ಆ ನಕ್ಷತ್ರ ಥೇಟ್ ನಿನ್ನ ಮೂಗುತಿ

ಶ್ಯಾಮನಿಗೆ ನಕ್ಷತ್ರಗಳಿಷ್ಟ. ಮೇಘಳಿಗೆ ರಾತ್ರಿ ಅವುಗಳ ನಡುವೆ ಕೊಂಚ ಕೊಂಚವೇ ದಾರಿ ಮಾಡಿಕೊಳ್ಳುತ್ತಾ ಲಕ್ಷಾಂತರ ಕನಸುಗಳನ್ನು ಹೊತ್ತು ಸಾಗುವ ಆ ವಿಮಾನದ ನಗು ಇಷ್ಟ. ಚೆಂದದ ದಂಡೆ, ತನ್ನ ಹೆಸರು, ಗೋತ್ರ, ಹರೆಯ, ಕನಸು, ಬಿಂಕ ಎಲ್ಲವೂ ಮರೆತೇ ಹೋದಂತೆ ನಟಿಸುತ್ತಾ ಎಲ್ಲಿಗೋ ಹರಿಯೋ ಆ ಪುಟ್ಟ ನದಿಯ ದಂಡೆಯಲ್ಲಿ ಇವರಿಬ್ಬರೂ ಕೂರುವಷ್ಟು ಧಾರಾಳ ಜಾಗವಿತ್ತು. ಮನಸ್ಸಾದಾಗಲೆಲ್ಲ ಇಬ್ಬರ ಕಾಲುಗಳೂ ದಿವ್ಯಮುಗ್ಧತೆಯಿಂದ ನೀರಾಟವಾಡಲು ತನ್ನ ಪ್ರಾಯವೇ ಮರೆತ ನದಿ ಪ್ರೇರೇಪಿಸುತ್ತಲೇ ಇದ್ದಳು.
ಮುಗಿಬಿದ್ದು ಬರೋ ಏಕಾಂತ, ಬೆದರಿಸಿ ಬರುವ ಕುಳಿರ್ಗಾಳಿ, ಎಲ್ಲಿಂದಲೋ ಪೂಸಿ ಬರುವ ಯಾವುದೋ ಮಾಗಿ ಹೂವಿನ ಇರುಳ ಇಷ್ಟಿಷ್ಟೇ ಘಮದ ಅಮಲು, ಅದರ ಜೊತೆಗೇ ಅಂಟಿಕೊಂಡ ಮೌನದ ಪೀಕಲಾಟ.
ಪ್ರೀತಿ ಬೇಕಾದ್ರೂ ಮಾಡಿಕೊಳ್ಳಿ, ಮೂತಿ ಬೇಕಾದರೂ ನೋಡಿಕೊಳ್ಳಿ, ನಕ್ಷತ್ರಗಳ ಮಾಲೆ ಕಟ್ಟಿಕೊಳ್ಳುವುದಿದ್ದರೆ ಕಟ್ಟಿಕೊಳ್ಳಿ, ಅಲ್ಲೇ ಕೊನೆ ಗಳಿಗೆಯಲ್ಲಿ 'ನಿದ್ದೆ ಬರುವಳು ಕದ್ದು ಮಲಗು ಮಗುವೇ...' ಅಂತ ಪರಸ್ಪರ ಮುದ್ದಾಡುತ್ತಾ ನಿದ್ದೆ ಹೋಗುವುದಿದ್ದರೂ ಹೋಗಿ. ನಮ್ಮದೇನೂ ತಕರಾರಿಲ್ಲ ಅಂತ ಆ ಇರುಳ ಹೂವು, ಏಕಾಂತ, ರಾತ್ರಿ ಎಲ್ಲವೂ ಅವರಿಬ್ಬರನ್ನು ಮನವಿ ಮಾಡುತ್ತಿದ್ದವು. ಆದರೆ ಈ ಪುಕ್ಕಟೆ ಮನವಿ, ಸಂಭ್ರಮಕ್ಕೆಲ್ಲ ಅವರು ಚೂರೂ ಸೋಕದೇ ಸುಮ್ಮನೆ ನಕ್ಷತ್ರ ದಿಟ್ಟಿಸುತ್ತಿದ್ದರು.
