ರಾಜ್ಯ

Tulu ಭಾಷೆಯತ್ತ ಹೊಸ ನೋಟ: ಸಾಂಪ್ರದಾಯಿಕ ತುಳು ಲಿಪಿ ಕಲಿಕೆಯನ್ನು ಸುಲಭಗೊಳಿಸುತ್ತಿರುವ ಬೆಂಗಳೂರಿನ ಯೂಟ್ಯೂಬರ್

ಇಂದು ಅನೇಕ ತುಳು ಭಾಷಿಕರಿಗೂ ಈ ಲಿಪಿ ಅಪರಿಚಿತವಾಗಿದೆ. ತುಳುವಿಗೆ ಲಿಖಿತ ಲಿಪಿಯೇ ಇಲ್ಲ ಎಂಬ ತಪ್ಪು ಕಲ್ಪನೆ, 19ನೇ ಶತಮಾನದಲ್ಲಿ ತುಳು ಪಠ್ಯಗಳನ್ನು ಮುದ್ರಿಸಲು ಮುದ್ರಣಾಲಯಗಳು ಕನ್ನಡ ಲಿಪಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

Tulu ಭಾಷೆಯತ್ತ ಹೊಸ ನೋಟ: ಸಾಂಪ್ರದಾಯಿಕ ತುಳು ಲಿಪಿ ಕಲಿಕೆಯನ್ನು ಸುಲಭಗೊಳಿಸುತ್ತಿರುವ ಬೆಂಗಳೂರಿನ ಯೂಟ್ಯೂಬರ್
ತುಳು ಲಿಪಿಯನ್ನು ಕಲಿಸುತ್ತಿರುವ ನಿಶಾಂತ್ ರತ್ನಾಕರ್
Published On :

ಜಲೇಬಿಯಂತೆ ಸುತ್ತುಗಳನ್ನು ಹೊಡೆಯುವ ಮೃದುವಾದ, ವಕ್ರಾಕಾರದ ಗೆರೆಗಳನ್ನು ಹೊಂದಿರುವ ಪ್ರಾಚೀನ ತುಳು ಲಿಪಿ ದೇವಾಲಯಗಳ ಶಾಸನಗಳಲ್ಲಿ ಕೆತ್ತಲ್ಪಟ್ಟಿರುವುದನ್ನು ಹಾಗೂ ತಾಳೆಗರಿ ಹಸ್ತಪ್ರತಿಗಳಲ್ಲಿ ಬರೆಯಲ್ಪಟ್ಟಿರುವುದನ್ನು ಕಾಣಬಹುದು.

ಇಂದು ಅನೇಕ ತುಳು ಭಾಷಿಕರಿಗೂ ಈ ಲಿಪಿ ಅಪರಿಚಿತವಾಗಿದೆ. ತುಳುವಿಗೆ ಲಿಖಿತ ಲಿಪಿಯೇ ಇಲ್ಲ ಎಂಬ ತಪ್ಪು ಕಲ್ಪನೆ, 19ನೇ ಶತಮಾನದಲ್ಲಿ ತುಳು ಪಠ್ಯಗಳನ್ನು ಮುದ್ರಿಸಲು ಮುದ್ರಣಾಲಯಗಳು ಕನ್ನಡ ಲಿಪಿಯನ್ನು ಆಯ್ಕೆ ಮಾಡಿಕೊಂಡಿದ್ದು ಹಾಗೂ ತರಬೇತಿ ಪಡೆದ ಲಿಪಿಕಾರರಿಗೆ ಮಾತ್ರ ಈ ಲಿಪಿಯ ಜ್ಞಾನವಿದ್ದದ್ದು ಸೇರಿದಂತೆ ಹಲವು ಕಾರಣಗಳಿಂದ ತುಳು ಲಿಪಿ ಕ್ರಮೇಣ ಜನಪ್ರಿಯತೆಯಿಂದ ದೂರವಾಯಿತು.

