ಖುಷಿ

ಐಪಿಎಲ್ ದೇಶದ ಬಿಪಿಎಲ್

ಭಾರತ ವಿಶ್ವ ಕ್ರಿಕೆಟ್‌ನ ಅತಿ ಬಡ ರಾಷ್ಟ್ರ. ನ್ಯೂಜಿಲೆಂಡ್‌ಗಿಂತ ಕೆಳಗೆ ಅಥವಾ ಜಿಂಬಾಬ್ವೆಗೆ ಸಮಾನ- ಹೀಗಂದು ಬಿಟ್ಟರೆ...

ಐಪಿಎಲ್ ದೇಶದ ಬಿಪಿಎಲ್
Published On :

ಭಾರತ ವಿಶ್ವ ಕ್ರಿಕೆಟ್‌ನ ಅತಿ ಬಡ ರಾಷ್ಟ್ರ. ನ್ಯೂಜಿಲೆಂಡ್‌ಗಿಂತ ಕೆಳಗೆ ಅಥವಾ ಜಿಂಬಾಬ್ವೆಗೆ ಸಮಾನ- ಹೀಗಂದು ಬಿಟ್ಟರೆ ಯಾರಿಗೂ ನಗು ಬಂದೀತು. 'ಸಾವಿರ ಕೋಟಿ ವೆಚ್ಚದ ಐಪಿಎಲ್ ನಡೆಸುತ್ತಿರುವ ದೇಶಕ್ಕೆ ಇಂಥ ಬಿಪಿಎಲ್ ಕಾರ್ಡೇ!?' ಕೇಳಬಹುದು. ನಾವು ಹಾಸಿದ ಡಾಲರ್ ನೋಟಿನ ಮೇಲೆ ಆಸ್ಟ್ರೇಲಿಯಾದ ವ್ಯಾಟ್ಸನ್ನು, ಇಂಗ್ಲೆಂಡಿನ ಪೀಟರ್‌ಸನ್ನೂ ಆರಾಮಾಗಿ ಮಲಗುತ್ತಾರೆಂದೂ ಪ್ರತಿವಾದ ಮಂಡಿಸಲೂಬಹುದು. ಬಿಸಿಸಿಐನ ಒಂದು ನಿರ್ಧಾರಕ್ಕೆ 'ಯೆಸ್ ಬಾಸ್‌' ಎನ್ನಲು ಕ್ರಿಕೆಟ್ ಆಡುವ ಹತ್ತು ರಾಷ್ಟ್ರಗಳು ಕೈಕಟ್ಟಿ ಎದ್ದು ನಿಲ್ಲುತ್ತವೆ ಅಂತಲೂ ಎದುರಾಳಿಗಳು ಉತ್ಪ್ರೇಕ್ಷೆ ಸಲ್ಲಿಸಬಹುದು.
ಯಾವ ದಾಖಲೆಯೇ ಪರಿಶೀಲನೆಗಿಡಿ, ನಾವು ಕ್ರಿಕೆಟ್ಟಿನಲ್ಲಿ ಬಡವರೇ! ಇವತ್ತು ಬಿಸಿಸಿಐ (ಭಾರತೀಯ ಕ್ರಿಕೆಟ್ ಮಂಡಳಿ) ಅಕೌಂಟಿನಲ್ಲಿ ಭರ್ತಿ ಕಾಸಿದೆ ಹೌದು. ಗವಾಸ್ಕರ್, ಕಪಿಲ್, ಸಚಿನ್, ಕುಂಬ್ಳೆ, ಧೋನಿ, ಕೊಹ್ಲಿ ಇವರೂ ಕೋಟಿಗೂ ನಿಲುಕದ ಆಸ್ತಿಗಳೇ ಹೌದು. ಆದರೆ, ನಮ್ಮ ಬಡತನ ಇರುವುದು ಖಜಾನೆಯಲ್ಲಲ್ಲ. ದಾಖಲೆಗಳಲ್ಲಲ್ಲ. ಕ್ರಿಕೆಟ್ ಅಭಿವೃದ್ಧಿಗೆ ನೀಡುತ್ತಿರುವ ಕೊಡುಗೆಗಳಲ್ಲಿ. ದಿನದಿಂದ ದಿನಕ್ಕೆ ಸ್ಮಾರ್ಟ್ ಆಗಿ ಹೊಳಪೇರಿಸಿಕೊಳ್ಳುವ ಕ್ರಿಕೆಟ್ಟಿಗೆ ನಮ್ಮ ತಾಂತ್ರಿಕ ಕಾಣ್ಕೆಗಳೆಷ್ಟು? ಒಂದಾದರೂ ಹೊಸ ನಿಯಮ, ಹೊಸ ಪ್ರಕಾರ ನಮ್ಮ ಹೆಸರಿನಲ್ಲಿದೆಯಾ? ಈ ವಿಚಾರದಲ್ಲಿ ಭಾರತ ಡಕ್‌ಔಟ್!
