ಖುಷಿ

ಆರನೇ ಹೆಂಡತಿಯ ನೂರಾರು ಬವಣೆ

Published On :

ತೆಹಮಿನಾ ದುರ್ರಾನಿ ಪಾಕಿಸ್ತಾನದ ಪ್ರಮುಖ ರಾಜಕಾರಣಿ ಮಲಿಕ್ ಗುಲಾಮ್ ಮುಸ್ತಾಫಾ ಖಾರ್ ಅವರ ಆರನೇ ಪತ್ನಿ. ಈ ಕೃತಿಯು ತೆಹಮಿನಾ ಅವರ ಆತ್ಮಕಥನ. ತನ್ನನ್ನು ಸದಾ ಹತ್ತಿಕ್ಕುತ್ತಿದ್ದ ಮತ್ತು ಸದಾ ಪೀಡಿಸುತ್ತಿದ್ದ ಗಂಡನಿಂದ ಸ್ವಾತಂತ್ರ್ಯವನ್ನು ಪಡೆಯಲು ನಡೆಸಿದ ಹೋರಾಟದ ಕಥನ ಇದು ಎಂದು ಅವರು ಹೇಳಿಕೊಂಡಿದ್ದಾರೆ. ಮದುವೆ ಎನ್ನುವ ಬಂಧನವನ್ನು ಉಳಿಸಿಕೊಳ್ಳುವುದಕ್ಕಾಗಿ ತನ್ನನ್ನು ತಾನೇ ಪರಿವರ್ತನೆಗೆ ಒಡ್ಡಿಕೊಂಡ ಮತ್ತು ತನ್ನ ಪತಿಯನ್ನೂ ಬದಲಿಸಲು ಪ್ರಯತ್ನಿಸಿದ, ಆದರೆ ಅದರಲ್ಲಿ ವಿಫಲವಾಗುವ ಕಥನ ಇದು. ಪಾಕಿಸ್ತಾನದ ಊಳಿಗಮಾನ್ಯ ವ್ಯವಸ್ಥೆ ಅವರಿಗೆ ತುಂಬ ಕಠಿಣವಾದ ಪಾಠವನ್ನು ಕಲಿಸಿತು. ಆ ದೇಶದಲ್ಲಿ ನೀನೊಬ್ಬ ಮಹಿಳೆಯಾಗಿದ್ದರೆ ಅದು ನಿನ್ನ ಅನುಭವ ಕೂಡ ಎಂದು ಈ ಕೃತಿಯು ನಿರೂಪಿಸುತ್ತದೆ.
ಈ ಕೃತಿಯು ಹಲವು ಪ್ರಮುಖ ವಿಷಯಗಳ ಕುರಿತು ಮಾತನಾಡುತ್ತದೆ. ಲೇಖಕಿಯೇ ಹೇಳಿರುವಂತೆ, ಪಾಕಿಸ್ತಾನದ ರಾಜಕೀಯ, ಅಲ್ಲಿಯ ನಾಯಕತ್ವ, ಅವರ ಮೌಲ್ಯಗಳು, ಅವರ ಮಾನಸಿಕ ಸ್ಥಿತಿಗಳು, ಅವರ ಮಹಮ್ಮದೀಯ ತತ್ವಗಳು, ಮಹಿಳೆಯರ ಬಗೆಗಿನ ಅವರ ವಿಚಾರಧಾರೆಗಳು ಎಲ್ಲ ಇಲ್ಲಿ ಚರ್ಚೆಗೊಳಪಟ್ಟಿವೆ. ಇಲ್ಲಿ ಪ್ರಸ್ತಾಪಿಸಲೇ ಬೇಕಾದ ಎರಡು ಮುಖ್ಯ ವಿಚಾರಗಳು ಇವೆ. ಮೊದಲನೆಯದು ಕುಟುಂಬದ ಒಳಗೆ ನಾಲ್ಕು ಗೋಡೆಗಳ ನಡುವೆ ನಡೆಯುವ ಹಿಂಸೆ. ಲೇಖಕಿ ತಾನು ಹೇಗೆ ತನ್ನ ಪತಿಯಿಂದ ಕ್ರೂರವಾಗಿ ಬಯ್ಗುಳಕ್ಕೆ ಒಳಗಾದೆ ಎಂಬುದನ್ನು ಇಲ್ಲಿ ವಿವರಿಸಿದ್ದಾರೆ. ಮಹಿಳೆಯರ ಮೇಲೆ ನಡೆಯುವ ಈ ರೀತಿಯ ದೌರ್ಜನ್ಯದ ವಿರುದ್ಧ ಎಲ್ಲರೂ ದನಿ ಎತ್ತಲೇ ಬೇಕಾಗಿದೆ. ಎರಡನೇ ಪ್ರಮುಖ ಕಾಳಜಿಯ ವಿಷಯ, ಪಾಕಿಸ್ತಾನ ಸಂಸ್ಕೃತಿಯಲ್ಲಿ ಮಹಿಳೆಯರು ಅದರಲ್ಲೂ ವಿಶೇಷವಾಗಿ ಊಳಿಗಮಾನ್ಯ ವ್ಯವಸ್ಥೆಯ ಅಡಿಯಲ್ಲಿ ಬರುವ ಮಹಿಳೆಯರು ಹೇಗೆ ಶೋಷಣೆಗೆ ಒಳಗಾಗಿದ್ದಾರೆ ಎಂಬುದು. ಈ ಎರಡು ವಿಷಯಗಳು ಮಹಿಳೆಯರ ಜೀವನದ ಸ್ಥಿತಿಯನ್ನು ನಿರ್ಧರಿಸಬಲ್ಲವಾದುದರಿಂದ ಮತ್ತು ಇವೆರಡೂ ಪರಸ್ಪರ ಅಂತರ್‌ಸಂಬಂಧವನ್ನು ಹೊಂದಿರುವುದರಿಂದ ಮಹತ್ವದ್ದು ಎನ್ನಿಸುತ್ತವೆ.
ಲೇಖಕಿಯ ಪತಿ ಮುಸ್ತಾಫಾ ಖಾರ್ ಕುರಿತ ವಿವರಣೆಯೊಂದಿಗೆ ಕೃತಿಯು ಆರಂಭವಾದರೂ ಇವು ಕಾಲಾನುಕ್ರಮಣಿಕೆಯ ರೀತಿಯಲ್ಲಿ ಬರೆಯಲ್ಪಟ್ಟಿಲ್ಲ. ತೆಹಮಿನಾ ದುರ್ರಾನಿ ವಿದ್ಯಾವಂತ ಮತ್ತು ಶ್ರೀಮಂತ ಕುಟುಂಬದಲ್ಲಿಯೇ ಜನಿಸಿದವರು. ಹೊರಗಿನಿಂದ ನೋಡುವುದಕ್ಕೆ ಅವರದೊಂದು ಮಾದರಿಯ ಕುಟುಂಬವಾಗಿತ್ತು. ಆದರೆ ಆಂತರ್ಯದಲ್ಲಿ ಅವರ ತಾಯಿಯೇ ಎಲ್ಲ ವ್ಯವಹಾರಗಳ ಸೂತ್ರಧಾರಳಾಗಿದ್ದಳು. ತಾಯಿಗೆ ಈ ಮಗಳನ್ನು ಕಂಡರೆ ಅಷ್ಟಕ್ಕಷ್ಟೇ. ಆದರೆ ಅಜ್ಜಿ ಹಾಗಿರಲಿಲ್ಲ. ಬಾಲ್ಯದಲ್ಲಿ ಅವರು ಸಿಕ್ಕಾಪಟ್ಟೆ ತುಂಟಿ ಮತ್ತು ಸದಾ ಆನಂದದಿಂದ ಇರುತ್ತಿದ್ದರು. ತಾಯಿಗೆ ಇವರ ತಂಗಿ ಆದೀಲಾ ಅಂದರೆ ಅಕ್ಕರೆ.
