ಖುಷಿ

ಕಾಮಿಡಿ ಶೋಭೆ

ಕಾಮಿಡಿ ಶೋಭೆ
Published On :

ಚೈತ್ರದ ಪ್ರೇಮಾಂಜಲಿ ಚಿತ್ರವು ಎಸ್. ನಾರಾಯಣ್ ಎಂಬ ನಿರ್ದೇಶಕನನ್ನು ಮಾತ್ರವಲ್ಲ ಹತ್ತು ಹಲವು ಕಲಾವಿದರನ್ನು ಉದ್ಯಮಕ್ಕೆ ಪರಿಚಯಿಸಿತು. ಅದರಲ್ಲೂ ನಾಯಕ ರಘುವೀರ್ ಮತ್ತು ಆತನೇ ಪರಿಚಯಿಸಿದ ಶೋಭರಾಜ್ ಎಲ್ಲರ ಗಮನ ಸೆಳೆದರು. 6 ಅಡಿ 1ಇಂಚು ಎತ್ತರ. ನಾಯಕನ ಲಕ್ಷಣಗಳಿರುವ ಈ ಯುವಕ ಎರಡು ದಶಕದ ಹಿಂದೆ ಹಾಗೆ ತೆರೆಗೆ ಬಂದವರು ಇಂದಿನವರೆಗೂ ಫಾರ್ಮ್ ಉಳಿಸಿಕೊಂಡಿದ್ದಾರೆ.
ಕೇವಲ ಖಳನಾಯಕನಾಗಿಯಷ್ಟೇ ಮಿಂಚುತ್ತಿದ್ದ ಶೋಭಿ ಈಗ ಹಾಸ್ಯಮಿಶ್ರಿತ ಖಳನಾಗಿ ಫೇಮಸ್ಸಾಗಿದ್ದಾರೆ. ಯಾವುದೇ ಪಾತ್ರವನ್ನೂ ತಮ್ಮ ಸ್ವತಃ ಸಿದ್ಧಶೈಲಿಗೆ ಒಗ್ಗಿಸಿಕೊಂಡು ಮೆರೆಯುವ ಇವರಿಗೆ ನಟನೆಯ ವಿಚಾರದಲ್ಲಿ ಒಂದು ಭದ್ರವಾದ ತಳಹದಿ ಇರುವಂತೆ ಅನಿಸುವುದು ಸಹಜ. ಆದರೆ, ಆದೇನೂ ಇಲ್ಲ. ನಟನೆಯೆಂಬುದನ್ನು ಪ್ರಥಮದಲ್ಲಿ ನೋಡಿದ್ದೇ ತಾನು ಸಿನೆಮಾರಂಗದೊಳಗೆ ಪ್ರವೇಶಿಸಿದ ಮೇಲೆ ಎನ್ನುವ ಶೋಭರಾಜ್ ಇಲ್ಲಿ ನಮ್ಮೊಂದಿಗೆ ತಮ್ಮ ಮನಸ್ಸು ಹಂಚಿಕೊಂಡಿದ್ದಾರೆ.

