ಖುಷಿ

ಸತ್ತ ನಂತರ ಹೊರ ಬಿತ್ತು ಸತ್ಯ

ಸತ್ತ ನಂತರ ಹೊರ ಬಿತ್ತು ಸತ್ಯ
Published On :

ಅಜ್ಜಿಗೆ ಒದಗಿದ್ದು ಸುಖಕರ ಸಾವು. ಬದುಕಿರುವಾಗ ಯಾವ ಪಾಪವನ್ನು ಮಾಡದೆ ಅವಳು ಪರಿಶುದ್ಧ ಬಾಳ್ವೆ ನಡೆಸಿರಬೇಕು. ಹಾಗಾಗಿಯೇ ಅವಳದು ಸುಖಕರ ಅಂತ್ಯ. ಆಗತಾನೆ ಮುಖ ತೊಳೆದುಕೊಂಡು ಮಲಗಿದ್ದಾಳೆ ಅನ್ನುವ ಹಾಗೆ ಅವಳ ಮುಖ ಶುಭ್ರವಾಗಿತ್ತು. ಅದರಲ್ಲಿ ಯಾವ ದುಃಖ, ದುರಿತ ಕಾಣುತ್ತಿರಲಿಲ್ಲ. ಅವಳ ಬೆಳ್ಳನೆಯ ಶರೀರವನ್ನು ಕಂಡವರು ಆ ದೇಹದಲ್ಲಿರುವುದು ಒಂದು ಪವಿತ್ರಾತ್ಮ ಎಂದು ಖಚಿತವಾಗಿ ನಂಬಿದ್ದರು. ಅಜ್ಜಿ ಯಾವ ಕಷ್ಟನಷ್ಟಗಳನ್ನು ಬದುಕಿನಲ್ಲಿ ಅನುಭವಿಸಲಿಲ್ಲ. ನೀತಿಯುತ ಜೀವನ ನಡೆಸಿದ್ದಕ್ಕಿರಬೇಕು ಅವಳಿಗೆ ಯಾವ ತೊಂದರೆಯೂ ಆಗದೆ ಸಾವು ಬಂತು. ತಪ್ಪು ಮಾಡಿಲ್ಲದ ಜೀವಕ್ಕೆ ಪಶ್ಚಾತ್ತಾಪದ ಅವಶ್ಯವೇನಿದೆ?
ಅವಳ ಮಂಚದ ಬಳಿ, ಕಾಲೂರಿ ಕುಳಿತ ವೃತ್ತಿಯ ನಿಯಮವನ್ನು ಸ್ವಲ್ಪವೂ ಬಗ್ಗಿಸದ ಅಥವಾ ಮುರಿಯದ ನ್ಯಾಯಾಧೀಶರ ಮಗ, ಧರ್ಮವನ್ನು ಕಟ್ಟುನಿಟ್ಟಾಗಿ ಆಚರಿಸುವ ಮಗಳು ಮಾರ್ಗರೇಟ್ ಮತ್ತು ಸಹೋದರಿ (ಸಿಸ್ಟರ್) ಯಲಾಲಿ ಅಳುತ್ತಾ ಕುಳಿತಿದ್ದರು. ಮಕ್ಕಳು ಚಿಕ್ಕವರಾಗಿದ್ದಾಗ ಅವರಿಗೆ ಏನೇ ಆಗಲಿ ನೀತಿ ನಿಯಮಗಳನ್ನು ಮುರಿಯಬಾರದು ಎಂದು ಅವಳು ಹೇಳಿ ಕೊಟ್ಟಿದ್ದಳು. ನೀತಿಯುತ ಜೀವನಕ್ಕೆ ಅವಳು ಹೆಚ್ಚು ಮಹತ್ವ ಕೊಟ್ಟಿದ್ದಳು. ಮಗ ನ್ಯಾಯಾಧೀಶನಾದ ಮೇಲೆ ಕಾನೂನು ಎಂಬ ಅಸ್ತ್ರವನ್ನು ಹಿಡಿದು ತಪ್ಪು ಮಾಡಿದವರಿಗೆ ದಯಾದಾಕ್ಷಿಣ್ಯವಿಲ್ಲದೆ ಶಿಕ್ಷೆ ವಿಧಿಸುತ್ತಿದ್ದರು. ಮಗಳು ಕಟ್ಟುನಿಟ್ಟಾದ ಕುಟುಂಬದಲ್ಲಿ ಸದ್ಗುಣಗಳನ್ನು ಬೆಳೆಸಿಕೊಂಡು, ಪುರುಷ-ದ್ವೇಷಿಯಾಗಿ, ದೇವರ ಪತ್ನಿಯಂತೆ ಸೇವೆಗೆ ನಿಂತಳು.