ನೀವೂ ಕಂಡಿದ್ದೀರಿ. ಈ ಏಳನೇ ಐಪಿಎಲ್‌ನಲ್ಲಿ ಅಂಪೈರ್ ಹ್ಯಾಟಿನ ತುದಿಗೊಂದು ಪುಟ್ಟ ಕ್ಯಾಮೆರಾ ಕೂತಿದೆ. ಬ್ಯಾಟರಿ ಪ್ಯಾಕೆಟ್ಟಿನ ಕಾರಣದಿಂದ ಆ ಫೀಲ್ಡ್ ಅಂಪೈರುಗಳ ಸೊಂಟದಳತೆ ಹೆಚ್ಚಿದೆ. ತೀರ್ಪನ್ನು ಇನ್ನೂ ಕರಾರುವಾಕ್ಕು ಮಾಡಲಿಕ್ಕಾಗಿ ಇದು. ಕ್ಯಾಮೆರಾದ ವೈರುಗಳು ಥೇಟ್ ಇಯರ್‌ಫೋನಿನ ವೈರುಗಳಂತೆ ಇಳಿಬಿದ್ದು, ಸೊಂಟದ ಬೆಲ್ಟಿಗೆ ಫಿಕ್ಸಾದ ಬ್ಯಾಟರಿಯ ಪೃಷ್ಠ ಹೊಕ್ಕಿವೆ. ಈ ಕ್ಯಾಮೆರಾದಿಂದ ಬ್ಯಾಟುಗಾರನ ಅಷ್ಟೂ ಕ್ರಿಯೆಗಳನ್ನು ಹತ್ತಿರದಿಂದ, ಸ್ಪಷ್ಟವಾಗಿ ಕಾಣಬಹುದು. ಆದರಿದು ಭಾರತದ್ದೇ ಪ್ರಯೋಗವೇನಲ್ಲ. ಎರಡು ವರುಷದ ಹಿಂದೆಯೇ ಕ್ರಿಕೆಟ್ ಆಸ್ಟ್ರೇಲಿಯಾ ಹೀಗೆ ಅಂಪೈರ್ ಹ್ಯಾಟಿನ ತುದಿ, ಬ್ಯಾಟ್ಸ್‌ಮನ್, ಕೀಪರ್‌ಗಳ ಹೆಲ್ಮೆಟ್ಟಿನ ತುದಿ ಕ್ಯಾಮೆರಾ ಕೂರಿಸಿ ಮುನ್ನುಡಿ ಬರೆದಿತ್ತು. 1980ರಲ್ಲೇ ಸ್ಟಂಪ್ ಕ್ಯಾಮೆರಾ ಕಂಡುಹಿಡಿದು ವಿಶ್ವ ಕ್ರಿಕೆಟ್‌ಗೆ ಜೀವ ತುಂಬಿತ್ತು. ಮಳೆ ಬಂದಾಗ ಕ್ರೀಸಿನಿಂದ ನೀರು ಹೀರುವ 'ಸೂಪರ್ ಸಾಪ್ಪರ್‌' ರೋಲರ್ ಕಂಡುಹಿಡಿದಿದ್ದು ಕೂಡ ಆಸಿಸ್ ಮಂದಿಯೇ.