ನಿಮ್ಮ ನಟನೆಯಲ್ಲಿ ಪ್ರಕಾಶ್ ರೈ ನೆನಪಾಗುತ್ತಾರೆ. ಅವರಂತೆ ನಿಮಗೂ ರಂಗಭೂಮಿ ಹಿನ್ನಲೆಯಿದೆಯೇ?
ರೈ ನನಗೆ ಮಿತ್ರ. 'ಲಾಕಪ್ ಡೆತ್‌' ಚಿತ್ರೀಕರಣದ ವೇಳೆ ಆತ್ಮೀಯವಾಗಿ ಪರಿಚಯಗೊಂಡಾಗಿನಿಂದ ಇಂದಿನವರೆಗೆ ಗೆಳೆಯರಾಗಿಯೇ ಇದ್ದಾರೆ. ಆದರೆ, ನನ್ನ ನಟನೆಗೆ ಸ್ಫೂರ್ತಿಯಾದವರ ಪಟ್ಟಿ ಬೇರೆಯೇ ಇದೆ. ಬಾಲ್ಯದಿಂದಲೇ ಖಳನಟರಲ್ಲಿ ನನಗೆ ಭಯಹುಟ್ಟಿಸುವಂತೆ ನಟಿಸಿ ಕಂಡವರು ವಜ್ರಮುನಿ. ತೂಗುದೀಪ ಶ್ರೀನಿವಾಸ್, ದೇವರಾಜ್,  ಟೈಗರ್ ಪ್ರಭಾಕರ್, ಅದರಲ್ಲೂ ಆರಂಭದ ನಿರ್ದೇಶಕ ಎಸ್. ನಾರಾಯಣ್‌ರ ಪ್ರಭಾವವಂತೂ ನನ್ನ ಮೇಲೆ ದೊಡ್ಡ ಪ್ರಮಾಣದಲ್ಲಿದ್ದು, ಅವರು ಕಲಿಸಿಕೊಟ್ಟಿದ್ದನ್ನೇ ತೋರಿಸಿದ್ದೇನೆ.

ಖಳನಾಗಿ ಜನಪ್ರಿಯನಾಗುತ್ತಿರುವಂತೆ ನಾಯಕನಾಗುವ ಆಸೆ ಬರಲಿಲ್ಲವೇ?
ಖಂಡಿತಾ ಇಲ್ಲ. ಯಾಕೆಂದರೆ, ನಾನು ಚಿತ್ರರಂಗಕ್ಕೆ ಬಂದಿದ್ದೇ ಸ್ನೇಹಿತ ರಘುವೀರ್‌ನ ಒತ್ತಾಯಕ್ಕೆ. ಆದರೆ ಅದರ ಯಶಸ್ಸು ಮತ್ತಷ್ಟು ಅವಕಾಶಗಳನ್ನು ನೀಡಿತು. ನಾನು ಆರಂಭದಲ್ಲಿ ನಾರಾಯಣ್ ನಿರ್ದೇಶನದ ಚಿತ್ರಗಳಲ್ಲಿ ಮಾತ್ರ ನಟಿಸುತ್ತಿದ್ದೆ. ಈಗ ಖಳನಾಗಿ ಕನಿಷ್ಠ ವಿಭಿನ್ನ ಚಿತ್ರಗಳನ್ನು ಬಯಸುವಷ್ಟು ಧೈರ್ಯ ಹೊಂದಿದ್ದೇನೆ. ಇಷ್ಟು ವರ್ಷಗಳಿಂದ ವಿಲನ್ನಾಗಿಯಾದರೂ ಉದ್ಯಮದಲ್ಲಿ ಉಳಿದುಕೊಂಡಿರುವುದೇ ಜನರ ಆಶೀರ್ವಾದದಿಂದ.

ಇತ್ತೀಚೆಗೆ ನೀವು ಕಾಮಿಡಿ ವಿಲನ್ ಅಥವಾ ಹಾಸ್ಯಪಾತ್ರದ ಮೂಲಕ ಗಮನ ಸೆಳೆಯುತ್ತಿದ್ದೀರಿ. ಕಾರಣ?
'ಓಂ ನಮಃ ಶಿವಾಯ' ಎಂಬ ಚಿತ್ರದ ಮೂಲಕ ನನ್ನಿಂದ ಹಾಸ್ಯದ ನಟನೆಯನ್ನು ತೆಗೆಯುವ ಪ್ರಯತ್ನ ನಡೆಯಿತು. ಆಮೇಲೆ ಅದೇ ರೀತಿಯ ಚಿತ್ರಗಳು ತುಂಬಾನೇ ಸಿಗತೊಡಗಿವೆ. ಪ್ರೇಕ್ಷಕರು ಅದನ್ನೂ ಒಪ್ಪಿಕೊಳ್ಳುತ್ತಿದ್ದಾರೆ ಎಂಬುದು ಖುಷಿಯ ಸಂಗತಿ.

