ರಾಜ್ಯ

ಮತದಾರರ ಪಟ್ಟಿ ಪರಿಷ್ಕರಣೆ ಎಡವಟ್ಟು: ನಟ ಶಿವರಾಜ್‌ಕುಮಾರ್, ನಿಖಿಲ್ ಕಾಮತ್, ನಿಲೇಕಣಿ ಕುಟುಂಬಕ್ಕೆ ಚುನಾವಣಾ ಆಯೋಗದ SIR ನೋಟಿಸ್!

ಚುನಾವಣಾ ಆಯೋಗ ನಡೆಸುತ್ತಿರುವ SIRನಲ್ಲಿ ರಾಜ್ಯಾದ್ಯಂತ 43.81 ಲಕ್ಷಕ್ಕೂ ಹೆಚ್ಚು ಮತದಾರರಿಗೆ ನೋಟಿಸ್‌ ಜಾರಿ ಮಾಡಿದೆ. ಈ ಪೈಕಿ, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ, ಝೆರೋಧಾದ ನಿಖಿಲ್ ಕಾಮತ್ ಅವರಿಗೂ ನೋಟಿಸ್ ಜಾರಿ ಮಾಡಿದೆ. ಆ ಕುರಿತ ವರದಿ ಇಲ್ಲಿದೆ:

ಮತದಾರರ ಪಟ್ಟಿ ಪರಿಷ್ಕರಣೆ ಎಡವಟ್ಟು: ನಟ ಶಿವರಾಜ್‌ಕುಮಾರ್, ನಿಖಿಲ್ ಕಾಮತ್, ನಿಲೇಕಣಿ ಕುಟುಂಬಕ್ಕೆ ಚುನಾವಣಾ ಆಯೋಗದ SIR ನೋಟಿಸ್!
ನಟ ಶಿವರಾಜ್‌ಕುಮಾರ್, ನಿಖಿಲ್ ಕಾಮತ್, ನಿಲೇಕಣಿ ಕುಟುಂಬಕ್ಕೆ SIR ನೋಟಿಸ್! — Online Desk
Published On :

ಬೆಂಗಳೂರು: ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR - Special Intensive Revision)ಯಲ್ಲಿ ರಾಜ್ಯಾದ್ಯಂತ 43.81 ಲಕ್ಷಕ್ಕೂ ಹೆಚ್ಚು ಮತದಾರರಿಗೆ ನೋಟಿಸ್‌ ಜಾರಿ ಮಾಡಿದೆ. ಈ ಪೈಕಿ, ಸ್ಯಾಂಡಲ್‌ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಹಾಗೂ ಝೆರೋಧಾದ ನಿಖಿಲ್ ಕಾಮತ್ ಅವರಂತ ಗಣ್ಯರಿಗೂ ನೋಟಿಸ್ ಜಾರಿ ಮಾಡಿದೆ. ಮತದಾರರ ಪಟ್ಟಿಯಲ್ಲಿ ಕಂಡುಬಂದಿರುವ ಕೆಲವು ತಾಂತ್ರಿಕ ದೋಷಗಳು ಮತ್ತು ದಾಖಲೆಗಳ ವ್ಯತ್ಯಾಸವೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಆ ಕುರಿತ ವರದಿ ಇಲ್ಲಿದೆ:

ನಿಖಿಲ್ ಕಾಮತ್-ಶಿವಣ್ಣನಿಗೆ SIR ನೋಟಿಸ್!

