ಖುಷಿ

ಮನೆಯೊಳಗಣ ಹುಲಿ

ನೈನಿತಾಲ್‌ನ ಗುಡ್ಡಪ್ರದೇಶದಲ್ಲಿ ನನ್ನಜ್ಜನ ಮನೆಯಿತ್ತು. ಅವರು ಒಮ್ಮೆ ಬೇಟೆಗೆ ಹೋದಾಗ, ಹುಲಿ ಮರಿಯೊಂದು ಕಾಣಸಿಕ್ಕಿತು. ಅಜ್ಜ ಅದನ್ನು ಮನೆಗೆ ತಂದು,...

ಮನೆಯೊಳಗಣ ಹುಲಿ
Published On :

ನೈನಿತಾಲ್‌ನ ಗುಡ್ಡಪ್ರದೇಶದಲ್ಲಿ ನನ್ನಜ್ಜನ ಮನೆಯಿತ್ತು. ಅವರು ಒಮ್ಮೆ ಬೇಟೆಗೆ ಹೋದಾಗ, ಹುಲಿ ಮರಿಯೊಂದು ಕಾಣಸಿಕ್ಕಿತು. ಅಜ್ಜ ಅದನ್ನು ಮನೆಗೆ ತಂದು, ತಿಮೋತಿ ಎಂದು ಹೆಸರಿಟ್ಟು  ಮುದ್ದಿನಿಂದ ಸಾಕಲಾರಂಭಿಸಿದರು. ಅದು ಅಲ್ಲಿದ್ದ ಕೋತಿ ಮತ್ತು ನಾಯಿ ಮರಿ ಜತೆ ಆಟವಾಡುತ್ತಾ ದೊಡ್ಡದಾಗತೊಡಗಿತು. ನಾನು ಅಲ್ಲಿಗೆ ಹೋದಾಗ, ಅದರ ಜತೆ ವಾಕಿಂಗ್ ಹೋಗಿ ಬರುತ್ತಿದ್ದೆ.
ತಿಮೋತಿಗೆ ಆರು ತಿಂಗಳಾಯಿತು. ಬರಬರುತ್ತ ಅದರ ವರ್ತನೆ ಒರಟಾಗತೊಡಗಿತು. ಹುಲಿಯನ್ನು ಇಲ್ಲಿಂದ ಕಳಿಸಲು ಸೂಕ್ತ ಸಮಯ ಎಂದು ಅಜ್ಜನಿಗೆ ಅನಿಸಿತು. ಅದನ್ನು ಲಖನೌ ಮೃಗಾಲಯಕ್ಕೆ ಒಯ್ದರು. ಇದೆಲ್ಲ ಆಗಿ ಆರು ತಿಂಗಳಾಯಿತು. ಅಜ್ಜನಿಗೆ ಪುನಃ ಲಖನೌದ ಸಂಬಂಧಿಕರ ಮನೆಗೆ ಹೋಗುವುದಿತ್ತು. ಅಲ್ಲಿಗೆ ಹೋದಾಗ ಮೃಗಾಲಯಕ್ಕೂ ಹೋದರು. ಅವರು ಬಿಟ್ಟು ಬಂದ ಆ ಪಂಜರದಲ್ಲಿ, ಈಗ ದೊಡ್ಡದಾಗಿ ಬೆಳೆದ ಸೊಗಸಾದ ಪಟ್ಟೆ ಪಟ್ಟೆಗಳ ಹುಲಿಯಿತ್ತು. ತಿಮೋತಿಯ ರೂಪಾಂತರದಿಂದ ಆನಂದಗೊಂಡ ಅಜ್ಜ, ಪಂಜರದ ಹತ್ತಿರ ಹೋಗಿ, ಅದನ್ನು ಬಳಿಗೆ ಕರೆದರು. ಹುಲಿ ನೆಗೆದು ಹತ್ತಿರಕ್ಕೆ ಬಂತು. ಅಜ್ಜ ಅದರ ಕುತ್ತಿಗೆ ತುರಿಸತೊಡಗಿದರು, ಕಿವಿಗಳಿಗೆ ಕಚಗುಳಿಯಿಟ್ಟರು. ಹುಲಿ ಸಂತೋಷದಿಂದ ಅಜ್ಜನ ಕೈ ನೆಕ್ಕಿತು. ಆದರೆ ಪಕ್ಕದ ಪಂಜರದಲ್ಲಿದ್ದ ಚಿರತೆ ಗುರ್ರೆಂದಾಗ, ಅದು ಪಂಜರದ ಮೂಲೆಗೆ ಓಡಿಹೋಯ್ತು.
ಇದನ್ನು ನೋಡಿ ಅಜ್ಜನಿಗೆ ಬೇಸರವಾಯ್ತು. ಅಕ್ಕಪಕ್ಕ ನೋಡಿದರು. ತಾನು ಹುಲಿಯನ್ನು ಬಿಟ್ಟುಹೋದಾಗ ಇಲ್ಲಿದ್ದ ಕಾವಲುಗಾರ ಕಾಣಿಸಿದ. ಅವನು ಇವರನ್ನೇ ಆತಂಕದಿಂದ ನೋಡುತ್ತಿದ್ದ. ಕೇಳಿದರು- 'ಈ ಹುಲಿಯನ್ನು ಬೇರೆ ಕಡೆ ಸ್ಥಳಾಂತರಿಸಬಾರದೆ? ಆ ಚಿರತೆ ನನ್ನ ಈ ಹುಲಿಯನ್ನು ಹೆದರಿಸುತ್ತಿದೆ.' ಕಾವಲುಗಾರ ಉತ್ತರಿಸಿದ- 'ಕ್ಷಮಿಸಿ ಸರ್, ಅದು ನಿಮ್ಮ ಹುಲಿಯಲ್ಲ. ನಿಮ್ಮ ಹುಲಿ ನ್ಯುಮೋನಿಯಾದಿಂದ ಎರಡು ತಿಂಗಳ ಹಿಂದೇನೇ ಸತ್ತುಹೋಯ್ತು. ಇದು ಕಳೆದ ವಾರ ತಾನೆ ಕಾಡಿನಿಂದ ಹಿಡಿದು ತಂದ ಹುಲಿ, ಅಪಾಯಕಾರಿಯಾಗಿದೆ ಸರ್...'
ಈಗ ಹುಲಿ ಮತ್ತೆ ಅಜ್ಜನ ಹತ್ತಿರ ಬಂದು ಅವರ ಕೈಯನ್ನು ತೀವ್ರವಾಗಿ ನೆಕ್ಕತೊಡಗಿತ್ತು. ಅಜ್ಜ ಮೆತ್ತಗೆ ಕೈ ಹಿಂದೆಳೆದುಕೊಂಡು 'ಬಾಯ್ ತಿಮೋತಿ' ಎಂದು ಅಲ್ಲಿಂದ ಬಿರಬಿರನೆ ಹೊರಟುಬಂದರು.
ಇದು ರಸ್ಕಿನ್ ಬಾಂಡ್ ಬರೆದ 'ಎ ಟೈಗರ್ ಇನ್ ದಿ ಹೌಸ್‌' ಕತೆಯ ಕಿರು ರೂಪ. ಡೆಹ್ರಾಡೂನ್‌ನಲ್ಲಿ ವಾಸಿಸುವ ಅವರಿಗೆ ಈಗ 79 ವರ್ಷ.ಟಿ

- ಹರೀಶ್ ಕೇರ
harishkera@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.