ನೋಬೆಲ್ ನಗರಿ
ಸ್ವೀಡನ್ನಿನ ಸ್ಟಾಕ್‌ಹೋಂನ ಹೆಸರನ್ನೂ ನೀವು ಕೇಳಿದ್ದೀರಿ. ಜಗತ್ತಿಗೆ ನೋಬೆಲ್ ಗೌರವದ ಕೂಗು ಇಲ್ಲಿಂದಲೇ ಕೇಳುವುದು. ಕಳೆದ ಜುಲೈನಲ್ಲಿ ...

ಸ್ವೀಡನ್ನಿನ ಸ್ಟಾಕ್‌ಹೋಂನ ಹೆಸರನ್ನೂ ನೀವು ಕೇಳಿದ್ದೀರಿ. ಜಗತ್ತಿಗೆ ನೋಬೆಲ್ ಗೌರವದ ಕೂಗು ಇಲ್ಲಿಂದಲೇ ಕೇಳುವುದು. ಕಳೆದ ಜುಲೈನಲ್ಲಿ ಸಂದರ್ಶಕ ಅಧ್ಯಾಪಕನಾಗಿದ್ದಾಗ ನನಗೆ ಆ ನಗರವನ್ನು ಮತ್ತೆ ನೋಡುವ ಅವಕಾಶ ಲಭಿಸಿತು. ಯೂರೋಪಿನ ಮಿಕ್ಕ ನಗರಗಳಂತೆ ಇಲ್ಲಿ ನೋಡುವುದಕ್ಕೆ ವಿಪರೀತ ಜಾಗಗಳಿಲ್ಲ. ನೋಬೆಲ್ ಒಂದೇ ಈ ನಗರದ ಹೆಗ್ಗಳಿಕೆ. ಪ್ರೇಕ್ಷಣೀಯ ಸ್ಥಳಗಳು ಇದ್ದರೂ, ಅವೂ ನೋಬೆಲ್‌ಗೆ ಸಂಬಂಧಿಸಿದ್ದೇ ಆಗಿವೆ.
ನೋಬೆಲ್ ಮನೆತನದ ಮನೆ
ಮೊದಲು ನಮ್ಮನ್ನು ನೋಬೆಲ್ ಮನೆತನದವರು ವಾಸಿಸಿರುವ ಮನೆಯ ಮುಂದೆ ಕರೆದೊಯ್ಯಲಾಯಿತು. ಆ ಮನೆಯೊಳಗೆ ಯಾರಿಗೂ ಪ್ರವೇಶವಿಲ್ಲ. ದೂರದಿಂದ ನೋಡಬಹುದಷ್ಟೆ. ಆಲ್‌ಫ್ರೆಡ್ ನೋಬೆಲ್ ಜನಿಸಿದ್ದು 1833ರಲ್ಲಿ, ಮರಣಹೊಂದಿದ್ದು 1896ರಲ್ಲಿ. ಈತ ರಸಾಯನ ಶಾಸ್ತ್ರಜ್ಞ. ಡೈನಮೈಟ್ ಕಂಡುಹಿಡಿದು ಅಪಾರ ಧನ ಸಂಪಾದಿಸಿದ. ಇಂದಿಗೂ ಅವನು ಸ್ಥಾಪಿಸಿದ ಸಂಸ್ಥೆಗಳು ಗಣನೀಯ ಲಾಭ ಗಳಿಸುತ್ತಿವೆ. ನೋಬೆಲ್ ಮನೆತನ ತಮ್ಮ ಬಡ್ಡಿಯ ಹಣದಿಂದ ನೋಬೆಲ್ ಬಹುಮಾನಗಳನ್ನು ನೀಡುತ್ತಿವೆ.