ಕ್ರಿಕೆಟ್ ಆಸ್ಟ್ರೇಲಿಯಾ ಯಾವತ್ತೂ ಬಿಸಿಸಿಐನಂತೆ ಲಾಭದ ಬಗ್ಗೆಯೇ ಯೋಚಿಸುತ್ತಿರುವುದಿಲ್ಲ. ಕ್ರಿಕೆಟ್ಟನ್ನು ಆಕರ್ಷಣೆಗೊಳಿಸುವ ಬಗ್ಗೆ ತಲೆಕೆಡಿಸಿಕೊಳ್ಳುತ್ತದೆ. ತಿಂಗಳ ಹಿಂದೆ ಟಿ20 ವರ್ಲ್ಡ್‌ಕಪ್‌ನಲ್ಲಿ ಗಮನ ಸೆಳೆದ ಮಿನುಗುವ ಬೇಲ್ಸ್‌ಗಳನ್ನು ಸಿದ್ಧಪಡಿಸಿದ್ದೂ ಅವರೇ. ದಕ್ಷಿಣ ಆಸ್ಟ್ರೇಲಿಯಾದ 'ಝಿಂಗ್ ಇಂಟರ್‌ನ್ಯಾಶನಲ್‌'ನ ಈ ಆವಿಷ್ಕಾರ ಮೊನ್ನೆಯ ವರ್ಲ್ಡ್‌ಕಪ್‌ನ ನೆನಪಿನ ಮುದ್ರೆ.
ಮೈದಾನದ ಮೇಲೆ ಎಲ್ಲೆಂದರಲ್ಲಿ ಹರಿದಾಡುವ ಸ್ಪೈಡರ್ ಕ್ಯಾಮೆರಾವೂ ಆಸೀಸ್ ಮೆದುಳಿಗೆ ಹೊಳೆದಿದ್ದೇ. ಇದರ ಎಂಟು ಕ್ಯಾಮೆರಾಗಳು ಪಂದ್ಯದ ಯಾವುದೇ ದೃಶ್ಯವನ್ನೂ ತಪ್ಪಿಸುವುದಿಲ್ಲ. ಪಂದ್ಯಗಳಿಗೆ ಪಿಂಕ್ ಬಾಲ್ ಅಳವಡಿಸಿದ್ದು, ಮಾಮೂಲಿ ಕೆಂಪು ಚೆಂಡಿನ ಬದಲು ಬಿಳಿಚೆಂಡನ್ನು ಅಳವಡಿಸಿದವರೂ ಅವರೇ. ಕ್ರಿಕೆಟ್‌ನ ಇಂಡೋರ್ ಸ್ಟೇಡಿಯಂ ಆಸ್ಟ್ರೇಲಿಯಾ ಬಿಟ್ಟರೆ ಬೇರಾವ ದೇಶದಲ್ಲೂ ಕಾಣಸಿಗದು. ಅಲ್ಲಿನ ಮೇಲ್ಬರ್ನ್ ಡಾಕ್ಲೆಂಡ್ ಸ್ಟೇಡಿಯಂನಲ್ಲಿ ಮಳೆಕಾರಣ ಆಟ ರದ್ದಾಗದು. ಅಲ್ಲದೆ, ಇದು ರೆಡಿಮೇಡ್ ಪಿಚ್ಚೂ ಹೌದು. ಮಿಕ್ಕೆಲ್ಲ ದಿನ ಫುಟ್ಬಾಲ್, ರಗ್ಬಿಗೆ ಜಾಗ. ಇಂಥ ಮಲ್ಟಿ ಪ್ರಯೋಗವನ್ನೂ ಅವರೇ ಮೊದಲು ಮಾಡಿಬಿಟ್ಟರು.
