ಪರಿಸರ ಉಳಿಸಿ ಎಂದಿದಕ್ಕೆ ಹಲ್ಲೆಯೇ?
ಚದುರಂಗರ ಪತ್ರಗಳು
ಸಂಕಲನ: ಪುಸ್ತಕಮನೆ ಹರಿಪ್ರಿಯ
ಪು: 148, ಬೆಲೆ: 99
ಆತ್ಮೀಯರಾದ ಶ್ರೀ ಹರಿಹರಪ್ರಿಯ ಅವರಿಗೆ ವಂದನೆ.
ತಮ್ಮ, ಕಠೋರ ಸುದ್ದಿ ಕೇಳಿ ತತ್ತರಿಸಿ ಹೋದೆ. ಎಂಥ ಕೆಟ್ಟ ಪ್ರಪಂಚದಲ್ಲಿ ನಾವು ಬದುಕುತ್ತಿದ್ದೇವೆ. ಪರಿಸರ ಕೆಡಿಸಬೇಡಿ. ಕುಡಿಯಲು ಮತ್ತು ಮನೆ ಬಳಕೆಗೆ ಇರುವ ನಗರ ಪಾಲಿಕೆಯ ನೀರನ್ನು ಕಾರು ತೊಳೆಯಲು ಉಪಯೋಗಿಸಬೇಡಿ. ಇದರಿಂದ ನೀರಿನ ದುರ್ಬಳಕೆ ಮತ್ತು ಪರಿಸರ ಮಾಲಿನ್ಯ ಎರಡೂ ಆಗುತ್ತದೆ ಎಂದು ತಿಳಿವಳಿಕೆ ಕೊಟ್ಟಿದ್ದೂ ತಪ್ಪಾಯಿತೆ? ಇದಕ್ಕೆ ಪ್ರತೀಕಾರವಾಗಿ ನಿಮ್ಮ ಮೇಲೆ ನಡೆದ ಹಲ್ಲೆ ಸಾಲದೆಂದು, ನಿಮ್ಮ ಮನೆಗೆ ನುಗ್ಗಿ ವಯೋವೃದ್ಧರಾದ ನಿಮ್ಮ ತಂದೆಯ ಮೇಲೆಯೂ ಹಲ್ಲೆಯೇ?
ಈ ಬರ್ಬರ ಹಾಗೂ ಕ್ರೂರ ನಡತೆಯನ್ನು ಕೇವಲ ಸಾಹಿತಿಗಳು ಮಾತ್ರವಲ್ಲ, ಪ್ರತಿಯೊಬ್ಬ ನಾಗರಿಕನೂ ಖಂಡಿಸಬೇಕು. ಈ ಹಲ್ಲೆ ಕೇವಲ ನಿಮ್ಮ ಮೇಲೆ ನಡೆದ ಹಲ್ಲೆಯಲ್ಲ, ಇದು ಪ್ರತಿಯೊಬ್ಬ ನಾಗರಿಕನೂ ಇದನ್ನು ಖಂಡಿಸಬೇಕು. ಸದ್ಭಾವನೆಯ ಒಬ್ಬ ಸಾಹಿತಿಗೆ, ಒಬ್ಬ ಸಂವೇದನಾಶೀಲ ನಾಗರಿಕನಿಗೆ ಈ ಸರ್ಕಾರ ಯಾವ ರಕ್ಷಣೆ ನೀಡುತ್ತಿದೆ. ಮೊಸಳೆ ಕಣ್ಣೀರು ಸುರಿಸಿ (ಮೊಸಳೆ ಕಣ್ಣೀರು ಸಹ ಬರುವುದಿಲ್ಲವೇನೋ) ತೆಪ್ಪಗಾಗುತ್ತದೆ.
ನನಗೆ ತುಂಬಾ ದುಃಖವಾಗಿದೆ. ನಿಮಗೆ ಯಾವ ರೀತಿ ಸಾಂತ್ವನಹೇಳಲಿ? ಅಂಥ ಮಾತುಗಳು ಶುಷ್ಕವಾಗುತ್ತವೆ. ಎಷ್ಟು ಅಣಕವಾಗುತ್ತವೆ. ಇಷ್ಟು ದೂರದಿಂದ ನಾನೇನು ಹೇಳಬಲ್ಲೆ? ನ್ಯಾಯಕ್ಕಾಗಿ ಹೋರಾಡಿದ ಪ್ರತಿಯೊಬ್ಬನೂ ತೆರಬೇಕಾದ ಬೆಲೆ ಇದು. ಸಾಕ್ರಟೀಸ್ನಿಂದ ಹಿಡಿದು ಗಾಂಧೀಜಿಯವರೆಗೆ.
