ರೆಡ್ಡಿ ಗ್ಯಾರೇಜ್ ಸ್ಟೋರಿ
ಅವರಿಗೆ ವಾಹನದಲ್ಲೇ 'ಪ್ರಾಣಿಶಾಸ್ತ್ರ' ಕಂಡಿತು. ನಟ್ ಬೋಲ್ಟ್ ಬಗ್ಗೆ ಅಲ್ಪಜ್ಞಾನವೂ ಇರದಿದ್ದ ಪ್ರಾಣಿಶಾಸ್ತ್ರದ ಮೇಷ್ಟ್ರು ಗ್ಯಾರೇಜಿನಲ್ಲಿ ...

ಅವರಿಗೆ ವಾಹನದಲ್ಲೇ 'ಪ್ರಾಣಿಶಾಸ್ತ್ರ' ಕಂಡಿತು. ನಟ್ ಬೋಲ್ಟ್ ಬಗ್ಗೆ ಅಲ್ಪಜ್ಞಾನವೂ ಇರದಿದ್ದ ಪ್ರಾಣಿಶಾಸ್ತ್ರದ ಮೇಷ್ಟ್ರು ಗ್ಯಾರೇಜಿನಲ್ಲಿ ಸ್ಪ್ಯಾನರ್ ಹಿಡಿದು ಕುಳಿತಾಗ ಲೋಕವೇನು ತಲೆಕೆಳಗಾಗಲಿಲ್ಲ. ಆ ಅಶೋಕ್ ರೆಡ್ಡಿಯವರೇ ಮುಂದೆ ಆಟೊಮೊಬೈಲ್ ಚಕ್ರವರ್ತಿಯಾದರು. 'ಎಲ್ಲವೂ ಮುಗಿಯಿತು' ಎಂದು ತಲೆ ಮೇಲೆ ಕೈಹೊತ್ತು ಕೂರುವ ಲಕ್ಷಾಂತರ ನಿರುದ್ಯೋಗಿಗಳಿಗೆ, ವ್ಯವಸ್ಥೆಯನ್ನು ಬೈಯುತ್ತಾ ಕೂರುವ ಯುವಕರಿಗೆ ಮಾದರಿಯಾಗಿ ನಿಂತರು. ಸರ್ಕಾರಿ ಕಚೇರಿಗಳಲ್ಲಿ ರು. 10 ಲಂಚಕ್ಕೂ ಕೈಯೊಡ್ಡುವ ಭ್ರಷ್ಟರಿಗೆ ಪಾಠವೇ ಆಗಿಬಿಟ್ಟರು.
ಚಿಂತಾಮಣಿ ಮೂಲದ ಅಶೋಕ ರೆಡ್ಡಿ ಅಂದೊಮ್ಮೆ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ಸಂದರ್ಭ. ಎಕ್ಸಾಂ ನಡೆಯುತ್ತಿತ್ತು. ನಕಲು ಹೊಡೆಯುತ್ತಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಹಿಡಿದು ಪ್ರಾಂಶುಪಾಲರ ಕೊಠಡಿಗೆ ಕರೆದೊಯ್ದರೆ, ಆವಯ್ಯ ಅವರಿಬ್ಬರಿಗೆ ತನ್ನ ಕೋಣೆಯಲ್ಲೇ ಟೇಬಲ್ಕುರ್ಚಿ ನೀಡಿ, ಸತ್ಕರಿಸಿ ಬರೆಸಿದ್ದ! ಬೇಸತ್ತ ಅಶೋಕ ರೆಡ್ಡಿ ಇಂಥ ಭ್ರಷ್ಟ ವ್ಯವಸ್ಥೆಯಲ್ಲಿ ಕೆಲಸ ಮಾಡುವುದಿಲ್ಲ ಎಂದು ಅಂದೇ ಕೆಲಸಕ್ಕೆ ರಾಜೀನಾಮೆ ನೀಡಿ ಮನೆಗೆ ಬಂದರು. ಮನೆಯಲ್ಲಿ ಅಂಗವಿಕಲ ಹೆಂಡತಿ, ಪುಟ್ಟ ಮಗುವಿನ ಅಸಹಾಯಕ ನೋಟ ಸ್ವಾಗತಿಸಿತ್ತು. ಆದರೆ, ಧೃತಿಗೆಡದೆ ಬೆಂಗಳೂರಿನ ಪೆಟ್ರೋಲ್ ಬಂಕ್ವೊಂದರಲ್ಲಿ ಕೂಲಿ ಕೆಲಸಕ್ಕೆ ಸೇರಿದ ಈ ಸ್ವಾಭಿಮಾನಿ, ಇಂದು ಬ್ಯಾಟರಿ ಚಾಲಿತ ಮೋಟರ್ ಬೈಕ್ ತಯಾರಕ!
