ಲಾ ಪಾಯಿಂಟ್
-ಕುಮಾರ್, ಬೆಂಗಳೂರು
ನಮ್ಮ ತಾಯಿಯವರಿಗೆ ಎರಡು ಗಂಡು ಮತ್ತು ಎರಡು ಹೆಣ್ಣುಮಕ್ಕಳು ಇದ್ದು, ಅವರ ಹೆಸರಿನಲ್ಲಿ 20 ಗುಂಟೆ ಜಮೀನು ಇದೆ. ಈ ಜಮೀನನ್ನು ಅವರ ತಂದೆ ಅಂದರೆ, ತಾಯಿಯವರ ತಂದೆ ದಾನ ಕೊಟ್ಟಿದ್ದು ಎಂದು ಹೇಳುತ್ತಾರೆ. ಇದಕ್ಕೆ ಆಧಾರವಾಗಿ ಆರ್-ಟಿ-ಸಿ ಮಾತ್ರ ಇದೆಯೇ ಹೊರತು ದಾನದ ಬಗ್ಗೆ ಯಾವುದೇ ಪತ್ರ ಇರುವುದಿಲ್ಲ. ಈಗ ನಮ್ಮ ತಾಯಿಯವರು ನನ್ನ ಅಣ್ಣನ ಜತೆ ಇರುತ್ತಾರೆ. ಹಾಗಾಗಿ ನನ್ನ ತಾಯಿಯವರು ಅವರಿಗೆ ಸೇರಿದ ಜಮೀನನ್ನು ನನ್ನ ಅಣ್ಣನಿಗೆ ದಾನವಾಗಿ ನೀಡಲು ಸಾಧ್ಯವೆ? ಅಥವಾ ಬೇರೆಯವರಿಗೆ ಮಾರಾಟ ಮಾಡಬಹುದಾ?
- ಹಿಂದೂ ಉತ್ತರಾಧಿಕಾರ ಕಾಯ್ದೆ 1950, ಇದರ ಕಲಂ 14ರಂತೆ ನಿಮ್ಮ ತಾಯಿಗೆ ಆ ಆಸ್ತಿ ಹ್ಯಾಗೇ ಬಂದಿರಲಿ ಅದು ಅವರ ಸ್ವಂತ ಆಸ್ತಿಯಾಗಿದ್ದು, ಅದರ ಮೇಲೆ ಅವರಿಗೆ ಸಂಪೂರ್ಣ ಅಧಿಕಾರವಿರುತ್ತದೆ. ಆದರೆ ದಾನಪತ್ರ ಇರಲಿ, ಇಲ್ಲದಿರಲಿ ಅದರಲ್ಲಿ ಯಾವ ಮಕ್ಕಳಿಗೂ ಹಕ್ಕಿರುವುದಿಲ್ಲ. ಅವರು ಅದನ್ನು ದಾನವಾಗಿ ಕೊಡಲು ಅಥವಾ ಮಾರಾಟ ಮಾಡಲು ಸ್ವತಂತ್ರರು.
ಮನೆಯಲ್ಲಿ ನಿಮಗೂ ಹಕ್ಕಿದೆ
-ಸುಮಾ, ಬೆಂಗಳೂರು
ತಂದೆಗೆ ಎರಡು ಗಂಡು ಹಾಗೂ ಒಬ್ಬ ಹೆಣ್ಣು ಮಗಳು. ತಂದೆ 1992ರಲ್ಲಿ ಮರಣ ಹೊಂದಿದರು. ತಂದೆಯವರ ಸ್ವಯಾರ್ಜಿತ ಆಸ್ತಿಯಾದ ಮನೆಯ ಮೇಲೆ ಒಬ್ಬ ಅಣ್ಣ ಮಹಡಿ ಕಟ್ಟಿ ಬಾಡಿಗೆಗೆ ಕೊಟ್ಟು, ಅದರಿಂದ ಬರುವ ಬಾಡಿಗೆಯನ್ನು ತಾನೇ ತೆಗೆದುಕೊಳ್ಳುತ್ತಿದ್ದಾನೆ. ಇನ್ನೊಬ್ಬ ಅಣ್ಣ ನನ್ನ ತಾಯಿಯೊಡನೆ ಕೆಳಗಿನ ಮನೆಯಲ್ಲಿ ವಾಸವಾಗಿದ್ದಾನೆ. ನನ್ನ ಪ್ರಶ್ನೆಯೇನೆಂದರೆ, ತಂದೆಯವರ ಸ್ವಯಾರ್ಜಿತ ಆಸ್ತಿಯಾದ ಮನೆಯಲ್ಲಿ ಹಾಗೂ ಮೊದಲ ಮಹಡಿಯಿಂದ ಬರುವ ಬಾಡಿಗೆಯಲ್ಲಿ ನನಗೆ ಹಕ್ಕಿಲ್ಲವೇ?