ನಿಮ್ಮ ಪೂಜ್ಯತಂದೆಯವರಿಗೆ ನನ್ನ ನಮಸ್ಕಾರ ತಿಳಿಸಿ. ಮನೆಯವರೆಲ್ಲರಿಗೂ ನನ್ನ ಪ್ರೀತಿಯ ನೆನಕೆಗಳು. ನಿಮ್ಮ ಮಡದಿಯವರ ಆರೋಗ್ಯ ಈಗ ಸುಧಾರಿಸಿದೆ ಎಂದು ನಂಬುತ್ತೇನೆ.
ಮಕ್ಕಳಿಗೆ ಮುತ್ತು.
ಈಗ ಬಸ್ಸಿನಲ್ಲಿ ಹೆಚ್ಚು ಓಡಾಡಲಾಗುತ್ತಿಲ್ಲ. ಯಾರಾದರೂ ಕಾರಿನಲ್ಲಿ ಕರೆದುಕೊಂಡುಬಂದರೆ, ಅವರೊಡನೆ ಬಂದು, ಒಂದು ದಿನ ಅಥವಾ ಕೆಲವು ಗಂಟೆ ಜತೆಗಿದ್ದು, ಹಿಂದಿರುಗುತ್ತೇನೆ. ಆರೋಗ್ಯ ಹಿಂದಿನಂತಿಲ್ಲ. ಆದರೂ ನಿಮ್ಮನ್ನು ನೋಡಬೇಕೆಂಬ ಆಸೆ ಪ್ರಬಲವಾಗಿದೆ. ನಿಮ್ಮ ಮನೆಯ ಹತ್ತಿರ ಟೆಲಿಫೋನ್ ಇದೆಯೆ?- ಬಂದರೆ ಸಂಪರ್ಕಿಸುವುದು ಹೇಗೆ? ತಿಳಿಸಿ.
ಪ್ರೀತಿಯಿಂದ, ನಿಮ್ಮವನೆ
ಚದುರಂಗ
--
ಮುತ್ತಿನ ಹಾರ
ಎಂ.ಆರ್. ನಾಗರಾಜರಾವ್ 'ಮುತ್ತಿನ ಹಾರ' ಸಂಕಲನದಲ್ಲಿ ಹನ್ನೊಂದು ಕತೆಗಳನ್ನು ನೀಡಿದ್ದಾರೆ. ಸರಳವಾದ ಭಾಷೆಯೇ ಅವರ ಶೈಲಿ. ನಿತ್ಯ ಜೀವನದಲ್ಲಿ ಅವರ ಅನುಭವದ ಕಕ್ಷೆಗೆ ಬಂದ ಘಟನೆಗಳೇ ಇಲ್ಲಿ ಕತೆಗಳಾಗಿವೆ. ಗ್ರಾಮೀಣ ಬದುಕಿನ ಜೊತೆ ನಗರ ಬದುಕೂ ಇಲ್ಲಿಯ ವಸ್ತುಗಳು.
ಪ್ರ: ಅನನ್ಯ ಪ್ರಕಾಶನ, ಬೆಂಗಳೂರು, ಪುಟಗಳು 140, ಬೆಲೆ ರು. 125
--
ಸಾಮಾಜಿಕ ಭಾಷೆ
ಭಾಷೆಯ ಕನಿಷ್ಠ ಅರ್ಹತೆ ಅದರ ಸಂವಹನ ಸಾಧ್ಯತೆ. ಈ ಸಾಧ್ಯತೆ ಇಲ್ಲದಿದ್ದರೆ ಅದು ಬರೀ ಶಬ್ದಗಳಷ್ಟೇ. ಭಾಷೆಯ ಅನಂತ ಸಾಧ್ಯತೆಗಳನ್ನು ಸಾಮಾಜಿಕ ನೆಲೆಯಲ್ಲಿ ನಿರ್ವಚಿಸುವ ಪದ್ಧತಿ ಪಾಶ್ಚಾತ್ಯ ಮೂಲದ್ದು. ಕನ್ನಡದಲ್ಲಿ ಈ ದಿಶೆಯಲ್ಲಿ ನಡೆದ ವಿರಳ ಪ್ರಯತ್ನಗಳ ಸಾಲಿಗೆ ಕೃಷ್ಣ ಪರಮೇಶ್ವರ ಭಟ್ಟರ 'ಭಾಷೆ ಮತ್ತು ಸಾಮಾಜಿಕ ಸಂದರ್ಭ'ವೂ ಸೇರುತ್ತದೆ.