'ಖುಷಿ' ಇವರೆದುರು ಹೋದರೆ, 'ಈ ಪ್ರಚಾರ ಅಥವಾ ಹೊಗಳಿಕೆಯನ್ನು ನಾನು ನಂಬುವುದಿಲ್ಲ. ಇದೇ ಕಾರಣದಿಂದ ಕಳೆದ 30 ವರ್ಷಗಳಿಂದ ನಾನು ಯಾವುದೇ ಪ್ರಚಾರಕ್ಕೆ ಮಾಧ್ಯಮದ ಬಳಿ ಹೋಗಿಲ್ಲ, ನನ್ನನ್ನು ಬಿಟ್ಟುಬಿಡಿ' ಎಂದು ಕೊಂಚ ಸಂಕೋಚದಿಂದಲೇ ಮಾತು ಪ್ರಾರಂಭಿಸಿದರು ಅಶೋಕ್ ರೆಡ್ಡಿ...
ಸರ್ಕಾರಿ ಕೆಲಸಕ್ಕೆ ಗುಡ್ಬೈ
ಎರಡು ವರ್ಷದವನಾಗಿದ್ದಾಗ ಅಪ್ಪನ ಕಳೆದುಕೊಂಡ ಅಶೋಕ್ ರೆಡ್ಡಿ ಚಿಂತಾಮಣಿ ಸರ್ಕಾರಿ ಶಾಲೆಗಳಲ್ಲಿ ಅಮ್ಮನ ಆರೈಕೆಯಲ್ಲಿ ಕಷ್ಟ ಪಟ್ಟು ಓದು ಮುಗಿಸಿದ್ರು. ಸ್ವಂತ ನೋಟ್ಬುಕ್ ಕೂಡಾ ಖರೀದಿಸಲು ಸಾಮರ್ಥ್ಯ ಇರದ ಸಂದರ್ಭದಲ್ಲಿ ಅಲ್ಲಲ್ಲಿ ಬಿದ್ದಿರುತ್ತಿದ್ದ ಪತ್ರಿಕೆಗಳ ಪುಟದಲ್ಲಿ ನೋಟ್ ಬರೆದುಕೊಂಡು ಅಕ್ಷರಾಭ್ಯಾಸ ಮಾಡುತ್ತಿದ್ದರು. ಕೊನೆಗೂ ಬಿಎಸ್ಸಿ, ಎಂಎಸ್ಸಿ ಮುಗಿಸಿ ಚಿಂತಾಮಣಿ ಕಾಲೇಜೊಂದರಲ್ಲಿ ಪ್ರಾಣಿಶಾಸ್ತ್ರ ಉಪನ್ಯಾಸಕರಾಗಿ ವೃತ್ತಿ ಬದುಕು ಆರಂಭಿಸಿದ ರೆಡ್ಡಿ, ಅಲ್ಲಿಯೇ ಪ್ರಾಧಾಪ್ಯಕರಾಗಿ 7 ವರ್ಷ ಕಳೆದರು. ಆಗಲೇ ರಾಜೀನಾಮೆ ಪ್ರಸಂಗ ನಡೆದದ್ದು. ನಂತರ ಬೆಂಗಳೂರಿಗೆ ಬಂದು ಸಣ್ಣ ಪುಟ್ಟ ಕಂಪನಿಗಳಲ್ಲಿ ಒಂದೆರಡು ತಿಂಗಳು ಕೂಲಿ ಕೆಲಸ ಮಾಡಿದರು. ಇದಾದ ಬಳಿಕ 'ಖೋಡೇಸ್'ನಲ್ಲಿ ಕೆಲಸಕ್ಕೆ ಸೇರಿದರು. ಆದರೆ ಆ ಮದ್ಯ ಹಾಗೂ ಮದ್ಯದಂಗಡಿ ಎರಡನ್ನೂ ದ್ವೇಷಿಸುತ್ತಿದ್ದ ರೆಡ್ಡಿ, ವರ್ಷದ ಬಳಿಕ ಮತ್ತೊಬ್ಬರ ಮನೆ ಹಾಳು ಮಾಡುವ ಉದ್ಯೋಗವೇ ಬೇಡ ಎಂದು ಅಲ್ಲಿಂದಲೂ ದೂರವಾಗಿ ಗ್ಯಾರೇಜ್ ಆರಂಭಿಸುವತ್ತ ತಲೆ ಓಡಿಸಿದರು.
ಗ್ಯಾರೇಜ್ ವಿಚಾರದಲ್ಲಿ ನಿರಕ್ಷರಕುಕ್ಷಿಯಾಗಿದ್ದ ರೆಡ್ಡಿ ಅವರಿಗೆ ಮೆಕ್ಯಾನಿಕ್ಗೆ ಸಂಬಂಧಿಸಿದ ಕೆಲಸ ಕಲಿಯುವುದೇ ದೊಡ್ಡ ಸಾಹಸವಾಗಿತ್ತು. ಯಾವುದಾದರೂ ಗ್ಯಾರೇಜ್ ಸೇರಿಕೊಂಡು ಕೆಲಸ ಕಲಿಯೋಣವೆಂದರೆ ಎಂಎಸ್ಸಿ ಓದಿದ 'ಮೂರ್ಖ'ನಿಗೆ ಯಾರೂ ಅಂಥ 'ಜುಜುಬಿ' ಕೆಲಸ ಕೊಡುತ್ತಿರಲಿಲ್ಲ! ಎಸ್ಸೆಸ್ಸೆಲ್ಸಿಯಲ್ಲಿ ಫೇಲಾಗಿ ಬೆಂಗಳೂರಿಗೆ ಓಡಿ ಬಂದಿದ್ದೇನೆ ಎಂದು ಸುಳ್ಳು ಹೇಳಿ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ನಲ್ಲಿ ನಾಲ್ಕು ತಿಂಗಳು ಕೆಲಸ ಮಾಡಿ ಗ್ಯಾರೇಜ್ ಕೆಲಸಕ್ಕೆ ಬೇಕಾದ 'ಅ, ಆ, ಇ, ಈ' ಕಲಿತರು. ಬಳಿಕ ರು. 75 ಸಾವಿರ ಸಾಲ ಮಾಡಿ ಸರ್ವೀಸ್ ಸ್ಟೇಷನ್ ತೆರೆದು ಸ್ವತಃ ತಾವೇ ಕೂಲಿಯಾಗಿ ದುಡಿಯುತ್ತಿದ್ದರು. ಒಂದು ಕೂಲಿಯನ್ನು ಉಳಿಸಬಹುದು ಎಂಬ ಕಾರಣದಿಂದ ಗ್ಯಾರೇಜ್ ಕೆಲಸಗಾರರ ಬಟ್ಟೆಯನ್ನೇ ಹಾಕಿ ಗಾಡಿಯನ್ನು ತೊಳೆಯುತ್ತಿದ್ದರು. ಇದರಿಂದ ಸುಮಾರು ವರ್ಷಗಳ ಕಾಲ ಗ್ಯಾರೇಜ್ನ ಗ್ರಾಹಕರಿಗೆ ಮಾಲೀಕರು ಯಾರು ಎಂಬ ವಿಚಾರವೇ ತಿಳಿದಿರಲಿಲ್ಲ!