ಕೂಸು ಹುಟ್ಟಿಸಿದ ಇಂಗ್ಲೆಂಡೂ ಕರ್ತವ್ಯ ಮರೆತಿಲ್ಲ. ಕ್ರಿಕೆಟ್ಟಿಗೆ ಚೆಂದದ ಬಟ್ಟೆ ತೊಡಿಸಿದೆ. ಯಾರ ಕಣ್ಣೂ ಬೀಳದಂತೆ ಕ್ರಿಕೆಟ್ಟಿಗೆ ದೃಷ್ಟಿ ಬೊಟ್ಟು ಇಡುತ್ತಲೇ ಇದೆ. ಕೆಲವು ಕೀಪರ್ ಕ್ಯಾಚ್‌ಗಳು ಭಗವಂತನ ಮೂರನೇ ಕಣ್ಣಿಗೂ ಕಾಣದಂಥವು. ಚೆಂಡು, ಬ್ಯಾಟಿಗೆ ಸವರಿದೆಯೋ ಇಲ್ಲವೋ ಎಂಬುದನ್ನು ನಿರ್ಣಯಿಸುವಾಗ ಅಂಪೈರುಗಳ ಆತಂಕ ಸುಪ್ರಿಂ ಕೋರ್ಟ್ ಜಡ್ಜಿಗೂ ಬೇಡ. ಅಲನ್ ಪಾಸ್ಕೆಟ್ ಎಂಬ ಆಂಗ್ಲ ಗಣಕತಜ್ಞ ಸ್ನಿಕೋಮೀಟರ್ ಸಂಶೋಧಿಸುವ ಮೂಲಕ ಆ ತೀರ್ಪಿನ ದೊಡ್ಡ ತಲೆಬಿಸಿ ತಪ್ಪಿಸಿದ. ಟೆಲಿವಿಜನ್ ರಿಪ್ಲೇಗೆ ನೆರವಾದ ಈ ಮೈಕ್ರೋಫೋನ್ ವಿಕೆಟ್ ಬುಡದಲ್ಲಿರುವುದನ್ನು ನೀವೂ ನೋಡಿರುತ್ತೀರಿ. ಚೆಂಡು ಪ್ಯಾಡಿಗೆ ಸ್ಪರ್ಶಿಸಿದೆಯೇ, ಬ್ಯಾಟಿಗೆ ಸ್ಪರ್ಶಿಸಿದೆಯೇ ಎಂಬುದನ್ನು ಇದರಲ್ಲಿ ದಾಖಲಾಗುವ ಭಿನ್ನ ಶಬ್ದಗಳು ಸ್ಪಷ್ಟಪಡಿಸುತ್ತವೆ. ಫೀಲ್ಡ್ ಅಂಪೈರ್‌ಗೆ ಅಲ್ಲದಿದ್ದರೂ, ಥರ್ಡ್ ಅಂಪೈರ್‌ಗೆ ಸ್ನಿಕೋ ಅನುಕೂಲ.
