ಖುಷಿ

ಕಲಿಯುಗದ ಕೃಷ್ಣ!

ಕಲಿಯುಗದ ಕೃಷ್ಣ!
Published On :

ಒಂದು ಹೆಣ್ಣು ಏನನ್ನು ಬೇಕಾದರೂ ಹಂಚಿಕೊಳ್ತಾಳೆ, ಆದ್ರೆ ಯಾವುದೇ ಕಾರಣಕ್ಕೂ ಗಂಡನನ್ನ ಹಂಚಿಕೊಳ್ಳಲು ಯಾವ ಹೆಂಡ್ತಿಯೂ ಬಿಡೋಲ್ಲ. ಒಂದು ವೇಳೆ ಒಬ್ಬನಿಗೆ ಇಬ್ಬರು ಹೆಂಡ್ತೀರು ಇದ್ರೆ ಆ ಪುಣ್ಯಾತ್ಮನ ಕಥೆ ಹರೋಹರ! ಇಬ್ಬರು ಹೆಂಡ್ತೀರ ನಡುವಿನ ಗಂಡನ ಸ್ಟೋರಿ ಅದು ಸದಾ ಟ್ರ್ಯಾಜಿಡಿಯೇ.
ಆದರೆ, ಇಲ್ಲೊಂದು ಸಂಸಾರವಿದೆ. ಇಬ್ಬರು ಹೆಂಡ್ತೀರ ಮುದ್ದಿನ ಸಂಸಾರ. ಅಲ್ಲಿ ಗಲಾಟೆ ಇಲ್ಲ. ಸಾಮರಸ್ಯದ ಕೊರತೆ ಇಲ್ಲ. ದ್ವಿಪತ್ನಿತ್ವವನ್ನು ಪ್ರೋತ್ಸಾಹಿಸುವಂಥ ಫ್ಯಾಮಿಲಿ ಸ್ಟೋರಿ ಇದಲ್ಲ. ಇವರು ಕಲಿಯುಗದ ಕೃಷ್ಣ ರಾಧಾ ರುಕ್ಮಿಣಿಯರು! ಮಣ್ಣಲ್ಲಿ ಮಣ್ಣಾಗೋವರೆಗೂ ಮೂರು ದೇಹವಾದರೂ ಒಂದೇ ಆತ್ಮದಂತೆ ಎಂದು ಬದುಕುತ್ತಿರುವವರು.
ನಿಮಗೆ ಕನ್ನಡದ ಚಿತ್ರನಟಿ ಶ್ರುತಿ ಮತ್ತು ಕಾಮಿಡಿಯನ್ 'ವಿಕ್ಟರಿ' ಶರಣ್ ಗೊತ್ತಲ್ಲ... ಅವರ ಅಪ್ಪ- ಅಮ್ಮಂದಿರೇ ಈ ವಿಶಿಷ್ಟ ಹೆಜ್ಜೆಗುರುತುಗಳು.