ಇಂದಿನ ವಿಲನ್‌ಗಳಲ್ಲಿ ನಿಮಗೆ ಯಾರು ಇಷ್ಟವಾಗುತ್ತಾರೆ?
ಎಲ್ಲರೂ ಚೆನ್ನಾಗಿ ಮಾಡ್ತಾರೆ. ರಂಗಾಯಣ ರಘು, ಕಿಶೋರ್, ರವಿಶಂಕರ್... ಎಲ್ಲರ ಎಲ್ಲರ ನಟನೆಯೂ ನನಗೆ ಇಷ್ಟವೇ.

ಮುಂದಿನ ನಿಮ್ಮ ಚಿತ್ರಗಳು ಯಾವುದೆಲ್ಲ?
'ಸವಾಲ್‌', 'ಜಂಬೂಸವಾರಿ', '24 ಕ್ಯಾರೆಟ್ ಗೋಲ್ಡ್‌', 'ಕೋಬ್ರ', ರವಿಚಂದ್ರನ್- ಸುದೀಪ್ ಅಭಿನಯದ 'ಮಾಣಿಕ್ಯ' ಮತ್ತು ಪುನೀತ್ ರಾಜ್‌ಕುಮಾರ್ ನಟಿಸುತ್ತರುವ 'ದೂಕುಡು' ರಿಮೇಕ್‌ನಲ್ಲೂ ನಟಿಸುತ್ತಿದ್ದೇನೆ. ಇದರಲ್ಲಿ 'ಮಾಣಿಕ್ಯ'ದಲ್ಲಿ ನನ್ನದು ಗಂಭೀರ ಶೇಡ್‌ನ ಖಳನ ಪಾತ್ರ. 'ದೂಕುಡು' ರಿಮೇಕ್ ಬಳ್ಳಾರಿಯಲ್ಲಿ ಚಿತ್ರೀಕರಣಗೊಳ್ಳುತ್ತಿದೆ. ತಮಿಳಿನಲ್ಲೂ ಒಂದೆರಡು ಚಿತ್ರಗಳು ಬಿಡುಗಡೆಗೆ ತಯಾರಾಗಿವೆ. ಸದ್ಯಕ್ಕೆ ಅವಕಾಶಗಳಿಗೇನೂ ಕೊರತೆಯಿಲ್ಲ. ಡೇಟ್ ಹೊಂದಾಣಿಕೆಯೇ ಕಷ್ಟ.

ನಿಮ್ಮ ಫ್ಯಾಮಿಲಿ ಬಗ್ಗೆ ಹೇಳಿ...
ನನ್ನ ತಂದೆ ಎಂ. ಗದಿಗಪ್ಪ ಮತ್ತು ತಾಯಿ ನಳಿನಾ ಪ್ರೇಮಾವತಿ. ತಂದೆ ಈಗ ಕಾಲವಾಗಿದ್ದಾರೆ. ಅವರ ನಾಲ್ವರು ಗಂಡುಮಕ್ಕಳಲ್ಲಿ ನಾನು ಎರಡನೆಯವ. ನಮ್ಮ ಫ್ಯಾಮಿಲಿಯಿಂದ ಚಿತ್ರೋದ್ಯಮಕ್ಕೆ ಕಾಲಿಟ್ಟವನು ನಾನೊಬ್ಬನೆ. ಸಾಫ್ಟ್‌ವೇರ್ ಸಂಸ್ಥೆಯೊಂದರಲ್ಲಿ ಎಚ್‌ಆರ್ ಮ್ಯಾನೇಜರಾಗಿದ್ದ ಕುಸುಮಾಳನ್ನು 7 ವರ್ಷ ಪ್ರೇಮಿಸಿ, 2005ರಲ್ಲಿ ಮದುವೆಯಾದೆ. ಈಗ ಪ್ರಜ್ವಿನ್ ಎಂಬ ಮುದ್ದುಮಗನಿದ್ದಾನೆ.