ಇನ್ನು ಎಲ್‌ಬಿಡಬ್ಲ್ಯು ನಿರ್ಣಯದ ಬಗ್ಗೆ ಗೊಂದಲಗಳು ಸಾಕಷ್ಟು. ಅಂಪೈರು ಬ್ಯಾಟ್ಸ್‌ಮನ್ನಿನ ಕಾಲನ್ನು ಸೀಳಿ ದೃಷ್ಟಿಸಿದರೂ ಸಾಲದು. ಕಾಲಿಗೆ ಬಡಿದ ಚೆಂಡು, ಯಾವ ಸ್ಟಂಪ್‌ನ ನೇರಕ್ಕಿತ್ತು ಎಂಬುದನ್ನು 'ಹಾಕ್‌ಐ' ತಂತ್ರಜ್ಞಾನ ರೂಪಿಸುವ ಗ್ರಾಫ್‌ನಿಂದ ತಿಳಿಯಬಹುದು. ಇದು ಕೂಡ ಆಂಗ್ಲರ ಕೊಡುಗೆಯೇ. ಡಾ. ಪಾಲ್ ಹಾಕಿನ್ಸ್ ಎಂಬಾತ ಇದನ್ನು ಪರಿಚಯಿಸಿ ದೊಡ್ಡ ಉಪಕಾರ ಮಾಡಿದ. ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ 10 ಕ್ಯಾಮೆರಾ ಬಳಸಿ ಚೆಂಡಿನ ಚಲನೆಯನ್ನು ಸೆರೆಹಿಡಿಯಲಾಗಿತ್ತು. ಕ್ರಿಕೆಟ್ಟಿನ 'ಹಾಕ್‌ಐ'ನಲ್ಲಿರುವುದು 6 ಕ್ಯಾಮೆರಾಗಳು. ಸೆಕೆಂಡಿಗೆ ಚೆಂಡಿನ ಚಲನೆಯ 60 ಫ್ರೇಮ್‌ಗಳನ್ನು ಸೆರೆಹಿಡಿಯುತ್ತವೆ. ಓವರಿನ ಆರೂ ಎಸೆತಗಳ ಚಲನೆಯ ಸ್ವರೂಪ ತಿಳಿಸುತ್ತದೆ.
ಈಗಲೂ ಹಾಕ್‌ಐ ಎರಡನೇ ಅಭಿಮತವಾಗಿದೆ. ಯುಡಿಆರ್‌ಎಸ್ (ಅಂಪೈರ್ ತೀರ್ಪಿನ ಮರು ಪರಿಶೀಲನೆ)ಮೂಲಕ ಬ್ಯಾಟುಗಾರ ಔಟೋ, ಇಲ್ಲವೋ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲು ಅವಕಾಶವಿದೆ.
ದಕ್ಷಿಣ ಆಫ್ರಿಕ ಶೋಧಿಸಿದ 'ಡಾರ್ಟ್ ಫಿಶ್‌' ಟೆಕ್ನಾಲಜಿ ಹಾಕ್ ಐನಂತೆಯೇ ಇದ್ದರೂ ಚೆಂಡಿನ ಪಥವನ್ನು ನಿಖರವಾಗಿ ತೋರಿಸುತ್ತದೆ. ರಿಯಲ್ ಟೈಮ್ ಕಾಮೆಂಟರಿಗೆ ವೆಸ್ಟ್‌ಇಂಡೀಸ್ ತಂತ್ರಜ್ಞ ಕಂಡುಹಿಡಿದ ಮೈಕ್ರೋಫೋನಿರಬಹುದು, ಫಿಟ್ನೆಸ್ ಟೆಸ್ಟ್ ವೇಳೆ ನೆರವಾಗುವ ಫಿನ್ಲೆಂಡಿನ ಶೋಧ ಹಾರ್ಟ್ ರೇಟ್ ಬೀಟ್ ಮಾಪನವಿರಬಹುದು... ಎಲ್ಲವೂ ಕ್ರಿಕೆಟ್‌ನ ಸೌಂದರ್ಯ- ಆರೋಗ್ಯವನ್ನು ಹೆಚ್ಚಿಸಿದಂಥವು.


