂ ಹೌದು.
- ಶಿವಾನಂದ ಕಳವೆ, ಶಿರಸಿ
ಪ್ರಚಾರಕ್ಕೆ ಅನುಕೂಲ
90ರ ದಶಕದಲ್ಲಿ ನಮ್ಮ ವ್ಯಂಗ್ಯಚಿತ್ರಗಳು ಪತ್ರಿಕೆಯಲ್ಲಿ ಪ್ರಕಟವಾದಾಗ ಓದುಗರ ಪ್ರತಿಕ್ರಿಯ ಗಮನಿಸುವುದಾಗಲಿ ಅದರ ಪರಿಣಾಮವಾಗಲಿ ತಿಳಿಯುತ್ತಿರಲಿಲ್ಲ. ಆದರೆ, ಫೇಸ್ಬುಕ್ನಲ್ಲಿ ಅಭಿಪ್ರಾಯಗಳು ಥಟ್ಟನೆ ದೊರೆಯುತ್ತಿವೆ. ಇತ್ತೀಚೆಗೆ ತೆಂಡೂಲ್ಕರ್ ಟೂನ್ಸ್ ವ್ಯಂಗ್ಯಚಿತ್ರ ಪ್ರದರ್ಶನ ಯಶಸ್ವಿಯಾಗಿದ್ದು ಫೇಸ್ಬುಕ್ನಿಂದಲೇ.
-ಜೀವನ್ ಶೆಟ್ಟಿ, ಉಡುಪಿ
ನೆರವಿಗೊಂದು ವೇದಿಕೆ
ಫೇಸ್ಬುಕ್ನಲ್ಲಿ ಕವನ/ ಅನುಭವ, ಚಿಂತನೆಗಳ ಮೂಲಕ ಭಾವ ಅಭಿವ್ಯಕ್ತಿ, ಜ್ಞಾನ ಹಂಚುವ ಹಂಬಲ ಮತ್ತು ಸ್ನೇಹಿತರೊಡನೆ ಆಗಾಗ್ಗೆ ಸಂಪರ್ಕ ಸಾಧ್ಯವಾಗಿದೆ. ಅನಿವಾಸಿ ಭಾರತೀಯನಾಗಿ, ನಾಡಿನಲ್ಲಿ ದೇಶದಲ್ಲಿನ ಆಗುಹೋಗುಗಳನ್ನು ಶೀಘ್ರವಾಗಿ ಪಡೆಯುವ ಸಾಧನವೂ ಇದೇ. ಮಾತ್ರವಲ್ಲದೆ ಹಲವು ಸಮೂಹಗಳ ಸಮಾಜಪರ ಕಾಳಜಿ ಮತ್ತು ಚಟುವಟಿಕೆಗಳಿಗೆ ಫೇಸ್ಬುಕ್ ಉತ್ತಮ ಮಾಧ್ಯಮವಾಗಿ ಹೊರಹೊಮ್ಮಿದೆ. ಅಂಥ ಸಮೂಹಗಳ ಮೂಲಕ ನನಗೂ ನನ್ನ ಕೈಲಾದ ಸಹಾಯ ಮಾಡಿ ಕೆಲವೊಮ್ಮೆ ಖುದ್ದು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸಂತೃಪ್ತಿಯನ್ನು ಫೇಸ್ಬುಕ್ ನೀಡಿದೆ.
- ಆಜಾದ್ ಐಎಸ್, ಕುವೈತ್
ಬರಹ ಸುಧಾರಣೆ
ಫೇಸ್ಬುಕ್ ನನ್ನ ಆಸಕ್ತಿಗೆ ಅನೇಕ ರೀತಿಯಲ್ಲಿ ಆಯಾಮಗಳನ್ನು ಒದಗಿಸಿದೆ. ನಾನು ಕಾರಣಾಂತರಗಳಿಂದ ಬರವಣಿಗೆಯನ್ನು ಬಿಟ್ಟುಬಿಟ್ಟಿದ್ದು, ಫೇಸ್ಬುಕ್ನಿಂದಾಗಿ ಮತ್ತೆ ಬರಹದಲ್ಲಿ ತೊಡಗಿಸಿಕೊಳ್ಳುವಂತಾಯಿತು. ಒಂದು ಕವನ ಅಥವಾ ಸ್ಟೇಟಸ್ ಅಪ್ಲೋಡ್ ಮಾಡಿದರೆ ಅದಕ್ಕೆ ಬರುವ ಪ್ರತಿಕ್ರಿಯೆಗಳ ಆಧಾರದ ಮೇಲೆ ಬರಹಗಳನ್ನು ಸುಧಾರಿಸಿಕೊಳ್ಳಲು ಸಾಧ್ಯವಾಗಿದೆ.
- ಸಂಧ್ಯಾ ವಿ. ನಾಯಕ್, ಯಲ್ಲಾಪುರ
ಸಂವಾದಕ್ಕೆ ಫೇಸ್ಬುಕ್
ವಿದೇಶದಲ್ಲಿದ್ದಾಗ ಅಲ್ಲಿ ಕನ್ನಡ ಮಾತಾಡುವವರ ಸಂಪರ್ಕವೇ ನನಗಿರಲಿಲ್ಲ. ಹೀಗಾಗಿ ನನ್ನ ಮನಸ್ಸಿನ ಭಾವನೆಗಳನ್ನು ಹಂಚಿಕೊಂಡು ಆಗಿಂದಾಗ್ಗೆ ಉತ್ತರಕೊಡಲು, ಸಂವಾದಿಸಲು ನಾನು ಫೇಸ್ಬುಕ್ಕನ್ನು ಆರಿಸಿಕೊಂಡೆ. ಎಲ್ಲದಕ್ಕಿಂತ ಹೆಚ್ಚಾಗಿ ನಾನು ನನ್ನ ತಾಯ್ನೆಲದವರೊಂದಿಗೆ ನಿರಂತರ ಸಂಪರ್ಕ ಹೊಂದಲು ಇದು ನೆರವಾಗಿದೆ. ಹಿಂದೊಮ್ಮೆ ಕೇವಲ ಚಿತ್ರಕಥೆ, ಸಂಭಾಷಣೆಗಳನ್ನು ಧಾರಾವಾಹಿ, ಸಿನೆಮಾಗಳಿಗೆ ಬರೆಯುತ್ತಿದ್ದ ನಾನು, ಇಂದು ಒಬ್ಬ ಲೇಖಕನಾಗಿ ಹೊರಹೊಮ್ಮುವುದಕ್ಕೆ ಕಾರಣ ಫೇಸ್ಬುಕ್. ಸದ್ಯದಲ್ಲೇ ನನ್ನ ಫೇಸ್ಬುಕ್ ಬರಹಗಳ ಎರಡು ಪುಸ್ತಕಗಳು ಅನಾವರಣಗೊಳ್ಳಲಿವೆ.
- ನಟರಾಜ್ ಕಾನುಗೋಡು, ಕಾಬೂಲ್
- ರಶ್ಮಿ ಕಾಸರಗೋಡು
rashmitendulkar@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