ಪ್ರತಿ ಡಿಸೆಂಬರ್ 10 ಸ್ಟಾಕ್‌ಹೋಮಿನಲ್ಲಿ ಹಬ್ಬದ ರಂಗು. ಅಂದು ನೋಬೆಲ್ ಗೌರವ ವಿತರಣೆ. ಶಾಂತಿ ಬಹುಮಾನವನ್ನು ಮಾತ್ರ ಪ್ರತ್ಯೇಕವಾಗಿ ನೆರೆರಾಷ್ಟ್ರ ನಾರ್ವೆಯ ಓಸ್ಲೋನಲ್ಲಿ ಮತ್ತೆಂದೋ ನೀಡಲಾಗುತ್ತದೆ. ಸುಮಾರು ಹನ್ನೆರಡರ ಹೊತ್ತಿಗೆ ಪ್ರಶಸ್ತಿ ಪ್ರದಾನ, ನಗರದ ಕಾನ್ಸರ್ಟ್ ಹಾಲ್‌ನಲ್ಲಿ. ಸಾಧಾರಣ ದಿನಗಳಲ್ಲಿ ಇದರ ಸುತ್ತಾ ತರಕಾರಿ ಇತ್ಯಾದಿಗಳನ್ನು ಮಾರುವ ಚಿಕ್ಕ ಅಂಗಡಿಗಳು. ಆದರೆ, ಡಿ.10ರಂದು ಇಲ್ಲಿನ ಖದರ್ರೇ ಬೇರೆ.
ಕಾರ್ಯಕ್ರಮ ಸ್ವರೂಪ
ರಾಷ್ಟ್ರಗೀತೆಯೊಡನೆ ಕಾರ್ಯಕ್ರಮ ಆರಂಭ. ನಂತರ ಸ್ವೀಡನ್ನಿನ ರಾಜ- ರಾಣಿ ಒಂದೊಂದಾಗಿ ಬಹುಮಾನ ವಿತರಿಸುತ್ತಾರೆ. ಮೊದಲು ಬಹುಮಾನಿತರ ಘೋಷಣೆ, ನಂತರ ಪಾರಿತೋಷಕ ಮತ್ತು ಡಿಪ್ಲೋಮಾ ಪ್ರದಾನ. ವಿಜೇತರ ಉತ್ತರ. ಮಧ್ಯ ಮಧ್ಯ ಸ್ವೀಡನ್ನಿನ ರಾಯಲ್ ಫಿಲ್‌ಹಾರ್ಮನಿಕ್ ಆರ್ಕೇಸ್ಟ್ರಾದ ತುಣುಕುಗಳು. ಸುಮಾರು ಒಂದೆರಡು ಗಂಟೆಗಳ ಕಾರ್ಯಕ್ರಮವಿದು. ನಂತರ ಬಹುಮಾನಿತರು ವಿಶ್ರಾಂತಿಗಾಗಿ ತೆರಳುತ್ತಾರೆ. ಕೆಲವು ಬಹುಮಾನಿತರು 80ಕ್ಕೂ ಮೀರಿದವರಾಗಿದ್ದು, ವೀಲ್‌ಛೇರಿನಲ್ಲಿ ಬರುತ್ತಾರೆ. ಹೀಗಾಗಿ, ಈ ವಿಶ್ರಾಂತಿ ಅವಶ್ಯಕ. ಉದಾಹರಣೆಗೆ ಈ ವರ್ಷದ ಸಾಹಿತ್ಯದ ನೋಬೆಲ್ ಪಡೆದ ಕೆನಡಾದ ಆಲಿಸ್ ಮನ್ರೋ ವಯಸ್ಸು 82. ವಿಶ್ರಾಂತಿಯ ನಂತರ ಸಂಜೆ ಬಹುಮಾನಿತರಿಗೆ ಭೋಜನ ಕೂಟ. ಸ್ಥಳ ಸಿಟಿಹಾಲ್. ನಗರದಲ್ಲಿ ಎದ್ದು ಕಾಣುವ ಕಟ್ಟಡ ಇದು. ಕೆಂಪು ಇಟ್ಟಿಗೆ, ಎತ್ತರದ ಗೋಪುರ. ಭೋಜನಕ್ಕೆ 1300 ಮಂದಿಗೆ ಆಹ್ವಾನ. ಸ್ವೀಡನ್ನಿನ ರಾಜ, ರಾಣಿಯರು ಮುಖ್ಯ ಅತಿಥಿಗಳು. ಬಹುಮಾನಿತರು ತಾವು ಬಯಸಿದವರನ್ನು ಆಹ್ವಾನಿಸಬಹುದು. ಕೆಲವರು 30 ಜನರನ್ನು ಬರಮಾಡಿಕೊಳ್ಳುವುದೂ ಉಂಟು
.