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತುಳು ಭಾಷೆಗೆ ಬಹುಕಾಲದಿಂದ ಬೇಡಿಕೆಯಲ್ಲಿದ್ದ ‘ಎರಡನೇ ಹೆಚ್ಚುವರಿ ಅಧಿಕೃತ ಭಾಷೆ’ ಸ್ಥಾನಮಾನ ಸರ್ಕಾರದಿಂದ ದೊರೆತ ಸಂದರ್ಭದಲ್ಲಿ, ಬೆಂಗಳೂರು ಮೂಲದ ಛಾಯಾಗ್ರಾಹಕ-ಸಂಶೋಧಕ ನಿಶಾಂತ್ ರತ್ನಾಕರ್ ತಮ್ಮ ‘Solmelu Studios’ ಯೂಟ್ಯೂಬ್ ಚಾನೆಲ್ ಮೂಲಕ ಆಸಕ್ತರಿಗೆ ತುಳುವನ್ನು ಅದರ ಸಾಂಪ್ರದಾಯಿಕ ರೂಪಕ್ಕೆ ಸಮೀಪವಾಗಿ ಬರೆಯುವುದನ್ನು ಕಲಿಸಲು ನೆರವಾಗುತ್ತಿದ್ದಾರೆ.

ವರ್ಷದಿಂದ ವರ್ಷಕ್ಕೆ ತುಳು ಭಾಷಿಕರ ಸಂಖ್ಯೆ ಇಳಿಕೆಯಾಗುತ್ತಿರುವ ಮತ್ತು ಅಪಾಯದ ಹಂತದಲ್ಲಿರುವ ಭಾಷೆಗಳ ಪಟ್ಟಿಯಲ್ಲಿ ತುಳು ಯುನೆಸ್ಕೋ ಪಟ್ಟಿಯಲ್ಲಿದೆ. ಅನೇಕರು ತಮ್ಮದೇ ರೀತಿಯಲ್ಲಿ ತುಳುವನ್ನು ಉತ್ತೇಜಿಸಲು, ಪುನರುಜ್ಜೀವನಗೊಳಿಸಲು ಮತ್ತು ಕಲಿಸಲು ಪ್ರಯತ್ನಿಸುತ್ತಿದ್ದಾರೆ. ನನ್ನ ಪಾಲಿಗೆ, ಐತಿಹಾಸಿಕವಾಗಿ ಸರಿಯಾದ ಲಿಪಿಯ ರೂಪವನ್ನು ಜನರಿಗೆ ಕಲಿಸಬೇಕು ಎಂಬ ಆಲೋಚನೆಯಿಂದ ‘Solmelu Studios’ ಆರಂಭವಾಯಿತು ಎಂದು ಹೇಳುತ್ತಾರೆ.

ತುಳು ಸಾಂಸ್ಕೃತಿಕ ಸಂಶೋಧನಾ ಪ್ರತಿಷ್ಠಾನ (TCRF)ದ ಭಾಷಾಶಾಸ್ತ್ರ ಮತ್ತು ಸಂಶೋಧನಾ ತಂಡದ ಮುಖ್ಯಸ್ಥರೂ ಆಗಿರುವ ರತ್ನಾಕರ್, ಸಾಂಪ್ರದಾಯಿಕ ತುಳು ಲಿಪಿಯ ಪುನರುಜ್ಜೀವಿತ ರೂಪವಾದ ತುಳು-ತಿಗಲಾರಿ ಲಿಪಿಯನ್ನು ಕಿರು ವಿಡಿಯೊಗಳ ಮೂಲಕ ಕಲಿಸಲು ಆರಂಭಿಸಿದರು. ಬಳಿಕ ಈ ಪ್ರಯತ್ನ ಭಾನುವಾರ ಬೆಳಗಿನ ಲೈವ್ ಕ್ಲಾಸ್ ಗಳಾಗಿ ರೂಪುಗೊಂಡಿತು.