 ಬೌಲಿಂಗ್ ವೇಗ ಅಳೆಯಲು ಬಳಸುವ ಸ್ಪೀಡ್ ಗನ್ ಆಂಗ್ಲರ ನೆಲದಿಂದಲೇ ಬಂದಿದ್ದು. ಶ್ರೀಲಂಕಾದ ಟಿವಿ ತಜ್ಞರ ಕೃಪೆಯಿಂದ ಇವತ್ತು ಹೈಸ್ಪೀಡ್ ಕ್ಯಾಮೆರಾಗಳು ಸೂಪರ್ ಸ್ಲೋ ಮೋಶನ್ ಚಿತ್ರಗಳನ್ನು ಕಲ್ಪಿಸುತ್ತಿವೆ. ಈ ನಿಧಾನ ಪ್ರಕ್ರಿಯೆಯು ರಿಪ್ಲೇಗೆ ಜೀವ ತುಂಬಿದೆ. ಒಂದು ಪಂದ್ಯದ ಯಶಸ್ಸಿಗೆ ಆಟಗಾರರು, ಅಂಪೈರ್‌ಗಳಂತೆ ಈ ತಂತ್ರಜ್ಞಾನಗಳೂ ಮುಖ್ಯ. ಆದರೆ ಇಲ್ಲೆಲ್ಲೂ ನಮಗೆ ಭಾರತ ಕಾಣಿಸುವುದಿಲ್ಲ. ಇದು ಹಿಂದೆಯೂ ಅಷ್ಟೇ. ಟೆಸ್ಟ್ ನೋಡಿ ಬೇಜಾರದ ಜನ ಸ್ಟೇಡಿಯಂ ಬಿಟ್ಟು ನಡೆಯುತ್ತಿದ್ದಾಗ ಆಸ್ಟ್ರೇಲಿಯಾದ ಕ್ರಿಕೆಟ್ ತಜ್ಞ ಕೆರ್ರಿ ಪ್ಯಾಕರ್ 'ಒನ್‌ಡೇ' ಪಂದ್ಯಗಳಿಗೆ ಜನ್ಮಕೊಟ್ಟ. ಸರಣಿ ಪಂದ್ಯಗಳನ್ನು ಶುರುಮಾಡಿಸಿದ. ಆಟಗಾರರಿಗೆ ಬಿಳಿಬಟ್ಟೆ ಬದಲು ಬಣ್ಣಬಣ್ಣದ ಯೂನಿಫಾರಂ ಬಂತು. ಫ್ಲೆಡ್ ಲೈಟ್ ಅಡಿಯಲ್ಲಿ ಹಗಲು- ರಾತ್ರಿ ಪಂದ್ಯಗಳು ನಡೆದವು. ಪಂದ್ಯದ ಪ್ರಸಾರದ ಹಕ್ಕುಗಳನ್ನು ಟಿವಿ ಚಾನೆಲ್‌ಗಳು ಪಡೆದವು. ವಿಶ್ವಕಪ್ ಆರಂಭವಾಯಿತು. ಮಹಿಳೆಯರೂ ಬ್ಯಾಟ್ ಹಿಡಿದರು. ಇವೆಲ್ಲ ಕ್ರಾಂತಿ ನಡೆಯುವಾಗ ಭಾರತ ಕೇವಲ ಬ್ಯಾಟು ಹಿಡಿದು ಆಡುವುದಷ್ಟೇ ತನ್ನ ಕರ್ತವ್ಯವೆಂದು ಭಾವಿಸಿತ್ತಷ್ಟೇ.
ನಮ್ಮ ಶೂನ್ಯ ಕಾಣಿಕೆ ಕೇವಲ ತಂತ್ರಜ್ಞಾನಕ್ಕಷ್ಟೇ ಸೀಮಿತವಾಗಿಲ್ಲ. ಆಟದಲ್ಲಿ ಒಂದೊಳ್ಳೆ ಪ್ರಯೋಗಕ್ಕೂ ನಾವು ಕಾರಣರಾಗಿಲ್ಲ. ಎಷ್ಟೋ ಸಲ ನಮಗಿಂತ ಆ ಪುಟ್ಟ ಪಾಕಿಸ್ತಾನವೇ ಪರ್ವಾಗಿಲ್ಲ ಅಂತ ಶತ್ರು ರಾಷ್ಟ್ರಕ್ಕೆ ಶಹಬ್ಬಾಸ್ ಹೇಳಲು ಮನಸ್ಸು ಮೃದುಗೊಳ್ಳುತ್ತದೆ. ಅಲ್ಲೊಬ್ಬ ಹನೀಫ್ ಮೊಹ್ಮದ್ ರಿವರ್ಸ್ ಸ್ವೀಪ್ ಪರಿಚಯಿಸುತ್ತಾನೆ. ಜಾವೇದ್ ಮಿಯಾಂದಾದ್ ಅದನ್ನು ಪರಿಪೂರ್ಣವಾಗಿ ಜಗತ್ತಿಗೆ ಮುಟ್ಟಿಸುತ್ತಾನೆ. ಸ್ಪೀಡಿನಲ್ಲಿ ರಿವರ್ ಸ್ವಿಂಗ್ ಮಾಡಿದ ಪಾಕಿನ ಸರ್ಫ್‌ರಾಜ್ ನವಾಜ್ ಬಹುಶಃ ಇವತ್ತು ನಮ್ಮ ಇಶಾಂತ್ ಶರ್ಮಾಗೂ ಗೊತ್ತಿರಲಿಕ್ಕಿಲ್ಲ. ದೂಸ್ರಾ ಎಸೆದು ಕ್ರಾಂತಿ ಮಾಡಿದ ಸಕ್ಲೇನ್ ಮುಸ್ತಾಕ್ ಈಗ ಹರ್ಭಜನ್ ಸಿಂಗ್ ಎಸೆತದ ಹಿಂದೆ ಕಾಣಿಸುತ್ತಾನೆ. ವಾಸೀಂ ಅಕ್ರಮ್‌ನ ಸ್ಲೋ ಬೌನ್ಸರ್, ಶೋಯೇಬ್ ಅಖ್ತರ್‌ನ ವೇಗದ ಟ್ರಿಕ್ಸ್‌ಗಳು ರಾವಲ್ಪಿಂಡಿಯಿಂದಲೇ ಹೊರಡುತ್ತವೆ.
ಭಾರತದಲ್ಲಿ ಹುಟ್ಟಿದ ಕ್ರೀಡೆಗಳು ಯಾಕಿವತ್ತು ಉದ್ಧಾರ ಆಗುತ್ತಿಲ್ಲ ಎನ್ನುವುದಕ್ಕೂ ಇಲ್ಲೇ ಕಾರಣ ಸಿಗುತ್ತದೆ. ನಮಗೆ ಆಟ ಮಾತ್ರ ಸಾಕಷ್ಟೇ. ಅದರ ಏಳ್ಗೆ, ತಾಂತ್ರಿಕತೆ ಬಗ್ಗೆ ತಲೆಬಿಸಿ ಬೇಡ. ಬಹುಶಃ ಇಂಗ್ಲೆಂಡು, ಆಸ್ಟ್ರೇಲಿಯಾ ಇದೇ ರೀತಿ ಯೋಚಿಸಿದ್ದಿದ್ದರೆ ಇವತ್ತಿಗೂ ಕ್ರಿಕೆಟ್ ಟೆಸ್ಟಿಗಷ್ಟೇ ಸೀಮಿತವಾಗಿರುತ್ತಿತ್ತು. ಬೇರಾವ ಕ್ರೀಡೆಗೂ ಇಲ್ಲದ ಮೂರು ಸ್ವರೂಪಗಳು (ಟೆಸ್ಟ್, ಒನ್‌ಡೇ, ಟಿ20) ಇಂದು ಕ್ರಿಕೆಟ್ಟಿಗಿದೆ. ಅದರಲ್ಲೂ ಐಪಿಎಲ್ ಜನಪ್ರಿಯತೆಯ ಜಾತ್ರೆ. 10 ಕೋಟಿ ಜನ ಇದನ್ನು ವೀಕ್ಷಿಸುತ್ತಿದ್ದಾರೆ. ಪ್ರಚಾರದ ಹಕ್ಕು ಪಡೆದ ಚಾನೆಲ್‌ಗಳೇ 15 ಸಾವಿರ ಕೋಟಿ ಆದಾಯ ಪಡೆಯುತ್ತವೆ. ಇಲ್ಲಿ 5 ಸೆಕೆಂಡಿನ ಜಾಹೀರಾತಿಗೆ 8-10 ಲಕ್ಷ ರುಪಾಯಿ. ಅದೇ ನಮ್ಮ ಹಾಕಿ ಪಂದ್ಯಗಳಲ್ಲಾದರೆ 30 ಸಾವಿರ ರುಪಾಯಿ!  