ಗೋಲ್ಡನ್ ಹಾಲ್
ಸಮಯಕ್ಕೆ ಸರಿಯಾಗಿ ರಾಜ, ರಾಣಿ, ಬಹುಮಾನಿತರು ಮತ್ತು ಗಣ್ಯರು ಮೆರವಣಿಗೆಯಲ್ಲಿ ಆಗಮಿಸಿ ತಂತಮ್ಮ ಸ್ಥಾನಗಳನ್ನು ಅಲಂಕರಿಸುತ್ತಾರೆ. ಅಂದಿನ ಅಡುಗೆ, ಮಹಡಿಯ ಮೇಲಿನ ಅಡುಗೆ ಶಾಲೆಯಲ್ಲಿ ತಯಾರಾಗುತ್ತದೆ. ನಂತರ ಖಾದ್ಯಗಳನ್ನು ಲಿಫ್ಟ್‌ಗಳಲ್ಲಿ ಕೆಳಗಿಳಿಸುತ್ತಾರೆ. ಮೊದಲು ರಾಜ, ರಾಣಿಯರಿಗೆ ಬಡಿಸಲಾಗುತ್ತದೆ. ಇದಾದ ಒಂದೆರಡು ನಿಮಿಷಗಳಲ್ಲಿ ಎಲ್ಲಾ ಅತಿಥಿಗಳ ತಟ್ಟೆ ತುಂಬಿಹೋಗುತ್ತದೆ. ಎಲ್ಲರೂ ಗಣ್ಯರೊಡನೆ ಊಟ ಮಾಡಬೇಕು ಎಂಬ ನಿಯಮ. ರುಚಿ ರುಚಿಯಾದ ತಿಂಡಿಗಳು, ಕುಡಿದಷ್ಟು ವೈನ್. ರಾಜ ಎದ್ದ ಮೇಲೆಯೇ ಎಲ್ಲರೂ ಏಳಬೇಕು.
ನೋಬೆಲ್ ಮ್ಯೂಸಿಯಂ
ಸ್ಟಾಕ್‌ಹೋಮಿನ ಮತ್ತೊಂದು ಆಕರ್ಷಣೆ ಬಗ್ಗೆ ಹೇಳಲೇಬೇಕು. ಅದು ನೋಬೆಲ್ ಮ್ಯೂಸಿಯಂ. 2001ರಲ್ಲಿ ಪ್ರಾರಂಭವಾದ ಈ ವಸ್ತು ಸಂಗ್ರಹಾಲಯದಲ್ಲಿ ನೋಬೆಲ್ ಗೆದ್ದ ಗಣ್ಯರ ಬಗ್ಗೆ ತಿಳಿದುಕೊಳ್ಳಬಹುದು. 800 ನೋಬೆಲ್ ಪುರಸ್ಕೃತರ ಚಿತ್ರಗಳು ಒಂದೊಂದಾಗಿ ಕಂಬಿಯೊಂದರ ಕೆಳಗೆ ಚಲಿಸುತ್ತವೆ. ಚಿತ್ರಗಳ ಕೆಳಗೆ ಅವರ ಬಗ್ಗೆ ಮಾಹಿತಿ. ಮುಂದೆ ನಡೆದರೆ ದೊಡ್ಡ ಕೊಠಡಿಯಲ್ಲಿ ಇಂಟರ್‌ನ್ಯಾಶನಲ್ ಬ್ಯೂರೋ ನಿಯೋಜಿಸಿರುವ ಶಾಂತಿ ವಸ್ತು ಪ್ರದರ್ಶನ. ಭಾರತೀಯರು ಹೆಮ್ಮೆ ಪಡಬೇಕಾಗಿದ್ದು- ಇಲ್ಲಿ ಮಹಾತ್ಮ ಗಾಂಧಿಯವರಿಗೆ ಅಗ್ರ ಸ್ಥಾನ. "Earth provides