ಪ್ರತಿಯೊಂದು ವಿಡಿಯೊದಲ್ಲೂ ಒಂದು ಪದದ ಮೇಲೆ ಗಮನ ಕೇಂದ್ರೀಕರಿಸಲಾಗುತ್ತಿತ್ತು. ಅದು ಯಾವುದಾದರೂ ಸ್ಥಳದ ಹೆಸರು, ಶೆಟ್ಟಿ ಎಂಬಂತಹ ಸಮುದಾಯದ ಹೆಸರು ಅಥವಾ ಭೂತಕೋಲದಲ್ಲಿ ಧರಿಸುವ ಗೆಜ್ಜೆಯಾದ ‘ಗಗ್ಗರ’ದಂತಹ ಸಾಂಸ್ಕೃತಿಕ ಪದವಾಗಿರಬಹುದು. ಆ ಪದದ ಕುರಿತು ಒಂದು ಕಥೆಯನ್ನು ಹೇಳಿ, ಅದನ್ನು ಹೇಗೆ ಬರೆಯಲಾಗುತ್ತದೆ ಎಂಬುದನ್ನು ತೋರಿಸುತ್ತಿದ್ದೆ. ಇದರ ಉದ್ದೇಶ ಲಿಪಿಯ ಸೌಂದರ್ಯವನ್ನು ಪರಿಚಯಿಸುವುದಷ್ಟೇ ಎಂದು ಹೇಳುತ್ತಾರೆ.

ನಾನು ಲೈವ್ ಕ್ಲಾಸ್ ಗಳಾಗಿ ಆರಂಭಿಸಿದಾಗ, ಜಗತ್ತಿನಾದ್ಯಂತ ಇರುವ ತುಳು ಮತ್ತು ತುಳುವೇತರ ಭಾಷಿಕರು ತರಗತಿಗಳಿಗೆ ಸೇರಿದರು. ಬೋಧನೆಯ ಮಾಧ್ಯಮವಾಗಿ ನಾನು ಇಂಗ್ಲಿಷ್ ಬಳಸುತ್ತೇನೆ. ಭಾರತೀಯ ಭಾಷೆಗಳನ್ನು ರೋಮನ್ ಅಕ್ಷರಗಳ ಮೂಲಕ ಕಲಿಯಲು ಬಳಸುವ ‘ಇಂಟರ್‌ನ್ಯಾಷನಲ್ ಆಲ್ಫಬೆಟ್ ಫಾರ್ ಸಂಸ್ಕೃತ ಟ್ರಾನ್ಸ್‌ಲಿಟರೇಷನ್’ (IAST) ಎಂಬ ಲಿಪ್ಯಂತರಣ ವ್ಯವಸ್ಥೆಯನ್ನೂ ಬಳಸುತ್ತೇನೆ” ಎಂದು ಅವರು ವಿವರಿಸುತ್ತಾರೆ.

ತುಳು-ತಿಗಲಾರಿ ಲಿಪಿಗೆ 2024ರಲ್ಲಿ ಯುನಿಕೋಡ್ ಮಾನ್ಯತೆ ದೊರೆತಿದ್ದು, ಎಲೆಕ್ಟ್ರಾನಿಕ್ ವೇದಿಕೆಗಳಲ್ಲಿ ಈ ಲಿಪಿಯಲ್ಲಿ ಟೈಪ್ ಮಾಡಲು ಸಾಧ್ಯವಾಗಿದೆ. ಆದಾಗ್ಯೂ, ತುಳು ಲಿಪಿಯನ್ನು ಹೇಗೆ ಪ್ರಮಾಣೀಕರಿಸಬೇಕು ಎಂಬ ಬಗ್ಗೆ ಚರ್ಚೆ ಮುಂದುವರಿದಿದೆ.

2021ರಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಸ್ತಾಪಿಸಿದ ರೂಪವನ್ನು ಕಲಿಸಲು ಅಥವಾ ಕಲಿಯಲು ಪ್ರಯತ್ನಿಸುತ್ತಾರೆ. ಮೂಲ ಲಿಪಿಯ ಬರವಣಿಗೆ ಕಷ್ಟ ಎಂಬ ಊಹೆಯ ಆಧಾರದ ಮೇಲೆ ಅದು ಸರಳೀಕೃತ ರೂಪವಾಗಿತ್ತು. ಆದರೆ ಮೂಲ ಲಿಪಿಯ ಬರವಣಿಗೆ ಅಷ್ಟು ಕಷ್ಟಕರವಲ್ಲ ಎಂಬುದು ‘Solmelu Studios’ನಲ್ಲಿ ಮೂಲ ಲಿಪಿಯನ್ನು ಯಶಸ್ವಿಯಾಗಿ ಕಲಿತು ಬರೆಯುತ್ತಿರುವ ಅನೇಕ ಜನರಿಂದಲೇ ಸಾಬೀತಾಗಿದೆ. ಆದರೆ 2021ರ ಪ್ರಮಾಣಿತ ರೂಪದ ಜ್ಞಾನ ಮಾತ್ರ ಇದ್ದರೆ, ತುಳುವಿನ ಯಾವುದೇ ಐತಿಹಾಸಿಕ ದಾಖಲೆಗಳನ್ನು ಓದಲು ಸಾಧ್ಯವಾಗುವುದಿಲ್ಲ ಎಂದು ವಿವರಿಸುತ್ತಾರೆ.