ಕೃಷ್ಣನ್ ಲೈಫ್‌ಸ್ಟೋರಿ
ಶ್ರುತಿ- ಶರಣ್ ಅಪ್ಪ ಜಿ.ವಿ. ಕೃಷ್ಣ ಹುಟ್ಟು ಕಲಾವಿದರು. ಬಾಲ್ಯದಲ್ಲೇ ಗುಬ್ಬಿ ವೀರಣ್ಣ ಕಂಪನಿಯಲ್ಲಿ ರೆಗ್ಯುಲರ್ ಆ್ಯಕ್ಟರ್ ಆಗಿದ್ದವರು. ಎಲ್ಲ ಪಾತ್ರಗಳಲ್ಲೂ ಪರಕಾಯಪ್ರವೇಶ ಮಾಡುತ್ತಿದ್ದ ಕೃಷ್ಣರ ಅಭಿನಯ ಆಗ ಎಲ್ಲರಿಗೂ ಅಚ್ಚುಮೆಚ್ಚು. ನೀಳಕಾಯದ, ಸ್ಫುರದ್ರೂಪಿಯಾಗಿದ್ದ ಅವರನ್ನು ಕಂಡರೆ ಹೆಣ್ಣುಮಕ್ಕಳಿಗೂ ವಿಶೇಷ ಪ್ರೀತಿ.
ರಾಧಾ- ರುಕ್ಮಿಣಿ ಹೊಳೆನರಸೀಪುರದ ಸಂಗೀತ ಮೇಷ್ಟ್ರ ಕುಟುಂಬದಲ್ಲಿ ಅವಳಿ ಜವಳಿ ಮಕ್ಕಳಾಗಿ ಬೆಳೆದವರು. ಹುಟ್ಟುವಾಗ 2-3 ನಿಮಿಷ ಅಂತರದಲ್ಲಿ ಹುಟ್ಟಿದ್ದರೂ ಬೆಳೆಯುವಾಗ ಮಾತ್ರ ಒಂದು ನಿಮಿಷವೂ ಪರಸ್ಪರರನ್ನು ಬಿಟ್ಟು ಅಲುಗಾಡಿದವರಲ್ಲ. ಚಿಕ್ಕಂದಿನಿಂದಲೇ ಸಂಗೀತ ನಾಟಕದ ಗೀಳು ಹಚ್ಚಿಸಿಕೊಂಡಿದ್ದ ರಾಧಾ- ರುಕ್ಮಿಣಿಯರಿಗೂ ಮನೆಯಲ್ಲೇ ರಂಗಭೂಮಿಯ ಸ್ಪರ್ಶ ಸಿಕ್ಕಿತು.
ನಾಟಕವಾಡುತ್ತಲೇ ಜಿ.ವಿ. ಕೃಷ್ಣ ಮತ್ತು ರುಕ್ಮಿಣಿಯರ ನಡುವೆ ಪ್ರೇಮಾಂಕುರವಾಯಿತು. ಅದೇ ವೇಳೆ ಕೃಷ್ಣ ರಾಧಾ ಅವರನ್ನೂ ಇಷ್ಟಪಟ್ಟರು. ಆದರೆ, ಕೃಷ್ಣ ಅವರು ರುಕ್ಮಿಣಿಗೆ 'ನಿನ್ನ ಅಕ್ಕನನ್ನು ಇಷ್ಟಪಟ್ಟಿದ್ದೇನೆ' ಎಂದು ಎಂದೂ ಹೇಳಿದವರಲ್ಲ. ನಾಟಕ ಕಂಪನಿಯಲ್ಲಿದ್ದ ಕೆಲವು ನಟಿಯರೂ ಕೃಷ್ಣರನ್ನು ಇಷ್ಟಪಡುತ್ತಿದ್ದರು. ಆದರೆ, ಕೃಷ್ಣರಿಗೆ ಮೂಗುದಾರ ಹಾಕಿದ್ದ ರುಕ್ಮಿಣಮ್ಮ ಮಾತ್ರ ಅಲ್ಲಿ ಇಲ್ಲಿ ತಿರುಗಿನೋಡಲೂ ಬಿಡುತ್ತಿರಲಿಲ್ಲ. ರುಕ್ಮಿಣಿಗೆ ದೇವರು, ಪೂಜೆ ಪುನಸ್ಕಾರದ ಬಗ್ಗೆ ಆಸಕ್ತಿ ಇರಲಿಲ್ಲ. ಈ ಸಂದರ್ಭದಲ್ಲಿ ಪೂಜೆ ಪುನಸ್ಕಾರದ ಬಗ್ಗೆ ಹೆಚ್ಚೆಚ್ಚು ಒಲವು ಹೊಂದಿದ್ದ ರಾಧಾರನ್ನು ಮೆಚ್ಚಿಸಲು ಆಗಾಗ ಕೃಷ್ಣ, ದೇವರ ನಾಮಗಳನ್ನು ಹಾಡುತ್ತಿದ್ದರಂತೆ.
ಈ ನಡುವೆ ಕೃಷ್ಣ ಅವರೇ ರುಕ್ಮಿಣಿಗೆ ಮದುವೆ ಪ್ರಸ್ತಾಪ ಮಾಡಿದರು. ಆಗ ರುಕ್ಮಿಣಿ 'ನನ್ನನ್ನ ನೀವು ಮದ್ವೆ ಆಗಬೇಕಂದ್ರೆ ಒಂದು ಕಂಡೀಷನ್ ಇದೆ' ಎಂದರಂತೆ. ಇವರು ಏನೆಂದು ಕೇಳಿದರು. ಅದಕ್ಕೆ ರುಕ್ಮಿಣಿ, 'ನನ್ನ ಮದ್ವೆ ಆಗಬೇಕೂಂದ್ರೆ ನನ್ನ ಒಡಹುಟ್ಟಿದ ಅಕ್ಕನನ್ನೂ ನೀವು ಮದ್ವೆ ಆಗಬೇಕು' ಎಂದರಂತೆ! 'ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ' ಎಂಬಂತೆ ಬೈ ಒನ್ ಗೆಟ್ ಒನ್ ಆಫರನ್ನು ಕೃಷ್ಣ ಒಪ್ಪಿಕೊಂಡರು.

