ಖುಷಿ

ಖಾಲಿ ಜಾಗ ಭರ್ತಿ ಮಾಡೋ ಪೈಗಳು!

ಶ್ರೀ ದಯಾನಂದ ಪೈ ಅವರಿಗೆ ನಮಸ್ಕಾರಗಳು...ಹೇಗಿದ್ದೀರಿ? ರಿಯಲ್ ಎಸ್ಟೇಟ್ ಉದ್ಯಮಿಯಲ್ಲವೇ, ಭೂಮಿಗೆ ಬೆಲೆ ಇರುವ ...

ಖಾಲಿ ಜಾಗ ಭರ್ತಿ ಮಾಡೋ ಪೈಗಳು!
Published On :

ಶ್ರೀ ದಯಾನಂದ ಪೈ ಅವರಿಗೆ ನಮಸ್ಕಾರಗಳು...
ಹೇಗಿದ್ದೀರಿ? ರಿಯಲ್ ಎಸ್ಟೇಟ್ ಉದ್ಯಮಿಯಲ್ಲವೇ, ಭೂಮಿಗೆ ಬೆಲೆ ಇರುವ ತನಕ ಚೆನ್ನಾಗೇ ಇರ್ತೀರ ಬಿಡಿ. ಅದರಲ್ಲೂ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ವ್ಯಾಪಾರ ಅಂದ್ರೆ ಕೇಳಬೇಕೇ?
ಅಂದಹಾಗೆ, ನಿಮಗೆ ಅಭಿನಂದನೆಗಳು ಸಾರ್. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಚುನಾವಣೆಯಲ್ಲಿ ಖಜಾಂಚಿ ಸ್ಥಾನಕ್ಕೆ ಆಯ್ಕೆಯಾಗಿದ್ದೀರಲ್ಲ ಅದಕ್ಕೆ.
ಅಲ್ಲ ಸಾರ್, ನಿಮಗೂ ಕ್ರಿಕೆಟ್ಟಿಗೂ ಏನು ಸಂಬಂಧ? ಯಾವತ್ತಾದ್ರೂ ಬಾಲು, ಬ್ಯಾಟು ಹಿಡಿದು ಆಟ ಆಡಿದ್ದೀರ. ಹೋಗಲಿ, ಸರಿಯಾಗಿ ಕುಳಿತು ಆಟ ನೋಡಿದ್ದೀರ? ಅದಕ್ಕೆಲ್ಲ ನಿಮಗೆ ಟೈಂ ಎಲ್ಲಿಂದ ಬರಬೇಕು? ನಿಮ್ಮ ಆಟಪಾಠ, ವ್ಯವಹಾರ ಏನಿದ್ದರೂ ಭೂಮಿ ಜೊತೆಗೆ ಅಲ್ವಾ? ಅಂದರೆ, ಲ್ಯಾಂಡ್ ಡೆವಲಪ್ಪರ್ ಆಗಿರುವ ನೀವು ಲೇಔಟು, ಅಪಾರ್ಟ್‌ಮೆಂಟು ಅಂತ ಓಡಾಡ್ತೀರಿ. ಹೀಗಿರುವಾಗ ಕ್ರಿಕೆಟ್ ಬಗ್ಗೆ ಏಕೆ ತಲೆಕೆಡಿಸಿಕೊಳ್ತೀರಿ ಹೇಳಿ. ಅದರೂ ಕ್ರಿಕೆಟ್ ಸಂಸ್ಥೆಗೆ ಖಜಾಂಚಿಯಾಗಿದ್ದೀರಿ, ಫೈನ್.
ನೀವು ಎಲೆಕ್ಷನ್‌ನಲ್ಲಿ ಸ್ಪರ್ಧೆ ಮಾಡಿದ್ದು, ಗೆದ್ದಿದ್ದು ಎಲ್ಲವೂ ಓಕೆ. ಆದರೆ, ಜನಗಳಿಗೆ ಇರುವ ಅನುಮಾನ ಒಂದೇ. ಮುಂದೆ ಚಿನ್ನಸ್ವಾಮಿ ಸ್ಟೇಡಿಯಂ ಕಥೆ ಏನು ಎನ್ನುವುದು. ಏಕೆ ಎಂದರೆ, ಎಷ್ಟಾದರೂ ನೀವು ಭೂಮಿಪುತ್ರರು. ಖಾಲಿ ಭೂಮಿ ಎಲ್ಲಿಯೇ ಇದ್ದರೂ ಬೇಲಿ ಹಾಕುವುದು ಹೇಗೆ? ಅಪಾರ್ಟ್‌ಮೆಂಟ್ ಕಟ್ಟುವುದು ಹೇಗೆ? ಅಂತ ತಲೆ ಕೆಡಿಸಿಕೊಳ್ಳೋದು ನಿಮಗೆ ಕಾಮನ್.
ಚಿನ್ನಸ್ವಾಮಿ ಸ್ಟೇಡಿಯಂ ಸಹ ವಿಶಾಲವಾಗಿದೆ, ಜಾಗ ಬೇಜಾನ್ ಖಾಲಿ ಇದೆ ಅಂತ ಅಲ್ಲೇನಾದರೂ ಭಾರಿ ಅಪಾರ್ಟ್‌ಮೆಂಟ್ ಎಬ್ಬಿಸಿದರೆ ಪಾಪ, ನಮ್ಮ ಕ್ರಿಕೆಟ್‌ಪಟುಗಳು ಬ್ಯಾಟು, ಬಾಲು ಹಿಡ್ಕೊಂಡು ಹೋಗುವುದಾದರೂ ಎಲ್ಲಿಗೆ ಸಾರ್?
ಆ ಬ್ರಿಜೇಶ್ ಪಟೇಲರಿಗೂ ನಿಮ್ಮಂಥೋರೆ ಬೇಕು. ನಿಮಗೆ ಅವರು ಅದ್ಯಾವ ಮೋಡಿ ಮಾಡಿದರೋ ಏನೋ ಗೊತ್ತಿಲ್ಲ. ನೀವು ಹೋಗಿ ಹೋಗಿ ಅವರ ಟೀಮು ಸೇರಿಕೊಂಡಿದ್ದೀರಿ. ಗೇಮು, ಡಬ್ಬಲ್ ಗೇಮು ಎಲ್ಲವೂ ಪಟೇಲರಿಗೆ ಚೆನ್ನಾಗಿ ಗೊತ್ತು. ನಿಮ್ಮನ್ನ ಬಳಿಸಿಕೊಂಡು ಅವರು ಎಲೆಕ್ಷನ್ ಗೆದ್ರು. ಮುಂದೆ ನೋಡ್ತಾ ಇರಿ. ಕ್ರಿಕೆಟ್‌ನಲ್ಲಿ 12ನೇ ಆಟಗಾರನ ಥರ ನಿಮ್ಮನ್ನ ಮಾಡಿಬಿಡ್ತಾರೆ. ಇದೇ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬಾಲ್ ಬಾಯ್ ಮಾಡಿದ್ರೂ ಗಾಬರಿ ಆಗಬೇಡಿ ಒಕೆ.
ಬ್ರಿಜೇಶ್ ಪಟೇಲರು ಕ್ರಿಕೆಟ್ಟಿನಲ್ಲಿ ಪಳಗಿದವರು. ಕ್ರಿಕೆಟ್ ಉದ್ಧಾರ ಆಗಿರೋದೇ ನನ್ನಿಂದ ಅನ್ನೋರು ಅವರು. ಚಿನ್ನಸ್ವಾಮಿ ಸ್ಟೇಡಿಯಂನ ಯಾವುದಾದರೂ ಮೂಲೆಯಲ್ಲಿ ನಿಮ್ಮನ್ನ ಕೂರಿಸಿ ಇಡೀ ಸ್ಟೇಡಿಯಂನ ಉಸ್ತುವಾರಿಯನ್ನ ಅವರೇ ವಹಿಸಿಕೊಳ್ತಾರೆ ನೋಡ್ತಾ ಇರಿ. ಹುಷಾರು ಸಾರ್, ಅವರ ಆಟದಲ್ಲಿ ನೀವು ಹಿಟ್ ವಿಕೆಟ್ ಆದರೂ ಆಶ್ಚರ್ಯ ಇಲ್ಲ.