ಮಕ್ಕಳಿಗೆ ಅಪ್ಪನ ಬಗ್ಗೆ ಗೊತ್ತಿದ್ದು ಸ್ವಲ್ಪವೇ. ಅಪ್ಪ ತನ್ನ ಹೆಂಡತಿಯನ್ನು ಸುಖವಾಗಿ ಇಟ್ಟಿರಲಿಲ್ಲ ಅನ್ನುವುದಷ್ಟೇ ಗೊತ್ತು. ಸನ್ಯಾಸಿನಿಯಾಗಿದ್ದ ಸಹೋದರಿ ಮಂಚದಿಂದ ಇಳಿಬಿದ್ದ ತಾಯಿಯ ದಂತದಂಥ ಕೈಯನ್ನು ಹಿಡಿದು ಮುತ್ತಿಟ್ಟಳು. ಇಳಿಬಿದ್ದ ತಾಯಿಯ ಕೈ, ಶಿಲುಬೆಗೆ ಹಾಕಿದ ಕ್ರಿಸ್ತನ ವಿಗ್ರಹದ ಮೇಲೆ ಬಂದಿತ್ತು. ಅವಳು ಇನ್ನೊಂದು ಕೈ ಮಗ್ಗಲು ಹಾಸಿಗೆಯನ್ನು ಬಲವಾಗಿ ಹಿಡಿದುಕೊಂಡಿತ್ತು. ಬಾಗಿಲನ್ನು ಬಡಿಯುವ ಶಬ್ದ ಕೇಳಿ ಅಳುತ್ತಿದ್ದವರು ಆ ಕಡೆ ನೋಡಿದರು. ಬಂದವರು ಪಾದ್ರಿ. ಅವರು ಆಗ ತಾನೇ ಊಟ ಮುಗಿಸಿ ಬಂದಿದ್ದರು. ಊಟಕ್ಕೆ ಮುಂಚೆ ಕುಡಿದಿರಬೇಕು, ಹಾಗಾಗಿ ಮುಖ ಕೆಂಪಗಾಗಿತ್ತು. ದುಃಖದ ಮೋರೆ ಹಾಕಿಕೊಂಡಿದ್ದರೂ ಅದೊಂದು ಸೋಗು ಎಂದು ಗೊತ್ತು. ಯಾರಾದರೂ ಸತ್ತರೆ ತಾನೇ ಅವರು ಬದುಕುವುದು! ಅವರು ಎದೆಯ ಮೇಲೆ 'ಕ್ರಾಸ್‌' ಗುರುತು ಮಾಡಿಕೊಂಡು ಅಲ್ಲಿದ್ದವರಿಗೆ ಸಾಂತ್ವನ ಹೇಳಲು 'ಮಕ್ಕಳೇ, ಈ ದುಃಖದ ಸಮಯದಲ್ಲಿ ನಿಮಗೆ ಸಾಂತ್ವನ ಹೇಳಿ ನೆರವಾಗಲು ಬಂದೆ' ಎಂದರು. ಸಿಸ್ಟರ್ ಯುಲಾಲಿ ತಕ್ಷಣವೇ ಎದ್ದುನಿಂತು. 'ಫಾದರ್, ಮೊದಲು ನಾನು ನಿಮಗೆ ಧನ್ಯವಾದ ಹೇಳುತ್ತೇನೆ. ನಾನು ಮತ್ತು ನನ್ನ ಸಹೋದರ ಅಮ್ಮನ ಬಳಿ ಇನ್ನಷ್ಟು ಹೊತ್ತು ಕುಳಿತಿರಬೇಕು ಎನ್ನುವ ಇಚ್ಛೆ ಇದೆ. ಹೌದು, ಅಣ್ಣನ ಮಗಳು ಸ್ವಲ್ಪ ಹೊತ್ತು ನಮ್ಮೊಡನೆ ಏಕಾಂತವಾಗಿ ಅಮ್ಮನ ಪಕ್ಕದಲ್ಲೇ ಇರುತ್ತಾಳೆ' ಎಂದಳು. ಅವಳ ಕಣ್ಣುಗಳಿಂದ ಧಾರಾಕಾರವಾಗಿ ನೀರು ಹರಿಯಿತು.