ಒಂದು ಮದುವೆಯ ಸಮಾರಂಭದಲ್ಲಿ ತನ್ನ 17ನೇ ವಯಸ್ಸಿನಲ್ಲಿ ತೆಹಮಿನಾ ದುರ್ರಾನಿ ತನ್ನ ಮೊದಲ ಪತಿ ಅನೀಸ್‌ನನ್ನು ಮೊದಲ ಬಾರಿಗೆ ಭೆಟ್ಟಿಯಾದರು. ಇಬ್ಬರಲ್ಲೂ ಪ್ರೇಮಾಂಕುರವಾಗಿ ಮದುವೆಯೂ ಆಗಿಬಿಟ್ಟರು. ಆದರೆ ಈ ಸಂಬಂಧದಲ್ಲಿ ಹೂವಿನ ಪಕಳೆಗಳಿಗಿಂತ ಮುಳ್ಳಿನ ದಂಟುಗಳೇ ಹೆಚ್ಚಿದ್ದವು. ಅವಳ ಎರಡನೇ ಪತಿ ಮುಸ್ತಾಫಾ ಖಾರ್ ಅವರ ಭೇಟಿ ಒಂದು ಪಾರ್ಟಿಯಲ್ಲಿ ಆಯಿತು. ಖಾರ್ 'ಶೇರ್-ಇ-ಪಂಜಾಬ್‌', ಪಂಜಾಬದ ಸಿಂಹ ಆಗಿದ್ದರು. ಅವರಿಗೆ ಆಗಲೇ ಶಹರ್‌ಜಾದಾ ಎಂಬವರ ಜೊತೆ ಮದುವೆಯಾಗಿತ್ತು. ಹೀಗಿದ್ದೂ ಅವರು ತೆಹಮಿನಾ ಜೊತೆ ಸಂಬಂಧ ಬೆಳೆಸುತ್ತಾರೆ. ಇದು ಬಹಿರಂಗವಾದ ಕೂಡಲೆ ತೆಹಮಿನಾಳ ಮೊದಲ ಸಂಬಂಧ ವಿಚ್ಛೇದನವಾಗುತ್ತದೆ. ನಂತರದ ಬೆಳವಣಿಗೆಯಲ್ಲಿ ಅವರು ಮುಸ್ತಾಫಾ ಖಾರ್‌ನ ಆರನೇ ಹೆಂಡತಿಯಾಗುತ್ತಾರೆ. ಪಾಕಿಸ್ತಾನದ ಸಮಕಾಲೀನ ಸಾಮಾಜಿಕ, ರಾಜಕೀಯ ವಿದ್ಯಮಾನಗಳಿಗೆ ಅವರು ಸಾಕ್ಷಿಯಾಗುತ್ತಾರೆ. ವರ್ತಮಾನವನ್ನು ತಿರಸ್ಕರಿಸುತ್ತ ಹೊಸ ಭವಿಷ್ಯದತ್ತ ಭರವಸೆಯ ನೋಟ ಹರಿಸುತ್ತಾರೆ.