ಅಂದರೆ ನಾವು ಚೆನ್ನಾಗಿ ಆಡಬಲ್ಲೆವು. ಕ್ರಿಕೆಟ್‌ಗೆ ಅದ್ಧೂರಿ ಮಾರುಕಟ್ಟೆ ಒದಗಿಸಬಲ್ಲೆವು. ಇವೆರಡೇ ನಮ್ಮ ಕೈಯಲ್ಲಿ ಸಾಧ್ಯವಾಗಿದ್ದು. ಅಮೆರಿಕದ ರೆಸ್ಲಿಂಗ್ ಸಂಸ್ಥೆ ನಡೆಸುತ್ತಿರುವ 'ಡಬ್ಲ್ಯುಡಬ್ಲ್ಯುಇ'ಗೂ ಈ ಐಪಿಎಲ್‌ಗೂ ಅಂಥದ್ದೇನೂ ವ್ಯತ್ಯಾಸ ಇಲ್ಲ. ಅದೂ ಫಿಕ್ಸಿಂಗ್ ಮ್ಯಾಚೇ. ಈಗ ಶಾರ್ಜಾದಲ್ಲಿ ದಾವೂದ್ ಇಬ್ರಾಹಿಂ ಕಾಲು ಬುಡದಲ್ಲೇ ನಡೆಯುತ್ತಿರುವ ಐಪಿಎಲ್‌ನ ಒಳಒಪ್ಪಂದ ಯಾರಿಗೆ ಗೊತ್ತು? ಫಿಕ್ಸಿಂಗ್ ಅಪಾಯದಿಂದ ಐಪಿಎಲ್ ಪಾರಾಗದಿದ್ದರೆ ಕ್ರಿಕೆಟ್ಟನ್ನು ಕೆಡಿಸಿದ ಕ್ರೆಡಿಟ್ಟಷ್ಟೇ ಭಾರತಕ್ಕೇ ಸಲ್ಲುವಂಥದ್ದು.
ದಾಖಲೆಗೆ ಸಚಿನ್ನು, ಮೈಕ್ ಮುಂದೆ ರವಿಶಾಸ್ತ್ರಿ, ಐಪಿಎಲ್‌ನ ಮಾರುಕಟ್ಟೆ... ಇಷ್ಟನ್ನೇ ಕ್ರಿಕೆಟ್ ಸಾಧನೆ ಎನ್ನಲಾಗದು. ಆಟವನ್ನು ಅಧ್ಯಯನಿಸುವ ಮನಸ್ಸೂ ನಮ್ಮದಿರಬೇಕು. ಆಟದ ಹಿಂದೆ ನಿಂತೂ ಶ್ರಮಿಸಬೇಕು. ತಂತ್ರಜ್ಞಾನಗಳೇ ಪಂದ್ಯ ಆಯೋಜಿಸುವ ಈ ದಿನಗಳಲ್ಲಿ ನಾವು ಕೇವಲ ಕಾರ್ಮಿಕರಾಗಿದ್ದೇವಷ್ಟೇ. ಹೂಡಿಕೆದಾರರಾಗಿದ್ದೇವಷ್ಟೇ. ಬಹುಶಃ ಭಾರತದಲ್ಲೇ ಕ್ರಿಕೆಟ್ ಹುಟ್ಟಿದ್ದಿದ್ದರೆ ಆ ಆಟ ಇಷ್ಟು ಅಬ್ಬರಿಸುತ್ತಿರಲಿಲ್ಲ. ಕಬ್ಬಡ್ಡಿ ಪಂದ್ಯಗಳಂತೆ ಮಾಮೂಲಿಯಾಗಿರುತ್ತಿತ್ತು.
ಇದು ನಮ್ಮ ನೈಜ ಬಡತನ!

- ಕೀರ್ತಿ ಕೋಲ್ಗಾರ್
kolgarkeerthi@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.