'ಮಕ್ಕಳೇ, ನಿಮ್ಮಿಷ್ಟ' ಎಂದು ಹೇಳುತ್ತಾ ಫಾದರ್ ಹೊರಡಲು ಸಿದ್ಧರಾದರು. ಅವರಿಗೆ ಆದಷ್ಟು ಬೇಗ ಮಲಗುವ ಇಚ್ಛೆ, ಹೋಗುವಾಗ ಅವರು ಮೆಲುಧ್ವನಿಯಲ್ಲಿ 'ನಿಜವಾಗಿಯೂ ಆಕೆಯೊಬ್ಬ ಸಂತಳು' ಎಂದರು.
ಈಗ ಶವದ ಬಳಿ ಇರುವುದು ಮೂವರೇ, ಕಿಟಕಿಯ ಮೂಲಕ ಬರುತ್ತಿದ್ದ ತಂಗಾಳಿಯಲ್ಲಿ ಹುಲ್ಲು ಮತ್ತು ಮರದ ಎಲೆಗಳ ವಾಸನೆ. ಚಂದ್ರನ ಬೆಳಕು ಕಿಟಕಿಯ ಮೂಲಕ ಒಳಕ್ಕೆ ಹರಿದು ಬಂದಿತ್ತು. ಕಪ್ಪೆ ವಟಗುಟ್ಟುವ ಶಬ್ದ ಮತ್ತು ಮೂಲೆಯಲ್ಲಿ ಮೇಜಿನ ಮೇಲಿಟ್ಟಿದ್ದ ಗಡಿಯಾರದ 'ಟಿಕ್ ಟಿಕ್‌' ಶಬ್ದ ಬಿಟ್ಟರೆ ಇನ್ನಾವ ಶಬ್ದವೂ ಇಲ್ಲ. ರಾತ್ರಿ ಹಾರಾಡುವ ಕೀಟವೊಂದು ಹಾಲ್ ಒಳಗೆ ಬಂದು ಗೋಡೆಗೆ ಬಡಿಯಿತು.
ಅನಂತ ಶಾಂತಿ, ದಿವ್ಯ ವ್ಯಾಕುಲತೆ, ನೀರವ ಪ್ರಸನ್ನತೆ ಶವದ ಸುತ್ತಲೂ ಆವರಿಸಿದ್ದು ಅದು ಹೊರ ವಾತಾವರಣಕ್ಕೆ ಹರಡಿ ಪ್ರಕೃತಿಯನ್ನು ಪ್ರಶಾಂತಗೊಳಿಸಿತ್ತು.
ನ್ಯಾಯಾಧೀಶರು ಇನ್ನೂ ಮೊಣಕಾಲೂರಿ ಮಂಚದ ಬಳಿ ಕುಳಿತಿದ್ದರು. ಅವರು ಶವದ ಮೇಲೆ ಹಾಕಿದ್ದ ಮಗ್ಗಲು ಹಾಸಿಗೆ ಮೇಲೆ ಹಣೆಯಿಟ್ಟು ಎದೆಯೊಡೆಯುವಂತೆ 'ಮಮ್ಮಾ ಮಮ್ಮಾ' ಎಂದು ಅರಚುತ್ತಿದ್ದರು. ಸಿಸ್ಟರ್ ನೆಲದ ಮೇಲೆ ಉರುಳಿ, ಮರದ ಹಲಗೆಯ ಮೇಲೆ ತಲೆಯನ್ನು ಚಚ್ಚುತ್ತಾ, ಮೂರ್ಛೆರೋಗ ಬಂದವರು ಬಿದ್ದು ಕೈಕಾಲು ಆಡಿಸುವಂತೆ ಇವಳೂ ಆಡಿಸುತ್ತಾ 'ಏಸು, ಏಸು, ಮಮ್ಮಾ...' ಎಂದು ಕೂಗುತ್ತಾ ಅಳುತ್ತಿದ್ದಳು.
ಸ್ವಲ್ಪ ಕಾಲ ಕಳೆಯಿತು. ಆರ್ಭಟದಿಂದ ಬೀಳುತ್ತಿದ್ದ ಮಳೆ ಸ್ವಲ್ಪ ಹೊತ್ತು ಕಳೆದ ನಂತರ ತಣ್ಣಗಾಗುವಂತೆ. ಅವರ ಬಿರುಸಿನ ರೋದನ ಕಡಿಮೆಯಾಗತೊಡಗಿತು. ಅವರು ಎದ್ದು ನಿಂತು ಕ್ಷಣಕಾಲ ಶವವನ್ನು ವೀಕ್ಷಿಸಿದರು. ಆಕೆ ಬದುಕಿದ್ದಾಗ ಆಕೆಯೊಡನೆ ಕಳೆದ ರಸನಿಮಿಷಗಳು ಅವರ ಜ್ಞಾಪಕಕ್ಕೆ ಬಂದು, ನಡೆದ ಪ್ರಸಂಗಗಳು, ಮಾತು, ನಗು, ಅವರ ಮನದಲ್ಲಿ ಪುನರಾವೃತ್ತಿಗೊಂಡವು. ಯಾವುದೋ ಮುಖ್ಯ ವಿಷಯವನ್ನು ಹೇಳುವಾಗ ಆಕೆ ಕೈಯಾಡಿಸುತ್ತಿದ್ದ ಬಗೆ, ಮಾತಾಡುವಾಗ ಉಪಯೋಗಿಸುತ್ತಿದ್ದ ನುಡಿಗಟ್ಟು, ಜಾಣ್ನುಡಿ ಇವೆಲ್ಲವನ್ನೂ ಅವರು ಮೆಲುಕುಹಾಕಿದರು.
ಆಕೆಯನ್ನು ಅವರು ತುಂಬಾ ಪ್ರೀತಿಸುತ್ತಿದ್ದರು. ಈಗ ತಾವು ಏಕಾಂಗಿಯಾಗಿದ್ದೇವೆ ಎಂದು ಅವರಿಗೆಲ್ಲ ಅನಿಸಿತು. ಅವರು ಚಿಕ್ಕವರಾಗಿದ್ದಾಗ ಆಕೆಯೇ ಅವರ ಮಾರ್ಗದರ್ಶಿ, ದೊಡ್ಡವರಾದ ಮೇಲೆ ಒಬ್ಬರನ್ನೊಬ್ಬರು ವಿಶ್ವಾಸದಿಂದ ಇರುವಂತೆ ಮಾಡಿದ್ದು ಆಕೆ. ಈಗ ಆಕೆ ಇಲ್ಲದೆ ಅವರು ಅನಾಥರಾಗಿದ್ದಾರೆ. ಹಿರಿಯಳೊಬ್ಬಳ ಸಂಪರ್ಕ ಕಡಿದು ಹೋಗಿದೆ.
ಸನ್ಯಾಸಿಯಾಗಿದ್ದ ತಂಗಿ ಅಣ್ಣನಿಗೆ ಹೇಳಿದಳು; 'ನಿನಗೆ ಅಮ್ಮನ ವಿಷಯ ಗೊತ್ತು. ಅವಳಿಗೆ ಹಿಂದೆ ಬಂದಿದ್ದ ಪತ್ರಗಳನ್ನು ಓದುವುದರಲ್ಲಿ ಅವಳಿಗೆ ಏನೋ ಖುಷಿ. ಆ ಪತ್ರಗಳೆಲ್ಲ ಅವಳ ಮೇಜಿನಲ್ಲಿವೆ. ಆ ಕಾಗದಗಳನ್ನು ನಾವು ಒಬ್ಬೊಬ್ಬರಾಗಿ ಓದೋಣ. ಅಮ್ಮ ಪರಿಚಯಸ್ತರ, ಅಜ್ಜ ಅಜ್ಜಿಯರ ವಿಷಯ ನಮಗೆ ಗೊತ್ತಾಗುತ್ತದೆ. ನಾವು ಯಾರನ್ನೂ ನೋಡಿಲ್ಲ, ಪರಿಚಯವಿಲ್ಲ. ಆದರೆ ಅವರ ಬಗ್ಗೆ ಆಗಾಗ ಅಮ್ಮ ಅಲ್ಪ ಸ್ವಲ್ಪ ಹೇಳಿದ್ದುಂಟು.