ಪಾಕಿಸ್ತಾನದ ಹೆಣ್ಣಿನ ಪರವಾಗಿ ದನಿ ಎತ್ತುವ ಕಾರಣಕ್ಕಾಗಿ ಈ ಕೃತಿಯು ಒಂದು ಮೈಲುಗಲ್ಲಾಗಿದೆ. ಯಾರದೋ ತಾಯಂದಿರು, ಪತ್ನಿಯರು ಸಹೋದರಿಯರು, ಪುತ್ರಿಯರಾಗಿರುವ ಮಹಿಳೆಯರಿಗಾಗಿ ಒಂದು ಉತ್ತಮ ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ಇದೊಂದು ಮೆಟ್ಟಿಲಾಗಿದೆ. ಈ ಮಹಿಳೆಯರು ತಾಳ್ಮೆಯನ್ನು ರೂಢಿಸಿಕೊಂಡಿದ್ದಾರೆ. ಕಾನೂನು ಎಲ್ಲರಿಗೂ ಅಭಿವ್ಯಕ್ತಿಯ ಸ್ವಾತಂತ್ರ್ಯವನ್ನು ನೀಡಿದೆ. ಆದರೆ ಸಂಪ್ರದಾಯ ಮತ್ತು ರೂಢಿಗಳು ಅವರ ಅಭಿವ್ಯಕ್ತಿಯನ್ನು ಹತ್ತಿಕ್ಕುವ ಒಳಸಂಚು ನಡೆಸಿವೆ. ಆ ಒಳ ಸಂಚನ್ನು ಬಯಲಿಗಿಟ್ಟ ಅಗ್ಗಳಿಕೆ ಈ ಕೃತಿಗಿದೆ.  'ಮೈ ಫ್ಯೂಡಲ್ ಲಾರ್ಡ್‌' ಎಂಬ ಈ ಆತ್ಮಕಥನವನ್ನು ರಾಹು ಅವರು 'ಆರನೇ ಹೆಂಡತಿಯ ಆತ್ಮಕಥೆ' ಹೆಸರಿನಲ್ಲಿ ಕನ್ನಡಿಸಿದ್ದಾರೆ. ಅನುವಾದ ಸೊಗಸಾಗಿದೆ. ಇಡೀ ಕೃತಿಯು ಒಂದು ಕಾದಂಬರಿಯಂತೆ ಓದಿಸಿಕೊಳ್ಳುತ್ತದೆ.
ಪ್ರ: ಸೃಷ್ಟಿ ಪಬ್ಲಿಕೇಷನ್ಸ್, ಬೆಂಗಳೂರು, ಪುಟಗಳು 608, ಬೆಲೆ ರು. 400

ಹಸ್ತಪ್ರತಿ ಸಂಕಥನ
ಶಾಸ್ತ್ರೀಯ ಅಧ್ಯಯನವು ಒಂದು ಕಲೆ. ಹಸ್ತಪ್ರತಿಗಳ ವಿಷಯದಲ್ಲಿ ಡಾ. ವೀರೇಶ ಬಡಿಗೇರ ಅವರ ಕೃತಿ 'ಹಸ್ತಪ್ರತಿ ಸಂಕಥನ'ವನ್ನು ಓದಿದಾಗ ಈ ವಿಷಯ ಇನ್ನಷ್ಟು ಮನದಟ್ಟಾಗುತ್ತದೆ. ನಮ್ಮ ಪ್ರಾಚೀನ ಸಾಹಿತ್ಯದ ಮೂಲ ಪಾಠಗಳೆಲ್ಲ ಹಸ್ತಪ್ರತಿಗಳಲ್ಲೇ ಇರುವುದು. ಅವನ್ನು ಸಂರಕ್ಷಿಸುವುದು, ಅವುಗಳ ಪಾಠಾಂತರಗಳನ್ನು ಓದಿ ನಿರ್ದಿಷ್ಟ ಪಾಠವನ್ನು ಗುರುತಿಸುವುದು ಅಧ್ಯಯನಕಾರನ ಪ್ರತಿಭೆಯನ್ನು ಅವಲಂಬಿಸಿದೆ. ಹೊಸ ತಲೆಮಾರಿನವರಿಗೆ ಪ್ರಾಚೀನ ಗ್ರಂಥ ಸಂಪಾದನೆಯಲ್ಲಿ ಇದು ನೆರವಾಗುತ್ತದೆ.
