ಕೊನೆಗೂ ಮಾಜಿ ಸಿಎಂ ಸಿದ್ದರಾಮಯ್ಯ ಕನಸು ನನಸು; ಶಾಸ್ತ್ರೋಕ್ತವಾಗಿ ನೆರವೇರಿದ ಗೃಹ ಪ್ರವೇಶ!
ನೂತನ ಮನೆಯಲ್ಲಿ ಗಣಪತಿ ಹೋಮ, ವಾಸ್ತು ಹೋಮ ಸೇರಿದಂತೆ ವಿವಿಧ ಸಾಂಪ್ರದಾಯಿಕ ಧಾರ್ಮಿಕ ವಿಧಿ-ವಿಧಾನಗಳು ನೆರವೇರಿವೆ.

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನ ಕುವೆಂಪುನಗರದ ವಿಶ್ವಮಾನವ ಜೋಡಿ ರಸ್ತೆ ಬಳಿ ನಿರ್ಮಿಸಲಾಗಿರುವ ತಮ್ಮ ನೂತನ ಮನೆಯ ಗೃಹಪ್ರವೇಶವನ್ನು ಸೋಮವಾರ ಶಾಸ್ತ್ರೋಕ್ತವಾಗಿ ಮಾಡಿದ್ದಾರೆ. ಯಾವುದೇ ಅದ್ದೂರಿತನವಿಲ್ಲದೆ, ರಾಜಕೀಯ ನಾಯಕರು ಹಾಗೂ ಸಾರ್ವಜನಿಕರಿಗೆ ಪ್ರವೇಶ ನೀಡದೆ ಅತ್ಯಂತ ಸರಳ ಮತ್ತು ಖಾಸಗಿಯಾಗಿ ಈ ಭಾನುವಾರ ರಾತ್ರಿಯಿಂದಲೇ ಪೂಜಾ ಕೈಂಕರ್ಯಗಳು ನೆರವೇರಿವೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ನೂತನ ಮನೆಯಲ್ಲಿ ಗಣಪತಿ ಹೋಮ, ವಾಸ್ತು ಹೋಮ ಸೇರಿದಂತೆ ವಿವಿಧ ಸಾಂಪ್ರದಾಯಿಕ ಧಾರ್ಮಿಕ ವಿಧಿ-ವಿಧಾನಗಳು ನೆರವೇರಿವೆ. ಸೋಮವಾರ ಮುಂಜಾನೆ ಸಿದ್ದರಾಮಯ್ಯ ಹಾಗೂ ಪತ್ನಿ ಪಾರ್ವತಿ ಅವರ ನೇತೃತ್ವದಲ್ಲಿ ಪೂರ್ಣಾಹುತಿ ಮತ್ತು ಗೃಹಪ್ರವೇಶದ ವಿಧಿ ವಿಧಾನ ನಡೆಯಿತು ಎನ್ನಲಾಗಿದೆ.
ಕುಟುಂಬ ಸದಸ್ಯರು, ಆಪ್ತರನ್ನು ಹೊರತುಪಡಿಸಿ ಬೇರೆ ಯಾವುದೇ ರಾಜಕೀಯ ಗಣ್ಯರು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿರಲಿಲ್ಲ. ಸಿದ್ದರಾಮಯ್ಯ ಅವರ ಮೈಸೂರು ಭೇಟಿ ವಿಚಾರವನ್ನು ಸಹ ಗುಟ್ಟಾಗಿ ಇಡಲಾಗಿತ್ತು. ಯಾರಿಗೂ ಮಾಹಿತಿ ನೀಡಿರಲಿಲ್ಲ ಎಂದು ಮೂಲಗಳು ಹೇಳಿವೆ.
ಎರಡು ಬಾರಿ ಮುಖ್ಯಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ ಮತ್ತು ದೀರ್ಘಕಾಲ ವಿರೋಧ ಪಕ್ಷದ ನಾಯಕರಾಗಿದ್ದರೂ ಸಿದ್ದರಾಮಯ್ಯ ಅವರಿಗೆ ಮೈಸೂರಿನಲ್ಲಿ ಸ್ವಂತ ಮನೆಯಿರಲಿಲ್ಲ. ಮೈಸೂರಿನಲ್ಲಿ ಸುಸಜ್ಜಿತ ಸ್ವಂತ ಮನೆಯೊಂದನ್ನು ನಿರ್ಮಿಸಬೇಕೆಂಬುದು ಅವರ ಪತ್ನಿ ಪಾರ್ವತಿಯವರ ದಶಕಗಳ ಕನಸಾಗಿತ್ತು.
ಇಷ್ಟು ವರ್ಷಗಳ ಕಾಲ ಸಿದ್ದರಾಮಯ್ಯ ಅವರು ಟಿ.ಕೆ. ಬಡಾವಣೆಯಲ್ಲಿರುವ ತಮ್ಮ ಆಪ್ತ ಸ್ನೇಹಿತ ಮರಿಸ್ವಾಮಿ ಅವರ ಮನೆಯಲ್ಲೇ ವಾಸ್ತವ್ಯ ಹೂಡಿದ್ದರು. ಇದೀಗ ಪತ್ನಿಯ ಆಸೆಯಂತೆ ಸ್ವಂತ ಸೂರು ನಿರ್ಮಿಸಿ, ಬಾಡಿಗೆ ಮನೆಯಿಂದ ಹೊಸ ಮನೆಗೆ ಸ್ಥಳಾಂತರ ಆಗಿದ್ದಾರೆ.
ಹೇಗಿದೆ ಗೊತ್ತಾ ಮಾಜಿ ಸಿಎಂ ಹೊಸ ಮನೆ? ಕುವೆಂಪುನಗರದ ಪ್ರಮುಖ ರಸ್ತೆಯ ಬಳಿ 120×80 ಅಡಿ ವಿಸ್ತೀರ್ಣದಲ್ಲಿ ಈ ಮೂರು ಅಂತಸ್ತಿನ ಬೃಹತ್ ಬಂಗಲೆಯನ್ನು ನಿರ್ಮಿಸಲಾಗಿದೆ. ದಕ್ಷಿಣಾಭಿಮುಖವಾಗಿರುವ ಈ ಮನೆಯ ಮುಂಭಾಗದಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ಬೃಹತ್ ತೆಂಗಿನಗರಿಯ ಚಪ್ಪರ ಹಾಕಲಾಗಿತ್ತು. ಭದ್ರತಾ ದೃಷ್ಟಿಯಿಂದ ಮತ್ತು ಖಾಸಗಿತನ ಕಾಯ್ದುಕೊಳ್ಳುವ ಸಲುವಾಗಿ ಮನೆಯ ಸುತ್ತಲೂ ಹಸಿರು ಪರದೆ (ಪೆಂಡಾಲ್) ಹಾಕಿ ಮುಚ್ಚಲಾಗಿತ್ತು. ಯಾವುದೇ ಹೂಗುಚ್ಛ, ಸ್ವಾಗತ ಕಮಾನುಗಳಿಲ್ಲದೆ ಧಾರ್ಮಿಕ ಆಚರಣೆಗೆ ಮಾತ್ರ ಆದ್ಯತೆ ನೀಡಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