13 ವರ್ಷ ಗ್ಯಾರೇಜ್ ಸಹವಾಸದ ಬಳಿಕ ಬದಲಾವಣೆಗೆ ಬಯಸುತ್ತಿದ್ದರು. ಬೆಂಗಳೂರಿನಲ್ಲಿ ನಡೆದ ಆಟೋ ಶೋ ಒಂದರಲ್ಲಿ ಪೆಟ್ರೋಲ್ ಎಲ್ಪಿಜಿ ಕನ್ವರ್ಟರ್ ಸಂಸ್ಥೆಯಲ್ಲಿ ವಿವರ ಪಡೆದು ಇಟಲಿ ಸಂಸ್ಥೆಗೆ 10ಕ್ಕೂ ಅಧಿಕ ಫ್ಯಾಕ್ಸ್ ಕಳುಹಿಸಿದರೆ, ಇಂಗ್ಲಿಷ್ ಬಾರದವರಿಂದ ಉತ್ತರವೇ ಬರಲಿಲ್ಲ. ವಿಳಾಸ ಹುಡುಕಿಕೊಂಡು ಇಟಲಿಗೆ ಹೋಗಿ ಕಷ್ಟಪಟ್ಟು ಡೀಲರ್ಷಿಪ್ ಪಡೆದ ರೆಡ್ಡಿ, ಭಾರತದಾದ್ಯಂತ ಕನ್ವರ್ಟರ್ಗಳನ್ನು ಮಾರಲು ಆರಂಭಿಸಿದರು. ಆದರೆ ಗ್ಯಾರೇಜ್ ಮೇಲಿನ ಪ್ರೀತಿಯ ಕಾರಣದಿಂದ ಮೂರೇ ವರ್ಷಕ್ಕೆ ಅದರಿಂದ ಮತ್ತೆ ವಿಮುಖರಾದರು.
ಬ್ಯಾಟರಿಚಾಲಿತ ವಾಹನದತ್ತ...
ಆ ಸಂದರ್ಭದಲ್ಲಿ ದೇಶದಲ್ಲೆಲ್ಲ ಪರಿಸರ ಮಾಲಿನ್ಯ ಹಾಗೂ ಪೆಟ್ರೋಲಿಯಂ ಉತ್ಪನ್ನ ಬಳಕೆ ಕುರಿತಂತೆ ದೊಡ್ಡ ಕೂಗು ಎದ್ದಿತ್ತು. ದೆಹಲಿಯಲ್ಲಿ ನಡೆದ 'ಆಟೋ ಎಕ್ಸ್ಪೋದಲ್ಲಿ ಚೀನಾ ಕಂಪನಿ ಎಲೆಕ್ಟ್ರಿಕ್ ಬೈಕ್ ನೋಡಿದಾಗ ಅದರ ತಯಾರಿಕೆ ಬಗ್ಗೆ ಆಸಕ್ತಿ ಬೆಳೆಯಿತು. ಇಂಗ್ಲಿಷ್ ಬರದ ಚೀನಿಯರ ಗೆಳೆತನ ಸಂಪಾದಿಸಿ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದರು. ಒಂದು ವಾರಗಳ ಕಾಲ ನಡೆದ 'ಆಟೋ ಎಕ್ಸ್ಪೋ'ದಲ್ಲಿ ಚೀನಿ ಅಂಗಡಿಯಲ್ಲೇ ಕುಳಿತು ದಿನ ಕಳೆದರು. ಇವರ ಆಸಕ್ತಿಗೆ ಮಾರು ಹೋದ ಕಂಪನಿಯವರು ಒಂದು ಎಲೆಕ್ಟ್ರಿಕ್ ಬೈಕ್ನ್ನೇ ರೆಡ್ಡಿ ಅವರಿಗೆ ಉಡುಗೊರೆಯಾಗಿ ನೀಡಿದರು ಎಂದರೆ ಇವರ ಡೆಡಿಕೇಶನ್ ಎಂಥದ್ದಿರಬಹುದು?