ಪ್ರ: ಅಭಿನವ, ಬೆಂಗಳೂರು, ಪುಟಗಳು 132, ಬೆಲೆ ರು. 85
--
ಹಿಂದೂಧರ್ಮ ವಿಚಾರ
ಸೂರ್ಯಂಬೈಲು ಕೃಷ್ಣಮೂರ್ತಿಯವರು 'ಹಿಂದೂ ಧರ್ಮ ವಿಚಾರ - ನಾನು ತಿಳಿದುಕೊಂಡಂತೆ' ಎಂಬ ಗ್ರಂಥವನ್ನು ರಚಿಸಿ ಹಿಂದೂ ಧರ್ಮದ ಬಗ್ಗೆ ಹಲವು ವಿಚಾರಗಳನ್ನು ವ್ಯಕ್ತಪಡಿದ್ದಾರೆ. ಹಿಂದೂ ಧರ್ಮ ಕಾಲಕ್ರಮದಲ್ಲಿ ವಿಕಸಿತವಾದ ಜೀವನ ರೀತಿ ಎಂಬುದು ಅವರ ವಿಚಾರದ ತಿರುಳು.
ಪ್ರ: ಟೋಟಲ್ ಕನ್ನಡ, ಬೆಂಗಳೂರು, ಪುಟಗಳು 142, ಬೆಲೆ ರು. 130
--
ಅಂಬಿಗರ ಚೌಡಯ್ಯನ ವಚನ
12ನೇ ಶತಮಾನದ ವಚನಕಾರರಲ್ಲಿ ಅಂಬಿಗರ ಚೌಡಯ್ಯನಿಗೆ ವಿಶೇಷ ಸ್ಥಾನ. ಆತನ ನೂರು ವಚನಗಳನ್ನು ಎಸ್.ಸಿ. ಗಂಗಾಪೂರ ಅವರು ಅರ್ಥ ಮತ್ತು ವಿವರಣೆಗಳೊಂದಿಗೆ 'ನಿಜ ಶರಣ ಶ್ರೀ ಅಂಬಿಗರ ಚೌಡಯ್ಯನವರ ವಚನಗಳು ಹಾಗೂ ಅವುಗಳ ಆಧ್ಯಾತ್ಮಿಕ ಹಿನ್ನೆಲೆ' ಕೃತಿಯಲ್ಲಿ ನೀಡಿದ್ದಾರೆ. ಶರಣ ಸಾಹಿತ್ಯದ ಅತ್ಯುತ್ತಮ ಝಲಕನ್ನು ನಾವಿಲ್ಲಿ ಕಾಣಬಹುದು.
ಪ್ರ: ಸುದೀಕ್ಷಾ ಪ್ರಕಾಶನ, ಬೈಲಹೊಂಗಲ, ಪುಟಗಳು 111, ಬೆಲೆ ರು. 100
--
ಹಿಂದೂಧರ್ಮ ವಿಚಾರ
ಮಹಾಭಾರತದ ದ್ರೋಣನನ್ನು ಕೇಂದ್ರವಾಗಿಟ್ಟಿಕೊಂಡು ಉದಯಕುಮಾರ ಹಬ್ಬು ಅವರು 'ಬಿಟ್ಟೇನೆಂದರೂ ಬಿಡದೀ ಮಾಯೆ...' ಎಂಬ ಕಾದಂಬರಿಯನ್ನು ಬರೆದಿದ್ದಾರೆ. ದ್ರೋಣನ ಆತ್ಮವೃತ್ತಾಂತದಂತೆ ಬೆಳೆಯುತ್ತ ಹೋಗುವ ಕತೆಯು ಆತನ ಬಡತನ ಆತನನ್ನು ಹೇಗೆ ಸನ್ನಿವೇಶದ ಬಲಿಪಶುವಾಗಿಸಿತು ಎಂಬುದನ್ನು ಹೇಳುತ್ತದೆ.
ಪ್ರ: ಜಾಗೃತಿ ಪ್ರಿಂಟರ್ಸ್, ಬೆಂಗಳೂರು, ಪುಟಗಳು 272, ಬೆಲೆ ರು. 200
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