ಅಲ್ಲ ಸಾರ್, ಜನಗಳ ಮಧ್ಯ ನೀವು ಓಡಾಡೋದೆ ಕಡಿಮೆ. ಏಕೆ ಅಂದರೆ, ಗಾಳಿಯಲ್ಲಿ ಗುಂಡು ಯಾವ ಕಡೆಯಿಂದ ಬರುತ್ತೋ ಏನೋ ಗೊತ್ತಾಗಲ್ಲ. ಹೀಗಾಗಿ ನೀವು ಜನಗಳ ಮಧ್ಯ ಇದ್ದುಕೊಂಡು ಕ್ರಿಕೆಟ್‌ನ ಅದೇನು ಉದ್ಧಾರ ಮಾಡ್ತೀರೋ ಶಿವನೇ ಬಲ್ಲ ಅಂತ ಜನ ಹೇಳ್ತಾ ಇದ್ದಾರೆ.
ಪೈಗಳು ಒಂದಂಗಲ ಭೂಮಿ ಸಿಕ್ಕಿದ್ರೂ ಬೇಲಿ ಹಾಕಿಬಿಡ್ತಾರೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ದೊಡ್ಡದೊಂದು ಅಪಾರ್ಟ್‌ಮೆಂಟ್ ಕಟ್ಟಿ, 25ನೇ ಮಹಡಿಯ ಮೇಲೆ ಸ್ಟೇಡಿಯಂ ಕಟ್ಟಿಸಿದರೂ ಕಟ್ಟಿಸಬಹುದು ಅನ್ನೋ ಮಾತೂ ನನ್ನ ಕಿವಿಗೆ ಬಿತ್ತು. ಹಾಗೇನಾದರೂ ಮಾಡುವ ಐಡಿಯಾ ಇದೆಯೇ? ಬೆಂಗಳೂರಿನ ಅರಮನೆ ಮೈದಾನದ ಮೇಲೂ ನಿಮ್ಮ ಕಣ್ಣು ಬಿದ್ದಿತ್ತು. ಪ್ಲಾನ್ ಕೈಕೊಡ್ತು ಅಲ್ವಾ?
ಏನೇ ಆದರೂ ನೀವು ಕ್ರಿಕೆಟ್ ಸಂಸ್ಥೆ ಚುನಾವಣೆಯನ್ನ ಯಾವುದೇ ಅಸೆಂಬ್ಲಿ, ಪಾರ್ಲಿಮೆಂಟ್ ಎಲೆಕ್ಷನ್ನಿಗೂ ಕಡಿಮೆ ಇಲ್ಲದಂತೆ ಮಾಡಿಬಿಟ್ರಿ. ಅದೇನು ಪಾರ್ಟಿಗಳು, ಗುಂಡು, ತುಂಡು. ಮಸ್ತ್ ಇತ್ತು ಬಿಡಿ. ಎಲೆಕ್ಷನ್‌ನಲ್ಲಿ ನೀವೇ ಅಂತೆ ಜಾಸ್ತಿ ಖರ್ಚು ಮಾಡಿದ್ದು. ಇದೆಲ್ಲ ಏಕೆ ಅಂತ ನಿಮ್ಮ ಸ್ನೇಹಿತರನ್ನ ಕೇಳಿದೆ. ಪೈಗಳು ಬಿಸಿಸಿಐಗೆ ಹೋಗೋ ಪ್ಲಾನ್ ಮಾಡ್ತಾ ಇದಾರೆ ಅಂದ್ರು. ನಿಜವೇ?
ಇನ್ನೂ ಯಾರ್ಯೋರೋ ಏನೇನೋ ಹೇಳಿದ್ರು. ಅಲ್ಪಸ್ವಲ್ಪ ನಿಮ್ ಕಿವಿಗೆ ಹಾಕಿದ್ದೀನಿ, ಡೋಂಟ್ ಮೈಂಡ್ ಸಾರ್. ನಮಸ್ಕಾರ...

- ಕೆ.ವಿ. ಪ್ರಭಾಕರ್‌
prabhukolar@yahoo.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.