ಬದುಕಿನ ಬಂಡಿ
ಮದುವೆ ಆದಮೇಲೂ ಕೃಷ್ಣ- ರಾಧಾ- ರುಕ್ಮಿಣಿ ತಮ್ಮದೇ ನಾಟಕ ಕಂಪನಿಯನ್ನು ಕಟ್ಟಿಕೊಂಡು ರಾಜ್ಯದ ಹಲವೆಡೆ ತಿಂಗಳುಗಟ್ಟಲೆ ಪ್ರದರ್ಶನ ನಡೆಸಿದರು. ಈ ಕಲಾ ಯಶಸ್ಸಿನ ಹಾದಿಯಲ್ಲಿದ್ದಾಗಲೇ ನಟಿ ಮಂಜುಳಾರೊಂದಿಗೆ ಕೃಷ್ಣ ನಾಯಕನಾಗಿ 'ಸಿಂಧೂರ ಲಕ್ಷ್ಮಣ' ಸಿನಿಮಾ ಮಾಡಿದರು. ನಂತರ ಹಲವು ಚಿತ್ರಗಳಲ್ಲಿ ಪೋಷಕ ನಟನಾಗಿ ಅಭಿನಯಿಸಿದರು.

ಇಬ್ಬರು ಅಮ್ಮಂದಿರೆ!
ಈ ದಂಪತಿಗೆ ಮೂವರು ಮಕ್ಕಳು. ಮೊದಲನೆಯವರು ಶರಣ್, ನಂತರ ಶ್ರುತಿ, ಮೂರನೆಯವರು ಉಷಾ. ಇಲ್ಲಿ ರಾಧಾ- ರುಕ್ಮಿಣಿಯವರ ಮಕ್ಕಳು ಯಾರ್ಯಾರು ಎಂದು ಇಲ್ಲಿಯವರೆಗೂ ಶರಣ್, ಶ್ರುತಿ, ಉಷಾರಿಗಾಗಲಿ ಅಥವಾ ಹತ್ತಿರದ ನೆಂಟರಿಗಾಗಲಿ ಗೊತ್ತೇ ಇಲ್ಲ. ಕೃಷ್ಣ, ರಾಧಾ, ರುಕ್ಮಿಣಿ ಕೂಡ ತಮ್ಮ ಮಕ್ಕಳು ಯಾರೆಂದು ಯಾರ ಬಳಿಯೂ ಬಾಯಿಬಿಟ್ಟಿಲ್ಲ. ಮಕ್ಕಳು ಇಬ್ಬರಿಗೂ 'ಅಮ್ಮ' ಎಂದೇ ಕರೆಯುತ್ತಾರೆ. ನಾಟಕ ಕಂಪನಿಯಲ್ಲಿದ್ದಾಗಲೇ ಶರಣ್ ಮೈಕ್ ಅನೌನ್ಸರ್, ಸ್ಕ್ರೀನ್ ಟೆಸ್ಟರ್ ಆಗಿ, ನಟನಾಗಿ, ಗಾಯಕನಾಗಿ ಬಹುಮುಖಿಯಾಗಿ ಬೆಳೆದರು. ಶ್ರುತಿಯೂ ಅಪ್ಪ ಅಮ್ಮನಂತೆ ನಟನೆಯ ಕಡೆಗೆ ಹೆಚ್ಚು ವಾಲಿದರು. ಆದರೆ, ಉಷಾರ ಬಳಿ ಮಾತ್ರ ಈ ಬಣ್ಣದ ಗಾಳಿ ಸುಳಿಯಲಿಲ್ಲ. ಶರಣ್‌ರನ್ನು ಬೆಂಗಳೂರಿಗೆ ಕರೆತಂದು ಸಿನೆಮಾದಲ್ಲಿ ಮಿಂಚಿಸಬೇಕೆಂದು ಹಾರ್ಸ್ ರೈಡಿಂಗ್, ಕರಾಟೆ ಎಲ್ಲವನ್ನೂ ಕಲಿಸೋದಿಕ್ಕೆ ಕೃಷ್ಣ ಪಟ್ಟ ಶ್ರಮ ಅಷ್ಟಿಷ್ಟಲ್ಲ. ಆದರೆ, ಶರಣ್ ಚಿತ್ರರಂಗ ಪ್ರವೇಶಿಸುವ ಮುನ್ನ ತಂಗಿ ಶ್ರುತಿ ದ್ವಾರಕೀಶ್‌ರ ಕಣ್ಣಿಗೆ ಬಿದ್ದು ನಟಿಯಾದರು.