ಮೇಜಿನ ಸೆಳೆಖಾನೆಯಲ್ಲಿ ಹಳದಿ ಬಣ್ಣದ ಕಾಗದದಿಂದ ಮುಚ್ಚಿರುವ ಒಂದು ಡಜನ್ ಪ್ಯಾಕೆಟ್‌ಗಳಿದ್ದವು. ಅವುಗಳನ್ನು ಜೋಪಾನವಾಗಿ ಜೋಡಿಸಿಟ್ಟಿದ್ದಳು ಅವಳು. ಅವರು ಪತ್ರಗಳ ಪ್ಯಾಕೆಟ್‌ಗಳನ್ನು ಹಾಸಿಗೆಯ ಮೇಲೆ ಒದರಿದರು. ಒಂದು ಪ್ಯಾಕೆಟ್ ಮೇಲೆ 'ಫಾದರ್‌' ಎಂದು ಬರೆದಿತ್ತು. ಮೊದಲನೇ ಪತ್ರ 'ಮೈ ಡಾರ್ಲಿಂಗ್‌' ಎಂದು ಶುರುವಾಗಿತ್ತು. ಎರಡನೆಯದು 'ನನ್ನ ಸುಂದರಿಯಾಗಿರುವ ಸಣ್ಣ ಹುಡುಗಿಯೇ' ಎಂದು ಪ್ರಾರಂಭವಾಗಿತ್ತು. ಇನ್ನು ಕೆಲವು 'ನನ್ನ ಪ್ರೀತಿಯ ಮಗುವೇ' ಎಂದೂ, ನಂತರದಲ್ಲಿ 'ನನ್ನ ಮುದ್ದಿನ ಮಗಳೇ' ಎಂದು ಆರಂಭವಾಗಿತ್ತು. ನಂತರ ಸನ್ಯಾಸಿನಿ (ಸಿಸ್ಟರ್) ಸತ್ತವಳ ಇತಿಹಾಸವನ್ನು ಸತ್ತವಳಿಗೆ ಕೇಳಿಸುತ್ತಿದೆ ಅನ್ನುವ ಹಾಗೆ ನೆನಪಿಗೆ ಬರುವಂಥ ಪತ್ರಗಳನ್ನು ಗಟ್ಟಿಯಾಗಿ ಓದಲಾರಂಭಿಸಿದಳು. ನ್ಯಾಯಾಧೀಶರು ತಂಗಿ ಓದುವುದನ್ನು ಕೇಳುತ್ತಾ ತಾಯಿಯ ಮುಖವನ್ನು ವೀಕ್ಷಿಸುತ್ತಿದ್ದರು. ಚಲನೆ ಇಲ್ಲದ ಶವ ಸಂತೋಷದಲ್ಲಿರುವ ಹಾಗೆ ಕಾಣಿಸುತ್ತಿತ್ತು.
ಓದುವುದನ್ನು ನಿಲ್ಲಿಸಿ ಸಿಸ್ಟರ್ ಯೂಲಾಲಿ ಹೇಳಿದಳು; 'ಈ ಪತ್ರಗಳನ್ನು ಶವದೊಡನೆ ಹೂಳಬೇಕು'. ಅನಂತರ ಅವಳು ಇನ್ನೊಂದು ಪ್ಯಾಕೆಟನ್ನು ಕೈಗೆತ್ತಿಕೊಂಡಳು. ಅದರ ಮೇಲೆ ಏನನ್ನೂ ಬರೆದಿರಲಿಲ್ಲ. ಅವಳು ಪತ್ರವೊಂದನ್ನು ತೆಗೆದುಕೊಂಡು ಗಟ್ಟಿಯಾಗಿ ಓದಲು ಶುರುಮಾಡಿದಳು. ಪತ್ರ ಹೀಗಿತ್ತು; 'ನನ್ನ ಮನ್ನಣೆಗೆ ಪಾತ್ರಳಾದವಳೇ, ನಾನು ನಿನ್ನನ್ನು ಹುಚ್ಚು ಹಿಡಿಸುವಷ್ಟು ಪ್ರೀತಿಸುತ್ತೇನೆ. ನಿನ್ನನ್ನು ಜ್ಞಾಪಿಸಿಕೊಂಡು ನಾನು ಕೊರಗುತ್ತಿದ್ದೇನೆ. ನಿನ್ನ ತುಟಿಗಳ ಮೇಲೆ, ನಿನ್ನ ಕಣ್ಣುಗಳು ನನ್ನ ಕಣ್ಣುಗಳ ಕೆಳಗೆ, ನಿನ್ನ ದೇಹ ನನ್ನ ದೇಹದ ತಳದಲ್ಲಿ ಎಂಬ ಭಾವನೆ ಬರುತ್ತಿದೆ. ನಿನ್ನನ್ನು ಪ್ರೀತಿಸುತ್ತೇನೆ, ಪ್ರೀತಿಸುತ್ತೇನೆ... ನೀನು ನನ್ನನ್ನು ಹುಚ್ಚನನ್ನಾಗಿ ಮಾಡಿದ್ದೀಯಾ! ನಿನ್ನನ್ನು ಪುನಃ ಪಡೆಯಬೇಕೆಂಬ ಹಂಬಲ ನನಗಾಗಿದೆ. ನನ್ನ ಸಮಗ್ರ ದೇಹ ನಿನ್ನನ್ನು ಬಯಸುತ್ತಿದೆ. ನೀನು ಕೊಟ್ಟ ಮುತ್ತುಗಳ ಸಿಹಿರುಚಿಯನ್ನು ನಾನು ಇನ್ನೂ ಬಾಯಿಯಲ್ಲಿಟ್ಟುಕೊಂಡಿದ್ದೇನೆ'.