ನಾಲ್ಕು ತಿಂಗಳ ಲೈವ್ ಕ್ಲಾಸ್ ಗಳ ಸರಣಿಯನ್ನು ಪೂರ್ಣಗೊಳಿಸಿರುವ ನಿಶಾಂತ್ ರತ್ನಾಕರ್, ಇದೀಗ ತುಳುವೇತರ ಭಾಷಿಕರಿಗೆ ಸಂಭಾಷಣಾತ್ಮಕ ತುಳುವನ್ನು ಕಲಿಸುವ ಪೂರ್ವದಾಖಲಿತ ಪಾಠಗಳನ್ನು ಸಿದ್ಧಪಡಿಸುತ್ತಿದ್ದಾರೆ. ಇದರೊಂದಿಗೆ ಈಗಾಗಲೇ ಲಿಪಿ ಕಲಿತಿರುವ ಹಿಂದಿನ ತರಗತಿಗಳ ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಮುಂದುವರಿಸಲು ಅವಕಾಶ ಕಲ್ಪಿಸಲಾಗುತ್ತದೆ.

ಈ ಪಾಠಗಳಲ್ಲಿ ಇಂಗ್ಲಿಷ್‌ನಲ್ಲಿ ಪದಗಳನ್ನು ಪರಿಚಯಿಸಿ, ವ್ಯಾಕರಣವನ್ನು ವಿವರಿಸಲು ಇತರ ಭಾಷೆಗಳೊಂದಿಗೆ ಹೋಲಿಕೆ ಮಾಡಲಾಗುತ್ತದೆ. ಅಭ್ಯಾಸಕ್ಕಾಗಿ ತುಳು ಲಿಪಿ ಮತ್ತು IAST ನ್ನು ಬಳಸಲಾಗುತ್ತದೆ.

ಇದೇ ವೇಳೆ, ತುಳು ಸಾಂಸ್ಕೃತಿಕ ಸಂಶೋಧನಾ ಪ್ರತಿಷ್ಠಾನವು ಪ್ರಹ್ಲಾದ್ ತಂತ್ರಿ ಅವರ ‘ತುಳುವರ್ಣಾಮೃತ’ ಕೃತಿಯನ್ನು ಅಕ್ಟೋಬರ್‌ನಲ್ಲಿ ಪ್ರಕಟಿಸುತ್ತಿದ್ದು, ಈ ಕೃತಿ ತುಳು ಲಿಪಿಯ ಕುರಿತ ಗೊಂದಲಗಳನ್ನು ನಿವಾರಿಸುವ ಪ್ರಾಥಮಿಕ ಮಾರ್ಗದರ್ಶಿ ಗ್ರಂಥವಾಗಲಿದೆ.

ನಿಶಾಂತ್ ರತ್ನಾಕರ್ ಅವರ ಪ್ರಕಾರ, ಅವರ ತರಗತಿಗಳ ಸುತ್ತಮುತ್ತಲಿನ ಸಮುದಾಯದಲ್ಲೇ ತುಳು ಲಿಪಿಯ ಪುನರುಜ್ಜೀವನದ ಪರಿಣಾಮಗಳು ಈಗಾಗಲೇ ಗೋಚರಿಸುತ್ತಿವೆ.

ಜನರು ಶ್ಲೋಕಗಳನ್ನು ಬರೆಯುತ್ತಿದ್ದಾರೆ, ಹಳೆಯ ಕವನಗಳನ್ನು ಹುಡುಕುತ್ತಿದ್ದಾರೆ, ಅವುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದರಿಂದ ಈ ಲಿಪಿ ಅಷ್ಟು ಕಷ್ಟಕರವಲ್ಲ ಎಂಬುದು ತೋರಿಬರುತ್ತಿದೆ ಎಂದು ಹೇಳುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.