ಇಬ್ಬರ ಮೈಯ್ಯೂ ಮಿಸುಕಾಡಲಿಲ್ಲ. ಯಾವಾಗಲೂ ಹೇಗೋ ಬಂದು ಶ್ಯಾಮನ ಮೈಗೆ ಬೀಸಣಿಗೆ ಬೀಸುತ್ತಿದ್ದ ಅವಳ ಚೂಡಿದಾರದ ಶಾಲು ಇವತ್ತ್ಯಾಕೋ ಸುಮ್ಮನ್ನಿತ್ತು. ಅವರಿಬ್ಬರ ನಡುವೆ ಸುದೀರ್ಘ ಮೌನವಿತ್ತು. ದೇಹದ ನಡುವೆ ಅಷ್ಟೇ ಅಂತರವಿತ್ತು. ಮನಸ್ಸು ಮಾತ್ರ ಕಾಣದ ಮುಗಿಲುಗಳ ಮೇಲೆ ಸುತ್ತು ಹಾಕುತ್ತಿತ್ತು. ಹೀಗೆಲ್ಲ ವರ್ಣಿಸುವಾಗ ಪಾಪ, ಪ್ರೀತಿಯ ಕನಸುಂಡ ಜೋಡಿಗಳಿರಬೇಕು. ನಾನು ಕಲ್ಲು ನೀನು ಸಕ್ಕರೆ, ನೀನು ಸಿಕ್ಕರೆ ಹಾಲುಸಕ್ಕರೆ ಅಂತ ಹಾಡಿದವರಿರಬೇಕು ಅಂತಂದುಕೊಂಡರೆ ಅದು ತಪ್ಪು.
ಮತ್ತ್ಯಾಕೆ ಈ ದಂಡೆಯಲ್ಲಿ ಕೂತು ಗೆಳೆತನದ ಸುಖದಲ್ಲಿ ಕರಗಿದ್ದಾರಾ? ಅದೂ ಗೊತ್ತಿಲ್ಲ... ಇಬ್ಬರೂ ಈಗಷ್ಟೇ ಹುಡುಕಾಡುತ್ತಿದ್ದಾರೆ, ತಮ್ಮ ಸಂಬಂಧ ಸ್ನೇಹದ ಬೆರಳಾ? ಪ್ರೀತಿಯ ಹರಳಾ ಅಂತ. ಅದೆಷ್ಟು ಸಲ ಈ ದಂಡೆಯಲ್ಲಿ ಇವರಿಬ್ಬರೂ ಆಕಾಶ, ಕವಿತೆ, ನೆನಪು, ಕಾಲೇಜು, ಕಾಡು, ತೋಡು, ರೋಡು ಅಂತೆಲ್ಲ ಚರ್ಚಿಸಿದ್ದರೂ ಒಮ್ಮೆಯೂ ಇವತ್ತಿನ ಹಾಗೇ ಹುಡುಕಾಟಕ್ಕಿಳಿದಿರಲಿಲ್ಲ. ಅದರ ಅವಶ್ಯಕತೆಯೂ ಬಿದ್ದಿರಲಿಲ್ಲ.
ದಿನಗಳಿತ್ತು, ನಾಳೆಯ ಕ್ಷಣಗಳಿತ್ತು... ಆದರೆ ಈಗ ಮೇಘ ಬಾಳೆಹೊನ್ನೂರಿಗೆ ಹೋಗುತ್ತಿದ್ದಾಳೆ. ಅಲ್ಲಿ ಒಳ್ಳೆ ಸಂಬಂಧವೊಂದಿದೆ. ಹುಡುಗನನ್ನು ಸುಮ್ಮನೆ ನೋಡಿಕೊಂಡು ಬರುವಾ ಅಂತ ಅವಳಪ್ಪ ಹೇಳಿದ್ದರಿಂದ ಶ್ಯಾಮನಿಗೆ ಒಳಗೊಳಗೇ ಯಾವುದೋ ಒಂದು ಭಾವ ಸಂಚರಿಸಿ ಅವನು ನೀರವನಾಗಿ ಹೋಗಿದ್ದ. ಈಗ, ತಾನೇಕೆ ಹೀಗಾಗುತ್ತಿರುವೆ? ಅವಳಿಗೆ ಹುಡುಗ ನೋಡುತ್ತಿದ್ದಾರೆಂದ ಕೂಡಲೇ ನಂಗ್ಯಾಕೆ ಈ ಪರಿಯ ಸಂಕಟ? ನನ್ನೊಳಗಿನ ಸಾಮ್ರಾಜ್ಯ ಕಳೆದು ಹೋದಂತನ್ನಿಸುತ್ತದೆ. ನಾನಿಷ್ಟು ಮರುಗಲಿಕ್ಕೆ ಅವಳನ್ನು ಪ್ರೀತಿ ಮಾಡಿದ್ದಿದ್ದರೆ ಹೌದು. ಒಂದೆರಡು ಮುತ್ತು ಕೊಟ್ಟಿದ್ದಿದ್ದರೆ ಹೌದು. ಅದ್ಯಾವುದೂ ಇಲ್ಲದೆ ಈ ವೇದನೆ ಯಾಕೆ ನನ್ನೊಳಗಿನ ಮೌನವನ್ನು ಜಗ್ಗುತ್ತಿದೆ ಅಂತ ಶ್ಯಾಮ ಚಿಂತಿಸುತ್ತಲೇ ಹೋದ.