ಚುನಾವಣಾ ಆಯೋಗದ ಹಳೆಯ (2002ರ) ಮತದಾರರ ಪಟ್ಟಿಯೊಂದಿಗೆ ಪ್ರಸ್ತುತ ಮಾಹಿತಿಯನ್ನು ಹೋಲಿಸುವಾಗ ಶಿವರಾಜ್ ಕುಮಾರ್ ಅವರ ಹೆಸರು Unmapped with Last SIR (ಹಳೆಯ ಪಟ್ಟಿಯೊಂದಿಗೆ ಮ್ಯಾಪ್ ಆಗದ) ವರ್ಗದಡಿ ದೋಷಪೂರಿತವಾಗಿ ಕಂಡುಬಂದಿದೆ. ಹೀಗಾಗಿ ತಂತ್ರಜ್ಞಾನ ವ್ಯವಸ್ಥೆಯು ಸ್ವಯಂಚಾಲಿತವಾಗಿ ವಿಚಾರಣಾ ನೋಟಿಸ್ ಒಂದನ್ನು ಸಿದ್ಧಪಡಿಸಿತ್ತು. ಇದರೊಂದಿಗೆ, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನೋಂದಾಯಿತರಾಗಿರುವ, ಝಿರೋಧಾ ಸಹ ಸಂಸ್ಥಾಪಕ ನಿಖಿಲ್ ಕಾಮತ್ ಹಾಗೂ ತಾಯಿ ರೇವತಿ ಕಾಮತ್ ಅವರ ದಾಖಲೆಗಳಲ್ಲಿ ಪೋಷಕರ ಹೆಸರು ಹೊಂದಾಣಿಕೆಯಾಗದಿರುವುದು ಕಂಡುಬಂದಿದೆ. ಚುನಾವಣಾ ಆಯೋಗದ ವ್ಯವಸ್ಥೆಯಲ್ಲಿರುವ ಹಳೆಯ ದಾಖಲೆಗಳು ಮತ್ತು ಹೊಸ ವಿವರಗಳ ನಡುವೆ ವ್ಯತ್ಯಾಸ ಇರುವುದರಿಂದ ಸಿಸ್ಟಮ್ ಮೂಲಕ ಈ ನೋಟಿಸ್ ಜನರೇಟ್ ಆಗಿದೆ. ಮತ್ತೊಂದೆಡೆ, ಇನ್ಫೋಸಿಸ್ ಸಹ-ಸಂಸ್ಥಾಪಕ 71 ವರ್ಷದ ನಂದನ್ ನಿಲೇಕಣಿ, ಅವರ ಪತ್ನಿ ರೋಹಿಣಿ ನಿಲೇಕಣಿ, ಮಕ್ಕಳಾದ ಜಾಹ್ನವಿ ನಂದನ್ ನಿಲೇಕಣಿ ಹಾಗೂ ನಿಹಾರ್ ನಿಲೇಕಣಿ ಅವರ ಹೆಸರಿನಲ್ಲಿ ನೋಟಿಸ್‌ಗಳನ್ನು ರಚಿಸಲಾಗಿದೆ ಎಂಬ ವರದಿಗಳಿವೆ.

ಮುಂದುವರೆದು, ಈ ಕುರಿತು ಮಾತನಾಡಿದ ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್, ಇಂತಹ ಗಣ್ಯರಿಗೆ ಯಾವುದೇ ನೋಟಿಸ್ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೆಸರುಗಳಲ್ಲಿನ ಸಣ್ಣಪುಟ್ಟ ತಾಂತ್ರಿಕ ಹೊಂದಾಣಿಕೆಯ ಕೊರತೆಯಿಂದ ನೋಟಿಸ್ ಸಿಸ್ಟಂನಲ್ಲಿ ಸೃಷ್ಟಿಯಾಗಿರಬಹುದು, ಆದರೆ ಬೂತ್ ಮಟ್ಟದ ಅಧಿಕಾರಿಗಳಿಗೆ ಮೊದಲೇ ಮಾಹಿತಿ ಇದ್ದ ಕಾರಣ ಇದನ್ನು ಆಡಳಿತ ಮಟ್ಟದಲ್ಲೇ ಸರಿಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದರೊಂದಿಗೆ, ಭಾರತ ರತ್ನ ಪುರಸ್ಕೃತ 92 ವರ್ಷದ ಹಿರಿಯ ವಿಜ್ಞಾನಿ ಪ್ರೊ. ಸಿ.ಎನ್.ಆರ್. ರಾವ್ ಅವರ ಹೆಸರು ಪ್ರಸ್ತುತ ಕರಡು ಪಟ್ಟಿಯಲ್ಲಿ ಪ್ರೊಫ್ ಸಿ.ಎನ್.ಆರ್. ರಾವ್ ಎಂದಿದ್ದು, 2002ರ ಹಳೆಯ ಪಟ್ಟಿಯಲ್ಲಿ ರಾಮ ಎಂದು ನಮೂದಾಗಿತ್ತು. ಆದರೆ, ಪ್ರೊ. ರಾವ್ ಅವರ ದಾಖಲೆಯನ್ನು ಪರಿಶೀಲಿಸಿ ಸೆಪ್ಟೆಂಬರ್ 8ರಂದೇ ಅಂತಿಮ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಒಟ್ಟಾರೆಯಾಗಿ, ರಾಜ್ಯಾದ್ಯಂತ ಇಂತಹ ದೋಷಪೂರಿತ ಪಟ್ಟಿಯಲ್ಲಿರುವವರು ಅಗತ್ಯ ದಾಖಲೆಗಳನ್ನು ಒದಗಿಸಲು ಆಯಾ ಭಾಗದ ಬೂತ್ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಅದರಂತೆ, ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಸೆಪ್ಟೆಂಬರ್ 23ರ ವರೆಗೆ ಕಾಲಾವಕಾಶವಿದ್ದು, ಅಕ್ಟೋಬರ್ 22ರ ಒಳಗಾಗಿ ಈ ದೋಷಗಳನ್ನು ಸರಿಪಡಿಸಿಕೊಳ್ಳಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.