ಎಲೆಕ್ಟ್ರಿಕ್ ವಾಹನಗಳ ಕುರಿತ ಮಾಹಿತಿ ಪಡೆಯಲೆಂದೇ ಜರ್ಮನಿ ಆಟೋ ಶೋಗೂ ಹೋಗಿ ಬಂದರು. ಆದರೆ ಗ್ಯಾರೇಜ್ ಮೇಲಿನ ಪ್ರೀತಿಯ ಕಾರಣದಿಂದ ವಾಹನ ತಯಾರಿಕೆ ಜವಾಬ್ದಾರಿಯನ್ನು ಮಗನ ಕೈಗೆ ನೀಡಿ ಸುಮ್ಮನಾಗಿಬಿಟ್ಟರು. ಅಂದು ಕಾಲೇಜಿನಿಂದ ಹೊರಬರದೆ, ಅಂಥ ಅಕ್ರಮಗಳನ್ನು ಪ್ರೋತ್ಸಾಹಿಸುತ್ತ ಕುಳಿತಿದ್ದರೆ ನೀವು ಇವತ್ತು ನನ್ನನ್ನು ಮಾತನಾಡಿಸುವ ಗೋಜಿಗೂ ಬರುತ್ತಿರಲಿಲ್ಲ ಎನ್ನುತ್ತಾರೆ ಅಶೋಕ್ ರೆಡ್ಡಿ.
ನೌಕರನೇ ಮಾಲೀಕ!
ಗ್ಯಾರೇಜ್ ಅಭಿವೃದ್ಧಿಯ ಜತೆಗೆ ಜವಾಬ್ದಾರಿಯನ್ನು ಸಮನಾಗಿ ಹಂಚಲು ಅಶೋಕ್ ರೆಡ್ಡಿ ಹೊಸದೊಂದು ವ್ಯವಸ್ಥೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ದುಡಿಮೆಯ ಮೂರನೇ ಒಂದು ಭಾಗವನ್ನು ಕೂಲಿಗಳಿಗೆ ಕೊಡುತ್ತಿದ್ದಾರೆ. ಇನ್ನೊಂದು ಭಾಗವನ್ನು ಗ್ಯಾರೇಜ್ ನಿರ್ವಹಣೆಗೆ ಹಾಗೂ ಉಳಿದ ಭಾಗವನ್ನು ಮನೆಗೆ ಕೊಂಡೊಯ್ಯುತ್ತಾರೆ. ಇದರಿಂದ ಸಂಸ್ಥೆಯ ಪ್ರತಿಯೊಬ್ಬ ಕೂಲಿಗೂ ತನ್ನದೇ ಎಂಬ ಭಾವನೆ ಮೂಡುತ್ತದೆ. ಮತ್ತೊಂದೆಡೆ ಪ್ರತಿಯೊಬ್ಬ ನೌಕರನಲ್ಲೂ ಸ್ವಾಭಿಮಾನ ಮೂಡಲು ಸಹಾಯವಾಗುತ್ತದೆ ಎನ್ನುವುದು ಅಶೋಕ್ ಅವರ ಅಭಿಪ್ರಾಯ. ಇದೇ ನಿಯಮವನ್ನು ಮನೆಯಲ್ಲೂ ಜಾರಿಗೆ ತಂದಿರುವ ಅವರು ಅಂಗವಿಕಲ ಹೆಂಡತಿಗೂ ಸ್ವಾಭಿಮಾನದ ಬದುಕು ಕಟ್ಟಿಕೊಟ್ಟಿದ್ದಾರೆ. ಹೆಂಡತಿಯ ಜೀವನಾಧಾರಕ್ಕಾಗಿ ಹುಡುಗಿಯರ ವಸತಿ ನಿಲಯವನ್ನು ಮಾಡಿಕೊಟ್ಟಿದ್ದಾರೆ.
-ರಾಜೀವ ಹೆಗಡೆ
meet.hegde@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