ಪ್ರೀತಿ ಅಂದ್ರೆ ಜೀವನ ಪ್ರೀತಿ ಅನ್ನುತ್ತಿರುವವನು, ಎಲ್ಲರನ್ನೂ ಒಂದೇ ಪ್ರೀತಿಯ ದೃಷ್ಟಿಯಿಂದಲೇ ನೋಡಬೇಕು ನಾನು. ಬೆಟ್ಟ, ಬಯಲು, ಸಮುದ್ರ, ನದಿ, ಪ್ರಾಣಿ ಪಕ್ಷಿ ಇವೆಲ್ಲವನ್ನೂ ಪ್ರೀತಿಸುವ ಹಾಗೇ ಮನುಷ್ಯರನ್ನು ಪ್ರೀತಿಸಬೇಕು. ಪ್ರೀತಿ ಅನ್ನೋದು ಸಹಜ ಪ್ರಕ್ರಿಯೆ. ಹೀಗೇ ಮೇಘಳನ್ನು ಪ್ರೀತಿಸುತ್ತೇನೆ ಅಷ್ಟೇ. ಬೇರೇನೂ ವಿಶೇಷವಿಲ್ಲ ನಮ್ಮಿಬ್ಬರ ನಡುವೆ ಅಂತೆಲ್ಲ ಚಿಂತನೆ, ತನ್ನದೇ ತತ್ವದ ಕೌದಿ ಹೊದ್ದು ಮಲಗಿದ್ದ ಶ್ಯಾಮನಿಗೆ ತಾನು ಹೊಸೆದ ತತ್ವ ಎಲ್ಲ ಈಗ ಸುಳ್ಳು ಅಂತೆನ್ನಿಸಲು ಶುರುವಾಯ್ತು.
ಮೇಘಳಿಗೇ ಬೇರೆ ತರಹದ ಪ್ರೀತಿ ಕೊಟ್ಟವನಲ್ಲ ನಾನು. ನೋಡೇ ನಂಗೆ ನೀನು ಬೇಕು, ನೀ ನನ್ನ ಜೀವ ಅಂತ ಜೀವ(ನ)ದ ಸುಖವೇ ಗೊತ್ತಿಲ್ಲದ ಹುಚ್ಚು ಹುಡುಗರು ಹಲುಬುವ ಹಾಗೇ ಹೇಳಿದವನೇ ಅಲ್ಲ. ಮತ್ತೆ ಈಗ ಯಾಕೆ ಈ ವಿಷಾದ, ಹತಾಶೆ? ಅಂತ ಶ್ಯಾಮ ದಂಡೆಯಲ್ಲಿ ಕೂತು ತನ್ನದೇ ಲೋಕದತ್ತ ಕಳೆದುಹೋಗಿದ್ದ.
ಆಗಲೇ ಏನೋ ನೆನಪುಗಳು ಕುಕ್ಕರುಕಾಲಿನಲ್ಲಿ ಎದುರು ಕೂತದ್ದು- 'ನೋಡೇ ಅಲ್ಲಿ, ಸಪ್ತಋಷಿ ಮಂಡಲ ಪಕ್ಕ ಹೊಳೆಯೋ ಒಂದು ನಕ್ಷತ್ರ ಥೇಟ್ ನಿನ್ನ ಮೂಗುತಿಯ ಹಾಗೇ ಹೊಳೀತಿದೆ. ಚಂದಿರ ನಿನ್ನ ಬಿಳಿ ಬಿಂದಿಯ ಹಾಗೇ ಇದೆ. ಮುಂದೆ ನೀನು ಎಲ್ಲಾದರೂ ಇರು, ನಿನ್ನ ನೆನಪಾದಾಗ ಆ ಆಕಾಶದಲ್ಲಿರೋ ಆ ನಿನ್ನ ಮೂಗುತಿ, ಬಿಂದಿ ನೋಡ್ತೇನೆ. ಆ ನಕ್ಷತ್ರ ಯಾವಾಗಲೂ ಅಲ್ಲೇ ಶಾಶ್ವತವಾಗಿರುತ್ತಲ್ಲಾ ಮೇಘ?' ತಾನಂದದ್ದು ನೆನಪಾಯ್ತು ಶ್ಯಾಮನಿಗೆ.