ಅಮ್ಮನ ಪಾತ್ರಗಳು
ಇವರ ಸಂಸಾರದಲ್ಲಿ ಎಂದಿಗೂ ಬಿರುಕು ಬಂದಿದ್ದೇ ಇಲ್ಲ. ರಾಧಾ ಅಡುಗೆ, ಮಕ್ಕಳೆಂದು ಮೊದಲಿನಿಂದಲೂ ಇನ್‌ಡೋರ್ ಅಮ್ಮ ಆಗಿಯೇ ಪಾತ್ರ ನಿರ್ವಹಿಸಿದರು. ರುಕ್ಮಿಣಿ ನಾಟಕ, ವ್ಯವಹಾರ ಅಲ್ಲದೆ ಶ್ರುತಿಯೊಂದಿಗೆ ಶೂಟಿಂಗ್‌ಗೆ ಹೋಗಿ 'ಔಟ್‌ಡೋರ್ ಅಮ್ಮ' ಎನ್ನಿಸಿಕೊಂಡರು. ಎಂದಿಗೂ ರಾಧಾ ಮತ್ತು ರುಕ್ಮಿಣಿ ನಡುವೆ ವಿರಸ ಹೊಗೆಯಾಗಲಿಲ್ಲ.

ಥೇಟ್ ಒಂದೇ ಥರ
ರಾಧಾ ಮತ್ತು ರುಕ್ಮಿಣಿ ಹೋಲಿಕೆಯಲ್ಲಿ ಒಂದೇ ರೀತಿ. ಉಡುಗೆಯೂ ಒಂದೇ ಥರನೆ. ಯಾರು ರಾಧಾ, ಯಾರು ರುಕ್ಮಿಣಿ ಎಂಬುದನ್ನು ಗುರುತಿಸುವುದು ಕಷ್ಟ. ಸೀರೆ, ಬಳೆ, ಕನ್ನಡಕ, ಜುಮುಕಿ, ಹೇರ್‌ಸ್ಟೈಲ್... ಯಾವುದರಲ್ಲೂ ವ್ಯತ್ಯಾಸ ಕಾಣದು. ಇಬ್ಬರೂ ಒಂದೇ ರೀತಿ ಶಾಪಿಂಗ್ ಮಾಡ್ತಾರೆ. ಶರಣ್, ಶ್ರುತಿ ಮತ್ತು ಉಷಾ ಕೂಡ ಏನೇ ತಂದರೂ ಅಮ್ಮಂದಿರಿಗಾಗಿ ಎರಡೆರಡು ತರುತ್ತಾರೆ.

ಮುಸ್ಸಂಜೆ ಬದುಕು
ಬೆಂಗಳೂರಿನ ಜಂಜಾಟದಿಂದ ದೂರವುಳಿಯಲು ಬಯಸಿರುವ ಈ ದಂಪತಿ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಗೊಲ್ಲರದೊಡ್ಡಿಯಲ್ಲಿ ನೆಲೆಸಿದೆ. 3 ಎಕರೆ ಜಮೀನಿನಲ್ಲಿ ಖುಷಿ ಮಾಡಿಕೊಂಡು ಮುಸ್ಸಂಜೆಯ ದಿನಗಳನ್ನು ಕಳೆಯುತ್ತಿದ್ದಾರೆ. ಅಲ್ಲಿರುವುದು ಪುಟ್ಟ ಮನೆ. ಅಲ್ಲಿ ನೆಮ್ಮದಿ ದೊಡ್ಡದು.

