ಖುಷಿ

ಮೂರು ಸುದ್ದಿಗಳು

Published On :

ಈ ವಾರ ನಿಮ್ಮೊಡನೆ ಹಂಚಿಕೊಳ್ಳಲು ಮೂರು ಸಂಗತಿಗಳಿವೆ. ಇವುಗಳಲ್ಲಿ ಒಳ್ಳೆ ಸುದ್ದಿ ಯಾವುದು, ಕೆಟ್ಟದ್ಯಾವುದು ಅಂತ ನೀವೇ ನಿರ್ಧರಿಸಬೇಕು.
ಅಮೆರಿಕದಲ್ಲಿ ಒಂದು ಸಂಸ್ಥೆ ನಡೆಸಿದ ಸರ್ವೆಯಲ್ಲಿ ಕಂಡುಬಂದ ಅಂಶ: ದೇಶದಲ್ಲಿ ಇ- ರೀಡಿಂಗ್ ಹೆಚ್ಚುತ್ತಿದೆ. ಆದರೆ ಮುದ್ರಿತ ಪುಸ್ತಕಗಳ ಪಾರುಪತ್ಯ ಮುಂದುವರಿದೇ ಇದೆ. ಪುಸ್ತಕ ಓದುವವರ ಸಂಖ್ಯೆ ಕಳೆದ ವರ್ಷಕ್ಕಿಂತ ಶೇ.6 ಹೆಚ್ಚಿದೆ. ಕಿಂಡಲ್, ಐಪ್ಯಾಡ್‌ಗಳಲ್ಲಿ ಕೃತಿ ಓದುವವರು ಪ್ರಿಂಟ್ ಪುಸ್ತಕಗಳನ್ನೂ ಓದುತ್ತಾರೆ. ಆದರೆ ಪುಸ್ತಕಗಳನ್ನು ಕೈಯಲ್ಲೂ ಹಿಡಿಯೊಲ್ಲ, ಬರೀ ಇ-ಬುಕ್ ಓದ್ತೀವಿ ಅನ್ನುವವರ ಸಂಖ್ಯೆ ಶೇ.4 ಮಾತ್ರ. ಇದು 1000 ಮಂದಿಯನ್ನು ಮಾತಾಡಿಸಿ ಮಾಡಿದ ಸರ್ವೆ.
ಲಂಡನ್‌ನಲ್ಲಿ ಕೂಡ ದೊಡ್ಡ ಪ್ರಕಾಶನ ಸಂಸ್ಥೆಯೊಂದು ಲೇಖಕರ ಬಗ್ಗೆ ಸರ್ವೆ ಮಾಡಿದೆ. ಅದು ಹೇಳುವ ಪ್ರಕಾರ, ಸ್ವಯಂ ಪ್ರಕಾಶನ ಮಾಡಿಕೊಳ್ಳುವ ಲೇಖಕರಲ್ಲಿ ಶೇ.77 ಮಂದಿ ಅದರಿಂದ ಮಾಡುವ ಕಮಾಯಿ ವರ್ಷಕ್ಕೆ ಕೇವಲ 1000 ಡಾಲರ್ ಅಥವಾ 60 ಸಾವಿರ ರುಪಾಯಿ. ಇತರರ ಗಳಿಕೆಯೂ ಹೇಳುವಂತೇನಿಲ್ಲ.
ದೊಡ್ಡ ಭಾರತೀಯ ಸಾಹಿತಿಗಳ ಪುಸ್ತಕಗಳನ್ನು ಪ್ರಕಾಶನ ಸಂಸ್ಥೆಗಳಿಗೆ ಮಾರಿಸುವ ಏಜೆಂಟ್ ಬ್ರಿಟನ್‌ನ ಡೇವಿಡ್ ಗಾಡ್‌ವಿನ್. ಈತ ಸಲ್ಮಾನ್ ರಶ್ದಿ, ಅರುಂಧತಿ ರಾಯ್, ವಿಕ್ರಂ ಸೇಠ್, ಅರವಿಂದ್ ಅಡಿಗ, ಕಿರಣ್ ದೇಸಾಯಿ ಮುಂತಾದವರಿಗೆ ವ್ಯಾಪಾರ ಕುದುರಿಸಿದವನು. ಈತ ಒಂದು ಎಚ್ಚರಿಕೆ ನೀಡಿದ್ದಾನೆ. ಆತನ ಪ್ರಕಾರ, ಭಾರತ ಅಮೆರಿಕದ ಸಾಹಿತ್ಯಕ್ಕೆ ಕಸದ ತೊಟ್ಟಿ ಆಗುತ್ತಿದೆ. ಎರಡನೇ, ಮೂರನೇ ದರ್ಜೆಯ ಅಮೆರಿಕನ್ ಸಾಹಿತ್ಯವನ್ನು ಇಲ್ಲಿ ತಂದು ಸುರಿಯುವುದು ಹೆಚ್ಚಾಗುತ್ತಿದೆ. ಇದು ಬೃಹತ್ ಪ್ರಕಾಶನ ಸಂಸ್ಥೆಗಳ ಆಟ. ಇದರಿಂದ ಸ್ಥಳೀಯರ ಸಾಹಿತ್ಯ ಮೂಲೆಗುಂಪಾಗಬಹುದು.
ಅಳಾಕ ಚೆಂದ!
ಸಾಹಿತಿ ಚಂಪಾ ಒಮ್ಮೆ ತಮ್ಮ ಸಾಹಿತ್ಯ ಪತ್ರಿಕೆ 'ಸಂಕ್ರಮಣ'ಕ್ಕೆ ಚಂದಾ ಸಂಗ್ರಹಿಸಲು ರಾಯಚೂರಿಗೆ ಹೋಗಿದ್ದರು. ಎರಡು ದಿನ ಬಳಿಕ ಊರಿಗೆ ಹೊರಟರು. ಇನ್ನೂ ಕೆಲವರನ್ನು ಚಂದಾ ಕೇಳಬೇಕಿತ್ತು. ತಮ್ಮ ಸ್ನೇಹಿತರಿಗೆ ಆ ಕೆಲಸ ವಹಿಸಿದರು. ಆದರೆ ಸ್ನೇಹಿತರು ಬಿಡಲಿಲ್ಲ.
ಸ್ನೇಹಿತರು: ಊರಿಗೆ ಹೋಗಬ್ಯಾಡ್ರಿ, ಚಂದಾ ಕೇಳಾಕ ಹೋದಾಗ ನೀವು ಇರಬೇಕು.
ಚಂಪಾ: ಹಂಗೇನಿಲ್ಲ. ನೀವು ಕೇಳಿದ್ರ ಯಾರೂ ಇಲ್ಲ ಅನ್ನಾಂಗಿಲ್ಲ.
ಸ್ನೇಹಿತರು: ನಿಮಗ ತಿಳೆಂಗಿಲ್ಲ ಬಿಡ್ರಿ.
ಚಂಪಾ: ಏನು ತಿಳೆಂಗಿಲ್ರಿ?
ಸ್ನೇಹಿತರು: ಹೆಣಾ ಎದುರಿಗಿದ್ರ ಅಳಾಕ ಚೆಂದರೆಪಾ!



-ಹರೀಶ್ ಕೇರ
harishkera@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.