ನಾನೇ ಹೇಳಿದ್ದಲ್ವಾ ಹೀಗೆಲ್ಲ... ಆದ್ರೆ ಯಾವ ಭಾವದಲ್ಲಿ ಹೇಳಿದ್ದು... ಪ್ರೀತಿ? ಛೇ, ಹಾಳಾದ್ದು ಸಾಧ್ಯನೇ ಇಲ್ಲ. ನನ್ನದ್ಯಾವತ್ತೂ ಜೀವನ ಪ್ರೀತಿ. ಅದು ಯಾವತ್ತೂ ನಿಶ್ಚಲ ನಕ್ಷತ್ರದಂತೆ ಶಾಶ್ವತ. ಹೀಗೆ ಆಲೋಚನೆಯಲ್ಲೇ ಕಳೆದು ಹೋದ ಶ್ಯಾಮ. ಹಾಗಾದ್ರೆ ಈಗ ಮೇಘ ಹೋಗುತ್ತಾಳೆಂದ ಕೂಡಲೇ ನಂಗೆ ಒಳಗೊಳಗೆ ಏನೋ ಚುಚ್ಚಿದಂತಾಗಿದ್ದು ಏನು? ನನ್ನದು ಸ್ನೇಹವೆಂದ ಮೇಲೆ ಈ ಚುಚ್ಚುವಿಕೆ ಸ್ನೇಹದಲ್ಲೂ ಇರುತ್ತದಾ? ಅಥವಾ ಇದು ಗೆಳೆತನದ ಮುಖವಾಡ ತೊಟ್ಟ ಪ್ರೇಮದ ಗೊಂಬೆಯಾ? ದೂರದಿಂದ ಸಹ್ಯಾದ್ರಿಯ ಸಾಲುಗಳ ಹಾಗೇ ನಟಿಸುವ ಯಾವುದೋ ಹಾಳು ಬೆಟ್ಟವಾ? ಶ್ಯಾಮನಿಗೆ ಉತ್ತರ ಸಿಗಲಿಲ್ಲ.
ಇಂಥ ಪ್ರೀತಿಯನ್ನೇ ಮಾಡುದಿಲ್ಲವೆಂದು ಶಪಥ ಕಟ್ಟಿದ ತಾನು ಜಾರಿದ್ದೆಲ್ಲಿ? ಮನುಷ್ಯ ಯಾವುದನ್ನು ತಾನು ಮಾಡಬಾರದು ಅಂದುಕೊಳ್ಳುತ್ತಾನೋ ಅದನ್ನು ತನಗರಿವಿಲ್ಲದಂತೆ ಕ್ರಮೇಣ ಮಾಡುತ್ತಾ ಹೋಗುತ್ತಾನಂತೆ. ದೇವರನ್ನು ನಂಬೋದೇ ಇಲ್ಲ ಅನ್ನುವ ನಾಸ್ತಿಕ ದೇವರನ್ನೇ ಬೇಧಿಸಿ, ವಿರೋಧಿಸಿ, ಕೊನೆಕೊನೆಗೆ ದೇವರನ್ನೇ ತನ್ನೊಳಗೆ ಒಳಗೊಂಡಂತೆ ಕಾಣುವುದು ಯಾವುದೋ ಕಾದಂಬರಿಯಲ್ಲಿ ಓದಿರುವುದನ್ನು ಶ್ಯಾಮ ನೆನಪು ಮಾಡಿಕೊಂಡ.