ಪ್ರ: ಮಯ ಪ್ರಕಾಶನ, ಕಮಲಾಪುರ, ಪುಟಗಳು 214, ಬೆಲೆ ರು. 160

ಗೌಳಿಗರ ಅಧ್ಯಯನ
ಮಾನವನ ಮೂಲ ವೃತ್ತಿಗಳಲ್ಲಿ ಪಶುಪಾಲನೆಯೂ ಒಂದು. ಗೋವು ಒಂದು ಕಾಲದಲ್ಲಿ ರಾಷ್ಟ್ರದ ಸಂಪತ್ತೆಂದು ಪರಿಗಣಿತವಾಗಿತ್ತು. ಶ್ರೀಕೃಷ್ಣ ಕೂಡ ಗೋಪಾಲಕ. ಪಶುಪಾಲನೆಯಲ್ಲಿ ತೊಡಗಿರುವ ಗೌಳಿಗರ ಸಾಂಸ್ಕೃತಿಕ ಅಧ್ಯಯನವನ್ನು ಡಾ. ಅನುಪಮಾ ಪ್ರಿಯದರ್ಶಿನಿ ವಿ.ಕೆ. ಇವರು ತಮ್ಮ ಪಿಎಚ್.ಡಿ. ಅಧ್ಯಯನದ ವಿಷಯವನ್ನಾಗಿ ಮಾಡಿಕೊಂಡು ಪ್ರೌಢ ಪ್ರಬಂಧವನ್ನು ಸಿದ್ಧಪಡಿಸಿದ್ದಾರೆ. ಗೌಳಿಗ ಮಹಿಳೆಯರ ಸ್ಥಾನಮಾನದ ಚರ್ಚೆ ಮಹತ್ವದ್ದಾಗಿದೆ. ಗೌಳಿಗರ ಬದುಕಿನ ವೈವಿಧ್ಯಮಯ ಮಾಹಿತಿಯನ್ನು ಈ ಕೃತಿ ಒಳಗೊಂಡಿದೆ.
ಪ್ರ: ಗೋಧೂಳಿ ಪ್ರಕಾಶನ, ಬೆಂಗಳೂರು, ಪುಟಗಳು 518, ಬೆಲೆ ರು. 260

ಜಾತ್ಯತೀತತೆಯ ಬುಡ-ಬೇರು
ನಿಜವಾದ ಸೆಕ್ಯುಲರಿಸಂ ಎಂದರೇನು, ಅದರ ತಾತ್ವಿಕ, ಚಾರಿತ್ರಿಕ ಆಯಾಮಗಳು ಯಾವುವು, ಸಾಂವಿಧಾನಿಕ ಮತ್ತು ಕಾಯ್ದೆಯ ಆಯಾಮಗಳು, ವಿದೇಶಿ ಆಯಾಮಗಳು ಏನೇನು, ಕೋಮುವಾದವು ತೀವ್ರವಾಗಿರುವ ಸಂದರ್ಭದಲ್ಲಿ ಸೆಕ್ಯುಲರ್ ವಾದದ ಅನನ್ಯತೆಯೇನು, ಭಾರತದ ಧಾರ್ಮಿಕ ಅಲ್ಪಸಂಖ್ಯಾತರು ಎಲ್ಲಿ ನಿಲ್ಲುತ್ತಾರೆ ಎಂಬ ವಿಚಾರಗಳನ್ನು ಒಳಗೊಂಡ ಮಣಿಶಂಕರ್ ಅಯ್ಯರ್ ಅವರ 'ಕನ್ಫೆಶನ್ಸ್ ಆಫ್ ಸೆಕ್ಯುಲರ್ ಫಂಡಮೆಂಟಲಿಸ್ಟ್‌' ಕೃತಿಯನ್ನು ರಾಹು ಅವರು 'ಸೆಕ್ಯುಲರ್‌ವಾದ: ಬುಡ-ಬೇರು' ಹೆಸರಿನಲ್ಲಿ ಅನುವಾದಿಸಿದ್ದಾರೆ.
ಪ್ರ: ಸೃಷ್ಟಿ ಪಬ್ಲಿಕೇಷನ್ಸ್, ಬೆಂಗಳೂರು, ಪುಟಗಳು 368, ಬೆಲೆ ರು. 275


ಡಾ. ವಾಸುದೇವ ಶೆಟ್ಟಿ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.