ನಿಮಗೆ ಕೋಪ ತರಿಸುವ ಸಂಗತಿ ಯಾವುದು?
ಊಟ ಚೆನ್ನಾಗಿಲ್ಲವೆಂದಾಗ ಕೋಪ ಬರುತ್ತದೆ. ಹಾಗಂತ ಇದೇ ಊಟವೇ ಆಗಬೇಕು ಎಂಬ ನಿರ್ಬಂಧಗಳೇನೂ ಇಲ್ಲ. ಆದರೆ, ಕೊಟ್ಟ ಆಹಾರ ಸರಿಯಾಗಿಲ್ಲವೆಂದಾಗ ಮಾತ್ರ ಕೋಪ ಬರುತ್ತದೆ.

ಈ ಜಗತ್ತಲ್ಲಿ ಏನನ್ನು ಬೇಕಾದರೂ ಬದಲಿಸಬಹುದೆಂಬ ಶಕ್ತಿ ನಿಮಗಿದ್ದಲ್ಲಿ ನೀವು ಮೊದಲು ಬದಲಾಯಿಸುವ ವಿಚಾರ ಯಾವುದು?
ಭ್ರಷ್ಟಾಚಾರವನ್ನು ಇಲ್ಲದಂತೆ ಮಾಡುತ್ತೇನೆ. ಯಾಕೆಂದರೆ ಇಂದು ಭ್ರಷ್ಟಾಚಾರದಿಂದ ಎಲ್ಲರೂ ಜೀವನಾಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಸಿಂಗಾಪುರ, ಬ್ಯಾಂಕಾಕ್‌ಗಳಲ್ಲಿ ಚಿತ್ರೀಕರಣ ನಡೆಸುವಾಗ ಅಲ್ಲಿನ ಸೌಲಭ್ಯಗಳನ್ನು, ಶಿಸ್ತನ್ನು ಕಂಡು ಹೊಟ್ಟೆ ಉರಿಯುತ್ತದೆ. ನಾವೇಕೆ ಹೀಗಿಲ್ಲ ಎಂದು ಚಿಂತೆಯಾಗುತ್ತದೆ. ನಾವು ಸರ್ಕಾರಕ್ಕೆ ಸರಿಯಾಗಿ ಟ್ಯಾಕ್ಸ್ ಕಟ್ಟುತ್ತಿದ್ದರೂ ಅದರ ಸವಲತ್ತುಗಳನ್ನು ಸರಿಯಾಗಿ ಅನುಭವಿಸುವ ಅವಕಾಶ ನಮಗಿಲ್ಲ.

ರಾಜಕೀಯಕ್ಕೆ ಹೋಗ್ತೀರಾ?
ಖಂಡಿತವಾಗಿಯೂ. ಕ್ರಾಂತಿಕಾರಿ ಬದಲಾವಣೆಗಳನ್ನು ತರುವ ಮನಸ್ಸಿದೆ. ಆದರೆ, 100 ಮಂದಿ ಕಳ್ಳರ ನಡುವೆ ಸೇರಿಕೊಳ್ಳುವುದರಿಂದ ನಾನೂ ತಪ್ಪು ಮಾಡಬೇಕಾದೀತೆಂಬ ಭಯ ಹುಟ್ಟುತ್ತಿದೆ.

ದೇವರ ಮೇಲೆ ನಂಬಿಕೆ ಇದೆಯಾ?
ಕಣ್ಣಿಗೆ ಕಾಣುವ ದೇವರು ಅಂದರೆ ನನ್ನ ತಾಯಿ. ಅದೇ ರೀತಿ ನನ್ನ ಕಷ್ಟಕಾಲದಲ್ಲಿ ನೆರವಾದ ನನ್ನ ಶ್ರೀಮತಿಯ ತಂದೆ ತಾಯಿಯವರೂ ನನಗೆ ದೇವರಂತೆ. ಉಳಿದಂತೆ ನಾನು ಸಾಯಿಬಾಬಾರ ಭಕ್ತ. ಸಕಲ ಧರ್ಮಗಳ ದೇವರಲ್ಲೂ ನಂಬಿಕೆಯಿದೆ.



- ಶಶಿಕರ ಪಾತೂರು
shashishashi82@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.