ನಾನು ಪ್ರೀತಿಯನ್ನು ವಿರೋಧಿಸುತ್ತ, ನಿರಾಕರಿಸುತ್ತ ಕೊನೆಗೆ ಅದನ್ನೇ ಒಳಗೊಳ್ಳುತ್ತಾ ಬೆಳೆದು ಪ್ರೀತಿಯ ಅಮೂರ್ತ ಜೀವಿಯಾಗಿಯೇ ಬೆಳೆದೆನಾ? ಪ್ರೀತಿಯೇ ಮಾಡಬಾರದು ಎಂದುಕೊಳ್ಳುವ ವೇಳೆಗೆ ಅದನ್ನು ಮಾಡಿಯೂ ಅದರಾಚೆಗೆ ದಾಟಿ ಹೋಗುತ್ತಿರುವೆನಾ? ಇದೇ ಹೊತ್ತಿಗೆ ಮೇಘಳೂ ಏನೋ ಆಲೋಚಿಸುತ್ತಿದ್ದಳು.. ಅವಳಿಗೆ ಖಾತ್ರಿಯಿತ್ತು, ತಮ್ಮದು ಸ್ನೇಹವೇ ಅಂತ. ಶ್ಯಾಮನ ಮೌನ, ವಿಷಾದ ತನಗೆ ಚೂರೂ ನಾಟಿಲ್ಲವೆಂದು ನಟಿಸುತ್ತ, 'ನೋಡೋ ಶ್ಯಾಮ, ವಿಮಾನ ಬಂತೋ. ನಾವಿಬ್ಬರೂ ಅದರಲ್ಲಿರ್ಬೇಕಿತ್ತೋ. ಆಗ ಚುಕ್ಕಿಗಳು ಇನ್ನೂ ಹತ್ರ ಸಿಕ್ತಿತ್ತಲ್ಲೋ.. ಅದೇ ನೀನು ಅವತ್ತು ಹೇಳ್ತಿದ್ದಿಯಲ್ಲ- ಒಂಟಿತಾರೆ ನಾನು ನೀನು, ಜಂಟಿಯಾದ ಹಾಲುಜೇನು ಅಂತ, ಆ ಚಿಕ್ಕಿ ಅಲ್ಲಿ ಸಿಕ್ತಿತ್ತಾ ಹೇಳು' ಮೇಘ ಮುಗ್ಧವಾಗಿ ಕೇಳಿದಳು.
ಶ್ಯಾಮ ಅರೆಕ್ಷಣ ಎಚ್ಚರಾದ- ಆ ಕವಿತೆಯನ್ನು ನಾನೇ ಹೇಳಿದ್ದಾ? ಇವಳಿಗೆ ಗೆಳೆತನದ ಸಲುಗೆಯಿಂದನೋ, ಪ್ರೀತಿಯ ಅಮಲಿನಿಂದನೋ ಬೊಗಳಿದ್ದಾ? ನಾನಲ್ಲದ ಮತ್ತಿನ್ಯಾರೋ ನನ್ನೊಳಗಿಂದ ಹೂಂಕರಿಸಿದ್ದಾ? ಉತ್ತರ ಹುಡುಕಿದ. ಪ್ರಶ್ನೆಗಳಲ್ಲೇ ಕಳೆದುಹೋದ..
ಮೇಘಳ ದುಪ್ಪಟ್ಟಾ ಗಾಳಿಗೆ ಬಂದು ಮೈ ಸೋಕಿತು. ಶ್ಯಾಮನಿಗೆ ಒಂದು ಕ್ಷಣ ಮನಸ್ಸು ನಿರುಮ್ಮಳವಾಯ್ತು. ಮೇಲೆ ಚುಕ್ಕಿಗಳ ನಡುವೆ ವಿಮಾನ ಬೆಳಕಿನ ಬಿಸಿಯೂಟ ಸರಬರಾಜು ಮಾಡುತ್ತಾ ಸಾಗುತ್ತಿದ್ದಾಗ ಶ್ಯಾಮನಿಗೆ ಕುವೆಂಪು ಕವಿತೆ ನೆನಪಾಯ್ತು, 'ಅಗಣಿತ ತಾರಾಗಣಗಳ ನಡುವೆ ನಿನ್ನನೇ ನೆಚ್ಚಿಹೆ ನಾನು.. ನನ್ನೀ ಜೀವನ ಸಮುದ್ರಯಾನಕೇ ಚಿರಧ್ರುವ ತಾರೆಯು ನೀನು...'!
-ಪ್ರಸಾದ್ ಶೆಣೈ ಆರ್.ಕೆ.
prasad.shenoy93@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