ಕೊನೆ ಆಸೆಯೂ ಒಂದೇ
ರಾಧಾ- ರುಕ್ಮಿಣಿ ಜೊತೆಯಲ್ಲೇ ಹುಟ್ಟಿ ಬೆಳೆದಿರುವುದರಿಂದ 'ಮಣ್ಣಲ್ಲಿ ಮಣ್ಣಾಗೋ ಸಮಯ ಬಂದರೂ ಇದೇ ತೋಟದ ಮಣ್ಣಲ್ಲಿ ಒಂದೇ ಕಡೆ ನಮ್ಮನ್ನು ಒಂದು ಮಾಡಬೇಕು' ಎಂದು ತಮ್ಮ ತೋಟದಲ್ಲೇ ಜಾಗವನ್ನೂ ನಿಗದಿಮಾಡಿದ್ದಾರೆ! 'ನಿಜ ಜೀವನದಲ್ಲೂ ಇಬ್ಬರು ಹೆಂಡತಿಯರ ನಡುವೆ ಸುಖಸಂಸಾರ ನಡೆಸುತ್ತಿದ್ದೇನೆ' ಎಂದು ಜಿ.ವಿ. ಕೃಷ್ಣ ಹೇಳುತ್ತಿದ್ದರೆ, ಮತ್ತೊಂದೆಡೆ 'ನಾವಿಬ್ಬರು ಒಬ್ಬರನ್ನೇ ಮದ್ವೆಯಾಗಿದ್ದರೂ ನೆಮ್ಮದಿಯಾಗಿದ್ದೀವಿ' ಎಂದು ರಾಧಾ- ರುಕ್ಮಿಣಿ ಹೇಳುತ್ತಿದ್ದಾರೆ. ಇವರ ದಾಂಪತ್ಯ ನೂರು ಕಾಲ ನೆಮ್ಮದಿಯಾಗಿರಲಿ. ಒಂದು ಮದುವೆಯಾಗಿಯೂ ವಿಚ್ಛೇದನ ಮಾಡಿಕೊಂಡು ಒದ್ದಾಡುವ ಮನಸ್ಸುಗಳಿಗೆ ಇವರು ಮಾದರಿಯಾಗಲಿ.

ಕಮಲ್ ಕರುಬಿದರು...
ಕಮಲ್ ಹಾಸನ್ ಕೂಡ 'ರಾಮಾ ಶಾಮಾ ಭಾಮಾ' ಶೂಟಿಂಗ್ ಸೆಟ್‌ನಲ್ಲಿ ಶ್ರುತಿಯ ಅಮ್ಮಂದಿರನ್ನು ನೋಡಿ ಅಚ್ಚರಿಪಟ್ಟರಂತೆ. 'ನಿಜವಾಗಲೂ ಕಷ್ಣ ಅವರು ಸಖತ್ ಲಕ್ಕಿ. ಯಾರಿಗೆ ತಾನೆ ಇಂಥ ಆಫರ್ ಸಿಗುತ್ತೆ?' ಎಂದು ಅವರೂ ತಮಾಷೆ ಮಾಡಿದ್ದರಂತೆ.

ಅಣ್ಣಾವ್ರು ಮಾಡಿದ ತಮಾಷೆ

ಮೇರುನಟ ಡಾ. ರಾಜ್‌ಕುಮಾರ್ ಕೂಡ ಇವರ ಸಂಸಾರ ನೋಡಿ ಖುಷಿಪಟ್ಟರು. 'ದೇವಲೋಕದ ದೇವಾನುದೇವತೆಗಳೂ ತಮ್ಮ ಗಂಡನಿಗಾಗಿ ಒಮ್ಮೊಮ್ಮೆ ಕಿತ್ತಾಡುತ್ತಾರಂತೆ. ಆದ್ರೆ ನೀವು ಜಗಳವಾಡದೆ ಇರೋದನ್ನ ನೋಡಿದ್ರೆ ದೇವಲೋಕಕ್ಕೇ ಅಸೂಯೆ ಆಗಿರಬಹುದು. ಸಣ್ಣ ಪುಟ್ಟ ವಿಚಾರಕ್ಕಾದ್ರೂ ಜಗಳ ಮಾಡ್ರೀ. ಇಲ್ಲ ಅಂದ್ರೆ ದೃಷ್ಟಿ ಆಗುತ್ತೆ' ಎಂದು ಕಿಚಾಯಿಸುತ್ತಿದ್ದರಂತೆ.

- ಕಿರಣ್ ಕುಮಾರ್
kasthurikiran9@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.