ನ್ಯಾಯಾಧೀಶರು ಎದ್ದರು, ಸನ್ಯಾಸಿನಿ ಓದುವುದನ್ನು ನಿಲ್ಲಿಸಿದಳು. ಅವರು ಕಾಗದವನ್ನು ಅವಳ ಕೈಯಿಂದ ಕಿತ್ತುಕೊಂಡು ಬರೆದವರಾರು ಎಂದು ನೋಡಿದಳು. ಪತ್ರದ ಕೆಳಗೆ ರುಜುವಿರಲಿಲ್ಲ. ಆದರೆ 'ನಿನ್ನನ್ನು ಆರಾಧಿಸುವ ಹೆನ್ರಿ' ಎಂದು ಬರೆಯಲಾಗಿತ್ತು. ಅಪ್ಪನ ಹೆಸರು 'ರೆಣೆ'. ಹಾಗಾಗಿ ಪತ್ರ ಬರೆದವರು ಅಪ್ಪನಲ್ಲ.  ಅನಂತರ ಅವರು ಪ್ಯಾಕೆಟ್‌ನಲ್ಲಿರುವ ಇತರೆ ಪತ್ರಗಳಿಗೆ ತಡಕಾಡಿದರು. ಒಂದನ್ನು ತೆಗೆದು ಓದಿದರು.
'ನಿನ್ನ ಪ್ರೀತಿಯ ಸ್ಪರ್ಶವಿಲ್ಲದೆ ನಾನಿರಲಾರೆ'.
ನ್ಯಾಯಾಧೀಶರೊಬ್ಬರು ಶಿಕ್ಷೆಯ ತೀರ್ಪು ಕೊಡುವಾಗ ಅವರಿಗೆ ಬರುವ ನಿರ್ದಯ ಭಾವನೆ ಇವರಿಗೂ ಬಂತು. ಅವರು ಸತ್ತ ತಾಯಿಯ ಭಾವಶೂನ್ಯ ಮುಖವನ್ನು ನೋಡಿದರು.
ಸನ್ಯಾಸಿನಿ ತಂಗಿ ಪ್ರತಿಮೆಯಂತೆ ನಿಂತು ಅಣ್ಣನನ್ನು ನೋಡಿದಳು. ಅವಳ ಕಣ್ಣುಗಳ ಅಂಚಿನಲ್ಲಿ ನೀರು ಕಾಣಿಸಿತು. ನ್ಯಾಯಾಧೀಶರು ಕೊಠಡಿಯನ್ನು ದಾಟಿ ಕಿಟಕಿಯ ಬಳಿ ಬಂದು ಹೊರಗೆ ನೋಡಿದರು. ನಂತರ ಹಿಂದಿರುಗಿ ನೆಲದ ಮೇಲೆ ಹಾಕಿದ್ದ ಪತ್ರಗಳನ್ನು ತೆಗೆದುಕೊಂಡು ಮೇಜಿನ ಸೆಳೆ ಖಾನೆಗೆ ಎಸೆದರು. ಮಂಚದ ಸುತ್ತಲೂ ಪರದೆ ಹಾಕಿದರು.
ಅರುಣೋದಯವಾದ ಮೇಲೆ ಅವರು ಈಜಿಛೇರ್‌ನಿಂದ ಎದ್ದು ತಂಗಿಗೆ 'ನಾವಿನ್ನು ಹೋಗೋಣ' ಎಂದರು, ತಾಯಿಯ ಕಡೆ ಅವರು ನೋಡಲಿಲ್ಲ!

= ಎಚ್.ಆರ್. ಚಂದ್ರವದನರಾವ್
     ಮೂಲ : ಮೊಪಾಸನ ಕಥೆ
     'ಎ ಡೆಡ್ ವುಮೆನ್ಸ್ ಸೀಕ್ರೆಟ್‌'

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.