ಅತಿ ಶಕ್ತಿಶಾಲಿ ಯಾರು?
ಆ ಮಾವುತ ಬೆಳಗಿನಿಂದ ಆನೆಗೆ ಆಹಾರ ಕೊಟ್ಟು, ಸ್ನಾನ ಮಾಡಿಸಿ, ತಿರುಗಿಸಿ ಸುಸ್ತಾಗಿದ್ದ. ರಾತ್ರಿ ಒಳ್ಳೆಯ ನಿದ್ದೆ ಬಂತು. ಅಷ್ಟರಲ್ಲೇ ಎಲ್ಲಿಂದಲೋ ಹಾರಿಬಂತು ಸೊಳ್ಳೆ. ಅವನ ಕುತ್ತಿಗೆಗೆ ಕಚ್ಚಿ, ರಕ್ತ ಹೀರಿತು. ಇವನೆಂಥ ದೈತ್ಯ ಎಂದುಕೊಂಡಿತು ಆ ಸೊಳ್ಳೆ. ಹೀಗೆ ಯೋಚಿಸುತ್ತಾ ಗೋಡೆಯ ಮೇಲಿದ್ದಾಗ ಒಂದು ಹಲ್ಲಿ ಗಬಕ್ಕನೆ ಸೊಳ್ಳೆಯನ್ನು ಹಿಡಿದು 'ಲಬಕ್ ಸ್ವಾಹ' ಮಾಡಿತು. ಜಗತ್ತಿನಲ್ಲಿ ನಾನೇ ಶ್ರೇಷ್ಠ ಎಂದು ಬೀಗಿತು. ಅತ್ತಿತ್ತ ನೋಡುವಷ್ಟರಲ್ಲಿ ಕಳ್ಳ ಬೆಕ್ಕೊಂದು ಈ ಹಲ್ಲಿಯನ್ನು ಹಿಡಿದು ತಿಂದುಹಾಕಿತು. ಆಗ ಬೆಕ್ಕಿಗೆ ಅನಿಸಿತು, ತನಗೆ ಯಾರೂ ಸಾಟಿ ಇಲ್ಲ ಎಂದು. 'ಡರ್' ಎಂದು ತೇಗುತ್ತಾ ಹೊರಬಂದ ಬೆಕ್ಕನ್ನು ಮೂಲೆಯಲ್ಲಿ ಕಾಯುತ್ತಾ ಕುಳಿತಿದ್ದ ಒಂದು ಸೀಳು ನಾಯಿ ಹಿಡಿದು 'ಗುಳುಂ' ಮಾಡಿತು. ನಾಯಿಗೆ ಈಗ 'ತನ್ನ ಸಮಾನರಾರಿಹರು' ಎನಿಸತೊಡಗಿತು.
ಆ ನಾಯಿಗೂ ಗತ್ತು ಬಂತು. ನಾಯಿ ಎಲ್ಲೋ ಹೊರಟಿದ್ದಾಗ ಚಿರತೆ ಎದುರಾಯಿತು. ನಾಯಿಗೆ ಏನಾಗುತ್ತಿದೆ ಎಂದು ಗೊತ್ತಾಗುವ ಮೊದಲೇ ಚಿರತೆ ನಾಯಿಯ ಕುತ್ತಿಗೆಗೆ ಬಾಯಿ ಹಾಕಿ ಕಾಡಿನೊಳಗೆ ಹೋಗಿ ತಾನೇ ಸಾರ್ವಭೌಮನಂತೆ ಮೆರೆದು ಮೃಷ್ಟಾನ್ನ ಭೋಜನ ಮಾಡಿತು. ಅದೇ ಮಾರ್ಗವಾಗಿ ಹೋಗುತ್ತಿದ್ದ ಸಿಂಹರಾಜನಿಗೆ ಈ ಚಿರತೆ ಕಂಡಿತು. ಹೊಂಚು ಹಾಕಿ ಹಾರಿದ ಸಿಂಹರಾಜನು ಚಿರತೆಯನ್ನು ಕೊಂದು ಭೂರಿ ಭೋಜನ ಮಾಡಿತು. ಅದೇ ಸಮಯಕ್ಕೇ ಅಲ್ಲಿ ಭಾರಿ ಗಾತ್ರದ ಆನೆ ಬಂತು. ತಿಂದು ಕೊಬ್ಬಿದ್ದ ಸಿಂಹರಾಜ ಆನೆಯನ್ನು ಕುರಿತು, 'ಲೋ, ಇಲ್ಲೇಕೆ ಬಂದೆ ನಾನು ಕಾಡಿನ ರಾಜ ಎನ್ನುವ ಮರ್ಯಾದೆ ಬೇಡವೇ, ನಡಿಯಾಚೆ' ಎಂದು ದೊಡ್ಡ ದನಿಯಲ್ಲಿ ಅರಚಿತು. ಅಲ್ಲದೆ ಗುರಾಯಿಸುತ್ತ ಮುಂದೆ ಬಂದು ಪೋಸು ಕೊಟ್ಟಿತು. ಸಿಂಹದ ಅಹಂಕಾರದ ಮಾತುಗಳಿಂದ ಸಾಧು ಸ್ವಭಾವದ ಆನೆಗೂ ಸಿಟ್ಟು ನೆತ್ತಿಗೇರಿತು. ತನ್ನ ಸೊಂಡಿಲಿನಿಂದ ಸಿಂಹವನ್ನು ಎತ್ತಿ ಪಕ್ಕದ ಬಂಡೆಗೆ 'ರಪ್' ಎಂದು ಕುಕ್ಕಿತು. ಜಂಭದ ಸಿಂಹರಾಜ ನುಜ್ಜುಗಜ್ಜಾದ. ಆನೆಗೆ ಈಗ ಅನ್ನಿಸಿತು, 'ಮೃಗರಾಜನನ್ನೇ ಕೊಂದ ನಾನೇ ಮಹಾನ್ ಶಕ್ತಿಶಾಲಿ'.
ಹೆಮ್ಮೆಯಿಂದ ಸೊಂಡಿಲನ್ನು ಬೀಸುತ್ತಾ ತನ್ನ ಶಿಬಿರಕ್ಕೆ ಬಂತು. ಮೇಯಲು ಹೋದ ಆನೆ ವಾಪಸಾದದ್ದನ್ನು ಕಂಡ ಮಾವುತ, ಅದನ್ನು ಕಾರ್ಯನಿಮಿತ್ತ ಹೊರ ಕರೆದುಕೊಂಡು ಹೋಗಲು ಅದನ್ನು ಅಂಕುಶದಿಂದ ತಿವಿದು ಮಣಿಸಿದ. ಅದರ ಮೇಲೆ ಹತ್ತಿ ತಿವಿಯುತ್ತಾ ತನಗೆ ಬೇಕಾದ ಹಾದಿಯಲ್ಲಿ ನಡೆಸಿದ.
ಕತ್ತಲಾಯಿತು, ಸುಸ್ತಾದ ಮಾವುತ ಮನೆಗೆ ಬಂದು ಉಂಡು ಮಲಗಿದ. ಪುನಃ ಸೊಳ್ಳೆಯೊಂದು... ಮಕ್ಕಳೇ ಈಗ ಮೊದಲಿನಿಂದ ಓದಿ. 'ಅತಿ ಶಕ್ತಿಶಾಲಿ ಯಾರು?' ನೀವೇ ನಿರ್ಧರಿಸಿ.
-ಕೆ. ಶ್ರೀನಿವಾಸರಾವ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