enough to satisfy every man’s need, but not every man’s greed' ಎಂಬ ಅವರ ಹೇಳಿಕೆ ಎದ್ದುಕಾಣುತ್ತದೆ. ಆದರೆ, ಅವರಿಗೆ ನೋಬೆಲ್ ನೀಡದೆ ಹೋದದ್ದಕ್ಕೆ ನೋಬೆಲ್ ಸಮಿತಿ ತನ್ನ ವಿಷಾದವನ್ನು ಪ್ರತ್ಯೇಕವಾಗಿ ಸೂಚಿಸಿದೆ. ನಾವು ಸಂತಸ ಪಡ ಬೇಕಾದ ಮತ್ತೊಂದು ವಿಷಯ- ಇಲ್ಲಿ ನಮ್ಮ ವಂದನ ಶಿವ ಅವರಿಗೆ ಸ್ಥಾನ ನೀಡಿ ಅವರ ಸಾಧನೆಯನ್ನು ಪ್ರಶಂಶಿಸಲಾಗಿದೆ. ನಮ್ಮ ರೈತರ ಹಕ್ಕುಗಳನ್ನು ಉಳಿಸಿಕೊಳ್ಳಲು ಅವರು ಅಂತಾರಾಷ್ಟ್ರೀಯ ಸಂಸ್ಥೆಗಳೊಡನೆ ಹೋರಾಡುತ್ತಿರುವುದನ್ನು ಗಮನಿಸಬಹುದು.
ಅನೇಕ ಬಹುಮಾನಿತರು ಅಥವಾ ಅವರ ಸಂಬಂಧಿಗಳು ವಿಜೇತರಿಗೆ ಪ್ರಿಯವಾಗಿದ್ದ ಅಥವಾ ಅವರು ಬಳಸಿದ್ದ ವಸ್ತುಗಳನ್ನು ಪ್ರದರ್ಶನಕ್ಕೆ ಉಡುಗೊರೆಯಾಗಿ ಕೊಟ್ಟಿರುವುದು ಇಲ್ಲಿನ ವಿಶೇಷ. 1998ರಲ್ಲಿ ಅರ್ಥಶಾಸ್ತ್ರಕ್ಕೆ ನೋಬೆಲ್ ಪಡೆದ ಅಮರ್ತ್ಯಸೇನ್ ಕೇಂಬ್ರಿಡ್ಜಿನಲ್ಲಿ ಕಾಲೇಜಿಗೆ ಹೋಗಲು ಬಳಸುತ್ತಿದ್ದ ಬೈಸಿಕಲ್ಲನ್ನು ಇಲ್ಲಿಗೆ ದಾನವಾಗಿ ನೀಡಿದ್ದಾರೆ. ಅಲ್ಲದೆ ಭಾರತದ ಶಾಲೆಯಲ್ಲಿ ಓದಿದ ಗಣಿತದ ಪುಸ್ತಕ ಕೂಡ ಇಲ್ಲಿದೆ. ಮೇರಿ ಕ್ಯೂರಿ ತಮ್ಮ ಸಂಶೋಧನೆಯಲ್ಲಿ ಬಳಸಿದ ತಕ್ಕಡಿ ಇಲ್ಲಿದೆ.
- ಸಿಡ್ನಿ ಶ್ರೀನಿವಾಸ್
k.srinivas@usyd.edu.au
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