- ಅಣ್ಣ ಕಟ್ಟಿದ ಮನೆ ಜಾಗ ಅವನದಲ್ಲವಾದ್ದರಿಂದ ಅವನು ಮನೆಯ ಒಡೆಯನಾಗುವುದಿಲ್ಲ. ಆದರೆ ಕಟ್ಟಲು ಅವಕಾಶ ಕೊಟ್ಟಿರುವುದರಿಂದ ಅದರ ಖರ್ಚನ್ನು ಎಲ್ಲರೂ ವಹಿಸಿಕೊಳ್ಳಬೇಕು. ನಂತರ ಬಾಡಿಗೆಗೆ ಹಕ್ಕು ಬರುತ್ತದೆ. ಒಟ್ಟು ಆಸ್ತಿಯಲ್ಲಿ ಎಲ್ಲರಿಗೂ ಹಕ್ಕು ಇದ್ದು ವಿಭಾಗ ಮಾಡುವಾಗ ಮೇಲೆ ಕಟ್ಟಿದ ಕಟ್ಟಡದ ಖರ್ಚನ್ನು ಎಲ್ಲರೂ ಸಮಾನವಾಗಿ ಹಂಚಿಕೊಳ್ಳಬೇಕು. ನಿಮ್ಮ ಒಪ್ಪಿಗೆ ಇಲ್ಲದೇ ಮನೆ ಮಾರಾಟ ಮಾಡಲಾಗದು.
ಮಗಳು ಹಾಗೂ ಮೊಮ್ಮಕ್ಕಳಿಗೆ ಸಮಪಾಲು
-ರೋಷನ್ ಜಮೀರ್, ಹಾವೇರಿ
ತಾತನವರಿಗೆ ಒಬ್ಬ ಮಗ ಹಾಗೂ ಒಬ್ಬಳು ಮಗಳು ಇದ್ದು, ಮಗ 1983ರಲ್ಲಿ ತೀರಿಕೊಂಡಿದ್ದಾರೆ. ನಮ್ಮ ತಾತ 1991ರಲ್ಲಿ ತೀರಿಕೊಂಡಿದ್ದಾರೆ. 1992ರಲ್ಲಿ ಪಂಚಾಯ್ತಿದಾರರ ಮುಂದೆ ತೀರ್ಮಾನವಾಗಿ ತಾತನ 5 ಎಕರೆ 4 ಗುಂಟೆ ಜಮೀನಿನಲ್ಲಿ ನಾವು 3 ಎಕರೆ 20 ಗುಂಟೆ ಹಾಗೂ ಉಳಿದ 1 ಎಕರೆ 24 ಗುಂಟೆಯನ್ನು ನಮ್ಮ ಅತ್ತೆಯವರಿಗೆ ನೀಡಲಾಯಿತು. ಈಗ ನನ್ನ ಅತ್ತೆಯವರು ಮುಸಲ್ಮಾನರ ಕಾನೂನಿನಂತೆ ತಮಗೇ ಎಲ್ಲ ಜಮೀನೂ ಬೇಕೆಂದು ದಾವಾ ಹಾಕಿದ್ದಾರೆ. ಇದು ಸರಿಯೇ? ನಾವೀಗ ಏನು ಮಾಡಬೇಕು?
- ಷರಿಯತ್ ಕಾನೂನಿನಂತೆ ಸುನ್ನಿ ಮುಸಲ್ಮಾನರೊಬ್ಬರು ಸತ್ತರೆ ಅವರ ಹೆಂಡತಿ ಬದುಕಿಲ್ಲದೇ ಇದ್ದರೆ, ಅವರ ಮಗಳು ಹಾಗೂ ತನ್ನ ಮಗನ ಮಗ ಬದುಕಿದ್ದರೆ ಆತನ ಮಗಳಿಗೂ, ಮಗನ ಮಗನಿಗೂ ಸಮಪಾಲು ಎಂದಿದೆ.
-ಎಚ್.ಆರ್. ಕಸ್ತೂರಿರಂಗನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

